Categories
ಸಿನಿ ಸುದ್ದಿ

ಬಿಟೌನ್‌ಲ್ಲಿ ಹವಾ ಎಬ್ಬಿಸ್ತಾರಾ ಕಿರಿಕ್‌ ಹುಡುಗಿ

 ಟೀಚರಮ್ಮನ ಹೊಸ ಕ್ಲಾಸು ಶುರು ಗುರು…

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸುದ್ದಿಯಲ್ಲಿರುವ ಹುಡುಗಿ. ಕನ್ನಡದ ಈ ಹುಡುಗಿ ಕನ್ನಡ ಚಿತ್ರರಂಗದ ಮೂಲಕ ಇದೀಗ ಇಡೀ ಭಾರತ ಚಿತ್ರರಂಗದಲ್ಲೇ ಒಂದು ರೌಂಡ್‌ ಸುತ್ತಿದ್ದಾರೆ. ಹೌದು, ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ, ಟಾಲಿವುಡ್‌, ಕಾಲಿವುಡ್‌ ಜೊತೆಗೆ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. “ಕಿರಿಕ್‌ ಪಾರ್ಟಿ” ಚಿತ್ರದ ಮೂಲಕ ಕನ್ನಡ ಸಿನಿಲೋಕಕ್ಕೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್‌ ಕ್ರಶ್‌ ಅಂದರೆ ತಪ್ಪಿಲ್ಲ. ಇವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.

ಅದರಲ್ಲೂ ಪಡ್ಡೆಗಳಿಗೆ ಹಾಟ್‌ ಫೇವರೇಟ್‌ ಈ ಕೊಡಗಿನ ಬೆಡಗಿ. ಗೀತಾ, ಸಾನ್ವಿ, ಖುಷಿ… ಹೀಗೆ ಇವರ ಪಾತ್ರಗಳು ತಮ್ಮ ಸಿನಿಬದುಕಿನ ದಿಕ್ಕನ್ನೇ ಬದಲಿಸಿದ್ದು ನಿಜ. ಮೆಲ್ಲನೆ, ಸ್ಟಾರ್‌ ನಟರ ಜೊತೆಯಲ್ಲೇ ಪರದೆ ಮೇಲೆ ರಾರಾಜಿಸುವ ಅವಕಾಶ ಪಡೆದು ಸೈ ಎನಿಸಿಕೊಂಡಿರುವ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಒಂದಷ್ಟು ಸೌಂಡು ಮಾಡೋಕೆ ಹೊರಟಿದ್ದಾರೆ. ಅಂದಹಾಗೆ, ಫೆಬ್ರವರಿ ೧೯ರಂದು ಧ್ರುವಸರ್ಜಾ ಅಭಿನಯದ “ಪೊಗರು” ರಿಲೀಸ್‌ ಆಗುತ್ತಿದೆ.

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಹಾಗೆ ನೋಡಿದರೆ, ಈ ಚಿತ್ರ, ಲಾಕ್ ಡೌನ್ ಮುಂಚೆಯೇ ಬಿಡುಗಡೆಯಾಗಬೇಕಿತ್ತು. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಚಿತ್ರ ತಡವಾಗಿದ್ದು, ಈಗ ಬಿಡುಗಡೆಗೆ ದಿನ ಎಣಿಸುತ್ತಿದೆ ಚಿತ್ರತಂಡ. ಅಂದಹಾಗೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಟೀಚರ್ ಪಾತ್ರ ಮಾಡಿದ್ದಾರೆ. ಅದೊಂದು ಹಳ್ಳಿ ಹುಡುಗಿಯಾಗಿ, ಟ್ರೆಡಿಶನಲ್ ಲುಕ್ನಲ್ಲಿ ತೆರೆ ಮೇಲೆ ಕಾಣಿಸ್ಕೊತಿದ್ದಾರೆ.

ಪುರೋಹಿತರ ಮಗಳಾಗಿ ನಟಿಸುತ್ತಿರುವ ಅವರು, ಒಂದು ಪ್ರೀತಿಗೆ ಸಿಲುಕುತ್ತಾರೆ. ನಂತರ ಅವರಿಗೆ ಆಗುವಂತಹ ಸಮಸ್ಯೆ ಏನು ಎಂಬುದೇ ಚಿತ್ರದ ಕಥಾಹಂದರ. ಸದ್ಯಕ್ಕೆ ಜೋರು ಸುದ್ದಿಯಲ್ಲಿರುವ ರಶ್ಮಿಕಾ ಅವರಿಗೂ “ಪೊಗರು” ಮೇಲೆ ಎಲ್ಲಿಲ್ಲದ ಭರವಸೆ ಇದೆ. ಸಿನಿಮಾ ದೊಡ್ಡ ಹಿಟ್‌ ಕೊಡುತ್ತದೆ ಎಂಬ ವಿಶ್ವಾಸವೂ ಅವರಿಗಿದೆ. ಇನ್ನು, ಅವರಿಗೆ ಹೊಸ ತಂಡದವರ ಜೊತೆ ಕೆಲಸ ಮಾಡುವುದು ಸಿಕ್ಕಾಪಟ್ಟೆ ಖುಷಿಯಂತೆ. “ಪೊಗರು” ಚಿತ್ರದಲ್ಲಿ ಸಾಕಷ್ಟು ಕಲಿತ ಬಗ್ಗೆ ಹೇಳುವ ರಶ್ಮಿಕಾ ಮಂದಣ್ಣ, ಒಂದೊಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಹೆಮ್ಮೆ ನನ್ನದು ಎನ್ನುತ್ತಾರೆ.

Categories
ಸೌತ್‌ ಸೆನ್ಸೇಷನ್

ಲವ್ ಮೂಡ್‌ನಲ್ಲಿ ‘ಬಾಹುಬಲಿ’ ಹೀರೋ!

ಪ್ರಭಾಸ್ ‘ರಾಧೆ ಶ್ಯಾಮ್‌’ ಪ್ರೀ-ಟೀಸರ್‌ ಔಟ್‌

ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ತೆಲುಗು, ಹಿಂದಿ ಚಿತ್ರದ ಪ್ರೀ-ಟೀಸರ್ ವೀಡಿಯೋ ಬಿಡುಗಡೆಯಾಗಿದೆ. ರಾಧಾಕೃಷ್ಣ ಕುಮಾರ್ ನಿರ್ದೇಶನದ ಈ ದ್ವಿಭಾಷಾ ಸಿನಿಮಾದ ಟೀಸರ್ ಇದೇ ಫೆಬ್ರವರಿ 14ರ ವ್ಯಾಲೆಂಟೇನ್‌ ದಿನ ಬಿಡುಗಡೆಯಾಗಲಿದೆ.‌

ಇದಕ್ಕೆ ಪೂರಕವಾಗಿ ಇಂದು ಚಿತ್ರತಂಡ ಪ್ರೀ-ಟೀಸರ್ ವೀಡಿಯೋ ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ “ಬಾಹುಬಲಿ” ಮತ್ತು “ಸಾಹೋ” ಚಿತ್ರಗಳ ವೀಡಿಯೋ ಕ್ಲಿಪಿಂಗ್‌ಗಳು ಹಾದು ಹೋಗುತ್ತವೆ. ಅಲ್ಲಿ ಆಕ್ಷನ್ ಹೀರೋ ಆಗಿ ಪ್ರಭಾಸ್‌ರನ್ನು ನೋಡಿದ್ದ ಪ್ರೇಕ್ಷಕರು ‘ರಾಧೆ ಶ್ಯಾಮ್‌’ ಚಿತ್ರದಲ್ಲಿ ಬೇರೆಯದ್ದೇ ರೀತಿ ನೋಡಲಿದ್ದಾರೆ ಎನ್ನುವ ಸಂದೇಶ ವೀಡಿಯೋದಲ್ಲಿದೆ.

ಮಂಜುಮುಸುಕಿದ ತಿಳಿ ಬೆಳಕು, ಹಿನ್ನಲೆಯಲ್ಲಿ ಮಧುರ ಸಂಗೀತದೊಂದಿಗೆ ನಡೆದು ಹೋಗುವ ಪ್ರಭಾಸ್‌ ವೀಡಿಯೋ ತುಣುಕು ಕಾಣಿಸುತ್ತದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸಿನಿಮಾ 2021ರ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ರಿಲೀಸ್ ಡೇಟ್ ಇನ್ನೂ ಪಕ್ಕಾ ಆಗಿಲ್ಲ.

ಹಿಂದಿ ಮತ್ತು ತೆಲುಗು ಎರಡೂ ಭಾ‍ಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ಇದ್ದಾರೆ ಎನ್ನುವುದು ವಿಶೇಷ. ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ಉತ್ತರ ಭಾರತದ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿಲ್ಲ. ‘ರಾಧೆ ಶ್ಯಾಮ್‌’ ಮತ್ತು ಪ್ರಶಾಂತ್ ನೀಲ್‌ ನಿರ್ದೇಶನದ ‘ಸಲಾರ್‌’ ಚಿತ್ರಗಳು ಅವರಿಗೆ ಉತ್ತರ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ದೊರಕಿಸಿಕೊಡಲಿವೆ ಎನ್ನಲಾಗುತ್ತಿದೆ.

Categories
ಸಿನಿ ಸುದ್ದಿ

ಡಾಕ್ಟರ್‌ ಅಭಿಗೆ ಧ್ರುವ ಹಾರೈಕೆ

ಹೊಸಬರ ಹೊಸ ಚಿತ್ರದ ಫಸ್ಟ್‌ಲುಕ್‌ ರಿಲೀಸ್

ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಪೈಕಿ “ಡಾ. |ಅಭಿ ೦೦7” ಚಿತ್ರವೂ ಸೇರಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್‌ ಅನ್ನು, ಧ್ರುವ ಸರ್ಜಾ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಅಂದಹಾಗೆ, ಈ ಚಿತ್ರಕ್ಕೆ ವಿಷ್ಣು ಹೀರೋ. ಈ ಚಿತ್ರದ ಮೂಲಕ ವಿಷ್ಣು ಅವರು ಪೂರ್ಣ ಪ್ರಮಾಣದ ಹೀರೋ ಆಗಿ ಸಿನಿರಂಗ ಪ್ರವೇಶಿಸಿದ್ದಾರೆ. ‌ಈ ಹಿಂದೆ ದರ್ಶನ್‌ ಅಭಿನಯದ “ಜಗ್ಗುದಾದಾ” ಚಿತ್ರದಲ್ಲಿ ವಿಷ್ಣು ಕಾಣಿಸಿಕೊಂಡಿದ್ದರು. ಡಾಕ್ಟರ್‌ ಆಗಿರುವ ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಕೆಲವು ವೆಬ್‌ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕ‌‌‌ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇವರಿಗಿದೆ.‌‌ ಇದು ವೆಂಕಟೇಶ್ ಪ್ರಸಾದ್‌ಅವರ ಮೊದಲ ನಿರ್ದೇಶನದ ಚಿತ್ರ.

ಅಂದಹಾಗೆ, ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮೂರು ‌ಹಾಡುಗಳಿಗೆ ಯು.ವಿ. ಸ್ಟೆವೆನ್‌ ಸತೀಶ್ ಸಂಗೀತ ನೀಡಲಿದ್ದಾರೆ. ಚೇತನ್ ಕುಮಾರ್ ಸಾಹಿತ್ಯವಿದೆ. ಇನ್ ಫೆಂಟ್ ಭರತ್ ಕ್ಯಾಮೆರಾ ಹಿಡಿದರೆ, ಅರುಣ್ ರೈ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.‌

ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಡಾ. ಸುಮಿತ್ ತಲ್ವಾರ್ ಇತರರು ಇದ್ದಾರೆ. ಈಗಾಗಲೇ 35 ದಿನಗಳ ಕಾಲ‌ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15‌ ದಿನಗಳ‌ ಚಿತ್ರೀಕರಣ ಬಾಕಿಯಿದೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಮನೆಗೆ ವೈಷ್ಣವಿ – ಫ್ಯಾನ್ಸ್‌ ಪ್ರಶ್ನೆಗೆ ಟ್ವೀಟ್‌ನಲ್ಲಿ ಉತ್ತರ

ವೈಷ್ಣವಿ  ‌ ಹೇಳೋದಿಷ್ಟು?

ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ ಅಂದರೆ ಅದು ʼಬಿಗ್‌ಬಾಸ್”…‌
ಹೌದು, ಯಾರಿಗೆ ತಾನೇ ಆ ದೊಡ್ಡ ಮನೆಯ ಸುದ್ದಿಯನ್ನು ಇಷ್ಟಪಡಲ್ಲ ಹೇಳಿ. ಅದರಲ್ಲೂ ಆ ಮನೆಯೊಳಗೆ ಈ ಬಾರಿ ಯಾರೆಲ್ಲ ಹೋಗ್ತಾರೆ ಅನ್ನುವ ಕುತೂಹಲ ಸಾಕಷ್ಟು ಇದೆ. ಆದರೂ, ಬಿಗ್‌ಬಾಸ್‌ ಮನೆಗೆ ಹೋಗಲು ತುದಿಗಾಲ ಮೇಲೆ ನಿಂತವರ ಸಾಲು ದೊಡ್ಡದೇ ಇದೆ. ಅದೇನೆ ಇದ್ದರೂ, ಸುದೀಪ್ ಕೈಯಲ್ಲಿ ಈಗಾಗಲೇ ಯಾರೆಲ್ಲಾ ಆ ಮನೆಗೆ ಪ್ರವೇಶಿಸುತ್ತಾರೆ ಅನ್ನೋ ಒಂದು ಪಟ್ಟಿಯೂ ಇದೆ ಎಂಬ ಸುದ್ದಿ ಇದೆ.

ಬಿಗ್‌ಬಾಸ್‌ ಆಯೋಜಕರು ಈಗಾಗಲೇ ಒಂದು ಪಟ್ಟಿ ರೆಡಿ ಮಾಡಿ ಇನ್ನೇನು ಶುರು ಮಾಡಲು ತಯಾರಾಗಿದ್ದಾರೆ. ಈ ಬಾರಿ ಕಾಮನ್‌ ಮ್ಯಾನ್‌ ಇರೋದಿಲ್ಲ ಎಂಬ ಮಾತು ಕೇಳಿಬಂದಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸತ್ಯ ಅನ್ನುವುದನ್ನು ಬಿಗ್‌ಬಾಸ್‌ ಮನೆಯಲ್ಲಿ ಕಾಣುವ ಸ್ಪರ್ಧಿಗಳ ಮೇಲೆ ನಿರ್ಧಾರವಾಗಿದೆ.  ಅದೆಲ್ಲಾ ಸರಿ, ಈಗ ಬಿಗ್‌ಬಾಸ್‌ ಕಥೆ ಬಗ್ಗೆ ಹೇಳೋಕೆ ಕಾರಣ, ಕಿರುತೆರೆಯಲ್ಲಿ ಸುದ್ದಿ ಮಾಡಿರುವ ನಟಿ ವೈಷ್ಣವಿಗೌಡ ಬಿಗ್‌ಬಾಸ್‌ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಈಗಾಗಲೇ ಬಿಗ್‌ಬಾಸ್‌ ಮನೆಗೆ ಹೋಗುವ ಸ್ಪರ್ಧಿಗಳ ಹೆಸರು ಆ ಪಟ್ಟಿಯಲ್ಲಿದೆ. ವೈಷ್ಣವಿ ಹೆಸರೂ ಕೂಡ ಸೇರಿದೆ ಎಂಬುದೇ ಈ ಹೊತ್ತಿನ ಸುದ್ದಿ. ಆದರೆ, ನಿಜವಾಗಿಯೂ ವೈಷ್ಣವಿಗೌಡ ಬಿಗ್‌ಬಾಸ್‌ ಮನೆಗೆ ಬಲಗಾಲಿಟ್ಟು ಪ್ರವೇಶ ಮಾಡುತ್ತಾರಾ?  ಈ ಕುರಿತಂತೆ ಸಾಕಷ್ಟು ಪ್ರಶ್ನೆಗಳಿವೆಯಾದರೂ, ಸ್ವತಃ ವೈಷ್ಣವಿಗೌಡ ಅವರೇ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಒಂದಷ್ಟು ಸುದ್ದಿಗಳು ಹರಿದಾಡಿದ್ದೇ ತಡ, ವೈಷ್ಣವಿ ಗೌಡ, ತಮ್ಮ ಟ್ವೀಟ್‌ನಲ್ಲಿ ನನಗೂ ಬಿಗ್‌ಬಾಸ್‌ ಮನೆಗೆ ಹೋಗಲು ಆಪರ್‌ ಬಂದಿತ್ತು. ಆದರೆ, ನಾನು ಹೋಗುತ್ತಿಲ್ಲ. ನನ್ನ ಕೈಯಲ್ಲಿ ಒಂದಷ್ಟು ಚಿತ್ರಗಳಿವೆ” ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ವೈಷ್ಣವಿಗೌಡ ಬಿಗ್‌ಬಾಸ್‌ ಮನೆಯ ಪ್ರವೇಶದ ವಿಷಯ ಪಕ್ಕಕ್ಕೆ ಸರಿದಂತಾಗಿದೆ.

Categories
ಸಿನಿ ಸುದ್ದಿ

ನಟಿ ಶ್ರದ್ಧಾ ಮದ್ವೆ!

ಟ್ವೀಟ್‌ನಲ್ಲಿ ಸ್ಪಷ್ಟನೆ ಕೊಟ್ಟ ಶ್ರದ್ಧಾ ಕಪೂರ್‌

– ಅರೇ ಇದೇನಪ್ಪಾ ಶ್ರದ್ಧಾ ಕಪೂರ್‌ ಮದ್ವೆ ಆಯ್ತಾ?
ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಸಿನಿಮಾ ನಟಿಮಣಿಗಳು ಅಂದರೆ, ಒಂದಷ್ಟು ಗಾಸಿಪ್‌ ಇರದೇ ಇದ್ದರೆ ಹೇಗೆ. ಇದೂ ಕೂಡ ಅಂಥದ್ದೇ ಒಂದು ಸುದ್ದಿ. ಹೌದು, ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಇದಾರಲ್ಲ, ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಪಡ್ಡೆ ಹುಡುಗರ ಹಾಟ್‌ ಫೇವರೇಟ್‌. ಸಾಲು ಸಾಲು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿರುವ ಈ ನಟಿಗೆ ಸಾಕಷ್ಟು ಹುಡುಗರೇ ಫ್ಯಾನ್ಸ್‌ ಇದ್ದಾರೆ.

ನಟ ವರುಣ್‌ ಧವನ್‌ ಮದುವೆಯಾದ ಬೆನ್ನಲ್ಲೇ ಈಗ ಶ್ರದ್ಧಾ ಕಪೂರ್‌ ವಿವಾಹದ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ. ಹೌದು ಹೆಚ್ಚಿನ ಬಾಲಿವುಡ್‌ ನಟಿಮಣಿಯರು ಮದುವೆಯಾಗ್ತಿದ್ದಾರೆ, ನಾನು ಮದುವೆಯ ವಿಚಾರದಲ್ಲಿ ಪಕ್ಕಾ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.


ಈ ನಟಿ ರೋಹನ್‌ ಶ್ರೇಷ್ಠ ಛಾಯಾಗ್ರಾಫರ್‌ ಒಬ್ಬರ ಜೊತೆ ಡೇಟಿಂಗ್‌ ಮಾಡ್ತಿದ್ದಾರೆ ಎಂಬ ಸುಳಿವು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ಮದುವೆ ಸುದ್ದಿಯೂ ಹರಡಿದೆ. ಅದಕ್ಕಾಗಿ ಶ್ರದ್ಧಾ ಕಪೂರ್‌ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ. ಇವೆಲ್ಲದ ಜೊತೆಗೆ ಶ್ರದ್ಧಾ ಕಪೂರ್‌ ತನ್ನ ಇನ್ಸ್ಟಾಗ್ರಾಂನಲ್ಲಿ ಒಂದಷ್ಟು ಹಾಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೆ ಮಹಾಲಕ್ಷ್ಮೀ ಕೃಪೆ

ದಶಕಗಳ ಬಳಿಕ ಕನ್ನಡಕ್ಕೆ ಬರಲಿರುವ ಸ್ವಾಭಿಮಾನದ ಹೆಣ್ಣು

ಒಂದು ಕಾಲದಲ್ಲಿ ಸಿನಿಮಾ ಜಗತ್ತಿನಲ್ಲಿ ಮಿಂಚಿದ್ದ ನಟಿ ಮಹಾಲಕ್ಷ್ಮಿ ಈಗ ಮತ್ತೆ ಸಿನಿಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ಇದೊಂದು ವಿಶೇಷ ಸುದ್ದಿಯೇ. ಒಂದು ದಶಕದ ಕಾಲ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಾಗಿ ಸುಮ್ಮನಾದ ಅದ್ಭುತ ನಟಿ ಇವರು. ನಿರ್ದೇಶಕ ರವಿ ಶ್ರೀವತ್ಸ ಅವರು ಹಿರಿಯ ನಟಿ ಮಹಾಲಕ್ಷ್ಮಿ ಅವರನ್ನು ಕನ್ನಡಕ್ಕೆ ಪುನಃ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ನಿಜವೂ ಹೌದು. ಹಲವು ವರ್ಷಗಳ ಬಳಿಕ ಮಹಾಲಕ್ಷ್ಮಿ ಇದೀಗ, ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಂಬುದು ಸುದ್ದಿ.

ಮಹಾಲಕ್ಷ್ಮಿ ಅಂದಾಕ್ಷಣ, ಸದಾ ಕಣ್ಣೀರಿಡುವ, ಎಲ್ಲರನ್ನೂ ಕಾಡುವ ನಟಿಯ ಛಾಯೆ ಕಣ್ಮುಂದೆ ಬರುತ್ತದೆ. “ಬಾರೆ ಮುದ್ದಿನ ರಾಣಿ”, “ಸ್ವಾಭಿಮಾನ”, “ಮದುವೆ ಮಾಡು ತಮಾಷೆ ನೋಡು”, “ತಾಯಿ ಕೊಟ್ಟ ತಾಳಿ”, “ಜಯಸಿಂಹ”, “ಬ್ರಹ್ಮ ವಿಷ್ಣು ಮಹೇಶ್ವರ”, “ಪರಶುರಾಮ”, “ಹೆಂಡ್ತೀಗೆ ಹೇಳ್ಬೇಡಿ”, “ಮನೇಲಿ ಇಲಿ ಬೀದಿಲಿ ಹುಲಿ” ಸೇರಿದಂತೆ ಒಂದಷ್ಟು ಸಿನಿಮಾಗಳು ಜನಮನಸೂರೆಗೊಂಡಿದ್ದವು.

ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲೇ ಯಶಸ್ವಿ ನಟಿ ಎನಿಸಿಕೊಂಡ ಮಹಾಲಕ್ಷ್ಮಿ, ಉತ್ತುಂಗದ ಕಾಲದಲ್ಲಿರುವಾಗಲೇ ಚಿತ್ರರಂಗದಿಂದ ಸ್ವಲ್ಪ ದೂರವಾದರು. “ದುರ್ಗಾಷ್ಟಮಿ” ಬಳಿಕ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬಹುತೇಕರಿಗೆ ಮಹಾಲಕ್ಷ್ಮಿ ಅವರ ಸುದ್ದಿಯೇ ಇರಲಿಲ್ಲ. ಅವರ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದರು. ಇದೀಗ ಅವರು ಪುನಃ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡುವ ಸುದ್ದಿ ತಿಳಿದು ಹಿರಿಹಿರಿ ಹಿಗ್ಗುತ್ತಿದ್ದಾರೆ. ಇಷ್ಟು ವರ್ಷ ಮನೆ, ಮಕ್ಕಳು ಅಂತ ಬಿಝಿಯಾಗಿದ್ದರು. ಆ ಕುರಿತಂತೆ ಅವರೇ ಹೇಳಿದ್ದು “ಫ್ಯಾಮಿಲಿಗೋಸ್ಕರ ಕೆಲಸ ಅಂತ ಮಾಡಲೇಬೇಕು. ಇದರಿಂದ ಜವಾಬ್ದಾರಿ ಹೆಚ್ಚಾಗುತ್ತೆ, ಮಕ್ಕಳು ಬೆಳೆದಿದ್ದಾರೆ. ನನ್ನ ಉತ್ಸಾಹ ಹಾಗೆಯೇ ಇದೆ” ಅಂತ ಹೇಳಿಕೊಂಡಿದ್ದೂ ಉಂಟು. ಅದೇನೆ ಇರಲಿ, ಇದೀಗ ಮಹಾಲಕ್ಷ್ಮೀ ಅವರು ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಆದಷ್ಟು ಬೇಗ ಅವರು ತೆರೆಗೆ ಬರುವಂತಾಗಲಿ ಅನ್ನೋದು ಕೂಡ “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ರೆಡ್‌ ಗರ್ಲ್!‌ ರಂಜಿನಿ ಫುಲ್‌ ಮಿಂಚಿಂಗ್

ಕೆಂಪಾದ ಕನ್ನಡತಿ…

ಕಿರುತೆರೆ ಮೂಲಕ ಜೋರು ಸುದ್ದಿಯಾಗಿರುವ ರಂಜಿನಿ ರಾಘವನ್‌, ಈಗಂತೂ ಸದಾ ಸುದ್ದಿಯಲ್ಲೇ ಇರುತ್ತಾರೆ. ಸದ್ಯಕ್ಕೆ “ಕನ್ನಡತಿ” ಧಾರಾವಾಹಿಯ ಆಕರ್ಷಣೆ ಎನಿಸಿರುವ ರಂಜಿನಿ ರಾಘವನ್‌, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ದಿಗಂತ್‌ ಜೊತೆ ಜೋಡಿಯಾಗಿರುವ ರಂಜಿನಿಯ ಆ ಚಿತ್ರವೀಗ ಮುಗಿದಿದ್ದು, ಬಿಡುಗಡೆಯ ತಯಾರಿಯಲ್ಲಿದೆ. ಸದ್ಯಕ್ಕೆ ರಂಜಿನಿಯಂತೂ ಕಿರುತೆರೆ, ಹಿರಿತೆರೆಯಲ್ಲಿ ಸದಾ ಸುದ್ದಿಯಾಗುತ್ತಲೇ ಇದ್ದಾರೆ. ಅಪ್ಪಟ ಕನ್ನಡತಿಯಾಗಿರುವ ರಂಜಿನಿ, ಸದ್ಯ ಕೆಂಪು ಕೆಂಪಾಗಿದ್ದಾರೆ!

ಅರೇ, ಇದೇನಪ್ಪಾ ಕೆಂಪು ಕೆಂಪಾಗಿದ್ದಾರೆ ಅಂತೆಲ್ಲಾ ಮಾತುಗಳು ಕೇಳಿಬರುತ್ತಿದೆ ಎಂಬ ಪ್ರಶ್ನೆ ಎದುರಾಗಬಹುದು. ಕೆಂಪೆಂದರೆ, ಕೆಂಪಲ್ಲ. ಆವರು ರೆಡ್‌ ಕಲರ್‌ ಟಾಪ್‌ ಹಾಕ್ಕೊಂಡ್‌ ಹಾಗೊಂದು ಫೋಸು ಕೊಟ್ಟಿರುವ ಫೋಟೋ ಸಖತ್‌ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೇನು ವ್ಯಾಲಂಟೈನ್ಸ್‌ ಡೇ ಕೂಡ ಹತ್ತಿರ ಬರುತ್ತಿದೆ. ಅವರ ಈ ರೆಡ್‌ ಟಾಪ್‌ ಫೋಸ್‌ ನೋಡಿದರೆ ಲವರ್ಸ್‌ ಡೇಯನ್ನು ಸಖತ್‌ ಆಗಿಯೇ ಸ್ವಾಗತಿಸಲು ಸಜ್ಜಾದಂತಿದೆ. ಅದೇನೆ ಇರಲಿ, ರಂಜಿನಿ ಈಗ ಪಡ್ಡೆ ಹುಡುಗರ ಹಾಟ್‌ಫೇವರೇಟ್‌ ಅನ್ನೋದಂತೂ ಹೌದು.

Categories
ಸೌತ್‌ ಸೆನ್ಸೇಷನ್

ಇಳಯರಾಜರ ಹೊಸ ಮ್ಯೂಸಿಕ್‌ ಸ್ಟುಡಿಯೋ

ವೆಟ್ರಿಮಾರನ್ ನಿರ್ದೇಶನದ ಚಿತ್ರಕ್ಕೆ ಮೊದಲ ಹಾಡು ಕಂಪೋಸ್ ಶುರು

ಭಾರತದ ಸಿನಿಮಾ ಸಂಗೀತ ಮಾಂತ್ರಿಕ ಇಳಯರಾಜ ಅವರೀಗ ಹೊಸದೊಂದು ಮ್ಯೂಸಿಕ್‌ ಸ್ಟುಡಿಯೋ ಶುರು ಮಾಡಿದ್ದಾರೆ. ಅವರ ನೂತನ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ನಿರ್ದೇಶನದಲ್ಲಿ ವಿಜಯ್‌ ಸೇತುಪತಿ, ಸೂರಿ ನಟಿಸಲಿರುವ ಚಿತ್ರಕ್ಕೆ ಮೊದಲ ಹಾಡು ಸಂಯೋಜಿಸಿದ್ದಾರೆ.

ಆ ಹಾಡು ಸಂಯೋಜನೆ ವೇಳೆ ನಟರು ಸಾಕ್ಷಿಯಾಗಿದ್ದು ವಿಶೇಷ. “ನಾವೆಲ್ಲಾ ಇಳಯರಾಜ ಅವರ ಸಂಗೀತ ಆಲಿಸುತ್ತಾ ಬೆಳೆದವರು. ಮೊದಲ ಬಾರಿ ನನ್ನ ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಅದರಲ್ಲೂ ಅವರ ಹೊಸ ಸ್ಟುಡಿಯೋದಲ್ಲಿ ನನ್ನ ಚಿತ್ರಕ್ಕಾದ ಸಂಯೋಜನೆಯೇ ಮೊದಲನೆಯದ್ದು! ಇದು ನಮಗೆಲ್ಲರಿಗೂ ಖುಷಿ, ಅದೃಷ್ಟದ ಸಂಗತಿ” ಅಂತ ನಿರ್ದೇಶಕ ವೆಟ್ರಿಮಾರನ್‌ ಹೇಳಿಕೊಂಡಿದ್ದಾರೆ.


ಈ ಮೊದಲು ಇಳಯರಾಜ ಪ್ರಸಾದ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜನೆಯ ಕಾಯಕ ನಡೆಸುತ್ತಿದ್ದರು. ಖ್ಯಾತ ತಂತ್ರಜ್ಞ ಎಲ್‌.ವಿ.ಪ್ರಸಾದ್ ಅವರು ಇಳಯರಾಜ ಅವರಿಗೆ ತಮ್ಮ ಸ್ಟುಡಿಯೋದಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಇಳಯರಾಜ ಕೂಡ ಇದು ತಮಗೆ ‘ಅದೃಷ್ಟವಂತ ಜಾಗ’ ಎಂದೇ ನಂಬಿದ್ದರು. ಇದೀಗ ಆಡಳಿತ ಮಂಡಳಿ ನಿರ್ಧಾರದಂತೆ ಪ್ರಸಾದ್ ಸ್ಟುಡಿಯೋ ನೆಲಸಮವಾಗುವ ಸೂಚನೆ ಇದೆ. ಹಾಗಾಗಿ ಇಳಯರಾಜ ಕೋಡಂಬಾಕಂನಲ್ಲಿ ಸ್ವಂತಕ್ಕೊಂದು ಭವ್ಯ ಸ್ಟುಡಿಯೋ ಆರಂಭಿಸಿದ್ದಾರೆ.

ಹೊಸ ಸ್ಟುಡಿಯೋದಲ್ಲಿ ತಮ್ಮ ಚಿತ್ರದ ಹಾಡು ಮೊದಲ ಸಂಯೋಜನೆ ಎನ್ನುವ ಸಂಗತಿ ನಟ ವಿಜಯ್ ಸೇತುಪತಿ ಅವರಿಗೂ ಖುಷಿ ಕೊಟ್ಟಿದೆ. “ನಾನು ಬಹುವಾಗಿ ಆರಾಧಿಸುವ ಸಂಗೀತ ಸಂಯೋಜಕ ನನ್ನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ” ಅಂತ ವಿಜಯ್ ಸೇತುಪತಿ ಹೇಳಿದ್ದಾರೆ.

Categories
ಸೌತ್‌ ಸೆನ್ಸೇಷನ್

ರೈತರ ಉಗ್ರ ಪ್ರತಿಭಟನೆ ಎಫೆಕ್ಟ್‌ – ಒಳ್ಳೇ ನಿರ್ಧಾರ ಕೈಗೊಳ್ಳಿ ಎಂದ ಸಲ್ಲು

ನಿಲುವು ಸ್ಪಷ್ಟಪಡಿಸಲು ಸ್ಟಾರ್ಸ್‌ ಮೇಲೆ ಒತ್ತಡ!

ಪ್ರಶ್ನೆಗಳಿಗೆ  ಸ್ಟಾರ್ಸ್ ತಬ್ಬಿಬ್ಬು

ದೇಶಾದ್ಯಂತ ನಡೆಯುತ್ತಿರುವ ರೈತ ಪ್ರತಿಭಟನೆ ಈಗ ಸಿನಿಮಾ ತಾರೆಯರಿಗೂ ತಟ್ಟಿದೆ. ಪಾಪ್‌ ಸ್ಟಾರ್‌ ರಿಹಾನಾರ ಟ್ವೀಟ್‌ ನಂತರದ ಬೆಳವಣಿಗೆಗಳಿವು ಅನ್ನೋದೇ ವಿಶೇಷ. ರೈತರ ಪರವಾಗಿ ದನಿ ಎತ್ತಿದ ರಿಹಾನಾಗೆ ಪ್ರತಿಕ್ರಿಯಿಸುವಂತೆ ಬಾಲಿವುಡ್‌ನ ಕೆಲವು ಸ್ಟಾರ್ ಹೀರೋಗಳು ಟ್ವೀಟ್ ಮಾಡಿದ್ದರು. ನಟಿ ಕಂಗನಾ ಒಂದು ಹೆಜ್ಜೆ ಮುಂದೆ ಹೋಗಿ ರಿಹಾನಾರ ಆಕ್ಷೇಪಾರ್ಹ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದೂ ಆಯ್ತು. ಈ ವಿಚಾರವಾಗಿ ನಟಿ ತಾಪಸಿಪನ್ನು ತಮ್ಮ ಕಾಳಜಿಯನ್ನು ಟ್ವೀಟ್‌ನೊಂದಿಗೆ ಹಂಚಿಕೊಂಡರು. ಅವರೊಂದಿಗೆ ಮತ್ತಷ್ಟು ನಟ-ನಟಿಯರು ಸೇರಿಕೊಂಡರು. ಇದೀಗ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ತಾರೆಯರ ಮೇಲೆ ಒತ್ತಡ ಬಿದ್ದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರಿಗೆ ಈ ಕುರಿತಂತೆ ಪ್ರಶ್ನೆಗಳು ಎದುರಾಗುತ್ತಿವೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ ಕೂಡ ಮುಂಬಯಿಯಲ್ಲಿ ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆಗ ರೈತರ ಪ್ರತಿಭಟನೆ, ಕೇಂದ್ರದ ಕೃಷಿ ನೀತಿ ಕುರಿತಂತೆ ಅವರಿಗೆ ಒಂದಷ್ಟು ಪ್ರಶ್ನೆಗಳು ಎದುರಾದವು. ಪ್ರಶ್ನೆಗಳಿಗೆ ಉತ್ತರಿಸಲು ಸಲ್ಮಾನ್‌ ಒಲ್ಲೆ ಎಂದರೂ ಪತ್ರಕರ್ತರು ಬಿಲ್‌ಕುಲ್‌ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದ ಸಲ್ಮಾನ್‌, “ಈ ವಿಚಾರವಾಗಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವಂತಾಗಲಿ. ಎಲ್ಲರಿಗೂ ಒಳಿತಾಗುವಂತಾಗಲಿ” ಎಂದು ಸೂಕ್ಷ್ಮವಾಗಿ ಹೇಳುವ ಮೂಲಕ ನುಣುಚಿಕೊಂಡಿದ್ದಾರೆ.


ಇದೀಗ ದಕ್ಷಿಣ ಭಾರತದಲ್ಲಿ ತಮಿಳು, ತೆಲುಗು ಚಿತ್ರರಂಗದ ತಾರೆಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿ ಎನ್ನುವ ಚರ್ಚೆ ಶುರುವಾಗಿದೆ. ನಟ-ನಟಿಯರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಒತ್ತಡ ಹೇರುತ್ತಿದ್ದಾರೆ. ಇದು ತಾರೆಯರಿಗೀಗ ನುಂಗಲಾರದ ತುತ್ತಾಗಿದೆ. “ತಮ್ಮ ‘ಮಹರ್ಷಿ’ ತೆಲುಗು ಚಿತ್ರದಲ್ಲಿ ನಟ ಮಹೇಶ್ ಬಾಬು ರೈತರ ಕುರಿತ ಕಾಳಜಿಯ ಕಥೆ ಮಾಡಿದ್ದರು. ಈಗ ಡೆಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲಿ” ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟನನ್ನು ಪ್ರಶ್ನಿಸಿದ್ದಾರೆ.


ಟಾಲಿವುಡ್ ಸ್ಟಾರ್ ಹೀರೋಗಳಾದ ಪ್ರಭಾಸ್, ಜ್ಯೂನಿಯರ್ ಎನ್‌ಟಿಆರ್‌, ಅಲ್ಲು ಅರ್ಜುನ್‌ ಅಭಿಮಾನಿಗಳೂ ಈ ಬಗ್ಗೆ ತಮ್ಮ ನೆಚ್ಚಿನ ತಾರೆಯರ ನಿಲುವುಗಳಿಗಾಗಿ ಕಾಯುತ್ತಿದ್ದಾರೆ. ಮತ್ತೊಂದೆಡೆ ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ನಟ ಚಿರಂಜೀವಿ ಅವರನ್ನೂ ಇದು ಸಂದಿಗ್ಧಕ್ಕೆ ಸಿಲುಕಿಸಿದೆ. ಕಾಲಿವುಡ್‌ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿ ಪ್ರಮುಖ ತಾರೆಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವಂತಾಗಿದೆ.

Categories
ಆಡಿಯೋ ಕಾರ್ನರ್

ಮೇಘಾಶೆಟ್ಟಿ ಡ್ಯಾನ್ಸ್‌ ನೋಡು ಶಿವಾ…! ಚಂದನ್‌ ಜೊತೆ ಡಿಂಗು ಡಾಂಗು

ಆಲ್ಬಂ ಸಾಂಗ್‌ ಶೂಟಿಂಗ್‌ ಮುಗೀತು

ಮೇಘಾಶೆಟ್ಟಿ

ಮೇಘಾಶೆಟ್ಟಿ…

ಸದ್ಯಕ್ಕೆ ಕಿರುತೆರೆಯಲ್ಲಿ ಓಡುತ್ತಿರುವ ಹೆಸರಿದು. ಈ ಮೇಘಾಶೆಟ್ಟಿ ಈಗ ಕನ್ನಡ ಚಿತ್ರರಂಗಕ್ಕೂ ಎಂಟ್ರಿಯಾಗಿದ್ದಾಗಿದೆ. ಈ ಹಿಂದೆ ಮೇಘಾಶೆಟ್ಟಿ ಕನ್ನಡ ಆಲ್ಬಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಅನ್ನೋ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆ ಹಾಡಿಗೆ ಕುಣಿಸಿದ್ದು ಬೇರಾರೂ ಅಲ್ಲ, ಚಂದನ್‌ ಶೆಟ್ಟಿ. ಹೌದು, ಅದ್ಧೂರಿಯಾಗಿ ತಯಾರಾಗಿರುವ ಕನ್ನಡ ಆಲ್ಬಂ ಸಾಂಗ್‌ನಲ್ಲಿ ಮೇಘಾಶೆಟ್ಟಿ ಕುಣಿದು ಕುಪ್ಪಳಿಸಿದ್ದಾರೆ.

ಇಲ್ಲಿ ಸುಮಿತ್‌ ಮತ್ತು ಮೇಘಾಶೆಟ್ಟಿಯ ಜೊತೆಗೆ ಚಂದನ್‌ ಶೆಟ್ಟಿ ಕೂಡ ಒಂದೆರೆಡು ಸ್ಟೆಪ್‌ ಹಾಕಿರೋದು ವಿಶೇಷ. ಅಂದಹಾಗೆ, “ನೋಡು ಶಿವ” ಎಂದು ಶುರುವಾಗುವ ಈ ಆಲ್ಬಂ ಸಾಂಗ್‌ ಅನ್ನು, ಸುಮಿತ್ ಎಂ.ಕೆ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಈ ಸುಮಿತ್‌ ಅವರು “ಪರಾರಿ” ಎಂಬ ಸಿನಿಮಾ ಮಾಡಿದ್ದರು.

ಸುಮಿತ್

ಇನ್ನೊಂದು ವಿಶೇಷವೆಂದರೆ, ಸುಮಿತ್ ಅವರೆ “ನೋಡು ಶಿವ” ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತದ ಜೊತೆಗೆ ಧ್ವನಿಯನ್ನೂ ನೀಡಿದ್ದಾರೆ. ಈ ಹಾಡಲ್ಲಿ ಸುಮಾರು ‌‌‍60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹ ಕಲಾವಿದರು ಕಾಣಿಸಿಕೊಂಡಿದ್ದು, ಕನ್ನಡದ ಮಟ್ಟಿಗೆ ಇದೊಂದು ಅದ್ದೂರಿಯಾಗಿ‌ ಮೂಡಿಬಂದಿರುವ ಮೊದಲ‌‌ ಆಲ್ಬಂ ಸಾಂಗ್ ಎಂಬುದು ವಿಶೇಷ.

ಇತ್ತೀಚೆಗೆ ಬನ್ನೇರುಘಟ್ಟ ‌ರಸ್ತೆಯ ಎ.ಎಂ.ಸಿ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ‌ ಚಿತ್ರೀಕರಣ ನಡೆದಿದೆ. ಎಂ.ಕೆ‌ ಆರ್ಟ್ಸ್ ಬ್ಯಾನರ್‌ನಲ್ಲಿ ಮೋನಿಕಾ‌ ಕಲ್ಲುರಿ ಅವರು ಈ ಆಲ್ಬಂ ಸಾಂಗ್ ನಿರ್ಮಾಣ‌ ಮಾಡಿದ್ದು, “ಭಜರಂಗಿ” ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.‌ “ಹೆಬ್ಬುಲಿ” ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣವಿದೆ. ಮೂರುವರೆ ನಿಮಿಷಗಳ‌ ಅವಧಿಯ ಈ ಆಲ್ಬಂ ಸಾಂಗ್ ಇದೇ ತಿಂಗಳಲ್ಲಿ ‌ಆನಂದ್ ಆಡಿಯೋ‌ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ.

 

error: Content is protected !!