ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಿನಿಮಾ ಚಟುವಟಿಕೆಗಳು ಇಷ್ಟರಲ್ಲಿಯೇ ಮತ್ತೆ ಶುರುವಾಗುವುದು ಗ್ಯಾರಂಟಿ ಆಗಿದೆ. ಯಾಕಂದ್ರೆ, ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳು ಭಾಗಶಃ ಅನ್ ಲಾಕ ಆದ ಬೆನ್ನಲ್ಲೇ ಸರ್ಕಾರ ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಈಗ ಒಳಾಂಗಣ ಚಿತ್ರೀಕರಣಕ್ಕೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರದ ಅನುಮತಿ ಕೇಳಿದೆ. ವಾಣಿಜ್ಯ ಮಂಡಳಿ ಮನವಿಗೆ ಸರ್ಕಾರ ಸಕರಾತ್ಮಕವಾಗಿಯೂ ಸ್ಪಂದನೆ ಮಾಡಿದೆಯಂತೆ. ಹಾಗಾಗಿ ಇಷ್ಟರಲ್ಲಿಯೇ ಸಿನಿಮಾ ಚಟುವಟಿಕೆಗಳು ಶುರುವಾಗುವುದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬಂದಿವೆ.
ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದಂತೆ, ಒಳಾಂಗಣ ಚಿತ್ರೀಕರಣಕ್ಕೂ ಸರ್ಕಾರ ಅನುಮತಿ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಸರ್ಕಾರವು ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಾಣಿಜ್ಯ ಮಂಡಳಿ ಅಭಿನಂದನೆ ಸಲ್ಲಿಸಿದ್ದನ್ನು ಸಿಎಂ ಗಮನಕ್ಕೆ ತಂದರು. ತದ ನಂತರ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ನೀಡುವಂತೆ ಮನವಿ ಮಾಡಿದರು.
ʼಚಿತ್ರೋದ್ಯಮದಲ್ಲಿ ಈಗಾಗಲೇ ಸಾಕಷ್ಟು ಚಲನ ಚಿತ್ರಗಳ ಚಿತ್ರೀಕರಣವು ಅರ್ಧಕ್ಕೆ ನಿಂತು ಹೋಗಿದ್ದು, ಮತ್ತಷ್ಟು ನಿರ್ಮಾಪಕರು ಲಕ್ಷಾಂತರ ಬಂಡವಾಳ ಹೂಡಿ ಒಳಾಂಗಣದಲ್ಲಿ ಚಿತ್ರೀಕರಿಸಲು ಸೆಟ್‌ಗಳನ್ನು ಅಳವಡಿಸಿಕೊಂಡಿದ್ದು ಈಗ ಸೆಟ್ ಗಳೆಲ್ಲವೂ ದುಸ್ಥಿತಿಗೆ ಬಂದಿವೆ. ಈ ಹಿಂದೆ ಲಾಕ್ ಡೌನ್ ಸಂದರ್ಭ ಕೂಡ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಒಳಾಂಗಣ ಚಿತ್ರೀಕರಣ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಅದೇ ಮಾದರಿಯಲ್ಲಿಯೇ ಈಗಲೂ ಕೂಡ ಒಳಾಂಗಣಕ್ಕೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಭೇಟಿಯ ನಂತರ ʼಸಿನಿಲಹರಿʼ ಜತೆಗೆ ಮಾತನಾಡಿದ ನಿರ್ಮಾಪಕ ಉಮೇಶ್ ಬಣಕಾರ್, ಕೊರೊನಾ ಈಗ ಒಂದಷ್ಟು ನಿಯಂತ್ರಣಕ್ಕೆ ಬಂದಿದೆ. ಈಗಾಗಲೇ ಸರ್ಕಾರ ಅನ್ ಲಾಕ್ ಮಾಡಿದೆ. ಹಾಗಾಗಿ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ನಮ್ಮ ಅಹವಾಲು ಸ್ವೀಕರಿಸಿದ ತಕ್ಷಣವೇ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ಇಷ್ಟರಲ್ಲಿಯೇ ನಮಗೆ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಸಿಗುವುದು ಖಾತರಿ ಆಗಿದೆ. ಅದರಿಂದ ಸಿನಿಮಾ ಚಟುವಟಿಕೆಗಳಿಗೂ ಚಾಲನೆ ಸಿಗಲಿದೆʼ ಎಂದು ವಿವರಿಸಿದರು.