ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ನಟ ಶಿವರಾಜ್ ಕುಮಾರ್ ಬಂದಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಸಿನಿಮಾಕಾರ್ಮಿಕರ ನೆರವಿಗೆ ಅವರು 10ಲಕ್ಷ ರೂ.ಧನ ಸಹಾಯ ನೀಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗಳ ಪರವಾಗಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಮಂಗಳವಾರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಅವರಿಗೆ 10 ಲಕ್ಷ ರೂ.ಗಳ ಚೆಕ್ ವಿತರಿಸಿದರು. ನಟ ಅರುಣ್ ಸಾಗರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಈ ವೇಳೆ ಹಾಜರಿದ್ದರು.
ನಿರ್ಮಾಪಕಿಯೂ ಆದ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಂಗಳವಾರ ಹುಟ್ಟು ಹಬ್ಬ. ಬೆಂಗಳೂರಿನ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು. ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೆ.ಪಿ. ಶ್ರೀಕಾಂತ್ ಅವರು ಕೂಡ ತಮ್ಮ ಸದಸ್ಯರ ಜತೆಗೆ ಕೇಕ್ ಕತ್ತರಿಸುವ ಮೂಲಕ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರ ನೆರವಿಗೆ ಗೀತಾ ಶಿವರಾಜ್ ಕುಮಾರ್ 10 ಲಕ್ಷ ರೂ. ನೆರವಿನ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಕಾರಣಕ್ಕೆ ಸಿನಿಮಾ ಮಂದಿ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಬದುಕು ಕಷ್ಟದಲ್ಲಿದೆ.
ಹಾಗಾಗಿ ಅವರ ಕಷ್ಟಕ್ಕೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದರು. ಶಿವರಾಜ್ ಕುಮಾರ್ ಈ ವೇಳೆ ಕೂಡ ಮಾತನಾಡಿದರು.