Categories
ಸಿನಿ ಸುದ್ದಿ

ಬಿಗ್ ಬಾಸ್ ಮನೆ‌ ಕೆಡಿಸಿದ್ರಾ ಚಂದ್ರಚೂಡ್ ? ಅವರು ನುಗ್ಗೆಕಾಯಿ, ಮಾವಿನಕಾಯಿ ಕಥೆ ಹೇಳಿದ್ದು ಯಾರ ಕುರಿತು ಗೊತ್ತಾ?


ಬಿಗ್ ಬಾಸ್ ಸೆಂಕೆಂಡ್‌ ಇನ್ನಿಂಗ್ಸ್ ಹಳ್ಳಿ ಪಂಚಾಯಿತಿ ಕಟ್ಟೆಯಂತಾಗಿದೆ. ಅಲ್ಲೀಗ ‘ಮೂರನೇ ದರ್ಜೆ’ ಯ ಕಥಾ ಲೋಕ‌ ತೆರೆದುಕೊಂಡಿದೆ. ಕಳೆದ ಏಳು ಸೀಸನ್ ಗಳಲ್ಲಿ ಸಿಗದ ಮನರಂಜನೆ‌ ಈಗ ಇಲ್ಲಿ ವೀಕ್ಷಕರಿಗೆ ಸಿಗುತ್ತಿದೆ. ಸದ್ಯಕ್ಕೀಗ ಬಿಗ್ ಬಾಸ್ ಮನೆಯಲ್ಲಿನ ಅಷ್ಟು ಕಂಟೆಸ್ಟೆಡ್ ಗಳಿಗೆ ಚಕ್ರವರ್ತಿ ಚಂದ್ರಚೂಡ್ ಟಾರ್ಗೆಟ್ ಆಗಿದ್ದಾರೆ. ಅದರಿಂದ ಹೊರ ಬರಲು ಚಂದ್ರಚೂಡ್ ತಮ್ಮ ಮಾತಿನ ಪಾಂಡಿತ್ಯ ಪರಾಕಾಷ್ಟೆ ಮೆರೆಯುತ್ತಿದ್ದು, ಅವರ ಮೂಲಕ ಬಿಗ್ ಬಾಸ್ ಮನೆಯಲ್ಲಿ ನುಗ್ಗೆಕಾಯಿ, ಮಾವಿನಕಾಯಿ, ಮಲುಗೊಬದ ಮಾರ್ಮಿಕ ಕಥೆಗಳು ಚರ್ಚೆ ಆಗುತ್ತಿರುವುದು ವೀಕ್ಷಕರಲ್ಲೂ ಹೇಸಿಗೆ ತರಿಸಿದೆ.

ಚಂದ್ರಚೂಡ್ ತಪ್ಪುಮಾಡಿ ಬಿಟ್ರಾ? ಬಿಗ್ ಬಾಸ್ ವೀಕ್ಷಕರಿಗೆ ಈಗ ಹೀಗೆನಿಸುತ್ತದೆ. ಅದಕ್ಕೆ ಕಾರಣವೂ ಇದೆ. ಕೊರೋನಾ ಕಾರಣದಿಂದ ಬಿಗ್ ಬಾಸ್ ಸೀಸನ್ 8 ಅರ್ಧದಲ್ಲಿಯೇ ನಿಂತು ಹೋದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಬಿಗ್ ಬಾಸ್ ಇತಿಹಾಸದಲ್ಲಿ ಎಂದೂ ‌ಹೀಗಾಗದ ಕಾರಣಕ್ಕೆ ಟ್ರೋಪಿ ಗೆಲ್ಲುವ ಅದೃಷ್ಟ ಯಾರಿಗೂ ಇರಲಿಲ್ಲವೇ ಅಂತಂದುಕೊಂಡಿದ್ದು ಹೌದು. ಆದರೆ, ಸೆಕೆಂಡ್ ಇನ್ನಿಂಗ್ಸ್ ಮತ್ತೆ ಶುರುವಾಗುತ್ತೆ ಅಂದಾಗ ಜ‌ನ ಖುಷಿಯಾದರು. ಅತ್ತ ಚಕ್ರವರ್ತಿ ಚಂದ್ರಚೂಡ್ ಶಾಕ್ ಆದರು‌. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಮತ್ತೆ ಹೇಗೆ ಹೋಗುವುದು ಅಂತಲೂ ತಲೆ ಕೆಡಿಸಿಕೊಂಡಿದ್ದು ಹೌದು.

ಅದಕ್ಕೆ ಕಾರಣವೂ ಇತ್ತು‌. ಬಿಗ್ ಬಾಸ್ ಅರ್ಧಕ್ಕೆ ನಿಂತು ಹೋಗಿ, ಅಲ್ಲಿದ್ದ ಸ್ಪರ್ಧಿಗಳು ವಾಪಾಸ್ ಮನೆಗೆ ಬಂದಾಗ, ಕುಂತಲ್ಲಿ ಕೂರಲಾರೆ, ನಿಂತಲ್ಲಿ ನಿಲ್ಲಲಾರೆ ಎನ್ನುವ ಹಾಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್ ಗಳಿಗೆ ಹೋಗಿ ಹೋಗಿ ಇಂಟರ್ವ್ಯೂ ಕೊಟ್ಟು ಬಂದಿದ್ದರು ಚಕ್ರವರ್ತಿ ಚಂದ್ರಚೂಡ್. ಮಾತಿನಲ್ಲಿ ಚಂದ್ರಚೂಡ್ ಅವರನ್ನು ಮೀರಿಸುವವರೇ ಇಲ್ಲ‌. ವಿಷಯ ಯಾವುದೇ ಆದರೂ‌ ಸರಿ, ಗಂಟೆ ಗಟ್ಟಲೆ ಭಾಷಣ ಬಿಗಿಯುವ ಕಾಯಿಲೆ ಅವರಿಗಿದೆ. ಎಷ್ಟೋ‌ ಸಲ ಟಿವಿ ಡಿಬೆಟ್ ಗಳಿಗೆ ತಾವೇ ಒತ್ತಾಯ ಮಾಡಿ ಹೋಗಿದ್ದರ ಬಗ್ಗೆ ಟಿವಿ ಚಾನೆಲ್ ನವರೇ ಹೇಳಿದ್ದು ಇತ್ತು. ಅಂತಹದರಲ್ಲಿ ಬಿಗ್ ಬಾಸ್ ಎನ್ನುವ ಕಿರಾತಕ ಮನೆಯ ಕಂತೆ ಪುರಾಣ ಚಂದ್ರಚೂಡ್ ಬಳಿ ಇದ್ದಾಗ ಸುಮ್ಮನೆ ಕೂರುತಾರಾ? ಟಿ ವಿ ಚಾನೆಲ್ ಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ದಿನ ಗಟ್ಟಲೆ ಕುಳಿತು ಸುರುಳಿ ಸುರುಳಿ ಪುಂಗಿ ಊದಿ ಬಂದಿದ್ದು ಎಲ್ಲರಿಗೂ ಗೊತ್ತು.

ಇಂಟರ್ ವಿವ್ಯೂಗಳಲ್ಲಿ ಇಷ್ಟಕ್ಕೂ ಚಂದ್ರಚೂಡ್ ಹೇಳಿದ್ದೇನು ಗೊತ್ತಾ ? ಎಲ್ಲವೂ ವಿವಾದಿತ ಹೇಳಿಕೆಗಳೇ. ಬಿಗ್ಬಾಸ್ ಮನೆಯಲ್ಲಿ ಆಗ ವೀಕ್ಷಕರ ನಡುವೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಪಾವಗಡ ಮಂಜು, ದಿವ್ಯಾ ಸುರೇಶ್ ಜೋಡಿಯ ಬಗ್ಗೆ ಚಂದ್ರಚೂಡ್ ಹೊರಗಡೆ ಸಂದರ್ಶನಗ ಳಲ್ಲಿ ಕೊಟ್ಟ ಹೇಳಿಕೆಗಳೆಲ್ಲವೂ ಆಕ್ಷೇಪಾರ್ಹ. ಇಷ್ಟಕ್ಕೂ ಪಾವಗಡ ಮಂಜು ಹಾಗೂ ದಿವ್ಯಾ ಸುರೇಶ್ ನಿಜಕ್ಕೂ ಗಂಡ- ಹೆಂಡತಿ ಆಗಿರಲಿಲ್ಲ‌ . ಟಾಸ್ಕ್ ಗಳಲ್ಲಿ ಒಂದಾಗಿದ್ದ, ಈ ಜೋಡಿ ಮುಂದೆ ಒಳ್ಳೆಯ ಗೆಳೆಯರಾದರು. ಸಹಜವಾಗಿ ವೀಕ್ಷಕರ ಕಣ್ಣು ಅವರ ಮೇಲೆ ಬಿತ್ತು. ಅವರಿಬ್ಬರ ನಡುವೆ ಲವ್ ಇದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.

ಹೊರ ಗಡೆ ಬಂದಾಗ ಚಂದ್ರಚೂಡ್ ಕೇಳಿಸಿಕೊಂಡ ಆ ಮಾತುಗಳನ್ನೇ ನಿಜ ಅಂದುಕೊಂಡರು. ಹಾಗಾಗಿಯೇ ಅವರಿಬ್ಬರು‌ ಮದುವೆ ಆಗುವುದಾದರೆ ಅವರಿಬ್ಬರಿಗೂ ತಾಳಿ ಕೊಡಿಸ್ತೀನಿ ಅಂತ ಹೇಳಿ ಬಿಡೋದಾ? ಇದೇ ಮಾತನ್ನು ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ಬಗ್ಗೆಯೂ ಇದೇ ಮಾತು ಹೇಳಿದ್ದರೂ ಚಂದ್ರಚೂಡ್ . ಅಷ್ಟೇ ಅಲ್ಲ ಬಿಗ್ ಬಾಸ್ ಕಬ್ಬನ್ ಪಾರ್ಕ್ ಆಗಿತ್ತು ಅಂದಿದ್ದರು, ಅದೆಲ್ಲವಲ್ಲಕ್ಕೂ ಈಗ ಉತ್ತರ ಸಿಗುತ್ತಿದೆ.

ಚಂದ್ರಚೂಡ್ ಬಡಬಡಿಸುತ್ರಿರುವುದು ವಿಚಿತ್ರವಾಗಿದೆ‌. ವೀಕ್ಷಕರು ಎಲ್ಲಿಂದ ನಗಬೇಕೋ ಅರ್ಥ ವಾಗದೆ ಒದ್ದಾಡುತ್ತಿದ್ದಾರೆ. ಇದು ಕೂಡ ಗಿಮಿಕ್ ಅಂತಲೇ ಅಂದುಕೊಳ್ಳೋಣ. ಯಾಕಂದ್ರೆ ಈಗ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ವರಸೆ ಬದಲಾಗಬೇಕಿದೆ. ಹಾಗಾಗಿ ಚಂದ್ರಚೂಡ್ ಎಂಬ ಮಾತಿನ ಮಲ್ಲನನ್ನು ಹೀಗೆಲ್ಲ ಇಕ್ಕಟ್ಟಿಗೆ ಸಿಲುಕಿಸಿ, ಆಟ ಆಡಿಸುತ್ತಲೂ ಇರಬಹುದು‌. ಆದರೆ, ಚಂದ್ರಚೂಡ್ ಒಳಗೂ- ಹೊರಗೂ ಭಾರೀ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಭಾನುವಾರದ ಎಪಿಸೋಡ್ ನೋಡಿದವರು ಸೋಷಲ್ ಮೀಡಿಯಾದಲ್ಲಿ ಚಂದ್ರಚೂಡ್ ವಿರುದ್ಧ ಕೆಂಡಮಂಡಲ ಆಗಿದ್ದಾರೆ. ಇದೆಲ್ಲ ನೋಡಿದರೆ ಮುಂದಿನ ವಾರಕ್ಕೆ ಚಂದ್ರಚೂಡ್ ಎಲಿಮಿನೇಟ್ ಆದರೂ ಕೂಡ ಅಚ್ಚರಿ ಇಲ್ಲ.

Categories
ಸಿನಿ ಸುದ್ದಿ

ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಶೂಟಿಂಗ್ ವಿಸಿಟ್‌ ಮಾಡಿದ ಅಪ್ಪು

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವೊಂದನ್ನು ಸತ್ಯಪ್ರಕಾಶ್ ನಿರ್ದೇಶನ ಮಾಡಬೇಕಿತ್ತು. ಕೋವಿಡ್ ಮತ್ತು ಲಾಕ್ ಡೌನ್ ನಿರ್ಬಂಧಗಳಿಂದಾಗಿ ಆ ಚಿತ್ರ ಸ್ವಲ್ಪ ತಡವಾಯ್ತು. ಆ ಚಿತ್ರದ ಚರ್ಚೆಯ ಸಂದರ್ಭದಲ್ಲೇ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರದ ಎಳೆಯನ್ನು ಸತ್ಯಪ್ರಕಾಶ್ ಪುನೀತ್ ಅವರ ಬಳಿ ಹೇಳಿದ್ದರು. ಹೊಸ ಕಲಾವಿದರಿಗಾಗಿಯೇ ತಯಾರಿಸಿದ್ದ ಆ ಕಥೆಯ ವಸ್ತು ಹಾಗೂ ಚಿತ್ರಕಥೆಯಲ್ಲಿದ್ದ ಹೊಸತನ, ಪುನೀತ್ ಅವರಿಗೂ ಸಹ ಮೆಚ್ಚುಗೆಯಾಗಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ಆಗ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರಕ್ಕೆ ಚಾಲನೆ ಸಿಕ್ಕಿತು. ಪಿಆರ್‌ಕೆ ಮತ್ತು ಸತ್ಯ & ಮಯೂರ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಏಪ್ರಿಲ್ ನಲ್ಲಿ ಶುರುವಾಗಿ, ಬಹುತೇಕ ಚಿತ್ರೀಕರಣ ಮುಗಿಸಿದೆ. ಈಗ ಬಿಡುಗಡೆಯ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇತ್ತೀಚೆಗೆ ನಡೆದ ಅಂತಿಮ ಹಂತದ ಚಿತ್ರೀಕರಣ ಸ್ಥಳಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

Categories
ಸಿನಿ ಸುದ್ದಿ

‘ಕಬ್ಜ’ದಲ್ಲಿ ಸುದೀಪ್‌ – ಉಪೇಂದ್ರ ಮುಖಾಮುಖಿ; ಕುತೂಹಲ ಕೆರಳಿಸಿದ ಸ್ಪೆಷಲ್‌ ಪೋಸ್ಟರ್‌ – ಐದು ಭಾಷೆಗಳಲ್ಲಿ ಪೋಸ್ಟರ್‌ ರಿಲೀಸ್‌

ಚಿತ್ರದಲ್ಲಿನ ಉಪೇಂದ್ರ ಲುಕ್‌ ನೋಡಿದರೆ ಇದು ಕ್ರೈಮ್‌ ಥ್ರಿಲ್ಲರ್‌ ಪೊಲಿಟಿಕಲ್‌ ಡ್ರಾಮಾ ಎನಿಸುವಂತಿದೆ. ಅದೇ ಕಾರಣಕ್ಕೆ ಈ ಚಿತ್ರಕ್ಕೆ ಭಾರೀ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದೆ. ಚಿತ್ರದ ಬಗ್ಗೆ ತಿಳಿದುಕೊಂಡಿರುವ ಸಾಕಷ್ಟು ದೊಡ್ಡ ಸಂಸ್ಥೆಗಳು ಕಬ್ಜ ಚಿತ್ರದ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ.

ಕೊರೊನಾ ಅಲೆಯ ಅಬ್ಬರ ಕಮ್ಮಿ ಆಗಿದೆ. ಇದರ ಬೆನ್ನಲೇ ಕನ್ನಡ ಚಿತ್ರರಂಗದಲ್ಲೀಗ ಆರ್.‌ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ʼ ಕಬ್ಜ ʼ ಅಬ್ಬರ ಕೂಡ ಜೋರಾಗಿಯೇ ಶುರುವಾಗಿದೆ. ಹೌದು, ಸಿನಿಮಾ ಚಟುವಟಿಕೆಗಳು ಶುರುವಾಗುವ ಸೂಚನೆಗಳ ಬೆನ್ನಲ್ಲೇ, ಉಪೇಂದ್ರ ಅಭಿನಯದ ʼ ಕಬ್ಜʼ ಚಿತ್ರದ ಸ್ಪೆಷಲ್‌ ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ ಆರ್. ಚಂದ್ರು. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಇದು ಬಿಡುಗಡೆ ಆಗಿದೆ.

ನಟ ಸುದೀಪ್‌ ಹಾಗೂ ಉಪೇಂದ್ರ ಜೋಡಿಯ ಈ ಪೋಸ್ಟರ್‌ ಹಾಲಿವುಡ್‌ ಶೈಲಿಯಲ್ಲಿ ಹೊರ ಬಂದಿದೆ. ಅಷ್ಟೇ ಅಲ್ಲ, ʼಕಬ್ಜ ʼ ಬಹು ಬಜೆಟ್‌ ನ ಪ್ಯಾನ್‌ ಇಂಡಿಯಾ ಸಿನಿಮಾ. ಅದಕ್ಕೆ ತಕ್ಕಂತೆಯೇ ಪೋಸ್ಟರ್‌ ಅನ್ನು ಗ್ರಾಂಡ್‌ ಆಗಿಯೇ ಲಾಂಚ್‌ ಮಾಡಿದೆ ಚಿತ್ರ ತಂಡ. ಸದ್ಯಕ್ಕೆ ಈ ಚಿತ್ರದ ರಿಲೀಸ್‌ ಬಗ್ಗೆ ಯಾವುದೇ ಮಾಹಿತಿ ಹೊರ ಬಂದಿಲ್ಲ. ಆದರೆ, ಸಿನಿಮಾವನ್ನು ಅದ್ದೂರಿಯಾಗಿಯೇ ಅಂದರೆ, ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅತ್ಯಧಿಕ ಸಂಖ್ಯೆ ಚಿತ್ರ ಮಂದಿರಗಳಲ್ಲಿ ತೆರೆ ತರುವ ಇರಾದೆ ನಿರ್ದೇಶಕ ಕಮ್ ನಿರ್ಮಾಪಕ ಚಂದ್ರು ಅವರಿಗಿದೆ. ‌


ಕೆ.ಜಿ.ಎಫ್. ಚಿತ್ರ ಈ ಹಿಂದೆ ಭಾರತೀಯ ಚಿತ್ರ ರಂಗದಲ್ಲಿ ಹೇಗೆ ದೊಡ್ಡ ಹವಾ ಸೃಷ್ಟಿಸಿತೋ ಅದೇ ಮಾದರಿಯಲ್ಲಿ ʼಕಬ್ಜʼ ಕೂಡ ದೊಡ್ಡ ಹವಾ ಎಬ್ಬಿಸಬೇಕೆನ್ನುವ ಬಹುದೊಡ್ಡ ನಿರೀಕ್ಷೆಯಲ್ಲಿ ಆರ್.‌ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಹಾಗೂ ಹೈದ್ರಬಾದ್‌ ನಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.

ಇನ್ನು ಚಿತ್ರದ ತಾರಾಬಳಗ ಕೂಡ ದೊಡ್ಡದಾಗಿಯೇ ಇದೆ. ಮುಕುಂದ ಮುರಾರಿ ಚಿತ್ರದ ನಂತರ ನಟ ಉಪೇಂದ್ರ ಹಾಗೂ ಸುದೀಪ್‌ ಕಾಂಬಿನೇಷನ್‌ ಇಲ್ಲಿ ಒಂದಾಗಿದೆ. ಸದ್ಯಕ್ಕೆ ಸುದೀಪ್ ಅಪಿಯರೆನ್ಸ್‌ ಹೇಗೆ ಅನ್ನೋದು ನಿಗೂಢವಾಗಿದೆ. ಉಪೇಂದ್ರ ಚಿತ್ರದ ಹೀರೋ. ಸುದೀಪ್‌ ಅತಿಥಿ ಪಾತ್ರ ಮಾಡಿದ್ದಾರೆಂಬ ಸುದ್ದಿ ಇದೆ. ಉಳಿದಂತೆ, ಕಾಮರಾಜನ್ (ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದಲ್ಲಿದ್ದಾರೆ.

ಸಚಿವ ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ಅವರೇ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್ ಸಾಹಸ ನಿರ್ದೇಶನವಿದೆ.

ನಿರ್ದೇಶಕ ಹಾಗೂ ನಿರ್ಮಾಪಕ ಆರ್.‌ ಚಂದ್ರು ಹೇಳುವ ಪ್ರಕಾರ ಇದೊಂದು ಸಸ್ಪೆನ್ಸ್‌ , ಥ್ರಿಲ್ಲರ್‌ ಜತೆಗೆ ನೈಜ ಘಟನೆಯ ಕಥಾ ಹಂದರದ ಚಿತ್ರ. ಪ್ರೀತಿ, ಪ್ರೇಮ ಎನ್ನುವುದಕ್ಕಿಂತ ಯೂನಿವರ್ಷಲ್‌ ಎನಿಸುವ ಥ್ರಿಲ್ಲಿಂಗ್‌ ಕಥೆ ಇಲ್ಲಿದೆಯಂತೆ. ಚಿತ್ರದಲ್ಲಿನ ಉಪೇಂದ್ರ ಲುಕ್‌ ನೋಡಿದರೆ ಇದು ಕ್ರೈಮ್‌ ಥ್ರಿಲ್ಲರ್‌ ಪೊಲಿಟಿಕಲ್‌ ಡ್ರಾಮಾ ಎನಿಸುವಂತಿದೆ. ಅದೇ ಕಾರಣಕ್ಕೆ ಈ ಚಿತ್ರಕ್ಕೆ ಭಾರೀ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದೆ. ಚಿತ್ರದ ಬಗ್ಗೆ ತಿಳಿದುಕೊಂಡಿರುವ ಸಾಕಷ್ಟು ದೊಡ್ಡ ಸಂಸ್ಥೆಗಳು ಕಬ್ಜ ಚಿತ್ರದ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ನೆನಪಲ್ಲಿ ಬಡವರಿಗೆ ಫುಡ್‌ ಕಿಟ್‌ ವಿತರಿಸಿದ ಅಭಿಮಾನಿ; ಪ್ರಚಾರ ಗಿಟ್ಟಿಸಿಕೊಳ್ಳೋ ಇರಾದೆ ನಂಗಿಲ್ಲ, ಇದು ನಿಜವಾದ ಅಭಿಮಾನದ ಕೆಲಸ ಅಂದ್ರು ಆಂಕರ್‌ ಭಾರತಿ !

ಅಭಿಮಾನದ ಅತಿರೇಕ ಅಂತೀರೋ, ನೀವು ಇದನ್ನು ಪ್ರಚಾರ ಗಿಮಿಕ್‌ ಅಂತೀರೋ, ಆದರೆ ಧಾರವಾಡ ಮೂಲದ ಆ ಯುವತಿ ಆಂಕರ್‌ ಭಾರತಿ ಈಗ ನಟ ಸಂಚಾರಿ ವಿಜಯ್‌ ಅವರ ನೆನಪಿನಲ್ಲಿ ಶನಿವಾರ ನೂರು ಮಂದಿ ಬಡಜನರಿಗೆ ಫುಡ್‌ ಕಿಟ್‌ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಸೇವೆಗೆ ಮುನ್ನುಡಿ ಬರೆದಿದ್ದಾರೆ. ಹಾಗೆಯೇ ಇಂದಿನಿಂದ ತಾವು ತಮ್ಮ ಕೈಯಲ್ಲಾದಷ್ಟು ನಿರಂತರವಾಗಿ ಸಾಮಾಜಿಕ ಸೇವೆ ಮಾಡುವುದಾಗಿ ಜನರ ನಡುವೆ ಪ್ರಮಾಣ ಸ್ವೀಕರಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಈ ಸೇವೆಯನ್ನು ಯಾವುದೇ ಸ್ವಾರ್ಥಕ್ಕೆ ಬಳಸಿಕೊಳ್ಳದೇ ಕೇವಲ ನಟ ಸಂಚಾರಿ ವಿಜಯ್‌ ಅವರ ನೆನಪಿನಲ್ಲಿ ಮುನ್ನೆಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಇಷ್ಟು ಹೇಳಿದ ಮೇಲೆ ಈ ಆಂಕರ್‌ ಭಾರತಿ ಯಾರು ಅಂತ ನಿಮಗೂ ಅನಿಸಿರೋದಿಕ್ಕೆ ಸಾಕು.

ಅಂದ ಹಾಗೆ, ನಟ ಸಂಚಾರಿ ನಿಧನದ ಸಂದರ್ಭದಲ್ಲಿ ಟಿವಿ ಚಾನೆಲ್‌ ಸೇರಿದಂತೆ ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಯುವತಿಯ ಹೆಸರು ಆಂಕರ್‌ ಭಾರತಿ. ನಟ ಸಂಚಾರಿ ವಿಜಯ್‌ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿದ್ದ ಕೊನೆಯ ದಿನದಿಂದ ಹಿಡಿದು, ಅವರ ಅಂತ್ಯಕ್ರಿಯೆ ಮುಗಿಯುವರೆಗೂ ಕನ್ನಡದ ಅಷ್ಟು ಚಾನೆಲ್‌ ಗಳಲ್ಲಿ ಆಂಕರ್‌ ಭಾರತಿ ಸಂದರ್ಶನಗಳು ಬಿತ್ತರವಾದವು. ಕಾರಣ, ಸಂಚಾರಿ ವಿಜಯ್‌ ಜತೆಗಿನ ತಮ್ಮ ಒಡನಾಟ ಕುರಿತು ಆಂಕರ್‌ ಭಾರತಿ ತುಂಬಾ ಭಾವುಕರಾಗಿ ಮಾತನಾಡಿದ್ದರು. ಸಂದರ್ಶನದ ಆ ವಿಡಿಯೋಗಳು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಕೆಲವು ಯುಟ್ಯೂಬ್‌ ಚಾನೆಲ್ ಗಳಂತೂ ಆಂಕರ್‌ ಭಾರತಿ ಅವರ ಮಾತುಗಳಿಗೆ ರೆಕ್ಕೆ ಪುಕ್ಕ ಕಟ್ಟಿ ಸುದ್ದಿ ಮಾಡಿದ್ದೇ ಮಾಡಿದ್ದು. ಕೊನೆಗದು ನಟ ಸಂಚಾರಿ ವಿಜಯ್‌ ಅವರ ಪರಿಶುದ್ಧವಾರ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ಮಾಡಿತು.

ಯುಟ್ಯೂಬ್‌ ಚಾನೆಲ್‌ ಗಳು ಮಾಡಿದ ಘನಂದಾರಿ ಕೆಲಸಗಳು ಅಷ್ಟು ಮಾತ್ರವೇ ಅಲ್ಲ, ವಿಜಯ್‌ ಮದುವೆ ವಿಚಾರವನ್ನು ಎಳೆತಂದು ಆ ಹುಡುಗಿ ಯಾರು ಗೊತ್ತಾ ಅಂತೆಲ್ಲ ಯಾರಾರದೋ ಫೋಟೋಗಳನ್ನು ಹಾಕಿ ವೈರಲ್‌ ಮಾಡಿದ್ದು ತೀರಾ ಅತಿರೇಕವೇ ಎನಿಸಿತು. ಆಗ ಧಾರವಾಡ ಮೂಲದ ಯುವತಿ ಆಂಕರ್‌ ಭಾರತಿ ವಿರುದ್ಧವೂ ಜನರು ಆಕ್ರೋಶ ಹೊರ ಹಾಕಿದರು. ಆದರೆ, ನಟ ಸಂಚಾರಿ ವಿಜಯ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವಂತ ಯಾವುದೇ ಕೆಲಸ ಮಾಡಿಲ್ಲ, ಅದೆಲ್ಲ ಮೀಡಿಯಾದವರ ಕೆಲಸ. ನಾನು ನಟ ಸಂಚಾರಿ ವಿಜಯ್ ಅವರ ಪ್ರಾಮಾಣಿಕ ಅಭಿಮಾನಿ ಅಂತ ಪ್ರತಿಪಾದಿಸಿದ್ದ ಆಂಕರ್‌ ಭಾರತಿ, ಈಗ ಅಂತಹ ಯಾವುದೇ ಪ್ರಚಾರ ಬಯಸದೇ ನಟ ಸಂಚಾರಿ ವಿಜಯ್‌ ಹೆಸರಲ್ಲಿ ಸಾಮಾಜಿಕ ಸೇವೆಗೆ ಮುಂದಾಗಿದ್ದಾರೆ.

ಅದರ ಮೊದಲ ಪ್ರಯತ್ನವಾಗಿ ಶನಿವಾರ ಧಾರವಾಡ ಜಿಲ್ಲೆಯ ಮಿಶ್ರೀಕೋಟೆ ಗ್ರಾಮ, ಧಾರವಾಡ ಸ್ಲಂ ಪ್ರದೇಶದ ಜನರು ಹಾಗೂ ಅಲ್ಲಿನ ಬುದ್ದಿ ಮಾಂದ್ಯ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಫುಡ್‌ ಕಿಟ್‌ ವಿತರಣೆ ಮಾಡಿದರು.

ಜನ ಮೆಚ್ಚುವ ಈ ಸಮಾಜ ಸೇವೆ ಕುರಿತು ʼಸಿನಿ ಲಹರಿʼ ಜತೆಗೆ ಮಾತನಾಡಿದ ಅವರು, ವರನಟ ಡಾ. ರಾಜ್‌ ಕುಮಾರ್‌ ಅವರಂತೆಯೇ ನಂಗೆ ನಟ ಸಂಚಾರಿ ವಿಜಯ್‌ ಅವರ ಮೇಲೂ ದೊಡ್ಡ ಅಭಿಮಾನ ಇದೆ. ಆ ಅಭಿಮಾನಕ್ಕಾಗಿ ಅವರ ಬಗ್ಗೆ ಮಾತನಾಡಿದ್ದು ನಿಜ. ಆದರೆ, ಈಗ ನಾನು ಮಾತನಾಡೋದಿಲ್ಲ. ನಟ ಸಂಚಾರಿ ವಿಜಯ್‌ ಅವರು ಬದುಕಿನಲ್ಲಿ ತೋರಿಸಿಕೊಟ್ಟ ಸಾಮಾಜಿಕ ಸೇವೆಯೊಂದಿಗೆ ಅವರಿಗೆ ಗೌರವ ಸಲ್ಲಿಸುತ್ತೇನೆ.

ನಟನಿಗೆ ಒಬ್ಬ ಅಭಿಮಾನಿಯಾಗಿ ಮಾತನಾಡುವುದು ಕೂಡ ಇಲ್ಲಿ ಅಪರಾಧವಾಗುತ್ತಿದೆ. ಅದನ್ನು ನಾನು ಬದುಕಿನಲ್ಲಿ ಮಾಡಿ ತೋರಿಸುವೆ ಎಂದರು. ಹಾಗೆಯೇ ಪ್ರಚಾರದ ಗಿಮಿಕ್‌ ಗಾಗಿ ಅವರು ನಟ ವಿಜಯ್‌ ಅವರ ಹೆಸರು ಬಳಸಿಕೊಂಡರು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಆಂಕರ್‌ ಭಾರತಿ, ನಂಗ್ಯಾಕೆ ಪ್ರಚಾರ ಬೇಕು ಸರ್‌, ನಾನೇನು ರಾಜಕಾರಣಿ ಆಗಲೂ ಹೊರಟವಳಾ ? ನಂಗೆ ಅಂತಹ ಯಾವುದೇ ಪ್ರಚಾರದ ಗೀಳು ಇಲ್ಲ. ಬೇಕಾದ್ರೆ ನನ್ನದೇ ಸ್ವಂತ ಸಾಮಾರ್ಥ್ಯದಲ್ಲಿ ಪ್ರಚಾರ ಪಡೆದುಕೊಳ್ಳುವೆ ಎನ್ನುವ ಉತ್ತರ ಆಂಕರ್‌ ಭಾರತಿ ಅವರದು.

ಅಂದ ಹಾಗೆ , ಶನಿವಾರ ಆಂಕರ್‌ ಭಾರತಿ ಅವರದ್ದು ಹುಟ್ಟು ಹಬ್ಬ. ನಟ ಸಂಚಾರಿ ವಿಜಯ್‌ ಅವರ ನೆನಪಿನಲ್ಲಿ ಗ್ರಾಂಡ್‌ ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿರುವ ಅವರು, ಶನಿವಾರ ಬಡ ಜನರಿಗೆ ಫುಡ್‌ ಕಿಟ್‌ ವಿತರಿಸುವ ಸಾಮಾಜಿಕ ಸೇವೆಯ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿಶೇಷ.

Categories
ಸಿನಿ ಸುದ್ದಿ

ಕಾರ್ಡ್ ಇಲ್ಲದ ಸಿನಿ ಕಾರ್ಮಿಕರಿಗೆ ಫುಡ್ ಕಿಟ್‌ ವಿತರಣೆ; ನೆರವಿನ ಹಸ್ತ ಚಾಚಿದ ಸ್ನೇಹರ್ಷಿ ಕಿರಣ್ ನಾರಾಯಣ್

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಸ್ನೇಹರ್ಷಿ ನಾಯಕ ಕಿರಣ್ ನಾರಾಯಣ್, ಇದೀಗ ಚಿತ್ರರಂಗದ ಅಸಂಘಟಿತರಿಗೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಗುರುತಿನ ಚೀಟಿ ಇಲ್ಲದೆ ಸರ್ಕಾರದ ಸಹಾಯ ಧನದಿಂದ ವಂಚಿತರಾದವರ ಹಸಿವನ್ನು ನೀಗಿಸುವ ತೃಪ್ತಿದಾಯಕ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಬಾ.ಮ. ಹರೀಶ್ ಅವರ ಉಲ್ಲಾಸ್ ಶಾಲೆಯ ಆವರಣದಲ್ಲಿ 150ಕ್ಕೂ ಹೆಚ್ಚು ಸಿನಿ ಕಾರ್ಮಿಕರಿಗೆ ಕಿರಣ್ ನಾರಾಯಣ್ ಅವರು ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದರು.

ಈ‌ ವೇಳೆ ಬಾ.ಮ. ಹರೀಶ್ ನೆರವಾದರು. ಇದೇ ಸಮಯದಲ್ಲಿ ಅನಾಥ ಶವಗಳ ಬಂಧು ಎನಿಸಿಕೊಂಡ ನಟ ಅರ್ಜುನ್‌ಗೌಡ, ಪತ್ರಿಕಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್, ನಿರ್ಮಾಪಕ ಬಾ.ಮ.ಹರೀಶ್ ಹಾಗೂ ಬಾ.ಮ. ಗಿರೀಶ್ ಅವರಿಗೆ ಸ್ನೇಹರ್ಷಿ ಚಿತ್ರತಂಡದಿಂದ ಗೌರವ ಸಮರ್ಪಣೆ ಮಾಡಲಾಯಿತು.

ಸುಧೀಂದ್ರ ವೆಂಕಟೇಶ್ ಮಾತನಾಡಿ, ಕೋವಿಡ್‌ನಿಂದಾಗಿ ಚಿತ್ರರಂಗ ತುಂಬಾ ಸಂಕಷ್ಟ ಎದುರಿಸುತ್ತಿದೆ. ಇಂಥಾ ಸಮಯದಲ್ಲಿ ನಟ ಕಿರಣ್ ನಾರಾಯಣ್ ಅವರು ಚಿತ್ರರಂಗದವರ ಕಷ್ಟಕ್ಕೆ ನೆರವಾಗಬೇಕೆಂದು ಈ ಫುಡ್‌ ಕಿಟ್ ವ್ಯವಸ್ಥೆ ಮಾಡಿದ್ದಾರೆ. ಇನ್ನು ಜೀವದ ಹಂಗು ತೊರೆದು ಕೆಲಸ ಮಾಡಿದ ಅರ್ಜುನ್‌ಗೌಡರಂತಹ ವ್ಯಕ್ತಿಯನ್ನು ಗೌರವಿಸುವ ಅವಕಾಶ ನನಗೆ ಸಿಕ್ಕಿದ್ದೇ ಸಂತಸ, ಇವರಿಗೆ ಎಲ್ಲಾ ರೀತಿಯ ಗೌರವ, ಪ್ರಶಸ್ತಿಗಳು ಸಂದಬೇಕಿದೆ. ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಯನ್ನು ಅರ್ಜುನ್‌ಗೌಡ ಅವರಿಗೆಂದೇ ಮೀಸಲಿಟ್ಟಿದ್ದೇವೆ. ಅಲ್ಲದೆ ಇಂತಹ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಬಾ.ಮ. ಹರೀಶ್ ಅವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ, ಜೊತೆಗೆ ಬೇರೆಯವರಿಂದಲೂ ಕೂಡ ಸಹಾಯ ಮಾಡಿಸುತ್ತಿದ್ದಾರೆ ಎಂದರು.

ನಟ ಕಿರಣ್ ನಾರಾಯಣ್ ಮಾತನಾಡಿ, ಕೋವಿಡ್ ಆರಂಭವಾದಾಗಿನಿಂದಲೂ ನಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ಸಹಾಯ ಮಾಡುತ್ತಲೇ ಬಂದಿದ್ದೇವೆ. ಬಾ.ಮ. ಹರೀಶ್ ಅವರು ಕಾಲ್‌ಮಾಡಿ ಚಿತ್ರರಂಗದಲ್ಲಿ ಕಷ್ಟದಲ್ಲಿರುವವರಿಗೆ ನಿಮ್ಮ ಕಡೆಯಿಂದ ಏನಾದರೂ ಸಹಾಯ ಮಾಡಿ ಎಂದರು. ಹಾಗಾಗಿ ಸಿನಿ ಕಾರ್ಮಿಕರಿಗೆ ಫುಡ್‌ಕಿಟ್ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಸ್ನೇಹರ್ಷಿ ಚಿತ್ರದ ಸಂದೇಶವೂ ಇದೇ ಆಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.

ನಟ ಅರ್ಜುನ್‌ಗೌಡ ಮಾತನಾಡಿ, ಒಬ್ಬ ಕಲಾವಿದನಾಗಿ ಹಾಗೂ ಫ್ರಂಟ್‌ಲೈನ್ ವರ್ಕರ್ ಜವಾಬ್ದಾರಿ ನಿಭಾಯಿಸಿದ್ದೇನೆ. ಇಂತಹ ಟೈಮ್‌ನಲ್ಲಿ ಸಮಾಜಕ್ಕೆ ಏನಾದರೂ ತಿರುಗಿ ಕೊಡೋ ಅವಕಾಶವನ್ನು ದೇವರು ನೀಡಿದ್ದಾನೆ ಎಂದು ಹೇಳಿದರು. ಭಾಮ ಹರೀಶ್ ಮಾತನಾಡಿ, ಅರ್ಜುನ್‌ಗೌಡ ಅವರ ಈ ಸೇವೆ ತುಂಬಾ ದೊಡ್ಡದು, ಬಿಬಿಎಂಪಿಯಿಂದ ನೀಡುವ ಕೆಂಪೇಗೌಡ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದಿಂದ ಕೊಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ಘೋಷಿಸಲೇಬೇಕು ಎಂದು ಒತ್ತಾಯಿಸಿದರು.

Categories
ಸಿನಿ ಸುದ್ದಿ

ಮುಂದಿನ‌ ವರ್ಷ ಬಯೋಗ್ರಫಿ ಬರೆಯುತ್ತಾರಂತೆ ನಾದಬ್ರಹ್ಮ ಹಂಸಲೇಖ

ಬಯೋಗ್ರಫಿ ಬರೀಬೇಕು ನಿಜ, ಆದ್ರೆ ಬರೆಯೋದಿಕ್ಕೆ ಭಯ ಆಗುತ್ತೆ….!
ಹೌದು, ನಾದ ಬ್ರಹ್ಮ ಹಂಸಲೇಖ ಹೀಗೆ ಹೇಳಿದ್ರು. ಹಾಗಂತ, ತಮಾಷೆಗೆ ಹೇಳಿದ್ರಾ? ಇಲ್ಲ ಗಂಭೀರವಾಗಿಯೇ ಅವರು ಈ ಮಾತು ಹೇಳಿದರು‌. ಅದಕ್ಕೆ ಅವರು ಕಾರಣ ಏನು ಗೊತ್ತಾ? ಅಂತಹದೇನು ದೊಡ್ಡ ಸಾಧನೆ ತಾವು ಮಾಡಿಲ್ಲ ಅನ್ನೋದು‌. ಹಾಗಾದ್ರೆ ಇದು ನಿಜವಾ?

ಇಲ್ಲ, ಕನ್ನಡ ಸಿನಿಮಾ ಸಂಗೀತ ಮತ್ತು ಸಾಹಿತ್ಯದ ಜತೆಗೆ ದೇಸಿ‌ ಸಂಗೀತದಲ್ಲಿ ಮಹಾನ್ ಸಾಧನೆ ಮಾಡಿದ ಮೇರು ವ್ಯಕ್ತಿತ್ವ ಅವರದ್ದು. ಹಂಸಲೇಖ ಅಂದ್ರೆ ಕನ್ನಡಿಗರ ಮಾತು. ಹಾಗಾಗಿಯೇ ಅಲ್ಲವೇ ಅವರಿಗೆ ನಾದ ಬ್ರಹ್ಮ ಎನ್ನುವ ಬಿರುದು ಪಾತ್ರವಾಗಿದ್ದು‌. ಇಷ್ಟಾಗಿಯೂ ಅವರು ಬಯೋಗ್ರಫಿ ಬರೆಯುವಷ್ಟು ಅಂತಹದೇನು ದೊಡ್ಡ ಸಾಧನೆ ಮಾಡಿಲ್ಲ ಎನ್ನುತ್ತಾ ನಕ್ಕರು‌. ಅಂದಹಾಗೆ, ಅವರು ಈ ಮಾತುಗಳನ್ನು ಬುಧವಾರ ತಮ್ಮ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದರು. ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೂ ಉತ್ತರಿಸಿದರು.

ನೀವು ಸರ್ ಬಯೋಗ್ರಫಿ ಬರೆದು, ಕನ್ನಡ ಚಿತ್ರರಂಗ ಇತರರಿಗೂ ಸ್ಪೂರ್ತಿ ಆಗಬೇಕು ಎನ್ನುವುದು ಅವರ ಪ್ರಶ್ನೆ ಆಗಿತ್ತು. ಅದಕ್ಕೆ ನಗುತ್ತಾ ಉತ್ತರಿಸಿದ ಹಂಸಲೇಖ, ಬಯೋಗ್ರಫಿ ಬರೆಯೋದಿಕ್ಕೆ ನಂಗೆ ಭಯ ಆಗುತ್ತೆ. ಯಾಕಂದ್ರೆ ಅನೇಕ ಜನರ ಬಯೋಗ್ರಫಿ ಓದಿದ್ದೇನೆ. ಅವರೆಲ್ಲ ಮಹಾನ್ ಸಾಧಕರು. ನಮ್ಮಂತವರಿಗೆ ಸ್ಪೂರ್ತಿ ಆಗುವ ವ್ಯಕ್ತಿಗಳು. ಅಂತಹ ವ್ಯಕ್ತಿಗಳ‌ ಸಾಧನೆ ಮುಂದೆ ನಾವೇನು ಮಾಡಿಲ್ಲ.

ಮುಂದೆ ನಾನು ಮಾಡಬೇಕಾದ ಒಂದೆರೆಡು ಕೆಲಸಗಳಿವೆ. ನಾನೇ‌ ಸೃಷ್ಟಿಸಿದ ದೇಸಿ ಸಂಗೀತದ ಒಂದು ವಿದ್ಯೆ ಇದೆ. ಅದನ್ನು ಒಂದಷ್ಟು ಫೈನ್ ಟ್ಯೂನ್ ಮಾಡಬೇಕಿದೆ. ಮುಂದಿನ ವರ್ಷಕ್ಕೆ ಆ ಕೆಲಸ ಆಗಬಹುದು ಅಂತ ನಿರೀಕ್ಷೆ ಮಾಡಿದ್ದೇನೆ. ಹಾಗೆಯೇ ಇನ್ಮೊಂದು ಸಂಶೋಧನೆಯ ಕೆಲಸ ಇದೆ. ಅದೆಲ್ಲ ಲೋಕಾರ್ಪಣೆ ಆದ ಮೇಲೆ ಬಯೋಗ್ರಫಿ ಬರಿತೀನಿ ಅಂದ್ರು ಹಂಸಲೇಖ.

Categories
ಸಿನಿ ಸುದ್ದಿ

ಹಂಸಲೇಖ‌ ಹೇಳ್ತಾರೆ, ಒಳ್ಳೆ‌ ಗಾಳಿ ಒಳಗೆ ತಗೋ…! – ಹೀಗೊಂದು ಪರಿಸರ ಗೀತೆ

ಕೊರೊನಾ ಸೃಷ್ಟಿಸಿದ‌‌ ಅವಾಂತರಗಳಲ್ಲಿ ಆಕ್ಸಿಜನ್ ಕೊರತೆಯೂ ಒಂದು. ಆಕ್ಸಿಜನ್‌ ಕೊರತೆಯಿಂದಲೇ ಅದೆಷ್ಟೋ ಸಂಖ್ಯೆಯ ಜನ ನಿಧನರಾದರು. ಯಾಕಂದ್ರೆ ಕೊರೊನಾ ಎನ್ನುವ ಮನುಷ್ಯ ಸೃಷ್ಟಿಯ ಜೈವಿಕ ಯುದ್ದ ಆಕ್ಸಿಜನ್‌ಗೂ ಕುತ್ತು ತರುತ್ತದೆ. ಕೊರೊನಾ ಬಂದವರು ಬಹುತೇಕ ಆಕ್ಸಿಜನ್ ಕೊರತೆಯಿಂದಲೇ ನಿಧನರಾಗು ವುದು ನಿಮಗೂ ಗೊತ್ತು. ಇಂತಹ ಅಪತ್ತು‌ ತಂದೊಡ್ಡುವ ಜೈವಿಕ ಯುದ್ದವನ್ನು ನಾವು ಸಮರ್ಥವಾಗಿ‌ ನಿಭಾಯಿಸುವುದಾದರೆ, ನಮ್ಮ ಸುತ್ತಮುತ್ತ ಆಕ್ಸಿಜನ್ ಕೊಡುವ ಕಾಡುಗಳನ್ನು ಸೃಷ್ಟಿಸಬೇಕು. ಹಾಗೆಯೇ ಇರುವ ಕಾಡುಗಳನ್ನು ಸಂರಕ್ಷಿಸಿಕೊಳ್ಳಿ ಎನ್ನುವ ಸಂದೇಶವನ್ನು ಒಂದು ಸುಮಧುರ ಗೀತೆಯ ಮೂಲಕ ಹೇಳ ಹೊರಟಿದ್ದಾರೆ ನಾದ ಬ್ರಹ್ಮ‌ ಹಂಸಲೇಖ‌.

ಹೌದು, ಈಗಾಗಲೇ ಅವರು ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿರುವ “ಒಳ್ಳೇ ಗಾಳಿ ಒಳಗೆ ತಗೋ…” ಎನ್ನುವ ಈ ಹಾಡು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ವಿಶೇಷ‌. ಅಂದಹಾಗೆ, ಅವರು ಗೀತೆಯನ್ನು ಬರೆದಿದ್ದು ಅಮರ ಚಿತ್ರ ಕಥಾ ಹೆಸರಿನ ಚಿತ್ರಕ್ಕಾಗಿ. ಆ ಚಿತ್ರ ಒಂದು ಪರಿಸರದ ಕಾಳಜಿಯ ಜತೆಗೆಯೇ ಒಂದೊಳ್ಳೆಯ ಕಥೆಯನ್ನು ಹೊತ್ತು ಬರುತ್ತಿದೆಯಂತೆ. ಅದರ ಸದಾಶಯಕ್ಕೆ ತಕ್ಕಂತೆ ಹಂಸಲೇಖ ಈ ಗೀತೆ ಬರೆದಿದ್ದಾರಂತೆ. ಇನ್ನೊಂದು ವಿಶೇಷ ಅಂದ್ರೆ, ಈ ಗೀತೆಯನ್ನು ಹಂಸಲೇಖ ರಚಿಸಿದ್ದು ಕೊರೊನಾ‌ ಬರುವ ಮುಂಚೆ. ಅವರಿಗೆ ಅದೆಷ್ಟು ದೂರದೃಷ್ಟಿ ಇತ್ತೋ ಗೊತ್ತಿಲ್ಲ, ಭವಿಷ್ಯದಲ್ಲಿ ಆಕ್ಸಿಜನ್‌ಗಾಗಿಯೇ ಕಾಡು ಉಳಿಸಿಕೊಳ್ಳಿ ಅಂತ ಸಾಹಿತ್ಯದ ಮೂಲಕ ಹಂಸಲೇಖ ಮನವಿ ಮಾಡಿರುವುದು ವಿಶೇಷ.

ನರ ಮರ ಎನ್ನುವ ಸಾಲುಗಳ ಮೂಲಕ ಶುರುವಾಗುವ ಈ ಗೀತೆಗೆ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ನೀನು ನರ, ನಾನು ನರ, ನಂಗೂ‌ ನಿಂಗೂ‌ ಬೇಕು‌ ಮರ, ಮರವೇ ತಾನೆ ನಮಗೆ ವರ…. ಎನ್ನುವ ಈ ಗೀತೆಯ ಸಾಲುಗಳು ಅತ್ಯಾದ್ಬುತ. ಪರಿಸರದ ಮಹತ್ವವನ್ನು‌ ಪ್ರತಿಯೊಬ್ಬರಿಗೂ ‌ಮನ ಮುಟ್ಟುವಂತೆ ಜೋಡಿಸಿದ್ದಾರೆ. ಬುಧವಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಂಜೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಹಂಸಲೇಖ, ಈ ಹಾಡಿನ ಸದಾಶಯ ತೆರೆದಿಟ್ಟರು‌.

‘ಈ ಭೂಮಿ‌ ಮೇಲೆ ಮುಕ್ಕಾಲು ಭಾಗ ನೀರು , ಕಾಲು ಭಾಗ ಭೂಮಿ‌ ಇದೆ. ಇದರಲ್ಲಿ ಬದುಕುತ್ತಿರುವ ನರ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈಗಾಗಲೇ ಬಹುಪಾಲು ಕಾಡು ಕಡಿದು ಅರಣ್ಯ ನಾಶ ಮಾಡಿ ಆಗಿದೆ. ಅದರ ಪರಿಣಾಮ ಅನೇಕ‌ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಅದರ ಜತೆಗೆಯೇ ಕೊರೊನಾದಂತಹ ಜೈವಿಕ ಯುದ್ಧವೂ ಶುರುವಾಗಿದೆ. ಈಗ ಕಾಡು ಅಗತ್ಯ.

ಆರಂಭದಿಂದಲೂ‌ ಪರಿಸರವಾದಿಗಳು ಕಾಡು ಉಳಿಸಿ ಅಂತ ಹೇಳುತ್ತಲೇ ಬರುತ್ತಿದ್ದಾರೆ . ಆದರೂ ಅವರ ಕೂಗು , ಒಂದು ಸೊಳ್ಳೆಯ ಕೂಗಿನಷ್ಟಾಗಿದೆ. ಹಾಗಾಗಿ ಈಗ ಪ್ರತಿಯೊಬ್ಬರು ಪರಿಸರ ಉಳಿವಿಗೆ ಧ್ವನಿ ಎತ್ತಬೇಕಿದೆ’ ಎನ್ನುವ ಮಾತುಗಳ ಮೂಲಕ ಜೈಕಾಂರ್ ಮ್ಯೂಜಿಕ್ ಯೂಟ್ಯೂಬ್ ನಲ್ಲಿ ಲಭ್ಯವಿರುವ ಈ ಹಾಡು ಕೇಳಿ ಅಂತ ವಿನಂತಿ‌ ಮಾಡಿಕೊಳ್ಳುತ್ತಾರೆ ನಾದಬ್ರಹ್ಮ‌ ಹಂಸಲೇಖ.

Categories
ಸಿನಿ ಸುದ್ದಿ

ಇದು ಅನಿರೀಕ್ಷಿತ ; ಲಾಕ್ ಡೌನ್ ವೇಳೆ ರೆಡಿಯಾಯ್ತು ಸಿನಿಮಾ ; ಮಿಮಿಕ್ರಿ ದಯಾನಂದ್ ಅವರ ಮೊದಲ ನಿರ್ದೇಶನದ ಚಿತ್ರವಿದು

ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ,ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವಿಕ ವಾದ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದನ್ನು ನಿರೂಪಿಸುವುದೇ, “ಅನಿರೀಕ್ಷಿತ” ಚಿತ್ರದ ಕಥಾಹಂದರ.

ಲಾಕ್ ಡೌನ್ ಸಮಯ ವ್ಯರ್ಥ ಮಾಡಬಾರದೆಂದು ತಿಳಿದ ಹದಿಮೂರು ಜನ ಪ್ರತಿಭಾವಂತರ ತಂಡದ ಪರಿಶ್ರಮದ ‌ಫಲವಾಗಿ ಈ ಚಿತ್ರ ಮೂಡಿಬಂದಿದೆ.
ಕೇವಲ ಎರಡು ಪಾತ್ರಗಳನ್ನಿಟ್ಟುಕೊಂಡು ಒಂದೇ ಚಿತ್ರೀಕರಣ ಸ್ಥಳದಲ್ಲಿ ನಾಲ್ಕು ಲೊಕೇಶನ್ ಗಳಂತೆ ಬಳಸಿರುವುದು ಈ ಚಿತ್ರದ ವಿಶೇಷ.
ಚಿತ್ರೀಕರಣ, ನಂತರದ ಚಟುವಟಿಕೆಗಳು ಪೂರ್ಣವಾಗಿ ‌ಬಿಡುಗಡೆಗೆ ಸಿದ್ದವಾಗಿದೆ.


ಲಾಕ್ ಡೌನ್ ಪೂರ್ಣವಾಗಿ ಚಿತ್ರಮಂದಿರ ತೆರವಿಗೆ ಅನುಮತಿ ದೊರಕಿದ ಕೂಡಲೆ ಚಿತ್ರಮಂದಿರ ಹಾಗೂ ಓಟಿಟಿ ಫ್ಲಾಟ್ ಫಾರಂನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.
ಅನೀರಿಕ್ಷಿತ ಚಿತ್ರದ ಮೊದಲ ಪೋಸ್ಟರನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದ್ದಾರೆ. ಎರಡು ಹಾಗೂ ಮೂರನೇ ಪೋಸ್ಟರನ್ನು ಗಿರಿಜಾ ಲೋಕೇಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅನಾವರಣಗೊಳಿಸಿದ್ದಾರೆ.

ಸದ್ಯದಲ್ಲೇ ಟ್ರೇಲರ್ ಸಹ ಬಿಡುಗಡೆಯಾಗಲಿದೆ.
ಎಸ್.ಕೆ.ಟಾಕೀಸ್ ಬ್ಯಾನರ್ ನಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್.‌

ಮಿಮಿಕ್ರಿ ದಯಾನಂದ್ ಅವರೆ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ.
ಗುರುಕಿರಣ್ ಸಂಗೀತ ನೀಡಿದ್ದಾರೆ.
ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.‌


ಚಿತ್ರದಲ್ಲಿ ಕೇವಲ ಎರಡುಪಾತ್ರಗಳಿದ್ದು,‌ ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ.
ಸಹ ನಿರ್ಮಾಪಕ ಸಂತೋಷ್ ಕೊಡೆಂಕೇರಿ ಈ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ನಾದಬ್ರಹ್ಮ ನಿಗೆ ಹುಟ್ಟು‌ ಹಬ್ಬದ‌ ಸಂಭ್ರಮ‌ ; ಬರ್ತ್ ಡೇ ಗೆ ಅವರೇ ಕೊಟ್ಟ ಶಾರದಾ ಪುಸ್ತಕಾಲಯ ಗಿಫ್ಟ್!

ನಾದ ಬ್ರಹ್ಮ ಡಾ.‌ಹಂಸಲೇಖ ಅವರಿಗೆ ಇಂದು ಹುಟ್ಟು‌ಹಬ್ಬ. ಹಾಗಂತ ಅವರು ಎಂದಿಗೂ ಗ್ರಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡವರಲ್ಲ. ಬಲವಂತವಾಗಿ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಬೇಕು ಅಂದಾಗಲೂ ಅದರಲ್ಲೊಂದು ವಿಶೇಷತೆ ಇರಲಿ ಅಂತ‌ ಬಯಸುವ ವ್ಯಕ್ತಿತ್ವ ಹಂಸಲೇಖ ಅವರದ್ದು. ಅದರಲ್ಲೂ ಈಗ ಕೊರೊನಾ ಸಂಕಷ್ಟದ ಕಾಲ. ಇಂತಹ ಸಂದರ್ಭದಲ್ಲಿ ಹಂಸಲೇಖ ಅವರು ಗ್ರಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರಾ?

ಇಲ್ಲ, ಗ್ರಾಂಡ ಸೆಲೆಬ್ರೇಷನ್ ಬದಲಿಗೆ ಈ ವರ್ಷದ ಹುಟ್ಟು ಹಬ್ಬಕ್ಕೆ ಅವರು ಅಭಿಮಾನಿಗಳಿಗೆ, ಕನ್ನಡ ನಾಡಿನ ಸಾಹಿತ್ಯ ಅಭಿಮಾನಿಗಳಿಗೆ ವಿಶೇಷವಾದ ಒಂದು ಕೊಡುಗೆ ನೀಡಿದ್ದಾರೆ. ‌ಅದುವೇ ಶಾರದಾ ಪುಸ್ತಕಾಲಯ. ಹೌದು, ನಾಡಿನ ಪುಸ್ತಕ ಮಳಿಗೆಗಳ ಸಾಲಿಗೆ ಈಗ ಹಂಸಲೇಖ ಅವರ ಶಾರದಾ ಪುಸ್ತಕಾಲಯವೂ ಒಂದು. ಸಂಗೀತ, ಸಾಹಿತ್ಯ ಅಂತಲೇ ಇಲ್ಲಿ ತನಕ ಹಾಸಿ, ಹೊದ್ದು ಉಸಿರಾಡುತ್ತಾ ಬಂದ ಹಂಸಲೇಖ ಅವರು ಈಗ ಪುಸ್ತಕಾಲಯ ಶುರು ಮಾಡಿದ್ದೆ ಒಂದು ವಿಶೇಷ.
ಬುಧವಾರ ಅವರ ಹುಟ್ಟು ಹಬ್ಬದ ದಿನವೇ ಬೆಂಗಳೂರಿನ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅಬಕಾರಿ ಸಚಿವ ಗೋಪಾಲಯ್ಯ ದೀಪಾ ಬೆಳಗಿ, ಟೇಪ್ ಕತ್ತರಿಸುವ ಮೂಲಕ ಶಾರದಾ ಪುಸ್ತಕಾಲಯ ಉದ್ಘಾಟಿಸಿದರು.

ಹಂಸಲೇಖ ಅವರು ಎಲ್ಲಾ ಬಿಟ್ಟು‌ ಈಗ ಯಾಕೆ ಪುಸ್ತಕಾಲಯ ಮಾಡಿದರು? ಅದರಲ್ಲೇನು ವಿಶೇಷತೆ ಇಲ್ಲ.‌ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲೇ ಅವರು ದೈತ್ಯ‌ ಪ್ರತಿಭೆ ಎನಿಸಿಕೊಂಡವರು. ಹಾಗಾಗಿ ಪುಸ್ತಕಾಲಯ ಅಂತ ಶುರು‌ ಮಾಡಿರುವುದಕ್ಕೆ ಆಂತಹದೇನು ವಿಶೇಷತೆ ಇಲ್ಲ.

ಅದರೆ, ಪುಸ್ತಕಾಲಯದ ನಂಟು‌ ಈಗೇಕೆ? ಅಲ್ಲಿ ಏನೆಲ್ಲ ಸಿಗುತ್ತೆ? ಆ ಬಗ್ಗೆ ಬುಧವಾರ( ಜೂನ್ 23) ಸಂಜೆ ಫೇಸ್ ಬುಕ್ ಲೈವ್ ನಲ್ಲಿ ಎಲ್ಲವನ್ನು ಹೇಳುತ್ತಾರಂತೆ.‌ ಸಂಜೆ 5 ಗಂಟೆಗೆ, ಫೇಸ್ ಬುಕ್‌ಲೈವ್ ನಲ್ಲಿ‌ ಹಂಸಲೇಖ ಬರಲಿದ್ದಾರೆ. ಅಲ್ಲೊಂದಷ್ಟು ಮಾತುಕತೆ ಅ
ನಡೆಯಲಿದೆ.

Categories
ಸಿನಿ ಸುದ್ದಿ

ಸಿನಿಮಾ‌ ಕಾರ್ಮಿಕರ ನೆರವಿಗೆ ‌ಬಂದ ಶಿವರಾಜ್ ಕುಮಾರ್; ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಹುಟ್ಟು‌ಹಬ್ಬದಂದೇ 10 ಲಕ್ಷ ರೂ. ಚೆಕ್ ವಿತರಣೆ

‌ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಿನಿಮಾ‌ ಕಾರ್ಮಿಕರ ನೆರವಿಗೆ ನಟ‌‌ ಶಿವರಾಜ್ ಕುಮಾರ್ ಬಂದಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ‌ದಿನದಂದೇ ಸಿನಿಮಾ‌ಕಾರ್ಮಿಕರ ನೆರವಿಗೆ ಅವರು 10ಲಕ್ಷ ರೂ.‌ಧನ‌ ಸಹಾಯ ನೀಡಿದ್ದಾರೆ.

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗಳ‌ ಪರವಾಗಿ‌ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು‌ ಮಂಗಳವಾರ ಕಾರ್ಮಿಕರ‌ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಅವರಿಗೆ 10 ಲಕ್ಷ ರೂ.ಗಳ‌ ಚೆಕ್ ವಿತರಿಸಿದರು. ನಟ ಅರುಣ್ ಸಾಗರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಈ ವೇಳೆ ಹಾಜರಿದ್ದರು.

ನಿರ್ಮಾಪಕಿಯೂ ಆದ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಂಗಳವಾರ ಹುಟ್ಟು ಹಬ್ಬ. ಬೆಂಗಳೂರಿನ‌ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು‌. ಅಖಿಲ‌ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ‌ ಸಂಘದ ಅಧ್ಯಕ್ಷ ಕೆ.ಪಿ. ಶ್ರೀಕಾಂತ್ ಅವರು ಕೂಡ ತಮ್ಮ‌ ಸದಸ್ಯರ‌ ಜತೆಗೆ ಕೇಕ್ ಕತ್ತರಿಸುವ ಮೂಲಕ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬ ಆಚರಿಸಿದರು.

ಇದೇ ಸಂದರ್ಭದಲ್ಲಿ ಸಿನಿಮಾ‌ ಕಾರ್ಮಿಕರ ನೆರವಿಗೆ ಗೀತಾ ಶಿವರಾಜ್ ಕುಮಾರ್ 10 ಲಕ್ಷ ರೂ. ನೆರವಿನ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ‌ ಕಾರಣಕ್ಕೆ ಸಿನಿಮಾ ಮಂದಿ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಬದುಕು ಕಷ್ಟದಲ್ಲಿದೆ.

ಹಾಗಾಗಿ ಅವರ ಕಷ್ಟಕ್ಕೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದರು. ಶಿವರಾಜ್ ಕುಮಾರ್ ಈ ವೇಳೆ ಕೂಡ ಮಾತನಾಡಿದರು.

error: Content is protected !!