ಶ್ರೀಗುರು ರಾಘವೇಂದ್ರ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಎಸ್. ಆರ್. ಪಾಟೀಲ್ ನಿರ್ಮಾಣ ಮಾಡುತ್ತಿರುವ “ಚಿ.ಸೌ.ಕನ್ಯಾಕುಮಾರಿ” ಚಿತ್ರವು ಚಿತ್ರೀಕರಣ ಮುಗಿಸಿದೆ. ಲೆಮನ್ ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಹೊಸ ಪ್ರತಿಭೆ ರಾಘವೇಂದ್ರ ನಾಯಕರಾಗಿ ಅಭಿನಯಿಸಿದ್ದು, ಅವರಿಗಿಲ್ಲಿ ಬೆಳಗಾವಿ ಬೆಡಗಿ ಶ್ರುತಿ ಪಾಟೀಲ್ ನಾಯಕಿ ಅಗಿದ್ದಾರೆ. ಇವರಿಗೆ ಇದು ಮೂರನೇ ಚಿತ್ರ. ಈಗಾಗಲೇ “ಮಿಸ್ಟರಿ ಆಫ್ ಮಂಜುಳ” ಹಾಗೂ “ಬ್ಲಡ್ ಹ್ಯಾಂಡ್” ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿ. ಸೌ, ಕನ್ಯಾಕುಮಾರಿ ಚಿತ್ರಕ್ಕೆ ಯಾದಗಿರಿ ಜಿಲ್ಲೆಯ ಸುತ್ತ ಮುತ್ತ, ಸುರಪುರ, ಬೆಂಡೆ ಬೆಂಬಾಳೆ, ಕೆಂಬಾವಿ ಹಾಗೂ ಮಾಚಗುಂಡಾಳ ಗ್ರಾಮದಲ್ಲಿ ಸುಮಾರು 30 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆದಿತ್ತು. ಇದೀಗ ಎರಡನೇ ಹಂತದ ಚಿತ್ರೀಕರಣವು ಸುರಪುರ ಸುತ್ತ ಮುತ್ತ ಹಾಗೂ ಹೆಬ್ಬಾಳ್ ಪರಮಾನಂದ ದೇವಸ್ಥಾನದ ಜಾತ್ರೆಯಲ್ಲಿ ಸುಮಾರು 15 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಮುಂದಿನ ತಿಂಗಳಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದು ಸಂಪೂರ್ಣ ಉತ್ತರ ಕರ್ನಾಟಕದ ಸೊಗಡಿನ ಚಿತ್ರವಾಗಿದ್ದು, ಶ್ರೀರಾಮ್ ಜಭಂಗಿ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ ಚಿತ್ರಕ್ಕಿದೆ. ಹಾಡುಗಳಿಗೆ ನಿರ್ದೇಶಕ ಲೆಮೆನ್ ಪರುಶುರಾಮ್ ಅವರೇ ಸಾಹಿತ್ಯ ಬರೆದಿದ್ದಾರೆ.ಅನುರಾಧ ಭಟ್, ಅನನ್ಯ ಭಟ್ ಹಾಗೂ ಸಂತೋಷ್ ವೆಂಕಿ ಸೊಗಸಾದ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಗುರುರಾಜ್ ಹೊಸಕೋಟೆ, ಜೂನಿಯರ್ ರವಿಚಂದ್ರನ್, ರಾಕ್ಸ್ ಮನು, ಮಲ್ಲಣ್ಣ ಬಾಚಿಮಟ್ಟಿ, ಕೊಮಲ, ಸುಜಾತ ಹಿರೇಮಠ್, ಚಂದ್ರಿಕಾ, ಗಂಗಾಧರ್ ಗೋಗಿಯವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.