ಅಭಿಮಾನದ ಅತಿರೇಕ ಅಂತೀರೋ, ನೀವು ಇದನ್ನು ಪ್ರಚಾರ ಗಿಮಿಕ್ ಅಂತೀರೋ, ಆದರೆ ಧಾರವಾಡ ಮೂಲದ ಆ ಯುವತಿ ಆಂಕರ್ ಭಾರತಿ ಈಗ ನಟ ಸಂಚಾರಿ ವಿಜಯ್ ಅವರ ನೆನಪಿನಲ್ಲಿ ಶನಿವಾರ ನೂರು ಮಂದಿ ಬಡಜನರಿಗೆ ಫುಡ್ ಕಿಟ್ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಸೇವೆಗೆ ಮುನ್ನುಡಿ ಬರೆದಿದ್ದಾರೆ. ಹಾಗೆಯೇ ಇಂದಿನಿಂದ ತಾವು ತಮ್ಮ ಕೈಯಲ್ಲಾದಷ್ಟು ನಿರಂತರವಾಗಿ ಸಾಮಾಜಿಕ ಸೇವೆ ಮಾಡುವುದಾಗಿ ಜನರ ನಡುವೆ ಪ್ರಮಾಣ ಸ್ವೀಕರಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಈ ಸೇವೆಯನ್ನು ಯಾವುದೇ ಸ್ವಾರ್ಥಕ್ಕೆ ಬಳಸಿಕೊಳ್ಳದೇ ಕೇವಲ ನಟ ಸಂಚಾರಿ ವಿಜಯ್ ಅವರ ನೆನಪಿನಲ್ಲಿ ಮುನ್ನೆಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಇಷ್ಟು ಹೇಳಿದ ಮೇಲೆ ಈ ಆಂಕರ್ ಭಾರತಿ ಯಾರು ಅಂತ ನಿಮಗೂ ಅನಿಸಿರೋದಿಕ್ಕೆ ಸಾಕು.
ಅಂದ ಹಾಗೆ, ನಟ ಸಂಚಾರಿ ನಿಧನದ ಸಂದರ್ಭದಲ್ಲಿ ಟಿವಿ ಚಾನೆಲ್ ಸೇರಿದಂತೆ ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಯುವತಿಯ ಹೆಸರು ಆಂಕರ್ ಭಾರತಿ. ನಟ ಸಂಚಾರಿ ವಿಜಯ್ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿದ್ದ ಕೊನೆಯ ದಿನದಿಂದ ಹಿಡಿದು, ಅವರ ಅಂತ್ಯಕ್ರಿಯೆ ಮುಗಿಯುವರೆಗೂ ಕನ್ನಡದ ಅಷ್ಟು ಚಾನೆಲ್ ಗಳಲ್ಲಿ ಆಂಕರ್ ಭಾರತಿ ಸಂದರ್ಶನಗಳು ಬಿತ್ತರವಾದವು. ಕಾರಣ, ಸಂಚಾರಿ ವಿಜಯ್ ಜತೆಗಿನ ತಮ್ಮ ಒಡನಾಟ ಕುರಿತು ಆಂಕರ್ ಭಾರತಿ ತುಂಬಾ ಭಾವುಕರಾಗಿ ಮಾತನಾಡಿದ್ದರು. ಸಂದರ್ಶನದ ಆ ವಿಡಿಯೋಗಳು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೆಲವು ಯುಟ್ಯೂಬ್ ಚಾನೆಲ್ ಗಳಂತೂ ಆಂಕರ್ ಭಾರತಿ ಅವರ ಮಾತುಗಳಿಗೆ ರೆಕ್ಕೆ ಪುಕ್ಕ ಕಟ್ಟಿ ಸುದ್ದಿ ಮಾಡಿದ್ದೇ ಮಾಡಿದ್ದು. ಕೊನೆಗದು ನಟ ಸಂಚಾರಿ ವಿಜಯ್ ಅವರ ಪರಿಶುದ್ಧವಾರ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ಮಾಡಿತು.
ಯುಟ್ಯೂಬ್ ಚಾನೆಲ್ ಗಳು ಮಾಡಿದ ಘನಂದಾರಿ ಕೆಲಸಗಳು ಅಷ್ಟು ಮಾತ್ರವೇ ಅಲ್ಲ, ವಿಜಯ್ ಮದುವೆ ವಿಚಾರವನ್ನು ಎಳೆತಂದು ಆ ಹುಡುಗಿ ಯಾರು ಗೊತ್ತಾ ಅಂತೆಲ್ಲ ಯಾರಾರದೋ ಫೋಟೋಗಳನ್ನು ಹಾಕಿ ವೈರಲ್ ಮಾಡಿದ್ದು ತೀರಾ ಅತಿರೇಕವೇ ಎನಿಸಿತು. ಆಗ ಧಾರವಾಡ ಮೂಲದ ಯುವತಿ ಆಂಕರ್ ಭಾರತಿ ವಿರುದ್ಧವೂ ಜನರು ಆಕ್ರೋಶ ಹೊರ ಹಾಕಿದರು. ಆದರೆ, ನಟ ಸಂಚಾರಿ ವಿಜಯ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವಂತ ಯಾವುದೇ ಕೆಲಸ ಮಾಡಿಲ್ಲ, ಅದೆಲ್ಲ ಮೀಡಿಯಾದವರ ಕೆಲಸ. ನಾನು ನಟ ಸಂಚಾರಿ ವಿಜಯ್ ಅವರ ಪ್ರಾಮಾಣಿಕ ಅಭಿಮಾನಿ ಅಂತ ಪ್ರತಿಪಾದಿಸಿದ್ದ ಆಂಕರ್ ಭಾರತಿ, ಈಗ ಅಂತಹ ಯಾವುದೇ ಪ್ರಚಾರ ಬಯಸದೇ ನಟ ಸಂಚಾರಿ ವಿಜಯ್ ಹೆಸರಲ್ಲಿ ಸಾಮಾಜಿಕ ಸೇವೆಗೆ ಮುಂದಾಗಿದ್ದಾರೆ.
ಅದರ ಮೊದಲ ಪ್ರಯತ್ನವಾಗಿ ಶನಿವಾರ ಧಾರವಾಡ ಜಿಲ್ಲೆಯ ಮಿಶ್ರೀಕೋಟೆ ಗ್ರಾಮ, ಧಾರವಾಡ ಸ್ಲಂ ಪ್ರದೇಶದ ಜನರು ಹಾಗೂ ಅಲ್ಲಿನ ಬುದ್ದಿ ಮಾಂದ್ಯ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಫುಡ್ ಕಿಟ್ ವಿತರಣೆ ಮಾಡಿದರು.
ಜನ ಮೆಚ್ಚುವ ಈ ಸಮಾಜ ಸೇವೆ ಕುರಿತು ʼಸಿನಿ ಲಹರಿʼ ಜತೆಗೆ ಮಾತನಾಡಿದ ಅವರು, ವರನಟ ಡಾ. ರಾಜ್ ಕುಮಾರ್ ಅವರಂತೆಯೇ ನಂಗೆ ನಟ ಸಂಚಾರಿ ವಿಜಯ್ ಅವರ ಮೇಲೂ ದೊಡ್ಡ ಅಭಿಮಾನ ಇದೆ. ಆ ಅಭಿಮಾನಕ್ಕಾಗಿ ಅವರ ಬಗ್ಗೆ ಮಾತನಾಡಿದ್ದು ನಿಜ. ಆದರೆ, ಈಗ ನಾನು ಮಾತನಾಡೋದಿಲ್ಲ. ನಟ ಸಂಚಾರಿ ವಿಜಯ್ ಅವರು ಬದುಕಿನಲ್ಲಿ ತೋರಿಸಿಕೊಟ್ಟ ಸಾಮಾಜಿಕ ಸೇವೆಯೊಂದಿಗೆ ಅವರಿಗೆ ಗೌರವ ಸಲ್ಲಿಸುತ್ತೇನೆ.
ನಟನಿಗೆ ಒಬ್ಬ ಅಭಿಮಾನಿಯಾಗಿ ಮಾತನಾಡುವುದು ಕೂಡ ಇಲ್ಲಿ ಅಪರಾಧವಾಗುತ್ತಿದೆ. ಅದನ್ನು ನಾನು ಬದುಕಿನಲ್ಲಿ ಮಾಡಿ ತೋರಿಸುವೆ ಎಂದರು. ಹಾಗೆಯೇ ಪ್ರಚಾರದ ಗಿಮಿಕ್ ಗಾಗಿ ಅವರು ನಟ ವಿಜಯ್ ಅವರ ಹೆಸರು ಬಳಸಿಕೊಂಡರು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಆಂಕರ್ ಭಾರತಿ, ನಂಗ್ಯಾಕೆ ಪ್ರಚಾರ ಬೇಕು ಸರ್, ನಾನೇನು ರಾಜಕಾರಣಿ ಆಗಲೂ ಹೊರಟವಳಾ ? ನಂಗೆ ಅಂತಹ ಯಾವುದೇ ಪ್ರಚಾರದ ಗೀಳು ಇಲ್ಲ. ಬೇಕಾದ್ರೆ ನನ್ನದೇ ಸ್ವಂತ ಸಾಮಾರ್ಥ್ಯದಲ್ಲಿ ಪ್ರಚಾರ ಪಡೆದುಕೊಳ್ಳುವೆ ಎನ್ನುವ ಉತ್ತರ ಆಂಕರ್ ಭಾರತಿ ಅವರದು.
ಅಂದ ಹಾಗೆ , ಶನಿವಾರ ಆಂಕರ್ ಭಾರತಿ ಅವರದ್ದು ಹುಟ್ಟು ಹಬ್ಬ. ನಟ ಸಂಚಾರಿ ವಿಜಯ್ ಅವರ ನೆನಪಿನಲ್ಲಿ ಗ್ರಾಂಡ್ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿರುವ ಅವರು, ಶನಿವಾರ ಬಡ ಜನರಿಗೆ ಫುಡ್ ಕಿಟ್ ವಿತರಿಸುವ ಸಾಮಾಜಿಕ ಸೇವೆಯ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿಶೇಷ.