ಗುರುರಾಜ್ ಕುಲಕರ್ಣಿ ನಿರ್ಮಾಣ ಹಾಗೂ ನಿರ್ದೇಶನದ ” ಅಮೃತ ಅಪಾರ್ಟ್‌ಮೆಂಟ್ಸ್ʼ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಹೊರ ಬಂದಿದೆ. ಚಿತ್ರದ ಬಗ್ಗೆ ತೀವ್ರ ರೋಚಕತೆ ಮೂಡಿಸುವ ಟೀಸರ್ ಸೋಷಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಜೈಂಕಾರ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಇದು ಲಾಂಚ್ ಆಗಿದೆ. ಗುರುರಾಜ್ ಕುಲಕರ್ಣಿ ಇದೇ ಮೊದಲು ಆಕ್ಷನ್ ಕಟ್ ಹೇಳಿದ್ದರೂ, ಈ ಹಿಂದೆ ಸಾಕಷ್ಟು ಕುತೂಹಲ ಮೂಡಿಸಿದ್ದ “ಆಕ್ಸಿಡೆಂಟ್ʼ ಹಾಗೂ ” ಲಾಸ್ಟ್ ಬಸ್ʼ ಹೆಸರಿನ ಸಸ್ಪೆನ್ಸ್ , ಥ್ರಿಲ್ಲರ್ ಕಥಾ ಹಂದರ ಚಿತ್ರಗಳಿಗೆ ನಿರ್ಮಾಪಕರಾಗಿದ್ದರು. ಆ ನಂತರವೀಗ ತಾವೇ ನಿರ್ಮಾಣ ಹಾಗೂ ನಿರ್ದೇಶಕರಾಗಿ “ಅಮೃತ ಅಪಾರ್ಟ್ ಮೆಂಟ್ಸ್ʼ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಅದರಲ್ಲೂ ಒಂದೊಳ್ಳೆಯ ಸಂದೇಶದ ಜೊತೆಗೆ ಎನ್ನುವುದು ವಿಶೇಷ.
ಮೊನ್ನೆಯಷ್ಟೇ ಇದರ ಫಸ್ಟ್ ಲುಕ್ ಲಾಂಚ್ ಆಗಿತ್ತು. ಅದರ ಬೆನ್ನಲ್ಲೇ ಚಿತ್ರ ತಂಡ ಈಗ ಟೀಸರ್ ಲಾಂಚ್ ಮಾಡಿದೆ.ಇದೊಂದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ. ಬಾಲಾಜಿ ಮನೋಹರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ತಾರಕ್ ಪೊನ್ನಪ್ಪ ನಾಯಕ ನಟ. ಊರ್ವಶಿ ಗೋರ್ವಧನ್ ಇದರ ನಾಯಕಿ. ಅವರೊಂದಿಗೆ ನಟಿ ಮಾನಸ ಜೋಷಿ, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ್ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಪಾತ್ರವರ್ಗದಲ್ಲಿದ್ದಾರೆ. ಹಾಗೆ ನೋಡಿದರೆ ಲಾಸ್ಟ್ ಬಸ್ ಚಿತ್ರದಲ್ಲಿ ಅಭಿನಯಸಿದ್ದ ಬಹುತೇಕ ತಂಡವೇ ಇಲ್ಲಿದೆ.
ಚಿತ್ರವನ್ನು ತಾವೇ ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ ಗುರುರಾಜ್ ಕುಲಕರ್ಣಿ, ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.” ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಿದ್ದೇವೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕಂತೆ ಎನ್ನುತ್ತಾರೆ ನಿರ್ದೇಶಕ, ನಿರ್ಮಾಪಕ ಗುರುರಾಜ್ ಕುಲಕರ್ಣಿ (ನಾಡಿಗೇರ್).
ಗುರುರಾಜ್ ಕುಲಕರ್ಣಿ, ನಿರ್ದೇಶಕರು
ಅರ್ಜುನ್ ಅಜಿತ್ ಛಾಯಾಗ್ರಹಣವಿದೆ. ಕೆಂಪರಾಜ್ ಅರಸ್ ಸಂಕಲನ ಮಾಡಿದರೆ, ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಡಾ. ಬಿ.ಆರ್ ಪೊಲೀಸ್ ಪಾಟೀಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಸುನೀಲ್ ಆರ್.ಡಿ. ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿದ್ದು, ಹರೀಶ್ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.