ಏನ್‌ ಸಖತ್‌ ಗುರು…! ಗಣಿ-ಪ್ರೇಮ್‌ ಸಖತ್‌ ಸಾಂಗು- ಗೋಲ್ಡ್‌ ಫ್ಯಾನ್ಸ್‌ಗೆ ಸಖತ್‌ ಗುಂಗು!!

ಕನ್ನಡ ಚಿತ್ರರಂಗದಲ್ಲಿ “ಚಮಕ್‌” ಮೂಲಕ ಒಂದೊಳ್ಳೆಯ ಚಮಕ್‌ ಕೊಟ್ಟಿದ್ದ ನಿರ್ದೇಶಕ ಸಿಂಪಲ್‌ ಸುನಿ ಮತ್ತು ನಟ ಗಣೇಶ್‌, ಈಗ ಮತ್ತೆ ಜೊತೆಯಾಟ ಮುಂದುವರೆಸಿದ್ದಾರೆ. ಮೊದಲ ಮ್ಯಾಚ್‌ನಲ್ಲೇ ಭರ್ಜರಿ ಸಿಕ್ಸು, ಬೌಂಡರಿಗಳನ್ನು ಬಾರಿಸಿದ್ದ ಈ ಜೋಡಿ ಮತ್ತದೇ ಉತ್ಸಾಹದಲ್ಲಿ ಫೀಲ್ಡ್‌ಗಿಳಿಯೋಕೆ ರೆಡಿಯಾಗಿದೆ. ಅಂದಹಾಗೆ, ಈ ಇಬ್ಬರು “ಸಖತ್‌” ಮೂಲಕ ಸಖತ್‌ ಮೋಡಿ ಮಾಡೋಕೆ ಬರುತ್ತಿದ್ದಾರೆ. ನವೆಂಬರ್‌ 26 ರಂದು “ಸಖತ್‌” ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಈಗಾಗಲೇ ಸಖತ್‌ ಸಿನಿಮಾ ಸಖತ್‌ ಸೌಂಡು ಮಾಡಿದೆ. ಅದು ಪೋಸ್ಟರ್‌ ಇರಲಿ, ಹಾಡಿರಲಿ, ಟೀಸರ್‌ ಇರಲಿ…. ಈಗ ಸಿನಿಮಾ ನೋಡೋಕೆ ಗಣೇಶ್‌ ಫ್ಯಾನ್ಸ್‌ ಮಾತ್ರವಲ್ಲ, ಕನ್ನಡಿಗರೂ ಕಾತುರರಾಗಿದ್ದಾರೆ. ಅದಕ್ಕೆ ಕಾರಣ, ಗಣೇಶ್‌ ಮತ್ತು ಸುನಿ ಕಾಂಬಿನೇಷನ್‌ನ ಸಿನಿಮಾ ಅನ್ನೋದು.
ಹೌದು, ಸಿನಿಮಾ ನವೆಂಬರ್‌ 26ಕ್ಕೆ ತೆರೆ ಕಾಣುತ್ತಿದೆ.

ಅದರ ಹಿನ್ನೆಲೆಯಲ್ಲಿ ಚಿತ್ರತಂಡ ಸಖತ್‌ ಆಗಿಯೇ ಪ್ರೀ-ರಿಲೀಸ್ ಇವೆಂಟ್ ನಡೆಸಿತು. ಆ ಕಲರ್‌ಫುಲ್‌ ವೇದಿಕೆಯಲ್ಲಿ ಸಖತ್‌ ಮಾತು ಕತೆ ಇತ್ತು, ಸಖತ್‌ ಖುಷಿಯೂ ಇತ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ ಸಿನಿಮಾವಿದು. ಅಂದು ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಸಾಂಗ್ಸ್ ಮೂಲಕ ಮತ್ತುಷ್ಟು ಕುತೂಹಲ ಮೂಡಿಸಿತು.

ಸಖತ್ ಅನ್ನೋದೇ ಸಖತ್‌ ಆಗಿದೆ ಅಂದಮೇಲೆ, ಅಲ್ಲಿರುವ ಎಲ್ಲವೂ ಸಖತ್‌ ಆಗಿರುತ್ತೆ ಅನ್ನೋದು ಚಿತ್ರತಂಡದ ಅಭಿಪ್ರಾಯ. ಆ ಕಲರ್‌ಫುಲ್‌ ವೇದಿಕಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್-ನಿಶಾ, ಹಿರಿಯ ಕಲಾವಿದರ ರಂಗಾಯಣ ರಘು, ನಿರ್ದೇಶಕ ಕಂ ನಟ ಜೋಗಿ ಪ್ರೇಮ್, ನಟಿ ಶ್ರೀಲೀಲಾ ಸೇರಿದಂತೆ ಸ್ಯಾಂಡಲ್‌ವುಡ್‌ನ ಕಲಾವಿದರು ಭಾಗವಹಿಸಿದ್ದರು.

ಗಣೇಶ್ ಮತ್ತು ಪ್ರೇಮ್ ಒಟ್ಟಿಗೆ ವೇದಿಕೆ ಏರಿದರು. ಈ ವೇಳೆ ಗಣೇಶ್ ಪ್ರೇಮ್‌ ಅವರಿಗೆ ಒಂದು ಮನವಿ ಮಾಡಿಕೊಂಡರು. “ಎಕ್ಸ್ ಕ್ಯೂಸ್ ಮೀ” ಸಿನಿಮಾದ ಬ್ರಹ್ಮ ವಿಷ್ಣು ಹಾಡು ಹೇಳುವಂತೆ ಕೋರಿಕೊಂಡರು. ಅದಕ್ಕೆ ಅಕ್ಕರೆಯಿಂದ ಪ್ರತಿಕ್ರಿಯಿಸಿದ ಪ್ರೇಮ್, ಆ ಹಾಡು ಹೇಳುವ ಮೂಲಕ ಗಣೇಶ್‌ ಖುಷಿಗೆ ಕಾರಣರಾದರು. ಈ ವೇಳೆ ಗಣೇಶ್ ಕೂಡ ಧನಿಗೂಡಿಸಿ ಬ್ರಹ್ಮ ವಿಷ್ಣು ಹಾಡು ಹೇಳಿ ಅಭಿಮಾನಿಗಳ ಚಪ್ಪಾಳೆಗೆ ಕಾರಣರಾದರು.

ಇದಕ್ಕೂ ಮುನ್ನ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಅಗಲಿದ ಪವರ್‌ ಸ್ಟಾರ್‌ ಪುನೀತ್‌ ಅವರನ್ನು ನೆನಪಿಸಿಕೊಂಡರು. ಅವರನ್ನು ನಮಿಸಿದ ಗಣೇಶ್‌, ” ಪವರ್ ಸ್ಟಾರ್ ಕನ್ನಡ ಚಿತ್ರರಂಗ ಇರುವವರೆಗೂ ನಂಬರ್-1 ಸ್ಟಾರ್ ಅಂತ ಮನದ ಮಾತು ಬಿಚ್ಚಿಟ್ಟರು. ಬಳಿಕ ತಮ್ಮ ಚಂದದ ಮಾತಿನ ಮೂಲಕ ಎಲ್ಲರನ್ನೂ ನಕ್ಕು ನಲಿಸಿದ ಗಣಪ ಸಖತ್ ಸಿನಿಮಾ ಎಲ್ಲರೂ ನೋಡಿ ಎಂದು ಮನವಿ ಮಾಡಿಕೊಂಡರು.

ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಸ್ಯನಟ ಧರ್ಮಣ್ಣ ಕಡೂರು, ರಂಗಾಯಣ ರಘು ಸಖತ್ ಸಿನಿಮಾದಲ್ಲಿನ ಜರ್ನಿ ಬಗ್ಗೆ ಹೇಳಿಕೊಂಡರು. ಟಿವಿ ರಿಯಾಲಿಟಿ ಶೋ ಸುತ್ತ ಹೆಣೆದಿರುವ ಸಖತ್ ಸಿನಿಮಾಕ್ಕೆ ಸುಪ್ರಿತ್ ಹಾಗೂ ನಿಶಾ ಬಂಡವಾಳ ಹೂಡಿದ್ದು, ಈಗಾಗಲೇ ಸೆನ್ಸಾರ್ ಮುಗಿಸಿ ನವೆಂಬರ್‌ 26ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

Related Posts

error: Content is protected !!