ಹಂಸಲೇಖ‌ ಹೇಳ್ತಾರೆ, ಒಳ್ಳೆ‌ ಗಾಳಿ ಒಳಗೆ ತಗೋ…! – ಹೀಗೊಂದು ಪರಿಸರ ಗೀತೆ

ಕೊರೊನಾ ಸೃಷ್ಟಿಸಿದ‌‌ ಅವಾಂತರಗಳಲ್ಲಿ ಆಕ್ಸಿಜನ್ ಕೊರತೆಯೂ ಒಂದು. ಆಕ್ಸಿಜನ್‌ ಕೊರತೆಯಿಂದಲೇ ಅದೆಷ್ಟೋ ಸಂಖ್ಯೆಯ ಜನ ನಿಧನರಾದರು. ಯಾಕಂದ್ರೆ ಕೊರೊನಾ ಎನ್ನುವ ಮನುಷ್ಯ ಸೃಷ್ಟಿಯ ಜೈವಿಕ ಯುದ್ದ ಆಕ್ಸಿಜನ್‌ಗೂ ಕುತ್ತು ತರುತ್ತದೆ. ಕೊರೊನಾ ಬಂದವರು ಬಹುತೇಕ ಆಕ್ಸಿಜನ್ ಕೊರತೆಯಿಂದಲೇ ನಿಧನರಾಗು ವುದು ನಿಮಗೂ ಗೊತ್ತು. ಇಂತಹ ಅಪತ್ತು‌ ತಂದೊಡ್ಡುವ ಜೈವಿಕ ಯುದ್ದವನ್ನು ನಾವು ಸಮರ್ಥವಾಗಿ‌ ನಿಭಾಯಿಸುವುದಾದರೆ, ನಮ್ಮ ಸುತ್ತಮುತ್ತ ಆಕ್ಸಿಜನ್ ಕೊಡುವ ಕಾಡುಗಳನ್ನು ಸೃಷ್ಟಿಸಬೇಕು. ಹಾಗೆಯೇ ಇರುವ ಕಾಡುಗಳನ್ನು ಸಂರಕ್ಷಿಸಿಕೊಳ್ಳಿ ಎನ್ನುವ ಸಂದೇಶವನ್ನು ಒಂದು ಸುಮಧುರ ಗೀತೆಯ ಮೂಲಕ ಹೇಳ ಹೊರಟಿದ್ದಾರೆ ನಾದ ಬ್ರಹ್ಮ‌ ಹಂಸಲೇಖ‌.

ಹೌದು, ಈಗಾಗಲೇ ಅವರು ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿರುವ “ಒಳ್ಳೇ ಗಾಳಿ ಒಳಗೆ ತಗೋ…” ಎನ್ನುವ ಈ ಹಾಡು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ವಿಶೇಷ‌. ಅಂದಹಾಗೆ, ಅವರು ಗೀತೆಯನ್ನು ಬರೆದಿದ್ದು ಅಮರ ಚಿತ್ರ ಕಥಾ ಹೆಸರಿನ ಚಿತ್ರಕ್ಕಾಗಿ. ಆ ಚಿತ್ರ ಒಂದು ಪರಿಸರದ ಕಾಳಜಿಯ ಜತೆಗೆಯೇ ಒಂದೊಳ್ಳೆಯ ಕಥೆಯನ್ನು ಹೊತ್ತು ಬರುತ್ತಿದೆಯಂತೆ. ಅದರ ಸದಾಶಯಕ್ಕೆ ತಕ್ಕಂತೆ ಹಂಸಲೇಖ ಈ ಗೀತೆ ಬರೆದಿದ್ದಾರಂತೆ. ಇನ್ನೊಂದು ವಿಶೇಷ ಅಂದ್ರೆ, ಈ ಗೀತೆಯನ್ನು ಹಂಸಲೇಖ ರಚಿಸಿದ್ದು ಕೊರೊನಾ‌ ಬರುವ ಮುಂಚೆ. ಅವರಿಗೆ ಅದೆಷ್ಟು ದೂರದೃಷ್ಟಿ ಇತ್ತೋ ಗೊತ್ತಿಲ್ಲ, ಭವಿಷ್ಯದಲ್ಲಿ ಆಕ್ಸಿಜನ್‌ಗಾಗಿಯೇ ಕಾಡು ಉಳಿಸಿಕೊಳ್ಳಿ ಅಂತ ಸಾಹಿತ್ಯದ ಮೂಲಕ ಹಂಸಲೇಖ ಮನವಿ ಮಾಡಿರುವುದು ವಿಶೇಷ.

ನರ ಮರ ಎನ್ನುವ ಸಾಲುಗಳ ಮೂಲಕ ಶುರುವಾಗುವ ಈ ಗೀತೆಗೆ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ನೀನು ನರ, ನಾನು ನರ, ನಂಗೂ‌ ನಿಂಗೂ‌ ಬೇಕು‌ ಮರ, ಮರವೇ ತಾನೆ ನಮಗೆ ವರ…. ಎನ್ನುವ ಈ ಗೀತೆಯ ಸಾಲುಗಳು ಅತ್ಯಾದ್ಬುತ. ಪರಿಸರದ ಮಹತ್ವವನ್ನು‌ ಪ್ರತಿಯೊಬ್ಬರಿಗೂ ‌ಮನ ಮುಟ್ಟುವಂತೆ ಜೋಡಿಸಿದ್ದಾರೆ. ಬುಧವಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಂಜೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಹಂಸಲೇಖ, ಈ ಹಾಡಿನ ಸದಾಶಯ ತೆರೆದಿಟ್ಟರು‌.

‘ಈ ಭೂಮಿ‌ ಮೇಲೆ ಮುಕ್ಕಾಲು ಭಾಗ ನೀರು , ಕಾಲು ಭಾಗ ಭೂಮಿ‌ ಇದೆ. ಇದರಲ್ಲಿ ಬದುಕುತ್ತಿರುವ ನರ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈಗಾಗಲೇ ಬಹುಪಾಲು ಕಾಡು ಕಡಿದು ಅರಣ್ಯ ನಾಶ ಮಾಡಿ ಆಗಿದೆ. ಅದರ ಪರಿಣಾಮ ಅನೇಕ‌ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಅದರ ಜತೆಗೆಯೇ ಕೊರೊನಾದಂತಹ ಜೈವಿಕ ಯುದ್ಧವೂ ಶುರುವಾಗಿದೆ. ಈಗ ಕಾಡು ಅಗತ್ಯ.

ಆರಂಭದಿಂದಲೂ‌ ಪರಿಸರವಾದಿಗಳು ಕಾಡು ಉಳಿಸಿ ಅಂತ ಹೇಳುತ್ತಲೇ ಬರುತ್ತಿದ್ದಾರೆ . ಆದರೂ ಅವರ ಕೂಗು , ಒಂದು ಸೊಳ್ಳೆಯ ಕೂಗಿನಷ್ಟಾಗಿದೆ. ಹಾಗಾಗಿ ಈಗ ಪ್ರತಿಯೊಬ್ಬರು ಪರಿಸರ ಉಳಿವಿಗೆ ಧ್ವನಿ ಎತ್ತಬೇಕಿದೆ’ ಎನ್ನುವ ಮಾತುಗಳ ಮೂಲಕ ಜೈಕಾಂರ್ ಮ್ಯೂಜಿಕ್ ಯೂಟ್ಯೂಬ್ ನಲ್ಲಿ ಲಭ್ಯವಿರುವ ಈ ಹಾಡು ಕೇಳಿ ಅಂತ ವಿನಂತಿ‌ ಮಾಡಿಕೊಳ್ಳುತ್ತಾರೆ ನಾದಬ್ರಹ್ಮ‌ ಹಂಸಲೇಖ.

Related Posts

error: Content is protected !!