ಎ ವಿಲನ್‌ ಫ್ರಮ್‌ ಕುಂದಾಪುರ! ಭಲೇ ವಜ್ರಾಂಗ್

ಕನ್ನಡಕ್ಕೆ ಮತ್ತೊಬ್ಬ ವಜ್ರದಂತಹ ಖಳನಟ

ಹೀರೋನೇ ಆಗಬೇಕಿಲ್ಲ, ವಿಲನ್‌ ಪಾತ್ರಕ್ಕೂ ಸೈ

ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು.

ಮಾಡೆಲ್‌ನಿಂದ ಸಿನಿಮಾವರೆಗೂ…
ಕನ್ನಡ ಚಿತ್ರರಂಗಕ್ಕೆ ಮಾಡೆಲ್‌ ಕ್ಷೇತ್ರದಿಂದ ಬಂದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಮಾಡೆಲ್‌ನಿಂದ ಎಂಟ್ರಿಯಾದವರ ಪೈಕಿ, ಕೆಲವರಷ್ಟೇ ಇಲ್ಲಿ ಗಟ್ಟಿನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ. ಅಂತಹವರ ಸಾಲಿಗೆ ವಜ್ರಾಂಗ್‌  ಶೆಟ್ಟಿ ಕೂಡ ಒಬ್ಬರು. ಅಜಾನುಬಾಹುನಂತಿರುವ ವಜ್ರಾಂಗ್‌  ಶೆಟ್ಟಿ , ಕನ್ನಡ ಚಿತ್ರರಂಗಕ್ಕೆ ಬಂದು ಆರು ವರ್ಷಗಳು ಗತಿಸಿವೆ. ಈ ಆರು ವರ್ಷಗಳಲ್ಲಿ ಅವರು ಹದಿನೈದು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸಬರಿಂದ ಹಿಡಿದು ಸ್ಟಾರ್‌ ನಟರ ಸಿನಿಮಾಗಳಲ್ಲಿ ವಿಲನ್‌ ಆಗಿ ಮಿಂಚಿದ್ದಾರೆ ಅನ್ನೋದು ವಿಶೇಷ. ತಮ್ಮ ಸಿನಿಜರ್ನಿ ಕುರಿತು ಸ್ವತಃ ವಜ್ರಾಂಗ್‌  ಶೆಟ್ಟಿ  “ಸಿನಿಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.

ಓವರ್‌ ಟು ವಜರಂಗ್‌ ಶೆಟ್ಟಿ…
“ನಾನು ಮೂಲತಃ ಕುಂದಾಪುರ ತಾಲೂಕಿನ ಟೆಕ್ಕಟ್ಟೆ ಗ್ರಾಮದ ಸಾಮಾನ್ಯ ಹುಡುಗ. ಬಿಸಿಎ ಓದು ಮುಗಿಸಿ, ನೇರವಾಗಿ ಬೆಂಗಳೂರಿಗೆ ಬಂದವನು. ಸಿನಿಮಾ ಎಂಬ ಕನಸೇ ಕಾಣದ ನನಗೆ ಸಿನಿಮಾ ಅನ್ನೋ ಅವಕಾಶ ತಾನಾಗಿಯೇ ಬಂತು. 2014ರಲ್ಲಿ ನಾನು ಈ ಬಣ್ಣದ ಲೋಕವನ್ನು ಪ್ರವೇಶ ಮಾಡಿದೆ. “ಸಿದ್ಧಾರ್ಥ” ನನ್ನ ಅಭಿನಯದ ಮೊದಲ ಚಿತ್ರ. ವಿನಯ್‌ರಾಜಕುಮಾರ್‌ ಎದುರು ವಿಲನ್‌ ಆಗಿ ನಟಿಸಿದ ಖುಷಿ ಆ ಸಿನಿಮಾ ಮೂಲಕ ಹೆಚ್ಚಿತು. ಖಳನಾಯಕನಾಗಿ ಮೊದಲ ಸಲ ತೆರೆ ಮೇಲೆ ರಾರಾಜಿಸಿದ ಆ ಕ್ಷಣ ನಿಜಕ್ಕೂ ಅದ್ಭುತ.

ಆ ಸಿನಿಮಾ ಇನ್ನೇನು ಶೂಟಿಂಗ್‌ ನಡೆಯುತ್ತಿರುವಾಗಲೇ ನನಗೆ “ನಮಕ್‌ ಹರಾಮ್‌” ಚಿತ್ರದಲ್ಲೂ ಖಳನಟನಾಗಿ ನಟಿಸುವ ಅವಕಾಶ ಸಿಕ್ಕಿತು. ಆ ಚಿತ್ರದ ಚಿತ್ರೀಕರಣ ಇರುವಾಗಲೇ, “ಮಂತ್ರಂ” ಎಂಬ ಹೊಸ ಚಿತ್ರಕ್ಕೆ ನಾನು ಹೀರೋ ಆಗಿಯೂ ನಟಿಸಿದೆ. ಅದಾದ ಬಳಿಕ ವೆಂಕಟ್‌ ಭಾರಧ್ವಜ್‌ ಅವರ ನಿರ್ದೇಶನದ “ಬಬ್ಲೂಷ” ಚಿತ್ರದಲ್ಲಿ ಬಬ್ಲೂಷ ಎಂಬ ಮೇಜರ್‌ ಪಾತ್ರ ನಿರ್ವಹಿಸಿದೆ. ಆ ಸಿನಿಮಾದ ನಟನೆಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿತು. ನಂತರ “ಮಾದ ಮತ್ತು ಮಾನಸಿ” ಚಿತ್ರದಲ್ಲಿ ಸೆಕೆಂಡ್‌ ಲೀಡ್‌ ಮಾಡಿದೆ. ಅದರೊಂದಿಗೆ “ಕಿನಾರೆ” ಸಿನಿಮಾದಲ್ಲೂ ಸೆಕೆಂಡ್‌ ಲೀಡ್ ಪಾತ್ರ ಮಾಡಿದೆ. ಮಾಲಾಶ್ರೀ ಅವರ “ಉಪ್ಪು ಹುಳಿ ಖಾರ” ಚಿತ್ರದಲ್ಲಿ ಅವರ ಎದುರು ವಿಲನ್‌ ಆಗಿಯೂ ನಟಿಸಿದ್ದೇನೆ. ಉಳಿದಂತೆ ಹೊಸಬರ “ಕಿಸ್‌” ಚಿತ್ರದಲ್ಲೂ ವಿಲನ್.‌ ಅದೇನೋ ಗೊತ್ತಿಲ್ಲ. ಬಹುತೇಕ ಸಿನಿಮಾಗಳಲ್ಲಿ ಖಳನಟನ ಪಾತ್ರಗಳೇ ಹುಡುಕಿ ಬರುತ್ತಿವೆ” ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

ಪಾಸಿಟಿವ್-ನೆಗೆಟಿವ್‌ ಎರಡಕ್ಕೂ ಸೈ
ದರ್ಶನ್‌ ಜೊತೆ ಎರಡು ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿರುವ ವಜ್ರಾಂಗ್‌  ಶೆಟ್ಟಿ ಅವರಿಗೆ ಹೆಮ್ಮೆ ಇದೆ. “ಯಜಮಾನ” ಚಿತ್ರದಲ್ಲೊಂದು ಸಣ್ಣ ಪಾತ್ರ ನಿರ್ವಹಿಸಿದ ಬಳಿಕ ಪುನಃ, “ರಾಬರ್ಟ್‌” ಚಿತ್ರದಲ್ಲಿ ಒಂದು ನೆಗೆಟಿವ್‌ ರೋಲ್‌ ಮಾಡಿದ್ದೇನೆ. ಯಾವಾಗ “ಯಜಮಾನʼ ಸಿನಿಮಾದಲ್ಲಿ ಸಣ್ಣದ್ದಾಗಿ ಕಾಣಿಸಿಕೊಂಡೆನೋ, ಅಲ್ಲಿಂದ ಸಾಕಷ್ಟು ಅವಕಾಶಗಳು ಹುಡುಕಿ ಬಂದಿದ್ದುಂಟು. ಅವೆಲ್ಲವೂ ನೆಗೆಟಿವ್‌ ಪಾತ್ರಗಳೇ. ನನಗೆ ನೆಗೆಟಿವ್‌, ಪಾಸಿಟಿವ್‌ ಬಗ್ಗೆ ಗೊತ್ತಿಲ್ಲ. ಒಂದೊಳ್ಳೆಯ ಪಾತ್ರವಿದ್ದರೆ, ಅದು ನೆಗೆಟಿವ್‌ ಇರಲಿ, ಪಾಸಿಟಿವ್‌ ಆಗಿರಲಿ ಮಾಡ್ತೀನಿ. ಪಾತ್ರದಲ್ಲಿ ತೂಕವಿರಬೇಕಷ್ಟೇ.

ಯಾವುದೇ ಪಾತ್ರವಿದ್ದರೂ ಬ್ಯಾಲೆನ್ಸ್‌ ಮಾಡಿಕೊಂಡು ಕೆಲಸ ಮಾಡ್ತೀನಿ. ಸದ್ಯಕ್ಕೆ ರಿಲೀಸ್‌ಗೆ ಈಗ ನಾಲ್ಕು ಚಿತ್ರಗಳಿವೆ. ಈಗ ಪುನೀತ್‌ರಾಜಕುಮಾರ್‌ ಅಭಿನಯದ “ಜೇಮ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ದಿಗಂತ್‌ ಅವರ “ಮಾರಿಗೋಲ್ಡ್‌” ಚಿತ್ರದಲ್ಲೂ ನೆಗೆಟಿವ್‌ ರೋಲ್.‌ “ರೂಮ್‌ಬಾಯ್‌” ಸಿನಿಮಾದಲ್ಲೂ ನೆಗೆಟಿವ್‌ ಶೇಡ್‌ ಇದೆ. ಉಳಿದಂತೆ ಎರಡು ಹೊಸ ಚಿತ್ರಗಳ ಮಾತುಕತೆ ನಡೆಯುತ್ತಿದೆ. ಆ ಪೈಕಿ ಒಂದು ಲೀಡ್‌ ಪಾತ್ರ, ಇನ್ನೊಂದು ದೊಡ್ಡ ಬ್ಯಾನರ್‌ನ ಚಿತ್ರ” ಎಂದು ವಿವರ ಕೊಡುತ್ತಾರೆ ವಜ್ರಾಂಗ್‌  ಶೆಟ್ಟಿ .‌

ಗಾಡ್‌ ಫಾದರ್‌ ಇಲ್ಲದೇ ಬಂದವನು
ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು. ನಿಜ ಹೇಳುವುದಾದರೆ, ನಾನಿಲ್ಲಿಗೆ ಬರುವ ಮುನ್ನ, ಸಿನಿಮಾ ಕನಸು ಕಂಡವನಲ್ಲ.

2014 ರಲ್ಲಿ ನಾನು “ಮಿಸ್ಟರ್‌ ‌ ಕುಂದಾಪುರ” ಆದವನು. ಅಲ್ಲಿಂದ ಬೆಂಗಳೂರು ಬರುವುದಕ್ಕೆ ಒಂದು ಕಾರಣ ಸಿಕ್ತು. ಇಲ್ಲಿಗೆ ಬಂದು ಒಂದು ಕಂಪೆನಿಯಲ್ಲಿ ವರ್ಷ ಕೆಲಸ ಮಾಡಿದೆ. ಆದರೆ, ಅದೇಕೋ ನನಗೆ ಇಂಟ್ರೆಸ್ಟ್‌ ಎನಿಸಲಿಲ್ಲ. ನನ್ನ ಕೆಲಸ ಇದಲ್ಲ ಅನ್ನಿಸತೊಡಗಿತು. ಮಾಡೆಲ್‌ ಕ್ಷೇತ್ರದಿಂದ ಬಂದವನಾಗಿದ್ದರಿಂದ ಕ್ರಮೇಣ ನನಗೂ ಎಲ್ಲೋ ಒಂದ ಕಡೆ ಸಿನಿಮಾ ಮೇಲೆ ಒಲವು ಮೂಡ ತೊಡಗಿತು. ಆದರೆ, ಗಾಡ್‌ಫಾದರ್‌ ಅನ್ನೋರು ನನಗೆ ಯಾರೂ ಇಲ್ಲ. ಹೇಗೆ ಸಿನಿಮಾರಂಗವನ್ನು ತಲುಪುವುದು ಎಂಬ ಪ್ರಶ್ನೆ ಕಾಡಿದ್ದು ನಿಜ. ಹೀಗಿರುವಾಗಲೇ ಗೆಳೆಯರೊಬ್ಬರ ಗೆಳೆಯರ ಮಗನ ಸಿನಿಮಾವೊಂದು ನಡೆಯುತ್ತಿತ್ತು. ಅಲ್ಲಿಗೆ ಕರೆದುಕೊಂಡು ಹೋದ ಗೆಳೆಯನಿಂದ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ನಂತರ “ಸಿದ್ಧಾರ್ಥ” ಸಿನಿಮಾದ ಆಡಿಷನ್‌ಗೆ ಹೋದೆ. ಸ್ವಲ್ಪ ದಿನಗಳ ಬಳಿಕ ಆ ತಂಡದಿಂದ ಆಯ್ಕೆಯಾದ ಬಗ್ಗೆ ಫೋನ್‌ ಬಂತು. ಆ ಸಿನಿಮಾದಲ್ಲಿ ನಟಿಸಿದ್ದೇ ತಡ, ಅಲ್ಲಿಂದ ಇಲ್ಲಿಯವರೆಗೆ ತಿರುಗಿ ನೋಡಿಲ್ಲ. ಬಂದ ಪಾತ್ರಗಳನ್ನು ಇಷ್ಟಪಟ್ಟು, ಪ್ರೀತಿಯಿಂದ ಮಾಡುತ್ತಿದ್ದೇನೆ.

ಗಟ್ಟಿನೆಲೆ ಕಾಣೋ ಆಸೆ
ಈವರೆಗೆ ನನಗೆ ಸಿನಿಮಾ ಅತೀವ ತೃಪ್ತಿ ಕೊಟ್ಟಿದೆ. ಇಷ್ಟವಾದ ಕೆಲಸ ಬಿಟ್ಟು ಬಂದಿದ್ದಕ್ಕೂ ಈ ಕಲೆ ನನ್ನ ಕೈ ಹಿಡಿದಿದೆ. ಸಿನಿಮಾ ನನಗೆ ಅನ್ನ ಕೊಟ್ಟಿದೆ. ಒಳ್ಳೆಯ ಗೌರವವನ್ನೂ ಕೊಟ್ಟಿದೆ. ಅಪಾರ ಜನರ ಪ್ರೀತಿಯನ್ನೂ ನೀಡಿದೆ. ಇದಕ್ಕಿಂತ ಬೇರೇನು ಬೇಕು. ಸದ್ಯಕ್ಕೆ ಬೇರೆ ಭಾಷೆಯಿಂದ ಅವಕಾಶ ಬಂದಿಲ್ಲ. ಹಾಗೊಂದು ವೇಳೆ ಒಳ್ಳೆಯ ಪಾತ್ರ ಬಂದರೆ ಖಂಡಿತ ಮಾಡ್ತೀನಿ. ಆದರೆ, ಮೊದಲು ಕನ್ನಡಕ್ಕೆ ಆದ್ಯತೆ ನೀಡ್ತೀನಿ. ಇಲ್ಲೇ ಗಟ್ಟಿನೆಲೆಯೂರಬೇಕು ಎಂಬ ಮಹಾದಾಸೆ ನನ್ನದು. ಸಿನಿಮಾಗೆ ಬರುವ ಮುನ್ನ ಯಾವುದರಲ್ಲೂ ಪಕ್ವತೆ ಇರಲಿಲ್ಲ.

ಇಲ್ಲಿ ಅವಕಾಶಗಳು ಬರತೊಡಗಿದ ಮೇಲೆ, ನಟನೆ ಕಲಿತೆ, ಡ್ಯಾನ್ಸ್‌ ಕಲಿತೆ, ಸ್ಟಂಟ್‌ ಕೂಡ ಕಲಿತಿದ್ದೇನೆ. ಒಬ್ಬ ನಟನಿಗೆ ಬೇಕಾದ ಎಲ್ಲಾ ಕ್ವಾಲಿಟೀಸ್‌ ಬಗ್ಗೆಯೂ ತಿಳಿದುಕೊಂಡು ಅದನ್ನೇ ಫಾಲೋ ಮಾಡುತ್ತಿದ್ದೇನೆ. ರೆಗ್ಯುಲರ್‌, ವ್ಯಾಯಾಮ, ಜಿಮ್‌ ಮಾಡುತ್ತಿದ್ದೇನೆ. ಒಂದಷ್ಟು ಹೊಸ ಬಗೆಯ ಚಿತ್ರಗಳನ್ನು ನೋಡುತ್ತಲೇ ಕಲಿಯುತ್ತಿದ್ದೇನೆ. ಇವತ್ತು ನಾನೇನೆ ಆಗಿದ್ದರೂ, ಅದು ನನ್ನ ಅಪ್ಪ, ಅಮ್ಮ, ಅಕ್ಕಂದಿರ ಸಹಕಾರದಿಂದ. ಅವರ ಸಹಕಾರ ಇರದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ನಟ ಆಗುತ್ತಿರಲಿಲ್ಲ. ಹಾಗೆಯೇ ನನಗೆ ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ಸಹಕಾರವನ್ನು ಎಂದಿಗೂ ಮರೆಯೋದಿಲ್ಲ ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

Related Posts

error: Content is protected !!