ಕನ್ನಡದ ಕಿರುತೆರೆಗೆ ಚಿರಪರಿಚಿತವಾದ ಹೆಸರು ರವಿ ಆರ್. ಗರಣಿ. ಸೀರಿಯಲ್ ನಿರ್ಮಾಣದ ಜತೆಗೆ ಸಿನಿಮಾದಲ್ಲೂ ಸಖತ್ ಸುದ್ದಿ ಮಾಡಿದವರು. ಅವರು ನಿರ್ಮಾಣ ಮಾಡಿದʼ ನಾನು ಅವನಲ್ಲ ಅವಳುʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಕೂಡ ನಿಮಗೆಲ್ಲ ಗೊತ್ತೇ ಇದೆ. ಈಗವರು ಸುಮಂತ್ ಶೈಲೇಂದ್ರ ಹಾಗೂ ಭಾವನಾ ಮೆನನ್ ಅಭಿನಯದ ʼಗೋವಿಂದ ಗೋವಿಂದʼ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಇದು ಇವರೇ ನಿರ್ಮಾಣದ ಚಿತ್ರ. ಈ ಚಿತ್ರಕ್ಕೂ ಮೊದಲು ಅವರು ಕಾಲಿವುಡ್ ನ ಬಹುಬೇಡಿಕೆಯ ನಟ ವಿಜಯ್ ಸೇತುಪತಿ ಜತೆಗೆ ಸಿನಿಮಾ ನಿರ್ಮಾಣ ಮಾಡುವ ಯೋಚನೆಯಲ್ಲಿದ್ರಂತೆ. ಇದಕ್ಕೆ ಕನ್ನಡದ ಜನಪ್ರಿಯ ನಿರ್ಮಾಪಕ ಶೈಲೇಂದ್ರ ಬಾಬು ಕೂಡ ಸಾಥ್ ನೀಡಿದ್ರಂತೆ. ಆದ್ರೆ ಆ ಹೊತ್ತಿಗೆ ವಿಜಯ್ ಸೇತುಪತಿ ಕಾಲ್ ಶೀಟ್ ಸಿಗುವುದು ಕಷ್ಟವಾಯಿ ತ್ತಂತೆ. ಹೆಚ್ಚು ಕಡಿಮೆ ಎರಡು ವರ್ಷ ಕಾಯಬೇಕಾಗ ಬಹುದು ಅಂದ್ರಂತೆ. ಸೀದಾ ಚೆನ್ನೈನಿಂದ ಬಂದವರಿಗೆ ಹೊಳೆದಿದ್ದೇ ” ಗೋವಿಂದ ಗೋವಿಂದʼ ಚಿತ್ರವಂತೆ.
ಚಿತ್ರ ತಂಡದ ಪ್ರಕಾರ ‘ ಗೋವಿಂದ ಗೋವಿಂದ’ ಚಿತ್ರ ಶುರುವಾಗುವುದಕ್ಕೆ ರವಿ. ಆರ್. ಗರಣಿ ಅವರೇ ಕಾರಣ. ವಿಶೇಷ ಅಂದ್ರೆ, ಅವರದೇ ತಂಡ ಇದನ್ನು ಶುರು ಮಾಡಿದ್ದು. ರವಿ ಗರಣಿ ಪ್ರೊಡಕ್ಷನ್ ಮೂಲಕ ಈಗಾಗಲೇ ಒಂದೆರೆಡು ಧಾರಾವಾಹಿ ನಿರ್ದೇಶನ ಮಾಡಿದ ತಿಲಕ್ ಅವರೇ ಇದಕ್ಕೆ ನಿರ್ದೇಶಕರಾಗಿದ್ದಕ್ಕೂ ರವಿ ಆರ್. ಗರಣಿ ಕಾರಣವಂತೆ. ಹಾಗೆಯೇ ಕಥೆ, ಚಿತ್ರಕಥೆ ಸೇರಿದಂತೆ ಚಿತ್ರದ ಸ್ಕ್ರೀಫ್ಟ್ ವಿಚಾರದಲ್ಲೂ ರವಿ ಆರ್. ಗರಣಿ ಹೆಚ್ಚು ನಿಗಾವಹಿಸಿ ಈ ಚಿತ್ರದ ನಿರ್ಮಾಣ ಮಾಡಿದ್ದಾರಂತೆ. ಹಾಗಾಗಿ ಪ್ರೇಕ್ಷಕರಿಗೆ ಒಂದೊಳ್ಳೆಯ ಚಿತ್ರದ ಸಿಗುತ್ತೆ ಎನ್ನುವ ವಿಶ್ವಾಸಚಿತ್ರ ತಂಡದ್ದು. ಅದೇ ಮಾತನ್ನು ನಿರ್ಮಾಪಕ ರವಿ ಆರ್. ಗರಣಿ ಕೂಡ ಹೇಳುತ್ತಾರೆ. ” ಈ ಚಿತ್ರ ಶುರುವಾಗಿದ್ದು ತುಂಬಾ ಆಕಸ್ಮಿಕ. ವಿಜಯ್ ಸೇತುಪತಿ ಅವರೊಂದಿಗೆ ಸಿನಿಮಾ ಮಾಡುವ ಪ್ಲಾನ್ ಇತ್ತು. ಕೊನೆಗೆ ಕೊರೋನಾದಿಂದ ಎಲ್ಲವೂ ಬದಲಾಯಿತು. ಆಗ ಶುರುವಾಗಿದ್ದೇ ಈ ಸಿನಿಮಾ. ಪ್ರತಿ ಹಂತದಲ್ಲೂ ಈ ಸಿನಿಮಾ ಹೀಗೆಯೇ ಬರಬೇಕು ಅಂತ ಯೋಚಿಸಿ, ಚಿಂತಿಸಿ ನಿರ್ಮಾಣ ಮಾಡಿದ್ದೇವೆ. ಕ್ಲಾಸ್ ಮಾಸ್ ಅಂತ ವರ್ಗಿಕರಿಸುವುದಕ್ಕಿಂತ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ ಮಾಡಬೇಕು ಅನ್ನೋದು ನಮ್ಮ ಟಾರ್ಗೆಟ್ ಆಗಿತ್ತು. ಆ ಪ್ರಕಾರವೇ ಈ ಸಿನಿಮಾ ಮೂಡಿಬಂದಿದೆ. 2021ಕ್ಕೆ ಇದೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲಾ ನಂಬಿಕೆ ನಮಗಿದೆ. ಜತೆಗೆ ಕೊರೋನಾ ಕಾರಣಕ್ಕೆ ಜನ ಚಿತ್ರಮಂದಿರಕ್ಕೆ ಬಂದಿಲ್ಲ. ಎಲ್ಲಾ ಮನೆ ಹಿಡಿದು ಕುಳಿತಿದ್ದಾರೆ. ಅವರೆಲ್ಲ ಹೊರ ಬಂದು ಈ ಸಿನಿಮಾ ನೋಡುವುದು ಗ್ಯಾರಂಟಿ ʼ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ನಿರ್ಮಾಪಕ ರವಿ. ಆರ್. ಗರಣಿ.