Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ನೆನಪಲ್ಲಿ ಬಡವರಿಗೆ ಫುಡ್‌ ಕಿಟ್‌ ವಿತರಿಸಿದ ಅಭಿಮಾನಿ; ಪ್ರಚಾರ ಗಿಟ್ಟಿಸಿಕೊಳ್ಳೋ ಇರಾದೆ ನಂಗಿಲ್ಲ, ಇದು ನಿಜವಾದ ಅಭಿಮಾನದ ಕೆಲಸ ಅಂದ್ರು ಆಂಕರ್‌ ಭಾರತಿ !

ಅಭಿಮಾನದ ಅತಿರೇಕ ಅಂತೀರೋ, ನೀವು ಇದನ್ನು ಪ್ರಚಾರ ಗಿಮಿಕ್‌ ಅಂತೀರೋ, ಆದರೆ ಧಾರವಾಡ ಮೂಲದ ಆ ಯುವತಿ ಆಂಕರ್‌ ಭಾರತಿ ಈಗ ನಟ ಸಂಚಾರಿ ವಿಜಯ್‌ ಅವರ ನೆನಪಿನಲ್ಲಿ ಶನಿವಾರ ನೂರು ಮಂದಿ ಬಡಜನರಿಗೆ ಫುಡ್‌ ಕಿಟ್‌ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಸೇವೆಗೆ ಮುನ್ನುಡಿ ಬರೆದಿದ್ದಾರೆ. ಹಾಗೆಯೇ ಇಂದಿನಿಂದ ತಾವು ತಮ್ಮ ಕೈಯಲ್ಲಾದಷ್ಟು ನಿರಂತರವಾಗಿ ಸಾಮಾಜಿಕ ಸೇವೆ ಮಾಡುವುದಾಗಿ ಜನರ ನಡುವೆ ಪ್ರಮಾಣ ಸ್ವೀಕರಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಈ ಸೇವೆಯನ್ನು ಯಾವುದೇ ಸ್ವಾರ್ಥಕ್ಕೆ ಬಳಸಿಕೊಳ್ಳದೇ ಕೇವಲ ನಟ ಸಂಚಾರಿ ವಿಜಯ್‌ ಅವರ ನೆನಪಿನಲ್ಲಿ ಮುನ್ನೆಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಇಷ್ಟು ಹೇಳಿದ ಮೇಲೆ ಈ ಆಂಕರ್‌ ಭಾರತಿ ಯಾರು ಅಂತ ನಿಮಗೂ ಅನಿಸಿರೋದಿಕ್ಕೆ ಸಾಕು.

ಅಂದ ಹಾಗೆ, ನಟ ಸಂಚಾರಿ ನಿಧನದ ಸಂದರ್ಭದಲ್ಲಿ ಟಿವಿ ಚಾನೆಲ್‌ ಸೇರಿದಂತೆ ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಯುವತಿಯ ಹೆಸರು ಆಂಕರ್‌ ಭಾರತಿ. ನಟ ಸಂಚಾರಿ ವಿಜಯ್‌ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿದ್ದ ಕೊನೆಯ ದಿನದಿಂದ ಹಿಡಿದು, ಅವರ ಅಂತ್ಯಕ್ರಿಯೆ ಮುಗಿಯುವರೆಗೂ ಕನ್ನಡದ ಅಷ್ಟು ಚಾನೆಲ್‌ ಗಳಲ್ಲಿ ಆಂಕರ್‌ ಭಾರತಿ ಸಂದರ್ಶನಗಳು ಬಿತ್ತರವಾದವು. ಕಾರಣ, ಸಂಚಾರಿ ವಿಜಯ್‌ ಜತೆಗಿನ ತಮ್ಮ ಒಡನಾಟ ಕುರಿತು ಆಂಕರ್‌ ಭಾರತಿ ತುಂಬಾ ಭಾವುಕರಾಗಿ ಮಾತನಾಡಿದ್ದರು. ಸಂದರ್ಶನದ ಆ ವಿಡಿಯೋಗಳು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಕೆಲವು ಯುಟ್ಯೂಬ್‌ ಚಾನೆಲ್ ಗಳಂತೂ ಆಂಕರ್‌ ಭಾರತಿ ಅವರ ಮಾತುಗಳಿಗೆ ರೆಕ್ಕೆ ಪುಕ್ಕ ಕಟ್ಟಿ ಸುದ್ದಿ ಮಾಡಿದ್ದೇ ಮಾಡಿದ್ದು. ಕೊನೆಗದು ನಟ ಸಂಚಾರಿ ವಿಜಯ್‌ ಅವರ ಪರಿಶುದ್ಧವಾರ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ಮಾಡಿತು.

ಯುಟ್ಯೂಬ್‌ ಚಾನೆಲ್‌ ಗಳು ಮಾಡಿದ ಘನಂದಾರಿ ಕೆಲಸಗಳು ಅಷ್ಟು ಮಾತ್ರವೇ ಅಲ್ಲ, ವಿಜಯ್‌ ಮದುವೆ ವಿಚಾರವನ್ನು ಎಳೆತಂದು ಆ ಹುಡುಗಿ ಯಾರು ಗೊತ್ತಾ ಅಂತೆಲ್ಲ ಯಾರಾರದೋ ಫೋಟೋಗಳನ್ನು ಹಾಕಿ ವೈರಲ್‌ ಮಾಡಿದ್ದು ತೀರಾ ಅತಿರೇಕವೇ ಎನಿಸಿತು. ಆಗ ಧಾರವಾಡ ಮೂಲದ ಯುವತಿ ಆಂಕರ್‌ ಭಾರತಿ ವಿರುದ್ಧವೂ ಜನರು ಆಕ್ರೋಶ ಹೊರ ಹಾಕಿದರು. ಆದರೆ, ನಟ ಸಂಚಾರಿ ವಿಜಯ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವಂತ ಯಾವುದೇ ಕೆಲಸ ಮಾಡಿಲ್ಲ, ಅದೆಲ್ಲ ಮೀಡಿಯಾದವರ ಕೆಲಸ. ನಾನು ನಟ ಸಂಚಾರಿ ವಿಜಯ್ ಅವರ ಪ್ರಾಮಾಣಿಕ ಅಭಿಮಾನಿ ಅಂತ ಪ್ರತಿಪಾದಿಸಿದ್ದ ಆಂಕರ್‌ ಭಾರತಿ, ಈಗ ಅಂತಹ ಯಾವುದೇ ಪ್ರಚಾರ ಬಯಸದೇ ನಟ ಸಂಚಾರಿ ವಿಜಯ್‌ ಹೆಸರಲ್ಲಿ ಸಾಮಾಜಿಕ ಸೇವೆಗೆ ಮುಂದಾಗಿದ್ದಾರೆ.

ಅದರ ಮೊದಲ ಪ್ರಯತ್ನವಾಗಿ ಶನಿವಾರ ಧಾರವಾಡ ಜಿಲ್ಲೆಯ ಮಿಶ್ರೀಕೋಟೆ ಗ್ರಾಮ, ಧಾರವಾಡ ಸ್ಲಂ ಪ್ರದೇಶದ ಜನರು ಹಾಗೂ ಅಲ್ಲಿನ ಬುದ್ದಿ ಮಾಂದ್ಯ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಫುಡ್‌ ಕಿಟ್‌ ವಿತರಣೆ ಮಾಡಿದರು.

ಜನ ಮೆಚ್ಚುವ ಈ ಸಮಾಜ ಸೇವೆ ಕುರಿತು ʼಸಿನಿ ಲಹರಿʼ ಜತೆಗೆ ಮಾತನಾಡಿದ ಅವರು, ವರನಟ ಡಾ. ರಾಜ್‌ ಕುಮಾರ್‌ ಅವರಂತೆಯೇ ನಂಗೆ ನಟ ಸಂಚಾರಿ ವಿಜಯ್‌ ಅವರ ಮೇಲೂ ದೊಡ್ಡ ಅಭಿಮಾನ ಇದೆ. ಆ ಅಭಿಮಾನಕ್ಕಾಗಿ ಅವರ ಬಗ್ಗೆ ಮಾತನಾಡಿದ್ದು ನಿಜ. ಆದರೆ, ಈಗ ನಾನು ಮಾತನಾಡೋದಿಲ್ಲ. ನಟ ಸಂಚಾರಿ ವಿಜಯ್‌ ಅವರು ಬದುಕಿನಲ್ಲಿ ತೋರಿಸಿಕೊಟ್ಟ ಸಾಮಾಜಿಕ ಸೇವೆಯೊಂದಿಗೆ ಅವರಿಗೆ ಗೌರವ ಸಲ್ಲಿಸುತ್ತೇನೆ.

ನಟನಿಗೆ ಒಬ್ಬ ಅಭಿಮಾನಿಯಾಗಿ ಮಾತನಾಡುವುದು ಕೂಡ ಇಲ್ಲಿ ಅಪರಾಧವಾಗುತ್ತಿದೆ. ಅದನ್ನು ನಾನು ಬದುಕಿನಲ್ಲಿ ಮಾಡಿ ತೋರಿಸುವೆ ಎಂದರು. ಹಾಗೆಯೇ ಪ್ರಚಾರದ ಗಿಮಿಕ್‌ ಗಾಗಿ ಅವರು ನಟ ವಿಜಯ್‌ ಅವರ ಹೆಸರು ಬಳಸಿಕೊಂಡರು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಆಂಕರ್‌ ಭಾರತಿ, ನಂಗ್ಯಾಕೆ ಪ್ರಚಾರ ಬೇಕು ಸರ್‌, ನಾನೇನು ರಾಜಕಾರಣಿ ಆಗಲೂ ಹೊರಟವಳಾ ? ನಂಗೆ ಅಂತಹ ಯಾವುದೇ ಪ್ರಚಾರದ ಗೀಳು ಇಲ್ಲ. ಬೇಕಾದ್ರೆ ನನ್ನದೇ ಸ್ವಂತ ಸಾಮಾರ್ಥ್ಯದಲ್ಲಿ ಪ್ರಚಾರ ಪಡೆದುಕೊಳ್ಳುವೆ ಎನ್ನುವ ಉತ್ತರ ಆಂಕರ್‌ ಭಾರತಿ ಅವರದು.

ಅಂದ ಹಾಗೆ , ಶನಿವಾರ ಆಂಕರ್‌ ಭಾರತಿ ಅವರದ್ದು ಹುಟ್ಟು ಹಬ್ಬ. ನಟ ಸಂಚಾರಿ ವಿಜಯ್‌ ಅವರ ನೆನಪಿನಲ್ಲಿ ಗ್ರಾಂಡ್‌ ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿರುವ ಅವರು, ಶನಿವಾರ ಬಡ ಜನರಿಗೆ ಫುಡ್‌ ಕಿಟ್‌ ವಿತರಿಸುವ ಸಾಮಾಜಿಕ ಸೇವೆಯ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿಶೇಷ.

Categories
ಸಿನಿ ಸುದ್ದಿ

ಕಾರ್ಡ್ ಇಲ್ಲದ ಸಿನಿ ಕಾರ್ಮಿಕರಿಗೆ ಫುಡ್ ಕಿಟ್‌ ವಿತರಣೆ; ನೆರವಿನ ಹಸ್ತ ಚಾಚಿದ ಸ್ನೇಹರ್ಷಿ ಕಿರಣ್ ನಾರಾಯಣ್

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಸ್ನೇಹರ್ಷಿ ನಾಯಕ ಕಿರಣ್ ನಾರಾಯಣ್, ಇದೀಗ ಚಿತ್ರರಂಗದ ಅಸಂಘಟಿತರಿಗೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಗುರುತಿನ ಚೀಟಿ ಇಲ್ಲದೆ ಸರ್ಕಾರದ ಸಹಾಯ ಧನದಿಂದ ವಂಚಿತರಾದವರ ಹಸಿವನ್ನು ನೀಗಿಸುವ ತೃಪ್ತಿದಾಯಕ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಬಾ.ಮ. ಹರೀಶ್ ಅವರ ಉಲ್ಲಾಸ್ ಶಾಲೆಯ ಆವರಣದಲ್ಲಿ 150ಕ್ಕೂ ಹೆಚ್ಚು ಸಿನಿ ಕಾರ್ಮಿಕರಿಗೆ ಕಿರಣ್ ನಾರಾಯಣ್ ಅವರು ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದರು.

ಈ‌ ವೇಳೆ ಬಾ.ಮ. ಹರೀಶ್ ನೆರವಾದರು. ಇದೇ ಸಮಯದಲ್ಲಿ ಅನಾಥ ಶವಗಳ ಬಂಧು ಎನಿಸಿಕೊಂಡ ನಟ ಅರ್ಜುನ್‌ಗೌಡ, ಪತ್ರಿಕಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್, ನಿರ್ಮಾಪಕ ಬಾ.ಮ.ಹರೀಶ್ ಹಾಗೂ ಬಾ.ಮ. ಗಿರೀಶ್ ಅವರಿಗೆ ಸ್ನೇಹರ್ಷಿ ಚಿತ್ರತಂಡದಿಂದ ಗೌರವ ಸಮರ್ಪಣೆ ಮಾಡಲಾಯಿತು.

ಸುಧೀಂದ್ರ ವೆಂಕಟೇಶ್ ಮಾತನಾಡಿ, ಕೋವಿಡ್‌ನಿಂದಾಗಿ ಚಿತ್ರರಂಗ ತುಂಬಾ ಸಂಕಷ್ಟ ಎದುರಿಸುತ್ತಿದೆ. ಇಂಥಾ ಸಮಯದಲ್ಲಿ ನಟ ಕಿರಣ್ ನಾರಾಯಣ್ ಅವರು ಚಿತ್ರರಂಗದವರ ಕಷ್ಟಕ್ಕೆ ನೆರವಾಗಬೇಕೆಂದು ಈ ಫುಡ್‌ ಕಿಟ್ ವ್ಯವಸ್ಥೆ ಮಾಡಿದ್ದಾರೆ. ಇನ್ನು ಜೀವದ ಹಂಗು ತೊರೆದು ಕೆಲಸ ಮಾಡಿದ ಅರ್ಜುನ್‌ಗೌಡರಂತಹ ವ್ಯಕ್ತಿಯನ್ನು ಗೌರವಿಸುವ ಅವಕಾಶ ನನಗೆ ಸಿಕ್ಕಿದ್ದೇ ಸಂತಸ, ಇವರಿಗೆ ಎಲ್ಲಾ ರೀತಿಯ ಗೌರವ, ಪ್ರಶಸ್ತಿಗಳು ಸಂದಬೇಕಿದೆ. ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಯನ್ನು ಅರ್ಜುನ್‌ಗೌಡ ಅವರಿಗೆಂದೇ ಮೀಸಲಿಟ್ಟಿದ್ದೇವೆ. ಅಲ್ಲದೆ ಇಂತಹ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಬಾ.ಮ. ಹರೀಶ್ ಅವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ, ಜೊತೆಗೆ ಬೇರೆಯವರಿಂದಲೂ ಕೂಡ ಸಹಾಯ ಮಾಡಿಸುತ್ತಿದ್ದಾರೆ ಎಂದರು.

ನಟ ಕಿರಣ್ ನಾರಾಯಣ್ ಮಾತನಾಡಿ, ಕೋವಿಡ್ ಆರಂಭವಾದಾಗಿನಿಂದಲೂ ನಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ಸಹಾಯ ಮಾಡುತ್ತಲೇ ಬಂದಿದ್ದೇವೆ. ಬಾ.ಮ. ಹರೀಶ್ ಅವರು ಕಾಲ್‌ಮಾಡಿ ಚಿತ್ರರಂಗದಲ್ಲಿ ಕಷ್ಟದಲ್ಲಿರುವವರಿಗೆ ನಿಮ್ಮ ಕಡೆಯಿಂದ ಏನಾದರೂ ಸಹಾಯ ಮಾಡಿ ಎಂದರು. ಹಾಗಾಗಿ ಸಿನಿ ಕಾರ್ಮಿಕರಿಗೆ ಫುಡ್‌ಕಿಟ್ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಸ್ನೇಹರ್ಷಿ ಚಿತ್ರದ ಸಂದೇಶವೂ ಇದೇ ಆಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.

ನಟ ಅರ್ಜುನ್‌ಗೌಡ ಮಾತನಾಡಿ, ಒಬ್ಬ ಕಲಾವಿದನಾಗಿ ಹಾಗೂ ಫ್ರಂಟ್‌ಲೈನ್ ವರ್ಕರ್ ಜವಾಬ್ದಾರಿ ನಿಭಾಯಿಸಿದ್ದೇನೆ. ಇಂತಹ ಟೈಮ್‌ನಲ್ಲಿ ಸಮಾಜಕ್ಕೆ ಏನಾದರೂ ತಿರುಗಿ ಕೊಡೋ ಅವಕಾಶವನ್ನು ದೇವರು ನೀಡಿದ್ದಾನೆ ಎಂದು ಹೇಳಿದರು. ಭಾಮ ಹರೀಶ್ ಮಾತನಾಡಿ, ಅರ್ಜುನ್‌ಗೌಡ ಅವರ ಈ ಸೇವೆ ತುಂಬಾ ದೊಡ್ಡದು, ಬಿಬಿಎಂಪಿಯಿಂದ ನೀಡುವ ಕೆಂಪೇಗೌಡ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದಿಂದ ಕೊಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ಘೋಷಿಸಲೇಬೇಕು ಎಂದು ಒತ್ತಾಯಿಸಿದರು.

Categories
ಸಿನಿ ಸುದ್ದಿ

ಮುಂದಿನ‌ ವರ್ಷ ಬಯೋಗ್ರಫಿ ಬರೆಯುತ್ತಾರಂತೆ ನಾದಬ್ರಹ್ಮ ಹಂಸಲೇಖ

ಬಯೋಗ್ರಫಿ ಬರೀಬೇಕು ನಿಜ, ಆದ್ರೆ ಬರೆಯೋದಿಕ್ಕೆ ಭಯ ಆಗುತ್ತೆ….!
ಹೌದು, ನಾದ ಬ್ರಹ್ಮ ಹಂಸಲೇಖ ಹೀಗೆ ಹೇಳಿದ್ರು. ಹಾಗಂತ, ತಮಾಷೆಗೆ ಹೇಳಿದ್ರಾ? ಇಲ್ಲ ಗಂಭೀರವಾಗಿಯೇ ಅವರು ಈ ಮಾತು ಹೇಳಿದರು‌. ಅದಕ್ಕೆ ಅವರು ಕಾರಣ ಏನು ಗೊತ್ತಾ? ಅಂತಹದೇನು ದೊಡ್ಡ ಸಾಧನೆ ತಾವು ಮಾಡಿಲ್ಲ ಅನ್ನೋದು‌. ಹಾಗಾದ್ರೆ ಇದು ನಿಜವಾ?

ಇಲ್ಲ, ಕನ್ನಡ ಸಿನಿಮಾ ಸಂಗೀತ ಮತ್ತು ಸಾಹಿತ್ಯದ ಜತೆಗೆ ದೇಸಿ‌ ಸಂಗೀತದಲ್ಲಿ ಮಹಾನ್ ಸಾಧನೆ ಮಾಡಿದ ಮೇರು ವ್ಯಕ್ತಿತ್ವ ಅವರದ್ದು. ಹಂಸಲೇಖ ಅಂದ್ರೆ ಕನ್ನಡಿಗರ ಮಾತು. ಹಾಗಾಗಿಯೇ ಅಲ್ಲವೇ ಅವರಿಗೆ ನಾದ ಬ್ರಹ್ಮ ಎನ್ನುವ ಬಿರುದು ಪಾತ್ರವಾಗಿದ್ದು‌. ಇಷ್ಟಾಗಿಯೂ ಅವರು ಬಯೋಗ್ರಫಿ ಬರೆಯುವಷ್ಟು ಅಂತಹದೇನು ದೊಡ್ಡ ಸಾಧನೆ ಮಾಡಿಲ್ಲ ಎನ್ನುತ್ತಾ ನಕ್ಕರು‌. ಅಂದಹಾಗೆ, ಅವರು ಈ ಮಾತುಗಳನ್ನು ಬುಧವಾರ ತಮ್ಮ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದರು. ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೂ ಉತ್ತರಿಸಿದರು.

ನೀವು ಸರ್ ಬಯೋಗ್ರಫಿ ಬರೆದು, ಕನ್ನಡ ಚಿತ್ರರಂಗ ಇತರರಿಗೂ ಸ್ಪೂರ್ತಿ ಆಗಬೇಕು ಎನ್ನುವುದು ಅವರ ಪ್ರಶ್ನೆ ಆಗಿತ್ತು. ಅದಕ್ಕೆ ನಗುತ್ತಾ ಉತ್ತರಿಸಿದ ಹಂಸಲೇಖ, ಬಯೋಗ್ರಫಿ ಬರೆಯೋದಿಕ್ಕೆ ನಂಗೆ ಭಯ ಆಗುತ್ತೆ. ಯಾಕಂದ್ರೆ ಅನೇಕ ಜನರ ಬಯೋಗ್ರಫಿ ಓದಿದ್ದೇನೆ. ಅವರೆಲ್ಲ ಮಹಾನ್ ಸಾಧಕರು. ನಮ್ಮಂತವರಿಗೆ ಸ್ಪೂರ್ತಿ ಆಗುವ ವ್ಯಕ್ತಿಗಳು. ಅಂತಹ ವ್ಯಕ್ತಿಗಳ‌ ಸಾಧನೆ ಮುಂದೆ ನಾವೇನು ಮಾಡಿಲ್ಲ.

ಮುಂದೆ ನಾನು ಮಾಡಬೇಕಾದ ಒಂದೆರೆಡು ಕೆಲಸಗಳಿವೆ. ನಾನೇ‌ ಸೃಷ್ಟಿಸಿದ ದೇಸಿ ಸಂಗೀತದ ಒಂದು ವಿದ್ಯೆ ಇದೆ. ಅದನ್ನು ಒಂದಷ್ಟು ಫೈನ್ ಟ್ಯೂನ್ ಮಾಡಬೇಕಿದೆ. ಮುಂದಿನ ವರ್ಷಕ್ಕೆ ಆ ಕೆಲಸ ಆಗಬಹುದು ಅಂತ ನಿರೀಕ್ಷೆ ಮಾಡಿದ್ದೇನೆ. ಹಾಗೆಯೇ ಇನ್ಮೊಂದು ಸಂಶೋಧನೆಯ ಕೆಲಸ ಇದೆ. ಅದೆಲ್ಲ ಲೋಕಾರ್ಪಣೆ ಆದ ಮೇಲೆ ಬಯೋಗ್ರಫಿ ಬರಿತೀನಿ ಅಂದ್ರು ಹಂಸಲೇಖ.

Categories
ಸಿನಿ ಸುದ್ದಿ

ಹಂಸಲೇಖ‌ ಹೇಳ್ತಾರೆ, ಒಳ್ಳೆ‌ ಗಾಳಿ ಒಳಗೆ ತಗೋ…! – ಹೀಗೊಂದು ಪರಿಸರ ಗೀತೆ

ಕೊರೊನಾ ಸೃಷ್ಟಿಸಿದ‌‌ ಅವಾಂತರಗಳಲ್ಲಿ ಆಕ್ಸಿಜನ್ ಕೊರತೆಯೂ ಒಂದು. ಆಕ್ಸಿಜನ್‌ ಕೊರತೆಯಿಂದಲೇ ಅದೆಷ್ಟೋ ಸಂಖ್ಯೆಯ ಜನ ನಿಧನರಾದರು. ಯಾಕಂದ್ರೆ ಕೊರೊನಾ ಎನ್ನುವ ಮನುಷ್ಯ ಸೃಷ್ಟಿಯ ಜೈವಿಕ ಯುದ್ದ ಆಕ್ಸಿಜನ್‌ಗೂ ಕುತ್ತು ತರುತ್ತದೆ. ಕೊರೊನಾ ಬಂದವರು ಬಹುತೇಕ ಆಕ್ಸಿಜನ್ ಕೊರತೆಯಿಂದಲೇ ನಿಧನರಾಗು ವುದು ನಿಮಗೂ ಗೊತ್ತು. ಇಂತಹ ಅಪತ್ತು‌ ತಂದೊಡ್ಡುವ ಜೈವಿಕ ಯುದ್ದವನ್ನು ನಾವು ಸಮರ್ಥವಾಗಿ‌ ನಿಭಾಯಿಸುವುದಾದರೆ, ನಮ್ಮ ಸುತ್ತಮುತ್ತ ಆಕ್ಸಿಜನ್ ಕೊಡುವ ಕಾಡುಗಳನ್ನು ಸೃಷ್ಟಿಸಬೇಕು. ಹಾಗೆಯೇ ಇರುವ ಕಾಡುಗಳನ್ನು ಸಂರಕ್ಷಿಸಿಕೊಳ್ಳಿ ಎನ್ನುವ ಸಂದೇಶವನ್ನು ಒಂದು ಸುಮಧುರ ಗೀತೆಯ ಮೂಲಕ ಹೇಳ ಹೊರಟಿದ್ದಾರೆ ನಾದ ಬ್ರಹ್ಮ‌ ಹಂಸಲೇಖ‌.

ಹೌದು, ಈಗಾಗಲೇ ಅವರು ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿರುವ “ಒಳ್ಳೇ ಗಾಳಿ ಒಳಗೆ ತಗೋ…” ಎನ್ನುವ ಈ ಹಾಡು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ವಿಶೇಷ‌. ಅಂದಹಾಗೆ, ಅವರು ಗೀತೆಯನ್ನು ಬರೆದಿದ್ದು ಅಮರ ಚಿತ್ರ ಕಥಾ ಹೆಸರಿನ ಚಿತ್ರಕ್ಕಾಗಿ. ಆ ಚಿತ್ರ ಒಂದು ಪರಿಸರದ ಕಾಳಜಿಯ ಜತೆಗೆಯೇ ಒಂದೊಳ್ಳೆಯ ಕಥೆಯನ್ನು ಹೊತ್ತು ಬರುತ್ತಿದೆಯಂತೆ. ಅದರ ಸದಾಶಯಕ್ಕೆ ತಕ್ಕಂತೆ ಹಂಸಲೇಖ ಈ ಗೀತೆ ಬರೆದಿದ್ದಾರಂತೆ. ಇನ್ನೊಂದು ವಿಶೇಷ ಅಂದ್ರೆ, ಈ ಗೀತೆಯನ್ನು ಹಂಸಲೇಖ ರಚಿಸಿದ್ದು ಕೊರೊನಾ‌ ಬರುವ ಮುಂಚೆ. ಅವರಿಗೆ ಅದೆಷ್ಟು ದೂರದೃಷ್ಟಿ ಇತ್ತೋ ಗೊತ್ತಿಲ್ಲ, ಭವಿಷ್ಯದಲ್ಲಿ ಆಕ್ಸಿಜನ್‌ಗಾಗಿಯೇ ಕಾಡು ಉಳಿಸಿಕೊಳ್ಳಿ ಅಂತ ಸಾಹಿತ್ಯದ ಮೂಲಕ ಹಂಸಲೇಖ ಮನವಿ ಮಾಡಿರುವುದು ವಿಶೇಷ.

ನರ ಮರ ಎನ್ನುವ ಸಾಲುಗಳ ಮೂಲಕ ಶುರುವಾಗುವ ಈ ಗೀತೆಗೆ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ನೀನು ನರ, ನಾನು ನರ, ನಂಗೂ‌ ನಿಂಗೂ‌ ಬೇಕು‌ ಮರ, ಮರವೇ ತಾನೆ ನಮಗೆ ವರ…. ಎನ್ನುವ ಈ ಗೀತೆಯ ಸಾಲುಗಳು ಅತ್ಯಾದ್ಬುತ. ಪರಿಸರದ ಮಹತ್ವವನ್ನು‌ ಪ್ರತಿಯೊಬ್ಬರಿಗೂ ‌ಮನ ಮುಟ್ಟುವಂತೆ ಜೋಡಿಸಿದ್ದಾರೆ. ಬುಧವಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಂಜೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಹಂಸಲೇಖ, ಈ ಹಾಡಿನ ಸದಾಶಯ ತೆರೆದಿಟ್ಟರು‌.

‘ಈ ಭೂಮಿ‌ ಮೇಲೆ ಮುಕ್ಕಾಲು ಭಾಗ ನೀರು , ಕಾಲು ಭಾಗ ಭೂಮಿ‌ ಇದೆ. ಇದರಲ್ಲಿ ಬದುಕುತ್ತಿರುವ ನರ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈಗಾಗಲೇ ಬಹುಪಾಲು ಕಾಡು ಕಡಿದು ಅರಣ್ಯ ನಾಶ ಮಾಡಿ ಆಗಿದೆ. ಅದರ ಪರಿಣಾಮ ಅನೇಕ‌ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಅದರ ಜತೆಗೆಯೇ ಕೊರೊನಾದಂತಹ ಜೈವಿಕ ಯುದ್ಧವೂ ಶುರುವಾಗಿದೆ. ಈಗ ಕಾಡು ಅಗತ್ಯ.

ಆರಂಭದಿಂದಲೂ‌ ಪರಿಸರವಾದಿಗಳು ಕಾಡು ಉಳಿಸಿ ಅಂತ ಹೇಳುತ್ತಲೇ ಬರುತ್ತಿದ್ದಾರೆ . ಆದರೂ ಅವರ ಕೂಗು , ಒಂದು ಸೊಳ್ಳೆಯ ಕೂಗಿನಷ್ಟಾಗಿದೆ. ಹಾಗಾಗಿ ಈಗ ಪ್ರತಿಯೊಬ್ಬರು ಪರಿಸರ ಉಳಿವಿಗೆ ಧ್ವನಿ ಎತ್ತಬೇಕಿದೆ’ ಎನ್ನುವ ಮಾತುಗಳ ಮೂಲಕ ಜೈಕಾಂರ್ ಮ್ಯೂಜಿಕ್ ಯೂಟ್ಯೂಬ್ ನಲ್ಲಿ ಲಭ್ಯವಿರುವ ಈ ಹಾಡು ಕೇಳಿ ಅಂತ ವಿನಂತಿ‌ ಮಾಡಿಕೊಳ್ಳುತ್ತಾರೆ ನಾದಬ್ರಹ್ಮ‌ ಹಂಸಲೇಖ.

Categories
ಸಿನಿ ಸುದ್ದಿ

ಇದು ಅನಿರೀಕ್ಷಿತ ; ಲಾಕ್ ಡೌನ್ ವೇಳೆ ರೆಡಿಯಾಯ್ತು ಸಿನಿಮಾ ; ಮಿಮಿಕ್ರಿ ದಯಾನಂದ್ ಅವರ ಮೊದಲ ನಿರ್ದೇಶನದ ಚಿತ್ರವಿದು

ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ,ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವಿಕ ವಾದ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದನ್ನು ನಿರೂಪಿಸುವುದೇ, “ಅನಿರೀಕ್ಷಿತ” ಚಿತ್ರದ ಕಥಾಹಂದರ.

ಲಾಕ್ ಡೌನ್ ಸಮಯ ವ್ಯರ್ಥ ಮಾಡಬಾರದೆಂದು ತಿಳಿದ ಹದಿಮೂರು ಜನ ಪ್ರತಿಭಾವಂತರ ತಂಡದ ಪರಿಶ್ರಮದ ‌ಫಲವಾಗಿ ಈ ಚಿತ್ರ ಮೂಡಿಬಂದಿದೆ.
ಕೇವಲ ಎರಡು ಪಾತ್ರಗಳನ್ನಿಟ್ಟುಕೊಂಡು ಒಂದೇ ಚಿತ್ರೀಕರಣ ಸ್ಥಳದಲ್ಲಿ ನಾಲ್ಕು ಲೊಕೇಶನ್ ಗಳಂತೆ ಬಳಸಿರುವುದು ಈ ಚಿತ್ರದ ವಿಶೇಷ.
ಚಿತ್ರೀಕರಣ, ನಂತರದ ಚಟುವಟಿಕೆಗಳು ಪೂರ್ಣವಾಗಿ ‌ಬಿಡುಗಡೆಗೆ ಸಿದ್ದವಾಗಿದೆ.


ಲಾಕ್ ಡೌನ್ ಪೂರ್ಣವಾಗಿ ಚಿತ್ರಮಂದಿರ ತೆರವಿಗೆ ಅನುಮತಿ ದೊರಕಿದ ಕೂಡಲೆ ಚಿತ್ರಮಂದಿರ ಹಾಗೂ ಓಟಿಟಿ ಫ್ಲಾಟ್ ಫಾರಂನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.
ಅನೀರಿಕ್ಷಿತ ಚಿತ್ರದ ಮೊದಲ ಪೋಸ್ಟರನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದ್ದಾರೆ. ಎರಡು ಹಾಗೂ ಮೂರನೇ ಪೋಸ್ಟರನ್ನು ಗಿರಿಜಾ ಲೋಕೇಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅನಾವರಣಗೊಳಿಸಿದ್ದಾರೆ.

ಸದ್ಯದಲ್ಲೇ ಟ್ರೇಲರ್ ಸಹ ಬಿಡುಗಡೆಯಾಗಲಿದೆ.
ಎಸ್.ಕೆ.ಟಾಕೀಸ್ ಬ್ಯಾನರ್ ನಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್.‌

ಮಿಮಿಕ್ರಿ ದಯಾನಂದ್ ಅವರೆ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ.
ಗುರುಕಿರಣ್ ಸಂಗೀತ ನೀಡಿದ್ದಾರೆ.
ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.‌


ಚಿತ್ರದಲ್ಲಿ ಕೇವಲ ಎರಡುಪಾತ್ರಗಳಿದ್ದು,‌ ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ.
ಸಹ ನಿರ್ಮಾಪಕ ಸಂತೋಷ್ ಕೊಡೆಂಕೇರಿ ಈ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ನಾದಬ್ರಹ್ಮ ನಿಗೆ ಹುಟ್ಟು‌ ಹಬ್ಬದ‌ ಸಂಭ್ರಮ‌ ; ಬರ್ತ್ ಡೇ ಗೆ ಅವರೇ ಕೊಟ್ಟ ಶಾರದಾ ಪುಸ್ತಕಾಲಯ ಗಿಫ್ಟ್!

ನಾದ ಬ್ರಹ್ಮ ಡಾ.‌ಹಂಸಲೇಖ ಅವರಿಗೆ ಇಂದು ಹುಟ್ಟು‌ಹಬ್ಬ. ಹಾಗಂತ ಅವರು ಎಂದಿಗೂ ಗ್ರಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡವರಲ್ಲ. ಬಲವಂತವಾಗಿ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಬೇಕು ಅಂದಾಗಲೂ ಅದರಲ್ಲೊಂದು ವಿಶೇಷತೆ ಇರಲಿ ಅಂತ‌ ಬಯಸುವ ವ್ಯಕ್ತಿತ್ವ ಹಂಸಲೇಖ ಅವರದ್ದು. ಅದರಲ್ಲೂ ಈಗ ಕೊರೊನಾ ಸಂಕಷ್ಟದ ಕಾಲ. ಇಂತಹ ಸಂದರ್ಭದಲ್ಲಿ ಹಂಸಲೇಖ ಅವರು ಗ್ರಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರಾ?

ಇಲ್ಲ, ಗ್ರಾಂಡ ಸೆಲೆಬ್ರೇಷನ್ ಬದಲಿಗೆ ಈ ವರ್ಷದ ಹುಟ್ಟು ಹಬ್ಬಕ್ಕೆ ಅವರು ಅಭಿಮಾನಿಗಳಿಗೆ, ಕನ್ನಡ ನಾಡಿನ ಸಾಹಿತ್ಯ ಅಭಿಮಾನಿಗಳಿಗೆ ವಿಶೇಷವಾದ ಒಂದು ಕೊಡುಗೆ ನೀಡಿದ್ದಾರೆ. ‌ಅದುವೇ ಶಾರದಾ ಪುಸ್ತಕಾಲಯ. ಹೌದು, ನಾಡಿನ ಪುಸ್ತಕ ಮಳಿಗೆಗಳ ಸಾಲಿಗೆ ಈಗ ಹಂಸಲೇಖ ಅವರ ಶಾರದಾ ಪುಸ್ತಕಾಲಯವೂ ಒಂದು. ಸಂಗೀತ, ಸಾಹಿತ್ಯ ಅಂತಲೇ ಇಲ್ಲಿ ತನಕ ಹಾಸಿ, ಹೊದ್ದು ಉಸಿರಾಡುತ್ತಾ ಬಂದ ಹಂಸಲೇಖ ಅವರು ಈಗ ಪುಸ್ತಕಾಲಯ ಶುರು ಮಾಡಿದ್ದೆ ಒಂದು ವಿಶೇಷ.
ಬುಧವಾರ ಅವರ ಹುಟ್ಟು ಹಬ್ಬದ ದಿನವೇ ಬೆಂಗಳೂರಿನ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅಬಕಾರಿ ಸಚಿವ ಗೋಪಾಲಯ್ಯ ದೀಪಾ ಬೆಳಗಿ, ಟೇಪ್ ಕತ್ತರಿಸುವ ಮೂಲಕ ಶಾರದಾ ಪುಸ್ತಕಾಲಯ ಉದ್ಘಾಟಿಸಿದರು.

ಹಂಸಲೇಖ ಅವರು ಎಲ್ಲಾ ಬಿಟ್ಟು‌ ಈಗ ಯಾಕೆ ಪುಸ್ತಕಾಲಯ ಮಾಡಿದರು? ಅದರಲ್ಲೇನು ವಿಶೇಷತೆ ಇಲ್ಲ.‌ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲೇ ಅವರು ದೈತ್ಯ‌ ಪ್ರತಿಭೆ ಎನಿಸಿಕೊಂಡವರು. ಹಾಗಾಗಿ ಪುಸ್ತಕಾಲಯ ಅಂತ ಶುರು‌ ಮಾಡಿರುವುದಕ್ಕೆ ಆಂತಹದೇನು ವಿಶೇಷತೆ ಇಲ್ಲ.

ಅದರೆ, ಪುಸ್ತಕಾಲಯದ ನಂಟು‌ ಈಗೇಕೆ? ಅಲ್ಲಿ ಏನೆಲ್ಲ ಸಿಗುತ್ತೆ? ಆ ಬಗ್ಗೆ ಬುಧವಾರ( ಜೂನ್ 23) ಸಂಜೆ ಫೇಸ್ ಬುಕ್ ಲೈವ್ ನಲ್ಲಿ ಎಲ್ಲವನ್ನು ಹೇಳುತ್ತಾರಂತೆ.‌ ಸಂಜೆ 5 ಗಂಟೆಗೆ, ಫೇಸ್ ಬುಕ್‌ಲೈವ್ ನಲ್ಲಿ‌ ಹಂಸಲೇಖ ಬರಲಿದ್ದಾರೆ. ಅಲ್ಲೊಂದಷ್ಟು ಮಾತುಕತೆ ಅ
ನಡೆಯಲಿದೆ.

Categories
ಸಿನಿ ಸುದ್ದಿ

ಸಿನಿಮಾ‌ ಕಾರ್ಮಿಕರ ನೆರವಿಗೆ ‌ಬಂದ ಶಿವರಾಜ್ ಕುಮಾರ್; ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಹುಟ್ಟು‌ಹಬ್ಬದಂದೇ 10 ಲಕ್ಷ ರೂ. ಚೆಕ್ ವಿತರಣೆ

‌ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಿನಿಮಾ‌ ಕಾರ್ಮಿಕರ ನೆರವಿಗೆ ನಟ‌‌ ಶಿವರಾಜ್ ಕುಮಾರ್ ಬಂದಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ‌ದಿನದಂದೇ ಸಿನಿಮಾ‌ಕಾರ್ಮಿಕರ ನೆರವಿಗೆ ಅವರು 10ಲಕ್ಷ ರೂ.‌ಧನ‌ ಸಹಾಯ ನೀಡಿದ್ದಾರೆ.

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗಳ‌ ಪರವಾಗಿ‌ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು‌ ಮಂಗಳವಾರ ಕಾರ್ಮಿಕರ‌ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಅವರಿಗೆ 10 ಲಕ್ಷ ರೂ.ಗಳ‌ ಚೆಕ್ ವಿತರಿಸಿದರು. ನಟ ಅರುಣ್ ಸಾಗರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಈ ವೇಳೆ ಹಾಜರಿದ್ದರು.

ನಿರ್ಮಾಪಕಿಯೂ ಆದ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಂಗಳವಾರ ಹುಟ್ಟು ಹಬ್ಬ. ಬೆಂಗಳೂರಿನ‌ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು‌. ಅಖಿಲ‌ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ‌ ಸಂಘದ ಅಧ್ಯಕ್ಷ ಕೆ.ಪಿ. ಶ್ರೀಕಾಂತ್ ಅವರು ಕೂಡ ತಮ್ಮ‌ ಸದಸ್ಯರ‌ ಜತೆಗೆ ಕೇಕ್ ಕತ್ತರಿಸುವ ಮೂಲಕ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬ ಆಚರಿಸಿದರು.

ಇದೇ ಸಂದರ್ಭದಲ್ಲಿ ಸಿನಿಮಾ‌ ಕಾರ್ಮಿಕರ ನೆರವಿಗೆ ಗೀತಾ ಶಿವರಾಜ್ ಕುಮಾರ್ 10 ಲಕ್ಷ ರೂ. ನೆರವಿನ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ‌ ಕಾರಣಕ್ಕೆ ಸಿನಿಮಾ ಮಂದಿ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಬದುಕು ಕಷ್ಟದಲ್ಲಿದೆ.

ಹಾಗಾಗಿ ಅವರ ಕಷ್ಟಕ್ಕೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದರು. ಶಿವರಾಜ್ ಕುಮಾರ್ ಈ ವೇಳೆ ಕೂಡ ಮಾತನಾಡಿದರು.

Categories
ಸಿನಿ ಸುದ್ದಿ

ಒಳಾಂಗಣ ಚಿತ್ರೀಕರಣಕ್ಕೂ ಅನುಮತಿ ಸಾಧ್ಯತೆ – ಕ್ರಮದ ಬಗ್ಗೆ ಸಿಎಂ ಭರವಸೆ ; ನಿರ್ಮಾಪಕ ಉಮೇಶ್‌ ಬಣಕಾರ್‌

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಿನಿಮಾ ಚಟುವಟಿಕೆಗಳು ಇಷ್ಟರಲ್ಲಿಯೇ ಮತ್ತೆ ಶುರುವಾಗುವುದು ಗ್ಯಾರಂಟಿ ಆಗಿದೆ. ಯಾಕಂದ್ರೆ, ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳು ಭಾಗಶಃ ಅನ್‌ ಲಾಕ ಆದ ಬೆನ್ನಲ್ಲೇ ಸರ್ಕಾರ ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಈಗ ಒಳಾಂಗಣ ಚಿತ್ರೀಕರಣಕ್ಕೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರದ ಅನುಮತಿ ಕೇಳಿದೆ. ವಾಣಿಜ್ಯ ಮಂಡಳಿ ಮನವಿಗೆ ಸರ್ಕಾರ ಸಕರಾತ್ಮಕವಾಗಿಯೂ ಸ್ಪಂದನೆ ಮಾಡಿದೆಯಂತೆ. ಹಾಗಾಗಿ ಇಷ್ಟರಲ್ಲಿಯೇ ಸಿನಿಮಾ ಚಟುವಟಿಕೆಗಳು ಶುರುವಾಗುವುದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬಂದಿವೆ.

ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದಂತೆ, ಒಳಾಂಗಣ ಚಿತ್ರೀಕರಣಕ್ಕೂ ಸರ್ಕಾರ ಅನುಮತಿ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಸರ್ಕಾರವು ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಾಣಿಜ್ಯ ಮಂಡಳಿ ಅಭಿನಂದನೆ ಸಲ್ಲಿಸಿದ್ದನ್ನು ಸಿಎಂ ಗಮನಕ್ಕೆ ತಂದರು. ತದ ನಂತರ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ನೀಡುವಂತೆ ಮನವಿ ಮಾಡಿದರು.

ʼಚಿತ್ರೋದ್ಯಮದಲ್ಲಿ ಈಗಾಗಲೇ ಸಾಕಷ್ಟು ಚಲನ ಚಿತ್ರಗಳ ಚಿತ್ರೀಕರಣವು ಅರ್ಧಕ್ಕೆ ನಿಂತು ಹೋಗಿದ್ದು, ಮತ್ತಷ್ಟು ನಿರ್ಮಾಪಕರು ಲಕ್ಷಾಂತರ ಬಂಡವಾಳ ಹೂಡಿ ಒಳಾಂಗಣದಲ್ಲಿ ಚಿತ್ರೀಕರಿಸಲು ಸೆಟ್‌ಗಳನ್ನು ಅಳವಡಿಸಿಕೊಂಡಿದ್ದು ಈಗ ಸೆಟ್‌ ಗಳೆಲ್ಲವೂ ದುಸ್ಥಿತಿಗೆ ಬಂದಿವೆ. ಈ ಹಿಂದೆ ಲಾಕ್‌ ಡೌನ್‌ ಸಂದರ್ಭ ಕೂಡ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಒಳಾಂಗಣ ಚಿತ್ರೀಕರಣ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಅದೇ ಮಾದರಿಯಲ್ಲಿಯೇ ಈಗಲೂ ಕೂಡ ಒಳಾಂಗಣಕ್ಕೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ‌

ಸಿಎಂ ಭೇಟಿಯ ನಂತರ ʼಸಿನಿಲಹರಿʼ ಜತೆಗೆ ಮಾತನಾಡಿದ ನಿರ್ಮಾಪಕ ಉಮೇಶ್‌ ಬಣಕಾರ್‌, ಕೊರೊನಾ ಈಗ ಒಂದಷ್ಟು ನಿಯಂತ್ರಣಕ್ಕೆ ಬಂದಿದೆ. ಈಗಾಗಲೇ ಸರ್ಕಾರ ಅನ್‌ ಲಾಕ್ ಮಾಡಿದೆ. ಹಾಗಾಗಿ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ನಮ್ಮ ಅಹವಾಲು ಸ್ವೀಕರಿಸಿದ ತಕ್ಷಣವೇ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ಇಷ್ಟರಲ್ಲಿಯೇ ನಮಗೆ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಸಿಗುವುದು ಖಾತರಿ ಆಗಿದೆ. ಅದರಿಂದ ಸಿನಿಮಾ ಚಟುವಟಿಕೆಗಳಿಗೂ ಚಾಲನೆ ಸಿಗಲಿದೆʼ ಎಂದು ವಿವರಿಸಿದರು.

Categories
ಸಿನಿ ಸುದ್ದಿ

ಅಂತೆ-ಕಂತೆಗಳ ಸಂತೆಯಲ್ಲಿ ಶ್ರೇಷ್ಠ ನಟ ಸಂಚಾರಿ ವಿಜಯ್‌ ವ್ಯಕ್ತಿತ್ವಕ್ಕೆ ಧಕ್ಕೆ! ಸ್ವಾರ್ಥಕ್ಕೆ ಒಬ್ಬ ಸ್ಟಾರ್‌ ಹೆಸರು ಬಳಸಿಕೊಂಡವರ ವಿರುದ್ಧ ಧ್ವನಿ ಎತ್ತಬೇಕಾದವರು ಯಾರು ?

ಹೆಸರಾಂತ ನಟ ಸಂಚಾರಿ ವಿಜಯ್‌ ಬದುಕಿನ ಸುತ್ತ ಇಷ್ಟೆಲ್ಲಾ ಕಥೆಗಳಿವೆಯಾ ? ಚಿತ್ರರಂಗ ಸೇರಿದಂತೆ ಅವರ ಆತ್ಮೀಯರು, ಬಂಧುಗಳು ಹಾಗೂ ಸ್ನೇಹಿತರಿಗೆ ಹೀಗೊಂದು ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಕಾರಣ ಅವರ ನಿಧನದ ನಂತರ ಕೆಲವು ವ್ಯಕ್ತಿಗಳು, ಕೆಲವು ಟಿವಿಗಳು, ಹಾಗೂ ಅನೇಕ ಯುಟ್ಯೂಬ್ ಚಾನೆಲ್‌ ಗಳಲ್ಲಿ ವಿಜಯ್‌ ಅವರ ಬದುಕಿನ ಕುರಿತು ಬಂದು ಹೋದ, ಜತೆಗೆ ಈಗಲೂ ಬರುತ್ತಿರುವ ಪುಂಖಾನು ಪುಂಖ ಸುದ್ದಿಗಳು. ವಿಚಿತ್ರ ಅಂದ್ರೆ, ತಮಗೇ ಗೊತ್ತಿಲ್ಲದ ಈ ವಿಚಾರಗಳು ಇವರಿಗೆಲ್ಲ ಗೊತ್ತಾಗಿದ್ದಾರೂ ಹೇಗೆ ಅನ್ನೋ ಗೊಂದಲವೂ ಅವರಲ್ಲಿದೆ. ಅಷ್ಟೇ ಅಲ್ಲ, ನಟ ವಿಜಯ್‌ ಅವರ ಕುರಿತು ಬಗೆ ಬಗೆಯ ಸುದ್ದಿ ಹರಿಬಿಡುತ್ತಿರುವ ಯೂಟ್ಯೂಬ್‌ ಚಾನೆಲ್‌ ನವರು, ಕೆಲವು ಟಿವಿಯವರು, ಮುಂತಾದ ಜನರು, ವಿಜಯ್‌ ಅವರ ನಿಧನದ ನಂತರವೇನಾದರೂ ಸಂಶೋಧನೆ ನಡೆಸಿಬಿಟ್ಟರಾ ಎನ್ನುವ ಕುತೂಹಲವೂ ಇದೆ. ಯಾಕಂದ್ರೆ ಈಗ ವಿಜಯ್‌ ಅವರ ಬದುಕಿನ ದಿನಕ್ಕೊಂದು ಸುದ್ದಿ, ದಿನಕ್ಕೊಂದು ಕಥೆ !

ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಮಾನವತವಾದಿ ಸಂಚಾರಿ ವಿಜಯ್‌ ಈಗಿಲ್ಲ. ನಟನಾಗಿ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಮೆರಗು ತಂದುಕೊಡಬೇಕಿದ್ದ ನಟ ಅವರು. ದುರಾದೃಷ್ಟ ಅಂದ್ರೆ, ದೊಡ್ಡ ವರ್ಚಸ್ಸು ಪಡೆಯಬೇಕಿದ್ದ ದಿನಗಳಲ್ಲಿಯೇ ಆಕಾಲಿಕವಾಗಿ ನಿಧನರಾಗಿ, ತಿರುಗಿ ಬಾರದ ಲೋಕಕ್ಕೆ ಸಂಚಾರ ಹೋಗಿ ಆಗಿದೆ. ಅವರಿಲ್ಲದೆ, ಹೆಚ್ಚು ಕಡಿಮೆ ಹತ್ತನ್ನೆರೆಡು ದಿನ ಕಳೆದೇ ಹೋದವು. ಅವರಿಲ್ಲ ಎನ್ನುವುದನ್ನು ನಿಜಕ್ಕೂ ನಂಬುವುದಕ್ಕೆ ಆಗುತ್ತಿಲ್ಲ. ಕುಟುಂಬದವರು, ಬಂಧುಗಳು ಹಾಗೂ ಆತ್ಮೀಯರಿಗೆ ಅವರಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರೆಲ್ಲ ಆ ನೋವಿನಿಂದ ಈಗಲೂ ಹೊರಬಂದಿಲ್ಲ. ಹಾಗೆಯೇ ಚಿತ್ರರಂಗಕ್ಕೂ ಅವರಿಲ್ಲ ಅನ್ನೋದು ಅಪಾರ ನಷ್ಟವೇ ಆಗಿದೆ. ಆದರೆ, ಅವರಿಲ್ಲ ಅನ್ನೋದು ಟಿವಿ ಚಾನೆಲ್‌ ಗಳಿಗೆ, ಸಣ್ಣ ಪುಟ್ಟ ಯುಟ್ಯೂಬ್‌ ಚಾನೆಲ್‌ ಗಳಿಗೆ ದೊಡ್ಡ ಆಹಾರವೇ ಆಗಿ ಹೋಗಿರುವುದು ದುರಾದೃಷ್ಟ.

ಹಾಗಂತ, ವಿಜಯ್‌ ಇಲ್ಲದ ದಿನಗಳಲ್ಲಿ ಇವರೆಲ್ಲ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸುವಂತೆ ಸುದ್ದಿ ಬಿತ್ತರಿಸುತ್ತಿದ್ದಾರಾ? ಇಲ್ಲವೇ ಅವರ ಸಿನಿಮಾ, ಅವರ ನಟನೆಯ ಬಣ್ಣನೆಯ ಮಾತುಗಳನ್ನು ಹೇಳುತ್ತಿದ್ದಾರಾ? ಅಸಲಿಗೆ ಅಂತಹ ಯಾವುದೇ ಸುದ್ದಿಗಳು ಇವು ಅಲ್ಲ. ಬದಲಿಗೆ ಇವೆಲ್ಲವೂ ಉಹಾ ಪೋಹದ ಕಟ್ಟು ಕಥೆಗಳು. ಸಂಚಾರಿ ವಿಜಯ್‌ ಇದ್ದಾಗ ಇಂತಹ ಸುದ್ದಿಗಳು ಬಂದಿದ್ದರೆ ಮೂಲಾಜಿಲ್ಲದೆ ಕ್ಯಾಕರಿಸಿ ಉಗಿಯುತ್ತಿದ್ದರೆನ್ನವುದು ಗ್ಯಾರಂಟಿ. ಅಷ್ಟಾಗಿಯೂ ಮಾತು ಕೇಳದಿದ್ದರೆ ಕೋರ್ಟ್‌ ಮೆಟ್ಟಿಲು ತುಳಿದು ಇವರಿಗೆಲ್ಲ ಬುದ್ಧಿ ಕಲಿಸುತ್ತಿದ್ದರು. ಆದರೆ ವಿಜಯ್‌ ಅವರನ್ನು ತಮ್ಮ ವಾರಾಸುದಾರರು ಎನ್ನುವ ಯಾವುದೇ ವ್ಯಕ್ತಿಯೂ ಈ ಬಗ್ಗೆ ಚೆಕಾರ ಎತ್ತಿಲ್ಲ! ಅದನ್ನೇ ಬಂಡವಾಳ ಮಾಡಿಕೊಂಡಿರುವ ಐಡೆಂಟಿಟಿ ಇಲ್ಲದೆ ಕೆಲವು ಯುಟ್ಯೂಬ್‌ ಚಾನೆಲ್‌ ಗಳು ವಿಜಯ್‌ ಅವರ ವ್ಯಕ್ತಿತ್ವವನ್ನೇ ಹರಣ ಮಾಡುವ ಊಹಾಪೋಹದ ಸುದ್ದಿಗಳನ್ನು ಬಿತ್ತರಿಸುವುತ್ತಿರುವುದು ಮಾತ್ರ ದುರಂತವೇ ಸರಿ.

ಮೊದಲೇ ಹೇಳಿದಂತೆ ಐಡೆಂಟಿಟಿ ಇಲ್ಲದ ಈ ಯುಟ್ಯೂಬ್‌ ಚಾನೆಲ್‌ ಗಳ ಸುದ್ದಿ ಟೇಸ್ಟ್‌ ಹೇಗಿದೆ ಅಂದ್ರೆ, ಒಬ್ಬ ವ್ಯಕ್ತಿಯ ಬಗ್ಗೆ ವಾಸ್ತವವನ್ನು ಹೇಳುವುದು ಅವರ ಆದ್ಯತೆ ಅಲ್ಲ. ಬದಲಿಗೆ ಅವರ ಹೊಟ್ಟೆ ತುಂಬಬೇಕು ಅಷ್ಟೇ. ಅಂದ್ರೆ ಕೆಲವು ಟಿವಿಗಳಿಗೆ ಟಿಆರ್‌ ಪಿ ಹೆಚ್ಚಾಗಬೇಕು, ಇನ್ನು ಯೂಟ್ಯೂಬ್‌ ಚಾನೆಲ್‌ ನವರಿಗೆ ಲೈಕ್ಸು, ವೀವ್ಸು, ಕಾಮೆಂಟ್ಸು ಜಾಸ್ತಿ ಆಗಬೇಕು. ಅವರ ಸುದ್ದಿ ಬಿತ್ತರಿಸುವ ಟೇಸ್ಟ್ ಹೇಗಿದೆ ಅಂದ್ರೆ, ನಟ ಸಂಚಾರಿ ವಿಜಯ್‌ ಇಷ್ಟು ದಿನ ಮದುವೆ ಆಗದಿರಲು ಕಾರಣ ಏನು ಗೊತ್ತಾ ? ನಟ ಸಂಚಾರಿ ವಿಜಯ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ ? ನಟ ಸಂಚಾರಿ ವಿಜಯ್‌ ಅಪಘಾತದಲ್ಲಿ ಸಾಯುವುದಕ್ಕೂ ಮುನ್ನ ಯಾರಿಗೆ ಕಾಲ್‌ ಮಾಡಿದ್ರು ಗೊತ್ತಾ ? ಸಂಚಾರಿ ವಿಜಯ್‌ ಇತ್ತೀಚೆಗೆ ಒಂದು ವಿಷಯಕ್ಕಾಗಿ ತೀರಾ ಬೇಸತ್ತಿದ್ದರು ಯಾಕೆ ಗೊತ್ತಾ ? ನಟ ಸಂಚಾರಿ ವಿಜಯ್‌ ಮದುವೆ ಆಗಬೇಕಿದ್ದ ಹುಡುಗಿ ಇವರೇನಾ ? ಇದು ಈ ಯುಟ್ಯೂಬ್‌ ಚಾನೆಲ್‌ ನವರ ಲೈಕ್ಸು, ಕಾಮೆಂಟ್ಸು ಪಡೆಯವ ಚಟ. ಇನ್ನು ಇವೆಲ್ಲವನ್ನು ರಂಜಿಸುವ ಕೆಲವು ಜನರ ವಿಕೃತ ಮನಸ್ಥಿತಿಗೆ ಇನ್ನೇನು ಹೇಳಬೇಕೋ ಆರ್ಥವಾಗುತ್ತಿಲ್ಲ.

ಇಷ್ಟಕ್ಕೂ ಇವೇನು ಸತ್ಯವಾದ ಸುದ್ದಿಗಳಾ? ಹೋಗಲಿ, ಒಬ್ಬ ಸ್ಟಾರ್‌ ನಟನ ಬಗ್ಗೆ ಬರೆಯಬಹುದಾದ ಸುದ್ದಿಗಳಾ ? ಯಾವುದರಲ್ಲೂ ಸತ್ಯಾಂಶ ಅನ್ನೋದೇ ಇಲ್ಲ. ಎಲ್ಲವೂ ಕಟ್ಟುಕಥೆಗಳೆ. ಸಂಚಾರಿ ವಿಜಯ್‌ ಬಗ್ಗೆ ಗೊತ್ತಿದ್ದವರಿಗೆ ಅವರೇನು ಅನ್ನೋದು ಗೊತ್ತಿದೆ. ಮದುವೆ ವಿಚಾರದಲ್ಲಿ ಅವರೆಷ್ಟು ಸ್ಪಷ್ಟವಾಗಿದ್ದರು, ಆಸ್ತಿ- ಅಂತಸ್ತುಗಳೆಲ್ಲ ಎಷ್ಟು ಸಂಪಾದಿಸಿದ್ದರು, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಷ್ಟೆಲ್ಲಾ ಹೇಳಿಕೊಂಡಿದ್ದರು ಅನ್ನೋದೆಲ್ಲ ಎಲ್ಲರಿಗೂ ಗೊತ್ತು. ಆದರೂ ಅವರ ನಿಧನದ ನಂತರ ಒಂದ್ರೀತಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹಾಗೆ ಯುಟ್ಯೂಬ್‌ ಚಾನೆಲ್‌ ನವರು ತಮ್ಮ ಮನಸ್ಸಿಗೆ ಬದ್ದಂತೆಯೇ ಸುದ್ದಿ ಮಾಡಿ, ವೈರಲ್‌ ಮಾಡಿಕೊಳ್ಳುವ ಮೂಲಕ ತಮ್ಮ ಚಾನೆಲ್‌ ಗಳ ಚಂದದಾರರ ಸಂಖ್ಯೆ ಹೆಚ್ಚಿಸಿಕೊಂಡರು. ಅಂದ್ರೆ, ಇವರ ಚಂದದಾರಿಕೆಗೆ ಸ್ಟಾರ್‌ ನಟರು ಸಾಯಬೇಕು, ಜತೆಗೆ ಅವರ ಬಗೆಗಿನ ಅಂತೆ ಕಂತೆಗಳು ತಮಗೆ ಬೇಕು ಎನ್ನುವ ಮನಸ್ಥಿತಿ ಈ ಯೂಟ್ಯೂಬ್‌ ಚಾನೆಲ್‌ ಗಳದ್ದು. ಹಾಗೆಯೇ ಕೆಲವು ಟಿವಿ ಅವರದ್ದು ಕೂಡ.
ಅಮೆರಿಕದಿಂದ ಒಬ್ಬ ಯುವತಿ ನಟ ಸಂಚಾರಿ ವಿಜಯ್‌ ಕುರಿತು ಸಾಕಷ್ಟು ಮಾತನಾಡಿತ್ತು. ಕೊನೆಗೆ ಕೆಲವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಆ ಯುವತಿ ಸತ್ಯಾಂಶ ತೆರೆದಿಟ್ಟಳು.

ʼ ನಾನು ಭಾವನಾತ್ಮಕವಾಗಿ ಹೇಳಿಕೊಂಡ ಸಂಗತಿಗಳನ್ನು ಮಾಧ್ಯಮದವರು ಸರಕನ್ನಾಗಿ ಮಾಡಿಕೊಂಡರು. ನಾನು ಹಾಗೆ ಹೇಳಿದ್ದರ ಉದ್ದೇಶ ವಿಜಯ್‌ ಅವರ ವರ್ಚಸ್ಸಿಗೆ ಧಕ್ಕೆ ತರಬೇಕು ಅನ್ನೋದು ಆಗಿರಲಿಲ್ಲ. ಅಷ್ಟು ದೊಡ್ಡ ವ್ಯಕ್ತಿ ನನ್ನನ್ನು ಆತ್ಮೀಯವಾಗಿ ನೋಡುತ್ತಿದ್ದರು ಅಂತ ಹೇಳಿಕೊಳ್ಳುವುದಾಗಿತ್ತು. ಆದರೆ ಟಿವಿಗಳಲ್ಲಿ, ಯುಟ್ಯೂಬ್‌ ಚಾನೆಲ್‌ ಗಳಲ್ಲಿ ನನ್ನ ಹೇಳಿಕೆ ಆಗಿದ್ದೇ ಬೇರೆ. ಅದು ನನ್ನ ಮನಸ್ಸಿಗೂ ಘಾಸಿ ತಂತು ಎಂದು ಆ ಯುವತಿ ಕಣ್ಣೀರಿಡುವಾಗ, ಟಿಆರ್‌ ಪಿ ಬೆನ್ನು ಬಿದ್ದ ಟಿವಿಗಳು, ವೈರಲ್‌ ಮಾಡಿಕೊಳ್ಳಲೆತ್ನಿಸುವ ಯುಟ್ಯೂಬ್‌ ಚಾನೆಲ್‌ ಗಳು ಹಿಡನ್ ಅಜೆಂಡಾ ಬಯಲಾಗದೆ ಉಳಿಯೋದಿಲ್ಲ.

ನಟ ವಿಜಯ್‌ ಅವರ ಬಗ್ಗೆ ಸುದ್ದಿ ಬಿತ್ತರಿಸುವ ನೆಪದಲ್ಲಿ ಅವರ ವ್ಯಕ್ತಿತ್ವವನ್ನೆ ಹರಣ ಮಾಡಿದ ಇಂತಹ ಯುಟ್ಯೂಬ್‌ ಚಾನೆಲ್‌ ಗಳು, ವ್ಯಕ್ತಿಗಳು ಹಾಗೂ ಕೆಲವು ಟಿವಿಗಳ ವಿರುದ್ಧ ಮಾತನಾಡುವವರಾದರೂ ಯಾರು? ನಟ ವಿಜಯ್‌ ತಮ್ಮವನು ಅನ್ನುವವರಾದರೂ ಬಾಯಿ ಬಿಡುತ್ತಾರಾ? ಯಾರು ಧ್ವನಿ ಎತ್ತುತ್ತಾರೋ ಗೊತ್ತಿಲ್ಲ, ಆದರೆ ಸ್ಟಾರ್‌ ಗಳ ಬಗೆಗಿನ ಅಂತೆ-ಕಂತೆ ಸುದ್ದಿಗಳನ್ನೇ ಬಂಡವಾಳ ಮಾಡಿಕೊಂಡು ಕುತೂಹಲ ಹುಟ್ಟಿಸುವ ಟೈಟಲ್‌ ಮೂಲಕ ಗಮನ ಸೆಳೆಯಲೆತ್ನಿಸುವ ಇಂತಹ ಸುದ್ದಿಗಳಿಗೆ ಮನ್ನಣೆ ನೀಡಬೇಡಿ ಎನ್ನುವುದು ಓದುಗರಲ್ಲಿ ನಾವು ಮಾಡುವ ಮನವಿ. ಯಾಕಂದ್ರೆ, ಯಾವುದೇ ಸ್ಟಾರ್‌ ಗಳ ಬಗ್ಗೆಯೂ ಇವರು ಹೀಗೆಲ್ಲ ಮಾಡುವವರೇ. ಇವರ ವಿರುದ್ದ ಕಾನೂನು ಸಮರ ಆರಂಭವಾಗಬೇಕು. ಅದನ್ನು ಯಾರು ಮಾಡುತ್ತಾರೋ, ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಹಳ್ಳಿಗೆ ಫ್ಲಿಪ್ ಕಾರ್ಟ್‌ ಲವ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಸಂಚಾರ ಮಾಡಬೇಕೆಂಬ ಆಸೆಯೂ…ನನ್ನ ಸೊಂಬೇರಿತನವೂ…!

ನಟ ಸಂಚಾರಿ ವಿಜಯ್‌ ಅವರ ಆತ್ಮೀಯರಲ್ಲಿ ಉಪನ್ಯಾಸಕ ಹಾಗೂ ಯುವ ಬರಹಗಾರ ಶಿವಕುಮಾರ ಮಾವಲಿ ಕೂಡ ಒಬ್ಬರು. ಸಂಚಾರಿ ವಿಜಯ್‌ ಮುಖ್ಯ ಪಾತ್ರದಲ್ಲಿ ಅಭಿನಯಸಿದ್ದ “ಅವ್ಯಕ್ತ” ಹೆಸರಿನ ಕಿರುಚಿತ್ರದ ನಿರ್ಮಾಣಕ್ಕೆ ಶಿವಕುಮಾರ ಮಾವಲಿ ಅವರೇ ರೂವಾರಿ. ಅವರೇ ಬರೆದಿದ್ದ ಕಥೆ ಆಧರಿಸಿ, ಈ ಕಿರುಚಿತ್ರ ನಿರ್ಮಿಸಲಾಗಿತ್ತು. ರಂಗಕರ್ಮಿ ಸತೀಶ್‌ ಸಾಸ್ವೆಹಳ್ಳಿ ನಿರ್ದೇಶಿಸಿದ್ದರು. ಶಿವಕುಮಾರ್‌ ಮಾವಲಿ ಮತ್ತವರ ಗೆಳೆಯರ ಬಳಗ ಇದನ್ನು ನಿರ್ಮಾಣ ಮಾಡಿತ್ತು. ಅಲ್ಲಿಂದ ನಟ ವಿಜಯ್‌ ಅವರೊಂದಿಗೆ ಆತ್ಮೀಯರಾಗಿದ್ದ ಶಿವಕುಮಾರ ಮಾವಲಿ, ತಾವು ಕಂಡಂತೆ ವಿಜಯ್‌ ಕುರಿತು ಆಪ್ತವಾಗಿ ಬರೆದಿದ್ದಾರೆ…

ಓವರ್‌ ಟು ಶಿವಕುಮಾರ ಮಾವಲಿ…

“ನಾತಿಚರಾಮಿ” ಸಿನಿಮಾ ನೋಡಿದ ಮೇಲೆ ವಿಜಯ್ ಅವರಿಗೆ ನಾಲ್ಕು ವರ್ಷಗಳಿಂದ ನಾನು ಬರೆಯಬೇಕೆಂದುಕೊಂಡಿದ್ದ ನೀಳ್ಗತೆಯೊಂದನ್ನು ಹೇಳಿದೆ. ಆ ಕಥೆಯಲ್ಲಿ ಹಳ್ಳಿಯೊಂದರಿಂದ ಈಮೇಲ್ ಮೂಲಕ ಬರುವ ಒಂದು ವಿಚಿತ್ರ ಬೇಡಿಕೆಯನ್ನು ಸವಾಲಾಗಿ ಸ್ವೀಕರಿಸಿದ ಫ್ಲಿಪ್ ಕಾರ್ಟ್ ಕಂಪನಿಯವರು ಒಬ್ಬ “Love Executive “ ರನ್ನು ತುಂಬಾ ನಾಜೂಕಾಗಿ ಟ್ರೈನ್ ಮಾಡಿ ಆ ಹಳ್ಳಿಗೆ ಕಳುಹಿಸಿ ಕೊಡುತ್ತಾರೆ. ಅವನು ಆ ಊರಲ್ಲಿ ಪ್ರೀತಿ ಹಂಚಬೇಕು… ಆಮೇಲಿನದ್ದು ಸವಾಲಿನ ಪಾತ್ರ … ಹೀಗೆ ಲವ್ ಎಕ್ಸಿಕ್ಯೂಟಿವ್ ಆಗಿ ಹೋಗುವ ಪಾತ್ರ ವಿಜಯ್ ಅವರು ಮಾಡಬೇಕು ಎಂಬುದು “ನಾತಿಚರಾಮಿ” ನೋಡಿದಾಗಿನಿಂದ ನನ್ನ ಆಸೆಯಾಗಿತ್ತು. ಕಥೆ ಕೇಳಿದ ವಿಜಯ್ ಬಹಳ ಇಷ್ಟಪಟ್ಟು, “ಇಂಥ ಕಾನ್ಸೆಪ್ಟ್ ಮಾಡ್ಲೇಬೇಕು ಸರ್. ಬೇಗ ಕಥೆ ಬರೆದು ಮುಗಿಸಿ. ಪ್ರೊಡ್ಯೂಸರ್ ಇದ್ದಾರೆ… ಮಾಡಿ ಬಿಡೋಣ. ಇದೊಂದು ಪ್ರಯೋಗ ಆಗುತ್ತೆ’ ಎಂದಿದ್ದರು….

ನಾನೋ ಆ ಕಥೆ ಬಿಟ್ಟು ಆಮೇಲೆ ಅದೆಷ್ಟು ಕಥೆ ಬರೆದರೂ ಅದೊಂದು ಅದ್ಯಾಕೊ ಅರ್ಧಕ್ಕೆ ನಿಂತಿತೋ ಗೊತ್ತಿಲ್ಲ. ಬಹುಷಃ ಅದು ಸಿನಿಮಾ ಆಗಬೇಕು ಎಂಬ ನಿರೀಕ್ಷೆ ಮತ್ತು ಒತ್ತಡದಿಂದಾಗಿ ನನಗೂ ಅದನ್ನು ಬರೆಯಲಾಗಲಿಲ್ಲ ಅನ್ನಿಸುತ್ತದೆ. . .
ಊರಿಗೆ ಪ್ರೀತಿ ಹಂಚಲು ಫ್ಲಿಪ್ ಕಾರ್ಟ್‌ನವರ ಪಾರ್ಸೆಲ್ ನಲ್ಲಿ ಒಬ್ಬ ತರಬೇತಿ ಹೊಂದಿದ ಎಕ್ಸಿಕ್ಯೂಟಿವ್ ಆಗಿ ವಿಜಯ್ ಹಳ್ಳಿಯೊಂದರಲ್ಲಿ ಡೆಲಿವರ್ ಆಗಿದ್ದರೆ… ಆ ಪಾತ್ರವನ್ನು ವಿಜಿ ಎಷ್ಟು ತನ್ಮತೆಯಿಂದ ಅಭಿನಯಿಸುತ್ತಿದ್ದರು ಎಂದು ನೆನೆದರೆ ವಿಪರೀತ ಸಂಕಟವಾಗುತ್ತೆ. ಅವರು ವಿಚಿತ್ರ ಸಂಕೋಚದವರು, ಕಥೆ ಬಗ್ಗೆ ಪದೇ ಪದೇ ಕೇಳಲಿಲ್ಲ… ನಾನು ಆ ಕಥೆಯ ವಿಷಯದಲ್ಲಿ ಸೋಂಬೇರಿ ಆಗಿಬಿಟ್ಟೆ…Ibeg sincere apology for that Vijay. ತಲೆದಂಡದಲ್ಲಿ ನಿಮ್ಮ ಪಾತ್ರ ನೋಡಿದರೆ ಗೊತ್ತಾಗುತ್ತದೆ ನಿಮ್ಮಿಂದ ಎಷ್ಟೆಲ್ಲ ನಟನೆಯನ್ನು ಹೊರ ತೆಗೆಯಲು ಅವಕಾಶ ಇತ್ತೆಂದು… ಅಲ್ಲದೆ ಆ ಇಡೀ ಊರಲ್ಲಿ, ನಿಮ್ಮ ಆ ಪಾತ್ರ ತರಬಹುದಾಗಿದ್ದ ಕ್ರಾಂತಿಕಾರಿ ಬದಲಾವಣೆಗಳಿದ್ದವು…

ಈ ಕಥೆಯ ವಿಷಯದಲ್ಲಿ ಇಷ್ಟೊಂದು ಸೋಂಬೇರಿತನ ಮಾಡಿದ ನಾನು ಸರಿಯಾಗಿ (ಕಳೆದ ಶನಿವಾರ) ಜೂನ್ 12 ರ ರಾತ್ರಿ ಬುಕ್ ಬ್ರಹ್ಮಕ್ಕಾಗಿ, 11 ಗಂಟೆಯ ನಂತರ ಒಂದು ಕಥೆ ಬರೆಯಲು ಕೂತೆ. ಅದ್ಯಾಕೆ ಆ ಕಥೆ ಬರೆದೆನೋ ಎಂಬ ಪಶ್ಚಾತ್ತಾಪ ನನ್ನನ್ನೀಗ ಕಾಡುತ್ತಿದೆ. ಆ ಕಥೆಗೂ, ಅವತ್ತು ರಾತ್ರಿ ನಡೆದದ್ದಕ್ಕೂ , ಆನಂತರ ಎರಡೇ ದಿನದಲ್ಲಿ ನಡೆದದ್ದಕ್ಕೂ ಅದೆಂಥಾ ಕಾಕತಾಳೀಯ. ನನ್ನ ಕಥೆಗಳಲ್ಲಿ ನಾಟಕೀಯತೆ ಇರುತ್ತದೆಂದು ಕೆಲವರು ಹೇಳುತ್ತಾರೆ. ಆಗೆಲ್ಲ ನಾನು ಜೀವನದ ನಾಟಕೀಯತೆ ಮತ್ತು ರೋಚಕತೆ ನೆನೆದು ಸುಮ್ಮನಾಗುತ್ತೇನೆ. ಅದು ಹಾಗೇ ಆಯಿತು! ‘ಖಾಲಿ ಸೈಟಿನ ಕಡೆಗೆ ! ‘ ಛೇ…

ಇತ್ತೀಚಿಗೆ ಈ ‘ಸಾವು’ ಅಭ್ಯಾಸ ಮಾಡಿಸಲು ಶುರುವಿಟ್ಟುಕೊಂಡಿದೆ. ಏನೇನೋ ಕಾರಣಗಳಿಗೆ ಜೊತೆಯಾಗಿ ನೂರಾರು ಅವಿಸ್ಮರಣೀಯ ಕ್ಷಣಗಳನ್ನು ಕೊಟ್ಟವರು ಹೀಗೆ ಇದ್ದಕ್ಕಿದ್ದಂತೆ ಕಣ್ಮರೆಯಾದರೆ ನಮ್ಮ ನಾಳೆಗಳನ್ನು ಅನುಮಾನಿಸಬೇಕೆನ್ನಿಸುತ್ತಿದೆ. ಜಾತಿಯ ಕಾರಣಕ್ಕೆ ಆಗಿ ಹೋಗಿದ್ದ ಚಿತ್ತಕ್ಷೋಭೆಯನ್ನು ಮೇಕಪ್ ಇಲ್ಲದೆಯೇ ಮರೆಮಾಚಿ ನಗುತ್ತಿದ್ದ ಗೆಳೆಯ. ನಿನ್ನ ಅಂಗಾಂಗಳನ್ನು ದಾನ ಪಡೆವಾಗ ಯಾರೂ ಜಾತಿ ಹುಡುಕಿರಲಿಕ್ಕಿಲ್ಲ ಅಲ್ಲವೆ ? ಅದೇ ನೀವು ನಮ್ಮೆಲ್ಲರಿಗೂ ಕಲಿಸಿದ ಮೌಲ್ಯ. ನಿಮ್ಮ ಅಗಲಿಕೆ ಬಹಳ ಕಾಲ ಕಾಡುತ್ತದೆ. Death, be not Proud

ಆದರೂ…
ನನ್ನನ್ನು ಕ್ಷಮಿಸಿಬಿಡಿ ವಿಜಯ್, ಒಂದು ಕಥೆ ಬರೆಯದೇ ಇದ್ದದ್ದಕ್ಕಾಗಿ. ಮತ್ತೊಂದನ್ನು ಬರೆದದ್ದಕ್ಕಾಗಿ …

  • ಶಿವಕುಮಾರ ಮಾವಲಿ
error: Content is protected !!