ಕಲಾವಿದ ಯತಿರಾಜ್ ಲಾಕ್‌ಡೌನ್ ಟೈಮ್‌ನಲ್ಲಿ ಸುಮ್ಮನೆ ಕೂರಲಿಲ್ಲ. ಸದಾ ಸಿನಿಮಾ ಧ್ಯಾನಿಸುವ ಯತಿರಾಜ್, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅವರು ಒಂದಷ್ಟು ಮನಮಿಡಿಯುವಂತಹ ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಮತ್ತೊಂದು ಕಿರುಚಿತ್ರ ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಹೌದು, ಅವರ ಕಿರುಚಿತ್ರದ ಹೆಸರು “ಮೈಂಡ್ ಇಟ್”. ಇತ್ತೀಚೆಗಷ್ಟೇ ನಟ ಸಂಚಾರಿ ವಿಜಯ್ ಅಗಲಿದ್ದಾರೆ. ಅವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹೆಲ್ಮಟ್ ಹಾಕಿಕೊಂಡಿದ್ದರೆ, ಅವರ ಜೀವ ಉಳಿಯುತ್ತಿತ್ತು ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು. ಈ ವಿಷಯವನ್ನೇ ಆಧರಿಸಿ, ನಟ ಯತಿರಾಜ್ ನಿರ್ದೇಶನ ಮಾಡುವುದರ ಜೊತೆಯಲ್ಲಿ ಅವರು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. “ಮೈಂಡ್ ಇಟ್” ಹೆಸರಲ್ಲಿ ಆರು ನಿಮಿಷದ ಹದಿನೈದನೆ ಕಿರುಚಿತ್ರವನ್ನು ಅವರು ತಮ್ಮದೆ ಸಂಸ್ಥೆ ’ಕಲಾವಿದ ಫಿಲಂ ಅಕಾಡೆಮಿ’ ಮೂಲಕ ನಿರ್ಮಾಣ ಮಾಡಿದ್ದಾರೆ. ಯೂ ಟ್ಯೂಬ್‌ದಲ್ಲಿ ವೀಕ್ಷಿಸಿದ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಅದೊಂದು ಸುಂದರ ಸಂಸಾರ. ಆತ ರಂಗಭೂಮಿ ಕಲಾವಿದ. ಅಡಿಷನ್‌ನಲ್ಲಿ ಇವರ ಅಭಿನಯ ಕಂಡು ನಿರ್ದೇಶಕ ಮತ್ತು ನಿರ್ಮಾಪಕರು ನಾಯಕನಾಗಿ ಚಿತ್ರಕ್ಕೆ ಆಯ್ಕೆ ಮಾಡುತ್ತಾರೆ. ಖುಷಿಯನ್ನು ಪತ್ನಿಯೊಂದಿಗೆ ಹಂಚಿಕೊಂಡು, ಮುಂಗಡ ಹಣ ಪಡೆಯಲು ಹೆಲ್ಮೆಟ್ ಧರಿಸದೆ ಹೋಗುತ್ತಾರೆ. ದಾರಿಯಲ್ಲಿ ಫೋನ್ ಬಂತೆಂದು ಮಾತಾಡುವಾಗ, ಹಳ್ಳದಿಂದ ಪಾರಾಗುವ ಸಲುವಾಗಿ, ಆಯ ತಪ್ಪಿ ಕೆಳೆಗೆ ಬೀಳುತ್ತಾರೆ. ಫುಟ್‌ಪಾತ್‌ಗೆ ಬಿದ್ದ ಅವರ ತಲೆಗೆ ಬಲವಾದ ಪೆಟ್ಟು ಬೀಳುತ್ತೆ. ನಂತರ ತೀವ್ರ ರಕ್ತ ಸ್ರಾವಗೊಂಡು ಅಲ್ಲಿಯೇ ಪ್ರಾಣ ಕಳೆದುಕೊಳ್ಳುವುದರೊಂದಿಗೆ ಸಿನಿಮಾ ಕೂಡ ಮುಗಿಯುತ್ತದೆ.
ಪತ್ನಿ ಪಾತ್ರದಲ್ಲಿ ನಯನ, ನಿರ್ಮಾಪಕರಾಗಿ ಬೆಂ.ಕೋ.ಶ್ರೀನಿವಾಸ್, ನಿರ್ದೇಶಕರಾಗಿ ಪರಮೇಶ್ ಹಾಗೂ ಬೇಬಿ ಸ್ಮೃತಿ ನಟಿಸಿದ್ದಾರೆ. ಸೋನುಸಾಗರ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ವಿನುಮನಸು ಮತ್ತು ಮಾರುತಿ ಮೀರಜ್ ಸಂಗೀತವಿದೆ. ನಟ ವಸಿಷ್ಠ ಸಿಂಹ ಹಿನ್ನಲೆ ಧ್ವನಿ ನೀಡಿದ್ದಾರೆ.