ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಸ್ನೇಹರ್ಷಿ ನಾಯಕ ಕಿರಣ್ ನಾರಾಯಣ್, ಇದೀಗ ಚಿತ್ರರಂಗದ ಅಸಂಘಟಿತರಿಗೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಗುರುತಿನ ಚೀಟಿ ಇಲ್ಲದೆ ಸರ್ಕಾರದ ಸಹಾಯ ಧನದಿಂದ ವಂಚಿತರಾದವರ ಹಸಿವನ್ನು ನೀಗಿಸುವ ತೃಪ್ತಿದಾಯಕ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಬಾ.ಮ. ಹರೀಶ್ ಅವರ ಉಲ್ಲಾಸ್ ಶಾಲೆಯ ಆವರಣದಲ್ಲಿ 150ಕ್ಕೂ ಹೆಚ್ಚು ಸಿನಿ ಕಾರ್ಮಿಕರಿಗೆ ಕಿರಣ್ ನಾರಾಯಣ್ ಅವರು ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದರು.
ಈ ವೇಳೆ ಬಾ.ಮ. ಹರೀಶ್ ನೆರವಾದರು. ಇದೇ ಸಮಯದಲ್ಲಿ ಅನಾಥ ಶವಗಳ ಬಂಧು ಎನಿಸಿಕೊಂಡ ನಟ ಅರ್ಜುನ್‌ಗೌಡ, ಪತ್ರಿಕಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್, ನಿರ್ಮಾಪಕ ಬಾ.ಮ.ಹರೀಶ್ ಹಾಗೂ ಬಾ.ಮ. ಗಿರೀಶ್ ಅವರಿಗೆ ಸ್ನೇಹರ್ಷಿ ಚಿತ್ರತಂಡದಿಂದ ಗೌರವ ಸಮರ್ಪಣೆ ಮಾಡಲಾಯಿತು.
ಸುಧೀಂದ್ರ ವೆಂಕಟೇಶ್ ಮಾತನಾಡಿ, ಕೋವಿಡ್‌ನಿಂದಾಗಿ ಚಿತ್ರರಂಗ ತುಂಬಾ ಸಂಕಷ್ಟ ಎದುರಿಸುತ್ತಿದೆ. ಇಂಥಾ ಸಮಯದಲ್ಲಿ ನಟ ಕಿರಣ್ ನಾರಾಯಣ್ ಅವರು ಚಿತ್ರರಂಗದವರ ಕಷ್ಟಕ್ಕೆ ನೆರವಾಗಬೇಕೆಂದು ಈ ಫುಡ್ ಕಿಟ್ ವ್ಯವಸ್ಥೆ ಮಾಡಿದ್ದಾರೆ. ಇನ್ನು ಜೀವದ ಹಂಗು ತೊರೆದು ಕೆಲಸ ಮಾಡಿದ ಅರ್ಜುನ್‌ಗೌಡರಂತಹ ವ್ಯಕ್ತಿಯನ್ನು ಗೌರವಿಸುವ ಅವಕಾಶ ನನಗೆ ಸಿಕ್ಕಿದ್ದೇ ಸಂತಸ, ಇವರಿಗೆ ಎಲ್ಲಾ ರೀತಿಯ ಗೌರವ, ಪ್ರಶಸ್ತಿಗಳು ಸಂದಬೇಕಿದೆ. ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಯನ್ನು ಅರ್ಜುನ್‌ಗೌಡ ಅವರಿಗೆಂದೇ ಮೀಸಲಿಟ್ಟಿದ್ದೇವೆ. ಅಲ್ಲದೆ ಇಂತಹ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಬಾ.ಮ. ಹರೀಶ್ ಅವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ, ಜೊತೆಗೆ ಬೇರೆಯವರಿಂದಲೂ ಕೂಡ ಸಹಾಯ ಮಾಡಿಸುತ್ತಿದ್ದಾರೆ ಎಂದರು.
ನಟ ಕಿರಣ್ ನಾರಾಯಣ್ ಮಾತನಾಡಿ, ಕೋವಿಡ್ ಆರಂಭವಾದಾಗಿನಿಂದಲೂ ನಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ಸಹಾಯ ಮಾಡುತ್ತಲೇ ಬಂದಿದ್ದೇವೆ. ಬಾ.ಮ. ಹರೀಶ್ ಅವರು ಕಾಲ್‌ಮಾಡಿ ಚಿತ್ರರಂಗದಲ್ಲಿ ಕಷ್ಟದಲ್ಲಿರುವವರಿಗೆ ನಿಮ್ಮ ಕಡೆಯಿಂದ ಏನಾದರೂ ಸಹಾಯ ಮಾಡಿ ಎಂದರು. ಹಾಗಾಗಿ ಸಿನಿ ಕಾರ್ಮಿಕರಿಗೆ ಫುಡ್‌ಕಿಟ್ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಸ್ನೇಹರ್ಷಿ ಚಿತ್ರದ ಸಂದೇಶವೂ ಇದೇ ಆಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.
ನಟ ಅರ್ಜುನ್‌ಗೌಡ ಮಾತನಾಡಿ, ಒಬ್ಬ ಕಲಾವಿದನಾಗಿ ಹಾಗೂ ಫ್ರಂಟ್‌ಲೈನ್ ವರ್ಕರ್ ಜವಾಬ್ದಾರಿ ನಿಭಾಯಿಸಿದ್ದೇನೆ. ಇಂತಹ ಟೈಮ್‌ನಲ್ಲಿ ಸಮಾಜಕ್ಕೆ ಏನಾದರೂ ತಿರುಗಿ ಕೊಡೋ ಅವಕಾಶವನ್ನು ದೇವರು ನೀಡಿದ್ದಾನೆ ಎಂದು ಹೇಳಿದರು. ಭಾಮ ಹರೀಶ್ ಮಾತನಾಡಿ, ಅರ್ಜುನ್‌ಗೌಡ ಅವರ ಈ ಸೇವೆ ತುಂಬಾ ದೊಡ್ಡದು, ಬಿಬಿಎಂಪಿಯಿಂದ ನೀಡುವ ಕೆಂಪೇಗೌಡ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದಿಂದ ಕೊಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ಘೋಷಿಸಲೇಬೇಕು ಎಂದು ಒತ್ತಾಯಿಸಿದರು.