ಶ್ರೀಮರಳಿ ಅಭಿನಯದ ‘ಮದಗಜ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಡಿಸೆಂಬರ್17ರಂದು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಹುಟ್ಟುಹಬ್ಬ. ಅಂದು ‘ಮದಗಜ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಆದರೆ ಫಸ್ಟ್ ಲುಕ್ ಟೀಸರ್ ರಿಲೀಸ್ ಯಾರು ಮಾಡಲಿದ್ದಾರೆ ಎಂಬುದು ಗೌಪ್ಯವಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ.
ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎಂದೇ ಹೆಸರಾಗಿರುವ ‘ಉಗ್ರಂ’, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಮದಗಜ’ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಲಿದ್ದಾರೆ.
ಈ ವಿಷಯವನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ. ಈ ವಿಷಯವನ್ನು ಸ್ವತಃ ನಟ ಶ್ರೀ ಮುರಳಿ ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಗಾಡ್ ಫಾದರ್ ಪ್ರಶಾಂತ್ ನೀಲ್ ಅವರು ‘ಮದಗಜ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಟೀಸರ್ ಬಿಡುಗಡೆಗೆ ಬೆರೆಳೆಣಿಕೆ ದಿನಗಳು ಬಾಕಿ’ ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಟೀಸರ್ ನ ವಿಡಿಯೊ ತುಣುಕು ರಿಲೀಸ್ ಆಗಿದ್ದು, ಎಲ್ಲೆಡೆ, ನಿರೀಕ್ಷೆ ಹುಟ್ಟಿಸಿದೆ.
ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದಾರೆ.
‘ಬಬ್ರೂ’ ಚಿತ್ರದ ನಾಯಕಿಗೀಗ ಸಿಕ್ತು ವೆಬ್ ಸಿರೀಸ್ ನಲ್ಲಿ ಅಭಿನಯಿಸುವ ಅವಕಾಶ
ನಟಿ ಸುಮನ್ ನಗರ್ ನಿರ್ಮಾಣದ’ ಬಬ್ರೂ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಗಾನಾ ಭಟ್ ಈಗ ಹೊಸದೊಂದು ವೆಬ್ ಸಿರೀಸ್ ಮೂಲಕ ನಟನೆಗೆ ಮರಳಿದ್ದಾರೆ. ‘ಗಡ್ ಬಡ್’ ಹೆಸರಿನ ತುಳು ವೆಬ್ ಸಿರೀಸ್ ನಲ್ಲಿ ತಾವು ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಅದು ಯಾವಾಗ ಶುರುವಾಗುತ್ತೆ, ಅದು ರಿಲೀಸ್ ಹೇಗೆ ಎನ್ನುವ ಕುತೂಹಲದ ಮಾಹಿತಿಯೂ ಸೇರಿದಂತೆ ಅದರ ನಿರ್ಮಾಣ, ನಿರ್ದೇಶನ ಇತ್ಯಾದಿ ಸಂಗತಿಯನ್ನು ಇಷ್ಟರಲ್ಲಿಯೇ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ.
ಮಂಗಳೂರು ಮೂಲದ ಗಾನಾ ಭಟ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದವರು. ಆದರೆ ಪ್ರವೃತ್ತಿಯಲ್ಲಿ ಗಾಯಕಿ ಹಾಗೂ ಭರತನಾಟ್ಯ ನೃತ್ಯಗಾರ್ತಿಯೂ ಹೌದು.ಜತೆಗೆ ನಟನೆಯೂ ಅವರ ಕೂಡ ಅವರ ಪ್ರಮುಖಕ ಆಸಕ್ತಿಯ ಕ್ಷೇತ್ರವಂತೆ. ಹೀಗಿದ್ದೂ, ಉದ್ಯೋಗ ಅರಸಿ ಅಮೆರಿಕಕ್ಕೆ ಹಾರಿ ಒಂದಷ್ಟು ವರ್ಷ ಅಲ್ಲಿಯೆ ಸೆಟ್ಲ್ ಆಗಿದ್ದರು.ಆದರೆ ಅಲ್ಲಿಯೇ ವೃತ್ತಿಯ ಜತೆಗೆ ನಟನೆಯತ್ತಲೂ ತೊಡಗಿಸಿಕೊಂಡಿದ್ದ ಅವರು, ಅಮೆರಿಕದಲ್ಲೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದ ಕನ್ನಡದ ‘ಬಬ್ರೂ ‘ ಚಿತ್ರದ ಮೂಲಕ ಕಳೆದ ವರ್ಷವಷ್ಟೇ ನಟಿಯಾಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಕಾಣಿಸಿಕೊಂಡರು.
ಬಾಲ್ಯದಿಂದಲೂ ತಮಗಿದ್ದ ನಟನೆಯ ಹಸಿವು ಇಂಗಿಸಿಕೊಳ್ಳಬೇಕೆನ್ನುವ ಮಹಾದಾಸೆ ಹೊತ್ತು,’ ಬಬ್ರೂ’ ಮೂಲಕ ಅಮೆರಿಕ ಬಿಟ್ಟು ವಾಪಾಸ್ ಹುಟ್ಟೂರಿಗೆ ಬಂದವರು, ಈಗ ನಟನೆಯನ್ನೇ ವೃತ್ತಿಯಾಗಿಸಿ ಕೊಂಡಿದ್ದಾರೆ.
‘ಬಬ್ರೂ ‘ನಂತರ ಹೊಸ ಅವಕಾಶಗಳತ್ತ ಮುಖ ಮಾಡಿರುವ ಅವರು, ಒಳ್ಳೆಯ ಕತೆ ಮತ್ತು ಪಾತ್ರಗಳ ಹುಡುಕಾದಲ್ಲಿದ್ದಾರಂತೆ. ಹಾಗೆಯೇ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಗಳಲ್ಲೂ ಬ್ಯುಸಿಯಾಗಿದ್ದಾರೆ. ಈ ನಡುವೆ ‘ಗಡ್ ಬಡ್’ ಹೆಸರಿನ ವೆಬ್ ಸಿರೀಸ್ ನಲ್ಲಿ ಅವರು ಅಭಿನಯಿಸುತ್ತಿರುವುದು ಅವರೇ ರಿವೀಲ್ ಮಾಡಿರುವ ಲೆಟೇಸ್ಟ್ ಸುದ್ದಿ.ಆಲ್ ದಿ ಬೆಸ್ಟ್ ಗಾನಾ.
ಫೆಬ್ರವರಿಗೆ ರಿಲೀಸ್ ಗೆ ರೆಡಿಯಾದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ
ಬಿಗ್ ಬಾಸ್ ಜತೆಗೆ ಕಿರುತೆರೆ ಹಲವು ರಿಯಾಲಿಟಿ ಶೋಗಳಲ್ಲಿ ಒಂದಷ್ಟು ಹೆಸರು ಮಾಡಿಕೊಂಡು ಬೆಳ್ಳಿತೆರೆಗೆ ಬಂದವರು ಯುವ ನಟ ಸಂತೋಷ್ ಆರ್ಯನ್.ಇದೀಗ ಅವರು ನಾಯಕರಾಗಿ ಕಾಣಿಸಿಕೊಂಡಿರುವ ‘ಡಿಯರ್ ಸತ್ಯ’ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಈ ಚಿತ್ರ ಹೊಸ ವರ್ಷದ ಆರಂಭದಲ್ಲೆ ತೆರೆಗೆ ಬರುವುದು ಗ್ಯಾರಂಟಿ ಆಗಿದೆ. ಸದ್ಯಕ್ಕೆ ಅದೇ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ಚಿತ್ರ ತಂಡ, ಕೊರೋನಾಭೀತಿಯ ನಡುವೆಯೂ ಅದ್ದೂರಿಯಾಗಿ ಆಡಿಯೋ ಲಾಂಚ್ ಮಾಡುವ ಮೂಲಕ ರಿಲೀಸ್ ಪ್ರಚಾರ ಆರಂಭಿಸಿತು.
ಬೆಂಗಳೂರಿನ ರಾಜಾಜಿನಗರ ಒರಾಯನ್ ಮಾಲ್ ನ ಪಿವಿಆರ್ ಚಿತ್ರ ಮಂದಿರದಲ್ಲಿ ಚಿತ್ರ ತಂಡವು ಆಡಿಯೋ ಲಾಂಚ್ ಕಾರ್ಯಕ್ರಮಆಯೋಜಿಸಿತ್ತು. ಲಾಕಡೌನ್ ನಂತರ ನಡೆದ ಮೊದಲ ಆಡಿಯೋಲಾಂಚ್ ಕಾರ್ಯಕ್ರಮ ಕೂಡ ಇದಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಟ ವಿಜಯ್ ರಾಘವೇಂದ್ರ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು. ಚಿತ್ರ ತಂಡವು ಆಡಿಯೋ ಲಾಂಚ್ ಜತೆಗೆ ಚಿತ್ರ ಟೀಸರ್ ಹಾಗೂ ಪಿಆರ್ ಇ ಮ್ಯೂಜಿಕ್ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ ಕೂಡ ಆಯೋಜಿಸಿತ್ತು. ಕೇಕ್ ಕತ್ತರಿಸುವ ಮೂಲಕ ಈ ಮೂರಕ್ಕೂ ನಟ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದರು.
‘ ಲಾಕ್ ಡೌನ್ ನಂತರ ಅಧಿಕೃತ ಕಾರ್ಯಕ್ರಮಕ್ಕೆ ಅಂತ ಒರಾಯನ್ ಮಾಲ್ ಗೆ ಬಂದಿದ್ದು ಇದೇ ಮೊದಲು. ಇದಕ್ಕೆ ಕಾರಣ ಗೆಳೆಯ ನಿರ್ಮಾಪಕ ಯತೀಶ್ ಕುಮಾರ್. ಅವರದೇ ಸಿನಿಮಾ ಇದು. ಒಂದೊಳ್ಳೆಯ ಸಿನಿಮಾ ಮಾಡಿರುವ ಖುಷಿ ಅವರಲ್ಲಿದೆ. ಅವರು ಬಂದು ಕರೆದಾಗ ಬೇಡ ಎನ್ನಲಾಗಲಿಲ್ಲ. ಚಿತ್ರದ ಹಾಡುಗಳು ಚೆನ್ನಾಗಿವೆ. ನಾಯಕ ನಟ ಸಂತೋಷ್ ಕೂಡ ನಂಗೆ ಗೊತ್ತು. ಅವರಿಗೂ ಒಳ್ಳೆಯದಾಗಲಿ. ಕೊರೋನಾಇಲ್ಲ ಅಂತ ಯಾರುಕೂಡ ನಿರ್ಲಕ್ಷ್ಯ ಮಾಡಬೇಡಿ. ಎಚ್ಚರಿಕೆ ಇರಲಿ. ಹಾಗೆಯೇ ಒಳ್ಳೆಯ ದಿನಗಳು ಆದಷ್ಟು ಬೇಗ ಬರಲಿ’ ಅಂತ ಪುನೀತ್ ರಾಜ್ ಕುಮಾರ್ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ನಟ ವಿಜಯ್ ರಾಘವೇಂದ್ರ ಕೂಡ ಚಿತ್ರ ತಂಡಕ್ಕೆಶುಭ ಹರಿಸಿದರು.
ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣವಾದ ಚಿತ್ರವಿದು.’ಭಿನ್ನ’ ಚಿತ್ರದ ಗೆಲುವಿನ ನಂತರ ಯತೀಶ್ ವೆಂಕಟೇಶ್, ಬಿ.ಎಸ್. ಶ್ರೀನಿವಾಸ್, ಗಣೇಶ್ ಪಾಪಣ್ಣ ಮತ್ತು ಅಜಯ್ ಅಪ್ಪರೂಪ್ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದು, ಕತೆಗೆ ಪೂರಕವಾಗಿಯೇ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತಂದಿದ್ದಾರೆ.
‘ನೂರು ಜನ್ಮಕೂ’ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದ ಸಂತೋಷ್ ಆರ್ಯನ್, ಈ ಚಿತ್ರದ ಮೂಲಕ ಹೀರೋ ಆಗಿ ಮತ್ತೊಮ್ಮೆಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಶಿವಣ್ಣ ಚಿತ್ರದ ಟೀಸರ್ ಲಾಂಚ್ ಮಾಡಿದ್ದರು, ಈಗ ಅಪ್ಪು ಸರ್ ಆಡಿಯೋ ಲಾಂಚ್ ಮಾಡಿದ್ದಾರೆ. ಇದು ನನ್ನ ಸೌಭಾಗ್ಯ ಅಂತ ಸಂತೋಷ್ ಹೇಳಿದರು.
ನಟಿ ಅರ್ಚನಾ ಕೊಟ್ಟಿಗೆ ಈ ಚಿತ್ರದ ನಾಯಕಿ. ಅವರಿಗಿದು ಮೊದಲ ಕಮರ್ಷಿಯಲ್ ಸಿನಿಮಾ. ದೊಡ್ಡ ಚಿತ್ರದಲ್ಲಿ ಅಭಿನಯಿಸಿದ ಖುಷಿ ಅವರಿಗಿದೆ. ಹಾಗಂತ ಖುಷಿ ಹಂಚಿಕೊಂಡರು.ಇನ್ನು ಆಡಿಯೋ ಬಿಡುಗಡೆ ಸಮಾರಂಭವಾಗಿದ್ದರಿಂದ ಕಾರ್ಯಕ್ರಮದ ಹೀರೋ ಶ್ರೀಧರ್ ವಿ ಸಂಭ್ರಮ್, ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ‘ಕರೊನಾ ಸಮಯದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿರುವುದೇ ಖುಷಿಯ ವಿಚಾರ. 2021ಕ್ಕೆ ಒಳ್ಳೇ ದಿನಗಳು ಕಾಯುತ್ತಿವೆ. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಮುಂದಿನ ನಿಲ್ದಾಣ ಚಿತ್ರದ ಇನ್ನೂನು ಬೇಕಾಗಿದೆ ಹಾಡಿಗೆ ಸಾಹಿತ್ಯ ಬರೆದಿದ್ದ ಪ್ರಮೋದ್ ಮರವಂತೆ ಈ ಚಿತ್ರದಲ್ಲಿನ ಹಾಡಿಗೂ ಸಾಹಿತ್ಯ ಬರೆದಿದ್ದಾರೆ.
ಅದೇ ರೀತಿ ಶ್ವೇತಾ, ಅನುರಾಧಾ ಭಟ್, ಅನಿರುದ್ಧ ಶಾಸ್ತ್ರಿ, ಹೇಮಂತ್, ವಿಹಾನ್ ಹಾಡುಗಳಿಗೆ ಧ್ವನಿ ನೀಡಿ ನನ್ನ ಬಳಗದಲ್ಲಿದ್ದಾರೆ’ ಎಂದು ತಂಡವನ್ನು ಪರಿಚಯಿಸಿದರು ಶ್ರೀಧರ್ ವಿ ಸಂಭ್ರಮ್. ಸಂತೋಷ್ ಆರ್ಯನ್,. ಅರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ. ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್, ಆದರ್ಶ್ ಚಂದ್ರಶೇಖರ್ ಇತರರು ಪಾತ್ರವರ್ಗದಲ್ಲಿದ್ದಾರೆ. ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ, ವಿನೋಧ ಭಾರತಿ ಛಾಯಾಗ್ರಹಣ, ಮೋಹನ್ ಮಾಸ್ಟರ್ ಕೋರಿಯಾಗ್ರಾಫಿ, ಸುರೇಶ್ ಆರ್ಮುಗಮ್ ಸಂಕಲನ, ಶ್ರೀಧರ್ ವಿ ಸಂಭ್ರಮ ಸಂಗೀತ, ಭಾರ್ಗವಿ ವಿಖ್ಯಾತಿ ಕಾಸ್ಟೂಮ್ ವಿನ್ಯಾಸ ಮಾಡಿದ್ದಾರೆ.ಇನ್ನು ಚಿತ್ರದ ಕತೆಗೆ ಬಂದರೆ, ಬೆಂಗಳೂರೆಂಬ ಮಹಾನಗರದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಹುಡುಗನ ಕಥೆ ‘ಡಿಯರ್ ಸತ್ಯʼದಲ್ಲಿ ಜೀವ ಪಡೆದಿದೆ. ‘ಡಿಯರ್ ಸತ್ಯ’
ಸಿನಿಮಾ ಮಂದಿಗೂ ಮತ್ತು ಈ ಕ್ರಿಕೆಟ್ ಗೂ ಅವಿನಾಭಾವ ಸಂಬಂಧ. ಈಗಾಗಾಲೇ ಸೆಲಿಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಕೂಡ ನಡೆದಿದೆ. ಈಗಲೂ ನಡೆಯುತ್ತಿದೆ. ಈಗ ಮತ್ತೆ ಸಿನಿಮಾ ಮಂದಿ ಸೇರಿ ಕ್ರಿಕೆಟ್ ಹಬ್ಬ ಮಾಡಲು ತಯಾರಿ ನಡೆಸಿದ್ದಾರೆ.
ಹೌದು 2020ರ ಡಿಸೆಂಬರ್ 25,26 ಮತ್ತು 27ರಂದು ಕೆ.ಎಸ್.ಪಿ.ಎಲ್. ಸೀಸನ್ 2 ಶುರುವಾಗಲಿದೆ.
ಈ ಕ್ರಿಕೆಟ್ ಪಂದ್ಯಾವಳಿ ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ನಡೆಯಲಿದೆ ಅನ್ನೋದು ವಿಶೇಷ.
ಮೂರು ದಿನಗಳ ಕಾಲ ನಡೆಯಲಿರುವ ಈ ಟೆನ್ನಿಸ್ ಬಾಲ್ ಟೂರ್ನಮೆಂಟ್ ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜನೆ ಮಾಡಲಾಗಿದೆ ಎಂಬುದು ಗಮನಕ್ಕಿರಲಿ. ಐಪಿಎಲ್ ರೀತಿಯೇ ಅದ್ದೂರಿಯಾಗಿ ಈ ಪಂದ್ಯಾವಳಿ ನಡೆಯಲಿದೆ.
ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಒಂದೊಂದು ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಈ ಪಂದ್ಯಾವಳಿಯ ಇನ್ನೊಂದು ವಿಶೇಷ ಅಂದರೆ, ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮಾತ್ರ ಭಾಗವಹಿಸಲಿದ್ದಾರೆ.
ಇದರಲ್ಲಿ ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಪ್ರೊತ್ಸಾಹದ ಬಹುಮಾನಗಳಿವೆ.
ಇದೆಲ್ಲಕ್ಕಿಂತಲೂ ಮತ್ತೊಂದು
ವಿಶೇಷ ಅಂದರೆ ಈ ಸಲದ ಪಂದ್ಯಾವಳಿಗೆ ಮಹಿಳಾ ಅಭಿಮಾನಿಗಳ ಎರಡು ತಂಡದ ಮೂಲಕ ಚಾಲನೆ ಸಿಗಲಿದೆ.ಅಂತ್ಯದ ಪಂದ್ಯಾವಳಿ
ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ನಡೆಯಲಿದೆ.
ಕನ್ನಡ ಚಿತ್ರರಂಗದ ಕಲಾವಿದರು ಕರ್ನಾಟಕದ ಪ್ರಮುಖ ಕ್ರಿಕೆಟ್ ಆಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಪಂದ್ಯಾವಳಿ ಕಿಚ್ಚ ಸುದೀಪ ಅವರ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ನಂದೀಶ್ ಅವರ ಎರಡನೇ ವರ್ಷದ ಸ್ಮರಣಾರ್ಥ ನಡೆಯಲಿದೆ ಎಂಬುದು ವಿಶೇಷ. ಇನ್ನು ಈ ಪಂದ್ಯಾವಳಿಯು( ಕೆ.ಎಸ್.ಸಿ.ಎ) ಬಾದ್ ಷಾ ಕಿಚ್ಚ ಸುದೀಪ ರವರ ಸಂಸ್ಥೆ “ಕಿಚ್ಚ ಸುದೀಪ ಕ್ರಿಕೆಟ್ ಅಸೋಸಿಯೇಷನ್” ಮೂಲಕ ನಡೆಯಲಿದ್ದು,
ನೆಲಮಂಗಲದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಮೈದಾನದಲ್ಲಿ ತಯಾರಿ ನಡೆಯಲಿದೆ.
ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಬೇಡಿ ಎಂದು ರಂಗರಾಜುಗೆ ಖಡಕ್ ವಾರ್ನಿಂಗ್ ಕೊಟ್ಟ ಸಂಸದೆ
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಹೇಳಿಕೆ ವಿರುದ್ಧ ಇಡೀ ಸ್ಯಾಂಡಲ್ ವುಡ್ ರೊಚ್ಚಿಗೆದ್ದಿದೆ. ವಿಜಯ್ ರಂಗರಾಜು ವಿರುದ್ಧ ಶನಿವಾರ ನಟ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಿಡಿಕಾರಿ ,ಖಡಕ್ ವಾರ್ನಿಂಗ್ ನೀಡಿದ ಬೆನ್ನಲೇ ಭಾನುವಾರ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ಕಟುವಾದ ಮಾತುಗಳ ಮೂಲಕ ರಂಗರಾಜು ಅವರನ್ನು ತರಾಟಗೆ ತೆಗೆದುಕೊಂಡಿದ್ದಾರೆ.ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿ ಅಂತ ಎಚ್ಚರಿಸಿದ್ದಾರೆ. ‘ಸಿನಿ ಲಹರಿ’ ಗೆ ಲಭ್ಯವಾದ ಅವರ ಹೇಳಿಕೆಯ ಪೂರ್ಣ ವಿವರ ಇಲ್ಲಿದೆ.
” ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನೆತೆ ಏನೆಂಬುವುದು ಚೆನ್ನಾಗಿಯೇ ಗೊತ್ತು. ವಿಷ್ಣು ನಮ್ಮನ್ನು ದೈಹಿಕವಾಗಿ ದೂರವಾಗಿ ಹತ್ತು ವರುಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗದಿರುವುದೆ ಅದಕ್ಕೆ ಸಾಕ್ಷಿ.
ಯಾರಿಗೂ ತಿಳಿಯದ, ಯಾರೋ ಒಬ್ಬ ಅವರ ಬಗ್ಗೆ ಮನಸ್ಸೋ ಇಚ್ಛೆ ಕೆಲವು ಕೆಟ್ಟ ಪದಗಳಿಂದ ನಿಂದಿಸಿದರೆ ಅದರಿಂದ ನಮ್ಮ ವಿಷ್ಣುವಿನ ಘನತೆಗೆ ಒಂದು ಸಾಸಿವೆ ಕಾಳಷ್ಟು ಧಕ್ಕೆಯಾಗದು!
ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗು ನೀಚ ಬುದ್ದಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ.
ಸರಿಯಾದ ಮನಸ್ಥಿತಿ ಉಳ್ಳವನು, ಒಬ್ಬ ವ್ಯಕ್ತಿಯು ಬದುಕಿದ್ದಾಗಲೇ ಅವರ ಬಗ್ಗೆ ಮಾತನಾಡಿ ಅವರ ಪ್ರತಿಕ್ರಿಯೆ ನಿರೀಕ್ಷಿಸುವುದು ಸರಿಯೇ ಹೊರತು, ಅವರ ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ, ಕೇವಲ ಹೇಡಿತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ.
ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ‘ಚೀಪ್ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು” – ಸುಮಲತಾ ಅಂಬರೀಶ್, ಸಂಸದೆ
ಈ ಹೇಳಿಕೆಯ ಮೂಲಕ ವಿಷ್ಣು ವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸುನ್ನು ಸ್ಮರಿಸಿಕೊಂಡಿರುವ ಸುಮಲತಾ ಅಂಬರೀಶ್ ಅವರು, ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಇಂತಹ ಪ್ರಯತ್ನ ಹೇಡಿತನದಿಂದ ಕೂಡಿದ್ದು ಅಂತ ರಂಗರಾಜು ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಮೇರು ನಟ
ಡಾ.ವಿಷ್ಣುವರ್ಧನ್ ಅವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡ ಚಿತ್ರರಂಗವೇ ಕಿಡಿಕಾರಿದೆ. ಜಗ್ಗೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್ ಸೇರಿದಂತೆ ಹಲವರು ಟ್ವೀಟ್ ಮೂಲಕ ವಿಜಯ್ ರಂಗರಾಜು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಅಭಿಮಾನಿಗಳು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟ ಶ್ರೀಮರಳಿ ಕೂಡ ಟ್ವೀಟ್ ಮೂಲಕ ‘ಆ ನಟ ಕ್ಷಮೆ ಕೇಳಬೇಕು’ ಎಂದಿದ್ದಾರೆ.
ತಮ್ಮ ಟ್ವೀಟ್ ಖಾತೆಯಲ್ಲಿ ಶ್ರೀಮುರಳಿ ‘ಯಾವುದೇ ಭಾಷೆಯ ಕಲಾವಿದ ಇರಲಿ. ಅವರು ಕಲಾವಿದರೇ. ಕಲೆಗೆ ಭಾಷೆಯ ಬೇಧ ಭಾವ ಇಲ್ಲ. ಎಲ್ಲರೂ ಕಲೆಯನ್ನು ಪ್ರೀತಿಸುವ ಮನಸ್ಸುಳ್ಳವೆರೆ. ನಮ್ಮ ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣು ಸರ್ ಬಗ್ಗೆ ಆ ಭಾಷೆಯ ಕಲಾವಿದ ಹಾಗೆಲ್ಲ ಮಾತನಾಡಿದ್ದು ಬೇಸರ ತಂದಿದೆ. ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು ‘ಎಂದು ಹೇಳಿದ್ದಾರೆ.
ಹಲವು ವರ್ಷಗಳ ಹಿಂದೆ ಪ್ರಭಾಕರ್ ಅಭಿನಯದ ‘ ‘ಮುತ್ತೈದೆ ಭಾಗ್ಯ’ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರು ಅತಿಥಿಯಾಗಿ ನಟಿಸಿದ್ದರು. ಆ ಚಿತ್ರದಲ್ಲಿ ತೆಲುಗು ನಟ ವಿಜಯ್ ರಂಗರಾಜು ಕೂಡ ನಟಿಸಿದ್ದರು. ಚಿತ್ರೀಕರಣ ವೇಳೆ, ನಡೆದ ಒಂದು ಘಟನೆ ಬಗ್ಗೆ, ಇತ್ತೀಚೆಗೆ ಮಾತಾಡಿದ್ದರು. ವಿಷ್ಣುವರ್ಧನ್ ಅವರ ಕುರಿತು ಅವಹೇಳನವಾಗಿ ಮಾತಾಡಿದ್ದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕ್ರಮಕ್ಕೂ ಒತ್ತಾಯಿಸಲಾಗಿದೆ.
ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಇರಲಿ- ಸುದೀಪ್ ಖಡಕ್ ವಾರ್ನಿಂಗ್
-ವಿಷ್ಣುವರ್ಧನ್ ಬಗ್ಗೆ ಮಾತಾಡಿದ್ದಕ್ಕೆ ಕನ್ನಡಿಗರ ಆಕ್ರೋಶ
ವಾಣಿಜ್ಯ ಮಂಡಳಿಗೆ ಅಭಿಮಾನಿಗಳ ದೂರು
ತೆಲುಗು ನಟ ವಿಜಯರಂಗರಾಜು ಡಾ.ವಿಷ್ಣುವರ್ಧನ್ ಅವರ ಕುರಿತಂತೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಒಳಗಾಗಿದ್ದು, ಕನ್ನಡ ಚಿತ್ರರಂಗವನ್ನು ಕೆರಳಿಸಿದೆ. ಅಷ್ಟೇ ಅಲ್ಲ, ಕನ್ನಡ ಚಿತ್ರಂಗದ ಕಲಾವಿದರು, ತಾಂತ್ರಿಕವರ್ಗದವರು, ಅಪಾರ ಅಭಿಮಾನಿಗಳು ನಟ ವಿಜಯರಂಗರಾಜು ವಿರುದ್ಧ ಗುಡುಗಿದ್ದಾರೆ. ನಟರಾದ ಜಗ್ಗೇಶ್, ಪುನೀತ್ ರಾಜಕುಮಾರ್, ಸುದೀಪ್ ಸೇರಿದಂತೆ ಹಲವರು ಟ್ವೀಟ್ ಮಾಡಿ, ವಿಜಯ ರಂಗರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಹಲವರು ವಿಜಯರಂಗರಾಜು ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಜಯ್ ರಂಗರಾಜುಗೆ @KicchaSudeep sir ಅವರ ಖಡಕ್ ವಾರ್ನಿಂಗ್ ಇಲ್ಲಿದೆ. ಒಬ್ಬ ಸ್ಟಾರ್ ಸ್ಥಾನದಲ್ಲಲ್ಲದೆ ಒಬ್ಬ ಫ್ಯಾನ್ ಸ್ಥಾನದಲ್ಲಿ ನಿಂತು ಘರ್ಜಿಸಿದ್ದಾರೆ..
ನಡೆದದ್ದೇನು?
ಹಲವು ವರ್ಷಗಳ ಹಿಂದೆ “ಮುತ್ತೈದೆ ಭಾಗ್ಯ” ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆ ಚಿತ್ರದಲ್ಲಿ ಪ್ರಭಾಕರ್ ಪ್ರಮುಖ ಅಕರ್ಷಣೆಯಾಗಿದ್ದರು. ವಿಷ್ಣುವರ್ಧನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ಒಂದು ಘಟನೆ ನಡೆದಿತ್ತು. ವಿಷ್ಣುವರ್ಧನ್ ಅವರು ನಟ ವಿಜಯರಂಗರಾಜು ಅವರನ್ನು ಹೊರಗೆ ಕಳುಹಿಸಿ ಎಂದಿದ್ದರು. ಯಾಕೆ ಹಾಗೆ ಹೇಳಿದ್ದರು ಎಂಬುದಕ್ಕೂ ಕಾರಣವಿತ್ತು. ಆಗಿನ ಘಟನೆ ಬಗ್ಗೆ ನಟ ವಿಜಯರಂಗರಾಜು ಅವರು, ಇತ್ತೀಚೆಗೆ ವಿಷ್ಣುವರ್ಧನ್ ಬಗ್ಗೆ ತುಂಬಾ ಕೆಟ್ಟದ್ದಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಆ ವಿರುದ್ಧ ಕನ್ನಡಿಗರು ಧ್ವನಿ ಎತ್ತಿದ್ದು, ಎಲ್ಲೆಡೆ, ಆಕ್ರೋಶ ವ್ಯಕ್ತವಾಗುತ್ತಿದೆ. ಡಾ.ವಿಷ್ಣುವರ್ಧನ್ ಅವರು ಆದರ್ಶ ವ್ಯಕ್ತಿ. ಅವರ ಬಗ್ಗೆ ಈವರೆಗೆ ಯಾರೂ ಮಾತಾಡಿಲ್ಲ. ಆದರೆ, ತೆಲುಗು ನಟ ಹಾಗೆಲ್ಲಾ ಮಾತಾಡಿದ್ದಾರೆ. ಇದು ಸಹಜವಾಗಿಯೇ ಕನ್ನಡ ಸ್ಟಾರ್ ನಟರಿಗೂ ನೋವಾಗಿದೆ. ಹಾಗಾಗಿ ಒಂದಷ್ಟು ಮಂದಿ ಟ್ವೀಟ್ ಮಾಡಿದರೆ, ಒಂದಷ್ಟು ಜನರು ವಿಡಿಯೋ ಮಾಡಿದ್ದಾರೆ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಜಯರಂಗರಾಜು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದಾರೆ.
ಅತ್ತ, ಸುದೀಪ್ ವಿಡಿಯೋ ಮೂಲಕ ವಿಜಯ್ ರಂಗರಾಜುಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪುನೀತ್ ಕೂಡ ಟ್ವೀಟ್ ಮಾಡಿದ್ದು, “ಒಬ್ಬ ಕಲಾವಿದನಾಗಬೇಕಾದರೆ, ಅವನಿಗರಬೇಕಾದ ಮೊದಲ ಅರ್ಹತೆ ತನ್ನ ಸಹೋದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿ ತೋರುವುದು. ಯಾವುದೇ ಭಾಷೆ ನಟರಾದರೂ, ಗೌರವ ಮೊದಲು. ನಮ್ಮ ನಾಡಿನ ಮೇರು ನಟರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಕಲಾವಿದ ಕ್ಷಮೆ ಕೇಳಿ ತಮ್ಮ ಮಾತನ್ನು ಹಿಂಪಡೆಯಬೇಕು. ಭಾರತೀಯ ಚಿತ್ರಂರಂಗ ನಮ್ಮ ಮನೆ. ಎಲ್ಲಾ ಕಲಾವಿದರು ಒಂದು ಕುಟುಂಬ ಕಲೆಗೆ, ಕಲಾವಿದರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಮೊದಲು ಮಾನವನಾಗು” ಎಂದು ಟ್ವೀಟ್ ಮಾಡಿದ್ದಾರೆ.
ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಅಭಿನಯದ ʼಐರಾವನ್ʼ ಚಿತ್ರಕ್ಕೆ ನಟ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಸದ್ಯಕ್ಕೆ ಸುಮಾರು ೪೫ ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗ ಟೀಸರ್ ಲಾಂಚ್ ಮಾಡಲು ಮುಂದಾಗಿದೆ.
ಡಿಸೆಂಬರ್ ೨೧ಕ್ಕೆ ಟೀಸರ್ ಲಾಂಚ್‌ಗೆ ದಿನಾಂಕ ಫಿಕ್ಸ್ ಆಗಿದೆ. ಅವತ್ತು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಚಿತ್ರ ತಂದೊಂದಿಗೆ ಟೀಸರ್ ಲಾಂಚ್ ಮಾಡಲು ಒಪ್ಪಿಕೊಂಡಿದ್ದಾರೆ.
ಟೀಸರ್ ಲಾಂಚ್ ಮಾಡಿಕೊಡುವ ಸಂಬಂಧ ಚಿತ್ರ ತಂಡ ಇತ್ತೀಚಿಗೆ ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿತ್ತು, ಆ ಸಂದರ್ಭದಲ್ಲಿ ಚಿತ್ರ ತಂಡದೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಸಂತಸದಲ್ಲಿ ಮಾತನಾಡಿದ ಸುದೀಪ್, ಟೀಸರ್ ಲಾಂಚ್ ಮಾಡುವುದಾಗಿ ಭರವಸೆ ನೀಡಿದರು ಎನ್ನುವ ವಿಚಾರವನ್ನು ಚಿತ್ರ ತಂಡ ಮಾಧ್ಯಮದ ಜತೆಗೆ ಹಂಚಿಕೊಂಡಿದೆ.
ನಿರಂತರ ಪ್ರೊಡಕ್ಷನ್ ಮೂಲಕ ನಿರಂತರ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಈಗ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಈಗಾಗಲೇ ಅರ್ಧದಷ್ಟು ಬೆಂಗಳೂರು, ಮಂಗಳೂರು ಮುಂತಾದ ಕಡೆ ಸುಮಾರು 45 ದಿನಗಳ ಚಿತ್ರೀಕರಣ ನಡೆದಿದೆ.
ಉಳಿದಂತೆ ರಾಮ್ಸ್ ರಂಗ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಈಗಾಗಲೇ ಅವರು ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಸ್ಪೆನ್ಸ್ ಥ್ಲಿಲ್ಲರ್ ಕಥೆ ಆಧಾರಿತ ಚಿತ್ರವಿದು. ಎಸ್.ಪದೀಪ್ ಸಂಗೀತ ನಿರ್ದೇಶನ ನೀಡಿದ್ದಾರೆ.
ಅಭಿಮಾನಿಗಳ ಅಭಿಮಾನವೇ ಅಂಥದ್ದು. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳಿಗೆ ತಮ್ಮ ಹೀರೋಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಆ ಬಳಿಕ ಇಬ್ಬರ ನಡುವೆ ಮುನಿಸು ಶುರುವಾಯಿತು. ಅದಾದ ಮೇಲೆ ಅವರವರ ಅಭಿಮಾನಿಗಳ ಮಧ್ಯೆಯೂ ಬಿರುಕು ಉಂಟಾಯಿತು. ಇದನ್ನು ಬಳಸಿಕೊಂಡ ಅನೇಕರು ವಿವಾದ ಹುಟ್ಟುಹಾಕುವ ಪ್ರಯತ್ನವನ್ನೂ ಮಾಡಿದರು. ಆ ನಂತರ ಅಭಿಮಾನಿಗಳ ಮಧ್ಯೆ ಆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ಇಬ್ಬರು ನಟರು ಮುನಿಸು ಬಿಟ್ಟು, ಒಂದಾಗಬೇಕು ಅನ್ನೋದು ಹಲವರ ಬಯಕೆ. ಅದು ಚಿತ್ರರಂಗದ್ದೂ ಹೌದು, ಅಭಿಮಾನಿಗಳದ್ದೂ ಹೌದು. ಆದರೆ, ಅದೇನೋ ಗೊತ್ತಿಲ್ಲ. ಈ ಇಬ್ಬರು ನಟರು ಮೊದಲಿನಂತೆ ಇರಬೇಕೆಂಬ ಆಸೆ ಒಂದಷ್ಟು ಜನರಿಗಂತೂ ಇದೆ.
ಈ ನಿಟ್ಟಿನಲ್ಲಿ ಕಲಾವಿದ ಕರಣ್ ಆಚಾರ್ಯ ಅವರು ರಾಮ ಲಕ್ಷ್ಮಣರಂತೆ ಹೋಲುವ ಕಲಾಕೃತಿ ರಚಿಸಿದ್ದಾರೆ. ಅದೀಗ “ಚಾಲೆಂಜಿಂಗ್ ಸ್ಟಾರ್ ದರ್ಶನ್-ಅಭಿನಯ ಚಕ್ರವರ್ತಿ ಕಿಚ್ಚ” ಫ್ಯಾನ್ಸ್ ಗ್ರೂಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕರಣ್ ಆಚಾರ್ಯ ಅವರ ಕಲಾಕೃತಿಯನ್ನು ಶೇರ್ ಮಾಡಿದ್ದಾರೆ. “ಈ ಅದ್ಭುತ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಕರಣ್ ಆಚಾರ್ಯ ಬ್ರದರ್, ನಮ್ಮ ದಚ್ಚು ಬಾಸ್, ಕಿಚ್ಚ ಬಾಸ್ ಇಬ್ಬರೂ ರಾಮ ಲಕ್ಷ್ಮಣ, ಸೂರ್ಯ, ಚಂದ್ರ ಇದ್ದ ಹಾಗೆ. ನಮ್ಮಂತಹ ಅಭಿಮಾನಿಗಳಿಗೆ ದೇವರುಗಳು” ಎಂದು ಬರೆದುಕೊಳ್ಳುವ ಮೂಲಕ ಅಭಿಮಾನದ ಪ್ರೀತಿ ತೋರಿದ್ದಾರೆ.
ಅದೇನೆ ಇರಲಿ, ಅಭಿಮಾನಿಗಳಿಗೆ ತಮ್ಮ ಸ್ಟಾರ್‌ಗಳು ಜೊತೆಯಾಗಬೇಕೆಂಬ ಬಯಕೆ ಇದೆ. ಇನ್ನೇನಿದ್ದರೂ ಈ ಸ್ಟಾರ್‌ಗಳು ಒಂದಾಗುವ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಉತ್ಸಾಹ ಮೂಡಿಸಬೇಕಿದೆ. ಕೊರೊನೊ ಸಮಸ್ಯೆ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್‌ಗಳು ಕೂಡ ಒಂದಾಗುವ ಮೂಲಕ ತಮ್ಮ ಸಿನಿಮಾಗಳನ್ನು ಬೇಗನೇ ಬಿಡುಗಡೆ ಮಾಡಿಸುವ ಮೂಲಕವಾದರೂ, ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ.
ಬಸವನಗುಡಿ ದೊಡ್ಡ ಗಣಪತಿಯ ಮುಂದೆ ಚಿತ್ರೀಕರಣಕ್ಕೆ ಕುಂಬಳಕಾಯಿ
ಸಧಭಿರುಚಿಯ ಚಿತ್ರಗಳ ನಿರ್ದೇಶಕ ಜಯತೀರ್ಥ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼಬನಾರಸ್ʼ ಚಿತ್ರೀಕರಣ ಮುಗಿಸಿದೆ. ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಚಿತ್ರೀಕರಣ ಮುಗಿಸಿ, ಕುಂಬಳ ಕಾಯಿ ಒಡೆಯಿತು.
ಕನ್ನಡದ ಮಟ್ಟಿಗೆ ಬನಾರಸ್ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಅದಕ್ಕೆ ಕಾರಣ ನಿರ್ದೇಶಕ ಜಯತೀರ್ಥ. ʼಬೆಲ್ ಬಾಟಮ್ʼಚಿತ್ರದ ಬಹುದೊಡ್ಡ ಸಕ್ಸಸ್ ನಂತರ ಜಯತೀರ್ಥಆಕ್ಷನ್ ಕಟ್ ಹೇಳಿದ ಸಿನಿಮಾ. ಹಾಗೆಯೇ ಇದರ ನಿರ್ಮಾಣ ಹಾಗೂ ತಾರಾಗಣವೂ ಕೂಡ ಸಾಕಷ್ಟು ಕುತೂಹಲ ಮೂಡಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣದ ಹಂತದಲ್ಲೇ ಸಾಕಷ್ಟು ಸುದ್ದಿ ಮಾಡಿದೆ.ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಜೈದ್ ಖಾನ್ ಅಭಿನಯದ ಚೊಚ್ಚಲ ಚಿತ್ರ ಇದು. ಗ್ಲಾಮರಸ್ ನಟಿ ಸೋನಾಲ್ ಮಾಂತೆರೋ ಇದರ ನಾಯಕಿ.
ಇನ್ನು ಇದರ ಶೀರ್ಷಿಕೆಯೇ ವಿಶೇಷ. ಬನಾರಸ್ ಅಂದ್ರೆ ಕಾಶಿ. ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿಗಿರುವ ಇನ್ನೊಂದು ಹೆಸರೇ ಬನಾರಸ್. ಈ ಚಿತ್ರದ ಇದೇ ಹೆಸರಲ್ಲಿ ನಿರ್ಮಾಣಗೊಂಡು ತೆರೆಗೆ ಬರುತ್ತಿರುವುದರ ಜತೆಗೆ ಇದರ ಬಹುತೇಕ ಚಿತ್ರೀಕರಣ, ಕಾಶಿ ಸುತ್ತಮುತ್ತಲ ಪವಿತ್ರ ಜಾಗಗಳಲ್ಲಿ ನಡೆದಿದೆ.
ಬನಾರಸ್ ಎನ್ನುವ ಶೀರ್ಷಿಕೆ, ಕಾಶಿಯ ಸುತ್ತಮುತ್ತಲ ಜಾಗಗಳಲ್ಲಿಯೇ ಚಿತ್ರೀಕರಣ ಅಂದಾಕ್ಷಣ ಇದೊಂದು ಭಕ್ತಿ ಪ್ರಧಾನ ಚಿತ್ರವೇ ಎಂದೆನಿಸುವುದು ಸಹಜ. ಆದರೆ ಚಿತ್ರದ ಕತೆ ಅದಲ್ಲ. ವಿಭಿನ್ನ ಪ್ರೇಮಕಥೆಯ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ. ಕಾಶಿಗೂ ಚಿತ್ರದ ಕಥೆಗೂ ಸಂಬಂಧವಿದೆ. ಹಾಗಾಗಿಯೇ ಸಹಜ ಸೌಂದರ್ಯದ ಕಾಶಿಯ ಎಲ್ಲಾ ಘಾಟ್ ನಲ್ಲೂ ಬನಾರಸ್ ಚಿತ್ರದ ಚಿತ್ರೀಕರಣ ನಡೆದಿದೆ. ಉಳಿದಂತೆ ಬೆಂಗಳೂರು, ಮೈಸೂರು, ಗೋವಾದಲ್ಲೂ ಚಿತ್ರೀಕರಣವಾಗಿದೆ. ಹೆಸರಾಂತ ಕಲಾವಿದರಾದ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಅಲಿ, ಚಿರಂತ್, ರೋಹಿತ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಚಿತ್ರದ ತಾಂತ್ರಿಕ ವರ್ಗವೂ ಇಲ್ಲಿ ಗಮನಾರ್ಹವೇ. ಚಿತ್ರದ ಸುಮಧುರ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಅವರ ಸಂಭಾಷಣೆ ಹಾಗೂ ರಶ್ಮಿ ವಸ್ತ್ರವಿನ್ಯಾಸ ಮಾಡಿದ್ದಾರೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ.