ಶ್ರೀನಗರ ಕಿಟ್ಟಿ ಮತ್ತೆ ಬಂದ್ರು – ರಕ್ತ ಸಿಕ್ತ ಕಥೆ ಹೇಳಲಿದೆ ಗೌಳಿ ! ಫಸ್ಟ್‌ ಲುಕ್‌ಗೆ ಭರ್ಜರಿ ರೆಸ್ಪಾನ್ಸ್

ಕನ್ನಡದಲ್ಲಿ ಒಂದಷ್ಟು ನಾಯಕ ನಟರು, ತೆರೆ ಮೇಲೆ ಭರ್ಜರಿಯಾಗಿ ಮಿಂಚಿ ಕಾಲ ಕ್ರಮೇಣ ಸದ್ದಿಲ್ಲದೆ ಇದ್ದವರು ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸಾಲಿಗೆ ಶ್ರೀನಗರ ಕಿಟ್ಟಿ ಕೂಡ ಸೇರಿದ್ದಾರೆ. ಹಾಗಂತ, ಶ್ರೀನಗರ ಕಿಟ್ಟಿ ಅವರಿಗೆ ಅವಕಾಶಗಳೇ ಇಲ್ಲವೆಂದಲ್ಲ, ಸಿಕ್ಕ ಅಲ್ಲೊಂದು, ಇಲ್ಲೊಂದು ಸಿನಿಮಾಗಳನ್ನು ಮಾಡುತ್ತಲೇ, ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಶತದಿನದ ಚಿತ್ರಗಳನ್ನು ಕೊಡುವ ಮೂಲಕ ಇಂದಿಗೂ ಸುದ್ದಿಯಲ್ಲಿರುವ ಶ್ರೀನಗರ ಕಿಟ್ಟಿ, ಒಳ್ಳೆಯ ಕಥೆ, ಪಾತ್ರವನ್ನು ಎದುರು ನೋಡುತ್ತಿದ್ದರು. ಆದರೂ, ಅತಿಥಿ ಪಾತ್ರಗಳ ಮೂಲಕ ಸಿನಿಮಾಗಳಲ್ಲಿ ನಟಿಸಿರುವುದೂ ಉಂಟು. ಈಗ ಮತ್ತೊಂದು ಭರ್ಜರಿ ಸಿನಿಮಾ ಮೂಲಕ ಎಂಟ್ರಿಯಾಗುವುದರ ಜೊತೆಗೆ ತಮ್ಮ ಎರಡನೇ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ.

ಹೌದು, ಶ್ರೀನಗರ ಕಿಟ್ಟಿ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಗೌಳಿ” ಎಂದು ನಾಮಕರಣ ಮಾಡಲಾಗಿದೆ. ಇಂದು ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ. ಶ್ರೀನಗರ ಕಿಟ್ಟಿ ಅವರನ್ನು ಈ ಹಿಂದೆ ನೋಡಿದವರೆಲ್ಲರೂ, ಹೊಸ ಗೆಟಪ್‌ನಲ್ಲಿ ಕಾಣುತ್ತಿದ್ದಾರೆ ಅಂದುಕೊಳ್ಳುತ್ತಿದ್ದರು. ಆ ಹೊಸ ಗೆಟಪ್‌ಗೆ ಕಾರಣ ಏನೆಂಬುದು ಈಗ ರಿವೀಲ್‌ ಆಗಿದೆ. ಅವರೂ ಉದ್ದನೆಯ ದಾಡಿ ಬಿಟ್ಟು, ಕೂದಲು ಬಿಟ್ಟಿದ್ದು, ಹೊಸ ಕಥೆಯ ಚಿತ್ರಕ್ಕಾಗಿ ಅನ್ನುವುದನ್ನು ಈಗ ಸ್ಪಷ್ಟಪಡಿಸಿದ್ದಾರೆ. “ಗೌಳಿ” ಸಿನಿಮಾದ ಅವರ ಲುಕ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಸಿನಿಮಾ ಅನಿಸದೇ ಇರದು. ಅದರಲ್ಲೂ ಶ್ರೀನಗರ ಕಿಟ್ಟಿ ಅವರನ್ನು ಆ ಲುಕ್‌ನಲ್ಲಿ ನೋಡಿದವರಿಗೆ ಫುಲ್‌ ರಾ… ಕ್ಯಾರೆಕ್ಟರ್‌ ಎನಿಸುತ್ತೆ. ರಕ್ತಸಿಕ್ತವಾದ ಮೊಗದಲ್ಲಿ,‌ ಖರಾಬ್‌ ಲುಕ್ ಕೊಟ್ಟು, ಹೆಗಲ ಮೇಲೊಂದು ಕೊಡಲಿ ಇಟ್ಟುಕೊಂಡಿರುವ ಶ್ರೀನಗರ ಕಿಟ್ಟಿ, ರಕ್ತಮಯ ದೇಹದೊಂದಿಗೆ ಲುಕ್‌ ಕೊಟ್ಟಿದ್ದಾರೆ. ಅಲ್ಲಿಗೆ ಇದೊಂದು ಹೊಸ ಕಥೆ ಹೇಳಲಿರುವ ಚಿತ್ರ ಎಂಬುದು ಗೊತ್ತಾಗುತ್ತದೆ.

ಇನ್ನು, ಅವರ ಈ ಗೆಟಪ್‌ ನೋಡಿದವರಿಗೆ ಹಿಂದೆ ಎಸ್.ನಾರಾಯಣ್‌ ಅವರ “ಅಪ್ಪಯ್ಯ” ಸಿನಿಮಾ ನೆನಪಾಗದೇ ಇರದು. ಅದೂ ಕೂಡ ಒಂದೊಳ್ಳೆಯ ಬಯಲು ಸೀಮೆಯ ಸಿನಿಮಾ ಆಗಿತ್ತು. ಪಕ್ಕಾ “ರಾ” ಫೀಲ್‌ ಕೊಡುವ ಸಿನಿಮಾ ಆಗಿ ಒಂದಷ್ಟು ಜನರಲ್ಲಿ ಭಾವುಕತೆ ಹೆಚ್ಚಿಸಿತ್ತು. ಬಹಳ ದಿನಗಳ ನಂತರ ಶ್ರೀನಗರ ಕಿಟ್ಟಿ ಅವರೀಗ “ಗೌಳಿ” ಮೂಲಕ ಎಂಟ್ರಿಕೊಡುತ್ತಿರುವುದು ವಿಶೇಷತೆಗಳಲ್ಲೊಂದು. ಇಷ್ಟು ದಿನಗಳ ಕಾಲ ಕಾದು, ವಿಭಿನ್ನ ಕಥಾಹಂದರ ಇರುವ ಸಿನಿಮಾ ಮಾಡುತ್ತಿರುವ ಖುಷಿ ಅವರಿಗೂ ಇದೆ.ಇನ್ನು, ಈ “ಗೌಳಿ” ಚಿತ್ರಕ್ಕೆ ಸೂರ ನಿರ್ದೇಶಕರು. ಇವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಮೂಲತಃ ಫೋಟ್ರೋಗ್ರಫಿ ಮಾಡಿಕೊಂಡಿದ್ದ ಇವರು, ನಿರ್ದೇಶನ ವಿಭಾಗಕ್ಕೆ ಜಿಗಿದು, ಅಲ್ಲೊಂದಷ್ಟು ಕೆಲಸ ಕಲಿತು ಆ ಅನುಭವ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡೇ ಫೀಲ್ಡ್‌ಗಿಳಿದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಬಗ್ಗೆ ಹೇಳುವ ನಿರ್ದೇಶಕ ಸೂರಿ, “ಇದೊಂದು ಪಕ್ಕಾ ಮಾಸ್‌ ಸಿನಿಮಾ. ಒಂದು ನೈಜ ಘಟನೆಯ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಕಥೆ, ಚಿತ್ರಕಥೆ ನನ್ನದೇ. “ಗೌಳಿ” ಸಿನಿಮಾಗೆ ಶ್ರೀನಗರ ಕಿಟ್ಟಿ ಅವರೇ ಸೂಕ್ತ ಎನಿಸಿ, ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವರಿಗೆ ಈ ಚಿತ್ರ ಹೊಸ ಅನುಭವ ಕಟ್ಟಿಕೊಡುವುದು ಗ್ಯಾರಂಟಿ.

ಈ ಚಿತ್ರಕ್ಕೆ ರಘು ಸಿಂಗಂ ಅವರು ನಿರ್ಮಾಪಕರು. ಅವರಿಗೂ ಇದು ಮೊದಲ ನಿರ್ಮಾಣದ ಚಿತ್ರವಿದು. ಇನ್ನು, ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಅವರ ಸಂಗೀತವಿದೆ. ಛಾಯಾಗ್ರಹಣದ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಸದ್ಯ ಭುವನ್‌ ಗೌಡ ಅವರ ಅಸಿಸ್ಟೆಂಟ್‌ ಪ್ರಜ್ವಲ್‌ಗೌಡ ಅವರ ಬಳಿ ಮಾತುಕತೆ ನಡೆಯುತ್ತಿದೆ. ಉಳಿದಂತೆ ನಾಯಕಿ, ಕಲಾವಿದರ ಆಯ್ಕೆ ಆಗಬೇಕಿದೆ. ಸಿನಿಮಾದಲ್ಲಿ ಶರತ್‌ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವೇ ಇರಲಿದೆ. ಸದ್ಯ ಸ್ಕ್ರಿಪ್ಟ್‌ ಅಂತಿಮಗೊಂಡಿದ್ದು, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಹೊರಡಲಿದ್ದೇವೆ. ಬಹುತೇಕ ಯಾಣ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು ೪೦ ದಿನಗಳ ಕಾಲ ಚಿತ್ರೀಕರಣ ಸಾಗಲಿದೆ” ಎಂದು ವಿವರಿಸುವ ನಿರ್ದೇಶಕ ಸೂರ, ಇದು ಇಂಥದ್ದೇ ಜಾನರ್‌ಗೆ ಸೇರುವ ಸಿನಿಮಾ ಅಲ್ಲ, ಇಲ್ಲಿ ಎಲ್ಲವೂ ಇದೆ. ಪ್ರೀತಿ, ದ್ವೇಷ, ಅಸೂಯೆ, ಭಾವನೆ, ಭಾವುಕತೆ ಹೀಗೆ ಎಲ್ಲಾ ರೀತಿಯ ಅಂಶಗಳು ಒಳಗೊಂಡಿವೆ ಎಂಬುದು ನಿರ್ದೇಶಕರ ಮಾತು.
ಅದೇನೆ ಇರಲಿ, ಶ್ರೀನಗರ ಕಿಟ್ಟಿ, ಎಲ್ಲೋ ಮರೆಯಾಗಿಬಿಟ್ಟರು ಎನ್ನುವ ಹೊತ್ತಿಗೆ “ಗೌಳಿ” ಮೂಲಕ ಕಾಣಿಸಿಕೊಂಡು ಅಚ್ಚರಿ ನೀಡುತ್ತಿದ್ದಾರೆ. ಅವರ ಫಸ್ಟ್‌ ಲುಕ್‌ ನೋಡಿದವರಿಗೆ ಸಿನಿಮಾ ನೋಡಲೇಬೇಕೆನಿಸುವುದಂತೂ ನಿಜ. ಈ ಮೂಲಕವಾದರೂ ಶ್ರೀನಗರ ಕಿಟ್ಟಿ, ಕನ್ನಡದಲ್ಲಿ ಪುನಃ ಗಟ್ಟಿ ನೆಲೆ ಕಾಣುವಂತಾಗಲಿ ಎಂಬದು “ಸಿನಿಲಹರಿ” ಆಶಯ.

Related Posts

error: Content is protected !!