ಹಳ್ಳಿಗೆ ಫ್ಲಿಪ್ ಕಾರ್ಟ್‌ ಲವ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಸಂಚಾರ ಮಾಡಬೇಕೆಂಬ ಆಸೆಯೂ…ನನ್ನ ಸೊಂಬೇರಿತನವೂ…!

ನಟ ಸಂಚಾರಿ ವಿಜಯ್‌ ಅವರ ಆತ್ಮೀಯರಲ್ಲಿ ಉಪನ್ಯಾಸಕ ಹಾಗೂ ಯುವ ಬರಹಗಾರ ಶಿವಕುಮಾರ ಮಾವಲಿ ಕೂಡ ಒಬ್ಬರು. ಸಂಚಾರಿ ವಿಜಯ್‌ ಮುಖ್ಯ ಪಾತ್ರದಲ್ಲಿ ಅಭಿನಯಸಿದ್ದ “ಅವ್ಯಕ್ತ” ಹೆಸರಿನ ಕಿರುಚಿತ್ರದ ನಿರ್ಮಾಣಕ್ಕೆ ಶಿವಕುಮಾರ ಮಾವಲಿ ಅವರೇ ರೂವಾರಿ. ಅವರೇ ಬರೆದಿದ್ದ ಕಥೆ ಆಧರಿಸಿ, ಈ ಕಿರುಚಿತ್ರ ನಿರ್ಮಿಸಲಾಗಿತ್ತು. ರಂಗಕರ್ಮಿ ಸತೀಶ್‌ ಸಾಸ್ವೆಹಳ್ಳಿ ನಿರ್ದೇಶಿಸಿದ್ದರು. ಶಿವಕುಮಾರ್‌ ಮಾವಲಿ ಮತ್ತವರ ಗೆಳೆಯರ ಬಳಗ ಇದನ್ನು ನಿರ್ಮಾಣ ಮಾಡಿತ್ತು. ಅಲ್ಲಿಂದ ನಟ ವಿಜಯ್‌ ಅವರೊಂದಿಗೆ ಆತ್ಮೀಯರಾಗಿದ್ದ ಶಿವಕುಮಾರ ಮಾವಲಿ, ತಾವು ಕಂಡಂತೆ ವಿಜಯ್‌ ಕುರಿತು ಆಪ್ತವಾಗಿ ಬರೆದಿದ್ದಾರೆ…

ಓವರ್‌ ಟು ಶಿವಕುಮಾರ ಮಾವಲಿ…

“ನಾತಿಚರಾಮಿ” ಸಿನಿಮಾ ನೋಡಿದ ಮೇಲೆ ವಿಜಯ್ ಅವರಿಗೆ ನಾಲ್ಕು ವರ್ಷಗಳಿಂದ ನಾನು ಬರೆಯಬೇಕೆಂದುಕೊಂಡಿದ್ದ ನೀಳ್ಗತೆಯೊಂದನ್ನು ಹೇಳಿದೆ. ಆ ಕಥೆಯಲ್ಲಿ ಹಳ್ಳಿಯೊಂದರಿಂದ ಈಮೇಲ್ ಮೂಲಕ ಬರುವ ಒಂದು ವಿಚಿತ್ರ ಬೇಡಿಕೆಯನ್ನು ಸವಾಲಾಗಿ ಸ್ವೀಕರಿಸಿದ ಫ್ಲಿಪ್ ಕಾರ್ಟ್ ಕಂಪನಿಯವರು ಒಬ್ಬ “Love Executive “ ರನ್ನು ತುಂಬಾ ನಾಜೂಕಾಗಿ ಟ್ರೈನ್ ಮಾಡಿ ಆ ಹಳ್ಳಿಗೆ ಕಳುಹಿಸಿ ಕೊಡುತ್ತಾರೆ. ಅವನು ಆ ಊರಲ್ಲಿ ಪ್ರೀತಿ ಹಂಚಬೇಕು… ಆಮೇಲಿನದ್ದು ಸವಾಲಿನ ಪಾತ್ರ … ಹೀಗೆ ಲವ್ ಎಕ್ಸಿಕ್ಯೂಟಿವ್ ಆಗಿ ಹೋಗುವ ಪಾತ್ರ ವಿಜಯ್ ಅವರು ಮಾಡಬೇಕು ಎಂಬುದು “ನಾತಿಚರಾಮಿ” ನೋಡಿದಾಗಿನಿಂದ ನನ್ನ ಆಸೆಯಾಗಿತ್ತು. ಕಥೆ ಕೇಳಿದ ವಿಜಯ್ ಬಹಳ ಇಷ್ಟಪಟ್ಟು, “ಇಂಥ ಕಾನ್ಸೆಪ್ಟ್ ಮಾಡ್ಲೇಬೇಕು ಸರ್. ಬೇಗ ಕಥೆ ಬರೆದು ಮುಗಿಸಿ. ಪ್ರೊಡ್ಯೂಸರ್ ಇದ್ದಾರೆ… ಮಾಡಿ ಬಿಡೋಣ. ಇದೊಂದು ಪ್ರಯೋಗ ಆಗುತ್ತೆ’ ಎಂದಿದ್ದರು….

ನಾನೋ ಆ ಕಥೆ ಬಿಟ್ಟು ಆಮೇಲೆ ಅದೆಷ್ಟು ಕಥೆ ಬರೆದರೂ ಅದೊಂದು ಅದ್ಯಾಕೊ ಅರ್ಧಕ್ಕೆ ನಿಂತಿತೋ ಗೊತ್ತಿಲ್ಲ. ಬಹುಷಃ ಅದು ಸಿನಿಮಾ ಆಗಬೇಕು ಎಂಬ ನಿರೀಕ್ಷೆ ಮತ್ತು ಒತ್ತಡದಿಂದಾಗಿ ನನಗೂ ಅದನ್ನು ಬರೆಯಲಾಗಲಿಲ್ಲ ಅನ್ನಿಸುತ್ತದೆ. . .
ಊರಿಗೆ ಪ್ರೀತಿ ಹಂಚಲು ಫ್ಲಿಪ್ ಕಾರ್ಟ್‌ನವರ ಪಾರ್ಸೆಲ್ ನಲ್ಲಿ ಒಬ್ಬ ತರಬೇತಿ ಹೊಂದಿದ ಎಕ್ಸಿಕ್ಯೂಟಿವ್ ಆಗಿ ವಿಜಯ್ ಹಳ್ಳಿಯೊಂದರಲ್ಲಿ ಡೆಲಿವರ್ ಆಗಿದ್ದರೆ… ಆ ಪಾತ್ರವನ್ನು ವಿಜಿ ಎಷ್ಟು ತನ್ಮತೆಯಿಂದ ಅಭಿನಯಿಸುತ್ತಿದ್ದರು ಎಂದು ನೆನೆದರೆ ವಿಪರೀತ ಸಂಕಟವಾಗುತ್ತೆ. ಅವರು ವಿಚಿತ್ರ ಸಂಕೋಚದವರು, ಕಥೆ ಬಗ್ಗೆ ಪದೇ ಪದೇ ಕೇಳಲಿಲ್ಲ… ನಾನು ಆ ಕಥೆಯ ವಿಷಯದಲ್ಲಿ ಸೋಂಬೇರಿ ಆಗಿಬಿಟ್ಟೆ…Ibeg sincere apology for that Vijay. ತಲೆದಂಡದಲ್ಲಿ ನಿಮ್ಮ ಪಾತ್ರ ನೋಡಿದರೆ ಗೊತ್ತಾಗುತ್ತದೆ ನಿಮ್ಮಿಂದ ಎಷ್ಟೆಲ್ಲ ನಟನೆಯನ್ನು ಹೊರ ತೆಗೆಯಲು ಅವಕಾಶ ಇತ್ತೆಂದು… ಅಲ್ಲದೆ ಆ ಇಡೀ ಊರಲ್ಲಿ, ನಿಮ್ಮ ಆ ಪಾತ್ರ ತರಬಹುದಾಗಿದ್ದ ಕ್ರಾಂತಿಕಾರಿ ಬದಲಾವಣೆಗಳಿದ್ದವು…

ಈ ಕಥೆಯ ವಿಷಯದಲ್ಲಿ ಇಷ್ಟೊಂದು ಸೋಂಬೇರಿತನ ಮಾಡಿದ ನಾನು ಸರಿಯಾಗಿ (ಕಳೆದ ಶನಿವಾರ) ಜೂನ್ 12 ರ ರಾತ್ರಿ ಬುಕ್ ಬ್ರಹ್ಮಕ್ಕಾಗಿ, 11 ಗಂಟೆಯ ನಂತರ ಒಂದು ಕಥೆ ಬರೆಯಲು ಕೂತೆ. ಅದ್ಯಾಕೆ ಆ ಕಥೆ ಬರೆದೆನೋ ಎಂಬ ಪಶ್ಚಾತ್ತಾಪ ನನ್ನನ್ನೀಗ ಕಾಡುತ್ತಿದೆ. ಆ ಕಥೆಗೂ, ಅವತ್ತು ರಾತ್ರಿ ನಡೆದದ್ದಕ್ಕೂ , ಆನಂತರ ಎರಡೇ ದಿನದಲ್ಲಿ ನಡೆದದ್ದಕ್ಕೂ ಅದೆಂಥಾ ಕಾಕತಾಳೀಯ. ನನ್ನ ಕಥೆಗಳಲ್ಲಿ ನಾಟಕೀಯತೆ ಇರುತ್ತದೆಂದು ಕೆಲವರು ಹೇಳುತ್ತಾರೆ. ಆಗೆಲ್ಲ ನಾನು ಜೀವನದ ನಾಟಕೀಯತೆ ಮತ್ತು ರೋಚಕತೆ ನೆನೆದು ಸುಮ್ಮನಾಗುತ್ತೇನೆ. ಅದು ಹಾಗೇ ಆಯಿತು! ‘ಖಾಲಿ ಸೈಟಿನ ಕಡೆಗೆ ! ‘ ಛೇ…

ಇತ್ತೀಚಿಗೆ ಈ ‘ಸಾವು’ ಅಭ್ಯಾಸ ಮಾಡಿಸಲು ಶುರುವಿಟ್ಟುಕೊಂಡಿದೆ. ಏನೇನೋ ಕಾರಣಗಳಿಗೆ ಜೊತೆಯಾಗಿ ನೂರಾರು ಅವಿಸ್ಮರಣೀಯ ಕ್ಷಣಗಳನ್ನು ಕೊಟ್ಟವರು ಹೀಗೆ ಇದ್ದಕ್ಕಿದ್ದಂತೆ ಕಣ್ಮರೆಯಾದರೆ ನಮ್ಮ ನಾಳೆಗಳನ್ನು ಅನುಮಾನಿಸಬೇಕೆನ್ನಿಸುತ್ತಿದೆ. ಜಾತಿಯ ಕಾರಣಕ್ಕೆ ಆಗಿ ಹೋಗಿದ್ದ ಚಿತ್ತಕ್ಷೋಭೆಯನ್ನು ಮೇಕಪ್ ಇಲ್ಲದೆಯೇ ಮರೆಮಾಚಿ ನಗುತ್ತಿದ್ದ ಗೆಳೆಯ. ನಿನ್ನ ಅಂಗಾಂಗಳನ್ನು ದಾನ ಪಡೆವಾಗ ಯಾರೂ ಜಾತಿ ಹುಡುಕಿರಲಿಕ್ಕಿಲ್ಲ ಅಲ್ಲವೆ ? ಅದೇ ನೀವು ನಮ್ಮೆಲ್ಲರಿಗೂ ಕಲಿಸಿದ ಮೌಲ್ಯ. ನಿಮ್ಮ ಅಗಲಿಕೆ ಬಹಳ ಕಾಲ ಕಾಡುತ್ತದೆ. Death, be not Proud

ಆದರೂ…
ನನ್ನನ್ನು ಕ್ಷಮಿಸಿಬಿಡಿ ವಿಜಯ್, ಒಂದು ಕಥೆ ಬರೆಯದೇ ಇದ್ದದ್ದಕ್ಕಾಗಿ. ಮತ್ತೊಂದನ್ನು ಬರೆದದ್ದಕ್ಕಾಗಿ …

  • ಶಿವಕುಮಾರ ಮಾವಲಿ

Related Posts

error: Content is protected !!