ಮಡಿ ಮಡಿಲಿಗೆ ಎರಡು ಪ್ರಶಸ್ತಿಯ ಗರಿ: ರಿಫ್ಟ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಹೆಮ್ಮೆ

ಕನ್ನಡದ ನಿರ್ದೇಶಕ ಸುಧೀರ್‌ ಅತ್ತಾವರ್‌ ನಿರ್ದೇಶನದ “ಮಡಿ” ಸಿನಿಮಾಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜೊತೆಯಲ್ಲಿ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿದೆ.

ರಿಫ್ಟ್‌ ಚಿತ್ರೋತ್ಸವದಲ್ಲಿ ಅಮೆರಿಕನ್‌ ಸಿನಿಮಾ ಫಲಾಫೆಲ್‌ ಮತ್ತು ಫ್ರೆಂಚ್‌ ಚಿತ್ರ ಸೋಲೇಮಿಯೋ ಚಿತ್ರಗಳು “ಮಡಿ” ಚಿತ್ರಕ್ಕೆ ತೀವ್ರ ಸ್ರ್ಧೆ ನೀಡಿದ್ದರೂ, ಅಂತಿಮವಾಗಿ, ಆ ಎರಡೂ ಚಿತ್ರಗಳನ್ನು ಹಿಂದಿಟ್ಟ ಕನ್ನಡದ “ಮಡಿ” ಚಿತ್ರ ತೀರ್ಪುಗಾರ ಪ್ರಶಂಸೆಗೆ ಪಾತ್ರವಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಕ್ಸಸ್‌ ಫಿಲಂಸ್‌ ಬ್ಯಾನರ್‌ನಡಿ ವಿದ್ಯಾಧರ್‌ ಶೆಟ್ಟಿ ಹಾಗೂ ಸೂರಜ್‌ ಜಾಲ್ಸ್‌ ನಿರ್ಮಾಣ ಮಾಡಿರುವ ಈ ಚಿತ್ರ, ಕರಾವಳಿಯ ಭಾಗದ ಜನಪದ ಕಲೆ “ಆಟಿ ಕಳಂಜ”ದ ಹಿನ್ನೆಲೆಯ ಕಥಾಹಂದರ ಹೊಂದಿದೆ. ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ 40ಕ್ಕೂ ಹೆಚ್ಚು ಕಿರುಚಿತ್ರಗಳು ಪಾಲ್ಗೊಂಡಿದ್ದವು.

“ಮಡಿ” ಬಗ್ಗೆ ಹೇಳುವುದಾದರೆ, “ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್.‌ ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿದೆ. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿರುವ ಸುಧೀರ್‌ ಅತ್ತಾವರ್‌ ಅವರ “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ. ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದಾರೆ, ಹೊಗಳಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ. ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ.

ಕಥಾಹಂದರದಲ್ಲಿರುವ ಗಟ್ಟಿತನ. ಅಲ್ಲಿನ ಕೀಳರಿಮೆ, ಕಿತ್ತು ತಿನ್ನೋ ಬಡತನ, ಏನೂ ಅರಿಯದ ಹುಡುಗನೊಬ್ಬನ ಹಸಿವು, ಪ್ರಮುಖವಾಗಿ ಗಮನ ಸೆಳೆಯುವ ನಾಯಕಿ. ಆಕೆಯಲ್ಲಿರುವ ಭಯ, ಪುಷ್ಕರಣಿಯಲ್ಲಿ ಜೀವವೊಂದು ಬದುಕಲು ಹೆಣಗಾಡುತ್ತಿದ್ದರೆ, ಅತ್ತ, ಪುರೋಹಿತ ಶಾಹಿಗಳಿಗೆ ಮಡಿಯೇ ಮುಖ್ಯ ಎಂಬ ಧ್ಯೇಯ… ಇವೆಲ್ಲವೂ ವಾಸ್ತವತೆಯನ್ನು ಬಿಂಬಿಸುವಂತಿವೆ. ಒಟ್ಟಾರೆ ಈ ಸಮಾಜದ ವ್ಯವಸ್ಥೆಯ ಅವ್ಯವಸ್ಥೆಯನ್ನು ಮನತಟ್ಟುವಂತೆ ಸೆರೆ ಹಿಡಿದಿದ್ದರಿಂದಲೇ ಈ ಚಿತ್ರಕ್ಕೆ ರೀಫ್ಟ್‌ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿಗಳು ಸಿಕ್ಕಿವೆ.ನಿರ್ದೇಶಕ ಸುಧೀರ್ ಅತ್ತಾವರ್ ಅವರು, “ಮಡಿ” ಮೂಲಕ ಸಮಾಜದಲ್ಲಿರುವ ಹುಳುಕನ್ನ ಎತ್ತಿ ಹಿಡಿಯುವ ಪ್ರಯತ್ನ ಮಾಡಿರುವುದರಿಂದ, ಅವರ ಪರಿಶ್ರಮಕ್ಕೊಂದು ಫಲ ಸಿಕ್ಕಂತಾಗಿದೆ.

ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

Related Posts

error: Content is protected !!