Categories
ಸಿನಿ ಸುದ್ದಿ

ರಾಯರ ದರುಶನ ಪಡೆದ ಚಾಲೆಂಜಿಂಗ್‌ ಸ್ಟಾರ್‌

ʼರಾಬರ್ಟ್‌ʼ ಚಿತ್ರದ ಭರ್ಜರಿ ಸಕ್ಸಸ್‌ ಬೆನ್ನಲೇ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದರು. ಬುಧವಾರ ಸ್ನೇಹಿತರೊಂದಿಗೆ ಅಲ್ಲಿಗೆ ಭೇಟಿಕೊಟ್ಟು ರಾಯರ ದರುಶನ ಮಾಡಿ, ಆಶೀರ್ವಾದ ಪಡೆದರು.

ರಾಯರ ದರ್ಶನ ಪಡೆದ ನಂತರ ಅಲ್ಲಿನ ಗೋ ಶಾಲೆಗೆ ಹೋಗಿ, ತಮ್ಮಿಷ್ಟದ ಹಸುಗಳನ್ನು ಮೈದಡವಿ ವೀಕ್ಷಿಸಿದ್ದಾರೆ. ಮಂತ್ರಾಲಯದ ರಾಯರ ಮಠವೂ ಬಹು ಕಾಲದಿಂದಲೂ ಗೋಶಾಲೆಯನ್ನು ನಿರ್ವಹಿಸುತ್ತಾ ಬರುತ್ತಿದೆ. ದೇಶದ ನಾನಾ ತಳಿಯ ಹಸುಗಳು ಅಲ್ಲಿವೆ.

ಮೊದಲಿನಿಂದಲೂ ನಟ ದರ್ಶನ್‌ ಅವರಿಗೆ ಪ್ರಾಣಿ-ಪಕ್ಷಿಗಳ ಮೇಲೆ ಅತೀವ ಪ್ರೀತಿ. ಮೈಸೂರಿನಲ್ಲಿರುವ ಅವರ ಫಾರ್ಮ್‌ ಹೌಸ್‌ ನಲ್ಲಿ ತಮಿಷ್ಟದ ಪ್ರಾಣಿ-ಪಕ್ಷಿಗಳನ್ನು ದೂರದೂರುಗಳಿಂದ ಖರೀದಿಸಿ ತಂದು ಸಾಕುತ್ತಿರುವುದೇ ಅದಕ್ಕೆ ಸಾಕ್ಷಿ. ಅಂತೆಯೇ ರಾಯರ ದರ್ಶನಕ್ಕೆ ಅಂತ ಮಂತ್ರಾಲಯಕ್ಕೆ ಹೋದರೂ, ಅಲ್ಲಿನ ಗೋಶಾಲೆಯೇ ಅವರ ಪ್ರಮುಖ ಆಕರ್ಷಣೆ ಆಗಿದ್ದು ವಿಶೇಷ.

Categories
ಸಿನಿ ಸುದ್ದಿ

ಯಾಕೋ… ಮನೆ ನೆನಪಾಗ್ತಿದೆ ಅಂತ ಗಳ ಗಳನೆ ಕಣ್ಣೀರಿಟ್ಟ ಪ್ರಶಾಂತ್‌ ಸಂಬರಗಿ !

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಮನೆಯಲ್ಲಿ ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ಇದುವರೆಗೂ ಕಾಣಿಸಿಕೊಂಡಿದ್ದೇ ಬೇರೆ. ಟಾಸ್ಕ್‌ ಗಳಲ್ಲಿ ಗೆದ್ದಾಗ ಕುಪ್ಪಳಿಸಿ ಕುಣಿಯುತ್ತಾ, ಸೋತವನ್ನು ಸಂತೈಸುತ್ತಾ, ಒಮ್ಮೊಮ್ಮೆ ಉಳಿದ ಕಂಟೆಸ್ಟೆಂಟ್‌ ಮೇಕೆ ಗರಂ ಆಗುತ್ತಾ ಕಾಣಿಸಿಕೊಂಡಿದ್ದೇ ಹೆಚ್ಚು. ಬಟ್‌, ಈಗ ಅವರು ಕೂಡ ನರ್ವಸ್‌ ಆಗಿದ್ದಾರೆ. ಹೆಚ್ಚು ಕಡಿಮೆ ಈಗ ಹೆಚ್ಚು ಮೌನಕ್ಕೆ ಶರಣಾಗುತ್ತಿದ್ದಾರೆ.  ಅದು ಕೂಡ ಟಾಸ್ಕ್‌ ನ ಗಿಮಿಕ್‌ ಅಂತಲೇ ಇರಬಹುದು. ಆದ್ರೆ, ಎಮೋಷನ್‌ ಅಂತ ಇದೆಯಲ್ಲ, ಅದು ಕಣ್ಣೀರಿನ ಮೂಲಕ ವಾಸ್ತವ ಹೇಳುತ್ತೆ. ಆ ಪ್ರಕಾರ ಪ್ರಶಾಂತ್‌ ಸಂಬರಗಿ ಈಗ  ಎಮೋಷನ್ಸ್‌ ಗೆ ಒಳಗಾಗಿದ್ದಾರೆ. ಬುಧವಾರದ ಎಪಿಸೋಡ್‌ ನಲ್ಲಿ ಸಂಬರಗಿ ನಿಜಕ್ಕೂ ಅತ್ತು ಬಿಟ್ಟರು.

ಮನೆ ನೆನಪಾಯ್ತು ಬಿಗ್‌ ಬಾಸ್…

ಕನ್ಪೆಸಷನ್‌ ರೂಂ ನಲ್ಲಿ ಕಣ್ಣೀರಿಡುತ್ತಾ, ಯಾಕೋ ಮನೆ ನೆನಪಾಗ್ತಿದೆ… ಬಿಗ್‌ ಬಾಸ್‌ ಅಂತ ಗಳ ಗಳನೆ ಅತ್ತು ಬಿಟ್ಟರು. ಕನ್ಪೆಷನ್‌ ರೂಂಗೆ ಬರಲು ಹೇಳಿ ಬಿಗ್‌ ಬಾಸ್‌ ಕಡೆಯಿಂದ ಪ್ರಶಾಂತ್‌ ಸಂಬರಗಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಯಿತು. ಬಿಗ್ ಬಾಸ್ ಬಳಿ ಏನಾದರೂ ಹೇಳಲು ಬಯಸುತ್ತೀರಾ ಅಂತ ಹೇಳಿದಾಗ, ಪ್ರಶಾಂತ್ ಸಂಬರಗಿ ಅತ್ತು ಬಿಟ್ಟರು. ಕಣ್ಣೀರು ಸುರಿಸುತ್ತಾ ಮನೆ ಜ್ಞಾಪಕ ಬಂತು ಅಂತ ಅತ್ತರು. ಮೆಡಿಸನ್ ಕೊಟ್ಟ ತಕ್ಷಣ ಮನೆಯವರು ನೆನಪಾದರು ಸರ್. ನನ್ನ ಮನೆಯಲ್ಲಿ ನನ್ನ ಬಗ್ಗೆ ಕಾಳಜಿಯಿದೆ‌. ಒಬ್ಬರು ಆಯುರ್ವೇದಿಕ್ ಡಾಕ್ಟರ್ ಇದ್ದಾರೆ. ಅವರೇ‌ ನನಗೆ ಮದ್ದು ಕೊಡುವುದು. ಈಗ ಅವರು ಟಿವಿ‌‌ ನೋಡುತ್ತಿರುತ್ತಾರೆ.

ನಾನಂದ್ರೆ ಎಲ್ಲರಿಗೂ ಇಷ್ಟ…

ಆರೋಗ್ಯ ಸಮಸ್ಯೆಯಿಂದ ನನ್ನ ಗಂಟಲ ಧ್ವನಿ ಹೋಗಿದೆ ಅಂತ ಅವರಿಗೆ ಗೊತ್ತಾಗಿ ಬಿಗ್ ಬಾಸ್ ಮನೆಗೆ  ಔಷಧ ಕಳಿಸಿದ್ದಾರೆ. ಬಿಗ್ ಬಾಸ್ ನಿಂದ ಆಚೆಗೆ ಎಲ್ಲರಿಗೂ ನನ್ನ ಕಂಡರೆ ಇಷ್ಟ. ಹಾಗೆಯೇ  ಆಯುರ್ವೇದಿಕ್ ಡಾಕ್ಟರ್  ಒಬ್ಬರಿಗೂ ನನ್ನ ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಅಂತ ಹೇಳುತ್ತ ಗೊಳ ಗೊಳ ಅತ್ತುಬಿಟ್ಟರು.  ನನಗೆ ಮೆಡಿಸಿನ್ ಕೊಡಲೇ ಬಾರದಿತ್ತು ಅಂತ ಹೇಳಿ, ಸಾರಿ ನಾನು ಅತ್ತುಬಿಟ್ಟೆ ಅಂತ ಕಣ್ಣೊರೆಸಿಕೊಂಡರು.

Categories
ಸಿನಿ ಸುದ್ದಿ

ಸಲಗ ಪ್ರಮೋಷನಲ್‌ ಸಾಂಗ್‌ಗೆ ಸಿದ್ದಿ ಮಂದಿ ಸ್ಟೆಪ್! ರೆಡಿಯಾಗುತ್ತಿದೆ ದುಬಾರಿ ಹಾಡು

“ದುನಿಯಾ” ವಿಜಯ್‌ ಇದೇ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸುತ್ತಿರುವ “ಸಲಗ” ಚಿತ್ರ ಈಗಾಗಾಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಒಂದಷ್ಟು ಕುತೂಹಲಕ್ಕೂ ಕಾರಣವಾಗಿದೆ. ಆ ಬಗ್ಗೆ ಹೇಳುವುದಾದರರೆ, ಮೊದಲ ಸಲ ವಿಜಯ್‌ ಆಕ್ಷನ್‌ ಕಟ್‌ ಹೇಳಿದ್ದಾರೆಂಬುದು ಒಂದೆಡೆಯಾದರೆ, “ಸಲಗ” ಒಂದೊಳ್ಳೆಯ ಮಾಸ್‌ ಫೀಲ್‌ ಕಥಾಹಂದರ ಇರುವ ಚಿತ್ರ ಅನ್ನೋದು ಇನ್ನೊಂದೆಡೆ, ಮತ್ತೊಂದೆಡೆ ಸಖತ್‌ ಹಿಟ್‌ ಆಗಿ, ವೈರಲ್‌ ಆಗಿರುವ ಹಾಡುಗಳು ಬೇರೆ. ಪೋಸ್ಟರ್‌ನಲ್ಲೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿರುವ “ಸಲಗ” ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ‌

ಅದೇನೆಂದರೆ, ಮತ್ತೊಂದು ದುಬಾರಿ ವೆಚ್ಚದಲ್ಲಿ ಹಾಡು ತಯಾರಾಗುತ್ತಿದೆ. ಹೌದು, ಈ ಬಾರಿ “ದುನಿಯಾ” ದೊಡ್ಡ ಯಶಸ್ಸನ್ನು ಬೆನ್ನತ್ತಿ ಹೊರಟಿದ್ದಾರೆ. ಆ ಗುರಿ ಕೂಡ ಹತ್ತಿರವಿದೆ. ಆ ನಿಟ್ಟಿನಲ್ಲಿ ಅವರು “ಸಲಗ” ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ, ಎಲ್ಲವನ್ನೂ ಮಾಡುತ್ತಿದ್ದಾರೆ.

ಚಿತ್ರದ ಪ್ರಮೋಷನಲ್‌ ಸಾಂಗ್‌ಗಾಗಿ ದುಬಾರಿ ವೆಚ್ಚ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ಹಾಡಲ್ಲಿ ಸಾಕಷ್ಟು ವಿಶೇಷತೆಗಳಿವೆ ಅನ್ನೋದು ಕೂಡ ವಿಶೇಷವೇ.
ಈ ಪ್ರಚಾರದ ಹಾಡಲ್ಲಿ ಸಿದ್ಧಿ ಜನರೊಂದಿಗೆ “ದುನಿಯಾ” ವಿಜಯ್‌ ಬೆರೆತು, ಮಾಸ್‌ ಲುಕ್‌ನಲ್ಲಿ ಸ್ಟೆಪ್‌ ಹಾಕಲಿದ್ದಾರೆ. ಸುಮಾರಿ 70 ಜನರ ನೃತ್ಯ ಕಲಾವಿದರು ವಿಜಯ್‌ ಜೊತೆ ಸ್ಟೆಪ್‌ ಹಾಕುತ್ತಿದ್ದಾರೆ.

ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮತ್ತು ಶೆರ್ಟಾನ್‌ ಹೋಟೆಲ್‌ನಲ್ಲಿ ಈ ಪ್ರಮೋಷನಲ್‌ ಸಾಂಗ್‌ ಚಿತ್ರೀಕರಣಗೊಳ್ಳುತ್ತಿದೆ. ಸುಮಾರು ೭೫ ಜನ ಸಿದ್ಧಿ ಕಲಾವಿದರೊಂದಿಗೆ ವಿಜಯ್‌ ವಿಶಿಷ್ಠ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಪಿ.ಶ್ರೀಕಾಂತ್‌ ನಿರ್ಮಾಣದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.ಈ ಹಾಡಿಗೆ, ಮುರಳಿ‌ ಮಾಸ್ಟರ್ ಸ್ಟೆಪ್‌ ಹೇಳಿಕೊಡಲಿದ್ದಾರೆ. ಏಪ್ರಿಲ್‌ನಲ್ಲಿ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿರುವ “ಸಲಗ” ಈಗ ಪ್ರಚಾರಕ್ಕೂ ತಯಾರಾಗಿದೆ.

Categories
ಸಿನಿ ಸುದ್ದಿ

ಸಿಎಂ ಭೇಟಿ ಮಾಡಿದ ನಟ ಕಿಚ್ಚ ಸುದೀಪ್‌ – ದಿಢೀರ್ ಭೇಟಿಯ ಉದ್ದೇಶವಾದ್ರೂ ಏನು?

ನಟ ಕಿಚ್ಚ ಸುದೀಪ್‌ ಗುರುವಾರ ಬೆಳ್ಳಗ್ಗೆ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದೀಪ್‌, ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಿಎಂ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹಾಜರಿದ್ದರು. ಸುದೀಪ್‌ ಅವರ ಜತೆಗೆ ನಿರ್ಮಾಪಕ ಜಾಕ್‌ ಮಂಜು ಕೂಡ ಇದ್ದರು. ಈ ಭೇಟಿಯ ಉದ್ದೇಶ ಗೊತ್ತಾಗಿಲ್ಲ. ಆದರೆ ಇದೊಂದು ಔಪಚಾರಿಕ ಭೇಟಿ ಮಾತ್ರ ಅಂತ ಸುದೀಪ್‌ ಅವರ ಆಪ್ತ ವಲಯ ಹೇಳಿದೆ.

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರೊಂದಿಗೆ ನಟ ಸುದೀಪ್‌ ಚರ್ಚೆ ನಡೆಸಿದರು. ಆನಂತರ ಅಲ್ಲಿಂದ ಹೊರಬಂದ ಸುದೀಪ್‌, ಭೇಟಿಯ ಉದ್ದೇಶ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ಇದೊಂದು ಔಪಚಾರಿಕ ಭೇಟಿ ಮಾತ್ರ ಎಂದಷ್ಟೇ ಹೇಳಲಾಗಿದೆ. ಈ ನಡುವೆ ಸಿಎಂ ಭೇಟಿಯ ಕುರಿತು “ಸಿನಿ ಲಹರಿಗೆ ʼ ಪ್ರತಿಕ್ರಿಯಿಸಿದ ನಿರ್ಮಾಪಕ ಜಾಕ್‌ ಮಂಜು, ಅಂತಹದ್ದೇನು ಮಹತ್ವದ ಕಾರಣಕ್ಕೆ ಸುದೀಪ್‌ ಅವರು ಸಿಎಂ ಭೇಟಿ ಮಾಡಿಲ್ಲ. ಅದೊಂದು ಥ್ಯಾಂಕ್ಸ್‌ ಗಿವಿಂಗ್‌ ಭೇಟಿ ಮಾತ್ರ. ಸಿಎಂ ಅವರ ಆಹ್ವಾನದ ಮೇರೆಗೇ ಅವರು ಭೇಟಿಮಾಡಿದ್ದು ಅಂತ ಹೇಳಿದರು.
ನಟ ಕಿಚ್ಚ ಸುದೀಪ್‌ ಅವರ ಸಿನಿ ಜರ್ನಿಯ 25 ವರ್ಷಗಳ ಹಿನ್ನೆಯಲ್ಲಿ “ಕೋಟಿ ಗೊಬ್ಬ 3ʼ ಚಿತ್ರ ತಂಡದಿಂದ ಮೊನ್ನೆಯಷ್ಟೇ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ ನಲ್ಲಿ ಬೆಳ್ಳಿ ಹಬ್ಬ ಆಯೋಜಿಸಿ, ಸುದೀಪ್‌ ಅವರನ್ನು ಸನ್ಮಾನಿಸಿತು. ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಬಂದಿದ್ದರು. ಸುದೀಪ್‌ ಅವರನ್ನು ಸಿಎಂ ಯುಡಿಯೂರಪ್ಪ ಅವರೇ ಸನ್ಮಾನಿಸಿ, ಮಾತನಾಡಿದ್ದರು.

ಅಲ್ಲದೆ ಸುಮಾರು ಒಂದೂವರೆ ಗಂಟೆಯಷ್ಟು ಕಾಲ ಸಮಾರಂಭದಲ್ಲಿದ್ದು, ತಂಡಕ್ಕೆ ಖುಷಿ ಕೊಟ್ಟಿದ್ದರು. ಅದೇ ಕಾರಣಕ್ಕೆ ಅವರಿಗೊಂದು ಅಭಿನಂದನೆ ಹೇಳುವ ಕಾರಣಕ್ಕೆ ಸುದೀಪ್‌ ಅವರಿಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರಂತೆ.
ಅಷ್ಟು ಮಾತ್ರವಲ್ಲ, ಇನ್ನೊಂದು ಇಂಟೆರೆಸ್ಟಿಂಗ್‌ ಸಂಗತಿಯೂ ಕೂಡ ಇದಕ್ಕೆ ಕಾರಣ. ಸುದೀಪ್‌ ಹಾಗೂ ಸಿಎಂ ಯುಡಿಯೂರಪ್ಪ ಒಂದೇ ಜಿಲ್ಲೆಯವರು. ಹಾಗೆಯೇ ಸುದೀಪ್‌ ಅಂದ್ರೆ ಸಿಎಂ ಮನೆಯವರಿಗೆ ತುಂಬಾ ಇಷ್ಟವಂತೆ. ಸಿಎಂ ಪುತ್ರ ವಿಜಯೇಂದ್ರ ಅವರ ಜತೆಗೂ ತುಂಬಾ ಒಡನಾಟವಂತೆ. ಹಾಗಾಗಿ ಬಿಡುವಿದ್ದಾಗ ಒಮ್ಮೆ ಮನೆಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಅಂತ ಸುದೀಪ್‌ ಅವರಿಗೆ ಮುಖ್ಯ ಮಂತ್ರಿಗಳೇ ಹೇಳಿದ್ದರಂತೆ. ಹಾಗಾಗಿಯೇ ಗುರುವಾರ ಬೆಳಗ್ಗೆ ಸುದೀಪ್‌ , ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರಂತೆ. ಹಾಗಂತ ನಿರ್ಮಾಪಕ ಜಾಕ್‌ ಮಂಜು ಹೇಳಿಕೊಂಡರು.

Categories
ಸಿನಿ ಸುದ್ದಿ

ಎಲ್ಲವೂ ಹೊಸಬರ ಮಯಂ- ಮೊದಲ ಹಂತ ಪೂರೈಸಿದ ಸರ್ವಂ, ಎರಡನೇ ಹಂತಕ್ಕೆ ಸಜ್ಜು

ಕೊರೊನಾ ಹಾವಳಿ ಕಡಿಮೆಯಾಗುವುದನ್ನೇ ಕಾಯುತ್ತಿದ್ದ ಸಿನಿಮಾ ಮಂದಿ ಈಗ ಮೆಲ್ಲನೆ ಒಂದಷ್ಟು ಸಿನಿಮಾ ನಿರ್ಮಾಣದತ್ತ ಮುಖ ಮಾಡಿದ್ದಾರೆ. ಕೆಲವರು ಸದ್ದಿಲ್ಲದೆಯೇ ಸಿನಿಮಾ ಮುಗಿಸಿ, ರಿಲೀಸ್‌ಗೆ ಸಜ್ಜಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಹೊಸಬರ “ಸರ್ವಂ” ಎಂಬ ಚಿತ್ರವೂ ಕೂಡ ಸದ್ದಿಲ್ಲದೆಯೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಕೃಷ್ಣ ಕಂಬೈನ್ಸ್ ಹಾಗೂ ಉದಯ ಆರ್ಟ್ಸ್ ಬ್ಯಾನರ್‌ನಲ್ಲಿ ಸುರೇಶ್ ಕಣ್ಣ ಹಾಗೂ ಕೆ.ಎಂ.ಕೃಷ್ಣ ದೊಡ್ಡಿ ಜೊತೆಗೂಡಿ ನಿರ್ಮಿಸುತ್ತಿರುವ “ಸರ್ವಂ” ಚಿತ್ರ ಮೊದಲ ಹಂತವನ್ನು ಪೂರೈಸಿದೆ. ಒಂದು ಹಾಡು, ಒಂದು ಸಾಹಸ ‌ಸನ್ನಿವೇಶ ಹಾಗೂ ಮಾತಿನ‌ ಭಾಗದ ಚಿತ್ರೀಕರಣವನ್ನು ಈ ಮೊದಲ ಹಂತದಲ್ಲಿ ನಡೆಸಲಾಗಿದೆ.‌ ಈ ಚಿತ್ರದಲ್ಲಿ ಅಫ್ಜಲ್ (ನಮ್ಮ ಸೂಪರ್ ಸ್ಟಾರ್) ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರೀಕರಣಕ್ಕಾಗಿ‌ ಬೆಂಗಳೂರಿನ‌ ಜಿಗಣಿ ಬಳಿ ಅದ್ದೂರಿ ಸೆಟ್ ಹಾಕಿದ್ದು ವಿಶೇಷ. ಎರಡನೇ ಹಂತದ ಚಿತ್ರೀಕರಣವನ್ನು ಪಾಂಡಿಚೇರಿ, ಮಂಗಳೂರು ಹಾಗೂ ಗೋವಾದಲ್ಲಿ ನಡೆಯಲಿದ್ದು, ಇಷ್ಟರಲ್ಲೇ ಚಿತ್ರೀಕರಣ ಶುರುವಾಗಲಿದೆ. ಒಟ್ಟು ನಾಲ್ಕು ಹಂತದಲ್ಲಿ ಚಿತ್ರದ ಚಿತ್ರೀಕರಣ ನೆರವೇರಲಿದೆ.
ಈ ಹಿಂದೆ “ಅನಕ್ಷ”, “ಮೊಂಬತ್ತಿ”, “ತಮಸ್” ಹಾಗೂ “ಛಾಯ” ಚಿತ್ರಗಳಲ್ಲಿ ಅಭಿನಯಿಸಿರುವ ರಾಜ್ ಪ್ರಭು‌ ಈ ಚಿತ್ರದ ನಾಯಕರು. ಜೊತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿರುವ ರಾಜ್ ಪ್ರಭು ಅವರಿಗೆ ಈ ಸಿನಿಮಾ ಮೊದಲ ಪ್ರಯತ್ನ.

ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡುತ್ತಿದ್ದಾರೆ. ಶ್ಯಾಂ ಸಿಂಧನೂರು ಛಾಯಾಗ್ರಹಣವಿದೆ. ಕೆ.ಬಿ.ಕೆ ಫಯಾಜ್ ಖಾನ್ ಸಾಹಸ ನಿರ್ದೇಶನ ಹಾಗೂ ಜಗ್ಗು ಅವರ ನೃತ್ಯ ನಿರ್ದೇಶನವಿದೆ. ರಾಜ್ ಪ್ರಭು ಅವರಿಗೆ ನಾಯಕಿಯಾಗಿ‌ ಅಕ್ಷಿತ ನಾಗರಾಜ್ ನಟಿಸಿದ್ದಾರೆ. ಧಾರಾ ಪರೇಕ್, ಅಫ್ಜಲ್, ರವಿ, ಕನ್ನಡ ರಾಜು, ಸ್ಮೈಲ್ ಶಿವು ಮುಂತಾದವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಗುರುರಾಜ್‌ ಕೈಯಲ್ಲೀಗ ಎದ್ದು ನಿಂತಿದೆ ಅಮೃತ ಅಪಾರ್ಟ್‌ ಮೆಂಟ್ಸ್‌ – ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಸಸ್ಪೆನ್ಸ್‌, ಥ್ರಿಲ್ಲರ್‌ ಟೀಸರ್‌ !

ಗುರುರಾಜ್‌ ಕುಲಕರ್ಣಿ ನಿರ್ಮಾಣ ಹಾಗೂ ನಿರ್ದೇಶನದ ” ಅಮೃತ‌ ಅಪಾರ್ಟ್‌ಮೆಂಟ್ಸ್‌ʼ ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಹೊರ ಬಂದಿದೆ. ಚಿತ್ರದ ಬಗ್ಗೆ ತೀವ್ರ ರೋಚಕತೆ ಮೂಡಿಸುವ ಟೀಸರ್‌ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಜೈಂಕಾರ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ ಮೂಲಕ ಇದು ಲಾಂಚ್‌ ಆಗಿದೆ. ಗುರುರಾಜ್‌ ಕುಲಕರ್ಣಿ ಇದೇ ಮೊದಲು ಆಕ್ಷನ್‌ ಕಟ್‌ ಹೇಳಿದ್ದರೂ, ಈ ಹಿಂದೆ ಸಾಕಷ್ಟು ಕುತೂಹಲ ಮೂಡಿಸಿದ್ದ “ಆಕ್ಸಿಡೆಂಟ್‌ʼ ಹಾಗೂ ” ಲಾಸ್ಟ್‌ ಬಸ್‌ʼ ಹೆಸರಿನ ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಪಕರಾಗಿದ್ದರು. ಆ ನಂತರವೀಗ ತಾವೇ ನಿರ್ಮಾಣ ಹಾಗೂ ನಿರ್ದೇಶಕರಾಗಿ “ಅಮೃತ‌ ಅಪಾರ್ಟ್‌ ಮೆಂಟ್ಸ್‌ʼ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಅದರಲ್ಲೂ ಒಂದೊಳ್ಳೆಯ ಸಂದೇಶದ ಜೊತೆಗೆ ಎನ್ನುವುದು ವಿಶೇಷ.

ಮೊನ್ನೆಯಷ್ಟೇ ಇದರ ಫಸ್ಟ್‌ ಲುಕ್‌ ಲಾಂಚ್‌ ಆಗಿತ್ತು. ಅದರ ಬೆನ್ನಲ್ಲೇ ಚಿತ್ರ ತಂಡ ಈಗ ಟೀಸರ್‌ ಲಾಂಚ್‌ ಮಾಡಿದೆ.ಇದೊಂದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ. ಬಾಲಾಜಿ ಮನೋಹರ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ತಾರಕ್ ಪೊನ್ನಪ್ಪ ನಾಯಕ ನಟ. ಊರ್ವಶಿ ಗೋರ್ವಧನ್‌ ಇದರ ನಾಯಕಿ. ಅವರೊಂದಿಗೆ ನಟಿ ಮಾನಸ ಜೋಷಿ, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ್ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಪಾತ್ರವರ್ಗದಲ್ಲಿದ್ದಾರೆ. ಹಾಗೆ ನೋಡಿದರೆ ಲಾಸ್ಟ್‌ ಬಸ್‌ ಚಿತ್ರದಲ್ಲಿ ಅಭಿನಯಸಿದ್ದ ಬಹುತೇಕ ತಂಡವೇ ಇಲ್ಲಿದೆ.

ಚಿತ್ರವನ್ನು ತಾವೇ ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ ಗುರುರಾಜ್‌ ಕುಲಕರ್ಣಿ, ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.” ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಿದ್ದೇವೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕಂತೆ ಎನ್ನುತ್ತಾರೆ ನಿರ್ದೇಶಕ, ನಿರ್ಮಾಪಕ ಗುರುರಾಜ್ ಕುಲಕರ್ಣಿ (ನಾಡಿಗೇರ್).

ಅರ್ಜುನ್ ಅಜಿತ್ ಛಾಯಾಗ್ರಹಣವಿದೆ. ಕೆಂಪರಾಜ್ ಅರಸ್ ಸಂಕಲನ ಮಾಡಿದರೆ, ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಡಾ. ಬಿ.ಆರ್ ಪೊಲೀಸ್ ಪಾಟೀಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಸುನೀಲ್ ಆರ್​.ಡಿ. ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿದ್ದು, ಹರೀಶ್ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

Categories
ಸಿನಿ ಸುದ್ದಿ

ಹಾಡುಗಳ ಚಿತ್ರೀಕರಣಕ್ಕೆ ಮುಂದಾದ ಚಿ. ಸೌ, ಕನ್ಯಾಕುಮಾರಿ – ಇದು ಕಂಪ್ಲೀಟ್‌ ಉತ್ತರ ಕರ್ನಾಟಕದ ಸೊಗಡಿನ ಚಿತ್ರ

ಶ್ರೀಗುರು ರಾಘವೇಂದ್ರ ಸಿನಿ ಪ್ರೊಡಕ್ಷನ್ಸ್ ಬ್ಯಾನರ್‌ ನಲ್ಲಿ ಎಸ್.‌ ಆರ್.‌ ಪಾಟೀಲ್‌ ನಿರ್ಮಾಣ ಮಾಡುತ್ತಿರುವ “ಚಿ.ಸೌ.ಕನ್ಯಾಕುಮಾರಿ” ಚಿತ್ರವು ಚಿತ್ರೀಕರಣ ಮುಗಿಸಿದೆ. ಲೆಮನ್ ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಹೊಸ ಪ್ರತಿಭೆ ರಾಘವೇಂದ್ರ ನಾಯಕರಾಗಿ ಅಭಿನಯಿಸಿದ್ದು, ಅವರಿಗಿಲ್ಲಿ ಬೆಳಗಾವಿ ಬೆಡಗಿ ಶ್ರುತಿ ಪಾಟೀಲ್‌ ನಾಯಕಿ ಅಗಿದ್ದಾರೆ. ಇವರಿಗೆ ಇದು ಮೂರನೇ ಚಿತ್ರ. ಈಗಾಗಲೇ “ಮಿಸ್ಟರಿ ಆಫ್ ಮಂಜುಳ” ಹಾಗೂ “ಬ್ಲಡ್ ಹ್ಯಾಂಡ್” ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿ. ಸೌ, ಕನ್ಯಾಕುಮಾರಿ ಚಿತ್ರಕ್ಕೆ ಯಾದಗಿರಿ ಜಿಲ್ಲೆಯ ಸುತ್ತ ಮುತ್ತ, ಸುರಪುರ, ಬೆಂಡೆ ಬೆಂಬಾಳೆ, ಕೆಂಬಾವಿ ಹಾಗೂ ಮಾಚಗುಂಡಾಳ ಗ್ರಾಮದಲ್ಲಿ ಸುಮಾರು 30 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆದಿತ್ತು. ಇದೀಗ ಎರಡನೇ ಹಂತದ ಚಿತ್ರೀಕರಣವು ಸುರಪುರ ಸುತ್ತ ಮುತ್ತ ಹಾಗೂ ಹೆಬ್ಬಾಳ್ ಪರಮಾನಂದ ದೇವಸ್ಥಾನದ ಜಾತ್ರೆಯಲ್ಲಿ ಸುಮಾರು 15 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಮುಂದಿನ ತಿಂಗಳಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದು ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನ ಚಿತ್ರವಾಗಿದ್ದು, ಶ್ರೀರಾಮ್‌ ಜಭಂಗಿ ಛಾಯಾಗ್ರಹಣ, ಎ.ಟಿ. ರವೀಶ್‌ ಸಂಗೀತ ಚಿತ್ರಕ್ಕಿದೆ. ಹಾಡುಗಳಿಗೆ ನಿರ್ದೇಶಕ ಲೆಮೆನ್‌ ಪರುಶುರಾಮ್‌ ಅವರೇ ಸಾಹಿತ್ಯ ಬರೆದಿದ್ದಾರೆ.ಅನುರಾಧ ಭಟ್, ಅನನ್ಯ ಭಟ್ ಹಾಗೂ ಸಂತೋಷ್ ವೆಂಕಿ ಸೊಗಸಾದ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಗುರುರಾಜ್ ಹೊಸಕೋಟೆ, ಜೂನಿಯರ್ ರವಿಚಂದ್ರನ್, ರಾಕ್ಸ್ ಮನು, ಮಲ್ಲಣ್ಣ ಬಾಚಿಮಟ್ಟಿ, ಕೊಮಲ, ಸುಜಾತ ಹಿರೇಮಠ್, ಚಂದ್ರಿಕಾ, ಗಂಗಾಧರ್ ಗೋಗಿಯವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಮದುವೆ ಆಗೋ ಹುಡುಗನಲ್ಲಿ ಫ್ಲ್ಯಾಶ್‌‌‌ ಬ್ಯಾಕ್ ಕೇಳಲ್ವಂತೆ ನಟಿ ದಿವ್ಯಾ ಉರುಡುಗ !!

ಮಲೆನಾಡು ಹುಡುಗಿ ದಿವ್ಯಾ ಉರುಡುಗ, ಬಿಗ್‌ ಬಾಸ್‌ ಮನೆಯಲ್ಲೊಂದು ಮನದಾಳ ಮಾತು ಹಂಚಿಕೊಂಡಿದ್ದಾರೆ. ಅದು ಅವರ ಮದುವೆಗೆ ಸಂಬಂಧಿಸಿದ ವಿಚಾರ. ಬಿಗ್‌ ಬಾಸ್‌ ಕಂಟೆಸ್ಟೆಟ್‌ ಗಳಾದ ಗೀತಾ, ಶಮಂತ್‌ ಜತೆಗೆ ದಿವ್ಯಾ ಹೀಗೆಯೇ ಲೋಕಾಭಿರಾಮದ ಬಗ್ಗೆ ಮಾತನಾಡುತ್ತಿದ್ದಾಗ, ಮದುವೆ ವಿಷಯ ಪ್ರಸ್ತಾಪಕ್ಕೆ ಬಂತು. ನೀವು ಮದುವೆ ಆಗೋ ಹುಡುಗ ಹೆಂಗೆ ಇರಬೇಕು ಅಂತ ಗೀತಾ ಹಾಗೂ ಶಮಂತ್‌ ಕೇಳಿದಾಗ, ” ನಾನು ಮದುವೆಯಾಗುವ ಹುಡುಗ ಮೊದಲು ಇಷ್ಟ ಆಗಬೇಕು. ನಂತರ ಅಪ್ಪ ಅಮ್ಮನಿಗೆ ಇಷ್ಟವಾಗಬೇಕು ಅನಂತರ ನಾನು ನೋಡಿ ಮದುವೆಯಾಗಬೇಕುʼ ಅಂದರು ನಟಿ ದಿವ್ಯಾ ಉರುಡುಗ.

ಅಷ್ಟೇ ಅಲ್ಲ, ಆಪ್ಸೆನ್‌ ಅಗೋ ವಿಚಾರದಲ್ಲೋ ತಮ್ಮ ನಿಲುವೇನು ಅಂತ ಮನದಾಳ ಮಾತು ತೆರೆದಿಟ್ಟರು ದಿವ್ಯಾ. ” ನಾನು ಯಾರಿಗೂ ಆಪ್ಶನ್ ಆಗಿರೋದು ಇಷ್ಟವಿಲ್ಲ. ಮದುವೆಯಾಗುವ ಹುಡುಗನಲ್ಲಿ ಫ್ಲ್ಯಾಶ್‌‌‌ ಬ್ಯಾಕ್ ನಾನು ಕೇಳೋದೆ ಇಲ್ಲ ‌.ಅದು ನನಗೆ ಬೇಕಾಗಿಲ್ಲ. ಮದುವೆಯಾಗುವ ಹುಡುಗನ ಬಗ್ಗೆ ನನಗೆ ಸಾವಿರ ಆಲೋಚನೆಗಳಿವೆ. ಮದುವೆಯಾಗಲು ಮನಸ್ಸು ಬಹಳ‌ ಮುಖ್ಯ. ಒಬ್ಬರಿಗೆ‌‌ ಮನಸ್ಸು ‌ನೀಡಿದರೆ ಅವರನ್ನೇ ಮದುವೆಯಾಗಬೇಕು. ನನ್ನ ಚಾಯ್ಸ್ ಅಪ್ಪ- ಅಮ್ಮನದ್ದೇ ಆಗಿರುತ್ತದೆ. ಮದುವೆಯಾಗುವ ಟೈಮ್ ನಲ್ಲಿ ಮದುವೆ ಆಗುತ್ತೆ. ಆಗಲೇಬೇಕು ಕೂಡ ಅಂತ ಹೇಳ್ತಾರೆ ದಿವ್ಯಾ ಉರುಡುಗ.

Categories
ಸಿನಿ ಸುದ್ದಿ

ಅಲೆಲೆಲೆ…ಆಶಾ.. !ಮಾಡೆಲಿಂಗ್‌ ಬೆಡಗಿ, ಈಗ ನಮ್ ‌ಮನೆ ಹುಡುಗಿ

ಲಕ್ ಅನ್ನೋದು ಯಾರಿಗೆ, ಹೇಗೆ, ಯಾವಾಗ ಬರುತ್ತೆ ಅಂತ ಹೇಳೋಕ್ಕಾಗಲ್ಲ. ಅದರಲ್ಲೂ ಕಲರ್‌ಫುಲ್‌ದುನಿಯಾ ಸಿನಿಮಾದಲ್ಲಿ ಇದೊಂಥರ ಬಂಪರ್‌ಲಾಟರಿ ಹೊಡೆದಂತೆ. ಯಾಕಂದ್ರೆ ಇಲ್ಲಿ ನಿರೀಕ್ಷೆಗಿಂತ ಅಚ್ಚರಿ ಅನ್ನೋ ಹಾಗೆ ಅದೃಷ್ಟ ಒಲಿದು ಬಿಡುತ್ತೆ. ಸದ್ಯಕ್ಕೆ ಅಂತಹ ಅದೃಷ್ಟಾವಕಾಶದಲ್ಲೀಗ ಸ್ಯಾಂಡಲ್‌ವುಡನಲ್ಲಿ ಸಿಕ್ಕಾಪಟ್ಟೆ ಸೌಂಡ್‌ಮಾಡುತ್ತಿದ್ದಾರೆ ʼರಾಬರ್ಟ್‌ʼ ಚಿತ್ರದ ನಾಯಕಿ ಆಶಾ ಭಟ್.‌ಅದು ಹೆಂಗೆ? ಯಾಕೆ? ಅದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಆಶಾ ಭಟ್‌- ಈ ಹೆಸರು ಇವತ್ತು ಕನ್ನಡಿಗರ ಮನೆ ಮಾತು. ಕಳೆದ ಒಂದು ವಾರದಿಂದ ಬೆಳ್ಳಿ ಪರದೆ ಮೇಲೆ ಅನುರುಣಿಸಿದ “ರಾಬರ್ಟ್‌ʼ ಅಬ್ಬರದಲ್ಲಿ ಅಲೆ ಅಲೆಯಾಗಿ ಕೇಳಿಸುತ್ತಿದ್ದೆ ಆಶಾ ಭಟ್‌ಹೆಸರು. ನೋಡಿದಾಕ್ಷಣ ಆಕರ್ಷಣೆ ಹುಟ್ಟಿಸುವ ಮೋಹಕ ನೋಟ, ನಟನೆಯ ಹಾವ-ಭಾವ, ಹಾಡುಗಳಲ್ಲಿನ ಭರ್ಜರಿ ಕುಣಿತದೊಂದಿಗೆ “ರಾಬರ್ಟ್‌’ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವ ಮಾಡೆಲ್‌ಆಶಾ ಭಟ್‌, ಇವತ್ತು ನಮ್ ಮನೆ ಹುಡುಗಿ.

ಸ್ಯಾಂಡಲ್‌ವುಡ್‌ಜತೆಗೆ ಟಾಲಿವುಡ್‌ನಲ್ಲೂ ಇವತ್ತು ಸಿಕ್ಕಾಪಟ್ಟೆ ಸೌಂಡು ಮಾಡ್ತಿದ್ದಾರೆ ಆಶಾ ಭಟ್.‌ “ರಾಬರ್ಟ್‌ʼ ಅಲೆಯಲ್ಲಿ ಆಶಾ ಭಟ್‌ಹೆಸರು ಕೂಡ ಅಲೆ ಅಲೆಯಾಗಿ ಅಪ್ಪಳಿಸುತ್ತಿದೆ. ನಟಿಯಾಗಿ ಬಂದ ಮೊದಲ ಸಿನಿಮಾದಲ್ಲೇ ಅವರಿಗೆ ಇಷ್ಟೊಂದು ಜನಪ್ರಿಯತೆ ಸಿಗಬಹುದೆಂದು ಯಾರು ಕೂಡ ಅಂದುಕೊಂಡಿರಲಿಲ್ಲ. ಅಷ್ಡೇ ಯಾಕೆ, ಇದನ್ನು ಆಶಾ ಭಟ್‌ ಕೂಡ ಉಹಿಸಿರಲಿಲ್ಲ. ಆದ್ರೆ ಇವತ್ತು, ಅದೃಷ್ಟವೇ ಅವರಿಗೆ ಒಲಿದು ಬಂದಿದೆ. ಎಂಟ್ರಿಯಲ್ಲೇ ದೊಡ್ಡದೊಂದು ಸ್ಟಾರ್‌ನಟಿಯ ಜನಪ್ರಿಯತೆ ಸಿಕ್ಕಿದೆ. ಟಾಲಿವುಡ್ ನಲ್ಲೂ ಕೂಡ ಆಶಾ ಭಟ್‌ ಹೆಸರು ಚಾಲ್ತಿಗೆ ಬಂದಿದೆ. ಇದೇ ಅಲ್ವಾ ಅದೃಷ್ಟ ಅನ್ನೋದು.

ಆದ್ರೆ ಅವತ್ತು ʼರಾಬರ್ಟ್‌ʼ ಗೆ ಆಶಾ ಭಟ್‌ನಾಯಕಿ ಅಂದಾಗ ಗಾಂಧಿ ನಗರದಲ್ಲಿ ಕೇಳಿ ಬಂದ ಮಾತೇ ಬೇರೆ. ಆಶಾ ಭಟ್‌ ಹೆಸರು ಕೇಳಿ ಹುಬ್ಬೇರಿಸಿದವರಿಗೇನು ಕಮ್ಮಿ ಇರಲಿಲ್ಲ. ಯಾಕಂದ್ರೆ, ಕನ್ನಡದ ಸಿನಿಮಾ ಪ್ರೇಕ್ಷಕ ಈ ಹೆಸರು ಕೇಳಿದ್ದೆ ಅದೇ ಮೊದಲು. ಮಾಡೆಲಿಂಗ್‌ನಲ್ಲಿ ಹೆಸರು ಮಾಡಿ, ಮುಂಬೈನಲ್ಲಿದ್ದ ಆಶಾ ಭಟ್‌ ಬಗ್ಗೆ ನಿರ್ದೇಶಕ ತರುಣ್‌ ಸುಧೀರ್‌ಗೆ ರಿಯಾಲಿಟಿ ಗೊತ್ತಿತ್ತೇನೋ. ಹಾಗಾಗಿಯೇ ಅವರನ್ನು ತಮ್ಮ ಚಿತ್ರಕ್ಕೆ ಸೆಲೆಕ್ಟ್‌ಮಾಡಿಕೊಂಡು ಬಂದಿದ್ರು. ಆದ್ರೆ, ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಆಶಾ ಭಟ್‌ ಅಪರಿಚಿತರು. ಹಾಗಾಗಿ ಅವ್ಯಾರಾರೋ, ಮುಂಬೈ ಹುಡುಗಿ ಅಂತ ಅಲಕ್ಷ್ಯ ಮಾಡಿದ್ದರು. ಆದರೆ ಆಶಾ ಭಟ್‌ ನಿಜಕ್ಕೂ ಯಾರು ಅಂತ ಗೊತ್ತಾಗಿದ್ದು ಅವರು ಬೆಂಗಳೂರಿಗೆ ಕಾಲಿಟ್ಟಾಗಲೇ.
ಕನ್ನಡದ ಮಟ್ಟಿಗೆ ಇಂತಹ ಅಚ್ಚರಿಗಳು ಹಲವು ಅಗಿವೆ. ಕನ್ನಡದವರಾದರೂ, ಹೊರ ಊರುಗಳಲ್ಲಿದ್ದವರು ಒಮ್ಮೆಲೆ ಇಲ್ಲಿ ಒಂಥರ ನಿರ್ಲಕ್ಷ್ಯ ಮಾತು ಸಹಜವೇ. ಆಶಾ ಭಟ್‌ವಿಚಾರದಲ್ಲೂ ಅದೇ ಅಗಿದ್ದು. ಆದರೆ,ಮುಂದೆ ಕಥೆ ಬೇರೆಯದೇ ಆಯಿತು. ಮೂಲತ: ಕನ್ನಡದವರೇ ಅಗಿದ್ದರೂ ಮಾಡೆಲಿಂಗ್‌ ಕಾರಣಕ್ಕೆ ಆಗ ಆಶಾ ಭಟ್‌ಮುಂಬೈನಲ್ಲಿದ್ದರು. ಆ ವಿಚಾರ ಗೊತ್ತಾದಾಗ ಮೊದಲು ಮುಂಬೈ ಹುಡುಗಿ ಅಂತ ಹುಬ್ಬೇರಿಸಿದವರೆಲ್ಲ, ಇವ್ರು ನಮ್ಮೂರು ಹುಡುಗಿ ಅಂತ ಸಮಾಧಾನ ಪಟ್ಟುಕೊಂಡ್ರು. ಅದೇ ಜನಕ್ಕೆ ಇವತ್ತು ಆಶಾ ಭಟ್‌ಮನೆ ಹುಡುಗಿ ಆಗಿದ್ದಾರೆ. ಅವರೇ ಹೇಳುವ ಹಾಗೆ ಅದಕ್ಕೆ ಕಾರಣ ʼರಾಬರ್ಟ್‌ʼ ಚಿತ್ರ.

ಹೌದು, ʼರಾಬರ್ಟ್‌ʼ ಇವತ್ತು ರಾರಾಜಿಸುತ್ತಿದೆ. ಇದು ದರ್ಶನ್‌ ಅಭಿನಯದ ಚಿತ್ರ ಎನ್ನುವುದರ ಜತೆಗೆ ಪಕ್ಕಾ ಮಾಸ್‌, ಕ್ಲಾಸ್‌ ಸಿನಿಮಾವಾಗಿಯೂ ಅಬ್ಬರಿಸುತ್ತಿದೆ. ಒಂದು ಹೊಸ ತರಹದ ಸಿನಿಮಾವಾಗಿ ಭಾರೀ ಜನ ಮೆಚ್ಚಿಗೆ ಪಡೆದಿದೆ. ಒಂದಷ್ಟು ಕಾಲ ಸ್ಟಾರ್‌ಸಿನಿಮಾ ಇಲ್ಲದೆ ಬೇಸತ್ತಿದ್ದ ಜನಕ್ಕೆ ಭರ್ಜರಿ ಬಾಡೂಟ ಸಿಕ್ಕಂತಾಗಿದೆ. ದರ್ಶನ್‌ಬಾಕ್ಸಾಫೀಸ್‌ ಸುಲ್ತಾನ್‌ ಅನ್ನೋದು ಮತ್ತೆ ಸಾಬೀತು ಆಗಿದೆ. ಚಿತ್ರದ ನಾಯಕಿ ಆಶಾ ಭಟ್‌ಅವರಿಗೂ ಭರ್ಜರಿ ಜನಪ್ರಿಯತೆ ಸಿಕ್ಕಿದೆ. ಮೊದಲ ಸಿನಿಮಾವಾದರೂ ಆಶಾ ಭಟ್‌ಆಕ್ಟಿಂಗ್‌ಹಾಗೂ ಡಾನ್ಸ್‌ಮೂಲಕ ಪ್ರೇಕ್ಷಕರಿಂದ ಬೇಷ್‌ಎನಿಸಿಕೊಂಡಿದ್ದಾರೆ. ವಿಮರ್ಶೆಕರಿಂದಲೂ ಅಪ್ರಿಸಿಯೇಷನ್‌ಸಿಕ್ಕಿದೆ. ಸಹಜವಾಗಿಯೇ ಆಶಾ ಭಟ್‌ಸಖತ್‌ಥ್ರಿಲ್‌ ಆಗಿದ್ದು ಹೌದು.

ನಿಜ, ಗ್ಲಾಮರಸ್‌ನಟಿ ಆಶಾ ಭಟ್‌ಸಖತ್‌ಖುಷಿಯಲ್ಲಿದ್ದಾರೆ. ಇದನ್ನವರು ಕನಸಲ್ಲೂ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ. ಅವೆಲ್ಲವೂ ಅದೃಷ್ಟದ ಫಲ. ನಟಿಯಾಗಿ ಕನ್ನಡಕ್ಕೆ ಬರಬೇಕೆಂದು ಯೋಚಿಸುತ್ತಿದ್ದ ಆಶಾ ಭಟ್‌ಗೆ ಎಂಟ್ರಿಯಲ್ಲೇ ದರ್ಶನ್‌ಅವರಂತಹ ಸ್ಟಾರ್‌ಜತೆಗೆ ತೆರೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದು ಮೊದಲ ಅದೃಷ್ಟ. ಅಲ್ಲಿಂದ ಇದೊಂದು ಬಿಗ ಬಜೆಟ್‌ಸಿನಿಮಾ ಆಗಿದ್ದು, ಮುಂದೆ ಇದು ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡು ದೊಡ್ಡ ಮಟ್ಟದ ಸಕ್ಸಸ್‌ಕಂಡಿದ್ದು ಅದೃಷ್ಟವೋ ಅದೃಷ್ಟ. ಅವರೇ ಹೇಳುವ ಹಾಗೆ ಇದು ಅವರ ಖುಷಿಯ ಡಬಲ್‌ಧಮಾಕಾ.

ಆಶಾ ಭಟ್‌ಅವರ ಬೆಳ್ಳಿತೆರೆಯ ಎಂಟ್ರಿಯೇ ಗ್ರಾಂಡ್.‌ಕನ್ನಡದ ಜತೆಗೆ ತೆಲುಗಿಗೂ ಎಂಟ್ರಿ ಆಗಿದ್ದಾರೆ. ಕಾಕತಾಳೀಯ ಅಂದ್ರೆ, ಟಾಲಿವುಡ್‌ನಲ್ಲೀಗ ಕನ್ನಡದ ನಟಿಯರಿಗೆ ಬಾರೀ ಬೇಡಿಕೆ ಇದೆ. ಈಗಾಗಲೇ ಅಲ್ಲಿ ರಶ್ಮಿಕಾ ಮಂದಣ್ಣ, ನಭಾ ನಟೇಶ್‌ಸೇರಿ ಹಲವರಿದ್ದಾರೆ. ಆ ಸಾಲಿಗೆ ಈಗ ಆಶಾ ಭಟ್‌ಸೇರ್ಪಡೆ ಆಗುವುದರಲ್ಲಿ ನೋ ಡೌಟು. ಮೊದಲೇ ಬಾಲಿವುಡ್‌ಲಿಂಕ್‌ಇರುವ ನಟಿ ಅವರು. ರಾಬರ್ಟ್‌ಜನಪ್ರಿಯತೆ ಮೂಲಕ ಟಾಲಿವುಡ್‌ಮೂಲಕ ಬಾಲಿವುಡ್‌ಗೂ ಎಂಟ್ರಿಯಾದ್ರು ಅಚ್ಚರಿ ಪಡಬೇಕಿಲ್ಲ.

ಬಾಲಿವುಡೇ ಆಗಲಿ, ಟಾಲಿವುಡೇ ಆಗಲಿ, ಕನ್ನಡತಿ ಆಶಾ ಭಟ್‌ ನಟಿಯಾಗಿ ಎಲ್ಲಿಗೇ ಹೋದರು ಅದು ಕನ್ನಡದ ಹೆಮ್ಮೆ. ಆದರೂ, ಅವರಿಗೆ ದೊಡ್ಡ ಮಟ್ಟದ ಅವಕಾಶ ನೀಡಿದ್ದು ಸ್ಯಾಂಡಲ್‌ ವುಡ್‌ ಮಂದಿ. ಆ ಬಗ್ಗೆ ಒಂದಷ್ಟು ಎಚ್ಚರಿಕೆ ಇಟ್ಟುಕೊಂಡು, ಭಾರತೀಯ ಚಿತ್ರರಂಗದಲ್ಲಿ ಮಾಡೆಲ್‌ ಕಮ್‌ ನಟಿ ಆಶಾ ಭಟ್‌ ಸ್ಟಾರ್‌ ನಟಿಯಾಗಿ ಖ್ಯಾತಿ ಪಡೆಯಲಿ ಅನ್ನೋದು ಸಿನಿ ಲಹರಿ ಆಶಯ.

Categories
ಸಿನಿ ಸುದ್ದಿ

ಚಿತ್ರರಂಗದ ಮೇಲೆ ಕೊರೊನಾ ಆತಂಕದ ತೂಗುಕತ್ತಿ ! ಮತ್ತೆ ಲಾಕ್‌ಡೌನ್‌ ಆಗಿಬಿಟ್ಟರೆ ಚಿತ್ರರಂಗದ ಸ್ಥಿತಿಗತಿ ಏನಾಗಬಹದು?

ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿದ್ದು ಸುಳ್ಳಲ್ಲ. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಹೌದು, ಇದು ನಿಜ ಕೂಡ. ಕೊರೊನಾ ಹಾವಳಿ ನಿಯಂತ್ರಣವಾಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದೇನೋ ಸತ್ಯ. ಆದರೆ, ಈಗ ದಿನ ಕಳೆದಂತೆ ಮತ್ತೆ ಕೊರೊನಾ ಪಾಸಿಟಿವ್‌ ಕೇಸುಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಒಂದು ವೇಳೆ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪುನಃ ಲಾಕ್‌ಡೌನ್‌ಗೆ ಮುಂದಾದರೆ? ಖಂಡಿತವಾಗಿಯೂ ಚಿತ್ರರಂಗ ಮೇಲೇಳಲು ವರ್ಷಗಳೇ ಬೇಕಾದೀತು. ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಏನಾದರೊಂದು ಸಮಸ್ಯೆಗೆ ಕಾರಣವಾಗಿಬಿಟ್ಟರೆ, ಚಿತ್ರರಂಗವನ್ನೇ ನಂಬಿದವರ ಪಾಡೇನು ಎಂಬ ಪ್ರಶ್ನೆ ಈಗ ಎದುರಾಗಿದೆ.

ಸದ್ಯಕ್ಕೆ ಚಿತ್ರರಂಗದವರಲ್ಲಿ ಎರಡನೇ ಅಲೆ ಎಂಬ ಮಾತು ಭಾರೀ ಆತಂಕಕ್ಕೆ ಕಾರಣವಾಗಿದೆ. ಮೆಲ್ಲನೆ ಕೇಸುಗಳು ಹೆಚ್ಚುತ್ತಿವೆ. ವ್ಯಾಕ್ಸಿನ್‌ ಬಂದಿದ್ದರೂ, ನಿಯಂತ್ರಣವಾಗುತ್ತಿಲ್ಲವಾದ್ದರಿಂದ ಸರ್ಕಾರ ಸಭೆ ನಡೆಸುತ್ತಿದೆ. ಹಾಗೇನಾದರೂ ಒಂದು ವೇಳೆ ಲಾಕ್‌ಡೌನ್‌ಗೆ ಸರ್ಕಾರ ಮುಂದಾದರೆ ಚಿತ್ರರಂಗದವರ ಸ್ಥಿತಿ ಇನ್ನಷ್ಟು ಗಂಭೀರವಾಗುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಸರ್ಕಾರ ಕೂಡ ಕೆಲವು ಕ್ರಮ ಕೈಗೊಂಡಿದೆ. ಮದುವೆ, ಜಾತ್ರೆ ಇನ್ನಿತರೆ ಸಮಾರಂಭಗಳಿಗೆ ಕೊಂಚ ಬ್ರೇಕ್‌ ಹಾಕಿದೆ. ಇತಿಮಿತಿಯಲ್ಲೇ ನಡೆಸಬೇಕು ಎಂಬ ಷರತ್ತು ಹಾಕಿದೆ. ಈ ನಿಟ್ಟಿನಲ್ಲಿ ಸಿನಿಮಾರಂಗ ಕೂಡ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ. ಈಗಾಗಲೇ ಹಲವು ಚಿತ್ರತಂಡಗಳು ಹಾಕಿಕೊಂಡಿದ್ದ ಲೆಕ್ಕಾಚಾರಗಳು ಕೂಡ ಉಲ್ಟಾ ಆಗುತ್ತಿವೆ. ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರದ ಕಾರ್ಯಕ್ರಮ ಕೂಡ ಕ್ಯಾನ್ಸಲ್‌ ಆಗಿದೆ. ಹೌದು, ಮೈಸೂರಲ್ಲಿ “ಯುವ ಸಂಭ್ರಮ” ಹೆಸರಲ್ಲಿ ಕಾರ್ಯಕ್ರಮ ನಡೆಸಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ, ಕೊರೊನಾದ ಎರಡನೇ ಹಂತದ ಅಲೆ ಹೆಚ್ಚಿದ್ದರಿಂದ, ಎಚ್ಚೆತ್ತುಕೊಂಡ ಚಿತ್ರತಂಡ ತಕ್ಷಣವೇ “ಯುವ ಸಂಭ್ರಮ” ರದ್ದು ಮಾಡಿತು. ಇನ್ನು, ಸರ್ಕಾರ ಜನಸಂದಣಿ ಆಗುವ ಸ್ಥಳಗಳ ಮೇಲೆ ಏನಾದರೂ ಗಂಭೀರ ಕ್ರಮಕ್ಕೆ ಮುಂದಾದರೆ, ಚಿತ್ರಮಂದಿರಗಳಿಗೆ ಭಾರೀ ಪೆಟ್ಟು ಬೀಳಬಹುದು.

ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದಾರೆ. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳನ್ನು ಮುಚ್ಚಿಸುವ ಕ್ರಮ ಕೈಗೊಂಡರೆ ಚಿತ್ರರಂಗ ದಿಕ್ಕು ತೋಚದಂತಾಗುತ್ತದೆ.
ಈಗಾಗಲೇ ಒಂದು ವರ್ಷದಿಂದ ಕಾದು ಸೋತಿರುವ ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗುತ್ತಿವೆ. ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ, ನಾ ಮುಂದು, ನೀ ಮುಂದು ಅಂತ ಸಾಲು ಸಾಲು ಸಿನಿಮಾಗಳು ತೆರೆಕಂಡು ಸೋತು ಸಣ್ಣಗಾಗಿದ್ದೂ ಇದೆ. ಈಗ ಬಿಡುಗಡೆಯ ಡೇಟ್‌ ಕೂಡ ಏರುಪೇರಾಗಬಹುದು.

“ಪೊಗರು” ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಬೆನ್ನಲ್ಲೇ ಸ್ಟಾರ್‌ ಚಿತ್ರಗಳಾದ, “ರಾಬರ್ಟ್‌”, “ಕೋಟಿಗೊಬ್ಬ 3”, “ಯುವರತ್ನ”,”ಕೆಜಿಎಫ್‌2″, “ಸಲಗ” ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಚಿತ್ರಮಂದಿರಗಳ ಪ್ರದರ್ಶನಕ್ಕೆ ಷರತ್ತು ಹಾಕಿದರೆ, ಒಂದು ವೇಳೆ ಮುಚ್ಚಬೇಕೆಂಬ ಆದೇಶ ಹೊರಡಿಸಿದರೆ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳ ಪಾಡೇನು, ನಿರ್ಮಾಪಕರ ಸ್ಥಿತಿ ಏನು? ಸ್ಟಾರ್‌ ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಕೊರೊನಾ ಹಾವಳಿ ಮತ್ತೆ ಶುರುವಾಗಿ, ಲಾಕ್‌ಡೌನ್‌ ಮಾಡಿ ಚಿತ್ರಮಂದಿರಗಳು, ಮಲ್ಟಪ್ಲೆಕ್ಸ್‌ ಬಂದ್‌ ಮಾಡಿದ್ದಲ್ಲಿ, ಚಿತ್ರರಂಗವನ್ನೇ ನಂಬಿದವರ ಬದುಕು ಅಕ್ಷರಶಃ ಬೀದಿಪಾಲಾಗುತ್ತದೆ. ಅಂದಾಜಿನ ಪ್ರಕಾರ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಈಗ ಸ್ವಲ್ಪ ಸುಧಾರಿಸಿಕೊಂಡು ಬರುವ ತಯಾರಿಯಲ್ಲಿವೆ. ಈಗ ನೋಡಿದರೆ, ಪುನಃ ಕೊರೊನಾ ಭಯ ಹುಟ್ಟಿಸುತ್ತಿದೆ. ಹೀಗಾದರೆ, ಹೊಸ ನಿರ್ಮಾಪಕರ ಗತಿ ಏನು?
ಈಗಾಗಲೇ ಕೊರೊನಾದ ಎರಡನೇ ಅಲೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ, ಚಿತ್ರೋತ್ಸವ ಕೂಡ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಹಲವು ಕಾರ್ಯಕ್ರಮಗಳಿಗೂ ಕಡಿವಾಣ ಬೀಳುತ್ತಿದೆ. ಇದು ಗಂಭೀರವಾಗಿಬಿಟ್ಟರೆ, ಸಿನಿಮಾವನ್ನೇ ನಂಬಿ ಹಣ ಹಾಕಿದವರ ಸ್ಥಿತಿ ಏನಾಗಬೇಡ?

ಕಳೆದ ವರ್ಷ ಕೊರೊನಾ ಎಂಟ್ರಿಯಾಗುವ ಮುನ್ನವೇ, “ದಿಯಾ” ಮತ್ತು “ಲವ್‌ ಮಾಕ್ಟೇಲ್‌” ಚಿತ್ರಗಳು ಗೆದ್ದು ಬೀಗಿದ್ದವು. ಕೊರೊನಾ ಹೊಡೆತದ ಮಧ್ಯದಲ್ಲೂ ಫೀನಿಕ್ಸ್‌ನಂತೆ ಎದ್ದು ಗೆದ್ದಿದ್ದವು. ಈ ವರ್ಷ ಮಾರ್ಚ್‌ನಲ್ಲಿ “ರಾಬರ್ಟ್‌” ಕೂಡ ಬಿಡುಗಡೆಯಾಗಿ ಚಿತ್ರರಂಗಕ್ಕೆ ಒಂದಷ್ಟು ಧೈರ್ಯ ತುಂಬಿದೆ. ಎಲ್ಲಾ ಕಡೆ ಅಬ್ಬರ ಮುಂದುವರೆಸಿದೆ. ಇದರ ಹಿಂದೆಯೇ ಒಂದಷ್ಟು ಸ್ಟಾರ್‌ ಸಿನಿಮಾಗಳು, ಹೊಸಬರ ಸಿನಿಮಾಗಳೂ ಕೂಡ ಅದೇ ಜೋಶ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿವೆ. ಆದರೆ, ಸರ್ಕಾರ ಗಂಭೀರವಾಗಿ ಕ್ರಮ ಕೈಗೊಂಡುಬಿಟ್ಟರೆ, ಪರಿಸ್ಥಿತಿ ಘೋರವಾಗಿರುತ್ತೆ.
ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಪೆಟ್ಟು ತಿನ್ನುತ್ತವೆ. ಬಹಳಷ್ಟು ಸರ್ಕಸ್‌ ಮಾಡಿಯೇ ನಿರ್ಮಾಪಕ ಸಿನಿಮಾ ಮುಗಿಸಿರುತ್ತಾನೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಸದ್ಯಕ್ಕೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಲು ಮುಂದಾದರೆ, ಚಿತ್ರರಂಗ ಕೂಡ ಟಾರ್ಗೆಟ್‌ ಆಗಿರುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಆಗದಿರಲಿ ಎಂಬುದೇ “ಸಿನಿಲಹರಿ” ಆಶಯ.

error: Content is protected !!