ರಾಬರ್ಟ್ ಸಿನಿಮಾದಲ್ಲಿ ಹೀರೋ ಕ್ಯಾರೆಕ್ಟರ್ ನಂದಲ್ಲ, ನಿಜವಾದ ಹೀರೋ ಜಗಪತಿ ಬಾಬು ಅವರ ಕ್ಯಾರೆಕ್ಟರ್……– ಇದು ನಟ ದರ್ಶನ್ ಅವರ ಮಾತು. ಹೈದ್ರಾಬಾದ್ ನಲ್ಲಿ ಶುಕ್ರವಾರ ಏರ್ಡಿಸಿದ್ದ ” ರಾಬರ್ಟ್ʼ ಚಿತ್ರದ ಪ್ರೀ ರಿಲೀಸ್ ಸಂಭ್ರಮದಲ್ಲಿ ದರ್ಶನ್ ಈ ಮಾತು ಹೇಳುತ್ತಿದ್ದಂತೆ ತೆಲುಗು ಸಿನಿಮಾ ಪ್ರೇಮಿಗಳು, ಸೌತ್ ಸ್ಟಾರ್ ಜಗಪತಿ ಬಾಬು ಅವರ ಅಭಿಮಾನಿಗಳು ಸಿಳ್ಳೆ, ಕೇಕೆ ಗಳ ಮೂಲಕ ಹುಚ್ಚೆದ್ದು ಕುಣಿದರು.
ಅವರನ್ನು ಕೆರಳಿಸುವುದಕ್ಕಾಗಿಯೇ ದರ್ಶನ್ ಈ ಮಾತು ಹೇಳಿದ್ದ ಅನ್ನೋದು ನಿಜವೇ ಆಗಿದ್ದರೂ, ರಾಬರ್ಟ್ ಚಿತ್ರದಲ್ಲಿ ಜಗಪತಿ ಬಾಬು ಅವರ ಪಾತ್ರವೇನು ಕಮ್ಮಿ ಇಲ್ಲ. ಅದನ್ನು ರಿಜಿಸ್ಟ್ರ್ ಮಾಡೋದಕ್ಕಾಗಿಯೇ ದರ್ಶನ್ ಆ ಮಾತನ್ನು ಒತ್ತು ಕೊಟ್ಟು ಹೇಳಿದ್ದು, ತೆಲುಗು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತು. ಆ ಮಟ್ಟಿಗೆ ನಿನ್ನೆ ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಫ್ರೀ ರಿಲೀಸ್ ಸಂಭ್ರಮ ಅದ್ದೂರಿಯಾಗಿಯೇ ನಡೆದಿದ್ದು ವಿಶೇಷ.
ಶ್ರೇಯಸ್ ಮೀಡಿಯಾ ಜತೆಗೆ ರಾಬರ್ಟ್ ಚಿತ್ರ ತಂಡ ಆಯೋಜಿಸಿದ್ದ ಈ ಕಾರ್ಯಕ್ರಮ ಕನ್ನಡದಲ್ಲಿ ನಡೆಯುವ ಹಾಗೆಯೇ ಗ್ರಾಂಡ್ ಆಗಿಯೇ ನಡೆಯಿತು. ಈ ಮುಂಚೆ ತೆಲುಗು ಟೀಸರ್ ಹಾಗೂ ಟ್ರೇಲರ್ ಮೂಲಕ ಟಾಲಿವುಡ್ ನಲ್ಲಿ ದೊಡ್ಡ ಹವಾ ಎಬ್ಬಿಸಿದ್ದ ʼರಾಬರ್ಟ್ʼ ಚಿತ್ರಕ್ಕೆ ಅಲ್ಲಿನ ಸಿನಿಮಾ ಪ್ರೇಮಿಗಳು ಚಿತ್ರದ ರಿಲೀಸ್ ಗಾಗಿ ದೊಡ್ಡ ನಿರೀಕ್ಷೆಯಲ್ಲಿರುವುದು ನಿನ್ನೆಯ ಈವೆಂಟ್ ಮೂಲಕ ಸಾಬೀತಾಯಿತು. ರಾಬರ್ಟ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲು ಟಾಲಿವುಡ್ ಗೆ ಎಂಟ್ರಿ ಆಗಿದ್ದರೂ, ಈಗಾಗಲೇ ಅವರ ಹವಾ ಶುರುವಾಗಿದೆ ಎನ್ನುವುದಕ್ಕೆ ನಿನ್ನೆಯ ಕಾರ್ಯಕ್ರಮದಲ್ಲಿ ಸಿನಿಮಾ ಆಭಿಮಾನಿಗಳು ದರ್ಶನ್, ದರ್ಶನ್ ಅಂತ ಕೂಗುತ್ತಿದ್ದೇ ಸಾಕ್ಷಿ ಆಯಿತು.
ವರ್ಣ ರಂಜಿತ ಕಾರ್ಯಕ್ರಮದಲ್ಲಿ ಸಿನಿಮಾ ಪ್ರೇಮಿಗಳು ಹಾಗೂ ಅಭಿಮಾನಿಗಳ ಸಿಳ್ಳೆ, ಕೇಕೆಗಳ ಸಂಭ್ರಮದ ನಡುವೆಯೇ ಮಾತನಾಡಿದ ನಟ ದರ್ಶನ್, ತೆಲುಗಿನಲ್ಲೇ ಭಾಷಣ ಆರಂಭಿಸಿ, ತೆಲುಗು ಸಿನಿಮಾ ಪ್ರೇಕ್ಷಕರ ಮನಗೆದ್ದರು.ಕನ್ನಡದಲ್ಲಿ ಭಾಷಣ ಆರಂಭಿಸಿ ನಂತರ ತೆಲುಗಿನಲ್ಲಿ ಮಾತು ಶುರು ಮಾಡಿದ ದರ್ಶನ್, ಮೊದಲಿಗೆ ತೆಲುಗು ಪ್ರೇಕ್ಷಕರಿಗೆ, ತೆಲುಗಿನ ವಿತರಕರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಟಾಲಿವುಡ್ ನ ಜನಪ್ರಿಯ ನಟಜಗಪತಿ ಬಾಬು ಬಗ್ಗೆ ವಿಶೇಷವಾಗಿ ಮಾತನಾಡಿದ ನಟ ದರ್ಶನ್, ‘ಸಿನಿಮಾದಲ್ಲಿ ರಾಬರ್ಟ್ ಅಲ್ಲ ಹೀರೋ ನಿಜವಾದ ಹೀರೋ ಜಗಪತಿ ಬಾಬು ನಿರ್ವಹಿಸಿರುವ ನಾನಾ ಪಾತ್ರ’ ಎಂದರು. ದರ್ಶನ್ ಅವರ ಈ ಮಾತಿಗೆ ಅಭಿಮಾನಿಗಳು ಭರ್ಜರಿ ಸಂಭ್ರಮಪಟ್ಟರು.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಸಿನಿಮಾ ನಿರ್ಮಾಣದ ಸಾಹಸಕ್ಕೆ ಮೆಚ್ಚುಗೆ ಹೇಳಿದ ದರ್ಶನ್, ‘ನಾವೆಲ್ಲ ಹಣ ಪಡೆದುಕೊಂಡು ನಟಿಸಿಬಿಟ್ಟಿದ್ದೇವೆ ಅಷ್ಟೆ. ಆದರೆ ಸಿನಿಮಾದ ನಿಜವಾದ ಹೀರೋ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು. ಅವರೇ ಈ ಸಿನಿಮಾದ ಜೀವ’ ಎಂದು ಹೊಗಳಿದರು. ‘ಕಾರ್ಯಕ್ರಮದಲ್ಲಿ ನಮ್ಮ ತಂದೆ ವಿಲನ್ ಆಗಿದ್ದವರು ಎಂದೆಲ್ಲಾ ವಿಡಿಯೋ ತೋರಿಸಿದರು. ಆದರೆ ನಾನು ಸಿನಿಮಾಕ್ಕೆ ಬರುವ ಮುನ್ನವೇ ತಂದೆಯನ್ನು ಕಳೆದುಕೊಂಡೆ. ಆದರೆ ಅವರೊಟ್ಟಿಗೆ ನಟಿಸಿದ ಹಿರಿಯರೆಲ್ಲಾ ನನಗೆ ತಂದೆ ಸಮಾನ. ನಟ ದೇವರಾಜ್ ಅವರು ನನಗೆ ತಂದೆ ಸಮಾನ, ನಮ್ಮನ್ನು ಹೊಡೆಯುವ, ತಿದ್ದುವ ಅಧಿಕಾರ ಅವರಿಗೆ ಇದೆ. ಅವರೊಟ್ಟಿಗೆ ಈ ಸಿನಿಮಾದಲ್ಲಿ ನಟಿಸಿರುವುದು ನನ್ನ ಭಾಗ್ಯ’ ಎಂದು ಭಾವುಕರಾದರು ದರ್ಶನ್.
ಚಿತ್ರದ ನಾಯಕಿ ನಟಿ ಆಶಾ ಭಟ್, ನಿರ್ದೇಶಕ ತರುಣ್ ಸುಧೀರ್, ನಟ ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಇನ್ನೂ ಹಲವಾರು ಮಂದಿ ಹಾಜರಿದ್ದು ಮಾತನಾಡಿದರು. ಹಾಡು, ನೃತ್ಯಗಳ ಮೂಲಕ ಇಡೀ ಕಾರ್ಯಕ್ರಮ ಕಲರ್ ಫುಲ್ ಆಗಿ ನಡೆದಿದ್ದು, ಇಡೀ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಆಕರ್ಷಣೆ ಆಗಿದ್ದು, ತೆಲುಗು ಸಿನಿಮಾ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸೇರಿ, ಚಿತ್ರದ ಅದ್ದೂರಿ ಸ್ವಾಗತಕ್ಕೆ ಕಾದಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.