ತುಪ್ಪದ ಬೆಡಗಿ ರಾಗಿಣಿ ಏಕಾಏಕಿ ಪೊಲೀಸ್‌ ವೇಷ ಹಾಕಿದ್ದೇಕೆ ?

ಗ್ಲಾಮರಸ್‌ ನಟಿ ರಾಗಿಣಿ ಮತ್ತೆ ಪೊಲೀಸ್‌ ಅಧಿಕಾರಿ ಆಗಿದ್ದಾರೆ. ರಾಗಿಣಿ ಐಪಿಎಸ್‌ ನಂತರ ಈಗವರು ಸರಣಿ ಕೊಲೆಗಳನ್ನು ಬೇಧಿಸುವ ಒಬ್ಬ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಅವರೀಗ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಜಾನಿ ವಾಕರ್. ಯುವ ನಿರ್ದೇಶಕ ವೇದಿಕ್‌ ವೀರಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಕ್ರೈಮ್, ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರಿನಲ್ಲಿ ನೆರವೇರಿತು.

ರಂಜನ್‌ಹಾಸನ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಒಬ್ಬ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ನಟಿ ರಾಗಿಣಿ ಅವರೀಗ ಹಲವಾರು ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನಿವಾಕರ್ ಎನ್ನುವ ಈ ಸಿನಿಮಾದಲ್ಲಿ ನಟಿ ರಾಗಿಣಿ ಸರಣಿ ಕೊಲೆಗಳ ರಹಸ್ಯ ಬೇಧಿಸುವ ಒಬ್ಬ ಖಡಕ್ ಪೊಲೀಸ್ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊಲೆ ಯಾರು, ಏಕೆ ,ಮಾಡ್ತಾರೆ, ಜಾನಿ ವಾಕರ್ ಯಾರು ಎಂಬ ವಿಷಯ ದ ಮೇಲೆ ಕಥೆ ಸಾಗುತ್ತದೆ.

ರಾಗಿಣಿಗೆ ಪೊಲೀಸ್ ಗೆಟಪ್ ಎನ್ನುವುದು ಹೊಸದೇನೂ ಅಲ್ಲ, ಈ ಹಿಂದೆ ರಾಗಿಣಿ ಐಪಿಎಸ್ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಪೊಲೀಸ್ ಪಾತ್ರವನ್ನು ಅವರು ನಿರ್ವಹಿಸಿದ್ದರು. ಆದರೆ ಈಸಲ ರಾಗಿಣಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವುದು ಮಾತ್ರ ವಿಶೇಷ. ತೆರೆಯಮೇಲೆ ಅವರೀಗ ಖಡಕ್ ಪೊಲೀಸ್ ಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ. ನಿರ್ದೇಶಕ ವೇದಿಕ್ ವೀರ ಮಾತನಾಡುತ್ತ ಈ ಚಿತ್ರ ನನ್ನ 5 ವರ್ಷಗಳ ಕನಸು. ಯೂನಿವರ್ಸಲ ಕಂಟೆಂಟ್ ಇದಾಗಿದ್ದು, ರಂಜನ್‌ಗೆ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು. ಜಾನಿವಾಕರ್ ಎನ್ನುವುದು ಚಿತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರು. ಇಡೀ ಸಿನಿಮಾ ಆ ಪಾತ್ರದ ಮೇಲೇ ಹೋಗುತ್ತದೆ. ಕ್ರೈಮ್ ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಥರದ ಅಂಶಗಳು ಈ ಚಿತ್ರದಲ್ಲಿರುತ್ತವೆ ಎಂದು ಹೇಳಿದರು. ನಿರ್ಮಾಪಕ ರಂಜನ್‌ಹಾಸನ್ ಮಾತನಾಡಿ ಈಗಾಗಲೇ2 ಸಿನಿಮಾ ಮಾಡಿದ್ದೇನೆ. ನಾನು ಮತ್ತು ವೇದಿಕ್ ಒಳ್ಳೇ ಸ್ನೇಹಿತರು ಎಂದು ಹೇಳಿದರು.
ನಾಯಕಿ ರಾಗಿಣಿ ಮಾತನಾಡುತ್ತ ಬುದ್ಧಿವಂತ ಮತ್ತು ಪ್ರಾಮಾಣಿಯ ತನಿಖಾಧಿಕಾರಿಯ ಪಾತ್ರ ನನ್ನದು. ಇಲ್ಲಿ ಕಂಟೆಂಟೇ ಹೀರೋ, ಗಟ್ಟಿಯಾದ ಕಥೆ ಇದೆ. ಇಡೀ ಸಿನಿಮಾದಲ್ಲಿ ನಾನೊಬ್ಬಳೇ ಮಹಿಳಾ ಪಾತ್ರಧಾರಿ. ಅಲ್ಲದೆ ಈ ಚಿತ್ರದ ಪಾತ್ರಗಳ ಹೆಸರುಗಳೇ ವಿಶೇಷವಾಗಿದೆ. ನಾಯಕ ಅಭಯ್ ನನಗೆ ಬಹಳ ವರ್ಷಗಳ ಸ್ನೇಹಿತ. ಈ ಚಿತ್ರ ಎಲ್ಲರಿಗೂ ಒಳ್ಳೇ ಹೆಸರು ತಂದುಕೊಡುತ್ತದೆ. ಸಿನಿಮಾದ ಕತೆ ನನ್ನ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಪಾತ್ರದಲ್ಲಿ ನಟಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕ ವಿನು ಮನಸು ಮಾತನಾಡಿ ಚಿತ್ರ ದಲ್ಲಿ 5 ಹಾಡುಗಳಿವೆ. ಹಿನ್ನೆಲೆ ಸಂಗೀತದಲ್ಲಿ ಹೊಸಥರ ಟ್ರೈ ಮಾಡಿದ್ದೇವೆ ಎಂದು ಹೇಳಿದರು.

Related Posts

error: Content is protected !!