Categories
ಸಿನಿ ಸುದ್ದಿ

ಬರಲಿದೆ ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ – ವಿನಾಯಕರಾಮ ಕಲಗಾರು ಅವರ ಕಾಮಗಾರಿ ಶುರು

 

ಜನವರಿ 27ಕ್ಕೆ ಲೋಕಾರ್ಪಣೆ

ಪತ್ರಕರ್ತ ವಿನಾಯಕರಾಮ್‌ ಕಲಗಾರು ಒಳ್ಳೆಯ ಬರಹಗಾರ. ಅದಕ್ಕಿಂತಲೂ ಹೆಚ್ಚು ಅಷ್ಟೇ ಸೊಗಸಾದ ಮಾತುಗಾರ. ಹಾಗಾಗಿಯೇ ಅವರು, ಹಲವು ಚಿತ್ರಗಳಿಗೆ ಮಾತುಗಳನ್ನೂ ಪೋಣಿಸಿದ್ದಾರೆ. ಹಲವಾರು ವಾಹಿನಿಗಳ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ವಿನಾಯಕರಾಮ್‌ ಕಲಗಾರು, ಕೆಲವು ವಾಹಿನಿಗಳಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋಗಳ ಸೂತ್ರದಾರ ಕೂಡ. ಅವರ ಬಗ್ಗೆ ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಸಿನಿಮಾರಂಗದಲ್ಲೇ ಅತೀ ಹೆಚ್ಚು ಒಡನಾಟ ಇಟ್ಟುಕೊಂಡಿರುವ ವಿನಾಯಕರಾಮ್‌ ಕಲಗಾರು, ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಈ ಹಿಂದೆಯೇ ಹೇಳಿದ್ದರು. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ “ಡಾ.ರಾಜಕುಮಾರ ರಸ್ತೆ” ಎಂದೂ ಹೆಸರಿಟ್ಟಿದ್ದರು. ಹಾಗಂತ ಅವರ ಆ ಸಿನಿಮಾ ಕನಸು ಇನ್ನೂ ಮುಗಿದಿಲ್ಲ. ನನಸು ಮಾಡಿಕೊಳ್ಳುವ ಹಾದಿಯಲ್ಲೇ ಅವರಿದ್ದಾರೆ. ಹಾಗಾಗಿಯೇ ರಾಜ್‌ಕುಮಾರ್‌ ರಸ್ತೆಯಲ್ಲಿ ನಿಂತಿದ್ದಾರೆ.

ವಿನಾಯಕರಾಮ್‌ ಕಲಗಾರು

ಹೌದು, ವಿನಾಯಕರಾಮ್‌ ಕಲಗಾರು ಸಿನಿಮಾ ಮಾಡುವುದು ದಿಟ. ಅದಕ್ಕೂ ಮೊದಲು ಅವರೀಗ ಕಾದಂಬರಿ ಹಿಂದೆ ನಿಂತಿದ್ದಾರೆ. “ಡಾ.ರಾಜ್‌ಕುಮಾರ್‌ ರಸ್ತೆ” ಹೆಸರಿನ ಕಾದಂಬರಿ ಬರೆದು ಮುಗಿಸಿರುವ ಅವರು, ಅದನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಆ ಅಪರೂಪದ ಪುಸ್ತಕವನ್ನು ಅಣ್ಣಾವ್ರ ಮುತ್ತಿನಂಥ ಮೂವರು ಮಕ್ಕಳಿಗೆ ಅರ್ಪಣೆ ಮಾಡುವ ಹುರುಪಿನಲ್ಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಯೂ ನಡೆಸಿದ್ದಾರೆ. ಜನವರಿ ೨೭ರಂದು “ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ ಅಧ್ಯಾಯಗಳ ರೂಪದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೆ.ಪಿ.ಶ್ರೀಕಾಂತ್‌ ಅವರು ಕಾದಂಬರಿಯ ಮೊದಲ ಎಪಿಸೋಡ್‌ ಅನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇಷ್ಟಕ್ಕೂ ಜನವರಿ 27ರಂದು ಪುಸ್ತಕ ಬಿಡುಗಡೆ ಯಾಕೆ ಗೊತ್ತಾ? ಆ ದಿನದಂದು “ಡಾ.ರಾಜ್‌ಕುಮಾರ್‌ ರಸ್ತೆ”ಗೆ ನಾಮಕರಣ ಮಾಡಲಾಗಿತ್ತು. ಆ ಕಾರಣಕ್ಕಾಗಿಯೇ ಜನವರಿ ೨೭ರಂದು ವಿನಾಯಕರಾಮ್‌ ಕಲಗಾರು ತಮ್ಮ ಪುಸ್ತಕವನ್ನು ಅಂದು ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ತಮ್ಮ “ಡಾ.ರಾಜ್‌ಕುಮಾರ್‌ ರಸ್ತೆ” ಬಗ್ಗೆ ಹೇಳುವ ವಿನಾಯಕರಾಮ್‌ ಕಲಗಾರು, “ಇಲ್ಲಿ ಬರುವ ಪಾತ್ರಗಳು ಮತ್ತು ಚಿತ್ರಗಳು ಕೇವಲ ಕಾಲ್ಪನಿಕ. ಅದಕೆ ರಾಜಕುಮಾರ ಎಂಬ ರಮಣೀಯ ಹೆಸರೇ ಆ ಎಲ್ಲ ಕಥನ ಕಹಾ‌ನಿಯ ನಾವಿಕ. ಈ ಕಾದಂಬರಿ ನನ್ನ ಬದುಕಿನ ಮುಖಪುಟ. ಇಲ್ಲಿ ಯಾರೂ ಅರಿಯದೇ ಇರೋ ಅಚ್ಚರಿಗಳ ಗುಚ್ಛ ಸಹಿತ ರೋಚಕ ಪಟ ಇದಾಗಲಿದೆ. ಇದು ಬರೀ ಕಾದಂಬರಿ ಅಲ್ಲ. ಇಲ್ಲಿ ತೆರೆದುಕೊಳ್ಳುತ ಹೋಗುವ ಪಾತ್ರ-ಚಿತ್ರಗಳು ನನ್ನನ್ನೇ ಭಯ ಬೀಳಿಸುವ ಸತ್ಯಾಂಶ ಸಂಭೂತರು! ಆದರೆ, ಇದು ಕಾಲ್ಪನಿಕ…100% ವೈಮಾನಿಕ… ನನ್ನ ಕಣ್ಣಳತೆಗೂ ಮೀರಿದ ‘ರಾಜತಾಂತ್ರಿಕ’ ಘಟನಾ ಗುಚ್ಛಗಳ ಗಮನಾರ್ಹ ಗ್ಯಾಲರಿ” ಎಂಬುದು ಅವರ ಮಾತು.


ಅದೇನೆ ಇರಲಿ, ರಸ್ತೆ ಅನ್ನುವ ಪದವನ್ನು ಕೇಳಿದರೆ ಸಾಕು, ಅಲ್ಲಿ ಒಂದಷ್ಟು ಕಲರ್‌ಫುಲ್‌ ಕನಸುಗಳ ಮೆರವಣಿಗೆಯ ನೆನಪಾಗುತ್ತೆ. ಒಂದೊಂದು ರಸ್ತೆಯೂ ಒಂದೊಂದು ಕಥೆ ಹೇಳುತ್ತೆ. ಅಂಥದ್ದೊಂದು ರಸ್ತೆಗೆ ಸಾಕಷ್ಟು ಇತಿಹಾಸವೂ ಉಂಟು. ಈಗ ಡಾ.ರಾಜ್‌ಕುಮಾರ್‌ ರಸ್ತೆ ಮೇಲೊಂದು ಕಾದಂಬರಿ ಬರೆದಿದ್ದಾರೆ. ಆ ಹೆಸರಿನ ರಸ್ತೆ ಅಂದಾಕ್ಷಣ ಅದೊಂದು ಮುಗಿಯದ ಸಂಭ್ರಮವೇ ಸರಿ. ಸದ್ಯ, ಕಾದಂಬರಿ ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ಸಿನಿಮಾ ಮಾಡುವ ಉದ್ದೇಶ ಅವರದು. ಅವರ ಹೊಸ ಹೆಜ್ಜೆಗೆ “ಸಿನಿಲಹರಿ”ಯ ಶುಭಹಾರೈಕೆ.

Categories
ಸಿನಿ ಸುದ್ದಿ

ಮಕ್ಕಳ ತಂಟೆಗೆ ಬರಬೇಡಿ ಅಂತಾರೆ ಕೋಡ್ಲು ರಾಮಕೃಷ್ಣ – ಕೊರೊನಾ ಎಫೆಕ್ಟ್‌ ಬಳಿಕ ಮಕ್ಕಳ ಮನಸ್ಥಿತಿಯ ಚಿತ್ರಣ

ಮಕ್ಕಳ ತಂಟೆಗೆ ಬಂದ್ರೆ ಹುಷಾರ್…!‌
– ಈ ಮಾತನ್ನು ನಾವ್‌ ಹೇಳುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿರುವ ಕೋಡ್ಲು ರಾಮಕೃಷ್ಣ ಹೇಳುತ್ತಿದ್ದಾರೆ. ಹೌದು, ಅವರೀಗ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ಮಕ್ಕಳ ತಂಟೆಗೆ ಬಂದ್ರೆ ಹುಷಾರ್” ಎಂದು ನಾಮಕರಣ ಮಾಡಲಾಗಿದೆ. ಇದೊಂದು ಸಂದೇಶ ಸಾರುವ ಸಿನಿಮಾ. ಈ ಚಿತ್ರದ ಬಗ್ಗೆ ಹೇಳುವುದಾದರೆ, “ಮಕ್ಕಳ ನಿತ್ಯ ಚಟುವಟಿಕೆ, ಪೋಷಕರ ಜೀವನ ಶೈಲಿ, ಮೊಬೈಲ್ ಗೀಳು, ಶ್ರೀಮಂತ, ಮಧ್ಯಮ ಹಾಗೂ ಬಡವರ ಮನೆ ಮಕ್ಕಳು ಕೊರೊನಾ ಬರುವ ಮೊದಲು ಹಾಗೂ ನಂತರ ಹೇಗಿದ್ದಾರೆ? ಎನ್ನುವುದೇ ಈ ಚಿತ್ರದ ಕಥಾ ಹಂದರ.


ಚಿತ್ರೀಕರಣ ಮುಗಿದು, ಸೆನ್ಸಾರ್ ಕೂಡ ಆಗಿದೆ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ. ಸಂಕ್ರಾಂತಿಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಭುವನ್ ಫಿಲಂಸ್ ಬ್ಯಾನರ್‌ನಲ್ಲಿ ನಾರಾಯಣ್ ಹಾಗೂ ಕೋಡ್ಲು ರಾಮಕೃಷ್ಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ದೀಪು (ರಾಮನಗರ) ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.


ಕ್ರಿಶ್ ಜೋಶಿ ಅವರ ಕಥೆಗೆ ಕೋಡ್ಲು ರಾಮಕೃಷ್ಣ ಹಾಗೂ ರಾಮಮೂರ್ತಿ ಚಿತ್ರಕಥೆ ರಚಿಸಿದ್ದಾರೆ. ಕ್ರಿಶ್ ಜೋಶಿ ಅವರ ಜೊತೆಗೂಡಿ ಕೋಡ್ಲು ರಾಮಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಮಿತ ಮಲ್ನಾಡ್ ಸಂಗೀತ ನಿರ್ದೇಶನವಿದೆ., ನಾಗೇಂದ್ರ ಛಾಯಾಗ್ರಹಣ ಮಾಡಿದರೆ, ವಸಂತ್ ಕುಮಾರ್ ಸಂಕಲನವಿದೆ.

ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಕಾಶ್, ಶಿವಧ್ವಜ್, ಪ್ರಥಮ ಪ್ರಕಾಶ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಕುಮಾರಿ ಐಶ್ವರ್ಯ, ಶ್ರೀಧರ್ ನಾಯಕ್ ಸ್ನೇಹ ಭಟ್, ಪ್ರಕಾಶ್, ಭವಾನಿ ಪ್ರಕಾಶ್, ಬೇಬಿ ಗಗನ, ಬೇಬಿ ಯಶಿಕಾ, ಬೇಬಿಶ್ರೀ, ಬೇಬಿ ಪ್ರತಿಷ್ಠ ದೇಶಪಾಂಡೆ, ಯುಕ್ತ ಹೆಗಡೆ, ಮಾಸ್ಟರ್ ವಿಷ್ಣು ಸಂಜಯ್, ಮಾಸ್ಟರ್ ತರುಣ್, ಮಾಸ್ಟರ್ ಸರ್ವಜ್ಞ, ಮಾಸ್ಟರ್ ಯುವರಾಜ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸಂಕ್ರಾಂತಿಗೆ ಕೃಷ್ಣ ಟಾಕೀಸ್ ನಲ್ಲಿ ಸಂ – ಕ್ರಾಂತಿ, ಲಿರಿಕಲ್ ವಿಡಿಯೋ ಲಾಂಚ್ ಗೆ ನಟ ಅಜೇಯ ರಾವ್ ಪುತ್ರಿಯೇ ಗೆಸ್ಟ್ ! !

ಸಂಕ್ರಾಂತಿ ಗೆ ಸಂಗೀತದ ಸಂ-ಕ್ರಾಂತಿ

ನಟ ಅಜೇಯ ರಾವ್ ಈಗ  ‘ ಕೃಷ್ಣ ಟಾಕೀಸ್’ ‘‌  ಚಿತ್ರದ ಗುಂಗಿನಲ್ಲಿದ್ದಾರೆ. ಈ ವರ್ಷದ ಆರಂಭದ ಮಟ್ಟಿಗೆ ಇದು ಅವರಿಗೆ ಬಹು ನಿರೀಕ್ಚಿತ ಚಿತ್ರ. ಅವರ ಹಾಗೆಯೇ ‌ ಇಡೀ ಚಿತ್ರ ತಂಡಕ್ಕೂ ಕೂಡ. ಅದರಲ್ಲೂ ನಾಳಿನ‌ ( ಜ.14) ಸಂಕ್ರಾಂತಿ ‘ಕೃಷ್ಷ ಟಾಕೀಸ್ ‘ಚಿತ್ರ ತಂಡಕ್ಕೆ ತುಂಬಾನೆ ವಿಶೇಷ.ಯಾಕಂದ್ರೆ, ಸಂಕ್ರಾಂತಿ‌ಗೆ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಸೋಷಲ್ ಮೀಡಿಯಾದಲ್ಲಿ ಲಾಂಚ್ ಆಗುತ್ತಿರುವ ಈ ಲಿರಿಕಲ್ ವಿಡಿಯೋ ವನ್ನು ಕೃಷ್ಷ ಅಜೇಯ ರಾವ್ ಪುತ್ರಿ ಪುಟಾಣಿ ಚೆರ್ರಿ ಲಾಂಚ್ ಮಾಡುತ್ತಿದ್ದಾಳೆ. ಅದೇ ಕಾರಣಕ್ಕೆ ಚಿತ್ರ ತಂಡ ಕಾತರದಲ್ಲಿದೆ.

ಗೋಕುಲ್ ಎಂಟರ್ಟೈನರ್ ಬ್ಯಾನರ್ ನಲ್ಲಿ ಗೋವಿಂದ್ ರಾಜು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು, ಸೊಗಸಾದ ಹಾಡುಗಳನ್ನು ಕೊಟ್ಟ ಖುಷಿ ಅವರಿಗೂ ಇದೆ. ಈಗ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಹಾಡಿಗೆ ವಿಜಯಾನಂದ ರಚನೆ ಇದೆ.  ‘ ಚಿತ್ರದಲ್ಲೇ ಹೈಲೈಟ್ ಎನ್ನುವಂತಹ ತುಂಬಾ ಮುದ್ದಾದ ಹಾಡು ಇದು.


ಬಹಳ ಸೊಗಸಾಗಿ‌ ಮೂಡಿ ಬಂದಿದೆ. ಇದರ ಲಿರಿಕಲ್ ವಿಡಿಯೋ ವನ್ನು ಈಗ ಚಿತ್ರದ ನಾಯಕ ನಟ ಕೃಷ್ಷ ಅಜೇಯ್ ರಾವ್ ಪುತ್ರಿ ಚೆರ್ರಿ ಲಾಂಚ್ ಮಾಡುತ್ತಿರುವುದು ತುಂಬಾ ತುಂಬಾ‌ ಖುಷಿ ತಂದಿದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್.

ಅಜೇಯ್ ರಾವ್ ಪುತ್ರಿ ಚೆರ್ರಿ

ಅಜೇಯ ರಾವ್ ನಟನೆಯ ಕೃಷ್ಣ ಸಿರೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಸಾಂಗ್ ಕೊಟ್ಟ ಖ್ಯಾತಿ ಸಂಕ್ರಾಂತಿ, ನಿರ್ದೇಶಕ ಶ್ರೀಧರ್ ಅವರದು‌. ಈಗ ಕೃಷ್ಣ ಟಾಕೀಸ್ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿ ಆಗಿದ್ದಾರೆ. ಸದ್ಯಕ್ಕೀಗ ಲಿರಿಕಲ್ ವಿಡಿಯೋ ದೊಂದಿಗೆ ಹವಾ ಎಬ್ಬಿಸಲು ಬರುತ್ತಿದ್ದಾರೆ‌. ಕೃಷ್ಷ ಟಾಕೀಸ್ ಎನ್ನುವ ಹೆಸರೇ ಹೇಳುವಂತೆ, ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ನಡೆಯುವ ಕತೆ. ಅದೇನು? ಯಾರಿಗೂ ಗೊತ್ತಿಲ್ಲ.‌ಅದು ಗೊತ್ತಾಗುವುದು ತೆರೆ ಮೇಲೆಯೇ. ಈ ಕತೆಯಲ್ಲಿ ಅಜೇಯ್ ರಾವ್ ಅವರಿಗೆ ಜೋಡಿಯಾಗಿ ಸಿಂಧು ಲೋಕನಾಥ್, ಅಪೂರ್ವ ಇದ್ದಾರೆ‌. ಉಳಿದಂತೆ ದೊಡ್ಡ ತಾರಾಗಣವೇ ಇದೆ.

Categories
ಸಿನಿ ಸುದ್ದಿ

ಲೂಸ್ ಮಾದ ಯೋಗಿ ಬಗ್ಗೆ ಇಂಡಸ್ಟ್ರಿ ನವರು ಯಾಕೆ ಹಾಗೆ ಹೇಳಿದ್ರು? ನಿರ್ದೇಶಕ ರಾಮ್ ಪ್ರಸಾದ್ ರಿವೀಲ್ ಮಾಡಿದ ಸುದ್ದಿ ಹೀಗಿದೆ…..

ಲಂಕೆ ಟೈಟಲ್ ಅನಾವರಣ ಕಾರ್ಯಕ್ರಮದಲ್ಲಿ ರಿವೀಲ್ ಆದ ಸುದ್ದಿ


ನಟ ಲೂಸ್ ಮಾದ ಯೋಗೇಶ್ ಈಗ’ ಲಂಕೆ ‘ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಈಗಾಗಲೇ ಈ ಚಿತ್ರ ಚಿತ್ರೀಕರಣ ಮುಗಿಸಿ, ಸೆನ್ಸಾರ್ ಹಂತಕ್ಕೆ ಕಾಲಿಟ್ಟಿದೆ. ಎಲ್ಲವೂ ಅಂದುಕೊಂಡಂತಾದರೆ, ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಲೂಸ್ ಮಾದ ಯೋಗೇಶ್, ಸಂಚಾರಿ ವಿಜಯ್, ಕಾವ್ಯ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇನ್ನು ಶೀರ್ಷಿಕೆ ಯೇ ಹೇಳುವ ಹಾಗೆ ಇದು ರಾಮಾಯಣ ಕ್ಕೆ ಸಣ್ಣದೊಂಡು ಲಿಂಕ್ ಹೊಂದಿರುವ ಕತೆ.

ಅದೆಲ್ಲದರಾಚೆ ಇಂಟೆರೆಸ್ಟಿಂಗ್ ಸಂಗತಿ ಅಂದ್ರೆ ಲೂಸ್ ಮಾದ ಯೋಗೇಶ್ ಅವರು ಈ ಚಿತ್ರಕ್ಕೆ ನಾಯಕರಾಗಿದ್ದೇ ವಿಚಿತ್ರವಂತೆ. ಯಾಕಂದ್ರೆ ನಿರ್ದೇಶಕ ರಾಮ್ ಪ್ರಸಾದ್ ಅವರು ಚಿತ್ರಕ್ಕೆ ನಾಯಕ ಆಗ್ಬೇಕು ಅಂತ ಯೋಗೇಶ್ ಅವರ ಬಳಿಗೆ ಹೋಗುವ ಮುನ್ನ ಇಂಡಸ್ಟ್ರಿ ಅವರ ಬಗ್ಗೆ ಎನೇನೋ ಹೇಳಿತ್ತಂತೆ. ಹಾಗಾಗಿ ಅವರನ್ನು ಅಪ್ರೋಚ್ ಮಾಡೋದು ಹೇಗೋ ಏನೋ ಅಂತ ಯೋಚ್ನೆ ಮಾಡಿದ್ರಂತೆ. ಕೊನೆಗೆ ಭಯದಿಂದಲೇ ನಟ‌ಯೋಗಿ ಅವರನ್ನು ಭೇಟಿ ಮಾಡಿದಾಗ ಅವರ ನಿಜವಾದ ಪರಿಚಯ ವಾಯಿತ್ತಂತೆ. ಅವರ ಪ್ರಕಾರ ಯೋಗಿ ಅಂದ್ರೆನೇ ಬೇರೆ.


‘ ಯೋಗಿ ಅಂದ್ರೆ ಸಹೋದರ, ಯೋಗಿ ಅಂದ್ರೆ ಗೆಳೆಯ,ಯೋಗಿ ಅಂದ್ರೆ ಅಡೋರೆಬಲ್…ಏನ್ ಹೇಳಿದ್ರು ಕಮ್ಮಿನೇ…ಯೋಗಿ ಅಂದ್ರೆ ಏನು ಅಂತ ನಂಗೆ ಅವರನ್ನು ಭೇಟಿ ಮಾಡಿದ ಮೊದಲ ದಿನವೇ ಗೊತ್ತಾಯಿತು.ಯಾರೇರೋ ಏನೇನೋ ಹೇಳಿದ್ರಲ್ಲಾ ಅಂತ ನಂಗೆ ನಾನೇ ಅಚ್ಚರಿ ಪಟ್ಟೆ. ಅವರ ಜತೆಗೆ ಬೇಕಾದ್ರೆ ಇನ್ನು ಹತ್ತು ಸಿನಿಮಾ ಮಾಡಬಲ್ಲೆ. ಅಷ್ಟು ಸಹಕಾರದ ಮನೋಭಾವ ಇರುವ ನಟ’ ಅಂತ ಯೋಗಿ ಅವರನ್ನು ಮುಕ್ತ ಕಂಠದಿಂದ ಬಣ್ಣಿಸಿದರು ನಿರ್ದೆಶಕ ರಾಮ್ ಪ್ರಸಾದ್. ಕೊನೆಗೆ ಯೋಗಿ ಮಾತನಾಡುತ್ತಾ, ಯಾರು ಹಂಗೆ ಹೇಳಿದ್ದು ಅವ್ರ ನಂಬರ್ ಕೊಡಿ, ನಾನೇ ಅವರಿಗೆ ಕಾಟ ಕೊಡ್ತೀನಿ’ ಅಂತ ಕಾಮಿಡಿ ಮೂಲಕ ತಮ್ಮ ವಿರುದ್ಧ ಹೇಳಿದವರಿಗೆ ತಿರುಗೇಟು ಕೊಟ್ಟರು ಯೋಗೇಶ್.

Categories
ಸಿನಿ ಸುದ್ದಿ

ಚಡ್ಡಿದೋಸ್ತರ ಹಾಡು ಪಾಡು – ಕಡ್ಡಿ ಅಲ್ಲಾಡಿಸೋ ಮಂದಿಯ ಆಡಿಯೋ ಕಾರ್ಯಕ್ರಮ

ಕೌಂಡಿನ್ಯರ ಕಾದಂಬರಿಗೆ ಸಿನಿಮಾ ಸ್ಪರ್ಶ

ನಿರ್ದೇಶಕ “ಆಸ್ಕರ್‌” ಕೃಷ್ಣ ಈಗ ಹೊಸದೊಂದು ಚಿತ್ರ ಮಾಡಿದ್ದು ಗೊತ್ತೇ ಇದೆ. ಅದೀಗ ರಿಲೀಸ್‌ ಹಂತಕ್ಕ ಬಂದಿದೆ. ಹೌದು, ಈ ಹಿಂದೆ “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಮತ್ತು “ಮನಸಿನ ಮರೆಯಲಿ” ಸಿನಿಮಾ ನಿರ್ದೇಶಿಸಿದ್ದ ಕೃಷ್ಣ, ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಮಾಡಿದ್ದಾರೆ. ಅದರ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡವು. ಅಂದಹಾಗೆ, ಈ ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ನಿರ್ಮಾಣ ಮಾಡಿದ್ದಾರೆ. ನಟಿ ಪ್ರೇಮಾ ಅಂದು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು.

ಅವರೊಂದಿಗೆ ಎಸ್.ಎ. ಚಿನ್ನೇಗೌಡ, ಬಾಮ ಹರೀಶ್, ಬಾಮ. ಗಿರೀಶ್, ರವಿಚೇತನ್, ಶಿಲ್ಪ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು.
ತಮ್ಮ ಸಿನಿಮಾ ಕುರಿತು ಮಾತಿಗಿಳಿದ ನಿರ್ದೇಶಕ ಕೃಷ್ಣ, “ನನ್ನ ನಿರ್ದೇಶನದ ಐದನೇ ಚಿತ್ರವಿದು. “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಹಾಗೂ “ಮನಸಿನ ಮರೆಯಲಿ” ನಂತರ ಈ ಚಿತ್ರ ಮಾಡಿದ್ದೇನೆ. ಅಲ್ಲದೆ ಮೊದಲ ಸಲ ಪ್ರಮುಖ ಪಾತ್ರವೊಂದನ್ನು ಕೂಡ ಮಾಡಿದ್ದೇನೆ ಸೂಪರ್ ನ್ಯಾಚುರಲ್, ರೊಮ್ಯಾಂಟಿಕ್ ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಚಿತ್ರಗಳನ್ನು ಮಾಡಿದ ನಂತರ ಈ ಚಿತ್ರದ ಮೂಲಕ ಕ್ರೈಂ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದೇನೆ. ಈ ಟೈಟಲ್ ಕೊಟ್ಟವರು ಚಿತ್ರದ ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ. ಇಬ್ಬರು ಸ್ನೇಹಿತರ ಬಾಂಡಿಂಗ್, ಫ್ರೆಂಡ್‍ಷಿಪ್ ಮಧ್ಯೆ ನಡೆಯುವ ಹುಡುಗಾಟ, ತುಂಟಾಟ ಎಲ್ಲಾ ಇದೆ. ಇದರಲ್ಲಿ ಪೋಲೀಸ್, ವ್ಯಕ್ತಿಯ ಸೋಷಿಯಲ್ ಲೈಫ್ ಹೇಗೆಲ್ಲಾ ಇರುತ್ತೆ ಎಂಬುದನ್ನು ಹೇಳಲಾಗಿದೆ.

ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ, ಇಲ್ಲೂ ಅಂಥದ್ದೇ ಕಥೆ ಇದೆ. ಲೋಕೇಂದ್ರ ಸೂರ್ಯ ಅವರ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿ ಇಷ್ಟಪಟ್ಟೆ. ನಂತರ ಅವರನ್ನು ಭೇಟಿ ಮಾಡಿ ಮಾತಾಡಿದೆ. ಮೊದಲು ಬರೀ ಪಾತ್ರ ಮಾಡಲು ಬಂದವರು ನಂತರ ಎಲ್ಲದರಲ್ಲೂ ಇನ್‍ವಾಲ್ವ್ ಆಗಿಬಟ್ಟರು. ಅವರೇ ಚಿತ್ರಕಥೆ ಡೈಲಾಗ್ ಬರೆದರು. ಆಗಿನ್ನೂ ಪ್ರೊಡ್ಯೂಸರ್ ಇರಲಿಲ್ಲ, ಮೊದಲು ಇಬ್ಬರೇ ಸೇರಿ ಮಾಡೋಣ ಅಂದುಕೊಂಡಿದ್ದೆವು. ಆ ಸಮಯದಲ್ಲಿ ಸೆವೆನ್‍ರಾಜ್ ಸಿಕ್ಕರು, ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಕಾರಣ ಸೆವೆನ್‍ರಾಜ್. ನಾಯಕಿ ಪಾತ್ರಕ್ಕೆ ಹಲವರನ್ನು ಸಂಪರ್ಕಿಸಿದೆವು, ಯಾರೂ ಸರಿಯಾಗಲಿಲ್ಲ, ಸಿನಿಮಾ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ಬಹುಭಾಷಾ ನಟಿ ಗೌರಿ ನಾಯರ್ ನಮ್ಮ ನಾಯಕಿಯಾಗಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಬಳಿಕ ಅವರೀಗ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರದ್ದೆಯಿದ್ದರೆ ಮಾತ್ರ ಸಿನಿಮಾ ಮಾಡಬೇಕು ಎನ್ನುವದು ನನ್ನ ಪಾಲಿಸಿ, ನನ್ನ ಪಾತ್ರಕ್ಕೆ ಹೆಚ್ಚು ಮೇಕಪ್ ಬೇಕಿರಲಿಲ್ಲ, ಜೈಲಿಂದ ಹೊರಬಂದ ವ್ಯಕ್ತಿ ಹೇಗಿರ್ತಾನೋ ಆ ಥರದ ಪಾತ್ರ ನನ್ನದು ಎಂದರು ಅವರು.
ಬಹುತೇಕ ಕುಣಿಗಲ್, ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ಅವರದು. ನಟ ಲೋಕೇಂದ್ರ ಸೂರ್ಯ, ಚಿತ್ರದಲ್ಲಿ ಗಡಾರಿ ಎನ್ನುವ ಪಾತ್ರ ಮಾಡಿದರೆ, ಆಸ್ಕರ್ ಕೃಷ್ಣ ಫ್ಯಾಷನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು. ನಿರ್ಮಾಪಕ ಸೆವೆನ್ ರಾಜ್, “ಏಳು ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದೆ, ನಾನು ಹುಟ್ಟಿದ್ದು ಏಳನೇ ತಾರೀಖು, ನನ್ನ ತಂದೆಗೆ ನಾನು ಏಳನೇ ಪುತ್ರ. ನನ್ನ ಹೆಸರು ಕೂಡ ಸೆವೆನ್‌ ರಾಜ್, ನಾನು ಚಿತ್ರರಂಗಕ್ಕೆ ಬರಬೇಕೆಂದು ಬಹಳ ಹಿಂದೆಯೇ ಪ್ರಯತ್ನಿಸಿದ್ದೆ, ಆಗಿರಲಿಲ್ಲ, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಕೌಂಡಿನ್ಯ ಅವರ ಕಾದಂಬರಿ ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅನಂತ್ ಆರ್ಯನ್ ಅವರ ಸಂಗೀತವಿದೆ. ಗಗನ್ ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಕುಲ್ ಅವರ ನೃತ್ಯನಿರ್ದೇಶನ ಹಾಗೂ ವೈಲೆಂಟ್‌ ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ಕಿಚ್ಚ ಸುದೀಪ್‌ ಇವರೆನಾ  ?  ಫೆಟ್ಟಲ್‌ ಕೋರ್ಟ್‌ ನಲ್ಲಿ ಸುದೀಪ್‌ ಅವರನ್ನು ಕಂಡು ನಟ ಸಂಚಾರಿ ವಿಜಯ್‌ ಹೀಗೇಕೆ ಹೇಳಿದರು?

ಸೋಮವಾರ ಸಂಜೆಯ  ಸುಂದರ  ಸವಿಗಾನ,  ಸುದೀಪ್‌ ಅವರ ಜತೆಗಿನ ಸವಿ ಮಾತು 

ನಟ ಕಿಚ್ಚ ಸುದೀಪ್‌ ಅಂದ್ರೆ ಬರೀ ನಟರು ಮಾತ್ರವಲ್ಲ, ಅತ್ಯಾದ್ಬುತ ನಿರೂಪಕ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಎಕ್ಸಾಟಾರ್ಡಿನರಿ ‌ ಸ್ಪೋರ್ಟ್‌ ಪರ್ಸನ್‌ ಕೂಡ ಹೌದು. ಅದಕ್ಕೆ ಸಾಕ್ಷಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಯಾಂಡಲ್‌ ವುಡ್‌ ನಲ್ಲಿ ಭಾರೀ ಸದ್ದು ಮಾಡಿದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್.‌

ಕ್ರಿಕೆಟ್‌ ಅಂದ್ರೆ ಅವರಿಗೆ ಅಷ್ಟೊಂದು ಕ್ರೇಜ್.‌ ಆ ಮೂಲಕ ಅವರು ಇಂಡಿಯಾ ಕ್ರಿಕೆಟ್‌ ಟೀಮ್‌ ನ ಹಲವು ಆಟಗಾರರ ಸ್ನೇಹ ಬೆಳೆಸಿದ್ದು, ಲಂಡನಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಿ ಬಂದಿದ್ದು ಎಲ್ಲವೂ ದಾಖಲೆ. ಬರೀ ಕ್ರಿಡಾಂಗಣದಲ್ಲಿ ಮಾತ್ರವಲ್ಲ, ಶೂಟಿಂಗ್‌ ಸಮಯದ  ಬಿಡುವಿನ ವೇಳೆಯಲ್ಲೂ ಅವರು ಬೀದಿಯಲ್ಲೇ ಗಲ್ಲಿ ಬಾಯ್ಸ್‌ ಥರ ಕೈಗೆ ಬ್ಯಾಟ್‌ ಹಿಡಿದು ಆಟಕ್ಕೆ ನಿಲ್ಲುತ್ತಾರಂತೆ. ಇತ್ತೀಚೆಗೆ “ಫ್ಯಾಂಟಮ್‌ʼ ಶೂಟಿಂಗ್‌ ಟೈಮ್ನ್‌ ನಲ್ಲೂ ಕ್ರಿಕೆಟ್‌ ಆಡಿದ್ದು ಅದಕ್ಕೆ ಮತ್ತೊಂದು ಸಾಕ್ಷಿ.

ಅದರಾಚೆ ಅಂದ್ರೆ, ಕ್ರಿಕೆಟ್‌ ಮಾತ್ರವಲ್ಲದೆ ಬ್ಯಾಡ್ಮಿಂಟನ್ ಆಟದಲ್ಲೂ ಅವರದು ಎತ್ತಿದ ಕೈ. ಬ್ಯಾಟ್‌ ಹಿಡಿದು ಕೋರ್ಟ್‌ ನಲ್ಲಿ ನಿಂತರೆ, ಎದುರಾಳಿಗೆ ನಡುಕ ಶುರುವಾಗುವುದು ಗ್ಯಾರಂಟಿ. ಬೆಂಗಳೂರಿನ ಫೆಟ್ಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ಸೋಮವಾರ ಸಂಜೆ, ಸುದೀಪ್‌ ಅವರು ಪ್ರದರ್ಶಿಸಿದ ಅಂತಹದೊಂದು ಅತ್ಯಾದ್ಭುತ ಬ್ಯಾಡ್ಮಿಂಟನ್‌ ಆಟವನ್ನು ಕಣ್ಣಾರೆ ಕಂಡು, ಒಂದು ತಾಸು ತಾವು ಅವರೊಂದಿಗೆ ಬ್ಯಾಡ್ಮಿಂಟನ್‌ ಅಡಿದ ಅನುಭವವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಇಲ್ಲಿ ಹೀಗೆ ವಿವರಿಸುತ್ತಾರೆ.

ಒವರ್‌ ಟು ಸಂಚಾರಿ ವಿಜಯ್…

ಸೋಮವಾರ ಸಂಜೆ ಎಂದಿನಂತೆ ನಾನು ನನ್ನ ಗೆಳೆಯರು ಫೆಟ್ಟಲ್ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಹೊರಗೆ ಇಳಿ ಸಂಜೆಯಾಗಿ ಮಂದ ಬೆಳಕು ಚೆಲ್ಲಿತ್ತು. ಇನ್ನೇನು ನಾವು ಒಂದು ಸುತ್ತಿನ ಆಟ ಮುಗಿಸಿ, ಎರಡನೇ ಸುತ್ತಿಗೆ ರೆಡಿಯಾಗಬೇಕೆನ್ನುವಾಗ ಇದ್ದಕ್ಕಿದ್ದ ಹಾಗೆ ಬ್ಯಾಡ್ಮಿಂಟನ್ ಕೋರ್ಟಿನ ಬಾಗಿಲು ತೆರೆಯಿತು. ಅಲ್ಲಿಂದ ೬ ಅಡಿಯ ಕಟೌಟ್‌ನ ಕಟ್ಟುಮಸ್ತಾದ ದೇಹಾಕೃತಿಯ ಆಕೃತಿಯೊಂದು ಅಸ್ಪಷ್ಟವಾಗಿ ಕಾಣಿಸಿತು. ನನಗೆ ಈ ಆಕೃತಿಯನ್ನು ಎಲ್ಲೋ ನೋಡಿದ ಹಾಗೆ ಕಾಣುತ್ತಿದೆಯಲ್ಲಾ ಎಂದು ದಿಟ್ಟಿಸಿದೆ. ಹತ್ತಿರ ಹೋಗಿ ನೋಡಿದೆ. ಮಂದನೆಯ ಆ ಲೈಟ್ ಬೆಳಕಿಗೆ ಪ್ರಜ್ವಲಮಾನವಾಗಿ ನಮಗೆ ಕಂಡದ್ದು ಕಿಚ್ಚ ಸುದೀಪ್ ಸರ್. ನಮಗೋ…ಆಶ್ಚರ್ಯವೋ ಆಶ್ಚರ್ಯ. ಸಾಮಾನ್ಯವಾಗಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಸುದೀಪ್‌ ಸರ್‌, ಹೀಗೆ ಧಿಡೀರನೆ ಕಾಣಿಸಿಕೊಂಡಿದ್ದನ್ನು ನೋಡಿ ಒಂದು ಕ್ಷಣ ಮೂಕವಿಸ್ಮಿತರಾದೆವು.

ನಮಗೇನೋ ಭಯ, ಆದ್ರೆ ಅವರು ಕೇಳ್ಬೇಕೆ, ಎಲ್ಲರೊಡನೆ ಒಂದಾಗಿ ಆತ್ಮೀಯವಾಗಿ ನಮ್ಮೆಲ್ಲರ ಯೋಗಕ್ಷೇಮ ವಿಚಾರಿಸಿದರು. ಹಾಗೆ ಮಾತನಾಡುತ್ತಾ ಅತ್ಯಂತ ಆತ್ಮೀಯತೆಯಲ್ಲಿ ಒಂದಾದರು. ಹಾಗೆಯೇ ಮಾತನಾಡುತ್ತಾ ಅವರು ಕೋರ್ಟ್‌ ಒಳಗಡೆ ಬರುತ್ತಿದ್ದಾಗ, ಇವರೇನಾ ತೆರೆಯ ಮೇಲೆ ಅಬ್ಬರಿಸೋ ಕಿಚ್ಚ ಸರ್ ಅನ್ನಿಸಿದ್ದು ಸುಳ್ಳಲ್ಲ.ಆನಂತರ ಸುಮಾರು ಒಂದು ಗಂಟೆಗಳ ಕಾಲ ನಮ್ಮೊಡನೆ ಆಟವಾಡಿದರು. ಒಂದಷ್ಟು ದೈಹಿಕ ಕಸರತ್ತಿನ ಬಗ್ಗೆ ಮಾತನಾಡಿದರು. ಅದೇ ಎನರ್ಜಿ, ಅಷ್ಟೇ ತೂಕದ ಮಾತುಗಳು. ಯಾವ ಹಮ್ಮು-ಬಿಮ್ಮು ಇಲ್ಲದೆ ಎಲ್ಲರ ಜೊತೆಗೂಡಿ ಅವರ ಅಮೂಲ್ಯವಾದ ಸಮಯವನ್ನು ಕಳೆದದ್ದು ಒಂದು ಸುಂದರ ಸಂಜೆಗೆ ಸಾಕ್ಷಿಯಾಯಿತು. ಮತ್ತೆ ಯಾವ ಸಿನೆಮಾ ಮಾಡ್ತಾ ಇದ್ದೀರಿ? ” ಆಕ್ಟ್ 1978ʼ ಸಿನಿಮಾವನ್ನು ಮನೆಯಲ್ಲೇ ನೋಡಿದೆ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗಳು ಬರಬೇಕು ಅಂತ ಆಕ್ಟ್‌ 1978 ಚಿತ್ರ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಫೆಟ್ಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ನಲ್ಲಿ ಸೋಮವಾರ ನಟ ಕಿಚ್ಚ ಸುದೀಪ್‌ ಅವರೊಂದಿಗೆ ಕಳೆದ ಆ ಸುಂದರ ಸಮಯವನ್ನು ನಟ ಸಂಚಾರಿ ವಿಜಯ್‌ ಹೀಗೆ ಕಟ್ಟಿಕೊಟ್ಟರು. ಇನ್ನು ತಾವು ಒಬ್ಬ ಸ್ಟಾರ್‌ ನಟರಾದರೂ, ಕಿಂಚಿತ್ತು ಅಹಂ ಇಟ್ಟುಕೊಳ್ಳದೆ ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವಂತಹ ಮನಸ್ಥಿತಿ ನಡುವೆಯೇ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ನಟ ಸಂಚಾರಿ ಅವರಿಗೂ ಕನ್ನಡದ ಸ್ಟಾರ್‌ ಮೇಲೆ ಅಪಾರ ಪ್ರೀತಿ. ಶಿವರಾಜ್‌ ಕುಮಾರ್‌, ದರ್ಶನ್‌, ಸುದೀಪ್‌, ಪುನೀತ್‌, ಯಶ್‌ ಸೇರಿದಂತೆ ಎಲ್ಲಾ ನಟರ ಪ್ರೀತಿಗೆ ಅವರು ಪಾತ್ರರಾಗಿದ್ದಾರೆ. ವಿಶೇಷವಾಗಿ ಸುದೀಪ್‌ ಅವರ ಬಹು ಮುಖ ಪ್ರತಿಭೆಗೆ ಮಾರು ಹೋಗಿರುವ ಅವರು, ಸುದೀಪ್‌ ಅವರ ಜತೆಗೆ ಸಮಯ ಕಳೆಯುವುದೇ ಸುಂದರ ಎನ್ನುತ್ತಾರೆ. ಇಷ್ಟಾಗಿಯೂ ಬೆಳ್ಳಿ ತೆರೆ ಮೇಲೆ ಕಿಚ್ಚ ಸುದೀಪ್‌ ಅವರೊಂದಿಗೆ ಸಂಚಾರಿ ವಿಜಯ್‌ ಇದುವರೆಗೂ ಕಾಣಿಸಿಕೊಂಡಿಲ್ಲ. ವಿಜಯ್‌ ಅವರಂತಹ ಪ್ರತಿಭಾವಂತಹ ನಟಿನಿಗೂ ಅದ್ಯಾಕೋ ಅಂತಹ ಅವಕಾಶ ಇದುವರೆಗೂ ಸಿಕ್ಕಿಲ್ಲ. ಈಗಲಾದರೂ ಸಿಗಲಿ.

ಮಲಯಾಳಂ ನ ಹೆಸರಾಂತ ನಟ ಮೋಹನ್‌ ಲಾಲ್‌ ಜತೆಗೆ ಸಂಚಾರಿ ವಿಜಯ್
Categories
ಸಿನಿ ಸುದ್ದಿ

ಟಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬಳು ಕನ್ನಡತಿ,’ ಭರಾಟೆ’ ಬೆಡಗಿ ಶ್ರೀಲೀಲಾಗೆ ಸಿಕ್ತು ಬಂಪರ್‌ ಆಫರ್‌!

“ಪೆಳ್ಳಿ ಸಂದಡಿ’ಯಲ್ಲಿ ನಟ ಶ್ರೀಕಾಂತ್‌ ಪುತ್ರ ರೋಷನ್ ಗೆ ಜೋಡಿಯಾದ ʼಕಿಸ್‌ʼ ಖ್ಯಾತಿಯ ಸುಂದರಿ

ಟಾಲಿವುಡ್ ಅಂಗಳದಲ್ಲಿ ಕನ್ನಡದ ನಟಿಯರಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ‘ಕಿರಿಕ್ ಪಾರ್ಟಿ’ ಚಿತ್ರದ ಖ್ಯಾತಿಯ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಲ್ಲಿ ಮನೆ ಮಾತಾಗಿರುವ ಬೆನ್ನಲೇ ‘ವಜ್ರಕಾಯ’ ಚಿತ್ರದ ಖ್ಯಾತಿಯ ನಟಿ ನಭಾ ನಟೇಶ್ ಕೂಡ ಅಲ್ಲಿ ಕನ್ನಡದ ಬ್ಯುಸಿ ನಟಿ. ಈಗ ಆ ಸಾಲಿಗೆ ಹೊಸ ಸೇರ್ಪಡೆ ‘ಕಿಸ್’ ಖ್ಯಾತಿಯ ಚೆಲುವೆ ಶ್ರೀಲೀಲಾ. ಮೂಲತಃ ಕನ್ನಡದವರೇ ಆದ ಟಾಲಿವುಡ್ ನ ಹೆಸರಾಂತ ನಟ ಶ್ರೀಕಾಂತ್ ಪುತ್ರ ರೋಷನ್ ಅಭಿನಯದ ಹೊಸ ಚಿತ್ರಕ್ಕೆ ಶ್ರೀ ಲೀಲಾ ನಾಯಕಿ ಆಗಿ ಆಯ್ಕೆಯಾಗಿದ್ದಾರೆ. ತೆಲುಗಿನಲ್ಲಿ ಇದು ಶ್ರೀಲೀಲಾ ಆಭಿನಯದ ಚೊಚ್ಚಲ ಚಿತ್ರ. ಇದೇ ತಿಂಗಳು ಅದಕ್ಕೆ ಚಿತ್ರೀಕರಣ ಕೂಡ ಆರಂಭ.

‘ಪೆಳ್ಳಿ ಸಂದಡಿ’ ಎನ್ನುವುದು ಈ ಚಿತ್ರದ ಹೆಸರು. ರೋಷನ್ ಹಾಗೂ ಶ್ರೀಲೀಲಾ ಇಲ್ಲಿ ಜೋಡಿ. ಇದು ಶ್ರೀಕಾಂತ್ ಅಭಿನಯಿಸಿದ್ದ ಚಿತ್ರದ ಹೆಸರು ಕೂಡ. 1996 ರಲ್ಲಿ ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರ ತೆರೆಗೆ ಬಂದಿತ್ತು. ಆ ಕಾಲಕ್ಕೆ ಇದು ಸೂಪರ್ ಡೂಪರ್ ಹಿಟ್ ಚಿತ್ರ. ತೆಲುಗು ಚಿತ್ರರಂಗದಲ್ಲಿ ಶ್ರೀಕಾಂತ್ ದೊಡ್ಡ ಸ್ಟಾರ್ ಆಗಿ ಸಕ್ಸಸ್ ಕಂಡ ಸಿನಿಮಾ. ಅಲ್ಲಿಂದ ಅವರ ತಾರಾ ವರ್ಚಸ್ಸೇ ಬದಲಾಗಿದ್ದು ಇತಿಹಾಸ. ಅದೀಗ ಬಂದು ಹೋಗಿ ಇಲ್ಲಿಗೆ 25 ವರ್ಷ. ಅದೇ ಚಿತ್ರದ ಹೆಸರಲ್ಲಿ ಶ್ರೀಕಾಂತ್ ಪುತ್ರ ಕೂಡ ಅಭಿನಯಿಸುತ್ತಿದ್ದಾರೆ. ಅವರಿಗೆ ಇಲ್ಲಿ ಶ್ರೀಲೀಲಾ ನಾಯಕಿ ಎನ್ನುವುದು ವಿಶೇಷ.

 

” ಸುಮಾರು ಏಳು ತಿಂಗಳ ಹಿಂದೆ ಬಂದ ಆಫರ್ ಇದು. ಅಲ್ಲಿಂದ ಇದು ಮಾತುಕತೆ ಹಂತದಲ್ಲಿತ್ತು. ಕೊನೆಗೊಂದು ದಿನ ಕತೆ ಕೇಳಿ ಓಕೆ ಕೂಡ ಆಯಿತು. ಆದರೆ ಸಿನಿಮಾ ಶುರುವಾಗುವುದಕ್ಕೆ ಕೊರೋನಾ ಆತಂಕ ಇತ್ತಲ್ವಾ,, ಹಾಗಾಗಿ ಒಂದಷ್ಟು ತಡವಾಯಿತು. ಆದರೂ ಚಿತ್ರ ತಂಡ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿತ್ತು. ಈಗ ಎಲ್ಲವೂ ರೆಡಿ. ಇದೇ ತಿಂಗಳಿನಿಂದ ಚಿತ್ರೀಕರಣ ಶುರು. ಫಸ್ಟ್ ಟೈಮ್ ಟಾಲಿವುಡ್ ಗೆ ಎಂಟ್ರಿ ಆಗುತ್ತಿದ್ದೇನೆ. ಖುಷಿ ಆಗುತ್ತಿದೆ. ಹಾಗೆ ಒಂದ್ರೀತಿ ಭಯವೂ ಇದೆ. ಆದರೂ ಒಳ್ಳೆಯ ತಂಡ ಸಿಕ್ಕಿರೋದು ಖುಷಿ ತರಿಸಿದೆ’ ಎನ್ನುವ ಮೂಲಕ ಇದೇ ಮೊದಲು ಕನ್ನಡದಿಂದ ಟಾಲಿವುಡ್ ಗೆ ಹೋಗುತ್ತಿರುವ ಖುಷಿ ಹಂಚಿಕೊಳ್ಳುತ್ತಾರೆ ನಟಿ ಶ್ರೀಲೀಲಾ. ಸದ್ಯಕ್ಕೆ ಶ್ರೀಲೀಲಾ ಕನ್ನಡದಲ್ಲಿ ನಂದ್ ಕಿಶೋರ್ ನಿರ್ದೇಶನ ಹಾಗೂ ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

 

ಒಂದು ಸಿನಿಮಾದ ಸೆಟ್ ನಲ್ಲಿ ನಟ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದೆ. ಟಾಲಿವುಡ್ ಆಕ್ಟರ್ ಅಲ್ವಾ ಅಂತ ನಾನು ತೆಲುಗಿನಲ್ಲಿ ಮಾತನಾಡಲು ಹೋದ್ರೆ, ಅವರೇ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ರು. ಅವತ್ತಿನಿಂದ ಅವರೊಂದಿಗೆ ಮಾತನಾಡುವುದಕ್ಕೆ ಖುಷಿ ಎನಿಸಿತು. ಕಾಕಕಾಳೀಯ ಎನ್ನುವಂತೆ ಅವರ ಪುತ್ರನ ಸಿನಿಮಾಕ್ಕೆ ನಾಯಕಿ ಆಗುವ ಆಫರ್ ಬಂದಾಗ ನಂಗೆ ಶ್ರೀಕಾಂತ್ ಸರ್ ಜೊತೆ ಮಾತನಾಡಿದ್ದೆ ನೆನಪಾಯಿತು. ಹೈದ್ರಾಬಾದ್ ನಲ್ಲಿ ಅವರನ್ನು ಭೇಟಿಯಾದಾಗ ಅದೇ ಖುಷಿ ಹಂಚಿಕೊಂಡೆ. ಅವರು ಕೂಡ ತುಂಬಾ ಸಂತೋಷ ಪಟ್ಟರು.
-ಶ್ರೀಲೀಲಾ, ನಟಿ

ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರಕ್ಕೆ ತೆಲುಗಿನ ಹೆಸರಾಂತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಆಕ್ಷನ್ ಕಟ್ ಹೇಳಿದ್ದರು. ಅವರೇ ಕತೆ, ಚಿತ್ರಕತೆ ಬರೆದಿದ್ದರು. ಈಗ ಅದೇ ಹೆಸರಿನಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀಕಾಂತ್ ಪುತ್ರನ ಸಿನಿಮಾಕ್ಕೆ ಗೌರಿ ರಣಂಕಿ ಆಕ್ಷನ್ ಕಟ್ ಹೇಳುತ್ತಿದ್ದರೂ, ನಿರ್ದೇಶನದ ಉಸ್ತುವಾರಿ ಕೆ. ರಾಘವೇಂದ್ರ ರಾವ್ ಅವರೇ ವಹಿಸಿಕೊಂಡಿದ್ದಾರಂತೆ. ಪುತ್ರನಿಗೆ ದೊಡ್ಡ ಸಕ್ಸಸ್ ಕೊಡಿಸುವ ಕಾರಣಕ್ಕೆ ಶ್ರೀಕಾಂತ್ ಅವರೇ ರಾಘವೇಂದ್ರ ರಾವ್ ಅವರ ಮೊರೆ ಹೋಗಿದ್ದಾರಂತೆ. ಇನ್ನು ರೋಷನ್ ಗೆ ಇದು ಎರಡನೇ ಚಿತ್ರ. ಮೂರು ವರ್ಷಗಳ ಹಿಂದೆ ‘ನಿರ್ಮಲಾ ಕಾನ್ವೆಂಟ್’  ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದರು. ಅದೇನು ಅಂತಹ ಸಕ್ಸಸ್ ಕಂಡಿರಲಿಲ್ಲ.

Categories
ಸಿನಿ ಸುದ್ದಿ

ಬಳ್ಳಾರಿಯ ಗಣಿ ಧೂಳಿನಲ್ಲಿ ಅಬ್ಬರಿಸುತ್ತಿದೆ ʼವೀರಂʼ !

ಇದು ಪ್ರಜ್ವಲ್‌ ಸಿನಿಮಾ ಅಲ್ಲ, ಹೊಸಬರ ಟೆಲಿ ಮೂವೀ…

ವೀರಂʼ ಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಅದು ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಭಿನಯದ ಸಿನಿಮಾ. ಅದಿನ್ನು ಚಿತ್ರೀಕರಣದ ಹಂತದಲ್ಲಿದೆ. ಈ ನಡುವೆಯೇ ಸ್ಯಾಂಡಲ್‌ವುಡ್‌ ನಲ್ಲೊಂದು ಅದೇ ಹೆಸರಲ್ಲೊಂದು ಮತ್ತೊಂದು ಸಿನಿಮಾ ಬರುತ್ತಿದೆ. ಈಗ ಅದರ ಟ್ರೈಲರ್‌ ಲಾಂಚ್‌ ಆಗಿದೆ.

ಅರೆ, ಒಂದೇ ಹೆಸರಿನ ಎರಡು ಸಿನಿಮಾವೇ? ಅದು ಸಿನಿಮಾ, ಇದು ಟೆಲಿ ಸಿನಿಮಾ. ಹೌದು, ಬಳ್ಳಾರಿ ಮೂಲದ ಯುವಕರ ಒಂದು ಗಂಪು “ವೀರಂʼ ಹೆಸರಲ್ಲೊಂದು ಟೆಲಿ ಸಿನಿಮಾ ಮಾಡಿದೆ. ಸುಮಾರು 1 ಗಂಟೆಯಷ್ಟು ಅವದಿಯ ಟೆಲಿ ಚಿತ್ರ ಇದು.ಯಾವುದೇ ಬಿಗ್‌ ಬಜೆಟ್‌ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ. ಸದ್ಯಕ್ಕೆ ಅದರ ಅದ್ದೂರಿ ಮೇಕಿಂಗ್‌ ಗೆ ಒಂದು ಸ್ಯಾಂಪಲ್‌ 1 ನಿಮಿಷ 46 ಸೆಕೆಂಡ್‌ ಗಳ ಟ್ರೈಲರ್.‌

ಇದು ಪಕ್ಕಾ ಮಾಸ್‌ ಸಿನಿಮಾ. ರೌಡಿಸಂನ ಶುದ್ಧ ರಾ ಲುಕ್ ಇಲ್ಲಿದೆ.‌ ಇದರ ಹಿಂದೆ ಇದ್ದವರು ಬಳ್ಳಾರಿಯವರು ಅಂದ್ರೆ ಕೇಳಬೇಕೆ, ಅಲ್ಲಿನ ಗಣಿ ಧೂಳು ಹಾರುವಂತೆ ಖಡಕ್‌ ಡೈಲಾಗ್‌ ಪೊಣಿಸಿ, ಜಬರ್ದಸ್ತ್‌ ಆಗಿಯೇ ಟ್ರೈಲರ್‌ ಕಟ್‌ ಮಾಡಿಸಿದೆ ಚಿತ್ರ ತಂಡ. ರೌಡಿಸಂ, ಗೂಡಾಯಿಸಂ, ದಾದಾಗಿರಿ… ಎನ್ನುವ ಮೂರು ಪದಗಳ ಅರ್ಥ ಒಂದೆ, ನಾನು ಎನ್ನುವ ಸ್ವಾರ್ಥ, ಅಹಂ ಎನ್ನುವ ಖಡಕ್‌ ಡೈಲಾಗ್‌ ಮೂಲಕ ಟ್ರೈಲರ್‌ ನಲ್ಲಿ ಭರ್ಜರಿ ಅಬ್ಬರಿಸಿದ್ದಾರೆ ಚಿತ್ರದ ನಾಯಕ ಸುಭಾಸ್‌ ಚಂದ್ರ.

ಅಂದ ಹಾಗೆ, “ವೀರಂʼ ಟೆಲಿ ಚಿತ್ರದ ನಾಯಕ ಸುಭಾಷ್‌ ಚಂದ್ರ ಸೇರಿದಂತೆ ಇದರ ಸೃಷ್ಟಿಕರ್ತರೆಲ್ಲರೂ ಹೊಸಬರು. ಶಿವಚಂದ್ರ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾದ ಈ ಟೆಲಿ ಚಿತ್ರಕ್ಕೆ ಶಿವ ಚಂದ್ರ ಹಾಗೂ ಭೀಮನಾಯ್ಕ ಬಂಡಾವಾಳ ಹೂಡಿದ್ದಾರೆ. ಲಕ್ಷ್ಮಣ್‌ ಕೇಸರಿ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರ್ದೇಶಕರಾಗಿ ಇವರಿಗೆ ಇದು ಚೊಚ್ಚಲ ಚಿತ್ರ. ಹಾಗಂತ ಬಣ್ಣದ ಲೋಕ ಹೊಸದಲ್ಲ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರದು. ಈಗ ಅಲ್ಲಿಂದ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯಲು ಮುಂದಾಗಿದ್ದಾರೆ. ಅದೇ ಪ್ರಯತ್ನದಲ್ಲೀಗ ʼವೀರಂʼ ಹೆಸರಿನ ಟೆಲಿ ಚಿತ್ರ ನಿರ್ದೇಶಿಸಿ, ರಿಲೀಸ್‌ ಮಾಡಲು ರೆಡಿ ಆಗಿದ್ದಾರೆ. ಹಾಗಾದ್ರೆ, ಇದರಿಂದ ಅವರಿಗೇನು ಲಾಭ?

” ಕಿರು ಚಿತ್ರ ಅಥವಾ ಟೆಲಿ ಚಿತ್ರಗಳ ನಿರ್ಮಾಣ ಅನ್ನೋದು ಕನ್ನದ ಮಟ್ಟಿಗೆ ಈಗಲೂ ಆದಾಯದ ಮೂಲ ಆಗಿಲ್ಲ. ಸೋಷಲ್‌ ಮೀಡಿಯಾ ಬಲಿಷ್ಟ ಆದ ನಂತರ ಅಲ್ಲಿ ಇವು ತೆರೆ ಕಂಡರೆ ಲೈಕ್ಸ್‌ , ಕಾಮೆಂಟ್‌ ಆಧರಿಸಿ ಒಂದಷ್ಟು ಆದಾಯ ಬರುತ್ತೆ ಎನ್ನುವುದನ್ನು ಬಿಟ್ಟರೆ, ಬಹುತೇಕ ಈ ಪ್ರಯತ್ನಗಳೆಲ್ಲ ನಮ್ಮನ್ನು ನಾವು ಪ್ರದರ್ಶಿಸಿಕೊಳ್ಳುವುದಕ್ಕಾಗಿಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಕೂಡ ಅಂತಹದೇ ಒಂದು ಪ್ರಯತ್ನವೇ ಹೌದು. ಲಾಕ್‌ ಡೌನ್‌ ಸಮಯದಲ್ಲಿ ನಾವೆಲ್ಲ ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲಿದ್ದಾಗ, ಹೊಸತೇನಾದರೂ ಮಾಡೋಣ ಅಂತ ಯೋಚಿಸಿದೆವು. ಆಗ ಹೊಳೆದಿದ್ದು ವೀರಂ ಟೆಲಿ ಮೂವೀ. ಅವತ್ತು ನಾವು ಅಂದುಕೊಂಡಿದ್ದಕ್ಕಿಂತ ಈಗದು ತೆರೆ ಮೇಲೆ ಚೆನ್ನಾಗಿ ಬಂದಿದೆ. ಯಾವುದೇ ಬಿಗ್‌ ಬಜೆಟ್‌ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ ಅಂತ ಟ್ರೈಲರ್‌ ನೋಡಿದವರು ಹೇಳುತ್ತಿದ್ದಾರೆ. ಇದು ಖುಷಿ ತಂದಿದೆʼ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮಣ್‌ ಕೇಸರಿ.

ಇದು ನಿಜವೂ ಹೌದು. ಟ್ರೈಲರ್ ನೋಡಿದವರಿಗೆ ಅವರ ನಿರ್ದೇಶನದ ಕೌಶಲ್ಯ ಗೊತ್ತಾಗುತ್ತದೆ. ಲಾಂಚ್‌ ಆಗಿ ಮೂರ್ನಾಲ್ಕು ದಿನಗಳಲ್ಲಿ ಸೋಷಲ್‌ ಮೀಡಿಯಾದಲ್ಲಿ ಅದು ವೈರಲ್‌ ಆಗಿದೆ. ವಿಶೇಷ ಅಂದ್ರೆ ಇಷ್ಟು ಗುಣಮಟ್ಟದ ಒಂದು ಟೆಲಿ ಮೂವೀ , ಕೇವಲ ಒಂದು ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಅಂದ್ರೆ ನಿಮಗೂ ಅಚ್ಚರಿ ಆಗಬಹುದು. ಏಳು ದಿನಗಳ ಕಾಲ ಚಿತ್ರೀಕರಣ ನಡೆದಿದೆಯಂತೆ. ತಾರಾಗಣದಲ್ಲಿ ಸುಭಾಷ್‌ ಚಂದ್ರ ಅವರೊಂದಿಗೆ ವರುಣ್‌ ವರಧಿ, ಮನೋಹರ್‌, ಶ್ರೀ ನಿಧಿ, ಟ್ಯಾಟು ಮಂಜು, ಪುರುಷೋತ್ತಮ್‌ ಸೇರಿದಂತೆ ದೊಡ್ಡ ದಂಡೇ ಇದೆ. ಹಾಗೆಯೇ ನುರಿತ ತಾಂತ್ರಿಕ ವರ್ಗವೇ ಇಲ್ಲಿ ಸಾಥ್‌ ನೀಡಿದೆ. ನವೀನ್‌ ನಾಯ್ಡು ಛಾಯಾಗ್ರಹಣ ಮಾಡಿದ್ದರೆ, ಸಾಯಿ ವಂಶಿ ಸಂಗೀತ, ವಿನೋದ್‌ ಸಂಕಲನ ಮಾಡಿದ್ದು, ರಾ ಲುಕ್‌ ಗೆ ಹೆಚ್ಚು ಆದ್ಯತೆ ನೀಡಿದೆ. ಇಷ್ಟರಲ್ಲೇ ಇದನ್ನು ಯುಟ್ಯೂಬ್‌ ಮೂಲಕ ಲಾಂಚ್‌ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆಯಂತೆ. ಸಿನಿಮಾದತ್ತ ಮುಖ ಮಾಡಿರುವ ಹೊಸಬರ ತಂಡಕ್ಕೆ ಒಳ್ಳೆಯದಾಗಲಿ.

Categories
ಸಿನಿ ಸುದ್ದಿ

ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?

“ಫ್ಯಾಂಟಮ್ʼ ಬಿಟ್ಟು ʼವಿಕ್ರಾಂತ್‌ ರೋಣʼ ಕಡೆ ಮನಸ್ಸು ಮಾಡಿದೆಯಂತೆ ಚಿತ್ರ ತಂಡ

ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಫ್ಯಾಂಟಮ್”‌  ಚಿತ್ರೀಕರಣ ಬಹುತೇಕ ಕ್ಲೈ ಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಇನ್ನೇನು ಎರಡು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಚಿತ್ರ ತಂಡ ಪೂಣೆ, ಹೈದ್ರಾಬಾದ್‌, ಕೇರಳ ಹಾಗೂ ಬೆಂಗಳೂರು ಸೇರಿದಂತೆ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸಿದೆ. ಸದ್ಯಕ್ಕೆ ಹಾಡಿನ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲೆ ಸೆಟ್‌ ಹಾಕಿ, ಚಿತ್ರೀಕರಿಸಲು ನಿರ್ಧರಿಸಿದೆಯಂತೆ. ಈ ಹಂತದಲ್ಲೇ ʼ ಫ್ಯಾಂಟಮ್‌ʼ ಚಿತ್ರ ತಂಡದಿಂದ ಬ್ರೇಕಿಂಗ್‌ ಸುದ್ದಿಯೊಂದು ಹೊರ ಬಿದ್ದಿದೆ. ಇಲ್ಲಿನ ತನಕ ಇದ್ದ ಚಿತ್ರದ ಶೀರ್ಷಿಕೆಯೇ ಬದಲಾಗುತ್ತಿದೆಯಂತೆ. ಖಚಿತ ಮೂಲಗಳ ಪ್ರಕಾರʼ ಫ್ಯಾಂಟಮ್‌ʼ ಬದಲಿಗೆ ಚಿತ್ರ ತಂಡವು ಚಿತ್ರಕ್ಕೆ “ವಿಕ್ರಾಂತ್‌ ರೋಣʼ ಎಂದು ಹೆಸರಿಸಲು ಹೊರಟಿದೆಯಂತೆ.

ಇದು ಹಂಡ್ರೆಂಡ್‌ ಪರ್ಸೆಂಟ್‌ ಖರೆ ಅಂತ ಹೇಳೋದಿಲ್ಲ, ಆದರೂ ಇಂತಹದೊಂದು ಸುದ್ದಿ ಕೇಳಿ ಬಂದಿದೆ. ಈಗಾಗಲೇ ʼ ಫ್ಪ್ಯಾಂಟಮ್‌ʼ ಎನ್ನುವ ಟೈಟಲ್‌ ವಿವಾದದಲ್ಲಿರುವುದರಿಂದ ಅದನ್ನು ಅಲ್ಲಿಯೇ ಕೈ ಬಿಟ್ಟು ಚಿತ್ರಕ್ಕೆ ʼವಿಕ್ರಾಂತ್‌ ರೋಣʼ ಎನ್ನುವ ಹೆಸರನ್ನೇ ಚಿತ್ರದ ಟೈಟಲ್‌ ಆಗಿಸಿಕೊಳ್ಳುವ ಆಲೋಚನೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಲ್ಲಿ ಚರ್ಚೆ ನಡೆದಿದೆಯಂತೆ. ಸದ್ಯಕ್ಕೆ ಇದಕ್ಕೆ ಚಿತ್ರದ ನಾಯಕ ನಟ ಸುದೀಪ್‌ ಏನ್‌ ಹೇಳಿದ್ರು ಅಂತಲೂ ಗೊತ್ತಿಲ್ಲ. ಸದ್ಯಕ್ಕೆ ಈ ಚರ್ಚೆಯೂ ಅಲ್ಲಿ ತನಕ ಹೋಗಿಲ್ಲವಂತೆ. ಆದರೆ, ನಿರ್ದೇಶಕ ಅನೂಪ್‌ ಭಂಡಾರಿ, ನಿರ್ಮಾಪಕರಾದ ಜಾಕ್‌ ಮಂಜು ನಡುವೆಯೇ ಈ ಚರ್ಚೆ ನಡೆದಿದೆಯಂತೆ ಎನ್ನುತ್ತಿವೆ ಮೂಲಗಳು.

ಚಿತ್ರ ತಂಡದ ಮಾಹಿತಿ ಇದಿಷ್ಟೇ ಅಲ್ಲ, ಬದಲಾದ ಟೈಟಲ್‌ ಅನ್ನು ಚಿತ್ರ ತಂಡ ದುಬೈನ ವಿಶ್ವ ವಿಖ್ಯಾತ ಬಹುಮಹಡಿ ಕಟ್ಟಡ ಬುರ್ಜಾ ಖಾಲೀಪ್‌ ದಲ್ಲಿ ಲಾಂಚ್‌ ಮಾಡುತ್ತಿದೆ. ತೆರೆ ಮರೆಯಲ್ಲೇ ಅದಕ್ಕೆ ಎಲ್ಲಾ ಸಿದ್ಧತೆಗಳು ಜೋರಾಗಿ ನಡೆದಿದೆಯಂತೆ. ಇನ್ನು ವಿಕ್ರಾಂತ್‌ ರೋಣ ಎನ್ನುವುದು ಈ ಚಿತ್ರದಲ್ಲಿನ ಕಥಾ ನಾಯಕನ ಹೆಸರು. ಅದಕ್ಕೆ ನಟ ಕಿಚ್ಚ ಸುದೀಪ್‌ ಬಣ್ಣ ಹಚ್ಚಿದ್ದಾರೆ. ಹಾಗೆಯೇ ನಿರ್ದೇಶಕ ಅನೂಪ್‌ ಭಂಡಾರಿ ಸಹೋದರ ನಿರೂಪ್‌ ಭಂಡಾರಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಅವರೊಂದಿಗೆ ದೊಡ್ಡ ತಂಡವೇ ಚಿತ್ರದಲ್ಲಿದೆ. ದೊಡ್ಡ ತಾರಾಗಣದ ಜತೆಗೆ ಅದ್ದೂರಿ ವೆಚ್ಚದ ಸೆಟ್‌ ನಲ್ಲಿ ಚಿತ್ರೀಕರಣಗೊಂಡಿದೆ. ಇದೆಲ್ಲ ವಿಶೇಷತೆಯ ಜತೆಗೆ ಕುತೂಹಲ ಮೂಡಿಸಿರುವ ಈ ಚಿತ್ರ ಈಗ ಟೈಟಲ್‌ ಬದಲಾವಣೆಯ ಮೂಲಕವೂ ದೊಡ್ಡ ಸುದ್ದಿ ಮಾಡಲು ಹೊರಟಿದೆಯಂತೆ.

Categories
ಸಿನಿ ಸುದ್ದಿ

ಡಬ್ಬಿಂಗ್‌ ಬ್ಯುಜಿಯೋ ಬ್ಯುಜಿ – ಸ್ಟುಡಿಯೋ ಖಾಲಿ ಇಲ್ಲ, ಕಲಾವಿದರೂ ಖಾಲಿ ಕೂತಿಲ್ಲ

ಇದು ಡಬ್ಬಿಂಗ್‌ ಲಾಭ-ನಷ್ಟದ ಲೆಕ್ಕಾಚಾರ

ಕನ್ನಡಕ್ಕೆ ಡಬ್ಬಿಂಗ್‌ ಬಂದರೆ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಅನೇಕರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ..!
– ಈ ಮಾತು ಹಿಂದಿನಿಂದಲೂ ಕೇಳಿಬರುತ್ತಲೇ ಇತ್ತು. ಈ ಕಾರಣಕ್ಕಾಗಿಯೇ ಮೊದಲಿನಿಂದಲೂ ಡಬ್ಬಿಂಗ್‌ ಅನ್ನು ವಿರೋಧಿಸುತ್ತಲೇ ಬರಲಾಗುತ್ತಿತ್ತು. ಡಾ.ರಾಜಕುಮಾರ್‌ ಅವರ ನೇತೃತ್ವದಲ್ಲಿ ಡಬ್ಬಿಂಗ್‌ ವಿರೋಧ ಜೋರಾಗಿಯೇ ಇತ್ತು. ಆದರೆ, ಈಗ…?
ಕಾಲ ಬದಲಾಗಿದೆ. ಡಬ್ಬಿಂಗ್‌ ವಿರೋಧದ ಧ್ವನಿಯೂ ಕ್ಷೀಣವಾಗಿದೆ. ಅಂದುಕೊಂಡಿದ್ದು ಇಲ್ಲಿ ಯಾವುದೂ ನಡೆಯುತ್ತಿಲ್ಲ. ಮುಕ್ತವಾಗಿಯೇ ಈಗ ಡಬ್ಬಿಂಗ್‌ ತಲೆ ಎತ್ತಿರುವುದರಿಂದ ಯಾರೊಬ್ಬರೂ ಮಾತನಾಡುತ್ತಿಲ್ಲ. “ಮೌನಂ ಸಮ್ಮತಿ ಲಕ್ಷಣಂ” ಅನ್ನುವಂತಾಗಿದೆ. ಹೌದು, ಡಬ್ಬಿಂಗ್‌ ಅಲೆ ಈಗ ಜೋರಾಗಿದೆ. ಪರಭಾಷೆಯ ಸಿನಿಮಾಗಳಷ್ಟೇ ಅಲ್ಲ, ಧಾರಾವಾಹಿಗಳು ಕೂಡ ಕನ್ನಡಕ್ಕೆ ಡಬ್‌ ಆಗಿ ಪ್ರಸಾರವಾಗುತ್ತಿವೆ. ಈಗಾಗಲೇ ನೂರಾರು ಚಿತ್ರಗಳು, ಧಾರಾವಾಹಿಗಳು ಕನ್ನಡಕ್ಕೆ ಡಬ್‌ ಆಗಿದ್ದು, ಪ್ರೇಕ್ಷಕರ ಮುಂದೆ ಬಂದಿರುವುದೂ ಉಂಟು. ಹಲವು ಚಿತ್ರಗಳು ಚಿತ್ರಮಂದಿರಕ್ಕೂ ಲಗ್ಗೆ ಇಟ್ಟಿರುವುದಷ್ಟೇ ಅಲ್ಲ, ಒಟಿಟಿ ಫ್ಲಾಟ್‌ಫಾರಂನಲ್ಲೂ ಕಾಣಿಸಿಕೊಳ್ಳುತ್ತಿವೆ.

ಇದು ನೇರವಾಗಿ ಕನ್ನಡ ಚಿತ್ರರಂಗದಲ್ಲಿ ದುಡಿಯುವ ಮಂದಿ ಮೇಲೆ ಪರಿಣಾಮ ಬೀರಿದೆ. ಇಂದು ಡಬ್ಬಿಂಗ್‌ ಅಲೆ ಹೆಚ್ಚಾಗಿದ್ದರಿಂದ ಕನ್ನಡ ಚಿತ್ರರಂಗದ ಅದೆಷ್ಟೋ ಕಿರಿಯ ಕಲಾವಿದರು, ಸಹ ಕಲಾವಿದರು, ಒಕ್ಕೂಟದ ಕಾರ್ಮಿಕರು ಇಂದು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ನೇರ ಒಟಿಟಿಯಲ್ಲಿ ಪ್ರತ್ಯಕ್ಷಗೊಂಡವು. ಇನ್ನು ಬಹುತೇಕ ಜನರು ತಿಂಗಳುಗಟ್ಟಲೆ ಮನೆಯಲ್ಲೇ ಇದ್ದುರಿಂದ ಅವರೆಲ್ಲರೂ ತಮ್ಮ ಮನೆಯಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುವ ಡಬ್ಬಿಂಗ್‌ ಸೀರಿಯಲ್‌ ನೋಡುವಂತಾಯಿತು. ಈಗ ಲಾಕ್‌ಡೌನ್‌ ಸಡಿಲಗೊಂಡಿದೆ. ಆದರೆ, ಡಬ್ಬಿಂಗ್‌ ಸಿನಿಮಾಗಳು, ಧಾರಾವಾಹಿಗಳು ನಿಂತಿಲ್ಲ. ಇದರಿಂದ ಸ್ಯಾಂಡಲ್‌ವುಡ್‌ನ ಬಹಳಷ್ಟು ಮಂದಿಗೆ ದೊಡ್ಡ ಪೆಟ್ಟು ಬಿದ್ದಿರುವುದಂತೂ ನಿಜ.

ಹಾಗೆ ನೋಡಿದರೆ, ಡಬ್ಬಿಂಗ್‌ನಿಂದ ಎಲ್ಲವೂ ಹಾಳಾಗಿದೆ ಅಂತ ಹೇಳುತ್ತಿಲ್ಲ. ಡಬ್ಬಿಂಗ್‌ ಬಂದು ಒಂದಷ್ಟು ಜನರ ಕೆಲಸವನ್ನು ಕಸಿದುಕೊಂಡಿದ್ದು ಬಿಟ್ಟರೆ, ಒಂದಷ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸಿದಂತೂ ನಿಜ. ಇದನ್ನು ಇನ್ನಷ್ಟು ವಿಸ್ತರಿಸಿ ಹೇಳುವುದಾದರೆ, ಡಬ್ಬಿಂಗ್‌ ಎಂಟ್ರಿಯಾಗಿದ್ದರಿಂದ ಅನೇಕ ಡಬ್ಬಿಂಗ್‌ ಕಲಾವಿದರು ಬಿಝಿಯಾದರು. ಅವರನ್ನು ಬಿಡುವಿಲ್ಲದಂತೆ ಅರಸಿ ಬಂದ ಕೆಲಸದಿಂದಾಗಿ ಎಲ್ಲರೂ ಬಿಝಿಯಾದರು. ಅದೆಷ್ಟೋ ನಟ,ನಟಿಯರಿಗೆ ಧ್ವನಿ ಕೊಡುವ ಮೂಲಕ ತಕ್ಕಮಟ್ಟಿಗೆ ದುಡಿಮೆ ಮಾಡುತ್ತಿದ್ದ ಡಬ್ಬಿಂಗ್‌ ಕಲಾವಿದರು, ಕೊಟ್ಟಷ್ಟು ಕಾಸು ಪಡೆದು ದಿನ ಸವೆಸುತ್ತಿದ್ದರು. ಯಾವಾಗ ಡಬ್ಬಿಂಗ್‌ ಬಂತೋ, ಅಲ್ಲಿಗೆ ಅವರ ಅದೃಷ್ಟದ ಬಾಗಿಲೂ ತೆರೆಯಿತು. ಅಲ್ಲೊಂದು ಇಲ್ಲೊಂದು ಸಿನಿಮಾಗಳಿಗೆ ಡಬ್‌ ಮಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದವರು, ಈಗ ಇಡೀ ದಿನ ವಾಯ್ಸ್‌ ಡಬ್‌ ಮಾಡುವಲ್ಲಿಯೇ ನಿರತರಾಗಿದ್ದಾರೆ.

ಹಾಗಾಗಿ ಡಬ್ಬಿಂಗ್‌ ಅಂತಹ ಅನೇಕ ಡಬ್ಬಿಂಗ್‌ ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ ಅಂದರೆ ತಪ್ಪಿಲ್ಲ.
ಇದರೊಂದಿಗೆ ಈಗ ಸ್ಟುಡಿಯೋಗಳೂ ಕೂಡ ಬಿಝಿಯಾಗಿವೆ. ಬರೀ ಬೆಂಗಳೂರು ಮಾತ್ರವಲ್ಲ, ರಾಜ್ಯದ ಪ್ರಮುಖ ನಗರಗಳಲ್ಲೂ ಸ್ಟುಡಿಯೋಗಳಿವೆ. ಅಲ್ಲಿಯೂ ಒಂದಷ್ಟು ಪರಭಾಷೆ ಸಿನಿಮಾಗಳು ಡಬ್‌ ಆಗುತ್ತಿವೆ. ಹಾಗಾಗಿ ಎಲ್ಲಾ ಸ್ಟುಡಿಯೋಗಳಲ್ಲೂ ಕೆಲಸ ಹೆಚ್ಚಾಗಿದ್ದು, ಎಲ್ಲರೂ ಡಬ್ಬಿಂಗ್‌ ಕೆಲಸದಲ್ಲಿ ಹಿಂದೆಂದಿಗಿಂತಲೂ ಬಿಝಿಯಾಗಿದ್ದಾರೆ. ಇಲ್ಲೀಗ ಪರದಾಡುತ್ತಿರುವುದೆಂದರೆ, ಜೂನಿಯರ್‌ ಕಲಾವಿದರು ಮತ್ತು ಸಹ ಕಲಾವಿದರು. ಇದರೊಂದಿಗೆ ಕಿರುತೆರೆಯಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರಿಗೂ ಇದು ಸಮಸ್ಯೆಯಾಗಿ ಪರಿಣಮಿಸಿದೆ.

ಡಬ್ಬಿಂಗ್‌ ಸಿನಿಮಾಗಳು ಇಲ್ಲಿ ಬಂದು ಹಣ ಮಾಡುತ್ತವೆಯೇ? ಇದು ಎಲ್ಲರಿಗೂ ಕಾಡುವ ಪ್ರಶ್ನೆ. ಅವುಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಹಣ ಮಾಡುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಹಲವು ವಾಹಿನಿಗಳಲ್ಲೂ ಕೂಡ ಪ್ರಸಾರವಾಗುತ್ತಿವೆ ಅನ್ನೋದೇ ವಿಷಯ. ಈಗಾಗಲೇ ಪರಭಾಷೆಯ ಅನೇಕ ಚಿತ್ರಗಳು ಥಿಯೇಟರ್‌ ಜೊತೆಗೆ ಕಿರುತೆರೆಯಲ್ಲೂ ಬಿಡುಗಡೆಯಾಗಿವೆ. ಒಂದು ಡಬ್‌ ಮಾಡುವ ಸಿನಿಮಾಗೆ ಸುಮಾರು ೧೦ ಲಕ್ಷ ರುಪಾಯಿ ಖರ್ಚು ಮಾಡಿದರೆ, ರೆಡಿಯಾಗುತ್ತದೆ. ಇದು ಸುಲಭ ಮಾರ್ಗ. ಬಹಳಷ್ಟು ಜನ ಇಲ್ಲಿಗೆ ಪರಭಾಷೆಯ ಅನೇಕ ಸಿನಿಮಾಗಳನ್ನು ತಂದು ಡಬ್ಬಿಂಗ್‌ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಪರಭಾಷೆಯ ಕೆಲವು ಸೀರಿಯಲ್‌ಗಳು ರಿಮೇಕ್‌ ಆಗುತ್ತಿದ್ದವು. ಆದರೆ, ಈಗೀಗ ಕನ್ನಡಕ್ಕೆ ಡಬ್‌ ಆಗುತ್ತಿವೆ. ಅವುಗಳು ಪ್ರಸಾರ ಕೂಡ ಆಗುತ್ತಿದ್ದು, ಡಬ್ಬಿಂಗ್ ಸ್ಟುಡಿಯೋಗಳು‌ ಎರಡು ಮೂರು ವರ್ಷಕ್ಕೆ ಬುಕ್‌ ಆಗಿವೆ ಅನ್ನೋದೇ ವಿಶೇಷ.


ಪ್ರಭಾಸ್‌ ಅಭಿನಯದ “ಬಾಹುಬಲಿ” ಕೂಡ ಕನ್ನಡದಲ್ಲಿ ಬಂತು. ಅಜಿತ್‌ ಅವರ “ಜಗಮಲ್ಲ”, ವಿಜಯ್‌ ಅವರ “ಬಿಗಿಲ್”‌, ಅಲ್ಲು ಅರ್ಜುನ್‌ ಅವರ “ಬಂದ ನೋಡು ಸರ್ರೆನೊಡು”, ರಾಮ್‌ ಚರಣ್‌ ಅವರ “ರಂಗಸ್ಥಳ”, ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅವರ “ಡಿಯರ್‌ ಕಾಮ್ರೆಡ್”‌, ಜೂನಿಯರ್‌ ಎನ್‌ಟಿಆರ್‌ ಅವರ “ಅಪ್ಪನ ಪ್ರೀತಿಯಲ್ಲಿ” ಸಿನಿಮಾ ಕೂಡ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಅದೇನೆ ಇರಲಿ, ಡಬ್ಬಿಂಗ್‌ ಶುರುವಾಗಿದಾಗಿದೆ. ಹಲವು ಚಿತ್ರಗಳು ಡಬ್ಬಿಂಗ್‌ ಆಗಿಹೋಗಿವೆ. ಇಲ್ಲಿ ಯಾರಿಗೆ ಏನು ಲಾಭ ಆಗಿದೆಯೋ, ನಷ್ಟ ಆಗಿದೆಯೋ ಬೇರೆ ಮಾತು. ಆದರೆ ಡಬ್ಬಿಂಗ್‌ ಸ್ಟುಡಿಯೋಗಳಿಗೆ, ಡಬ್ಬಿಂಗ್‌ ಕಲಾವಿದರಿಗಂತೂ ಸಾಕಷ್ಟು ಸಹಾಯವಾಗಿದೆ. ಇಲ್ಲಿ ಕನ್ನಡಿಗರು ಭಾಷಾ ವಿರೋಧಿಗಳಲ್ಲ. ಭಾಷಾ ಪ್ರೇಮಿಗಳು. ಆದರೆ, ವ್ಯಾಪಾರ ದೃಷ್ಟಿಯಿಂದ ನೋಡುವುದಾದರೆ, ಇವೆಲ್ಲಾ ಕೆಲಸಗಳು ನಡೆಯಲೇಬೇಕು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಗಿರಕಿಹೊಡೆಯುತ್ತಿರುವುದಂತೂ ಸತ್ಯ.

ಕನ್ನಡದಲ್ಲಿ ಡಬ್ಬಿಂಗ್‌ ಕೆಲಸಗಳು ಜೋರಾಗಿವೆ. ಪರಭಾಷೆ ನಟರು ಅದಾಗಲೇ ಎಂಟ್ರಿಯಾಗಿದ್ದಾಗಿದೆ. ಇಲ್ಲಿ ಸಣ್ಣಪುಟ್ಟ ಕಾರ್ಮಿಕರು, ಕಲಾವಿದರಿಗೆ ಸಂಕಷ್ಟ ಎದುರಾಗಿರುವುದಂತೂ ನಿಜ. ಸ್ಟಾರ್‌ಗಳೂ ಈಗ ಮತ್ತಷ್ಟು ಚುರುಕಾಗಬೇಕಿದೆ. ವರ್ಷಕ್ಕೆ ಒಂದು ಸಿನಿಮಾ ಬದಲು ಎರಡು ಸಿನಿಮಾಗಳನ್ನಾದರೂ ಮಾಡಿದರೆ, ಕೊನೇಪಕ್ಷ ಇಂಡಸ್ಟ್ರಿಯಲ್ಲಿರುವ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳೇ ರಾರಾಜಿಸುತ್ತವೆ. ಆಗ ಪರಭಾಷೆಯ ಡಬ್ಬಿಂಗ್‌ ಸಿನಿಮಾಗಳ ಬಿಡುಗಡೆ ಕೊಂಚ ಕಡಿಮೆಯಾಗಬಹುದೇನೋ? ಇಲ್ಲಿ ಭಾಷೆಯನ್ನು ವಿರೋಧಿಸುತ್ತಿಲ್ಲ. ಕನ್ನಡಿಗರು ಎಲ್ಲಾ ಭಾಷಿಗರನ್ನೂ ಪ್ರೀತಿಸುತ್ತಾರೆ. ಅಂತೆಯೇ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಕನ್ನಡ ಸ್ಟಾರ್‌ಗಳು ಕೂಡ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಿದರೆ, ಎಲ್ಲರಿಗೂ ಹೆಚ್ಚು ಕೆಲಸ ಸಿಗುತ್ತೆ. ಆಗ ಎಷ್ಟೇ ಡಬ್ಬಿಂಗ್‌ ಚಿತ್ರಗಳು ಬಂದರೂ ಯಾವುದೇ ಪರಿಣಾಮ ಬೀರೋದಿಲ್ಲ.

error: Content is protected !!