ಇದೇನು ಚಿತ್ರದ ಟೈಟಲ್ ಹೀಗಿದೆ ? ” ಕಟಿಂಗ್ ಶಾಪ್ʼ ಎನ್ನುವ ಚಿತ್ರದ ಟೈಟಲ್ ಕೇಳಿದವರಿಗೆ ತಕ್ಷಣಕ್ಕೆ ಹೀಗೆನಿಸುವುದು ಅಷ್ಟೇ ಸಹಜ. ಯಾಕಂದ್ರೆ, ಕಟಿಂಗ್ ಶಾಪ್ ಅಂದಾಕ್ಷಣ ನಮಗೆಲ್ಲ ತಕ್ಷಣಕ್ಕೆ ಕಣ್ಣ ಮುಂದೆ ಬರೋದೇ ಬೇರೆ. ಆದ್ರೆ ಇದು ಅದಲ್ಲ. ಅದಕ್ಕೂ ಈ ಚಿತ್ರಕ್ಕೂ ಯಾವುದೇ ಕನೆಕ್ಷನ್ ಕೂಡ ಇಲ್ಲ. ಇದು ಸಿನಿಮಾ ಸಂಕಲನಕಾರನೊಬ್ಬನ ಕಥೆ. ಸಿನಿ ದುನಿಯಾದಲ್ಲಿ ಇಲ್ಲಿ ತನಕ ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವ್ಯಕ್ತಿಗಳ ಕುರಿತು ಸಿನಿಮಾ ಬಂದಿವೆ. ಆದ್ರೆ ಸಿನಿಮಾ ಇತಿಹಾಸದಲ್ಲೇ ಫಸ್ಟ್ ಟೈಮ್ ಸಿನಿಮಾ ಎಡಿಟರ್ ಮೇಲೊಂದು ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದ್ದಾರೆ ಯುವ ನಿರ್ದೇಶಕ ಪವನ್ ಭಟ್. ಗುರುಪುರ ಕೆ. ಉಮೇಶ್ ಹಾಗೂ ಕೆ. ಗಣೇಶ ಐತಾಳ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.
ಗುರುವಾರ ಸಂಜೆ ಈ ಚಿತ್ರದ ಟೀಸರ್ ಲಾಂಚ್ ಆಗಿದೆ. ಪಿಆರ್‌ಕೆ ಆಡಿಯೋ ಸಂಸ್ಥೆಯ ಮೂಲಕ ಇದು ಹೊರ ಬಂದಿದೆ. ಡಾಲಿ ಖ್ಯಾತಿಯ ನಟ ಧನಂಜಯ್ ಟೀಸರ್ ಲಾಂಚ್ ಮಾಡಿ, ಹೊಸಬರಿಗೆ ಶುಭ ಕೋರಿದ್ದಾರೆ. ಚಿತ್ರದ ಶೀರ್ಷಿಕೆಯ ಹಾಗೆಯೇ ಟೀಸರ್ ತುಂಬಾನೆ ಡಿಫೆರೆಂಟ್ ಆಗಿದೆ. ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತಿದೆ. ಟೀಸರ್ ಪ್ರತಿ ಸೀನ್ ಮಜಾ ವಾಗಿದೆ.
ಸಿನಿಮಾ, ಪ್ರೇಮ, ಕಾಲೇಜು ಕತೆಗಳ ಸುತ್ತಲ ದೃಶ್ಯದ ತುಣುಕುಗಳು ಕಾಮಿಡಿಯ ಕಿಕ್ಕೋ ಕಿಕ್. ಲಾಂಚ್ ಕೆಲವೇ ಗಂಟೆಗಳಲ್ಲಿ ಅದು ಸೋಷಲ್ ಮೀಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿತ್ತು. ಇದು ಬಿಡಿ, ಟೀಸರ್ ಮಾಡಿದ ಸಂದರ್ಭವೇ ಡಿಫೆರೆಂಟ್ ಆಗಿತ್ತು. ಚಿತ್ರ ತಂಡ ಅವತ್ತು ನಟ ಧನಂಜಯ್ ಅವರನ್ನು ಭೇಟಿ ಮಾಡಿತ್ತು. ಹೋಗುವ ಮುನ್ನವೇ ಧನಂಜಯ್ ಅವರಿಂದ ಅಪಾಯಿಂಟ್ ಮೆಂಟ್ ಪಡೆದಿತ್ತು. ಹೋಗುವಾಗ ತಾವುಮಾಧ್ಯಮದವರು, ಸಂದರ್ಶನ ಬೇಕು ಅಂತ ಹೇಳಿತ್ತು. ಕೊನೆಗೆ ಧನಂಜಯ್ ಅವರನ್ನು ಭೇಟಿ ಮಾತಿಗೆ ಕುಳಿತಾಗ ತಾವೊಂದು ಸಿನಿಮಾ ಟೀಮ್ ಕಡೆಯಿಂದ ಬಂದಿದ್ದೇವೆ. ಕಟಿಂಗ್ ಶಾಪ್ ಅಂತ ಸಿನಿಮಾ ಅಂತಂದಾಗ ಧನಂಜಯ್ ಅವರೇ ಶಾಕ್. ಹಾಗೊಂದು ಡಿಫೆರೆಂಟ್ ಸ್ಟೈಲ್ ನಲ್ಲಿʼ ಕಟಿಂಗ್ ಶಾಪ್ʼ ಟೀಸರ್ ಲಾಂಚ್ ಆಗಿದೆ.
ನವ ಪ್ರತಿಭೆ ಪವನ್ ಭಟ್ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಅವರು ಆಪರೇಷನ್ ಅಲಮೇಲಮ್ಮ, ಮಾಯಾ ಬಜಾರ್, ಅಳಿದು ಉಳಿದವರು, ರಾಂಚಿ ಸೇರಿದಂತೆ ಹಲವು ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ ಕೂಡ ಬರೆದಿದ್ದಾರೆ. ಇದೇ ಮೊದಲು ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜತೆಗೆ ನಿರ್ದೇಶನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರಿಗೆ ಕೆ.ಬಿ. ಪ್ರವೀಣ್ ಕೂಡ ಸಾಥ್ ನೀಡಿದ್ದಾರೆ. ಹಾಗೆಯೇ ಪ್ರವೀಣ್ ಈ ಚಿತ್ರದಲ್ಲಿ ನಾಯಕನಟರಾಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ ಸಂಗೀತ ನಿರ್ದೇಶನದ ಜವಾಬ್ದಾರಿಯೂ ಅವರದ್ದೇ. ಸ್ಕಂದ ರತ್ನ ಛಾಯಾಗ್ರಹಣ ಮಾಡಿದ್ದಾರೆ. ಸಾಗರ್ ಗಣೇಶ್ ಸಂಕಲನ ಈ ಚಿತ್ರಕ್ಕಿದೆ. ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ , ಹಿರಿಯ ನಿರ್ದೇಶಕ ಭಗವಾನ್, ಓಂ ಪ್ರಕಾಶ್ ರಾವ್ ಜತೆಗೆ ರಾಬರ್ಟ್ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಕೂಡ ಇದ್ದಾರೆ. ಸದ್ಯಕ್ಕೆ ಚಿತ್ರ ತಂಡ ಟೀಸರ್ ಲಾಂಚ್ ಮೂಲಕ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಟ್ರೇಲರ್ ಮೂಲಕ ಸೌಂಡ್ ಮಾಡಲು ಸಿದ್ಧತೆ ನಡೆಸಿದೆ.