ಬಿಗ್‌ ಬಜೆಟ್‌ ನಿರ್ಮಾಪಕರಿಗೆ ಕೊರೊನಾ ಕಲಿಸಿದ ಹೊಸ ಪಾಠ!

ಅರಿವಾದ ಬಳಿಕ ನಾವೆಲ್ಲಾ ಒಂದೇ ಎಂಬ ಘೋಷಣೆ

ಈ ಹಿಂದೆ ಚಿತ್ರಮಂದಿರಕ್ಕೆ ಯಾರು  ಬರಲಿ, ಬಿಡಲಿ ಅದರ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೊಸಬರಂತೂ ಸ್ಟಾರ್‌ ಚಿತ್ರಗಳ ಮಧ್ಯೆಯೂ ನುಸುಳಿ ಬಂದು ಜನರನ್ನ ಆಕರ್ಷಿಸಲು ಹೆಣಗಾಡುತಿದ್ದ ಪಾಡು ಹೇಳತೀರದು. ಆಗ, ನಿರ್ಮಾಪಕರ ನಡುವೆ ಅಷ್ಟಾಗಿ ಹೊಂದಾಣಿಕೆ ಇಲ್ಲದ ಕಾರಣವೋ ಏನೋ, ಒಂದಷ್ಟು ಚಿತ್ರಗಳು ಒಮ್ಮೆಲೆ ಚಿತ್ರಮಂದಿರಗಳಿಗೆ ಅಪ್ಪಳಿಸುವ ಮೂಲಕ ಗೊಂದಲ ಸೃಷ್ಟಿಸಿಬಿಡುತ್ತಿದ್ದವು. ಚಿತ್ರಮಂದಿರಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ ಯಾವ ಸಿನಿಮಾ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿ ಪ್ರೇಕ್ಷಕ ಇರುತ್ತಿದ್ದದ್ದು ಕಾಮನ್.‌ ಕೊರೊನಾ ಮುನ್ನ ಇದೆಲ್ಲಾ ಸಹಜವಾಗಿಯೇ ಇತ್ತು. ಆದರೆ ಈಗ…

ಕನ್ನಡ ಚಿತ್ರರಂಗದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ ಜೋರಾಗಿದೆ. ಕೊರೊನಾ ಹಾವಳಿ ಕಡಿಮೆಯಾದ ನಂತರದ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈಗ ಕನ್ನಡ ಸಿನಿಮಾರಂಗದಲ್ಲಿ ಎಲ್ಲವೂ ಸರಿಯಾಗಿದೆ. ಹೌದು, ಕೊರೊನಾ ಮುಂಚಿನ ದಿನಗಳಲ್ಲಿ ಚಿತ್ರರಂಗ ಸಿಕ್ಕಾಪಟ್ಟೆ ಶೈನ್‌ ಆಗಿತ್ತು. ಹಾಗಂತ, ಈಗ ಇಲ್ಲವೆಂದಲ್ಲ. ಎಂದಿಗಿಂತಲೂ ಈಗ ಚಿತ್ರರಂಗ ಬಲವಾಗಿದೆ. ಜೋಶ್‌ ಆಗಿಯೂ ಇದೆ. ಈ ಮಾತು ನಿಜ. ಮೊದಲೆಲ್ಲಾ ವಾರಕ್ಕೆ ಎಂಟು, ಹತ್ತು ಸಿನಿಮಾಗಳು ತೆರೆಕಂಡಿದ್ದನ್ನು ಗಮನಿಸಬಹುದು.

ಅಗೆಲ್ಲಾ ಚಿತ್ರಮಂದಿರಕ್ಕೆ ಯಾರು  ಬರಲಿ, ಬಿಡಲಿ ಅದರ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೊಸಬರಂತೂ ಸ್ಟಾರ್‌ ಚಿತ್ರಗಳ ಮಧ್ಯೆಯೂ ನುಸುಳಿ ಬಂದು ಜನರನ್ನ ಆಕರ್ಷಿಸಲು ಹೆಣಗಾಡುತಿದ್ದ ಪಾಡು ಹೇಳತೀರದು. ಹಾಗೆಲ್ಲಾ, ನಿರ್ಮಾಪಕರ ನಡುವೆ ಅಷ್ಟಾಗಿ ಹೊಂದಾಣಿಕೆ ಇಲ್ಲದ ಕಾರಣವೋ ಏನೋ, ಒಂದಷ್ಟು ಚಿತ್ರಗಳು ಒಮ್ಮೆಲೆ ಚಿತ್ರಮಂದಿರಗಳಿಗೆ ಅಪ್ಪಳಿಸುವ ಮೂಲಕ ಗೊಂದಲ ಸೃಷ್ಟಿಸಿಬಿಡುತ್ತಿದ್ದವು. ಚಿತ್ರಮಂದಿರಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ ಯಾವ ಸಿನಿಮಾ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿ ಪ್ರೇಕ್ಷಕ ಇರುತ್ತಿದ್ದದ್ದು ಕಾಮನ್.‌ ಕೊರೊನಾ ಮುನ್ನ ಇದೆಲ್ಲಾ ಸಹಜವಾಗಿಯೇ ಇತ್ತು. ಆದರೆ ಈಗ…


ಈಗ ಕಾಲ ಬದಲಾಗಿದೆ. ಕೊರೊನಾ ಒಳ್ಳೆಯ ಪಾಠವನ್ನೂ ಕಲಿಸಿದೆ. ಅದರಲ್ಲೂ ಸಿನಿಮಾ ಮಂದಿಗೆ ಸಾಕಷ್ಟು ಪಾಠ ಕಲಿಸಿದೆ ಅಂದರೆ ತಪ್ಪಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳು ಶುರುವಾಗಿದ್ದರೂ, ಚಿತ್ರರಂಗ ಮಾತ್ರ ಶುರುವಾಗಿರಲಿಲ್ಲ. ಸರ್ಕಾರ ಶೇ.೫೦ರಷ್ಟು ಮಾತ್ರ ಅನುಮತಿ ನೀಡಿದೆ. ಈ ಅನುಮತಿಯ ಆಧಾರದ ಮೇಲೆ ಎಲ್ಲವೂ ನಡೆಯುತ್ತಿದೆ. ಒಂದಷ್ಟು ಚಿತ್ರಗಳು ತೆರೆಕಂಡಿವೆ. ಈಗ ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕೊರೊನಾ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದಲ್ಲದೆ, ಎಲ್ಲರಿಗೂ ಒಂದು ತಕ್ಕ ಪಾಠ ಕಲಿಸಿದ್ದರಿಂದಲೇ ಈಗ ಬಿಗ್‌ ಬಜೆಟ್‌ ಚಿತ್ರಗಳ ನಿರ್ಮಾಪಕರು ಒಂದಾಗಿದ್ದಾರೆ.

ತಮ್ಮ ತಮ್ಮಲ್ಲೇ ಬಿಡುಗಡೆಯ ಪೈಪೋಟಿ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರಗಳಲ್ಲಿ ಶೇಕಡವಾರು ಬದಲಾಗಿ, ಮೊದಲಿನಂತೆ ಬಾಡಿಗೆ ವ್ಯವಸ್ಥೆಯೇ ಇರಬೇಕು ಎಂದು ಒಕ್ಕೊರಲ ಮನವಿ ಮಾಡಿದ್ದಾರೆ. ಇಷ್ಟಕ್ಕೂ ಬಿಗ್‌ ಬಜೆಟ್‌ ನಿರ್ಮಾಪಕರು ಸೇರಿ ಹೀಗೆಲ್ಲಾ ಒಗ್ಗಟ್ಟಿನ ಮಂತ್ರ ಜಪಿಸೋಕೆ ಕಾರಣ, “ಪೊಗರು” ರಿಲೀಸ್.‌ ಹೌದು, ಇತ್ತೀಚೆಗೆ ಚಿತ್ರದ ಬಿಡುಗಡೆ ಕುರಿತು ಚಿತ್ರತಂಡ ಘೋಷಣೆ ಮಾಡಿತು. ಫೆಬ್ರವರಿ ೧೧ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಂದು ಆ ಚಿತ್ರದ ಬಿಡುಗಡೆ ಘೋಷಣೆ ಸಂದರ್ಭದಲ್ಲಿ ಎಲ್ಲರೂ ವೇದಿಕೆ ಮೇಲೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು ದಿಟ. ಅಷ್ಟಕ್ಕೂ ಅವರು ಒಗ್ಗಟ್ಟು ಮಂತ್ರ ಹೇಳಿದ್ದಿಷ್ಟು. ಸಿನಿಮಾ ರಿಲೀಸ್‌ಗೆ ಸಾಲು ಸಾಲು ಬಿಗ್‌ ಬಜೆಟ್‌ ಚಿತ್ರಗಳು ಸಜ್ಜಾಗಿವೆ.

“ಪೊಗರುʼ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ, ಚಿತ್ರರಂಗದ ಬಹುತೇಕ ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಪಕರು ವೇದಿಕೆಯಲ್ಲಿದ್ದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಂದು ನಿರ್ಮಾಪಕ ಸೂರಪ್ಪ ಬಾಬು, ಪ್ರದರ್ಶಕರ ಸಂಘದ ಮುಖ್ಯಸ್ಥ ಓದು ಗೌಡರಿಗೆ ವಿನಂತಿ ಮಾಡಿದ್ದಿಷ್ಟು, “ನಾವೆಲ್ಲ ಇಷ್ಟು ಜನ ಒಟ್ಟಾಗಿ ಬಂದಿದ್ದೇವೆ. ಇಂತಹ ಕಷ್ಟಕಾಲದಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಂದಿದ್ದೇವೆ. ಅದರಲ್ಲೂ “ಪೊಗರು” ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಅವರಿಗೆ ನಾವೆಲ್ಲಾ ಕೈ ಜೋಡಿಸಿ, ಬೆಂಬಲಕ್ಕೆ ನಿಂತಿದ್ದೇವೆ.

ಕಳೆದ ಒಂಭತ್ತು ತಿಂಗಳಿನಿಂದಲೂ ಭಾರೀ ಬಜೆಟ್ ನ ಚಿತ್ರ ನಿರ್ಮಾಪಕರು ತುಂಬಾ ಕಷ್ಟ ಪಟ್ಟಿದ್ದಾರೆ. ಉತ್ತರ ಕರ್ನಾಟಕ ಕಡೆಯಿಂದ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತಿದೆ. ವಿನಂತಿ ಮಾಡುತ್ತಿದ್ದೇವೆ. ಹಿಂದೆ ಹೇಗೆ ನಡೆದುಕೊಂಡು ಬಂದಿತ್ತೋ, ಅದನ್ನೇ ಮುಂದುವರೆಸಿಕೊಂಡು ಬನ್ನಿ. ನೀವು ಯೋಚನೆ ಮಾಡಿ, ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಶಿವಣ್ಣ ಅವರ ಜೊತೆಗೂ ಚರ್ಚೆ ಮಾಡಿದ್ದೇವೆ. ಬಾಡಿಗೆ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಶೇರ್ ಬೇಡ. ಅದನ್ನು ಕೊಡೋದಿಕ್ಕೆ ಶುರು ಮಾಡಿದರೆ ಬಿಗ್ ಬಜೆಟ್ ಸಿನಿಮಾ ಮಾಡೋದಿಕ್ಕೆ ಆಗೋದಿಲ್ಲ. ಬಾಡಿಗೆ ವ್ಯವಸ್ಥೆ ಮುಂದುವರೆಯಬೇಕು” ಎಂಬ ಮನವಿ ಇಟ್ಟರು.


ಇದಷ್ಟೇ ಅಲ್ಲ, ಯಾವುದೇ ನಿರ್ಮಾಪಕ ಇರಲಿ, ಇನ್ನು ಮುಂದೆ ರಿಲೀಸ್‌ಗೆ ಫೈಟಿಂಗ್‌ ಮಾಡೋದು ಬೇಡ. ಯಾರದ್ದೋ ಒತ್ತಡದ ಆಸೆಗೆ ಸಿನಿಮಾ ರಿಲೀಸ್‌ ಮಾಡಬೇಡಿ. ಇದು ಎಲ್ಲರಿಗೂ ಒಳಿತು ಎಂಬ ಮಾತು ಕೂಡ ಇದೇ ವೇಳೆ ಎಲ್ಲಾ ನಿರ್ಮಾಪಕರಿಂದಲೂ ಕೇಳಿಬಂತು. ಅಂದಹಾಗೆ, ಮಾರ್ಚ್‌ ‌11ಕ್ಕೆ “ರಾಬರ್ಟ್” ಬಂದರೆ, ನಂತರದ ದಿನಗಳಲ್ಲಿ, ಏಪ್ರಿಲ್‌ 1 ರಂದು “ಯುವರತ್ನ”, ಏಪ್ರಿಲ್‌ 15 ಕ್ಕೆ “ಸಲಗ”, ಏಪ್ರಿಲ್‌ 25 ಕ್ಕೆ “ಕೋಟಿಗೊಬ್ಬ” , ಮೇ 15ಕ್ಕೆ “ಭಜರಂಗಿ ೨” ಹೀಗೆ ಬಿಡುಗಡೆಯಾಗಲಿವೆ. ಜೂನ್‌ನಲ್ಲಿ “ವಿಕ್ರಾಂತ್‌ ರೋಣ”, “ಕೆಜಿಎಫ್-‌೨” , ಆಗಸ್ಟ್‌ ನಲ್ಲಿ “ಚಾರ್ಲಿ” ಇತ್ಯಾದಿ ಚಿತ್ರಗಳು ಬರಲಿವೆ. ಹೀಗಾಗಿ ಮೊದಲಿನಂತೆ ಮನಸ್ಸಿಗೆ ಬಂದಂತೆ ರಿಲೀಸ್‌ ಮಾಡೋದು ಬೇಡ. ಮೊದಲೇ ಒಂದು ದಿನಾಂಕ ನಿಗಧಿಪಡಿಸಿ, ರಿಲೀಸ್‌ ಮಾಡಬೇಕು ಎಂಬ ಮಾತು ಜೋರಾಗಿ ಕೇಳಿಬಂತು.

ಅದೇನೆ ಇರಲಿ, ಕೊರೊನಾ ಬಳಿಕ ಎಲ್ಲರೂ ಪಾಠ ಕಲಿತಿರೋದು ನಿಜ. ಈಗ ಮಾತಾಡಿಕೊಂಡೇ ಸಿನಿಮಾ ರಿಲೀಸ್‌ ಮಾಡೋಣ ಅನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಅಂತೂ ಈಗಾದರೂ, ಸಿನಿಮಾ ಮಂದಿರಗಳಿಗೆ ಒಬ್ಬೊಬ್ಬರೇ ಬಂದು ಪ್ರೇಕ್ಷಕರನ್ನು ರಂಜಿಸಲು ಸಜ್ಜಾದರೆ ಸಾಕು. ಇದು ಕೊರೊನಾ ಹಿನ್ನೆಲೆಯಲ್ಲಿ ಮಾತ್ರವಲ್ಲ, ಕೊರೊನಾ ಹೋದ ಬಳಿಕವೂ, ಮುಂದಿನ ದಿನಗಳಲ್ಲೂ ಇದೇ ವ್ಯವಸ್ಥೆ ಮುಂದುವರೆದರೆ ಚಿತ್ರರಂಗ ಇನ್ನಷ್ಟು ಶೈನ್‌ ಆಗುವುದರಲ್ಲಿ ಎರಡು ಮಾತಿಲ್ಲ.

Related Posts

error: Content is protected !!