ಮುಂದಿನ‌ ವರ್ಷ ಬಯೋಗ್ರಫಿ ಬರೆಯುತ್ತಾರಂತೆ ನಾದಬ್ರಹ್ಮ ಹಂಸಲೇಖ

ಬಯೋಗ್ರಫಿ ಬರೀಬೇಕು ನಿಜ, ಆದ್ರೆ ಬರೆಯೋದಿಕ್ಕೆ ಭಯ ಆಗುತ್ತೆ….!
ಹೌದು, ನಾದ ಬ್ರಹ್ಮ ಹಂಸಲೇಖ ಹೀಗೆ ಹೇಳಿದ್ರು. ಹಾಗಂತ, ತಮಾಷೆಗೆ ಹೇಳಿದ್ರಾ? ಇಲ್ಲ ಗಂಭೀರವಾಗಿಯೇ ಅವರು ಈ ಮಾತು ಹೇಳಿದರು‌. ಅದಕ್ಕೆ ಅವರು ಕಾರಣ ಏನು ಗೊತ್ತಾ? ಅಂತಹದೇನು ದೊಡ್ಡ ಸಾಧನೆ ತಾವು ಮಾಡಿಲ್ಲ ಅನ್ನೋದು‌. ಹಾಗಾದ್ರೆ ಇದು ನಿಜವಾ?

ಇಲ್ಲ, ಕನ್ನಡ ಸಿನಿಮಾ ಸಂಗೀತ ಮತ್ತು ಸಾಹಿತ್ಯದ ಜತೆಗೆ ದೇಸಿ‌ ಸಂಗೀತದಲ್ಲಿ ಮಹಾನ್ ಸಾಧನೆ ಮಾಡಿದ ಮೇರು ವ್ಯಕ್ತಿತ್ವ ಅವರದ್ದು. ಹಂಸಲೇಖ ಅಂದ್ರೆ ಕನ್ನಡಿಗರ ಮಾತು. ಹಾಗಾಗಿಯೇ ಅಲ್ಲವೇ ಅವರಿಗೆ ನಾದ ಬ್ರಹ್ಮ ಎನ್ನುವ ಬಿರುದು ಪಾತ್ರವಾಗಿದ್ದು‌. ಇಷ್ಟಾಗಿಯೂ ಅವರು ಬಯೋಗ್ರಫಿ ಬರೆಯುವಷ್ಟು ಅಂತಹದೇನು ದೊಡ್ಡ ಸಾಧನೆ ಮಾಡಿಲ್ಲ ಎನ್ನುತ್ತಾ ನಕ್ಕರು‌. ಅಂದಹಾಗೆ, ಅವರು ಈ ಮಾತುಗಳನ್ನು ಬುಧವಾರ ತಮ್ಮ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದರು. ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೂ ಉತ್ತರಿಸಿದರು.

ನೀವು ಸರ್ ಬಯೋಗ್ರಫಿ ಬರೆದು, ಕನ್ನಡ ಚಿತ್ರರಂಗ ಇತರರಿಗೂ ಸ್ಪೂರ್ತಿ ಆಗಬೇಕು ಎನ್ನುವುದು ಅವರ ಪ್ರಶ್ನೆ ಆಗಿತ್ತು. ಅದಕ್ಕೆ ನಗುತ್ತಾ ಉತ್ತರಿಸಿದ ಹಂಸಲೇಖ, ಬಯೋಗ್ರಫಿ ಬರೆಯೋದಿಕ್ಕೆ ನಂಗೆ ಭಯ ಆಗುತ್ತೆ. ಯಾಕಂದ್ರೆ ಅನೇಕ ಜನರ ಬಯೋಗ್ರಫಿ ಓದಿದ್ದೇನೆ. ಅವರೆಲ್ಲ ಮಹಾನ್ ಸಾಧಕರು. ನಮ್ಮಂತವರಿಗೆ ಸ್ಪೂರ್ತಿ ಆಗುವ ವ್ಯಕ್ತಿಗಳು. ಅಂತಹ ವ್ಯಕ್ತಿಗಳ‌ ಸಾಧನೆ ಮುಂದೆ ನಾವೇನು ಮಾಡಿಲ್ಲ.

ಮುಂದೆ ನಾನು ಮಾಡಬೇಕಾದ ಒಂದೆರೆಡು ಕೆಲಸಗಳಿವೆ. ನಾನೇ‌ ಸೃಷ್ಟಿಸಿದ ದೇಸಿ ಸಂಗೀತದ ಒಂದು ವಿದ್ಯೆ ಇದೆ. ಅದನ್ನು ಒಂದಷ್ಟು ಫೈನ್ ಟ್ಯೂನ್ ಮಾಡಬೇಕಿದೆ. ಮುಂದಿನ ವರ್ಷಕ್ಕೆ ಆ ಕೆಲಸ ಆಗಬಹುದು ಅಂತ ನಿರೀಕ್ಷೆ ಮಾಡಿದ್ದೇನೆ. ಹಾಗೆಯೇ ಇನ್ಮೊಂದು ಸಂಶೋಧನೆಯ ಕೆಲಸ ಇದೆ. ಅದೆಲ್ಲ ಲೋಕಾರ್ಪಣೆ ಆದ ಮೇಲೆ ಬಯೋಗ್ರಫಿ ಬರಿತೀನಿ ಅಂದ್ರು ಹಂಸಲೇಖ.

Related Posts

error: Content is protected !!