Categories
ಸಿನಿ ಸುದ್ದಿ

ಮಡಿ ಮಡಿಲಿಗೆ ಎರಡು ಪ್ರಶಸ್ತಿಯ ಗರಿ: ರಿಫ್ಟ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಹೆಮ್ಮೆ

ಕನ್ನಡದ ನಿರ್ದೇಶಕ ಸುಧೀರ್‌ ಅತ್ತಾವರ್‌ ನಿರ್ದೇಶನದ “ಮಡಿ” ಸಿನಿಮಾಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜೊತೆಯಲ್ಲಿ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿದೆ.

ರಿಫ್ಟ್‌ ಚಿತ್ರೋತ್ಸವದಲ್ಲಿ ಅಮೆರಿಕನ್‌ ಸಿನಿಮಾ ಫಲಾಫೆಲ್‌ ಮತ್ತು ಫ್ರೆಂಚ್‌ ಚಿತ್ರ ಸೋಲೇಮಿಯೋ ಚಿತ್ರಗಳು “ಮಡಿ” ಚಿತ್ರಕ್ಕೆ ತೀವ್ರ ಸ್ರ್ಧೆ ನೀಡಿದ್ದರೂ, ಅಂತಿಮವಾಗಿ, ಆ ಎರಡೂ ಚಿತ್ರಗಳನ್ನು ಹಿಂದಿಟ್ಟ ಕನ್ನಡದ “ಮಡಿ” ಚಿತ್ರ ತೀರ್ಪುಗಾರ ಪ್ರಶಂಸೆಗೆ ಪಾತ್ರವಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಕ್ಸಸ್‌ ಫಿಲಂಸ್‌ ಬ್ಯಾನರ್‌ನಡಿ ವಿದ್ಯಾಧರ್‌ ಶೆಟ್ಟಿ ಹಾಗೂ ಸೂರಜ್‌ ಜಾಲ್ಸ್‌ ನಿರ್ಮಾಣ ಮಾಡಿರುವ ಈ ಚಿತ್ರ, ಕರಾವಳಿಯ ಭಾಗದ ಜನಪದ ಕಲೆ “ಆಟಿ ಕಳಂಜ”ದ ಹಿನ್ನೆಲೆಯ ಕಥಾಹಂದರ ಹೊಂದಿದೆ. ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ 40ಕ್ಕೂ ಹೆಚ್ಚು ಕಿರುಚಿತ್ರಗಳು ಪಾಲ್ಗೊಂಡಿದ್ದವು.

“ಮಡಿ” ಬಗ್ಗೆ ಹೇಳುವುದಾದರೆ, “ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್.‌ ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿದೆ. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿರುವ ಸುಧೀರ್‌ ಅತ್ತಾವರ್‌ ಅವರ “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ. ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದಾರೆ, ಹೊಗಳಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ. ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ.

ಕಥಾಹಂದರದಲ್ಲಿರುವ ಗಟ್ಟಿತನ. ಅಲ್ಲಿನ ಕೀಳರಿಮೆ, ಕಿತ್ತು ತಿನ್ನೋ ಬಡತನ, ಏನೂ ಅರಿಯದ ಹುಡುಗನೊಬ್ಬನ ಹಸಿವು, ಪ್ರಮುಖವಾಗಿ ಗಮನ ಸೆಳೆಯುವ ನಾಯಕಿ. ಆಕೆಯಲ್ಲಿರುವ ಭಯ, ಪುಷ್ಕರಣಿಯಲ್ಲಿ ಜೀವವೊಂದು ಬದುಕಲು ಹೆಣಗಾಡುತ್ತಿದ್ದರೆ, ಅತ್ತ, ಪುರೋಹಿತ ಶಾಹಿಗಳಿಗೆ ಮಡಿಯೇ ಮುಖ್ಯ ಎಂಬ ಧ್ಯೇಯ… ಇವೆಲ್ಲವೂ ವಾಸ್ತವತೆಯನ್ನು ಬಿಂಬಿಸುವಂತಿವೆ. ಒಟ್ಟಾರೆ ಈ ಸಮಾಜದ ವ್ಯವಸ್ಥೆಯ ಅವ್ಯವಸ್ಥೆಯನ್ನು ಮನತಟ್ಟುವಂತೆ ಸೆರೆ ಹಿಡಿದಿದ್ದರಿಂದಲೇ ಈ ಚಿತ್ರಕ್ಕೆ ರೀಫ್ಟ್‌ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿಗಳು ಸಿಕ್ಕಿವೆ.ನಿರ್ದೇಶಕ ಸುಧೀರ್ ಅತ್ತಾವರ್ ಅವರು, “ಮಡಿ” ಮೂಲಕ ಸಮಾಜದಲ್ಲಿರುವ ಹುಳುಕನ್ನ ಎತ್ತಿ ಹಿಡಿಯುವ ಪ್ರಯತ್ನ ಮಾಡಿರುವುದರಿಂದ, ಅವರ ಪರಿಶ್ರಮಕ್ಕೊಂದು ಫಲ ಸಿಕ್ಕಂತಾಗಿದೆ.

ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಘು ದೀಕ್ಷಿತ್‌ ಹೊಸ ಸೌಂಡು! ನಿನ್ನ‌‌ ಸನಿಹಕೆ‌ ಸಿನಿಮಾಗೆ ದಿ ಸೌಂಡ್ ಆಫ್ ಕೆಯಾಸ್ ಬಳಕೆ-ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ ಸಾಂಗು

ಸೂರಜ್‌ ಗೌಡ ನಟರಾಗಿ ಗುರುತಿಸಿಕೊಂಡವರು. ಅವರೀಗ ನಿರ್ದೇಶಕರಾಗಿದ್ದು ಗೊತ್ತಿದೆ. ಹೌದು, “ನಿನ್ನ ಸನಿಹಕೆ” ಸಿನಿಮಾ ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ನಿರ್ದೇಶಕರ ಪಟ್ಟ ಅಲಂಕರಿಸಿರುವ ಸೂರಜ್‌ ಗೌಡ, ತಮ್ಮ ಸಿನಿಮಾವನ್ನು ಈಗ ಪ್ರೇಕ್ಷಕರ ಮುಂದೆ ತರಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ, “ನಿನ್ನ ಸನಿಹಕೆ” ಹಾಡುಗಳ ಮೂಲಕವೇ ಜೋರು ಸುದ್ದಿ ಮಾಡುತ್ತಿದೆ.

ಸಂಗೀತ ನಿರ್ದೇಶಕ ರಘುದೀಕ್ಷಿತ್‌ ಅವರ ಸಂಯೋಜನೆ ಹಾಡುಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಗುತ್ತಿದೆ. ಎರಡು ರೊಮ್ಯಾಂಟಿಕ್‌ ಹಾಡುಗಳಿಂದ ಕನ್ನಡ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ರಘುದೀಕ್ಷಿತ್‌ ಅವರು “ದಿ ಸೌಂಡ್ ಆಫ್ ಕೆಯಾಸ್” ಎಂಬ ಹೊಸ ಸೌಂಡಿಂಗ್ ಸಿಸ್ಟಂ ಮೂಲಕ ಇನ್ನಷ್ಟು ರಂಜಿಸಿದ್ದಾರೆ. ರಘು ದೀಕ್ಷಿತ್ ಸಂಯೋಜಿಸಿ ಹಾಡಿರುವ ರ್ಯಾಪ್ ಸಾಂಗ್ ಅದು. ಹೀರೋ ಲವ್ ಫೇಲ್ ಆಗಿ ಹಾಡುವ ಈ ಹಾಡಿಗೆ, ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ.

“ಯಾರು ಯಾರು ನಾನ್ ಯಾರು… ಈ ನಶೆಯೂ ಹೇಳಿದೆ ಪತ್ತೆಯಾ…” ಅನ್ನೋ ಕ್ಯಾಚಿ ಲಿರಿಕ್ಸ್ ಇರುವ ಈ ಹಾಡು ಕೇಳೋದಕ್ಕೆ ಸಖತ್ ಮಜ ಎನಿಸಿದೆ. ವಿರಹ ಮನಸುಗಳಿಗೆ ನೇರವಾಗಿ ನಾಟುವಂತಿರುವ ಹಾಡಲ್ಲಿ ವಿಶೇಷ ಎನಿಸುವ ಸಂಗೀತದ ಸ್ಪರ್ಶವಿದೆ. ಸದ್ಯಕ್ಕೆ “ನಿನ್ನ ಸನಿಹಕೆ” ಸಿನಿಮಾದ ಹಾಡು ಚಿತ್ರದ ಮೇಲಿನ ಭರವಸೆ ಹೆಚ್ಚಿಸಿದೆ.
ಈಗಾಗಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರುವ ನಿನ್ನ ಸನಿಹಕೆ‌ ಟೀಮ್ ವರ್ಕ್ ನೋಡಿದರೆ, ಎಲ್ಲಾ ಆಂಗಲ್‌ನಿಂದಲೂ ಇದು ಮಾಮೂಲಿ‌ ಸಿನಿಮಾ ಅಲ್ಲ. ಇದರಲ್ಲೇನಾದರೂ ಇದೆ ಅನ್ನೋದನ್ನ ಪ್ರತಿ‌ ಹಂತದಲ್ಲೂ ತೋರಿಸುತ್ತಲೇ ಇರುವುದರಿಂದ ಸಿನಿಮಾ ಬಿಡುಗಡೆಯನ್ನು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸುದ್ದಿ ಮಾಡುತ್ತಿರುವ “ನಿನ್ನ ಸನಿಹಕೆ”‌ ತಂಡ ಇಷ್ಟರಲ್ಲೇ ಟ್ರೇಲರ್‌ ರಿಲೀಸ್ ಮಾಡುವ ತಯಾರಿಯಲ್ಲಿದೆ. ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರುತ್ತಿರುವ ಸಮಯದಲ್ಲಿ “ಕನ್ನಡದಲ್ಲಿ ಮಾತ್ರ” ಬಿಡುಗಡೆ ಅನ್ನುವ ಟ್ಯಾಗ್‌ಲೈನ್‌ ಜೊತೆ “ನಿನ್ನ‌ ಸನಿಹಕೆ”‌ ಸಿನಿಮಾ ತಂಡ ಏಪ್ರಿಲ್ 16ಕ್ಕೆ ಪ್ರೇಕ್ಷಕರ ಎದುರಿಗೆ ಬರುತ್ತಿದೆ. ಇನ್ನು, ವಿಶ್ವದಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ಸ್ಕೂಲೇ ನನ್ನ ಟೆಂಪಲ್‌- ಮಕ್ಕಳಿಂದ ಮಕ್ಕಳಿಗೋಸ್ಕರ ಹೊರ ಬಂತು ಹೊಸ ಬಗೆಯ ವಿಡಿಯೋ ಸಾಂಗ್‌ !

ಕೊರೋನಾ ಕಾರಣಕ್ಕೆ ಮಿಸ್‌ ಮಾಡ್ಕೊಂಡ್‌ ಅನೇಕ ಸಂಗತಿಗಳ ಪೈಕಿ ಸ್ಕೂಲ್‌ ಕೂಡ ಒಂದು. ರಾಜ್ಯದ ಅದೆಷ್ಟೋ ವಿದ್ಯಾರ್ಥಿಗಳು ಸ್ಕೂಲ್‌ ಮುಖ ನೋಡದೆ ಹೆಚ್ಚು ಕಡಿಮೆ ವರ್ಷವೇ ಆಗುತ್ತಾ ಬಂತು. ಮನೆಯಲ್ಲೇ ಕುಳಿತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪುಟಾಣಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೀಗ ಹೊಸ ಬಗೆಯ ವಿಡಿಯೋ ಸಾಂಗ್‌ ವೊಂದು ಹೊರ ಬಂದಿದೆ. ನಿರ್ದೇಶಕ ಸಾಯಿ ಲಕ್ಷ್ಮಣ್ ತಂಡ ಈ ಪ್ರಯತ್ನ ಮಾಡಿದೆ. ಸುಮಾರು 300 ಮಕ್ಕಳು ಈ ವಿಡಿಯೋ ಸಾಂಗ್‌ ನಲ್ಲಿ ನೃತ್ಯ ಮಾಡಿದ್ದಾರೆ. ವಿಶೇಷ ಅಂದ್ರೆ ಇದು ಮಕ್ಕಳಿಂದ ಮಕ್ಕಳಿಗೋಸ್ಕರ ತಯಾರಾದ ವಿಡಿಯೋ ಸಾಂಗ್‌ ಆಲ್ಬಂ ಇದು. ಮಂಗಳವಾರವಷ್ಟೇ ( ಮಾ.23) ಈ ವಿಡಯೋ ಸಾಂಗ್‌ ಆಲ್ಬಂ ಸಾಂಗ್‌ ರಿಲೀಸ್‌ ಆಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ವಿಡಿಯೋ ಸಾಂಗ್‌ ಲಾಂಚ್‌ ಮಾಡಿ ಶುಭ ಹಾರೈಸಿದರು. ” ಸಂಜಯ್ ಅವರ ಸಾಹಸ ಮೆಚ್ಚಬೇಕು. ಮಕ್ಮಳಲ್ಲಿ ನಟಿಸಲು ಹೇಳಲು ತಾಳ್ಮೆ ಬೇಕೆ ಬೇಕು.‌ನಟ ಪುನೀತ್ ರಾಜ್ ಕುಮಾರ್ ಮಗುವಿದ್ದಾಗ ಚಲಿಸುವ ಮೋಡಗಳು ಸಿನಿಮಾದಲ್ಲಿ ನಟಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಲ್ಲಿ ಕಚ್ಚೆ ಕಟ್ಟಿಕೊಂಡು ನಟಿಸಬೇಕಿತ್ತು.‌ ನಾನು ಮಾಡಲ್ಲ ಅಂತ ಓಡೋರು‌. ಮಕ್ಕಳನ್ನು ಸಹಿಸಿಕೊಂಡು ತಯಾರಿಸಿರೋದು ಅತಿಶಯೋಕ್ತಿಯಲ್ಲ. ಮಕ್ಕಳ‌ ಕೈಯಲ್ಲಿ ಮೂರು ದಿನಗಳಲ್ಲಿ ಶೂಟಿಂಗ್ ಮುಗಿಸಿರೋದು ಖುಷಿ‌ತಂದಿದೆ. ನಿರ್ದೇಶಕರ ತಾಳ್ಮೆಗೆ ಶರಣು. ಎಲ್ಲರಿಗೂ ತನ್ನ ಮಗ, ಮಗಳು ಚೆನ್ನಾಗಿ ಕಾಣಬೇಕು ಎಂದು ಆಸೆಯಿರುತ್ತದೆ. ಇವತ್ತು ತಂದೆ ತಾಯಿಗಳಿಗೆ ಖುಷಿಯಾಗಿರುತ್ತದೆʼ ಅಂತ ತಂಡಕ್ಕೆ ಶುಭ ಹಾರೈಸಿದರು.

ಸಾಯಿ ಲಕ್ಷಣ್‌ ನಿರ್ದೇಶನದ ಜತೆಗೆ ನೃತ್ಯ ನಿರ್ದೇಶನ ಮಾಡಿದ್ದು, ಅನ್ಮೂಲ್ ವಿಜಯ್‌ ಭಟ್ಕಳ, ಅಜಿಂಶಾ ಸೇರಿದಂತೆ ೩೦೦ ಕ್ಕೂ ಹೆಚ್ಚು ಪುಟಾಣಿಗಳು ಈ ವಿಡಿಯೋ ಸಾಂಗ್‌ ಆಲ್ಬಂ ನಲ್ಲಿ ಕಾಣಸಿಕೊಂಡಿದ್ದಾರೆ. ವಿಡಿಯೋ ಲಾಂಚ್‌ ಗೆ ಅಥಿಯಾಗಿ ಬಂದಿದ್ದ ಸಾಮಾಜಿಕ ಕಾರ್ಯಕರ್ತ ರವಿ ಮಾತನಾಡಿ, ಮನುಷ್ಯ ಎಳೆಯ ಮಕ್ಕಳಿಂದಲೇ ಬೆಳೆಯಬೇಕು ಎನ್ನುವ ಮನೋಭಾವ ಖುಷಿಯಾಯಿತು. ನಮ್ಮ‌ ವಿದ್ಯೆಯೇ ದೇವಸ್ಥಾನ ಎನ್ನುವುದು ಅರಿವಾಗಬೇಕು. ಕೊರೋನಾದಿಂದ ಬೇಸತ್ತವರಿಗೆ ಇಂತಹ ವೀಡಿಯೋ ಸಾಂಗ್ ಮುಖ್ಯವಾಗಿದೆ ಎಂದರು. ಈ ವಿಡಿಯೋ ಸಾಂಗ್‌ ಈಗ ಸೋಷಲ್‌ ಮೀಡಿಯಾದಲ್ಲಿ ಲಭ್ಯವಿದೆ.

Categories
ಸಿನಿ ಸುದ್ದಿ

ಅವರ ಲವ್‌ಗೆ ಆ ವಿಲನ್ ಅಡ್ಡಿ! ಶಶಿಕುಮಾರ್‌ ಪುತ್ರನ ಪ್ರೇಮ ಪುರಾಣದಲ್ಲಿ ಹೊಸ ಟ್ವಿಸ್ಟ್

‌ನಟ ಶಶಿಕುಮಾರ್‌ ಪುತ್ರ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಅವರ ಪುತ್ರ ಅಕ್ಷಿತ್‌ ಅವರು ಲವ್‌ನಲ್ಲಿ ಬಿದ್ದಿರೋದು ಕೂಡ ಎಲ್ಲರಿಗೂ ಗೊತ್ತಿದೆ! ಅಂದರೆ, ಇದು ಸಿನಿಮಾ ವಿಷಯ. ಅವರು ಲವ್ವಲ್ಲಿ ಬಿದ್ದಿರೋದು ಸಿನಿಮಾದಲ್ಲಿ. ಹೌದು, ನಿರ್ದೇಶಕ ಸ್ಮೈಲ್‌ ಶ್ರೀನು ಅವರೀಗ “ಓ ಮೈ ಲವ್‌” ಸಿನಿಮಾದಲ್ಲಿ ಅಕ್ಷಿತ್‌ಗೆ ಲವ್‌ ಮಾಡುವ ಹುಡುಗನ ಪಾತ್ರ ನೀಡಿದ್ದಾರೆ. ಈ ಸಿನಿಮಾದ ವಿಶೇಷವೆಂದರೆ, ಈಗ ಹೊಸ ವಿಲನ್‌ ಎಂಟ್ರಿಯಾಗಿದ್ದಾರೆ. ಅದು “ಮಗಧೀರ” ಖ್ಯಾತಿಯ ಖಳನಟ ದೇವ್‌ಗಿಲ್.‌

ಅಂದಹಾಗೆ, ಇದು ಜಿಸಿಬಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಜಿ.ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ಅದ್ದೂರಿ ವೆಚ್ಚದಲ್ಲಿ ಹಾಕಲಾಗಿದ್ದ ಸೆಟ್‍ನಲ್ಲಿ ಸಾಹಸ ಸನ್ನಿವೇಶಗಳನ್ನು ಸೆರೆಹಿಡಿಯುವುದರೊಂದಿಗೆ ಎರಡನೇ ಹಂತದ ಚಿತ್ರೀಕರಣವನ್ನು ಪೂರೈಸಿದೆ.

ಈ ಹಂತದ ಚಿತ್ರೀಕರಣದಲ್ಲಿ “ಮಗಧೀರ” ಖ್ಯಾತಿಯ ವಿಲನ್ ದೇವ್‍ಗಿಲ್ ಹಾಗೂ ನಾಯಕ ಅಕ್ಷಿತ್ ಶಶಿಕುಮಾರ್ ನಡುವಿನ ಭರ್ಜರಿ ಸಾಹಸ ದೃಷ್ಯಗಳನ್ನು ರಿಯಲ್ ಸತೀಶ್ ಅವರ ಸಾರಥ್ಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ನಾಯಕಿ ಕೀರ್ತಿ ಕಲ್ಕೆರೆ, ಎಸ್.ನಾರಾಯಣ್, ಸಂಗೀತ, ಸುಂದರಶ್ರೀ, ಭಾಗ್ಯಶ್ರೀ, ಪೃಥ್ವಿರಾಜ್ ಕೂಡ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಶೇ.40ರಷ್ಟು ಭಾಗ ಶೂಟಿಂಗ್ ಮುಗಿದಿದೆ.

ಇದೊಂದು ವಿಭಿನ್ನವಾದ ಲವ್, ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಈ ಹಿಂದೆ “ಬಳ್ಳಾರಿ ದರ್ಬಾರ್”‌, “ತೂಫಾನ್” ಹಾಗೂ “18-25” ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಅವರು ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಆರಂಭದಿಂದಲೂ ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತು ಕೊಡುವುದರೊಂದಿಗೆ ಹೊಸ ಪ್ರತಿಭಗಳ ಜೊತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕ ಸ್ಮೈಲ್‌ ಶ್ರೀನು, ಈ ಬಾರಿ ಹೊಸಬರ ಜೊತೆ ಚಿತ್ರರಂಗದ ಅನುಭವಿ ಕಲಾವಿದರನ್ನೂ ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ.

ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತವಿದೆ. ರಿಯಲ್ ಸತೀಶ್ ಅವರ ಸಾಹಸ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ವಿ.ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿ.ಮಲ್ಲಿಕ್ ಸಂಕಲನ, ಜನಾರ್ದನ್ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮಹನೀಯರ ಜೀವನ ಸಿನಿಮಾವಾಗಬೇಕು: ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ಸ್ಕ್ರಿಪ್ಟ್ ಪೂಜೆಯಲ್ಲಿ ಶಶಿಕುಮಾರ್ ಮಾತು

ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರುತ್ತಿದೆ. “ಮಹಾಕವಿ” ಎಂಬ ಶೀರ್ಷಿಕೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ. ಗೋವಿಂದ ಪೈ ಅವರ ತವರು ಗಡಿನಾಡು ಮಂಜೇಶ್ವರದವರೇ ಆದ ನಟ, ನಿರ್ಮಾಪಕ ರಘುಭಟ್ ತನ್ನ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ ‌ನಲ್ಲಿ ಮಹಾಕವಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಅವರ ಪತ್ನಿ ಸುಗುಣ ರಘುಭಟ್ ಅವರು ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸಿನಿರಂಗದ ಸೇವೆಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ವಿಶೇಷ.

ಸಿನಿಮಾ ಪತ್ರಕರ್ತರಾಗಿ, ಸಾಹಿತಿಯಾಗಿ ಚಿರಪರಿಚಿತರಾಗಿರುವ ಗಣೇಶ್ ಕಾಸರಗೋಡು ಮಹಾಕವಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಂಜೇಶ್ವರದವರೇ ಆದ ಜಯರಾಂ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ. ಸ್ಟಾರ್ ನಟರೊಬ್ಬರು ಗೋವಿಂದ ಪೈ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅಂದಹಾಗೆ ಗೋವಿಂದ ಪೈ ಅವರ ಜನ್ಮದಿನದಂದು ಅವರ ತವರು ಮಂಜೇಶ್ವರದಲ್ಲಿ ಮಂಗಳವಾರ ಮಹಾಕವಿ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿತು.‌ ಶನೀಶ್ವರ ದೇವಾಲಯದಲ್ಲಿ ಪೂಜೆ ಬಳಿಕ ಗೋವಿಂದ ಪೈ ಅವರ ನಿವಾಸದಲ್ಲಿ ಸಮಾರಂಭ ಜರುಗಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಮಾತನಾಡಿ, “ರೌಡಿಸಂ‌ ಸಿನಿಮಾಗಳಿಗಿಂತ ಇಂತಹ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಬೇಕು. ಸಮಾಜಕ್ಕೆ ಕೊಡುಗೆ ನೀಡಿದವರ ಜೀವನಗಾಥೆ ಎಲ್ಲರಿಗೂ ಆದರ್ಶ. ಗೋವಿಂದ ಪೈ ಅವರ ಬಯೋಪಿಕ್ ನಿರ್ಮಿಸುತ್ತಿರುವ ರಘುಭಟ್ ಹಾಗೂ ಇಡೀ‌ ತಂಡಕ್ಕೆ ಶುಭವಾಗಲಿ” ಎಂದು ಹಾರೈಸಿದರು.

ಎಡೆನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ‌ಮಾತನಾಡಿ, “ಗೋವಿಂದ ಪೈ ಅವರ ಮೇಲೆ ನನಗೆ ವಿಶೇಷ ಅಭಿಮಾನ. ಕಾರ್ಯಕ್ರಮಕ್ಕೆ ಭೇಟಿ ಮಾಡಿ ಆಹ್ವಾನಿಸುತ್ತೇವೆ ಎಂದು ರಘುಭಟ್ ಹೇಳಿದಾಗ, ಅದಕ್ಕಾಗಿ ಬರುವುದು ಬೇಡ. ಇಂತಹ ಕಾರ್ಯಕ್ರಮಕ್ಕೇ ಬಂದೇ ಬರುತ್ತೇನೆಂದು ಬಹಳ ಖುಷಿಯಿಂದ ಆಗಮಿಸಿದ್ದೇನೆ” ಎನ್ನುತ್ತಲೇ ಚಿತ್ರತಂಡವನ್ನು ಆಶೀರ್ವದಿಸಿ, ಯಶಸ್ಸು ಸಿಗಲಿ ಎಂದು ಹಾರೈಸಿದರು.
ಮಂಜೇಶ್ವರದ ವಿನ್ಸೆಂಟ್ ಚರ್ಚ್‌ನ ವಿನೋದ್ ಸಾಲ್ಡಾನ್ಹಾ ಮಾತನಾಡಿ, “ಗೋವಿಂದ ಪೈ ಅವರು 22 ಭಾಷೆಗಳನ್ನು ಬಲ್ಲವರಾಗಿದ್ದರು. ಸರ್ವಧರ್ಮ ಸಹಿಷ್ಣುವಾಗಿದ್ದರು.‌ಅಂತಹ ಮಹಾನ್ ವ್ಯಕ್ತಿ ನಮ್ಮವರು ಎಂಬುದೇ ಹೆಮ್ಮೆ ಎಂದು ಹೇಳಿದರು. ಮಹಾಕವಿ ಕಥೆ , ಚಿತ್ರಕಥೆ ಮತ್ತು ಸಂಭಾಷಣಾಗಾರ ಹಿರಿಯ ಸಿನಿಮಾ ಪತ್ರಕರ್ತರಾದ ಗಣೇಶ್ ಕಾಸರಗೋಡು ಮಾತನಾಡಿ, “ಸಿನಿಮಾಕ್ಕೆ ಬರೆಯುವ ಅವಕಾಶ ಕೊಟ್ಟ ರಘುಭಟ್ ಅವರಿಗೆ ಧನ್ಯವಾದಗಳು.‌ ಇಡೀ ತಂಡವಾಗಿ ಒಂದೊಳ್ಳೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾ ಅದ್ಭುತವಾಗಿ ಮೂಡಿಬರಬೇಕೆಂಬುದು ನನ್ನಾಸೆ. ಆ ನಿಟ್ಟಿನಲ್ಲಿ ನಾನೂ ಶ್ರಮಿಸುತ್ತೇನೆ ಎಂಬುದು ಅವರ ಮಾತು.

ನಟ ವಿಕ್ರಂ ಸೂರಿ ಮಾತನಾಡಿ, “ಕಮರ್ಷಿಯಲ್ ಸಿನಿಮಾ ಜಗತ್ತಿನಲ್ಲಿ ರಘುಭಟ್ ಇಂತಹ ವಿಭಿನ್ನ ಪ್ರಯತ್ನ, ಸಾಹಸದ ಮೂಲಕ ಹೊಸದೇನಾದರು ಮಾಡಬೇಕು ಎಂಬ ಉತ್ಸಾಹದಲ್ಲಿದ್ದಾರೆ. ದುಡ್ಡು ಮಾಡುವ ಇರಾದೆ ಇದ್ದಿದ್ದರೆ ಕಮರ್ಷಿಯಲ್ ಸಿನಿಮಾಗಳಿಗೇ ಬಂಡವಾಳ ಸುರಿಯಬಹುದಿತ್ತು. ಆದರೆ ತನ್ನೂರಿ‌ನ ಕವಿಯ ಬಯೋಪಿಕ್ ಮಾಡಲು ಹೊರಟಿದ್ದಾರೆ. ನಾನು ಸ್ನೇಹಿತನಾಗಿ, ಸಿನಿಮಾರಂಗದವನಾಗಿ ಸದಾ ಜೊತೆಗಿರುತ್ತೇನೆ. ಒಂದೇ‌ ಒಂದು ರೂ. ಸಂಭಾವನೆ ಪಡೆಯದೆ ತಂಡದೊಂದಿಗೆ ಮಹಾಕವಿ ಸಿನಿಮಾಕ್ಕಾಗಿ ಶ್ರಮಿಸುತ್ತೇನೆ ಎಂದರು.
ನಟಿ ನಮಿತಾ ರಾವ್ ಮಾತನಾಡಿ, “ರಘುಭಟ್ ಅವರಿಂದ ನಾವೂ ಮಂಜೇಶ್ವರದ ಮಕ್ಕಳೇ ಆಗಿದ್ದೇವೆ. ನಮ್ಮೂರಿ‌ನ ಕೀರ್ತಿ ಕಳಶ ಗೋವಿಂದ ಪೈ ಅವರ ಬಯೋಪಿಕ್ ತರುತ್ತಿರುವ ರಘುಭಟ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

Categories
ಸಿನಿ ಸುದ್ದಿ

ಯೂಟ್ಯೂಬ್ ವಿಮರ್ಶಕರ ಮೇಲೆ ನಟ ಆದಿತ್ಯ ಗರಂ : ಫಿಲ್ಮ್ ಚೇಂಬರ್​ನಲ್ಲಿ ದೂರು- ಕಾನೂನು ಹೋರಾಟಕ್ಕೆ ತಯಾರಿ !

ನಟ ಆದಿತ್ಯ, ಯೂಟ್ಯೂಬ್ ವಿಮರ್ಶಕರ ಮೇಲೆ ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿರುವ ಅವರು, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ. ಹೌದು, ಇತ್ತೀಚೆಗಷ್ಟೆ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ನಟ ಆದಿತ್ಯ ಹರಿಹಾಯ್ದಿದ್ದರು. ವಿಡಿಯೋ ಮೂಲಕ ಯೂಟ್ಯೂಬ್ ವಿಮರ್ಶಕರ ಮೇಲೆ ಚಾಟಿ ಬೀಸಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಅವರು, ಫಿಲ್ಮ್ ಚೇಂಬರ್​ನಲ್ಲಿ ಯೂಟ್ಯೂಬರ್​ಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಮುಂದುವರೆದ ಅಧ್ಯಾಯ ಸಿನಿಮಾ ಬಗ್ಗೆ ಅವಹೇಳನಕಾರಿಯಾಗಿ ರಿವ್ಯೂ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

“ಮುಂದುವರೆದ ಅಧ್ಯಾಯʼ ಸಿನಿಮಾ ನಿರ್ದೇಶಕ ಬಾಲು ಚಂದ್ರಶೇಖರ್, ನಿರ್ಮಾಪಕರು ಹಾಗೂ ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ನಾಯಕ ಆದಿತ್ಯ, ಆರು ಮಂದಿ ಯೂಟ್ಯೂಬರ್​ಗಳ ಮೇಲೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿ ಮಾತನಾಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್‍ಎಮ್ ಸುರೇಶ್, ಕನ್ನಡ ಚಿತ್ರಗಳಿಗೆ, ಕನ್ನಡ ಚಿತ್ರರಂಗಕ್ಕೆ ಇವರೇ ಮಾರಕವಾಗುತ್ತಿದ್ದಾರೆ. ಹೀಗಾಗಿ ಸಿನಿಮಾಗಳನ್ನು ವಿಮರ್ಶೆ ಮಾಡದಂತೆ ಬ್ಯಾನ್ ಮಾಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಂದುವರೆದ ಅಧ್ಯಾಯ ಚಿತ್ರದ ನಾಯಕ ನಟ ಆದಿತ್ಯ, ಸಿನಿಮಾ ನೋಡಿದ ಹಿರಿಯ ಪತ್ರಕರ್ತರು, ಟಿವಿ ಹಾಗೂ ದಿನಪತ್ರಿಕೆಯ ಪರ್ತಕರ್ತರು ಮಾತ್ರವಲ್ಲ ಪ್ರೇಕ್ಷಕರೂ ಸಹ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಹಣದಾಸೆಗೆ ಕೆಲ ಯೂಟ್ಯೂಬರ್​ಗಳು ಹೀಗೆ ನೆಗೆಟಿವ್ ರಿವ್ಯೂ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ಪ್ರಕಟಿಸಿದ ಸಂದರ್ಭದಲ್ಲಿ ಒಳ್ಳೆಯ ವಿಮರ್ಶೆ ನೀಡಲು ಹಣ ಕೇಳಿದ್ದರು. ಆದರೆ ನಮ್ಮ ಚಿತ್ರತಂಡದವರು ಅವರಿಗೆ ಸ್ಪಂದಿಸಿರಲಿಲ್ಲ, ಹೀಗಾಗಿಯೇ ಈ ರೀತಿ ನೆಗಟಿವ್ ರಿವ್ಯೂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Categories
ಸಿನಿ ಸುದ್ದಿ

ನಿಮ್ಮೂರಿಗೆ ಬರಲಿದೆ ರಾಬರ್ಟ್‌ ಚಿತ್ರತಂಡ! 100 ಕೋಟಿ ಕ್ಲಬ್‌ ಸೇರುವ ಖುಷಿಗೆ ವಿಜಯಯಾತ್ರೆ

ಕನ್ನಡ ಚಿತ್ರರಂಗ ಈಗ ಹಬ್ಬದ ವಾತಾವರಣದಿಂದ ಕೂಡಿದೆ. ಹೌದು, ಈ ಮಾತಿಗೆ ಸಾಕ್ಷಿಯೆಂಬಂತೆ, ಚಿತ್ರಮಂದಿರಗಳಲ್ಲಿ ಜನ ಜಂಗುಳಿಯೂ ಇದೆ. “ರಾಬರ್ಟ್‌” ಅಂಥದ್ದೊಂದು ಮೋಡಿ ಮಾಡುವ ಮೂಲಕ ಜನರನ್ನು ಚಿತ್ರಮಂದಿರದತ್ತ ಕರೆತರುವಲ್ಲಿ ಯಶಸ್ವಿಯೂ ಆಗಿದೆ. ಚಿತ್ರತಂಡ ಈಗ ದೊಡ್ಡ ಯಶಸ್ಸು ಪಡೆದುಕೊಂಡಿದೆ.

ಇದೇ ಖುಷಿಯಲ್ಲಿರುವ ಚಿತ್ರತಂಡ ಇನ್ನು ಒಂದು ಹೆಜ್ಜೆ ಮುಂದೆ ಹೋಗಲು ಸಜ್ಜಾಗಿದೆ. ಇದು ಬೇರೇನೂ ಅಲ್ಲ, “ರಾಬರ್ಟ್‌” ಚಿತ್ರಕ್ಕೆ ಗೆಲುವು ತಂದುಕೊಂಡ ಕನ್ನಡಿಗರನ್ನು ಪ್ರೀತಿಯಿಂದಲೇ ಕಂಡುಕೊಂಡು, ಧನ್ಯವಾದ ಅರ್ಪಿಸಲು ತಯಾರಾಗಿದೆ. ಅಂದರೆ, ರಾಜ್ಯಾದ್ಯಂತ “ರಾಬರ್ಟ್‌” ಚಿತ್ರತಂಡ ವಿಜಯಯಾತ್ರೆ ಶುರುಮಾಡುತ್ತಿದೆ. ಕೊರೊನಾ ಹಾವಳಿ ಮಧ್ಯೆಯೇ “ರಾಬರ್ಟ್‌” ಚಿತ್ರಮಂದಿರಕ್ಕೆ ಬಂದು, ಬಾಕ್ಸಾಫೀಸ್‌ ಚಿಂದಿ ಉಡಾಯಿಸಿದೆ.

ಈ ಖುಷಿಯಲ್ಲಿರುವ ಸಿನಿಮಾ ತಂಡ, ಈಗ ನೂರು ಕೋಟಿ ಕ್ಲಬ್‌ ತಲುಪುವ ಹಾದಿಯಲ್ಲಿದೆ. ಹೀಗಾಗಿ ವಿಜಯಯಾತ್ರೆ ಆಯೋಜಿಸಿದ್ದು, ಮಾರ್ಚ್‌ 29ರಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಂಭ್ರಮ ಆಚರಿಸಲು ಸಜ್ಜಾಗಿದೆ. ಮಾರ್ಚ್‌ 30ರಂದು ಹುಬ್ಬಳ್ಳಿ, ಹಾವೇರಿ, ಮಾರ್ಚ್‌ 31ರಂದು ಶಿವಮೊಬ್ಗ, ಹಾಸನ, ತಿಪಟೂರು, ಏಪ್ರಿಲ್‌ 1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ, ಮದ್ದೂರಿಗೆ ಚಿತ್ರತಂಡ ತೆರಳಿ ಸಂಭ್ರಮ ಹಂಚಿಕೊಳ್ಳಲಿದೆ.

ಈಗಾಗಲೇ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಸಿನಿಮಾ ಕೂಡ ಗುಲ್ಬರ್ಗ, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಚಿತ್ರದುರ್ಗ ಮೈಸೂರು, ಮಂಡ್ಯ ಕಡೆಗಳಲ್ಲಿ ತನ್ನ ಅದ್ಧೂರಿಯಾದ ಯುವ ಸಂಭ್ರಮವನ್ನು ಆಯೋಜಿಸುವ ಮೂಲಕ ಜೋರು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಈಗ ದರ್ಶನ್‌ ಅಭಿನಯದ “ರಾಬರ್ಟ್‌” ದೊಡ್ಡ ಮಟ್ಟದ ಗೆಲುವು ಕಂಡಿದ್ದು, ಆ ಗೆಲುವನ್ನು ಕನ್ನಡಿಗರ ನಡುವೆ ಆಚರಿಸಲು ನಿರ್ಧರಿಸಿದೆ. ನಿರ್ಮಾಪಕ ಉಮಾಪತಿ, ನಿರ್ದೇಶ ತರುಣ್‌ ಸುಧೀರ್‌ ಅವರು ತಮ್ಮ ತಂಡದೊಂದಿಗೆ ವಿಜಯಯಾತ್ರೆ ನಡೆಸಲಿದ್ದಾರೆ.

Categories
ಸಿನಿ ಸುದ್ದಿ

ನೈಜ ಘಟನೆ ಮೇಲೊಂದು ತಾಜ್‌ ಮಹಲ್‌ ಕಟ್ಟಿದ ಯುವ ನಿರ್ದೇಶಕ -ಶೂಟಿಂಗ್‌ ಮುಗಿಸಿ ರಿಲೀಸ್‌ ಗೆ ರೆಡಿಯಾಯಿತು ದೇವರಾಜ್‌ ಕುಮಾರ್ ಅಭಿನಯದ ಚಿತ್ರ

ಯುವ ನಿರ್ದೇಶಕ ದೇವರಾಜ್‌ ” ತಾಜ್‌ಮಹಲ್‌ 2ʼ ಕಟ್ಟಿ ನಿಲ್ಲಿಸಿದ್ದಾರೆ. ಈ ಹಿಂದೆ ಇವರು ʼ ಡೇಂಜರ್‌ ಜೋನ್‌ʼ , ʼನಿಶ್ಯಬ್ದ -2ʼ ಹಾಗೂ ʼಅನೂಷ್ಕʼ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಅದಕ್ಕೂ ಮೊದಲು ಚಿತ್ರರಂಗದಲ್ಲಿ ಮೇಕಪ್‌ ಮ್ಯಾನ್‌ ಆಗಿ ಕೆಲಸ ಮಾಡಿದ್ದರು. ಅದೇ ಅನುಭದಲ್ಲಿ ಆಕ್ಷನ್‌ ಕಟ್‌ ಹೇಳುವ ಸಾಹಸಕ್ಕೆ ಕೈ ಹಾಕಿ, ಅದರಲ್ಲೂ ಸಕ್ಸಸ್‌ ಕಂಡರು. ಅಲ್ಲಿಂದೀಗ ಅವರು ಹೀರೋ ಆಗಿ ಪರಿಚಿಯಿಸಿಕೊ ಳ್ಳುತ್ತಿರುವ ಹೊಸ ಸಾಹಸಕ್ಕೆ ʼ ತಾಜ್‌ ಮಹಲ್‌ 2ʼ ಅಂತ ಹೆಸರಿಟ್ಟು ಕೊಂಡಿದ್ದಾರೆ. ಅಂದಹಾಗೆ ಅವರೇ ನಿರ್ಮಾಣ, ನಿರ್ದೇಶನದೊಂದಿಗೆ ಹೀರೋ ಆಗಿ ಅಭಿನಯಿಸಿರುವ ಚಿತ್ರ ʼತಾಜ್‌ ಮಹಲ್‌ 2ʼ.

ಕಳೆದ ವರ್ಷವೇ ಈ ಚಿತ್ರ ಸೆಟ್ಟೇರಿ, ಚಿತ್ರೀಕರಣ ಆರಂಭಿಸಿತ್ತು. ಅದೀಗ ಚಿತ್ರೀಕರಣ ಮುಗಿಸಿಕೊಂಡು ರಿಲೀಸ್‌ ಗೆ ರೆಡಿಯಾಗಿದೆ.ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ನಿರ್ಮಿಸಿದ ಅದ್ದೂರಿ ಸೆಟ್‌ನಲ್ಲಿ ಇತ್ತೀಚೆಗೆ ಹಾಡು ಹಾಗೂ ಆಕ್ಷನ್‌ ಸನ್ನಿವೇಶಗಳ ಚಿತ್ರೀಕರಣದೊಂದಿಗೆ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಪಕ್ಕಾ ಲವ್‌ ಕಮ್‌ ಆಕ್ಷನ್‌ ಸಿನಿಮಾ. ಹಾಗೆಯೇ ಎಮೋಷನ್‌ ಕಥಾ ಹಂದರದ ಚಿತ್ರವೂ ಹೌದು. ನಿರ್ದೇಶಕ ಕಮ್‌ ಚಿತ್ರದ ನಾಯಕ ನಟ ದೇವರಾಜ್‌ ಕುಮಾರ್‌ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರೀಕರಣ ಮುಕ್ತಾಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿದ್ದ ಚಿತ್ರ ತಂಡ ಚಿತ್ರೀಕರಣದ ಅನುಭವದ ಜತೆಗೆ ಮುಂದಿನ ಯೋಜನೆಗಳನ್ನು ಹೇಳಿಕೊಂಡಿತು.

” ಹೆಚ್ಚು ಕಡಿಮೆ ಒಂದು ಒಂದೂವರೆ ವರ್ಷ ಆಯಿತು. ಚಿತ್ರೀಕರಣ ಶುರುವಾಗಿ, ಎರಡು ವರ್ಷಗಳೇ ಆದವು. ಕೊರೋನಾ ಕಾರಣದಿಂದ ಸಿನಿಮಾ ಚಟುವಟಿಕೆ ಎಲ್ಲವೂ ಸ್ತಬ್ದವಾಗಿದ್ದವು. ಮತ್ತೆ ಚುಟುವಟಿಕೆ ಶುರುವಾದ ನಂತರ ಚಿತ್ರೀಕರಣ ಶುರುವಾಯಿತು. ಇತ್ತೀಚೆಗಷ್ಟೇ ಬೆಂಗೂರಿನ ಎಚ್‌ ಎಂಟಿ ಫ್ಯಾಕ್ಟರಿ ಆವರಣದಲ್ಲಿ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮುಗಿಸಿಕೊಳ್ಳುವ ಮೂಲಕ ಕುಂಬಳ ಕಾಯಿ ಒಡೆದಿದ್ದೇವೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ಶುರುವಾಗಿದೆ. ಮೇ ತಿಂಗಳಲ್ಲಿ ಫಸ್ಟ್‌ ಲುಕ್‌ ಟೀಸರ್‌ ಲಾಂಚ್‌ ಮಾಡುವ ಯೋಚನೆ ಇದೆ. ಆನಂತರ ಅಂದ್ರೆ ಸೆಪ್ಟೆಂಬರ್‌ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್‌ ಹಾಕಿಕೊಂಡಿದ್ದೇವೆʼ ಎಂದರು ನಿರ್ದೇಶಕ ಕಮ್‌ ನಾಯಕ ನಟ ದೇವರಾಜ್‌ ಕುಮಾರ್.


ಮುಂಬೈ ಮೂಲದ ಬೆಡಗಿ ಸಮೃದ್ಧಿ ಶುಕ್ಲ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ತಮ್ಮನ್ನು ನಾಯಕಿ ಆಗಿ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಚಿತ್ರೀಕರಣದ ಅನುಭವ ಚೆನ್ನಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅನುಭವ ಸಿಗುವ ಭರವಸೆ ಇದೆ ಎಂದರು. ವಿಕ್ಟರಿ ವಾಸು, ಕಾಕ್ರೋಚ್‌ ಸುಧೀ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ವಾಸು ಹಾಗೂ ಕಾಕ್ರೋಚ್‌ ಸುಧೀ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ ಸೇರಿದಂತೆ ವಿವಿಧೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸುಮಾರು 25 ದಿನಗಳ ಕಾಲ ಸಕಲೇಶಪುರದಲ್ಲಿ ಸೆಟ್ ಹಾಕಿ ಮಳೆಯಲ್ಲೇ ಚಿತ್ರೀಕರಣ ನಡೆದಿದೆಯಂತೆ. ಮನ್ವರ್ಷಿ ಚಿತ್ರಕ್ಕೆ ಸಂಬಾಷಣೆ ಬರೆದಿದ್ದಾರೆ. ಚಂದ್ರು ಬಂಡೆ ಅವರು ರೆಗ್ಯುಲರ್ ಆಕ್ಷನ್‌ಗಿಂತ ಬೇರೆ ಥರದಲ್ಲಿ ಆಕ್ಷನ್ ಕಂಪೋಜ್ ಮಾಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಬಸಣ್ಣಿ ಹಾಡಿನ ಖ್ಯಾ ತಿಯ ವರ್ಷ ಸುರೇಶ್ ಕೂಡ ಒಂದು ಹಾಡಿದ್ದಾರೆ.

Categories
ಸಿನಿ ಸುದ್ದಿ

ಅನಘ ಎಂಬ ಹಾರರ್‌ ಸಸ್ಪೆನ್ಸ್‌ ಥ್ರಿಲ್ಲರ್ – ಈ ವಾರ ಭಯಪಡಿಸಲು ಬರಲಿರುವ ಹೊಸಬರು!

ಕನ್ನಡದಲ್ಲಿ ಈಗ ಸಾಲು ಸಾಲು ಹೊಸಬರ ಸಿನಿಮಾಗಳು ಕಾಣಿಸಿಕೊಳ್ಳುತ್ತಿವೆ. ಆ ಸಾಲಿಗೆ ಈಗ “ಅನಘ” ಕೂಡ ಸೇರಿದೆ. ಹೌದು, ಈ ವಾರ ರಾಜ್ಯಾದ್ಯಂತ “ಅನಘ” ಬಿಡುಗಡೆಯಾಗುತ್ತಿದೆ. ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್‌ನಡಿ ಡಿ.ಪಿ. ಮಂಜುಳ ನಾಯಕ ಅವರು ನಿರ್ಮಾಣ ಮಾಡಿರುವ “ಅನಘ” ಚಿತ್ರವನ್ನು ರಾಜು ಎನ್.‌ ಆರ್.‌ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಮೂಲಕ ಅವರು ನಿರ್ದೇಶನ ಪಟ್ಟ ಅಲಂಕರಿಸಿದ್ದಾರೆ. ಕಥೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ನಿರ್ದೇಶಕರೇ ವಹಿಸಿಕೊಂಡಿದ್ದಾರೆ. “ಅನಘ” ಇದೊಂದು ಹಾರರ್‌ ಸಿನಿಮಾ. ಈವೆಗೆ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ, ಬಂದಿರುವ ಹಾರರ್‌ ಸಿನಿಮಾಗಳಿಗಿಂತಲೂ ಇದೊಂದು ವಿಭಿನ್ನ ಎನಿಸುವ ಸಿನಿಮಾ ಎಂಬುದು ಚಿತ್ರತಂಡದ ಮಾತು.

ಇಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಹಾರರ್‌ ಇದ್ದರೂ, ಇಲ್ಲಿ ಹಾಸ್ಯವೂ ಮೇಳೈಸಿದೆ. ಜೊತೆಯಲ್ಲಿ ಸಸ್ಪೆನ್ಸ್ ಕೂಡ ಇಲ್ಲಿರಲಿದೆ. ವಿಷೇಶವಾಗಿ ಚಿತ್ರದಲ್ಲಿ ನಾಲ್ಕು ಕ್ಲ್ಯೆಮ್ಯಾಕ್ಸ್‌ ಇದೆ. ಅದು ಹೇಗೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇಲ್ಲಿ ಮನರಂಜನೆಗೆ ಜಾಸ್ತಿ ಒತ್ತು ಕೊಟ್ಟು ಚಿತ್ರಕಥೆ ನಿರೂಪಿಸಲಾಗಿದೆ.
ಇನ್ನು, ಈ ಚಿತ್ರಕ್ಕೆ ಬೆಂಗಳೂರು ಹಾಗೂ ದೇವರಾಯನದುರ್ಗದ ಸುತ್ತಮುತ್ತಲ ಲೊಕೇಶನ್‍ಗಳಲ್ಲಿ ಚಿತ್ರಿಕರಣ ನಡೆಸಲಾಗಿದೆ. ಚಿತ್ರದಲ್ಲಿ ಶಂಕರ್ ಅವರ ಕ್ಯಾಮೆರಾ ಕೈಚಳಕವಿದೆ.

ಅವಿನಾಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾರರ್ ಹೆಚ್ಚಾಗಿರುವುದರಿಂದ ಹಿನ್ನೆಲೆ ಸಂಗೀತಕ್ಕೆ ಆದ್ಯತೆ ಇದೆ. ಅವಿನಾಶ್ ಅವರು ಹಿನ್ನೆಲೆ ಸಂಗೀತವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.

ರಂಗಭೂಮಿ ಪ್ರತಿಭೆಗಳಾದ ನಳೀನ್‍ಕುಮಾರ್ ಮತ್ತು ಪವನ್‍ಪುತ್ರ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಕಿರಣ್‍ರಾಜ, ದೀಪಾ ಮೋಹನ್, “ಸಿಲ್ಲಿಲಲ್ಲಿ” ಖ್ಯಾತಿಯ ಶ್ರೀನಿವಾಸ್‍ಗೌಡ್ರು, ಕಿರಣ ತೇಜ, ಕರಣ್ ಆರ್ಯನ್, ರೋಹಿತ್, ಖುಷಿ ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯಪಾತ್ರದಲ್ಲಿ ಮೋಟು ರವಿ, ಅಭಿ ಮತ್ತು ವೀರೇಶ(ಕೆಜಿಎಫ್) ಅವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಕಾಲಿವುಡ್‌ ನಟ ವಿಜಯ್‌ ಸೇತುಪತಿ ಜತೆಗೆ ಸಿನಿಮಾ ಮಾಡಲು ಹೊರಟಿದ್ರಂತೆ ನಿರ್ಮಾಪಕ ರವಿ ಆರ್‌. ಗರಣಿ !

ಕನ್ನಡದ ಕಿರುತೆರೆಗೆ ಚಿರಪರಿಚಿತವಾದ ಹೆಸರು ರವಿ ಆರ್.‌ ಗರಣಿ. ಸೀರಿಯಲ್ ನಿರ್ಮಾಣದ ಜತೆಗೆ ಸಿನಿಮಾದಲ್ಲೂ ಸಖತ್‌ ಸುದ್ದಿ ಮಾಡಿದವರು. ಅವರು ನಿರ್ಮಾಣ ಮಾಡಿದʼ ನಾನು ಅವನಲ್ಲ ಅವಳುʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಕೂಡ ನಿಮಗೆಲ್ಲ ಗೊತ್ತೇ ಇದೆ. ಈಗವರು ಸುಮಂತ್‌ ಶೈಲೇಂದ್ರ ಹಾಗೂ ಭಾವನಾ ಮೆನನ್‌ ಅಭಿನಯದ ʼಗೋವಿಂದ ಗೋವಿಂದʼ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಇದು ಇವರೇ ನಿರ್ಮಾಣದ ಚಿತ್ರ. ಈ ಚಿತ್ರಕ್ಕೂ ಮೊದಲು ಅವರು ಕಾಲಿವುಡ್‌ ನ ಬಹುಬೇಡಿಕೆಯ ನಟ ವಿಜಯ್‌ ಸೇತುಪತಿ ಜತೆಗೆ ಸಿನಿಮಾ ನಿರ್ಮಾಣ ಮಾಡುವ ಯೋಚನೆಯಲ್ಲಿದ್ರಂತೆ. ಇದಕ್ಕೆ ಕನ್ನಡದ ಜನಪ್ರಿಯ ನಿರ್ಮಾಪಕ ಶೈಲೇಂದ್ರ ಬಾಬು ಕೂಡ ಸಾಥ್‌ ನೀಡಿದ್ರಂತೆ. ಆದ್ರೆ ಆ ಹೊತ್ತಿಗೆ ವಿಜಯ್‌ ಸೇತುಪತಿ ಕಾಲ್‌ ಶೀಟ್‌ ಸಿಗುವುದು ಕಷ್ಟವಾಯಿ ತ್ತಂತೆ. ಹೆಚ್ಚು ಕಡಿಮೆ ಎರಡು ವರ್ಷ ಕಾಯಬೇಕಾಗ ಬಹುದು ಅಂದ್ರಂತೆ. ಸೀದಾ ಚೆನ್ನೈನಿಂದ ಬಂದವರಿಗೆ ಹೊಳೆದಿದ್ದೇ ” ಗೋವಿಂದ ಗೋವಿಂದʼ ಚಿತ್ರವಂತೆ.

ಚಿತ್ರ ತಂಡದ ಪ್ರಕಾರ ‘ ಗೋವಿಂದ ಗೋವಿಂದ’ ಚಿತ್ರ ಶುರುವಾಗುವುದಕ್ಕೆ ರವಿ. ಆರ್.‌ ಗರಣಿ ಅವರೇ ಕಾರಣ. ವಿಶೇಷ ಅಂದ್ರೆ, ಅವರದೇ ತಂಡ ಇದನ್ನು ಶುರು ಮಾಡಿದ್ದು. ರವಿ ಗರಣಿ ಪ್ರೊಡಕ್ಷನ್‌ ಮೂಲಕ ಈಗಾಗಲೇ ಒಂದೆರೆಡು ಧಾರಾವಾಹಿ ನಿರ್ದೇಶನ ಮಾಡಿದ ತಿಲಕ್‌ ಅವರೇ ಇದಕ್ಕೆ ನಿರ್ದೇಶಕರಾಗಿದ್ದಕ್ಕೂ ರವಿ ಆರ್. ಗರಣಿ ಕಾರಣವಂತೆ. ಹಾಗೆಯೇ ಕಥೆ, ಚಿತ್ರಕಥೆ ಸೇರಿದಂತೆ ಚಿತ್ರದ ಸ್ಕ್ರೀಫ್ಟ್‌ ವಿಚಾರದಲ್ಲೂ ರವಿ ಆರ್.‌ ಗರಣಿ ಹೆಚ್ಚು ನಿಗಾವಹಿಸಿ ಈ ಚಿತ್ರದ ನಿರ್ಮಾಣ ಮಾಡಿದ್ದಾರಂತೆ. ಹಾಗಾಗಿ ಪ್ರೇಕ್ಷಕರಿಗೆ ಒಂದೊಳ್ಳೆಯ ಚಿತ್ರದ ಸಿಗುತ್ತೆ ಎನ್ನುವ ವಿಶ್ವಾಸಚಿತ್ರ ತಂಡದ್ದು. ಅದೇ ಮಾತನ್ನು ನಿರ್ಮಾಪಕ ರವಿ ಆರ್. ಗರಣಿ ಕೂಡ ಹೇಳುತ್ತಾರೆ. ” ಈ ಚಿತ್ರ ಶುರುವಾಗಿದ್ದು ತುಂಬಾ ಆಕಸ್ಮಿಕ. ವಿಜಯ್ ಸೇತುಪತಿ ಅವರೊಂದಿಗೆ ಸಿನಿಮಾ ಮಾಡುವ ಪ್ಲಾನ್ ಇತ್ತು. ಕೊನೆಗೆ ಕೊರೋನಾದಿಂದ ಎಲ್ಲವೂ ಬದಲಾಯಿತು. ಆಗ ಶುರುವಾಗಿದ್ದೇ ಈ ಸಿನಿಮಾ.‌ ಪ್ರತಿ ಹಂತದಲ್ಲೂ ಈ ಸಿನಿಮಾ ಹೀಗೆಯೇ ಬರಬೇಕು ಅಂತ ಯೋಚಿಸಿ, ಚಿಂತಿಸಿ ನಿರ್ಮಾಣ ಮಾಡಿದ್ದೇವೆ. ಕ್ಲಾಸ್‌ ಮಾಸ್‌ ಅಂತ ವರ್ಗಿಕರಿಸುವುದಕ್ಕಿಂತ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ ಮಾಡಬೇಕು ಅನ್ನೋದು ನಮ್ಮ ಟಾರ್ಗೆಟ್‌ ಆಗಿತ್ತು. ಆ ಪ್ರಕಾರವೇ ಈ ಸಿನಿಮಾ ಮೂಡಿಬಂದಿದೆ. 2021ಕ್ಕೆ ಇದೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲಾ ನಂಬಿಕೆ ನಮಗಿದೆ. ಜತೆಗೆ ಕೊರೋನಾ ಕಾರಣಕ್ಕೆ ಜನ ಚಿತ್ರಮಂದಿರಕ್ಕೆ ಬಂದಿಲ್ಲ. ಎಲ್ಲಾ ಮನೆ ಹಿಡಿದು ಕುಳಿತಿದ್ದಾರೆ. ಅವರೆಲ್ಲ ಹೊರ ಬಂದು ಈ ಸಿನಿಮಾ ನೋಡುವುದು ಗ್ಯಾರಂಟಿ ʼ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ನಿರ್ಮಾಪಕ ರವಿ. ಆರ್.‌ ಗರಣಿ.

error: Content is protected !!