ಮಾಜಿ ಸಚಿವರು, ಹಾನಗಲ್ ಕ್ಷೇತ್ರದ ಶಾಸಕರಾದ ಸಿ.ಎಂ. ಉದಾಸಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸಂತಾಪ ಸೂಚಿಸಿದ್ದಾರೆ. ಹಿರಿಯ ರಾಜಕೀಯ ಮುತ್ಸದ್ದಿ ಸಿ.ಎಂ.ಉದಾಸಿ ಅವರು ಅತ್ಯಂತ ಸರಳ ಸಜ್ಜನ ರಾಜಕಾರಣಿ. ಬಡವರು, ಜನ ಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಇದ್ದ ಸಹೃದಯ ರಾಜಕಾರಣಿ. ಉದಾಸಿ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. ಸಾಕಷ್ಟು ಯುವಕರಿಗೆ ಅವರು ಮಾದರಿಯಾಗಿದ್ದರು. ಉದಾಸಿಯವರ ನಿಧನದಿಂದ ಅವರ ಅಪಾರ ಅಭಿಮಾನಿ ಬಳಗ ದುಃಖದಲ್ಲಿ ಮುಳುಗಿದೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
‘ಸಾಕು ಇನ್ನು ಸಾಕು ಬರಿ ದೋಷಣೆಯ ನಿಲ್ಲಿಸಿರಿ ಸಾಕು’ ಗೀತೆಯ ಮೂಲಕ ಜನರಲ್ಲಿ ಭರವಸೆ ಮೂಡಿಸಲು ಹಾಗು ಸಕಾರಾತ್ಮಕ ಮನದಾಳವನ್ನು ಹೊರಹೊಮ್ಮಿಸಲು ಇಲ್ಲೊಂದುತಂಡ ರೆಡಿಯಾಗಿದೆ. ಹೌದು, ಅದು ಆಲಾಪ್ ಕ್ರಿಯೇಷನ್ಸ್ ಮೂಲಕ. ವಿಶೇಷ ಅಂದರೆ, ‘ಫಾರ್ ರಿಜಿಸ್ಟ್ರೇಷನ್’ ನಿರ್ದೇಶಕರಾದ ನವೀನ್ ದ್ವಾರಕನಾಥ್ ಆಲಾಪ್ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ‘ಭರವಸೆಯ ಬದುಕು’ ಎಂಬ ಶೀರ್ಷಿಕೆಯ ಗೀತೆಯನ್ನು ಹೊರ ತಂದಿದ್ದಾರೆ. ಇವರು ನಿರ್ದೇಶನ ಮಾಡಿರೋ, ಈ ಹಾಡಿಗೆ ಚಂದನವನ ಹಾಗೂ ರಂಗಭೂಮಿ ಕಲಾವಿದರು, ಸಾಥ್ ನೀಡಿದ್ದಾರೆ.
ಈಗಾಗಲೇ ಅದೆಷ್ಟೋ ಮನಸ್ಸುಗಳು ನಕಾರಾತ್ಮಕ ಆಲೋಚನೆಯಲ್ಲಿ ಭರವಸೆಯನ್ನು ಕಳೆದುಕೊಂಡಿದ್ದು, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ.
ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವು ಹದೆಗೆಟ್ಟಿರುವುದರಿಂದ ಜನರಲ್ಲಿನ ಆತ್ಮ ವಿಶ್ವಾಸ ಕುಂದುತ್ತಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಪಾಸಿಟಿವ್ ಆಲೋಚನೆ ಬೆಳೆಸಲು, ಆತ್ಮ ವಿಶ್ವಾಸ ತುಂಬಲು ಹಾಗೂ ಭರವಸೆ ಮೂಡಿಸಲೆಂದೇ ಈ ಗೀತೆಯನ್ನು ನಿರ್ದೇಶಿಸಲು ಮುಂದಾದೆ ಎನ್ನುತ್ತಾರೆ ನಿರ್ದೇಶಕರಾದ ನವೀನ್ ದ್ವಾರಕನಾಥ್.
ಜೂನ್ 9ರ ಬುಧವಾರ ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಹಾಡಿನಲ್ಲಿ ಅನಿರುದ್ಧ ಜಟ್ಕರ್, ಚಂದನ್ ಶರ್ಮಾ, ಪ್ರಥ್ವಿ ಅಂಬಾರ್ , ಸಿಂಪಲ್ ಸುನಿ, ವಸಿಷ್ಠ ಸಿಂಹ, ಸೋನು ಗೌಡ, ನಾಗೇಂದ್ರ ಪ್ರಸಾದ್, ಪಿ.ಡಿ.ಸತೀಶ್ ಚಂದ್ರ, ಕೃಷಿ ತಾಪಂಡಾ, ಹರ್ಷಿಕಾ ಪೂಣಚ್ಛ, ರಂಜಿನಿ ರಾಘವನ್, ರಘು ರಾಮನಕೊಪ್ಪ, ರೆಮೋ, ಜೈ ರಾಮ್ ಕಾರ್ತಿಕ್, ಕಿಶನ್ ಬೆಳಗಲಿ, ನವೀನ್ ಶಂಕರ್, ಮಯೂರ ರಾಘವೇಂದ್ರ, ಆರ್.ಜೆ. ಸೌಜನ್ಯ, ವರ್ಷಿಣಿ ಜಾನಕೀರಾಮ್,ಆರ್ ಅಭಿಲಾಷ್, ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಇನ್ನು ಗಾಯಕರಾದ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಹಿನ್ನಲೆ ಗಾಯಕರಾಗಿದ್ದು, ತಮ್ಮ ಬಹುಮುಖ ಪ್ರತಿಭೆಯನ್ನು ಬಳಸಿಕೊಂಡು ಸಂಗೀತ ನಿರ್ದೇಶಕ ಹರೀಶ್ ಆರ್ .ಕೆ ಹಾಗೂ ಸಿದ್ಧಾರ್ಥ್ ಹಾಡಿನ ಸಂಯೋಜನೆ ಮಾಡಿ, ಹರೀಶ್.ಆರ್.ಕೆ ಈ ಹಾಡಿಗೆ ಸಾಹಿತ್ಯವನ್ನು ನೀಡಿದ್ದಾರೆ. ಹಾಗೆ ಮನು ಸೆಡ್ಗಾರ್ ವಿಡಿಯೋ ಸಂಕಲನ ಮಾಡಿದ್ದಾರೆ.
ಎಷ್ಟೋ ಜನ ತಾವು ಹುಟ್ಟಿ ಬೆಳೆದ ಊರನ್ನು ಬೆಳೆದ ಮೇಲೆ ಮರೆಯುವುದುಂಟು. ಆದರೆ, ಕೆಲವರು ಮಾತ್ರ ತಮ್ಮೂರಿನ ಜನರ ಕಷ್ಟಕ್ಕೆ ಸ್ಪಂದಿಸುವ ಗುಣವಿರುತ್ತದೆ. ಕನ್ನಡ ಹಾಗು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಹೆಸರು ಮಾಡಿರುವ ನಿರ್ದೇಶಕ ಆರ್. ಚಂದ್ರು ಕೊರೊನಾ ಸಂಕಷ್ಟ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ.
ಚಲನಚಿತ್ರ ಕ್ಷೇತ್ರವಲ್ಲದೇ ತಾವು ಹುಟ್ಟಿ ಬೆಳೆದ ಚಿಕ್ಕಬಳ್ಳಾಪುರ ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ 25 ಕೆಜಿಯ ಅಕ್ಕಿ ಮೂಟೆ ನೀಡಿದ್ದಾರೆ.
‘ನಾನು ರೈತನ ಮಗ. ಕೊರೊನಾ ಸಂಕಷ್ಟದ ಕಾಲದಲ್ಲಿ ನನ್ನೂರಿನವರಿಗೆ ನೆರವಾಗುವುದು ನನ್ನ ಧರ್ಮ. ಇಂದು ಮತ್ತು ಎಂದೆಂದಿಗೂ ನಾನು ಮಣ್ಣಿನ ಋಣ ತೀರಿಸಲು ಮುಂದಾಗಿರುತ್ತೇನೆ ಎನ್ನುತ್ತಾರೆ ಆರ್ ಚಂದ್ರು.
ಕೆಜಿಎಫ್ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲೆ ದೊಡ್ಡ ಸದ್ದು ಮಾಡಿದ ಖ್ಯಾತಿ ನಿರ್ಮಾಪಕ ವಿಜಯ್ ಕಿರಗಂದೂರು ಅವರದ್ದು. ಆ ಚಿತ್ರದ ಮೂಲಕ ಅವರು ನಿರೀಕ್ಷೆ ಮೀರಿ ಗಳಿಕೆ ಕಂಡಡು ಅನ್ನೋದು ಕೂಡ ಅಷ್ಟೇ ಸುದ್ದಿ ಆಗಿದ್ದು ನಿಮಗೂ ಗೊತ್ತು. ಆದರೆ ಅದೇ ಬಂಡವಾಳದ ಮೂಲಕವೇ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವ ಹಾಗೆ ಅದ್ದೂರಿ ವೆಚ್ಚದ ಸಿನಿಮಾಗಳ ನಿರ್ಮಾಣದಲ್ಲಿ ಅವರು ಬ್ಯುಸಿ ಆಗಿದ್ದಾರೆನ್ನುವುದು ಒಂದೆಡೆಯಾದರೆ, ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸದ್ದಿಲ್ಲದೆ ಸುದ್ದಿ ಮಾಡದೆ ತೆರೆಮರೆಯಲ್ಲಿದ್ದೇ ದೊಡ್ಡ ಪ್ರಮಾಣದಲ್ಲಿ ಸಹಾಯಕ್ಕೆ ನಿಂತಿದ್ದಾರೆನ್ನುವುದು ಇನ್ನೊಂದು ವಿಶೇಷ.
ಹೌದು, ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆಯ ಮಾಲೀಕರಾದ ವಿಜಯ್ ಕಿರಗಂದೂರು, ತಮ್ಮ ಹುಟ್ಟೂರಿನ ಜನರ ಸಹಾಯಕ್ಕೆ ನಿಂತಿದ್ದಾರೆ. ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆ ನೀಡಿದ್ದಾರೆ. ಹಾಗೆಯೇ ಸಂಕಷ್ಟದಲ್ಲಿದ್ದ ಜನರಿಗೂ ಆರ್ಥಿಕ ನೆರವಿನ ಜತೆಗೆ ಅಗತ್ಯ ಸೌಕರ್ಯ ಕಲ್ಪಿಸಿದ್ದಾರೆ. ಇದು ಅಲ್ಲಿನ ಜನರಿಗೆ ಸಾಕಷ್ಟು ಮೆಚ್ಚುಗೆ ಆಗಿದೆ. ಯಾವುದೇ ಪ್ರಚಾರವಿಲ್ಲದೆ ಅವರು ಈ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಕನ್ನಡ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡಿದ್ದಾರೆ.
ಎಲ್ಲಕ್ಕಿಂತಲೂ ಮಿಗಿಲಾಗಿ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600 ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೋನ ಲಸಿಕೆ ಹಾಕಿಸಿದ್ದಾರೆ. ಜತೆಗೆ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ. ಅವರ ಸಹಾಯ ಹಸ್ತ ಬರೀ ಕರ್ನಾಟಕಕಷ್ಟೇ ಸೀಮಿತವಾಗಿಲ್ಲ. ತಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ತೆಲುಗಿನ “ಸಲಾರ್” ಚಿತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಮಂದಿ ಚಿತ್ರತಂಡದ ಸದಸ್ಯರಿಗೂ ಅಗತ್ಯ ನೆರವು ನೀಡಿ, ಅಪತ್ಪಾಂದವ ಎನಿಸಿಕೊಂಡಿದ್ದಾರೆ. ಸಿನಿಮಾ ಕಾರ್ಮಿಕರು ಹಾಗೂ ಮಾಧ್ಯಮದ ಮಿತ್ರರಿಗೂ ಗೊತ್ತಾಗದಂತೆ ನೆರವಿ ಹಸ್ತ ನೀಡಿದ್ದಾರೆ.
ಇದ್ಯಾವುದೇ ಕೆಲಸವನ್ನು ಅವರು ಯಾವುದೇ ಪ್ರಚಾರವಿಲ್ಲದೆ ನಡೆಸಿಕೊಂಡು ಬಂದಿದ್ದಾರೆ. ಕಳೆದ ವರ್ಷ ಕೊರೋನಾದಿಂದ ಸಿನಿಮಾ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ, ನಿರ್ಮಾಪಕ ವಿಜಯ್ ಕಿರಗಂದೂರು ಅವರ ನೆರವಿಗೆ ಬಂದಿದ್ದರು. ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಉತ್ತಮ ಮೊತ್ತವನ್ನು ಎರಡು ತಿಂಗಳು ವರ್ಗಾಯಿಸಿದ್ದರು. ಹಾಗೆಯೇ ಕನ್ನಡ ಚಲನಚಿತ್ರ ಕಾರ್ಮಿಕರ ಸಂಕಷ್ಟ ಕ್ಕೂ ನರೆವಾಗಿದ್ದರು. ಕೊರೋನ ಸಂದರ್ಭದಲ್ಲಿ ಅವರು ಯಾವುದೇ ಪ್ರಚಾರವಿಲ್ಲದೇ ಮಾಡಿರುವ ಸತ್ಕಾರ್ಯಗಳು ನಿಜಕ್ಕೂ ಆದರ್ಶನೀಯವಾಗಿವೆ. ಸದ್ದಿಲ್ಲದೆ ಮಾಡುತ್ತಿರುವ ಅವರ ನೆರವಿನ ಕಾರ್ಯಗಳ ಬಗ್ಗೆ ಕೇಳಿದರೆ, ಇದಕ್ಕೆಲ್ಲ ಪ್ರಚಾರ ಬೇಕಾ? ಪ್ರಚಾರಕ್ಕಾಗಿ ಸಂಕಷ್ಟದಲ್ಲಿದ್ದವರ ನೆರವಿಗೆ ನಿಲ್ಲಬೇಕಾ? ಬದಲಿಗೆ ಇದು ನಮ್ಮ ಕರ್ತವ್ಯ. ದೇವರು ಕೊಡುವ ಶಕ್ತಿ ಕೊಟ್ಟಿದ್ದಾನೆ ಅಂದಾಗ, ನಮ್ಮಿಂದಾದಷ್ಟು ಕೆಲಸ ಮಾಡಬೇಕು. ಅದೇ ನಿಜವಾದ ಧರ್ಮ ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರು.
ಕೊರೊನಾ ಸಮಸ್ಯೆಗೆ ಇಡೀ ಜಗತ್ತು ತತ್ತರಿಸಿದ್ದು ಗೊತ್ತೇ ಇದೆ. ಲೆಕ್ಕವಿಲ್ಲದಷ್ಟು ಮಂದಿ ಜೀವ ಬಿಟ್ಟಿದ್ದಾರೆ. ಹಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕೆಲಸವಿಲ್ಲದೆ ಜನ ಕಂಗಾಲಾಗಿದ್ದಾರೆ. ಇದಕ್ಕೆ ಸಿನಿಮಾರಂಗದ ಮಂದಿಯೂ ಹೊರತಲ್ಲ. ಬದುಕು ನಡೆಸಲು ಕಷ್ಟ ಪಡುತ್ತಿರುವ, ಸಂಕಷ್ಟಕ್ಕೆ ಸಿಲುಕಿರುವ ಸಿನಿ ಮಂದಿಯ ನೋವಿಗೆ ಈಗಾಗಲೇ ಕನ್ನಡದ ಅನೇಕ ಸ್ಟಾರ್ ನಟರು ಸ್ಪಂದಿಸಿದ್ದಾರೆ. ಈಗ ನಟ ನೀನಾಸಂ ಸತೀಶ್ ಮತ್ತು ಸಂಚಾರಿ ವಿಜಯ್ ಮತ್ತು ಗೆಳೆಯರು ಕೂಡ ಸಿನಿಮಾ ಕಾರ್ಮಿಕರ ನೋವಿಗೆ ಸ್ಪಂದಿಸಲು ಮುಂದಾಗಿದ್ದಾರೆ.
ನಟ ಸಂಚಾರಿ ವಿಜಯ್, ಪತ್ರಕರ್ತ ಶರಣ್ ಹುಲ್ಲೂರು, ನಟಿಯರಾದ ಶರ್ಮಿಳಾ ಮಾಂಡ್ರೆ ಹಾಗೂ ಕಾರುಣ್ಯ ರಾಮ್ ಅವರನ್ನೊಳಗೊಂಡ ಒಂದು ತಂಡದ ಮೂಲಕ ಅಗತ್ಯ ಇರುವ ಸಿನಿಮಾ ಕಾರ್ಮಿಕರಿಗೆ ಫುಡ್ ಕಿಟ್ ನೀಡಲು ಸನೀನಾಸಂ ಸತೀಶ್ ಸಿದ್ಧತೆ ನಡೆಸಿದ್ದಾರೆ.
ಇದೆಲ್ಲ ಆ ತಂಡದ ತಯಾರಿ. ನಟ ಸತೀಸ್ ನೀನಾಸಂ ಕಚೇರಿಯಲ್ಲಿ ಎಲ್ಲಾ ಸಿದ್ದತೆ ನಡೆಯುತ್ತಿದೆ. ಅಕ್ಕಿ, ಬೆಳೆ, ಸಕ್ಕರೆ, ತರಕಾರಿ ಸೇರಿದಂತೆ ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ತಂಡ ರೆಡಿ ಮಾಡುತ್ತಿದೆ. ಸದ್ಯಕ್ಕೆ ಇದರ ವಿತರಣೆಯೆಲ್ಲ ಹೇಗೆ, ಎಂತೂ ಗೊತ್ತಿಲ್ಲ. ಆದರೆ, ಇದೆಲ್ಲ ಹೇಗೆ ಶುರುವಾಯ್ತು..? ಆ ಬಗ್ಗೆ ನಟ ಸತೀಸ್ ನೀನಾಸಂ ಹೇಳುವುದು ಹೀಗೆ…
ಸತೀಶ್ ಮಾತು. ‘ಈಗಾಗಲೇ ಸಿನಿಮಾ ರಂಗದಲ್ಲಿ ನಟರಾದ ಸುದೀಪ್, ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಹಲವರು ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಈ ಪೈಕಿ ಯಶ್ ಆಂಗ್ರಪಂಕ್ತಿಯಲ್ಲಿ ನಿಂತಿದ್ದಾರೆ.
ಹಾಗೆಯೇ ನಟ ಸಂಚಾರಿ ವಿಜಯ್ ಕೂಡ ಮೊದಲಿನಿಂದಲೂ ತಮ್ಮ ಕೈಲಾದ ಸಹಾಯ ಮಾಡುತ್ತಾ ಬರುತ್ತಿದ್ದಾರೆ.
ಇವರ ಜೊತೆ ನಾನು ಸಮಾನ ಮನಸ್ಕ ತಂಡದೊಂದಿಗೆ ಫುಡ್ ಕಿಟ್ ವಿತರಣೆಗೆ ರೆಡಿಯಾಗುತ್ತಿದ್ದೇನೆ’ ಎಂದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ಜಯಾ (77) ಇಂದು (ಜೂನ್ 3) ನಿಧನರಾಗಿದ್ದಾರೆ. ತಿಂಗಳ ಹಿಂದಷ್ಟೇ ಅವರು ಪಾರ್ಶ್ವವಾಯುಗೆ ತುತ್ತಾಗಿ, ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಬಿ.ಜಯಾ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ನರಸಿಂಹರಾಜು ಮತ್ತು ದ್ವಾರಕೀಶ್ ಜೋಡಿಯಾಗಿ ಅವರ ಪಾತ್ರಗಳು ಬಹು ಜನಪ್ರಿಯಗೊಂಡಿದ್ದವು. ಜಯಾ ಅವರು ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿದ್ದರು ಎಂಬುದು ವಿಶೇಷ.
ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿದ್ದರು., ಹತ್ತಾರು ಧಾರಾವಾಹಿಗಳಲ್ಲೂ ಅವರು ಕಾಣಿಸಿಕೊಂಡಿದ್ದರು
ಜಯಾ ಅವರ ತಂದೆ ಬಸಪ್ಪನವರು ರಂಗಭೂಮಿ ಕಲಾವಿದರು. ಪುತ್ರಿಯನ್ನು ನಟಿಯಾಗಿ ರೂಪಿಸಬೇಕೆನ್ನುವ ಇರಾದೆ ಅವರದಾಗಿತ್ತು. ತಂದೆಯ ಒತ್ತಾಸೆಯಂತೆ ಜಯಾ ರಂಗಭೂಮಿ ಪ್ರವೇಶಿಸಿದರು. ಆಗ ಅವರಿಗೆ ಹತ್ತು ವರ್ಷ. ‘ಚಾಮುಂಡೇಶ್ವರಿ ನಾಟಕ ಮಂಡಳಿ’ಯಲ್ಲಿ ಪ್ರಹ್ಲಾದ, ಬಾಲಭೋಜ, ಕೃಷ್ಣ, ಋಷಿಕೇಶ, ಸನಕಾದಿಗಳ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರು ನಟನೆ ಜೊತೆಗೆ ಸಂಗೀತ, ನೃತ್ಯ ಕಲಿತರು.
‘ಭಕ್ತ ಪ್ರಹ್ಲಾದ’ (1958) ಚಿತ್ರದ ಪುಟ್ಟ ಪಾತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಮುಂದೆ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ ಅವರು ಮದರಾಸಿನಲ್ಲಿದ್ದಾಗ ಹಲವಾರು ರೇಡಿಯೋ ನಾಟಕಗಳಲ್ಲೂ ಪಾಲ್ಗೊಂಡಿದ್ದರು. ಆಗ ಬೆರಳೆಣಿಕೆಯಷ್ಟೇ ಕನ್ನಡ ಚಿತ್ರಗಳು ತಯಾರಾಗುತ್ತಿದ್ದುದು. ಕನ್ನಡ ಚಿತ್ರ ತಾರೆಯರು ಜೀವನೋಪಾಯಕ್ಕಾಗಿ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ ಕಟ್ಟಿದ್ದರು. ಬಿ.ಜಯಾ ಅವರು ಕೂಡ ಈ ತಂಡದ ಕಲಾವಿದೆಯಾಗಿ ರಾಜ್ಯದ ಹಲವೆಡೆ ನಾಟಕಗಳ ಪ್ರದರ್ಶನ ನೀಡಿದ್ದರು.
1983ರಲ್ಲಿ ‘ಕುಮಾರೇಶ್ವರ ನಾಟಕ ಸಂಘ’ ಕಟ್ಟಿದ ಬಿ.ಜಯಾ ಅವರು 1992ರವರೆಗೆ ಕಂಪನಿ ನಡೆಸಿದರು.
ದೈವಲೀಲೆ, ವಿಧಿ ವಿಲಾಸ, ಬೆಳ್ಳಿಮೋಡ, ನ್ಯಾಯವೇ ದೇವರು, ಚಿನ್ನದ ಗೊಂಬೆ, ಪ್ರತಿಜ್ಞೆ, ಮಹದೇಶ್ವರ ಪೂಜಾಫಲ, ಮಣ್ಣಿನ ಮಗ, ಶ್ರೀಕೃಷ್ಣ ದೇವರಾಯ, ಕುಲಗೌರವ, ಪೂರ್ಣಿಮಾ, ನಗುವ ಹೂವು, ಮುಕ್ತಿ, ಜೀವನ ಜೋಕಾಲಿ, ದೇವರು ಕೊಟ್ಟ ತಂಗಿ, ಗಂಧದ ಗುಡಿ, ಶುಭಮಂಗಳ, ದಾರಿತಪ್ಪಿದ ಮಗ, ಪ್ರೇಮದ ಕಾಣಿಕೆ… ಜಯಾ ಅವರ ಕೆಲವು ಪ್ರಮುಖ ಚಿತ್ರಗಳು. ‘ಮಹಾನ್ ಮರೆಗುಳಿಗಳು’ ಸರಣಿಯಿಂದ ಶುರುವಾದ ಅವರ ಕಿರುತೆರೆ ನಂಟು ಇತ್ತೀಚಿನವರೆಗೂ ಜಾರಿಯಲ್ಲಿತ್ತು.
‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ (2012), ಚಿತ್ರಪ್ರೇಮಿಗಳ ಸಂಘ, ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಗೌರವ ಸೇರಿದಂತೆ ಹತ್ತಾರು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.
‘ಕುಲಗೌರವ’ ಚಿತ್ರದಲ್ಲಿ ರಾಜಕುಮಾರ್, ನರಸಿಂಹರಾಜು ಅವರೊಂದಿಗೆ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಪನಾ ಜೊತೆ ‘ಮಹದೇಶ್ವರ ಪೂಜಾಫಲ’ದಲ್ಲಿ ದ್ವಾರಕೀಶ್ ಜೊತೆ ಕಾಣಿಸಿಕೊಂಡಿದ್ದರು
ಕನ್ನಡ ಚಿತ್ರೋದ್ಯಮದ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅಭಿನಂದಿಸಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರೋದ್ಯಮಕ್ಕೆ ಆಸರೆಯಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು.
ಮುಖ್ಯಮಂತ್ರಿಯವರು ಮನವಿಗೆ ಸ್ಪಂದಿಸಿ ಪ್ಯಾಕೇಜ್ ನೀಡಿದ್ದಾರೆ. ಸಂಕಷ್ಟದಲ್ಲಿ ಪ್ಯಾಕೇಜ್ ನೀಡಿದ ಮುಖ್ಯಮಂತ್ರಿಯವರನ್ನು ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಸುನೀಲ್ ಪುರಾಣಿಕ್ ಅವರು ತಿಳಿಸಿದ್ದಾರೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷದೊಂದಿಗೆ ಮುಖ್ಯಮಂತ್ರಿಯವರು ಎಲ್ಲರಿಗೂ ಕೊರೊನಾ ಸಂಕಷ್ಟದಲ್ಲಿ ಕೈಹಿಡಿದಿದ್ದಾರೆ. ಮೊದಲ ಪ್ಯಾಕೇಜ್ ನಲ್ಲಿ ಚಿತ್ರೋದ್ಯಮಕ್ಕೆ ಪ್ಯಾಕೇಜ್ ಕೈತಪ್ಪಿತ್ತು. ಆದರೆ, ತಾವು ಮಾಡಿದ ಮನವಿಗೆ ಅವರು ಇದೀಗ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಮುಖ್ಯಮಂತ್ರಿ ಅವರು ವಿಶೇಷ ಕಾಳಜಿಯಿಂದ ಆಹಾರ ಸಾಮಗ್ರಿಗಳ ಖರೀದಿಗೆ ಸಂಕಷ್ಟದಲ್ಲಿದ್ದ ಚಿತ್ರರಂಗದ 6500 ಮಂದಿಗೆ ತಲಾ 3000 ರೂ. ಮೌಲ್ಯದ ರಿಲೆಯನ್ಸ್ ಕೂಪನ್ ಕೊಡಿಸಿದ್ದರು. ಅಲ್ಲದೆ, ಇತ್ತೀಚಿಗೆ ಚಿತ್ರೋದ್ಯಮದವರಿಗಾಗಿ ವಿಶೇಷವಾಗಿ ಲಸಿಕೆಯನ್ನೂ ನೀಡಿ ಸಹಾಯ ಮಾಡಿದ್ದಾರೆ. ಇದನ್ನು ಕನ್ನಡ ಚಿತ್ರೋದ್ಯಮ ಸ್ಮರಿಸುತ್ತದೆ ಎಂದು ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.
ಜೂನ್ 12 ನಟ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬ. ಕೃಷ್ಣ ಅವರ ಹುಟ್ಟುಹಬ್ಬಕ್ಕೆ “ಶುಗರ್ ಫ್ಯಾಕ್ಟರಿ” ಚಿತ್ರದ ವಿಡಿಯೋ ಟೀಸರ್ ಬಿಡುಗಡೆಯಾಗಲಿದೆ. ಟೀಸರ್ ನಲ್ಲಿ ಸಾಮಾನ್ಯವಾಗಿ ಪೋಸ್ಟರ್ ಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ನಾವು ವಿಡಿಯೋ ತುಣುಕುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಟೀಸರ್ ನಿರ್ಮಾಣ ಮಾಡಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ದೀಪಕ್ ಅರಸ್.
ಜೂನ್ 12ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಜೂನ್ 11 ರಂದು ಸಂಜೆ 5 ಗಂಟೆಗೆ ಇನ್ ಸ್ಟಾಗ್ರಾಂ ಮೂಲಕ ಲೈವ್ ನಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಹಾಗೂ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಬಹತೇಕ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ.
ಲಾಕ್ ಡೌನ್ ಮುಗಿದ್ದು, ಚಿತ್ರೀಕರಣಕ್ಕೆ ಅನುಮತಿ ದೊರಕಿದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.
ರಂಗಾಯಣ ರಘು, ಲವ್ ಮಾಕ್ಟೇಲ್ ಅಭಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕಬೀರ್ ರಫಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿರುವ ‘ಶುಗರ್ ಫ್ಯಾಕ್ಟರಿ’ ಗೆ ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ ಈಗ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬೆಂಗಳೂರು ಮಾತ್ರವಲ್ಲ, ತಮ್ಮ ತವರು ಜಿಲ್ಲೆ ಕೊಡಗಿಗೂ ಹೋಗಿ ಅಲ್ಲಿಯೂ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರ ಜತೆಗೆ ಸೋಂಕಿತರಿಗೂ ನೆರವಾಗಿ ಮಾನವೀಯತೆ ಮೆರೆದಿದ್ದು ಎಲ್ಲರಿಗೂ ಗೊತ್ತು. ಆದರೆ ಈಗ ಸೋಷಲ್ ಮೀಡಿಯಾದಲ್ಲಿ ಇನ್ನೊಂದು ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದು ಮಾತ್ರವಲ್ಲ, ನೆಟ್ಟಿಗರಿಂದ ತೀವ್ರ ಮುಜುಗರಕ್ಕೆ ಒಳಗಾಗುವಂತಹ ಟೀಕೆಗಳನ್ನು ಎದುರಿಸಿದ್ದಾರೆ.
ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಖೇಲ್ ಪ್ಲೇ ರಮ್ಮಿ ಹೆಸರಿನ ಆಟ ! ಹೌದು, ಆನ್ಲೈನ್ ನಲ್ಲೀಗ ಖೇಲ್ ಪ್ಲೇ ರಮ್ಮಿ ಹೆಸರಿನ ವಿಶಿಷ್ಟವಾದ ಆಟ ಶುರುವಾಗಿದೆ. ಇದರ ಜಾಹೀರಾತಿನಲ್ಲಿ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಅಲ್ಲಿ ನಗು ನಗುತಾ ಬರುವ ಅವರು, ಖೇಲ್ ಪ್ಲೇ ರಮ್ಮಿ ಆಡುವ ವಿಧಾನವನ್ನು ತಿಳಿಸುತ್ತಾರೆ. ಬಿಡುವಿನ ವೇಳೆಯನ್ನು ಮಜವಾಗಿ ಕಳೆಯಲು ಇದು ತುಂಬಾ ಇಷ್ಟವಾಗುತ್ತೆ ಎನ್ನುತ್ತಾರೆ. ಹಾಗೆಯೇ ಕೊನೆಯಲ್ಲಿ ಮತ್ತ್ಯಾಕೆ ತಡ, ಬಿಂದಾಸ್ ಆಗಿ ಆಡಿ ಎನ್ನುವ ಮಾತುಗಳೊಂದಿಗೆ ರಮ್ಮಿ ಆಟಕ್ಕೆ ಕರೆ ನೀಡುತ್ತಾರೆ. ಇದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಿನಿಮಾ ರಂಗದಲ್ಲಿರುವವರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಬ್ಬ ಸೆಲಿಬ್ರಿಟಿಯಾಗಿ ನೀವು ಮನೆ ಹಾಳಾಗೋ ಐಡಿಯಾ ಕೊಡಬೇಡಿ ಅಂತ ಕಿವಿ ಮಾತು ಹೇಳಿದ್ದಾರೆ. ಹಾಗೆಯೇ ರಾಘು ಜಿ ಮಹೇಶ್ ಎನ್ನುವವರು, ಜನಗಳನ್ನು ಜೂಜಾಟ ಆಡಿ ಅಂತ ಹೇಳೋಕ್ಕೆ ನಿಮಗೆ ನಾಚಿಕೆ ಆಗಲ್ವಾ ಅಂತ ಖಾರವಾಗಿ ಪ್ರಶ್ನಿಸಿದ್ದಾರೆ. ಸೈನಿಕರಿಗೆ ಹೆಸರಾದ ಕೊಡಗಿನಲ್ಲಿ ಹುಟ್ಟಿ ಬೆಳೆದ ನೀವು, ಹಾಕಿ, ಫುಟ್ಬಾಲ್ ಆಡಿ ಅಂತ ಕ್ರೀಡೆಗಳಿಗೆ ಉತ್ತೇಜನ ನೀಡುವುದನ್ನು ಬಿಟ್ಟು, ಸೋಂಬೇರಿಗಳು, ಮೈಗಳ್ಳರು ಜೂಜಾಡುವ ಆಟವನ್ನು ಆಡಿಸುವ ಕಂಪನಿ ಪರವಾಗಿ ಜಾಹೀರಾತು ಕೊಡುವುದು ನಿಮಗೆ ಶೋಭೆ ತರುವ ಕೆಲಸವಲ್ಲ ಎಂದು ಪಿರಿಯಾಪಟ್ಟಣದ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೆ ಲೆಕ್ಕವಿಲ್ಲದಷ್ಟು ಟೀಕೆಗಳು ಸೋಶಿಯಲ್ ಮೀಡಿಯಾದಲ್ಲಿ ಬಂದಿವೆ. ಸದ್ಯಕ್ಕೆ ಇವಾವುದಕ್ಕೂ ನಟಿ ಹರ್ಷಿಕಾ ಸದ್ಯ ಪ್ರತಿಕ್ರಿಯೆ ನೀಡಿಲ್ಲ.
ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅವಮಾನ ಆಗುತ್ತಲೇ ಇದೆ. ಈಗ ಗೂಗಲ್ ನಂತಹ ದೈತ್ಯ ತಂತ್ರಜ್ಞಾನ ಸಂಸ್ಥೆಯಿಂದಲೇ ಕನ್ನಡಕ್ಕೆ ಅವಮಾನ ಆಗಿದೆ. ಗೂಗಲ್ನ ಸರ್ಚ್ ಆಪ್ಷನ್ ನಲ್ಲಿ ಇಂಡಿಯಾದ ಆಗ್ಲಿಯೇಸ್ಟ್ ಭಾಷೆ ಯಾವುದು ಅಂತ ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಇಲ್ಲಿ ದೊಡ್ಡ ಅವಮಾನ ಆಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅನಾವಶ್ಯಕವಾಗಿ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಗೂಗಲ್ ಯತ್ನದ ವಿರುದ್ಧ ಈಗಾಗಲೇ ಹಲವರು ಧ್ವನಿ ಎತ್ತಿದ್ದಾರೆ. ಗೂಗಲ್ನಂತಹ ದೊಡ್ಡ ಸಂಸ್ಥೆ ಕನ್ನಡ ಭಾಷೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ನಟ ಸುದೀಪ್ ಅವರೇ ಈ ಗೂಗಲ್ ಕೃತ್ಯವನ್ನು ಖಂಡಿಸಿದ್ದಾರೆ. ಕನ್ನಡದಂತಹ ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಇದು ದೊಡ್ಡ ಅವಮಾನ ಮಾಡಿದವರಿಗೆ ಅದರ ಮಹತ್ವ ಗೊತ್ತಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿದ್ದಾರೆ. ನಟಿ ರಾಗಿಣಿ ಕೂಡ ಗೂಗಲ್ ಕೃತ್ಯಕ್ಕೆ ಆಕ್ಷೇಪ ಎತ್ತಿದ್ದಾರೆ. ಇವರ ಉದ್ದೇಶ ಏನಿರಬಹುದೋ ಗೊತ್ತಿಲ್ಲ, ಅದರೆ, ಕನ್ನಡಕ್ಕೆ ಇದು ಅವಮಾನ ಮಾಡಿದೆ. ಕನ್ನಡ ಅಂದ್ರೆ ತುಂಬಾನೆ ಸುಂದರವಾದ ಭಾಷೆ. ಇದರ ಮಹತ್ವ ತಿಳಿಯಬೇಕಾದರೆ, ಅವರು ಕನ್ನಡ ಕಲಿಯಬೇಕು ಅಂತ ಕಿಡಿಗೇಡಿಗಳ ಕಿವಿ ಹಿಂಡಿದ್ದಾರೆ.
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ, “ನಾವು ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಗೂಗಲ್ನಲ್ಲಿ ಕನ್ನಡವನ್ನು ಅವಮಾನಿಸಿದ್ದನ್ನು ಖಂಡಿಸಿ ಲೀಗಲ್ ನೋಟಿಸ್ ಕಳುಹಿಸಿದ್ದೇವೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಇನ್ನೊಬ್ಬರನ್ನು ಅಪಮಾನ ಮಾಡುವುದನ್ನು ಸಹಿಸಲಾಗದು. ಇದೊಂದು ಬಗೆಯ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟವಾಗಿದೆ” ಎಂದಿದ್ದಾರೆ.
ಹಾಗೆಯೇ ಸೋಷಲ್ ಮೀಡಿಯಾದಲ್ಲಿ ಕನ್ನಡದ ಹೋರಾಟಗಾರರು, ಕನ್ನಡ ಪ್ರೇಮಿಗಳು ಗೂಗಲ್ ವಿರುದ್ಧ ಕಿಡಿ ಕಾರಿದ್ದಾರೆ.