ನಟ ಕಿಚ್ಚ ಸುದೀಪ್ ಗುರುವಾರ ಬೆಳ್ಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದೀಪ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಿಎಂ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹಾಜರಿದ್ದರು. ಸುದೀಪ್ ಅವರ ಜತೆಗೆ ನಿರ್ಮಾಪಕ ಜಾಕ್ ಮಂಜು ಕೂಡ ಇದ್ದರು. ಈ ಭೇಟಿಯ ಉದ್ದೇಶ ಗೊತ್ತಾಗಿಲ್ಲ. ಆದರೆ ಇದೊಂದು ಔಪಚಾರಿಕ ಭೇಟಿ ಮಾತ್ರ ಅಂತ ಸುದೀಪ್ ಅವರ ಆಪ್ತ ವಲಯ ಹೇಳಿದೆ.
ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ನಟ ಸುದೀಪ್ ಚರ್ಚೆ ನಡೆಸಿದರು. ಆನಂತರ ಅಲ್ಲಿಂದ ಹೊರಬಂದ ಸುದೀಪ್, ಭೇಟಿಯ ಉದ್ದೇಶ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ಇದೊಂದು ಔಪಚಾರಿಕ ಭೇಟಿ ಮಾತ್ರ ಎಂದಷ್ಟೇ ಹೇಳಲಾಗಿದೆ. ಈ ನಡುವೆ ಸಿಎಂ ಭೇಟಿಯ ಕುರಿತು “ಸಿನಿ ಲಹರಿಗೆ ʼ ಪ್ರತಿಕ್ರಿಯಿಸಿದ ನಿರ್ಮಾಪಕ ಜಾಕ್ ಮಂಜು, ಅಂತಹದ್ದೇನು ಮಹತ್ವದ ಕಾರಣಕ್ಕೆ ಸುದೀಪ್ ಅವರು ಸಿಎಂ ಭೇಟಿ ಮಾಡಿಲ್ಲ. ಅದೊಂದು ಥ್ಯಾಂಕ್ಸ್ ಗಿವಿಂಗ್ ಭೇಟಿ ಮಾತ್ರ. ಸಿಎಂ ಅವರ ಆಹ್ವಾನದ ಮೇರೆಗೇ ಅವರು ಭೇಟಿಮಾಡಿದ್ದು ಅಂತ ಹೇಳಿದರು.
ನಟ ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯ 25 ವರ್ಷಗಳ ಹಿನ್ನೆಯಲ್ಲಿ “ಕೋಟಿ ಗೊಬ್ಬ 3ʼ ಚಿತ್ರ ತಂಡದಿಂದ ಮೊನ್ನೆಯಷ್ಟೇ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬೆಳ್ಳಿ ಹಬ್ಬ ಆಯೋಜಿಸಿ, ಸುದೀಪ್ ಅವರನ್ನು ಸನ್ಮಾನಿಸಿತು. ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಬಂದಿದ್ದರು. ಸುದೀಪ್ ಅವರನ್ನು ಸಿಎಂ ಯುಡಿಯೂರಪ್ಪ ಅವರೇ ಸನ್ಮಾನಿಸಿ, ಮಾತನಾಡಿದ್ದರು.
ಅಲ್ಲದೆ ಸುಮಾರು ಒಂದೂವರೆ ಗಂಟೆಯಷ್ಟು ಕಾಲ ಸಮಾರಂಭದಲ್ಲಿದ್ದು, ತಂಡಕ್ಕೆ ಖುಷಿ ಕೊಟ್ಟಿದ್ದರು. ಅದೇ ಕಾರಣಕ್ಕೆ ಅವರಿಗೊಂದು ಅಭಿನಂದನೆ ಹೇಳುವ ಕಾರಣಕ್ಕೆ ಸುದೀಪ್ ಅವರಿಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರಂತೆ.
ಅಷ್ಟು ಮಾತ್ರವಲ್ಲ, ಇನ್ನೊಂದು ಇಂಟೆರೆಸ್ಟಿಂಗ್ ಸಂಗತಿಯೂ ಕೂಡ ಇದಕ್ಕೆ ಕಾರಣ. ಸುದೀಪ್ ಹಾಗೂ ಸಿಎಂ ಯುಡಿಯೂರಪ್ಪ ಒಂದೇ ಜಿಲ್ಲೆಯವರು. ಹಾಗೆಯೇ ಸುದೀಪ್ ಅಂದ್ರೆ ಸಿಎಂ ಮನೆಯವರಿಗೆ ತುಂಬಾ ಇಷ್ಟವಂತೆ. ಸಿಎಂ ಪುತ್ರ ವಿಜಯೇಂದ್ರ ಅವರ ಜತೆಗೂ ತುಂಬಾ ಒಡನಾಟವಂತೆ. ಹಾಗಾಗಿ ಬಿಡುವಿದ್ದಾಗ ಒಮ್ಮೆ ಮನೆಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಅಂತ ಸುದೀಪ್ ಅವರಿಗೆ ಮುಖ್ಯ ಮಂತ್ರಿಗಳೇ ಹೇಳಿದ್ದರಂತೆ. ಹಾಗಾಗಿಯೇ ಗುರುವಾರ ಬೆಳಗ್ಗೆ ಸುದೀಪ್ , ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರಂತೆ. ಹಾಗಂತ ನಿರ್ಮಾಪಕ ಜಾಕ್ ಮಂಜು ಹೇಳಿಕೊಂಡರು.