ಬುಧವಾರದಿಂದ ಮತ್ತೆ ಬಿಗ್‌ ಬಾಸ್‌ ಅಸಲಿ ಆಟ ಶುರು; ಈಗ ಯಾರೆಲ್ಲ ಹೋಗಲ್ಲ ಗೊತ್ತಾ ?

ಕನ್ನಡದ “ಬಿಗ್‌ ಬಾಸ್‌” ರಿಯಾಲಿಟಿ ಶೋ ಮಟ್ಟಿಗೆ ಇದೊಂದು ಅಪರೂಪದ ಸನ್ನಿವೇಶ. ದಾಖಲೆಯೂ ಹೌದು. ಜತೆಗೆ ಚರಿತ್ರೆಯೂ ಕೂಡ. ಯಾಕಂದ್ರೆ ಮುಂದೆ ಇಂತಹ ಸನ್ನಿವೇಶ ಎದುರಾಗುತ್ತೋ, ಇಲ್ಲವೋ ಗೊತ್ತಿಲ್ಲ. ಹೌದು, ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಕಲರ್ಸ್‌ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ “ಬಿಗ್‌ ಬಾಸ್‌ ಸೀಸನ್‌ ೮” ಮತ್ತೆ ಶುರುವಾಗುತ್ತಿದೆ. ಹಾಗಂತ, ಮತ್ತೆ ಮೊದಲಿನಿಂದ ಶುರುವಾಗುತ್ತಿಲ್ಲ. ಬದಲಿಗೆ ಅರ್ಧದಲ್ಲಿ ಅದು ನಿಂತು ಹೋದಾಗ ಬಿಗ್‌ ಬಾಸ್‌ ಮನೆಯಲ್ಲಿದ್ದ ಸ್ಪರ್ಧಿಗಳ ಮೂಲಕ ಆಟ ಶುರುವಾಗುತ್ತಿದೆ.

ಸದ್ಯಕ್ಕೀಗ “ಬಿಗ್‌ ಬಾಸ್‌” ಮನೆಯಲ್ಲಿ 12 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್‌, ಪಾವಗಡ ಮಂಜು, ವೈಷ್ಣವಿ, ದಿವ್ಯಾ ಉರಡುಗ, ಶುಭಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್‌, ರಘು ಗೌಡ, ಕೆ.ಪಿ. ಅರವಿಂದ್‌, ಪ್ರಿಯಾಂಕಾ ತಿಮ್ಮೇಶ್‌, ಶಮಂತ್‌ ಗೌಡ ಹಾಗೂ ಪ್ರಶಾಂತ್‌ ಸಂಬರಗಿ ಉಳಿದುಕೊಂಡಿದ್ದರು. ಈಗ ಎರಡನೇ ಇನ್ನಿಂಗ್ಸ್‌ ಜೂನ್‌ 23, ಬುಧವಾರದಿಂದ ಶುರುವಾಗುತ್ತಿದೆ. ಅಷ್ಟು ಸ್ಪರ್ಧಿಗಳಲ್ಲಿ ಯಾರೆಲ್ಲ ಮತ್ತೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗುತ್ತಾರೆನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಬಿಗ್‌ ಬಾಸ್‌ ಯಾಕೆ ನಿಂತಿದ್ದು ಅಂತ ನಿಮಗೆಲ್ಲ ಗೊತ್ತೇ ಇದೆ. ಮಹಾ ಮಾರಿ ಕೊರೊನಾ ಹೆಚ್ಚಳಗೊಂಡು ರಾಜ್ಯದಲ್ಲಿ ಅಪಾರ ಸಾವು-ನೋವಿನೊಂದಿಗೆ ತೀವ್ರ ಆತಂಕ ಸೃಷ್ಟಿಸಿದ್ದ ಸಂದರ್ಭದಲ್ಲೇ “ಬಿಗ್‌ ಬಾಸ್‌”ನಲ್ಲೂ ತಳಮಳ ಶುರುವಾಯಿತು. ಶೋ ನಿರೂಪಕರಾದ ನಟ ಸುದೀಪ್‌ ಅವರಲ್ಲೇ ಅನಾರೋಗ್ಯ ಕಾಣಿಸಿಕೊಂಡಿತು. ಕೊರೊನಾ ಪಾಸಿಟಿವ್‌ ಬಂದು ಕ್ವಾರಂಟೈನ್‌ಗೆ ಒಳಗಾದರು. ಅತ್ತ “ಬಿಗ್‌ಬಾಸ್‌” ಮನೆಯಲ್ಲೂ ಒಂದಿಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದರು. ಹಾಗಂತ, ಅವರಿಗೂ ಕೊರೊನಾ ಸೋಂಕು ತಗಲಿತ್ತು ಅಂತಲ್ಲ, ಸಹಜವಾಗಿಯೇ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಪೈಕಿ ನಟಿ ದಿವ್ಯಾ ಉರುಡುಗ ಚಿಕಿತ್ಸೆಗಾಗಿ ಅಲ್ಲಿಂದ ಹೊರ ಬಂದರು.

ಆನಂತರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಕೊರೊನಾ ತೀವ್ರವಾಗಿ ಜನರನ್ನು ಕಾಡುತ್ತಿರುವಾಗ ಈ ಹುಚ್ಚಾಟಗಳನ್ನು ಜನ ನೋಡಬೇಕಾ? ಇವರಿಗೇನು ಬೇರೆ ಕೆಲಸ ಇಲ್ಲವೇ? ಅಂತೆಲ್ಲ ನೆಟ್ಟಿಗರು ಸಿಟ್ಟು ಹೊರ ಹಾಕಿದರು. ಅದೇ ಹೊತ್ತಿಗೆ “ಬಿಗ್‌ಬಾಸ್‌” ರಿಯಾಲಿಟಿ ಶೋ ಟಿಆರ್‌ಪಿ ಕೂಡ ನೆಲ ಕಚ್ಚಿತ್ತು. ಹಾಗಾಗಿ ಚಾನಲ್‌ನವರಿಗೂ ಅದನ್ನು ಅರ್ಧಕ್ಕೆ ನಿಲ್ಲಿಸುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಇನ್ನೇನು ಆಗ ನಿಲ್ಲುತ್ತೆ, ಈಗ ನಿಲ್ಲುತ್ತೆ ಅನ್ನುವ ಕ್ಷಣಗಳಲ್ಲಿ ಕಲರ್ಸ್‌ ಕನ್ನಡ ಅನೌನ್ಸ್‌ ಮಾಡಿತು.

ಪರಿಣಾಮ ಸ್ಪರ್ಧಿಗಳು ಅಲ್ಲಿಂದ ಹೊರ ಬಂದರು. ಅವರಿಗೆಲ್ಲ ಈಗ ತಾವು “ಬಿಗ್‌ ಬಾಸ್‌” ಮನೆಯಲ್ಲಿದ್ದಾಗ ಯಾರೆಲ್ಲ ಯಾರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದರು. ಯಾರ ಪರವಾಗಿ ಜನರ ಒಲವು ಇತ್ತು, ಯಾರು ಗೆಲ್ಲಬಹುದು ಎನ್ನುವ ಲೆಕ್ಕಚಾರಗಳಿದ್ದವು. ಯಾರಿಗೆ ಎಷ್ಟೆಲ್ಲಾ ಓಟು ಬಂದಿದ್ದವು… ಇತ್ಯಾದಿಯಾಗಿ “ಬಿಗ್‌ಬಾಸ್‌” ಮನೆಗಳೊಳಗಿನ ರಹಸ್ಯ ಗೊತ್ತಾಗಿದೆ.

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ “ಬಿಗ್‌ ಬಾಸ್‌” ಮನೆ ಪ್ರವೇಶಿಸಿದ ಚಕ್ರವರ್ತಿ ಚಂದ್ರಚೂಡ್‌ ಯಾರನ್ನು, ಯಾರ ವಿರುದ್ಧ ಹೇಗೆಲ್ಲ ಎತ್ತಿ ಕಟ್ಟುತ್ತಿದ್ದರು, ಪ್ರಶಾಂತ್‌ ಸಂಬರಗಿ-ಚಂದ್ರಚೂಡ್‌ ನಡುವೆ ಹೇಗೆಲ್ಲ ಸ್ನೇಹ ಇತ್ತು,.. ಮುಂತಾದ ಒಳ ರಾಜಕೀಯ ಬಯಲಾಗಿದೆ. ಜತೆಗೆ ವೈಷ್ಣವಿ-ರಘು ಗೌಡ, ಅರವಿಂದ್- ದಿವ್ಯಾ ಉರುಡುಗ ಹಾಗೂ ಶಮಂತ್‌- ಪ್ರಿಯಾಂಕಾ ತಿಮ್ಮೇಶ್‌ ಜೋಡಿಗಳ ಬಗ್ಗೆ ಹೊರಗಡೆ ವರ್ಣರಂಜಿತ ಸುದ್ದಿಗಳು ಹರಿದಾಡುತ್ತಿದ್ದವು ಅನ್ನೋದು ಕೂಡ ಸ್ಪರ್ಧಿಗಳಿಗೆಲ್ಲ ತಿಳಿದಿದೆ. ಈಗ ಎಲ್ಲರೂ ಎಚ್ಚರಗೊಂಡಿದ್ದಾರೆ.

ಸರಿ-ತಪ್ಪುಗಳೇನು ಅಂತಲೂ ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಹಾಗೆ ನೋಡಿದರೆ ಅಲ್ಲೀಗ ಹೊಸ ಆಟವೇ ಶುರುವಾಗಬೇಕಿದೆ. ಹಾಗೆಯೇ ಹೊಸ ತಂತ್ರಗಳ ಮೂಲಕವೇ ವೀಕ್ಷಕರನ್ನು ಈ ಶೋ ರಂಜಿಸಬೇಕಿದೆ ಆ ನಿಟ್ಟಿನಲ್ಲಿ ಕಲರ್ಸ್‌ ಕನ್ನಡದ “ಬಿಗ್‌ಬಾಸ್ ಸೀಸನ್‌ ೮” ರ ಎಡನೇ ಇನ್ನಿಂಗ್ಸ್‌ ತೀವ್ರ ಕುತೂಹಲ ಮೂಡಿಸಿದೆ. ಇದೆಲ್ಲ ಓಕೆ, ಈಗ ಕೊರೊನಾ ಇನ್ನು ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಬೆಂಗಳೂರಿನಲ್ಲಿ ಪ್ರತಿ ದಿನ ಕೊರೊನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಸಾವಿರ ಲೆಕ್ಕದಲ್ಲಿ ದಾಖಲಾಗುತ್ತಿದೆ.

ಈ ನಡುವೆಯೇ ಈಗ ಅನ್‌ಲಾಕ್ ಆಗಿದೆ. ಜನ ಮೈ ಮರೆತು ಓಡಾಡುತ್ತಿದ್ದಾರೆ. ಮತ್ತೆ ಹೆಚ್ಚಳ ಆಗೋದಿಲ್ಲ ಎನ್ನುವ ಗ್ಯಾರಂಟಿ ಇಲ್ಲ. ಯಾಕಂದ್ರೆ ಮೈಸೂರು ಸೇರಿದಂತೆ ಈಗಲೂ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಜಾಸ್ತಿಯೇ ಇದೆ. ಹಾಗಾಗಿ ಈಗಲೂ ಇದೆಲ್ಲ ಹುಚ್ಚಾಟದ ಶೋ ಬೇಕಾ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಸದ್ಯಕ್ಕೆ ಕಲರ್ಸ್‌ ಕನ್ನಡದಿಂದ ಉತ್ತರ ಇಲ್ಲ. ಹೇಗಾದರೂ ಸರಿ, ಶೋ ಮುಗಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಹೊಸ ಪ್ರೋಮೋಗಳ ಮೂಲಕ ಈಗಾಗಲೇ ಜನರಲ್ಲಿ ಒಂದಷ್ಟು ಕುತೂಹಲ ಹುಟ್ಟು ಹಾಕಿದೆ. ಅಂತೆಯೇ ನಾಳೆಯಿಂದ ಶೋ ಶುರುವಾಗುವುದು ಖಚಿತವಾಗಿದೆ. ಗೆಲ್ಲುವರಾರು, ಬರಿ ಗೈಯಲ್ಲಿ ಮನೆಗೆ ಬರುವರಾರು ಎನ್ನುವ ಕಥೆ ಬಿಡಿ, ಎರಡನೇ ಇನ್ನಿಂಗ್ಸ್‌ ಎಷ್ಟರ ಮಟ್ಟಿಗೆ ಸಕ್ಸಸ್‌ ಆಗುತ್ತೆ ಎನ್ನುವುದು ಕುತೂಹಲ ಹುಟ್ಟಿಸಿದೆ.

ಬಿಗ್‌ ಬಾಸ್‌ ಎರಡನೇ ಇನ್ನಿಂಗ್ಸ್‌ ನಾಳೆಯಿಂದ ಶುರುವಾಗುತ್ತಿದೆ. ೧೨ ಮಂದಿ ಸ್ಪರ್ಧಿಗಳು ಎಂಟ್ರಿ ಆಗುತ್ತಿದ್ದಾರೆನ್ನುವ ಸುದ್ದಿ ಇದೆ. ಆದರೆ ಇದರಲ್ಲಿ ಕೆಲವರು ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅಗ್ನಿ ಸಾಕ್ಷಿ ಧಾರಾವಾಹಿಯ ಖ್ಯಾತಿಯ ನಟಿ ವೈಷ್ಣವಿ ಗೌಡ ಇಂತಹದೊಂದು ನಿರ್ಧಾರ ಮಾಡಿದ್ದಾರೆನ್ನುವ ಗಾಸಿಪ್‌ ಇದೆ. ಈ ಬಗ್ಗೆ ನಟಿ ವೈಷ್ಣವಿ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹಾಗೆಯೇ ದಿವ್ಯಾ ಉರುಡುಗ ಕೂಡ ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗುವುದು ಡೌಟು ಎನ್ನುಲಾಗಿದೆ. ಎಲ್ಲದಕ್ಕೂ ನಾಳೆಯೇ ಉತ್ತರ ಸಿಗಲಿದೆ.

Related Posts

error: Content is protected !!