ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ , ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ.
ಸೆಪ್ಟೆಂಬರ್ 10 ಗಣೇಶ ಚತುರ್ಥಿಯ ಸಂಭ್ರಮ. ಆ ಶುಭದಿನದಂದು “ಶುಗರ್ ಫ್ಯಾಕ್ಟರಿ” ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್ ಟೀಸರ್ ಬರಲಿದೆ.
ಬಹದ್ದೂರ್ ಚೇತನ್ ಅವರು ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ ಬಾಬಾ ಸೆಹಗಲ್ ಧ್ವನಿಯಾಗಿದ್ದಾರೆ. ಕಫಿರ್ ರಫಿ ಸಂಗೀತ ನೀಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರೊಡನೆ ಈ ಹಾಡಿಗೆ ಸೋನಾಲ್ ಮಾಂಟೆರೊ ಹೆಜ್ಜೆ ಹಾಕಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೋವಾದಲ್ಲಿ ಈ ಹಾಡನ್ನು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಸೆರೆ ಹಿಡಿದಿದ್ದಾರೆ.
ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಿರೀಶ್ ಆರ್. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಶ್ರೀ ಕೃಷ್ಣ ಜೋರು ಸದ್ದು ಮಾಡಿದ್ದು ಗೊತ್ತೇ ಇದೆ. ಈಗ ಆ ಕೃಷ್ಣ ಪರಮಾತ್ಮಮತ್ತೆ ಸುದ್ದಿಯಲ್ಲಿದ್ದಾನೆ. ಹೌದು, ಕೃಷ್ಣ ಜನ್ಮಾಷ್ಟಮಿ ಬೆನ್ನಲ್ಲೇ “ಭಗವಾನ್ ಶ್ರೀ ಕೃಷ್ಣ ಪರಮಾತ್ಮ” ಕೂಡ ಸದ್ದು ಮಾಡುತ್ತಿದ್ದಾನೆ. ಈ ಸಿನಿಮಾ ಈಗ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ ಮುಗಿಸಿದೆ ಅನ್ನೋದೇ ಈ ಹೊತ್ತಿನ ಸುದ್ದಿ.
ಬಹುತೇಕ ಈ ಚಿತ್ರ ಬೆಂಗಳೂರಿನಲ್ಲೇ ಚಿತ್ರೀಕರಣವಾಗಿದೆ. ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಪೌರಾಣಿಕ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ, ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನುತ್ತಾರೆ ನಿರ್ದೇಶಕ ಅನೂಪ್ ಆಂಟೋನಿ.
ಈ ಶೀರ್ಷಿಕೆ ಯಾಕೆ ಇಡಲಾಗಿದೆ ಎಂಬುದಕ್ಕೆ ಸಿನಿಮಾ ನೋಡಿದ ಬಳಿಕ ಉತ್ತರ ಸಿಗಲಿದೆ ಎಂಬುದು ನಿರ್ದೇಶಕರ ಮಾತು. ಭರತ್ ಸಿನಿ ಕ್ರಿಯೇಷನ್ಸ್ ಬ್ತಾನರ್ ನಲ್ಲಿ ಭರತ್ ವಿಷ್ಣುಕಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಿರ್ಸೆಡಶಕ ಅನೂಪ್ ಆಂಟೋನಿ ಈ ಹಿಂದೆ ‘ಕಥಾ ವಿಚಿತ್ರ’ ಹಾಗೂ ‘ಮೆಹಬೂಬ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರಿಗೆ ಇದು ಮೂರನೇ ಚಿತ್ರ. ಕಥೆ, ಚಿತ್ರಕಥೆ ಕೂಡ ನಿರ್ದೇಶಕರದೆ. ಬಹದ್ದೂರ್ ಚೇತನ್ ಮಾತುಗಳನ್ನು ಪೋಣಿಸಿದ್ದಾರೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಮನುಗೌಡ ಅವರ ಸಂಕಲನ ಚಿತ್ರಕ್ಕಿದೆ.
ಧ್ರುವನ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ಯಶ್ ಶೆಟ್ಟಿ, ಯಶಸ್ ಸೂರ್ಯ, ಕಾಮಿಡಿ ಕಿಲಾಡಿಗಳು ಸೂರಜ್, ಶೋಭ್ ರಾಜ್, ಬಲರಾಜವಾಡಿ, ಸ್ವಾತಿ ಇತರರು ಇದ್ದಾರೆ.
ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಸುದೀಪ್ ಅವರ ಬಯೋಗ್ರಫಿ ಆಡಿಯೋ ಮತ್ತು ಇ ಬುಕ್ ಆಗಿ ಅವರ ಹುಟ್ಟು ಹಬ್ಬದಂದು ಬಿಡುಗಡೆ ಆಗುತ್ತಿದೆ. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ “ಕನ್ನಡ ಮಾಣಿಕ್ಯ ಕಿಚ್ಚ” ಹೆಸರಿನ ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿ ದಾಖಲೆ ರೀತಿಯಲ್ಲಿ ಮಾರಾಟ ಆಗಿತ್ತು. ಈ ಪುಸ್ತಕವೇ ಇಂದು ಮೈ ಲ್ಯಾಂಗ್ ಆಪ್ ಮೂಲಕ ಆಡಿಯೋ ಬಯೋಗ್ರಫಿ ಮತ್ತು ಇ ಬುಕ್ ರೂಪದಲ್ಲಿ ಹೊರ ಬರುತ್ತಿದೆ.
ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಈ ಪುಸ್ತಕಕ್ಕೆ ಧ್ವನಿ ನೀಡಿದ್ದು, ಸುದೀಪ್ ಅವರ ಬದುಕಿನ ಅನೇಕ ಘಟನೆಗಳನ್ನು ಮನಸೆಳೆಯುವಂತೆ ಓದಿದ್ದಾರೆ. ಈ ಬಾರಿಯ ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಈ ಎರಡು ಉಡುಗೊರೆಯನ್ನು ನೀಡುತ್ತಿದೆ ಮೈ ಲ್ಯಾಂಗ್ ಆಪ್.
ಬೆಂಗಳೂರಿನ ಕಾಯಕ ಪ್ರಕಾಶನ ಹೊರತಂದ ಈ ಕೃತಿಯು ಬಿಡುಗಡೆಯಾದ ಎರಡನೇ ದಿನಕ್ಕೆ ಮರು ಮುದ್ರಣಗೊಂಡಿತ್ತು.
ಆಡಿಯೋ ಮತ್ತು ಇ ಪುಸ್ತಕಕ್ಕಾಗಿ www.mylang.in ಇಲ್ಲಿಗೆ ಭೇಟಿ ಕೊಡಿ.
ಕನ್ನಡ ಚಿತ್ರರಂಗ ಮಾತ್ರವಲ್ಲ, ಪರಭಾಷೆಗಳಲ್ಲೂ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿವೆ. ಈಗಾಗಲೇ ಕನ್ನಡದಲ್ಲಿ ಅದೆಷ್ಟೋ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿರುವುದುಂಟು. ಈಗ ಹಳೆಯ ಸಿನಿಮಾಗಳ ಮರುಬಳಕೆಗೆ ಬ್ರೇಕ್ ಹಾಕಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೌದು, ಕನ್ನಡ ಚಿತ್ರರಂಗದ ಸ್ಟಾರ್ ನಟರ ಹಳೇ ಸಿನಿಮಾಗಳ ಟೈಟಲ್‌ಗಳನ್ನು ಮರುಬಳಕೆ ಮಾಡಬಾರದು ಅನ್ನೋ ಹೋರಾಟ ಶುರುವಾಗಿದೆ. ಈ ಹೋರಾಟಕ್ಕೆ ಮುನ್ನುಡಿ ಬರೆದಿರೋದು ಡಾ.ರಾಜ್‌ಕುಮಾರ್ ಅಭಿಮಾನಿಗಳು. ವಿಶ್ವ ಮಾನವ ಡಾ.ರಾಜ್‌ಕುಮಾರ್ ಸೇವಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ, ಡಾ.ರಾಜ್‌ಕುಮಾರ್ ಅವರ ಹಳೆಯ ಚಿತ್ರಗಳ ಶೀರ್ಷಿಕೆಗಳನ್ನು ಮರುಬಳಕೆ ಮಾಡಬಾರದು. ಅಂತಹ ಶೀರ್ಷಿಕೆಗಳಿಗೆ ಅನುಮತಿ ಕೊಡಬಾರದು ಮತ್ತು ಅಂತಹ ಶೀರ್ಷಿಕೆ ಇರುವ ಚಿತ್ರಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಮನವಿ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಡಾ.ರಾಜ್‌ಕುಮಾರ್ ಅವರ ಹಳೆಯ ಸಿನಿಮಾಗಳ ಟೈಟಲ್‌ಗಳ ಮರುಬಳಕೆಗೆ ಅವಕಾಶ ಕೊಡಲೇಬಾರದು ಅಂತ ಪಟ್ಟು ಹಿಡಿದು ಹೋರಾಟಕ್ಕಿಳಿದಿರುವ ರಾಜ್ ಕುಮಾರ್ ಅಭಿಮಾನಿ ಸಂಘಗಳು ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಜೋರಾದ ಹೋರಾಟಕ್ಕೆ ಸಿದ್ಧತೆ ನಡೆಸಿವೆ. ಹಾಗೊಂದು ವೇಳೆ ಸದ್ದಿಲ್ಲದೆಯೇ, ಡಾ.ರಾಜಕುಮಾರ್ ಅವರ ಕೆಲವು ಹಳೆಯ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಂಡು ಕೆಲಸ ಮಾಡುವ ಚಿತ್ರತಂಡಗಳು ಎಚ್ಚೆತ್ತುಕೊಂಡು, ಕೂಡಲೇ ಆ ಶೀರ್ಷಿಕೆ ತೆಗೆದು ಹಾಕಿ ಬೇರೊಂದು ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಿಸಬೇಕು. ಒಂದು ವೇಳೆ ಡಾ.ರಾಜಕುಮಾರ್ ಅವರ ಹೇಳೇ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಇಷ್ಟಕ್ಕೂ ಈ ಹೋರಾಟ ಯಾಕಪ್ಪ ಅಂದರೆ, ಈಗಾಗಲೇ ಡಾ.ರಾಜಕುಮಾರ್ ಅವರ ನಟಿಸಿರುವ ಬಹುತೇಕ ಸಿನಿಮಾಗಳು ದಾಖಲೆ ಬರೆದಿವೆ. ಅದರಲ್ಲೂ ಒಳ್ಳೆಯ ಸಂದೇಶ ಹೊತ್ತು ಬಂದ ಸಿನಿಮಾಗಳು. ಅಂಥದ್ದೇ ಶೀರ್ಷಿಕೆಯಡಿ ಸಿನಿಮಾ ಮಾಡ್ತೀನಿ ಅಂದರೆ, ಅಭಿಮಾನಿಗಳು ಒಪ್ಪುವುದಿಲ್ಲ. ಈಗೀಗ ಬರುವ ಕಥೆಗಳಲ್ಲಿ ಮೌಲ್ಯವೇ ಇರುವುದಿಲ್ಲ. ಅಂತಹ ಸಿನಿಮಾಗಳಿಗೆ ಅಣ್ಣಾವ್ರ ಹಳೆಯ ಶೀರ್ಷಿಕೆ ಇಟ್ಟರೆ ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳದ್ದು.
ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹೊಸ ಸಿನಿಮಾಗಳ ಶೀರ್ಷಿಕೆ ಇರುವ ಪೋಸ್ಟರ್‌ಗಳು ಕಾಣಸಿಗುತ್ತಿವೆ. ಇಂತಹ ಸಿನಿಮಾಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.
ರಾಜ್‌ಕುಮಾರ್ ಅಭಿಮಾನಿಗಳ ಮನವಿಯನ್ನು ಸ್ವೀಕರಿಸಿರುವ ವಾಣಿಜ್ಯ ಮಂಡಳಿ, ಅಂತಹ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನೇನೋ ಕೊಟ್ಟಿದೆ. ಆದರೆ, ಕೆಲವರು ಶೀರ್ಷಿಕೆ ಮೂಲಕವೇ ಸಿನಿಮಾ ಮಾಡ್ತೀವಿ ಅಂತ ಹೊರಟರೆ? ಅದಕ್ಕೀಗ ಉತ್ತರವಿಲ್ಲ. ಮುಂದೆ ಸಿನಿಮಾಗಳಿಗೆ ತೊಂದರೆ ಆದರೂ ಆಗಬಹುದೇನೋ?
ರಾಜ್ ಅಭಿಮಾನಿಗಳಂತೂ ಮುನ್ನೆಚ್ಚರಿಕೆಯ ಕ್ರಮವಾಗಿಯೇ ಶೀರ್ಷಿಕೆ ಮರುಬಳಕೆ ಮಾಡಬೇಡಿ ಎಂಬ ಮನವಿ ಮಾಡಿದೆ. ಅದರಲ್ಲೂ ರಾಜ್ ಫ್ಯಾಮಿಲಿ ಕೂಡ ಒಳ್ಳೆಯ ಸಿನಿಮಾಗಳ ಶೀರ್ಷಿಕೆ ಬಳಸದಂತೆ ಈ ಹಿಂದೆಯೇ ಮನವಿ ಮಾಡಿತ್ತು. ಅದರಲ್ಲೂ “ಆಕಸ್ಮಿಕ” “ದಾರಿ ತಪ್ಪಿದ ಮಗ” ಸಿನಿಮಾ ಶೀರ್ಷಿಕೆ ಮರು ಬಳಕೆ ಬೇಡ ಎಂದಿತ್ತು. ಅಷ್ಟೇ ಯಾಕೆ ಈ ಹಿಂದೆ ಸಾನ್ವಿ ಶ್ರೀವಾತ್ಸವ್ ಅಭಿನಯದ “ಕಸ್ತೂರಿ ಮಹಲ್” ಸಿನಿಮಾಗೆ “ಕಸ್ತೂರಿ ನಿವಾಸ” ಎಂಬ ಶೀರ್ಷಿಕೆ ಇಡಲಾಗಿತ್ತು.
ಕೊನೆ ಕ್ಷಣದಲ್ಲಿ ನಿರ್ದೇಶಕ ದಿನೇಶ್ ಬಾಬು ಅವರು, “ಕಸ್ತೂರಿ ನಿವಾಸ” ಶೀರ್ಷಿಕೆಯನ್ನು “ಕಸ್ತೂರಿ ಮಹಲ್” ಎಂದು ಬದಲಿಸಿದ್ದರು. ಅದೇನೆ ಇರಲಿ, ಈಗ ರಾಜ್ ಫ್ಯಾನ್ಸ್ ಒಕ್ಕೊರಲ ಮನವಿ ಮಾಡಿದ್ದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಹಳೆಯ ಸಿನಿಮಾಗಳ ಟೈಟಲ್ ಮರುಬಳಕೆಗೆ ಬ್ರೇಕ್ ಬೀಳುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಉಪಾದ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷ ಸಾರಾ ಗೋವಿಂದ್ , ಕಾರ್ಯದರ್ಶಿ ಎನ್ ಎಮ್ ಸುರೇಶ್ ಹಾಜರಿದ್ದರು.
ವಿಶ್ವಮಾನವ ಡಾ.ರಾಜ್‌ಕುಮಾರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಬ.ನಾ.ಮು.ರಾಜು, ವೆಂಕಟೇಶ್‌ರೆಡ್ಡಿ, ಟಿ.ಎಚ್ಮ್.ಎಂ.ಗೌಡ, ಕೃಷ್ಣಮೂರ್ತಿ, ಕೆಂಪಣ್ಣ, ಗುರುರಾಜ್, ದೇವರಾಜ್ ಹಾಗು ಪತ್ರಕರ್ತ ಪರಮ್ ಗುಬ್ಬಿ ಸೇರಿದಂತೆ ಇತರೆ ರಾಜ್ ಅಭಿಮಾನಿಗಳ ಸಂಘಟನೆಯ ಪದಾಧಿಕಾರಿಗಳು ಈ ವೇಳೆ ಇದ್ದರು.
ಆರ್ಯನ್ ಸಂತೋಷ್ ಕನ್ನಡ ಸಿನಿರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಸಿನಿಮಾ ಮೂಲಕ ರಂಗಿನ ದುನಿಯಾಗೆ ಎಂಟ್ರಿಯಾದ ಆರ್ಯನ್ ಸಂತೋಷ್, ಅ ನಂತರದ ದಿನಗಳಲ್ಲಿ “ನೂರು ಜನ್ಮಕು” ಸಿನಿಮಾ ಮೂಲಕ ಹೀರೋ ಆಗಿ ಕಾಣಿಸಿಕೊಂಡರು. ಅದಾದ ಬಳಿಕ ಒಂದಷ್ಟು ಕಥೆ ಹುಡುಕಾಟದಲ್ಲಿದ್ದ ಅವರು, ಕೊನೆಗೂ ಒಂದೊಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾದರು. ಅದೇ “ಡಿಯರ್ ಸತ್ಯ”. ಈ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲು ಹೀರೋ ಆರ್ಯನ್ ಸಂತೋಷ್ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ…
ಹೀರೋ ಆರ್ಯನ್ ಸಂತೋಷ್ ಮೊಗದಲ್ಲಿ ಮಂದಹಾಸ ಬೀರಿದೆ. ಅದಕ್ಕೆ ಕಾರಣ, ಅವರ ಬಹುನಿರೀಕ್ಷೆಯ “ಡಿಯರ್ ಸತ್ಯ” ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಆರ್ಯನ್ ಸಂತೋಷ್ ಅವರ ಹುಟ್ಟುಹಬ್ಬದಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಟ್ರೇಲರ್ ಬಿಡುಗಡೆಯ ವಿಶೇಷವೆಂದರೆ, ಡೆಲಿವರಿ ಬಾಯ್ಸ್ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಹೌದು, ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ “ಡಿಯರ್ ಸತ್ಯ” ಚಿತ್ರ ಸೆಪ್ಟೆಂಬರ್‌ಗೆ ಬಿಡುಗಡೆಯಾಗಲಿದೆ. ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.
ಚಿತ್ರದ ಟ್ರೇಲರ್ ರಿಲೀಸ್ ಬಳಿಕ ಮಾತಿಗಿಳಿದ ಹೀರೋ ಆರ್ಯನ್ ಸಂತೋಷ್, “ನಾನು ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾನು, “ನೂರು ಜನ್ಮಕು” ಚಿತ್ರದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರು ಮುಂದೆ ಬರಲಿಲ್ಲ. ದೇವರ ಹಾಗೆ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಬಂದು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ ಎಂದರು ಆರ್ಯನ್ ಸಂತೋಷ್.
ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ “ಭಿನ್ನ” ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಓಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ “ಡಿಯರ್ ಸತ್ಯ” ನಿರ್ಮಾಣ ಮಾಡಿದ್ದೇವೆ. ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋ ಮೂಲಕ ಚಿತ್ರ ತಯಾರಾಗಿದೆ.
ಆರ್ಯನ್ ಸಂತೋಷ್ ನನ್ನ ಸ್ನೇಹಿತ. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ಪ್ಲಾನ್ ಇದೆ ಎಂಬುದು ನಿರ್ಮಾಪಕ ಗಣೇಶ್ ಪಾಪಣ್ಣ ಅವರ ಮಾತು. ಮತ್ತೊಬ್ಬ ನಿರ್ಮಾಪಕ ಶ್ರೀನಿವಾಸ ಶ್ರೀಭಕ್ತ ಕೂಡ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದರು.
“ಜಿಗರ್ ಥಂಡ”, “ತ್ರಾಟಕ”, “ಆ ದೃಶ್ಯ” ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದಿದ್ದೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು. ನಂತರ ಈ ಚಿತ್ರ ಆರಂಭವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯ ಇಲ್ಲಿ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ. ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಶಿವಗಣೇಶ್. ಆಡಿಷನ್ ಮೂಲಕ ಆಯ್ಕೆಯಾದ ನಾಯಕಿ ಅರ್ಚನಾ ಕೊಟ್ಟಿಗೆ, ಕಲಾವಿದರಾದ ಬಾಲು, ಕಾರ್ತಿಕ್ ಸುಬ್ರಹ್ಮಣ್ಯ, ಫ್ಯಾಷನ್ ಡೈರೆಕ್ಟರ್ ಭಾರ್ಗವಿ ವಿಖ್ಯಾತಿ ಹಾಗೂ ಸಾಹಸ ನಿರ್ದೇಶಕ ಕುಂಫು ಚಂದ್ರು ಮಾತನಾಡಿದರು.
ಇನ್ನು, “ಡಿಯರ್ ಸತ್ಯ” ಚಿತ್ರದಲ್ಲಿ ನಾಯಕ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನ ಡೆಲಿವರಿ ಬಾಯ್ಸ್ ಕೈಯಿಂದಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಆರ್ಯನ್ ಸಂತೋಷ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಿರ್ಮಾಪಕರಾದ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್ ಹಾಗೂ ಕರಿಸುಬ್ಬು ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಇಂಡಿಯಾ ಪ್ರೈಡ್ ವಿಕ್ರಾಂತ್ ರೋಣ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಆರ್ ಆರ್ ಆರ್, ಮಾರ್ಟಿನ್ ನಂತರ ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ ಪೆಕ್ಡೆಡ್ ಮಹಾಮೂವೀ ವಿಕ್ರಾಂತ್ ರೋಣದ ಚಿತ್ರದ ಆಡಿಯೋ ಹಕ್ಕುಗಳನ್ನ ಪ್ರತಿಷ್ಠಿತ ಲಹರಿ ಸಂಸ್ಥೆ ಮುಡಿಗೇರಿಸಿಕೊಂಡಿದೆ.
‘ಲಹರಿ’ ಕನ್ನಡದ ಹೆಮ್ಮೆಯ ಸಂಸ್ಥೆ. ಮ್ಯೂಸಿಕ್ ಲೋಕದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿರುವ ಲಹರಿ ಮ್ಯೂಸಿಕ್, ಯೂಟ್ಯೂಬ್ ಕಡೆಯಿಂದ ಡೈಮಂಡ್ ಕಿರೀಟ ಮುಡಿಗೇರಿಸಿಕೊಂಡ ಮೇಲೆ ಬಜಾರ್ ನಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಮತ್ತಷ್ಟು ಹವಾ ಎಬ್ಬಿಸಿದೆ. ಹಿಂದ್ಯಾರು ಬರೆಯದ ಇತಿಹಾಸ ಸೃಷ್ಟಿಸುತ್ತಾ ಮುನ್ನುಗುತ್ತಿರುವ ಪ್ರತಿಷ್ಠಿತ ಲಹರಿ ಮ್ಯೂಸಿಕ್ ಸೌತ್ ದುನಿಯಾದ ಬಹುತೇಕ ಸೂಪರ್ ಸ್ಟಾರ್ ಗಳಿಗೆ ಚಿನ್ನದ ಕಿರೀಟ ತೊಡಿಸುತ್ತಾ ಇಂಡಿಯನ್ ಸಿನಿಮಾ ಇಂಡಸ್ಟ್ರಿ ತಿರುತಿರುಗಿ ನೋಡುವಂತೆ ಮಾಡ್ತಿದೆ.
ಇಡೀ ಸಿನಿಮಾ ಜಗತ್ತು ಎದುರುನೋಡ್ತಿರುವ, ಚಿತ್ರ ಪ್ರೇಮಿಗಳು ಜಾತಕಪಕ್ಷಿಯಂತೆ ಕಾಯ್ತಿರುವ, ಬಹುನಿರೀಕ್ಷಿತ ಸಿನಿಮಾಗಳು ಎನಿಸಿಕೊಂಡಿರುವ, ಸೌತ್ ದುನಿಯಾದ ಬಹುತೇಕ ಎಲ್ಲಾ ಮೂವೀಗಳಿಗೂ ಲಹರಿ ಸಂಸ್ಥೆ ಕೋಟಿ ಕೋಟಿ ಚಿನ್ನದ ಹಾರ ಹಾಕಿದೆ. ಈ ಮೂಲಕ ಮಾಯಲೋಕದಲ್ಲಿ ಆಯಾ ಸಿನಿಮಾಗಳು ಸುನಾಮಿ ಎಬ್ಬಿಸುವಂತೆ ಮಾಡಿದೆ.
ಇವತ್ತು ಅಖಾಡದಲ್ಲಿ ಕೆಜಿಎಫ್ ಚಾಪ್ಟರ್2, ಆರ್ ಆರ್ ಆರ್, ಮಾರ್ಟಿನ್ ಅಬ್ಬರ ಆರ್ಭಟ ಜಾಸ್ತಿ ಐತೆ ಅಂದರೆ ಅದಕ್ಕೆ ಒಂದು ರೀತಿಯಲ್ಲಿ ಲಹರಿ ಮ್ಯೂಸಿಕ್ ಕೂಡ ಕಾರಣ. ತಮ್ಮ ತಮ್ಮ ಸಿನಿಮಾಗೆ ಆಯಾ ಸಿನಿಮಾ ತಂಡ ನಿದ್ದೆಗೆ ಚಟ್ಟಕಟ್ಟಿ ದುಡಿದಿರಬಹುದು, ಬೆವರೊಟ್ಟಿಗೆ ರಕ್ತಬಸಿದಿರಬಹುದು ಆದರೆ ಅವರವರ ಪರಿಶ್ರಮಕ್ಕೆ ಬೆಂಬಲ ಅಲ್ಲದೇ ಬೇಡಿಕೆಯ ಬೆಲೆಯನ್ನ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿರುವ ಲಹರಿ ಸಂಸ್ಥೆಗೆ ಫಿಲ್ಮ್ ಟೀಮ್ ಮಾತ್ರವಲ್ಲ ಸಿನಿಮಾ ಪ್ರೇಮಿಗಳು ಕೂಡ ಚಪ್ಪಾಳೆ ತಟ್ಟಬೇಕು. ಕನ್ನಡದ ಹೆಮ್ಮೆಯ ಮ್ಯೂಸಿಕ್ ಸಂಸ್ಥೆಯನ್ನ ಆಕಾಶದೆತ್ತರಕ್ಕೆ ಬೆಳೆಸಬೇಕು.
ಜಕ್ಕಣ್ಣ ಅಲಿಯಾಸ್ ರಾಜಮೌಳಿಯ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ಹಕ್ಕಿಗೆ ಲಹರಿ ಸಂಸ್ಥೆ 25 ಕೋಟಿ ಸುರಿದಿದ್ದು ನಿಮ್ಗೆಲ್ಲಾ ಗೊತ್ತೆಯಿದೆ. ಈ ಮೂಲಕ ಆರ್ ಆರ್ ಆರ್ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ದುಬಾರಿ ಮೊತ್ತಕ್ಕೆ ಆಡಿಯೋ ಸೇಲ್ ಮಾಡಿದ ಮೊದಲ ಚಿತ್ರ ಎನಿಸಿಕೊಳ್ತು. ಈ ದಾಖಲೆಗೆ ಲಹರಿಯೇ ಕಾರಣ. ಅನಂತರ ಒನ್ ಟು ಡಬ್ಬಲ್ ಕೊಟ್ಟು ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್ ನ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪಾರ್ಟ್ 1 ಗೆ 3.6 ಕೋಟಿ ಕೊಟ್ಟಿದ್ದ ಲಹರಿ ಕೆಜಿಎಫ್ ಎರಡನೇ ಭಾಗಕ್ಕೆ 7.2 ಕೋಟಿ ಡೆಪಾಸಿಟ್ ಮಾಡಿ ಚಾಪ್ಟರ್ 2 ಗೆ ಡಿಮ್ಯಾಂಡ್ ಹೆಚ್ಚು ಮಾಡಿಕೊಡ್ತು.
ಅಚ್ಚರಿ ಅಂದರೆ ಹಾಡುಗಳನ್ನ ಕೇಳದೆಯೇ ಮಾರ್ಟಿನ್ ಸಿನಿಮಾದ ಆಡಿಯೋ ಹಕ್ಕುಗಳನ್ನು ಬ್ಲಾಕ್ ಮಾಡಿಕೊಂಡಿದ್ದು. ಇದು ಅದ್ಧೂರಿ ಜೋಡಿಯ ಮೇಲಿರುವಂತಹ ಅಪಾರವಾದ ನಂಬಿಕೆ. ಬ್ಲಾಕ್ ಬಸ್ಟರ್ ಹಿಟ್ ಹಾಡುಗಳನ್ನೇ ಕೊಡ್ತಾರೆನ್ನುವ ಭರವಸೆಯಿಂದ ಸಿನಿಮಾ ಮುಹೂರ್ತಕ್ಕೆ ಮೊದಲೇ ಮಾರ್ಟಿನ್ ಆಡಿಯೋ ರೈಟ್ಸ್ ನ ಲಹರಿ ತನ್ನ ಮುಡಿಗೇರಿಸಿಕೊಂಡಿದೆ. ಸೌತ್ ಸಿನಿಮಾದ ಜನಪ್ರಿಯ ಸಂಗೀತ ನಿರ್ದೇಶಕ ಮಾರ್ಟಿನ್ ಗೆ ಹಾಡುಗಳನ್ನ ಹೊಸೆಯುತ್ತಾರಂತೆ. ಯಾರು ಆ ಮ್ಯೂಸಿಕ್ ಮಾಂತ್ರಿಕ ಎನ್ನುವುದು ರಿವೀಲ್ ಆಗಬೇಕಿದೆ.
ಆರ್ ಆರ್ ಆರ್, ಕೆಜಿಎಫ್ ಚಾಪ್ಟರ್೨, ಮಾರ್ಟಿನ್ ಬೆನ್ನಲ್ಲೇ ವಿಕ್ರಾಂತ್ ರೋಣ ಚಿತ್ರದ ಆಡಿಯೋ ಹಕ್ಕುಗಳನ್ನ ದುಬಾರಿ ಮೊತ್ರಕ್ಕೆ ಖರೀದಿ ಮಾಡಿದೆ. ಎಷ್ಟು ಕೋಟಿ ಎನ್ನುವುದು ಬಟಾಬಯಲಾಗಿಲ್ಲವಾದರೂ ವಿಕ್ರಾಂತ್ ರೋಣನಿಗಾಗಿ ಕೋಟಿ ಕೋಟಿ ಸುರಿದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆಡಿಯೋ ತೆಕ್ಕೆಗೆ ತೆಗೆದುಕೊಂಡಿರುವ ವಿಷ್ಯವನ್ನ ಲಹರಿ ತಮ್ಮ ಸೋಷಿಯಲ್ ಪೇಜ್ ನಲ್ಲಿ ಪ್ರಕಟಿಸಿದೆ. ವಿಕ್ರಾಂತ್ ರೋಣ ಮಾಯಲೋಕದ ಮಹಾಮೂವೀ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯ್ಯಾರಾಗ್ತಿರುವ ಈ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ. ಅನುಪ್ ಭಂಡಾರಿ ನಿರ್ದೇಶನ ಚಿತ್ರಕ್ಕಿದ್ದು, ನೀರಿನಂತೆ ಹಣವನ್ನು ನಿರ್ಮಾಪಕ ಜಾಕ್ ಮಂಜು ಖರ್ಚು ಮಾಡಿದ್ದಾರೆ. ಕಿಚ್ಚನ ಹುಟ್ಟುಹಬ್ಬಕ್ಕೆ ಫಸ್ಟ್ ಗ್ಲಿಂಪ್ಸ್ ಕೊಡುವುದಕ್ಕೆ ತಯ್ಯಾರಿ ನಡೆದಿದೆ. ಹೀಗಾಗಿ, ಫ್ಯಾನ್ಸ್ ಕೂಡ ಥ್ರಿಲ್ಲಾಗಿದ್ದಾರೆ.
ಒಟ್ನಲ್ಲಿ ಒಂದರ ಹಿಂದೆ ಒಂದರಂತೆ ಸ್ಟಾರ್ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಖರೀದಿ ಮಾಡುತ್ತಿದೆ. ನೆಕ್ಸ್ಟ್ ಟಾರ್ಗೆಟ್ ಯಾವ ಸಿನಿಮಾ ? ಯಾವ ಚಿತ್ರಕ್ಕೆ ಲಹರಿ ಚಿನ್ನದ ಸರ ಕೊರಳಿಗೆ ಹಾಕಲಿದೆ ಕೂತೂಹಲದಿಂದ ಕಾಯಬೇಕು ಅಷ್ಟೇ.
ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಪ್ರಥಮ್ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣವಂತೆ. ನಟನೆ ಜೊತೆಗೆ ನಿರ್ದೇಶನವೂ ಇವರದೇ
ಮೇಲ್ ಐಡಿ ಕೊಟ್ಟರೂ ಡ್ರೋಣ್ ಪ್ರಥಮ್ ಬಗ್ಗೆ ಹಿಂಟ್ ಬಿಟ್ಟುಕೊಡಲ್ಲ… ಬಿಟ್ಟು ಕೊಡಲ್ಲ… ಬಿಟ್ಟುಕೊಡಲ್ಲ…ಹೀಗಂತ ಪಟ್ಟಿಗೆ ಬಿದ್ದರೆ ಹಠಕ್ಕೆ ಬಿದ್ದು ಮತ್ತೇನು ಕೇಳೋದಕ್ಕೆ ಆಗುತ್ತೆ ಹೇಳಿ. ಆಯ್ತು ಬುಡು ಗುರು ನಿನಗೆ ಯಾವಾಗ ಹೇಳಬೇಕು ಅಂತ ಎನಿಸುತ್ತೋ ಆಗಲೇ ಹೇಳು ಅಂತ ಸುಮ್ಮನಾಗಿದ್ವಿ. ಇವತ್ತು, ದಿಢೀರ್ ಅಂತ ಡ್ರೋಣ್ ಪ್ರತಾಪ್ ನ ಮೀಟ್ ಮಾಡಿರುವ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡ್ರೋಣ್ ಪ್ರಥಮ್ ಸಿನಿಮಾ ಕುರಿತಾಗಿ ಹೇಳಿಕೊಂಡಿದ್ದಾರೆ.
Pick of the year…! Drone pratham meats @droneprathap ! ಇನ್ಮೇಲೆ ಇವ್ನು ನನ್ನ ತಮ್ಮ!! #ಅಪೂರ್ವಸಂಗಮ!! ನನ್ನ ತಮ್ಮ ಸಿಕ್ಬಿಟ್ಟ!!🤗
Dronepratham shoot starts from next week…!!!
ಡ್ರೋಣ್ ಹೆಸರಲ್ಲಿ ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದಾಗಲೇ ಡ್ರೋಣ್ ಪ್ರತಾಪ್ ಕುರಿತಾದ ಕಥನ ಎನ್ನುವುದು ಬಹಿರಂಗವಾಗಿತ್ತು. ತೀರಾ ಇತ್ತೀಚಿಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಾ ಡ್ರೋಣ್ ಪ್ರಥಮ್ ಟೈಟಲ್ ನಲ್ಲಿ ಮೂವೀ ಬರಲಿದೆ ಎನ್ನುವ ವಿಷ್ಯ ಹಂಚಿಕೊಂಡಿದ್ದರು. ಇದೀಗ ಕಲರ್ ಫುಲ್ ಡ್ರೋಣ್ ಹಾರಿಸಿದ ಮಂಡ್ಯದ ಹೈದ ಪ್ರತಾಪ್ ರನ್ನ ಭೇಟಿಮಾಡುವುದರ ಮೂಲಕ ‘ ಡ್ರೋಣ್ ಪ್ರಥಮ್ ‘ ಹೆಸರಿನ ಸಿನಿಮಾ ಡ್ರೋಣ್ ಪ್ರತಾಪ್ ಜೀವನ ಕುರಿತಾಗಿದ್ದೇ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಕಮ್ ಸೆನ್ಸೇಷನ್ ಸ್ಟಾರ್ ಪ್ರಥಮ್ ಅವರೇ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣಕ್ಕೆ ಧುಮುಕುವುದಾಗಿ ತಿಳಿಸಿದ್ದಾರೆ. ಪಾತ್ರಕ್ಕೋಸ್ಕರ 15 ಕೆಜಿ ತೂಕ ಇಳಿಸಿಕೊಳ್ತೀನಿ ಎಂದಿದ್ದರು. ಗೌರಿಗಣೇಶ, ಉಂಡುಹೋದ ಕೊಂಡುಹೋದ, ಯಾರಿಗೂ ಹೇಳಬೇಡ ಸಿನಿಮಾ ಶೈಲಿಯಲ್ಲಿ ಡ್ರೋಣ್ ಪ್ರಥಮ್ ಸಿನಿಮಾ ಮೂಡಿಬರುವುದಾಗಿ ಹೇಳಿಕೊಂಡಿದ್ದಾರೆ.ನಟನೆಯ ಜೊತೆಗೆ ನಿರ್ದೇಶನದ ಹೊಣೆ ಕೂಡ ಹೊತ್ತಿದ್ದಾರೆ.
ದೇವ್ರಂತ ಮನುಷ್ಯ ಪ್ರಥಮ್ ಜೊತೆಗೆ ಡ್ರೋಣ್ ಹಾರ್ಸೋಕೆ ನೀಲಿ ಸುಂದರಿ ಬರುತ್ತಾರಂತೆ. ಮುಂಬೈ ಮತ್ತೊಬ್ಬ ನಟಿ ಪ್ರಥಮ್ ಗೆ ಜೋಡಿಯಾಗಲಿದ್ದಾರೆ. ಆ ಇಬ್ಬರು ತಾರೆಯರು ಯಾರು ಎನ್ನುವ ಸೀಕ್ರೇಟ್ ಇನ್ನೂ ರಿವೀಲ್ ಆಗಿಲ್ಲ. ಡ್ರೋಣ್ ಪ್ರತಾಪ್ ಕಥೆಯನ್ನ ಹಾಸ್ಯರೂಪದಲ್ಲಿ ಕಟ್ಟಿಕೊಡಬೇಕು ಎನ್ನುವ ಕನಸು ಕಂಡಿರುವ ಪ್ರಥಮ್, ಪ್ರಖ್ಯಾತ ರಾಜಕಾರಣಿಯೊಬ್ಬರಿಂದ ಲಾಂಚ್ ಮಾಡಿಸಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ.
ಇಲ್ಲಿವರೆಗೂ ರಾಜಕೀಯ ಘಟಾನುಘಟಿ ನಾಯಕರಿಂದ ತಮ್ಮ ಸಿನಿಮಾ ಲಾಂಚ್ ಮಾಡಿಸಿರುವ ನಟ ಭಯಂಕರ ಪ್ರಥಮ್ ಅವರು, ಈ ಭಾರಿ ಡ್ರೋಣ್ ಹಾರ್ಸೋಕೆ ಯಾವ ರಾಜಕೀಯ ದಿಗ್ಗಜರನ್ನ ಕರೆತರುತ್ತಾರೆನ್ನುವ ಕೂತೂಹಲ ಇದ್ದೇ ಇದೆ. ಜೊತೆಗೆ ಯುವ ವಿಜ್ಞಾನಿ ಅಂತೆಲ್ಲಾ ಪುಕ್ಸಟ್ಟೆ ಖ್ಯಾತಿ ಪಡೆದ ಪ್ರತಾಪ್ ಈ ಚಿತ್ರದಲ್ಲೇನಾದರೂ ಪಾತ್ರ ಮಾಡುತ್ತಾರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಅದೆಲ್ಲದಕ್ಕೂ ಉತ್ತರ ಅತೀ ಶೀಘ್ರದಲ್ಲೇ ಸಿಗಲಿದೆ.
ಕೊರೊನಾ ಈಗ ಒಂದು ಹಂತಕ್ಕೆ ಮರೆಯಾಗುತ್ತಿದೆ. ಮೆಲ್ಲನೆ ಭಯ ಕಡಿಮೆಯಾಗುತ್ತಿದೆ. ಎಲ್ಲಾ ರಂಗದಲ್ಲೂ ಕಾರ್ಯಚಟುವಟಿಕೆಗಳೂ ಜೋರಾಗಿವೆ. ಸಿನಿಮಾರಂಗ ಮಾತ್ರ ಶೇ.೫೦ರಷ್ಟು ಆಸನ ಭರ್ತಿ ಆದೇಶದಲ್ಲೇ ಇದೆ. ಹೀಗಿದ್ದರೂ, ಈಗ ಒಂದೊಂದೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿವೆ. ಶಿವರಾಜಕುಮಾರ್ ಅಭಿನಯದ “ಭಜರಂಗಿ ೨” ಸಿನಿಮಾ ರಿಲೀಸ್ ಅನೌನ್ಸ್ ಮಾಡಿದೆ. ಅದರ ಬೆನ್ನಲ್ಲೇ ಈಗ ಜಗ್ಗೇಶ್ ಪುತ್ರ ಗುರುರಾಜ್ ಅವರ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಹೌದು, ನವರಸನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಚಿತ್ರ “ಕಾಗೆ ಮೊಟ್ಟೆ” ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಪಕ್ಕಾ ಲೋಕಲ್ ಹುಡುಗರ ಕಥೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಚಂದ್ರಹಾಸ ಅವರು ಈ ಚಿತ್ರ ಮಾಡಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ ಅನ್ನೋದು ಗೊತ್ತು. ಅದೇ ರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಮೊಟ್ಟೆಯಂತಿರುವ ಇವರು ಬೆಳೆದ ಮೇಲೆ ಯಾವ ರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್‌ಗೆ ಸಿದ್ದವಾಗಿರುವ ಕಾಗೆಮೊಟ್ಟೆ ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಲಾಕ್‌ಡೌನ್‌ಗೂ ಮುಂಚೆಯೇ ರೆಡಿಯಾಗಿದ್ದ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ.ಮಾದೇಶ್ ಹಾಗೂ ಹೇಮಂತ್ ಇನ್ನಿಬ್ಬರು ಗೆಳೆಯರಾಗಿ ನಟಿಸಿದ್ದಾರೆ. ಕನ್ನಡದವರೇ ಆದ ತನುಜಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ, ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್.ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ.
ಅಂದಹಾಗೆ ಈ ಚಿತ್ರಕ್ಕೆ ಪಿಳ್ಳಾ, ಗೋವಿ, ಕೃಷ್ಣನ ಕಥೆ ಎಂಬ ಅಡಿಬರಹವಿದೆ. ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರು ಹುಡುಗರು, ಒಮ್ಮೆ ಒಂದು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವು ಅಂದುಕೊಂಡಿದ್ದನ್ನು ಮಾಡುತ್ತಾರೋ ಇಲ್ಲವೋ ಅನ್ನೋದು ಕಥೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ಸೌಜನ್ಯ ಎಂಬ ನಟಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ೩ ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವೀ ಚಿತ್ರದ ಕ್ಯಾಮೆರಾ ಹಿಡಿದರೆ, ರಜನೀಕಾಂತ್ ಅವರ ಸ್ನೇಹಿತ ರಾಜ್ ಬಹದ್ದೂರ್ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶಿವತೇಜಸ್ ಹೇಳಿದ ಬ್ಯೂಟಿಫುಲ್ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್” ಕೃಷ್ಣ, ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಆಗಸ್ಟ್ 27ರಂದು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್ ಕ್ರಾಂತಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ
ಒಂದು ಸಿನಿಮಾ ಮಾಡೋಕೆ ಮುಖ್ಯವಾಗಿ ಬೇಕಾಗಿರೋದು ಸಿನಿಮಾ ಪ್ರೀತಿ. ಅದಷ್ಟೇ ಅಲ್ಲ, ಶ್ರದ್ಧೆ ಮತ್ತು ಪ್ರತಿಭೆ. ಇದನ್ನೇ ನಂಬಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟವರು ನಿರ್ದೇಶಕ ಶಿವತೇಜಸ್. ಈಗಾಗಲೇ ಜೋರು ಪ್ರೀತಿಯ “ಮಳೆ” ಸುರಿಸಿದ ಶಿವತೇಜಸ್, ಸಿನಿಪ್ರೇಮಿಗಳ ಮನವನ್ನು ಪ್ರೀತಿಯಿಂದಲೇ ಒದ್ದೆ ಮಾಡಿದವರು. ಆ ನಂತರ “ಧೈರ್ಯಂ” ಮೂಲಕ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡ ಧೈರ್ಯದಲ್ಲೇ ಮತ್ತೊಂದು ಕ್ಯೂಟ್ ಅಂಡ್ ಪ್ಯೂರ್ ಲವ್‌ಸ್ಟೋರಿ ಹಿಂದೆ ನಿಂತಿದ್ದಾರೆ ಶಿವತೇಜಸ್. ಹೌದು, ನಿರ್ದೇಶಕ ಶಿವತೇಜಸ್ ಈಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಎಂದಿಗಿಂತಲೂ ಜೋರು ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆವರ ಆಯ್ಕೆ ಕೂಡ ಹಾಗೆಯೇ ಇದೆ. ಹಾಗಾಗಿ, ಅವರ ಹೊಸ ಚಿತ್ರ ಜೋರು ಸೌಂಡು ಮಾಡುವುದರಲ್ಲಿ ಅನುಮಾನವೇ ಇಲ್ಲ ಬಿಡಿ.
ಅಂದಹಾಗೆ, ಶಿವತೇಜಸ್ ಮಾಡ ಹೊರಟಿರುವ ಸಿನಿಮಾದ ಹೀರೋ ಬೇರಾರೂ ಅಲ್ಲ, “ಲವ್ ಮಾಕ್ಟೇಲ್” ಖ್ಯಾತಿಯ “ಡಾರ್ಲಿಂಗ್” ಕೃಷ್ಣ ಅವರದು. ನಿಜ, ಶಿವತೇಜಸ್ ಅವರು ಹೇಳಿದ ಬ್ಯೂಟಿಫುಲ್ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್” ಕೃಷ್ಣ, ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಆಗಸ್ಟ್ 27ರಂದು ಚಿತ್ರದ ಪೂಜೆ ನೆರವೇರುತ್ತಿದೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ನಡೆಯುತ್ತಿದೆ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್ ಅಂದರೆ, ನಿರ್ದೇಶಕ ಶಿವತೇಜಸ್ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.
ಶಿವತೇಜಸ್, ನಿರ್ದೇಶಕರು
ಈ ಸುಮಂತ್ ಕ್ರಾಂತಿ ಹೆಸರು ಕೇಳಿದಾಕ್ಷಣ, ಥಟ್ಟನೆ ನೆನಪಾಗೋದೇ “ನಾನಿ” ಎಂಬ ಕಾಡುವ ಚಿತ್ರ. ಹೌದು, ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾದ ಸುಮಂತ್ ಕ್ರಾಂತಿ ಇದೀಗ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅದೀಗ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನ ಹಿಂದೆಯೇ ಅವರು “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್ ಸಿನಿಮಾ ಕೂಡ ಮಾಡಿದ್ದಾಗಿದೆ. ಅದರ ಹಿಂದೆಯೇ ಅವರು ಪ್ರಜ್ವಲ್ ದೇವರಾಜ್ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿರೋದು ಹೊಸ ಸುದ್ದಿಯೇನಲ್ಲ. ಈಗ ಶಿವತೇಜಸ್ ಅವರಿಗಾಗಿ “ಡಾರ್ಲಿಂಗ್” ಕೃಷ್ಣ ಅವರ ನಟನೆಯ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಇದು ನಿಜಕ್ಕೂ ಮೆಚ್ಚುವ ವಿಷಯ.
ಸುಮಂತ್ ಕ್ರಾಂತಿ, ನಿರ್ಮಾಪಕರು
ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್ ಕ್ರಾಂತಿ ಅವರು, ಈಗ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ. ಸುಮಂತ್ ಕ್ರಾಂತಿ ಅವರೂ ನಿರ್ದೇಶಕರಾಗಿರುವುದರಿಂದ, ಈ ಚಿತ್ರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಪೂರೈಸುತ್ತಾರೆ ಎಂಬ ಭವ್ಯ ಭರವಸೆ ಕೂಡ ನಿರ್ದೇಶಕ ಶಿವತೇಜಸ್ ಅವರಿಗಿದೆ. ಅದೇನೆ ಇರಲಿ, ಶಿವತೇಜಸ್ ಈ ಬಾರಿ ಒಂದೊಳ್ಳೆಯ ಕಥೆ ಹಿಡಿದು ಬರುತ್ತಿದ್ದಾರೆ. ತಮ್ಮ ಬ್ಯೂಟಿಫುಲ್ ಲವ್‌ಸ್ಟೋರಿ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಶಿವತೇಜಸ್ ಹೇಳಿದ್ದಿಷ್ಟು.
ಡಾರ್ಲಿಂಗ್ ಕೃಷ್ಣ, ನಾಯಕ
“ನಾನು “ಮಳೆ” ಬಳಿಕ ಮತ್ತೊಂದು ಪ್ಯೂರ್ ಬೊಂಬಾಟ್ ಲವ್‌ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಧರ್ಮಸ್ಥಳದಲ್ಲಿ ಆಗಸ್ಟ್ 27ರಂದು ಪೂಜೆ ನೆರವೇರಲಿದೆ. ಸುಮಂತ್ ಕ್ರಾಂತಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೂಲತಃ ನಿರ್ದೇಶಕರಾಗಿದ್ದರೂ, ನನ್ನ ಕಥೆ ನಂಬಿ ಹಣ ಹಾಕುತ್ತಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ತೀನಿ ಎಂಬ ಮಾತು ಕೊಡ್ತೀನಿ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ನನ್ನದೇ. ಇನ್ನು, ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರೆಂಬುದು ಸದ್ಯ ಗೌಪ್ಯ.
ಅಂತೆಯೇ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಸೇರಿದಂತೆ ಉಳಿದ ತಾಂತ್ರಿಕ ವರ್ಗದ ಆಯ್ಕೆ ಹಾಗು ಕಲಾವಿದರ ಆಯ್ಕೆ ನಡೆಯಬೇಕಿದೆ. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಶಿವತೇಜಸ್, “ಮಳೆ” ನೋಡಿದವರಿಗೆ ಒಂದೊಳ್ಳೆಯ ಫೀಲ್ ಇತ್ತು. ಈ ಸಿನಿಮಾ ಅದಕ್ಕಿಂತಲೂ ಬೊಂಬಾಟ್ ಫೀಲ್ ಕೊಡುತ್ತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಇಲ್ಲಿದೆ. ಲವ್‌ಸ್ಟೋರಿ ಅಂದರೆ, ಅದೇ ಪ್ರೀತಿ ಗೀತಿ ಇತ್ಯಾದಿ ಇರುತ್ತೆ. ಆದರೆ, ನಮ್ ಲವ್‌ಸ್ಟೋರಿಯ ರೇಂಜ್ ಬೇರೆ ರೀತಿ ಇರುತ್ತೆ. ಎಲ್ಲವನ್ನೂ ಈಗಲೇ ಹೇಳಿದರೆ, ಕುತೂಹಲ ಇರಲ್ಲ. ಸಿನಿಮಾ ಬಂದಮೇಲೆ ಖಂಡಿತವಾಗಿಯೂ ಎಲ್ಲಾ ವರ್ಗಕ್ಕೆ ಇಷ್ಟವಾಗುತ್ತೆ ಎಂಬ ಭರವಸೆ ಕೊಡ್ತೀನಿ ಅಂತಾರೆ ಶಿವತೇಜಸ್.
ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಕ್ಟ್ ಮಾಡೋದಕ್ಕೆ ರೆಡಿಯಂತೆ. ಇದು ಬರೀ ಅಂತೆ ಕಂತೆ ಸುದ್ದಿಯಲ್ಲ ಸ್ವತಃ ಶಿವಣ್ಣ ಅವರೇ ಸುದೀಪ್ ಪಕ್ಕದಲ್ಲಿ ನಿಂತು ಅಧಿಕೃತ ವಾಗಿ ಘೋಷಣೆ ಮಾಡಿರುವ ಸುದ್ದಿ ಇದು.
ಕಿಚ್ಚನ ಕಥೆಗೆ ಶಿವಣ್ಣ ಕ್ಲೀನ್ ಬೋಲ್ಡ್
ಹೌದು, ಕರುನಾಡ ಚಕ್ರವರ್ತಿಯ ‘ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ಕಾರ್ಯಕ್ರಮ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಗೆ ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಿದ್ದರು. ಶಿವಣ್ಣನಿಗೆ ಫಸ್ಟ್ ಕ್ಲಾಪ್ ಮಾಡಿ 124 ನೇ ಚಿತ್ರಕ್ಕೆ ತುಂಬು ಹೃದಯದಿಂದ ಹಾರೈಸಿದರು. ಇದೇ ವೇಳೆ ಹ್ಯಾಟ್ರಿಕ್ ಹೀರೋಗೆ ಸುದೀಪ್ ಒಂದು ಕಥೆ ನರೇಟ್ ಮಾಡಿದ್ದಾರೆ. ಒನ್ ಲೈನ್ ಸ್ಟೋರಿ ಕೇಳಿ ಎಕ್ಸೈಟ್ ಆದ ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಸುದೀಪ್ ನಿರ್ದೇಶನ ಮಾಡಿದರೆ ನಾನು ಆ ಸಿನಿಮಾ ಮಾಡೋದಕ್ಕೆ ರೆಡಿಯಿದ್ದೇನೆ ಎಂದರು.
ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ತೊಡ್ತಾರಾ ಕಿಚ್ಚ
ಶಿವಣ್ಣ ಮಾತು ಮುಗಿಸಿದ್ಮೇಲೆ ಮೈಕ್ ಕೈಗೆತ್ತಿಕೊಂಡ ಸುದೀಪ್ ಅವರು ಶಿವಣ್ಣನ ದೊಡ್ಡತನದ ಬಗ್ಗೆ ಮಾತನಾಡಿದರು. ಒಬ್ಬ ಹೀರೋ ಮತ್ತೊಬ್ಬ ಹೀರೋಗೆ ಡೈರೆಕ್ಟ್ ಮಾಡ್ತೀನಿ ಅಂಗ ಬಂದಾಗ ಸಿನಿಮಾ ಮಾಡೋಕೆ ಬರ್ತಿದ್ದಾನಾ ಅಥವಾ ಹಾಳು ಮಾಡೋಕೆ ಬರ್ತಿದ್ದಾನಾ ಎನ್ನುವ ಯೋಚನೆ ಸಹಜವಾಗಿ ಬರುತ್ತೆ. ಜೊತೆಗೆ ಅವರೇ ಒಬ್ಬ ನಟನಾಗಿ ನನಗ್ಯಾಕೆ ಡೈರೆಕ್ಟ್ ಮಾಡಬೇಕು ಎನ್ನುವ ಥಾಟ್ ಕೂಡ ಫ್ಲ್ಯಾಶ್ ಆಗುತ್ತೆ. ವಾಸ್ತವ ಹೀಗಿರುವಾಗ ಡೈರೆಕ್ಟ್ ಮಾಡಿದರೆ ನಾನು ಆಕ್ಟ್ ಮಾಡ್ತೀನಿ ಅಂತ ಶಿವಣ್ಣ ಹೇಳ್ತಿದ್ದಾರೆ ಅಂದರೆ ಅದು ಅವರ ದೊಡ್ಡಗುಣ ಹಾಗೂ ಸುದೀಪ್ ಮೇಲಿರುವ ನಂಬಿಕೆ ಅಲ್ಲದೇ ಮತ್ತೇನು ಅಲ್ಲ.
ಮಾಣಿಕ್ಯ ನಿರ್ದೇಶನದ ಶಾಂತಿನಿವಾಸದಲ್ಲಿ ಮಿಂಚಿದ್ದಾರೆ ಶಿವಣ್ಣ
ಅಷ್ಟಕ್ಕೂ, ಸುದೀಪ್ ಅದ್ಯಾವ್ ಕಥೆ ಹೇಳಿದರೂ, ಸ್ಟೋರಿ ಲೈನ್ ಹೇಗಿದೆ? ಇದ್ಯಾವ ಬಗ್ಗೆಯೂ ಹೆಚ್ಚಿನ ಡಿಟೈಲ್ಸ್ ಇಲ್ಲ. ಆದರೆ, ಇಬ್ಬರು ಒಂದಾಗಿ ಸಿನಿಮಾ ಸಂದರ್ಭ ಎದುರಾದರೆ ನೂರಕ್ಕೆ ನೂರು ಪರ್ಸೆಂಟ್ ಜೊತೆಯಾಗಿ ಸಿನಿಮಾ ಮಾಡ್ತಾರೆ. ಈಗಾಗಲೇ ಒಮ್ಮೆ ಶಿವಣ್ಣನಿಗೆ ಕಿಚ್ಚ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ನಿರ್ದೇಶಿಸಿ ನಟಿಸಿದ್ದ ಶಾಂತಿನಿವಾಸದಲ್ಲಿ ಹ್ಯಾಟ್ರಿಕ್ ಹೀರೋ ಮಿಂಚಿ ಹೋಗಿದ್ದಾರೆ. ‘ಒಂದು ಒಳ್ಳೆ ಕಥೆಯ ಹೇಳುವೆ’ ಹಾಡಿಗೆ ಸುದೀಪ್ ಹಾಗೂ ಶಿವಣ್ಣ ಒಟ್ಟಿಗೆ ಕಂಠಕುಣಿಸಿದ್ದಾರೆ.
ಈಗಾಗಲೇ, ಜೋಗಿ ಪ್ರೇಮ್ ನಿರ್ದೇಶನದ ಮಲ್ಟಿಸ್ಟಾರರ್ ದಿ ವಿಲನ್ ಚಿತ್ರದಲ್ಲಿ ಧಗಧಗಿಸಿದ್ದಾರೆ. ಮತ್ತೆ ಒಟ್ಟಿಗೆ ಬೆಳ್ಳಿತೆರೆ ಮೇಲೆ ಯಾವಾಗ ಅಬ್ಬರಿಸ್ತಾರೋ ಅಂತ ಫ್ಯಾನ್ಸ್ ಕೂಡ ಕಾತುರರಾಗಿ ಕಾಯ್ತಿದ್ದಾರೆ. ಈ ಮಧ್ಯೆ ಸುದೀಪ್ ನಿರ್ದೇಶನದ- ಶಿವಣ್ಣನ ಅಭಿನಯದ ಧಮಾಕೇದಾರ್ ಸುದ್ದಿ ದೊಡ್ಮನೆ ಫ್ಯಾನ್ಸ್ ಹಾಗೂ ಶಾಂತಿನಿವಾಸದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇಬ್ಬರ ಫ್ಯಾನ್ಸ್ ಹಬ್ಬ ಮಾಡಿ ಸಂಭ್ರಮಿಸುವಂತೆ ಮಾಡಿದೆ. ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳುವ ಗಳಿಗೆಯನ್ನ ಆರಡಿ ಕಟೌಟ್ ಫ್ಯಾನ್ಸ್ ಎದುರು ನೋಡುವಂತಾಗಿದೆ. ಆ ದಿನ. ಆ ಕ್ಷಣ ಆದಷ್ಟು ಬೇಗ ಬರಲಿ. ಬಿಗ್ ಸ್ಕ್ರೀನ್ ಕೂಡ ಸಂಭ್ರಮ ಪಡಲಿ ಅಲ್ಲವೇ..