ಚಲನಚಿತ್ರೋತ್ಸವಕ್ಕೆ ಮೀಸಲಿಟ್ಟ ಹಣವನ್ನು ಚಿತ್ರೋದ್ಯಮದ ಕಾರ್ಮಿಕರಿಗೆ ಕೊಡಿ : ನಿರ್ದೇಶಕ ಮಂಸೋರೆ ಮನವಿ

ಕೋವಿಡ್‌ನಿಂದಾಗಿ ಇಡೀ ರಾಜ್ಯ ಹಾಗೂ ದೇಶ ತತ್ತರಿಸಿದೆ. ಚಿತ್ರೋದ್ಯಮ ಕೂಡ ಅದರಿಂದ ಹೊರತಾಗಿಲ್ಲ. ಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಆರ್ಥಿಕ ಭದ್ರತೆ ಇಲ್ಲದೆ ನರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಸಂಪೂರ್ಣವಾಗಿ ರದ್ದುಗೂಳಿಸಿ, ಅದಕ್ಕಾಗಿ ಮೀಸಲಿಟ್ಟ ಹಣವನ್ನು ಚಿತ್ರರಂಗದ ಎಲ್ಲಾ ಕಾರ್ಮಿಕರಿಗೆ ನೀಡುವಂತೆ ಯುವ ನಿರ್ದೇಶಕ ಮಂಸೋರೆ, ಅಕಾಡೆಮಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.

ಚಿತ್ರರಂಗ ಸಂಕಷ್ಟದಲ್ಲಿರುವ ಸಂದರ್ಭದಲ್ಲೆ ಚಿತ್ರರಂಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಸಂದರ್ಭದಲ್ಲಿ ಸರ್ಕಾರದ ವಿಶೇಷ ಪ್ಯಾಕೇಜ್‌ಗಾಗಿ ಕಾಯುವುದರಲ್ಲಿ ಅರ್ಥವೇ ಇಲ್ಲ. ಹಾಗಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮೀಸಲಿಟ್ಟ ಹಣವನ್ನು ಚಿತ್ರೋದ್ಯಮದ ಕಾರ್ಮಿಕರಿಗೆ ವಿತರಿಸುವುದು ಹೆಚ್ಚು ಅರ್ಥಪೂರ್ಣ ಎನ್ನುವುದು ನನ್ನ ಭಾವನೆ ಅಂತ ಮಂಸೋರೆ ಹೇಳಿದ್ದಾರೆ.

ಕೋವಿಡ್ ಕಾರಣದಿಂದ ಈಗಾಗಲೇ ಸಾಕಷ್ಟು ಜನ ತೀರಿಕೊಂಡಿದ್ದಾರೆ. ಮುಂದೆ ಜೀವನ ಹೇಗೋ ಎಂದು ನೂರಾರು ಕುಟುಂಬಗಳು ಕಂಗಾಲಾಗಿವೆ. ಇಂತಹ ಸಂದರ್ಭಗದಲ್ಲಿ ಚಿತ್ರೋತ್ಸವಕ್ಕಿಂತ ಜೀವಗಳನ್ನು ಕಾಪಾಡಿಕೊಳ್ಳುವುದು ಆದ್ಯತೆಯಾಗಲಿ ಎಂಬುದು ನನ್ನ ಕೋರಿಕೆ.ಈ ಬಾರಿಯ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಆಕ್ಟ್-1978 ಸಿನೆಮಾವನ್ನು ಕೂಡ ಸ್ಪರ್ಧೆಗೆ ಕಳುಹಿಸಲಾಗಿದೆ.

ಹಾಗಿದ್ದರೂ ಕೂಡ ನನಗೆ ಚಿತ್ರೋತ್ಸವ ರದ್ದಾಗುವುದರ ಬಗ್ಗೆ ಯಾವ ಬೇಸರವೂ ಇಲ್ಲಾ. ಈಗ ಎಲ್ಲದಕ್ಕಿಂತ ಜೀವ-ಜೀವನ ಮುಖ್ಯ ಎಂಬುದಾಗಿ ಅವರು ವಿನಂತಿಸಿಕೊಂಡಿದ್ದಾರೆ.

Related Posts

error: Content is protected !!