ನಾವಷ್ಟೇ ಚೆನ್ನಾಗಿದ್ದರೆ ಸಾಕಾ! ಎಲ್ಲರಿಗೂ ಸಿಗದ ಲಸಿಕೆ ನಮಗೆ ಬೇಕಿತ್ತಾ? ಬೇಸರದ ಪ್ರಶ್ನೆ ಹೊರ ಹಾಕಿದ್ರು ನಟ ಶ್ರೀಮುರಳಿ

“ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ನಾವು ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿದ್ದೇವೆ. ಆದರೆ, ಬಹುತೇಕ ಜನರಿಗೆ ವ್ಯಾಕ್ಸಿನೇಷನ್‌ ಸಿಕ್ತಾನೇ ಇಲ್ಲ. ನಾವು ತಗೊಂಡಿದ್ದೇವೆ ಅಂತ ನೆಮ್ಮದಿಯಿಂದಿರಬೇಕಾ, ಖುಷಿಪಡಬೇಕಾ ಅಥವಾ ಬೇರೆಯವರಿಗೆ ಸಿಕ್ಕಿಲ್ಲ ಅಂತ ದುಃಖ ಪಡಬೇಕಾ…?

  • ಇದು ನಟ ಶ್ರೀಮುರಳಿ ಅವರ ಬೇಸರದ ಪ್ರಶ್ನೆ. ಇಷ್ಟಕ್ಕೂ ಶ್ರೀಮುರಳಿ ಅವರು ಹೀಗೆ ಒಮ್ಮೆಲೆ ಬೇಸರ ಹೊರ ಹಾಕಲು ಕಾರಣ, ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಜನರಿಗೆ ಸಿಗದ ಲಸಿಕೆ. ಹೌದು, ಶ್ರೀಮುರಳಿ ಅವರ ಜೊತೆ ಆರೋಗ್ಯ ಕುರಿತು ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ, ವ್ಯಾಕ್ಸಿನೇಷನ್‌ ವಿಚಾರ ತೂರಿಬಂದಾಗ, ಶ್ರೀಮುರಳಿ ಅವರು ಬೇಸರದಲ್ಲೇ ಒಂದಷ್ಟು ಮಾತುಗಳನ್ನು ಹೊರಹಾಕಿದ ಪರಿ ಇದು. ಇಡೀ ಜಗತ್ತೇ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದೆ. ಕಣ್ಣ ಮುಂದೆಯೇ ಜೀವಗಳ ಹಾನಿಯಾಗುತ್ತಿದೆ. ಸರ್ಕಾರ ಅಗತ್ಯ ಕ್ರಮ ಕೈಗೊಂಡರೂ, ಹೆಮ್ಮಾರಿ ಕೊರೊನಾ ತನ್ನ ಅರ್ಭಟ ಮುಂದುವರೆಸಿದೆ. ಈ ನಿಟ್ಟಿನಲ್ಲಿ ನಟ ಶ್ರೀಮುರಳಿ ಅವರು, ಎಲ್ಲರಿಗೂ ಆದಷ್ಟು ಬೇಗ ವ್ಯಾಕ್ಸಿನ್‌ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತುಂಬಾ ವಿನಮ್ರದಿಂದ ಮನವಿ ಮಾಡಿಕೊಂಡಿದ್ದಾರೆ. ವ್ಯಾಕ್ಸಿನೇಷನ್‌ ಬಗ್ಗೆ ನಟ ಶ್ರೀಮುರಳಿ “ಸಿನಿ ಲಹರಿ” ಜೊತೆ ಹೇಳಿದ್ದಿಷ್ಟು…

ಜನರ ಪ್ರಶ್ನೆಗಳೇ ಕಾಡುತ್ತಿವೆ…
” ನನ್ನ ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ನಾವು ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿದ್ದೇವೆ. ನಾವು ರಿಜಿಸ್ಟ್ರೇಷನ್‌ ಮಾಡಿಸಿಕೊಂಡ್ವಿ. ಸಿಕ್ತು ಹಾಕಿಸಿಕೊಂಡ್ವಿ. ಆದರೆ, ಬಹುತೇಕ ಜನರಿಗೆ ವ್ಯಾಕ್ಸಿನೇಷನ್‌ ಸಿಕ್ತಾನೇ ಇಲ್ಲ. ಈಗ ನಾವು ವ್ಯಾಕ್ಸಿನ್ ತಗೊಂಡಿದ್ದೇವೆ ಅಂತ. ನೆಮ್ಮದಿಯಿಂದಿರಬೇಕಾ, ಖುಷಿಪಡಬೇಕಾ ಅಥವಾ ಬೇರೆಯವರಿಗೆ ಸಿಕ್ಕಿಲ್ಲ ಅಂತ ದುಃಖ ಪಡಬೇಕಾ ಗೊತ್ತಾಗುತ್ತಿಲ್ಲ. ಜಾಗೃತಿ ಮೂಡಿಸಲು ಲಸಿಕೆಯನ್ನು ನೀವೂ ಹಾಕಿಸಿಕೊಳ್ಳಿ ಎಂಬ ಪೋಸ್ಟ್‌ ಮಾಡಿದರೆ, ಹಲವು ಪ್ರಶ್ನೆಗಳು ಎದುರಾಗುತ್ತಿವೆ. ನಿಮಗೇನೋ ಸಿಕ್ಕಿದೆ, ನಮಗಿನ್ನೂ ಸಿಕ್ಕಿಲ್ಲ. ಸರ್ಕಾರ ಲಸಿಕೆ ವ್ಯವಸ್ಥೆ ಮಾಡಿಲ್ಲ. ನಾವೂ ಕಾಯುತ್ತಲೇ ಇದ್ದೇವೆ ಎಂಬ ಸಂದೇಶಗಳು ಬರುತ್ತಿವೆ. ಇದರಿಂದ ನಿಜಕ್ಕೂ ಬೇಸರವಾಗಿದೆ. ನಾವಷ್ಟೇ ಚೆನ್ನಾಗಿದ್ದರೆ ಸಾಕಾ? ಎಲ್ಲರಿಗೂ ಸಿಗದ ಲಸಿಕೆ ನಮಗೆ ಬೇಕಿತ್ತಾ ಎಂಬ ಪ್ರಶ್ನೆ ನನ್ನನ್ನೇ ಕಾಡುತ್ತಿದೆ. ಎಲ್ಲರಿಗೂ ಸಿಗುತ್ತೆ ಎಂಬ ಖುಷಿಯಲ್ಲೇ ನಾವೂ ಹಾಕಿಸಿಕೊಂಡ್ವಿ. ಹೀಗೆಲ್ಲಾ ಆಗುತ್ತೆ ಎಂಬುದು ಗೊತ್ತಿದ್ದರೆ, ಎಲ್ಲರಿಗೂ ಸಿಗುವ ಸಮಯದಲ್ಲೇ ನಮಗೂ ಸಿಗಲಿ ಅಂತ ಸುಮ್ಮನಾಗುತ್ತಿದ್ದೆವು. ಜನರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ.

ಇಲ್ಲಿ ಯಾರನ್ನೂ ದೂರುತ್ತಿಲ್ಲ…
ಜನರು ನೋವಲ್ಲಿದ್ದಾರೆ. ಲಸಿಕೆಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಸಿಕ್ಕರೆ, ಬಹಳಷ್ಟು ಮಂದಿಗೆ ಸಿಕ್ಕಿಲ್ಲ. ಹೀಗಾದರೆ, ಅವರ ಮನಸ್ಥಿತಿ ಹೇಗಿರಬೇಡ, ಸಹಜವಾಗಿಯೇ ಅವರು ಬೇಸರಗೊಳ್ಳುತ್ತಿದ್ದಾರೆ. ಇಲ್ಲಿ ಯಾರ ಬಗ್ಗೆಯೂ ದೂರುತ್ತಿಲ್ಲ. ವ್ಯವಸ್ಥೆಯಲ್ಲಿ ಲೋಪ ಎಲ್ಲಾಗಿದೆ ಅನ್ನೋದನ್ನು ಕಂಡುಕೊಂಡು ಸರಿಪಡಿಸುವಂತಾಗಬೇಕಿದೆ. ಇಲ್ಲಿ ಯಾರನ್ನು ಪ್ರಶ್ನೆ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೇವೆ. ಸರ್ಕಾರ ಕೊರೊನಾ ವಿಷಯದಲ್ಲಿ ಸಾಕಷ್ಟು ಶ್ರಮಿಸಿದೆ. ಅಗತ್ಯ ಕ್ರಮ ಕೈಗೊಂಡಿದೆ.

ಆ ವಿಷಯದಲ್ಲಿ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಆದರೂ, ಲಸಿಕೆ ಅನ್ನೋದು ಮುಖ್ಯವಾದ ಅಂಶ. ಆದರೆ, ಲಸಿಕೆ ಸರಿಯಾಗಿ ಸಿಗುತ್ತಿಲ್ಲ ಎಂಬ ಕೂಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲೆಲ್ಲಿ ಲಸಿಕೆ ಸಮಸ್ಯೆ ಎದುರಾಗಿದೆ, ಯಾಕಾಗಿದೆ ಎಂಬುದರ ಬಗ್ಗೆ ಅರಿತು, ಕ್ರಮ ಕೈಗೊಳ್ಳಬೇಕು. ಕೂಡಲೇ ಎಲ್ಲರಿಗೂ ವ್ಯಾಕ್ಸಿನೇಷನ್‌ ಸಿಗುವಂತಾಗಬೇಕು ಅನ್ನೋದು ನನ್ನ ಕಳಕಳಿಯ ಮನವಿ.

ಎಲ್ಲರಿಗೂ ಲಸಿಕೆ ಸಿಗುವಂತಾಗಲಿ
ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ನಮಗೇಕೆ? ನಮ್ಮಲ್ಲಿ ಜನಸಂಖ್ಯೆ ಹೆಚ್ಚಿದೆ. ಮೊದಲು ಇತ್ತ ಗಮನಿಸಬೇಕು. ಕೆಲವರಿಗಷ್ಟೇ ಲಸಿಕೆ ಸಿಕ್ಕರೆ ಹೇಗೆ? ಬೇರೆಯವರದ್ದೂ ಜೀವವಲ್ಲವೇ? ನಮ್ಮ ಸುತ್ತಮುತ್ತ ಇರೋರಿಗೆ ಸಿಗುತ್ತಿಲ್ಲ. ಎಲ್ಲರಿಗೂ ಬದುಕುವ ಹಕ್ಕಿದೆ ಅಂದಮೇಲೆ, ಎಲ್ಲರನ್ನೂ ಸಮನಾಗಿ ಕಾಣಬೇಕು. ಎಲ್ಲರಿಗೂ ಲಸಿಕೆ ಹಾಕುವ ವ್ಯವಸ್ಥೆ ಆಗಬೇಕು. ಕೆಲವರಷ್ಟೇ ಲಸಿಕೆ ಪಡೆದಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಬಾರದು. ಸರ್ಕಾರದ ಬಗ್ಗೆಯೂ ತಪ್ಪು ಕಲ್ಪನೆ ಬರಬಾರದು. ನಾವು ಜಾಗೃತಿಗಾಗಿ ಲಸಿಕೆ ಹಾಕಿಸಿಕೊಳ್ಳಿ ಅಂದಾಗ, ನಮಗಿನ್ನೂ ಸಿಕ್ಕೇ ಇಲ್ಲ ಎಂಬ ಮಾತುಗಳನ್ನುಕೇಳಿದಾಗ ನಿಜಕ್ಕೂ ಬೇಸರವಾಗುತ್ತದೆ.

ಇದು ಖುಷಿ ಪಡೋ ಸಮಯವಲ್ಲ…
ಸರ್ಕಾರ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ. ಲಸಿಕೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಶ್ರಮ ಹಾಕಿದರೆ, ಎಲ್ಲರಿಗೂ ಲಸಿಕೆ ಕೊಡಿಸಲು ಸಾಧ್ಯವಿದೆ. ಈ ಕೂಡಲೇ ಸರ್ಕಾರ, ಒಂದು ಪ್ಲಾನಿಂಗ್‌ ಮಾಡಿಕೊಂಡು, ಒಂದೊಂದು ಕಡೆ ಇಷ್ಟಿಷ್ಟು ಮಂದಿ ಇಂತಹ ಕೆಲಸ ಮಾಡಬೇಕು, ಹೀಗೇ ಮಾಡಬೇಕು ಅಂತ ಯೋಜನೆ ರೂಪಿಸಿ, ಲಸಿಕೆ ಅಗತ್ಯತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಹೆಚ್ಚಿನ ಲಸಿಕೆ ತರಿಸಿ, ರಾಜ್ಯದ ಜನತೆಗೆ ಕೊಡುವಲ್ಲಿ ಮುಂದಾಗಬೇಕು. ನಾವಷ್ಟೇ ಹಾಕಿಸಿಕೊಂಡು ಖುಷಿಪಡುವ ಸಮಯ ಇದಲ್ಲ. ತುಂಬಾ ನೋವಿನಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. ದಯವಿಟ್ಟು, ಸರ್ಕಾರ ವ್ಯಾಕ್ಸಿನೇಷನ್‌ ಕಡೆ ಗಮನಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದಿದ್ದಾರೆ ಶ್ರೀಮುರಳಿ.

  • ಅದೇನೆ ಇರಲಿ, ಕೋವಿಡ್‌ಗೆ ಈಗ ಲಸಿಕೆಯೇ ಸಂಜೀವಿನಿ. ಕೊರೊನಾ ಮುಕ್ತವಾಗಬೇಕಾದರೆ ಲಸಿಕೆ ಅನಿವಾರ್ಯ ಅಂತ ಸರ್ಕಾರವೇ ಹೇಳುತ್ತಿದೆ. ಅದೇ ಕಾರಣಕ್ಕೆ ಈಗ ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ಈಗಾಗಲೇ ಸಾಕಷ್ಟು ಸೆಲಿಬ್ರಿಟಿಗಳು ಲಸಿಕೆ ಹಾಕಿಸಿಕೊಂಡು, ಜನ ಸಾಮಾನ್ಯರು ಲಸಿಕೆ ಹಾಕಿಸಿಕೊಂಡು ಕೊರೊನಾದಿಂದ ಮುಕ್ತರಾಗಿ ಅಂತ ಹೇಳುತ್ತಿದೆ. ಸರ್ಕಾರದ ಆಶಯದಂತೆ ಜನರಿಗೆ ತುರ್ತಾಗಿ ಲಸಿಕೆ ಸಿಕಿದ್ದರೆ ಒಳ್ಳೆಯದ್ದಿತ್ತು. ಆದರೆ ಈಗ ಎಲ್ಲರಿಗೂ ಲಸಿಕೆ ಸಿಗುವುದು ಕಷ್ಟ. ಸರ್ಕಾರ ಹಂತ ಹಂತವಾಗಿ ಜನರಿಗೆ ಲಸಿಕೆ ನೀಡುತ್ತಿದೆ. ಲಭ್ಯತೆಯ ಆಧಾರದ ಮೇಲೆ ಸರ್ಕಾರ ಲಸಿಕೆ ನೀಡುವ ಕಾರ್ಯ ಮಾಡುತ್ತಿದೆ.
    ಇವತ್ತಿನ ಪರಿಸ್ಥಿತಿ ಸರಿ ಹೋಗಬೇಕಾದರೆ ಸರ್ಕಾರ ತಕ್ಷಣ ಎಲ್ಲರಿಗೂ ಏಕಕಾಲದಲ್ಲೇ ಲಸಿಕೆ ಸಿಗುವಂತೆ ಮಾಡಬೇಕು. ಆಗ ಮಾತ್ರ ಈ ಕೊರೊನಾ ಹೊಡೆದೋಡಿಸಲು ಸಾಧ್ಯ.

Related Posts

error: Content is protected !!