ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಸಿನಿಮಾ ಹಾಗೂ ಸೀರಿಯಲ್ ಕಲಾವಿದರೆಲ್ಲ ಕೆಲಸ ಇಲ್ಲದೆ ಮನೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಡ ಕಲಾವಿದರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಬೇಕೆಂಬ ಚಿತ್ರೋದ್ಯಮದವರ ಮನವಿಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.
ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3 ಸಾವಿರ ಘೋಷಣೆ ಮಾಡಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್ಸ್, ಬೀದಿ ಬದಿ ವ್ಯಾಪಾರಿಗಳು, ಕ್ಷೌರಿಕ ಸಮಾಜದವರು, ದೋಬಿಗಳು, ಹಣ್ಣು ಹಾಗೂ ಹೂವು ಬೆಳೆಗಾರರು, ರೈತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರಿಗೆ ರಾಜ್ಯ ಸರ್ಕಾರ ಒಟ್ಟು 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ವಿಶೇಷ ಪ್ಯಾಕೇಜ್ ವಿವರ ಬಹಿರಂಗ ಪಡಿಸಿದರು. ʼ ಸರ್ಕಾರ ಘೋಷಣೆ ಮಾಡಿದ ಸುಮಾರು 1250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನಿಂದಾಗಿ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆʼ ಅಂದರು.
ಸರ್ಕಾರದ ಈ ಪ್ಯಾಕೇಜ್ ನಲ್ಲಿ ಸಿನಿಮಾ ಹಾಗೂ ಸೀರಿಯಲ್ ಕಲಾವಿದರಿಗೂ ಪರಿಹಾರ ಘೋಷಣೆ ಆಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮದ ಸಾಕಷ್ಟು ಮಂದಿ ಕಾರ್ಮಿಕರು ಕೆಲಸ ಇಲ್ಲದ ಕುಳಿತಿದ್ದಾರೆ. ಕೆಲಸ ಇಲ್ಲದ ಕಾರಣಕ್ಕೆ ಅವರಿಗೆ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಅವರ ನೆರವಿಗೆ ಬರಬೇಕು. ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಆಗುವ ಹಾಗೆ ಪರಿಹಾರ ಘೋಷಿಸಬೇಕೆಂದು ನಿರ್ಮಾಪಕ ಬಾ.ಮ. ಹರೀಶ್ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದರು.
ಸಿಎಂ ಭೇಟಿ ಮಾಡಿದ ಭಾ.ಮ ಹರೀಶ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಭಾ.ಮ ಹರೀಶ್ ರವರು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿರುವ ಸಮಸ್ತ ಕನ್ನಡ ಚಿತ್ರೋದ್ಯಮದ ಸದಸ್ಯರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜನ್ನು ಘೋಷಿಸಿ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ನೆರವು ನೀಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿತ್ರನಟರಾದ ಜೆ.ಕೆ ಹಾಗೂ ನಿರ್ಮಾಪಕ, ನಿರ್ದೇಶಕರಾದ ಆಸ್ಕರ್ ಕೃಷ್ಣ ಉಪಸ್ಥಿತರಿದ್ದರು.