ಆಡಿಯೋಬುಕ್‌ ನಲ್ಲಿ ಗಿರೀಶ್‌ ಕಾರ್ನಾಡ್‌ ಪುಸ್ತಕ : ಆಡಾಡುತ್ತಾ ಆಯುಷ್ಯʼ ಕ್ಕೆ ನಟ ಸಂಚಾರಿ ವಿಜಯ್‌ ಧ್ವನಿ

ಜ್ಞಾನಪೀಠ ಪುರಸ್ಕೃತ ಸಾಹಿತಿ, ನಾಟಕಕಾರ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ಜೀವನ ಚರಿತ್ರೆ ʼ ಆಡಾಡುತಾ ಆಯುಷ್ಯ ʼ ಈಗ ಆಡಿಯೋ ರೂಪದಲ್ಲಿ ಹೊರ ಬಂದಿದೆ. ವಿಶೇಷ ಅಂದರೆ, ಈ ಪುಸ್ತಕಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧ್ವನಿ ನೀಡಿದ್ದಾರೆ. ಸ್ಟೋರಿ ಟೆಲ್‌ ಸಂಸ್ಥೆ ಈ ಪುಸ್ತಕವನ್ನು ಆಡಿಯೋ ರೂಪದಲ್ಲಿ ಹೊರ ತಂದಿದೆ. 350 ಪುಟಗಳ ಈ ಪುಸ್ತಕಕ್ಕೆ ಪ್ರೀತಿಯಿಂದ, ಕಾರ್ನಾಡ್‌ ಅವರ ಮೇಲಿನ ಅಭಿಮಾನದಿಂದ ಧ್ವನಿ ನೀಡಿರುವ ನಟ ಸಂಚಾರಿ ವಿಜಯ್‌, ಪುಸ್ತಕ ಓದುವಾಗ ಆದ ಅನುಭವ, ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಗಳ ಜತೆಗೆ ತಮಗೆ ಪರಿಚಯವಾದ ಹಲವು ಹೊಸ ಪದಗಳ ಜತೆಗೆ ಇತ್ಯಾದಿ ಮಜಲಗಳ ಕುರಿತು ಇಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಓವರ್‌ ಟು ಸಂಚಾರಿ ವಿಜಯ್….

ʼ 350 ಪುಟಗಳಿರುವ ಈ ಪುಸ್ತಕವನ್ನು ಓದುವಾಗ ಹಲವಾರು ಸವಾಲುಗಳು ಎದುರಾದವು. ಲೇಖಕರಾದ ಗಿರೀಶ್‌ ಕಾರ್ನಾಡ್‌ ಅವರು ಕೆಲವೆಡೆ ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಿಸಿದರೆ ಇನ್ನಷ್ಟು ಕಡೆ ಉತ್ತರ ಕರ್ನಾಟಕ, ನಂತರ ಬೆಂಗಳೂರು, ಮತ್ತೊಂದೆಡೆ ಮರಾಠಿ ಮಿಶ್ರಿತ ಕನ್ನಡ ಹೀಗೆ ನನಗೂ ಹಲವಾರು ಹೊಸ ಪದಗಳ ಪರಿಚಯ ಮಾಡಿಕೊಡುತ್ತಾ ಅವರು ಅನುಭವಿಸಿದ ಹಲವಾರು ಮಜಲುಗಳನ್ನು ಹಂಚುತ್ತಾ ಇಡೀ ಪುಸ್ತಕ ಒಂದು ಹೊಸ ಲೋಕವನ್ನೇ ತೆರೆದಷ್ಟು ಅನುಭವವನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಇನ್ನು ಅವರ ಬಾಲ್ಯದಲ್ಲಿ ಮಹಾರಾಷ್ಟ್ರದಿಂದ ಧಾರವಾಡಕ್ಕೆ ವಲಸೆ ಬಂದಿದ್ದು, ಅಲ್ಲಿ ಸಾರಸ್ವತಪುರದಲ್ಲಿ ನಿಂತು ಅಲ್ಲಿಂದ ಮುಂದೆ ಶಿರಸಿಗೆ ಹೋಗಿ ಅವರ ತಾಯಿ ‘ಕುಟ್ಟಾಬಾಯಿಯ’ ಜೀವನದ ಏಳು ಬೀಳುಗಳ ಅನಾವರಣ.

ಗಂಡನನ್ನು ಕಳೆದುಕೊಂಡು 11 ವರ್ಷದ ಬಾಲಚಂದ್ರ ಎನ್ನುವ ಮಗನನ್ನು ಕಟ್ಟಿಕೊಂಡು ಆಕೆ ಧೈರ್ಯದಿಂದ ಸಮಾಜವನ್ನು ಎದುರಿಸಿದ ಪ್ರಯಾಣ. ನಂತರ ಅತೀ ಚಿಕ್ಕ ವಯಸ್ಸಿಗೆ ಇಂಗ್ಲೆಂಡ್ ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿ ಅಲ್ಲಿಯ ನಡೆಯನ್ನು ಹರವಿದ್ದು. ನಂತರ ಎನ್‌ಎಫ್‌ಎಗೆ ನಿದೇಶಕನಾಗಿದ್ದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳಾದಂತಹ ಹಲವಾರು ಪ್ರತಿಭಾವಂತ ನಟರು ಬಾಲಿವುಡ್ ನಲ್ಲಿ ಸ್ಟಾರ್ ಗಳಾಗಿ ಮಿಂಚಿದ್ದು. ತಮ್ಮ ಕೆಲವು ನಿಲುವುಗಳಿಂದ ಅನೇಕಾನೇಕ ಬಲವುಳ್ಳವರನ್ನು ಎದುರು ಹಾಕಿಕೊಂಡಿದ್ದು. ನಂತರ ಮದ್ರಾಸಿಗೆ ಕೆಲಸವನ್ನರಸಿ ಹೋಗಿದ್ದು ಅಲ್ಲಿಂದ ಕನ್ನಡ ಸಾಹಿತ್ಯ, ನಾಟಕ, ಸಿನಿಮಾ ಹೇಗೆ ಹತ್ತು ಹಲವಾರು ಕ್ಷೇತ್ರಗಳಿಗೆ ತೆರೆದುಕೊಂಡಿದ್ದು, ಒಂದು ರೋಮಾಂಚನ ಪ್ರಯಾಣ ಅನ್ನಿಸಿದ್ದು ಸುಳ್ಳಲ್ಲ. ಇದಿಷ್ಟನ್ನು ಹಿಡಿದಿಡುವ ಪ್ರಯತ್ನ ಇಲ್ಲಿದೆ ನೀವು ಬಿಡುವಾದಾಗ ಕೇಳಿ ನಿಮ್ಮ ಅನಿಸಿಕೆಗಳನ್ನು ತಪ್ಪುಗಳನ್ನು ತಿದ್ದಿ ನನಗೆ ತಿಳಿಸಿ. ಒಂದೇ ಸಮನೆ 350 ಪುಟಗಳನ್ನು ಓದಿದ್ದರಿಂದ ಒಂದಷ್ಟು ತಪ್ಪು ಒಪ್ಪಗಳು ನಿಮ್ಮ ಗ್ರಹಿಕೆಗೆ ಬಂದೆ ಬರುತ್ತದೆ. ಅದನ್ನು ಬದಿಗಿರಿಸಿ ಕೇಳಿ ಎಂದು ನನ್ನ ಸವಿನಯ ಪ್ರಾರ್ಥನೆ.

ಇದಿಷ್ಟು ನಟ ಸಂಚಾರಿ ವಿಜಯ್‌ ಮಾತು. ಇನ್ನು ಪುಸ್ತಕದ ಆಡಿಯೋ ರೂಪಕ್ಕೆ ಧ್ವನಿ ನೀಡಲು ಅವರಿಗೆ ಅವಕಾಶ ಸಿಕ್ಕಿದ್ದೇ ಆಕಸ್ಮಿಕವಂತೆ. ಗೆಳೆಯನ ಮೂಲಕ ಈ ಅವಕಾಶ ಬಂತು. ಮೇಲಾಗಿ ಕಾರ್ನಾಡ್‌ ಅವರ ಬಗ್ಗೆಯೂ ನಂಗೆ ದೊಡ್ಡ ಕುತೂಹಲ ಇತ್ತು. ಆಯ್ತು ಓದ್ತೀನಿ ಅಂತ ಒಪ್ಪಿಕೊಂಡ ನಂತರ ಓದುವುದು ಎಂತಹ ಸವಾಲಿನ ಕೆಲಸ ಅಂತ ಗೊತ್ತಾಯಿತು ಎನ್ನುವ ನಟ ಸಂಚಾರಿ ವಿಜಯ್‌, 350 ಪುಟಗಳ ಈ ಪುಸ್ತಕವನ್ನು ಓದಿ ಮುಗಿಸಲು ಒಂದು ತಿಂಗಳು ತೆಗೆದುಕೊಂಡ್ರಂತೆ.ʼ ಇದಿಷ್ಟು ಸಮಯವನ್ನು ನಾನು ತೆಗೆದುಕೊಡಿದ್ದಕ್ಕೆ ಕಾರಣ ಎಲ್ಲೂ ಪದ ದೋಷ ಆಗಿದಿರಲಿ ಅಂತ. ಹಾಗೆ ಓದುತ್ತಾ ನನಗೆ ದೊಡ್ಡ ಅನುಭವವೇ ಆಯಿತು.

ನಾನು ಅಭಿನಯಿಸಿದ ಮೊದಲ ನಾಟಕದಲ್ಲಿ ಆದ ಅನುಭವವೇ ಇಲ್ಲಿಯೂ ಆಯಿತು. ಕಾರ್ನಾಡ್‌ ಅವರನ್ನು ಒಂದಷ್ಟು ತಿಳಿದುಕೊಳ್ಳುವುದಕ್ಕೂ ಇದು ಕಾರಣವಾಯಿತು. ಇಂತಹ ಅವಕಾಶಗಳು ಸಿಕ್ಕರೆ ನಾನೆಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ನಟ ಸಂಚಾರಿ ವಿಜಯ್.‌

Related Posts

error: Content is protected !!