ಕೊರೊನಾ ಹಾವಳಿ ಕಡಿಮೆ ಆಯ್ತು ಅನ್ನುವ ಹೊತ್ತಲ್ಲೆ ಪುನಃ ಎರಡನೇ ಅಲೆ ಶುರುವಾಗಿದೆ. ಎಲ್ಲೆಡೆ ಮತ್ತೆ ಆತಂಕ ಮನೆ ಮಾಡಿದೆ. ಈಗಷ್ಟೇ ಎಲ್ಲಾ ಕ್ಷೇತ್ರಗಳು ತನ್ನ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುತ್ತಿವೆ. ಕನ್ನಡ ಚಿತ್ರರಂಗ ಕೂಡ ಮೆಲ್ಲನೆ ಮೇಲೇಳುತ್ತಿದೆ. ಇದರ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಶುರುವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಇದೆ. ಇತ್ತೀಚೆಗಷ್ಟೇ, ಚಿತ್ರಮಂದಿರಗಳತ್ತ ಪ್ರೇಕ್ಷಕರು ಮುಖ ಮಾಡುತ್ತಿದ್ದಾರೆ.
ಸ್ಟಾರ್ ಚಿತ್ರಗಳೂ ಸಹ ಬಿಡುಗಡೆ ಕಂಡು, ಹೊಸ ದಿಕ್ಕಿನತ್ತ ಸಾಗುತ್ತಿವೆ. ಕೊರೊನಾ ಎರಡನೇ ಅಲೆ ಸುದ್ದಿ ಜೋರಾಗುತ್ತಿದ್ದಂತೆಯೇ, ಅತ್ತ, ಚಿತ್ರಮಂದಿರಗಳಲ್ಲಿ ಅರ್ಧ ಭರ್ತಿ ಬಗ್ಗೆಯೂ ಪ್ರಸ್ತಾಪವಾಗಿತ್ತು. ಚಿತ್ರರಂಗ ಒಗ್ಗಟ್ಟಾಗಿ ಪೂರ್ಣ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಗೆ ಸರ್ಕಾರ ಕೂಡ ಸ್ಪಂದಿಸಿದೆ. ಆದರೆ, ಜನರು ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು, ಅಂತರ ಕಾಪಾಡಿಕೊಂಡರೆ, ಯಾವದೇ ಭಯ ಇರೋದಿಲ್ಲ. ಈ ಕುರಿತು ಸರ್ಕಾರ ಮನವರಿಕೆ ಮಾಡುತ್ತಿದೆ. ಸ್ಟಾರ್ ನಟರುಗಳು ಕೂಡ ತಮ್ಮ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ, ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜಕುಮಾರ್ ಕೂಡ ವಿಡಿಯೊ ಮೂಲಕ ಸಾಮಾಜಿಕ ಸಂದೇಶ ರವಾನಿಸಿದ್ದಾರೆ.
ಎಲ್ಲರೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.
ವಿಡಿಯೊವೊಂದರಲ್ಲಿ ಅವರು ಹೇಳಿಕೊಂಡಿರುವುದಿಷ್ಟು., “ಎಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕೊರೊನಾ ಎರಡನೇ ಅಲೆ ಸ್ಟಾರ್ಟ್ ಆಗ್ತಾ ಇರೋದು. ದಯವಿಟ್ಟು ಕೈ ಮುಗಿದು ಕೇಳಿಕೊಳ್ತಾ ಇದ್ದೇನೆ. ಪ್ರತಿಯೊಬ್ಬರೂ ಮಾಸ್ಕ್ ಹಾಕಿ, ಈ ಕೊರೊನಾ ಓಡಿಸಿ, ಮತ್ತೆ ಲಾಕ್‌ಡೌನ್‌ಗೆ ಒಳಗಾಗೋದು ಬೇಡ. ನಾನೇಕೆ ಮಾಸ್ಕ್ ಹಾಕೊಂಡ್ ಮಾತಾಡ್ತಿಲ್ಲ ಅಂದರೆ, ನಾನು ಹೇಳಿದ್ದು ನಿಮಗೆಲ್ಲರಿಗೂ ಕೇಳಬೇಕು. ನೀವೆಲ್ಲರೂ ಅದನ್ನು ಫಾಲೋ ಮಾಡ್ತೀರಿ ಅಂತ ನಂಬಿದ್ದೇನೆ. ದಯವಿಟ್ಟು, ಮರಿಬೇಡಿ ಮಾಸ್ಕ್ ಹಾಕ್ಕೊಳ್ಳಿ, ಸ್ಯಾನಿಟೈಸ್ ಮಾಡ್ಕೊಳ್ಳಿ, ಸೋಶಿಯಲ್ ಡಿಸ್ಟೆನ್ಸಗ್ ಇಟ್ಕೊಳ್ಳಿ ನಮಸ್ಕಾರ ಥ್ಯಾಂಕ್ಯು…” ಎಂದಿದ್ದಾರೆ. ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ಅತ್ತ, ಸಿನಿಮಾ ಮಂದಿ ಕೂಡ ಖುಷಿಯಲ್ಲಿದ್ದಾರೆ. ಈ ನಡುವೆ ಪ್ರೇಕ್ಷಕರು ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ಅಂತರ ಕಾಪಾಡಿಕೊಂಡರೆ ಕೊರೊನಾ ಹಾವಳಿ ತಡೆಯಬಹುದು. ಈ ನಿಟ್ಟಿನಲ್ಲಿ ಫ್ಯಾನ್ಸ್ ತಮ್ಮ ಸ್ಟಾರ್ ನಟರ ಮನವಿಗೆ ಸ್ಪಂದಿಸಬೇಕಿದೆ.