Categories
ಸಿನಿ ಸುದ್ದಿ

ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪನೆ; ಡಾ.ವಿಷ್ಣು ಸೇನಾ ಸಮಿತಿ ನಿರ್ಧಾರ

ವೀರಕಪುತ್ರ ಶ್ರೀನಿವಾಸ್ ಅಂದಾಕ್ಷಣ ಥಟ್ಟನೆ ನೆನಪಾಗೋದೆ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಹೌದು, ವಿಷ್ಣುವರ್ಧನ್ ಅವರ ಕುರಿತ ಅನೇಕ ಉಪಯುಕ್ತ ಕೆಲಸ ಮಾಡಿದವರು. ದಾದಾ ಅಭಿಮಾನಿಗಳನ್ನು ತಮ್ಮೊಟ್ಟಿಗೆ ಕಟ್ಟಿಕೊಂಡು ಹಲವು ವರ್ಷಗಳಿಂದಲೂ ಜನಪರ ಕೆಲಸ ಮಾಡಿದವರು. ಈಗಲೂ ಅದೇ ಕಾಯಕದಲ್ಲಿದ್ದಾರೆ. ಇನ್ನೂ ಒಂದಷ್ಟು ಹೊಸ ಹೆಜ್ಜೆ ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಹಲವು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ. ವಿಷ್ಣುವರ್ಧನ್ ಹೆಸರಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋ ಡೀಟೆಲ್ಸ್ ಇಲ್ಲಿದೆ…

ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದ ಡಾ.ವಿಷ್ಣು ಸೇನಾ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು. ಕಳೆದ ಐದು ವರ್ಷದಿಂದ ಪ್ರತಿವರ್ಷವೂ ಸಭೆ ಸೇರಿ ಹಿಂದಿನ ಸಾಲಿನ ಚಟುವಟಿಕೆಗಳ ಪರಾಮರ್ಶೆ ಮತ್ತು ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತವಾಗುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ಹಲವು ಯೋಜನೆಗಳನ್ನು ಮುಂದಿನ ವರ್ಷದಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಸಮಿತಿ ಬಂದಿದೆ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್/ಕೆಎಎಸ್ ತರಬೇತಿ ಒದಗಿಸುವ ಸಲುವಾಗಿ ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪಿಸುವುದು. ಡಾ.ವಿಷ್ಣುವರ್ಧನ ಅವರ ಬದುಕು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಡೆಗೆ ವಿಷ್ಣುವರ್ಧನ ಎಂಬ ಯೋಜನೆ ರೂಪಿಸುವುದು. ಆ ಯೋಜನೆಯಂತೆ ರಾಜ್ಯದ ಎಲ್ಲಾ ಪ್ರಾಥಮಿಕ , ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಾ.ವಿಷ್ಣುವರ್ಧನ ಬದುಕು ಸಾಧನೆಗಳ ಕುರಿತಾದ ಕಿರುಹೊತ್ತಿಗೆಯನ್ನು ವಿತರಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದಾದರೂ ಪ್ರಮುಖ ರಸ್ತೆಗೆ ಅಥವಾ ಕಲಾಭವನಕ್ಕೆ ಡಾ.ವಿಷ್ಣುವರ್ಧನ ಅವರ ಹೆಸರನ್ನು ಇಡಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುವುದು.
ಡಾ.ವಿಷ್ಣು ಕುಟುಂಬದ ಜೊತೆಗಿನ ಬಿನ್ನಾಭಿಪ್ರಾಯ ಮರೆತು ಅವರ ಎಲ್ಲಾ ವಿಚಾರ ಮತ್ತು ಯೋಜನೆಗಳಿಗೆ ಜೊತೆಯಾಗಿ ನಿಲ್ಲುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.


ಸಭೆಯಲ್ಲಿ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್, ರಘು ಎಸ್, ವಿಷ್ಣುಪ್ರಕಾಶ್, ರಾಧಾ ಗಂಗಾಧರ್, ಕೆ.ವಿನಯ್ ಸೇರಿದಂತೆ ವಿಷ್ಣು ಅಭಿಮಾನಿಗಳು ಇದ್ದರು.

Categories
ಸಿನಿ ಸುದ್ದಿ

ಆರು ಭಾಷೆಯಲ್ಲಿ ಮಡ್ಡಿ; ಡಿಸೆಂಬರ್ 10 ರಿಲೀಸ್

ಡಾ. ಪ್ರಗ್ಬಲ್ ನಿರ್ದೇಶನದ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ…

ಭಾರತದಲ್ಲಿ ಇದೇ ಮೊದಲ ಬಾರಿಗೆ ಮಡ್ ರೇಸ್ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ.
ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಡಿಸೆಂಬರ್ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ಮ್ಯಾನೇಜ್ಮೆಂಟ್ ನಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಡಾ. ಪ್ರಗ್ಬಲ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ನನ್ನದು ಇದು ಮೊದಲ ನಿರ್ದೇಶನದ ಚಿತ್ರ. ಮಡ್ ರೇಸ್ ಕಥೆಯಿಟ್ಟುಕೊಂಡು ಭಾರತದಲ್ಲಿ ತಯಾರಾಗಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ‌ ನಿರ್ಮಾಣಕ್ಕೆ ಐದು ವರ್ಷಗಳ ಸಮಯ ಹಿಡಿದಿದೆ. ಒಂದು ವರ್ಷ ಲೊಕೇಶನ್ ಹುಡುಕಾಟ ಮಾಡಿ, ಕೊನೆಗೆ ತಮಿಳುನಾಡು ಹಾಗೂ ‌ಕೇರಳ ಗಡಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸಿನಿಮಾ ಇದು. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ರವಿ ಅವರು ಬರೀ ಸಂಗೀತಕಷ್ಚೇ ಸೀಮಿತವಾಗದೆ, ನನ್ನ ಬೆನ್ನ ಹಿಂದೆ ನಿಂತು, ನನಗೆ ಮಾರ್ಗದರ್ಶನ ಮಾಡಿದ್ದಾರೆ. ನೂತನ ಕಲಾವಿದರ ಹಾಗೂ ನುರಿತ ತಂತ್ರಜ್ಞರ ಸಮಾಗಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಚಿತ್ರ ನಿರ್ದೇಶಕ ಡಾ.ಪ್ರಗ್ಬಲ್.

ನನಗೆ ಛಾಯಾಗ್ರಹಕ ರತೀಶ್ ಅವರು ಫೋನ್ ಮಾಡಿ ಈ‌ ರೀತಿಯ ಚಿತ್ರವೊಂದು ತಯಾರಾಗುತ್ತಿದೆ. ನೀವೇ ಸಂಗೀತ ಮಾಡಬೇಕೆಂದು ಕೇಳಿದರು. ಸ್ವಲ್ಪ ಬ್ಯುಸಿ ಇದ್ದುದರಿಂದ ನಾನು ಏನು ಹೇಳಿರಲಿಲ್ಲ. ಕೆಲವು ದಿನಗಳ ನಂತರ ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ತೆರಳಿದೆ. ಅಲ್ಲಿ ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದ ಶೈಲಿ ನೋಡಿ ಬೆರಗಾದೆ. ಅಬ್ಬಾ ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತಿತ್ತು. ಚಿಕ್ಕ ಬಜೆಟ್ ನ ಸಿನಿಮಾ ಎಂದು ಆರಂಭವಾಗಿ, ಚಿತ್ರೀಕರಣ ಸಾಗುತಾ ಅಪಾರವೆಚ್ಚದ ಅದ್ದೂರಿ ಸಿನಿಮಾವಾಗಿ “ಮಡ್ಡಿ” ನಿರ್ಮಾಣವಾಗಿದೆ. ನಾನು ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಎರಡುವರ್ಷಗಳ ಅವಧಿ ಹಿಡಿಸಿದೆ.


ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರ ಗಂಡ – ಹೆಂಡತಿ ಇದ್ದ ಹಾಗೆ. ಅವರಿಬ್ಬರ ನಡುವಿನ ಹೊಂದಾಣಿಕೆ ಮುಖ್ಯ. ಇದು ಮೂರು ರಾಜ್ಯಗಳ ಸಿನಿಮಾ ಎನ್ನಬಹುದು ಏಕೆಂದರೆ ನಾನು ಕರ್ನಾಟಕದವನು, ನಿರ್ದೇಶಕರು ಕೇರಳದವರು ಹಾಗೂ ಸಂಕಲನಕಾರರು ತಮಿಳುನಾಡಿನವರು. ಒಟ್ಟಿನಲ್ಲಿ “ಮಡ್ಡಿ” ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಟ್ರೇಲರ್ ಇರುವ ಹಾಗೆ ಇಡೀ ಚಿತ್ರ ಕೂಡ ಹಾಗೆ ಇರುತ್ತದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ‌ಎಂದರು ಸಂಗೀತ ನಿರ್ದೇಶಕ ರವಿ ಬಸ್ರೂರ್.

ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ. ಸುಮಾರು 400 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ನಿರ್ದೇಶಕರು ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾರೆ ಒಳ್ಳೆಯದಾಗಲಿ ಎಂದರು ವಿತರಕ ಭಾಷಾ.

ಪ್ರೇಮಕೃಷ್ಣ ದಾಸ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರಗ್ಬಲ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಯವನ್ ಕೃಷ್ಣ, ರಿಧಾನ್ ಕೃಷ್ಣ, ಅಮಿತ್ ಶಿವದಾಸ್, ಅನುಶಾ ಸುರೇಶ್, ರೆಂಜಿ ಪಣಿಕರ್, ಹರೀಶ್ ಪೆರಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಕನಸಿನ ಗಂಧದ ಗುಡಿ ನೋಡೋಕೆ ನಾನೂ ಕಾತುರ; ಶಿವಣ್ಣ

ಪುನೀತ್‌ ರಾಜಕುಮಾರ್‌ ಅವರು ಪ್ರೀತಿಯಿಂದಲೇ ನಿರ್ಮಾಣ ಮಾಡಿದ “ಗಂಧದ ಗುಡಿ” ಎಂಬ ವಿಶೇಷ ಡಾಕ್ಯುಮೆಂಟರಿ ಪಾರ್ವತಮ್ಮ ರಾಜಕುಮಾರ್‌ ಅವರ ಹುಟ್ಟುಹಬ್ಬದಂದು ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಟೈಟಲ್‌ ಟೀಸರ್ ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ನಟ,ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಕೂಡ ಟೀಸರ್‌ ನೋಡಿ ಪ್ರತಿಕ್ರಿಯಿಸಿದ್ದು ಹೀಗೆ.

“ಅಪ್ಪು ಮಾಡಿರುವ ಗಂಧದ ಗುಡಿ ಟೀಸರ್‌ ತುಂಬಾನೇ ಚೆನ್ನಾಗಿದೆ. ಒಂದು ಡಿಫರೆಂಟ್‌ ಫಾರ್ಮೆಟ್‌ನಲ್ಲಿದೆ. ಕಾಡಿನ ಅಮೂಲ್ಯತೆ ಬಗ್ಗೆ ಡಾಕ್ಯುಮೆಂಟರಿ ಇದೆ. ಈಗಿನ ಕಾಲಕ್ಕೆ ತುಂಬ ಸೂಕ್ತ ಎನಿಸುತ್ತೆ. ಕಾಡು ಸೇವ್‌ ಮಾಡಬೇಕೆಂಬ ವಿಷಯ ಅದರದ್ದು. ಅಪ್ಪು ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದಾರೆ ಅಲ್ಲಿ. ಸ್ಟಾರ್‌ಡಮ್‌ ಬಿಟ್ಟು ಬೇರೆ ರೀತಿ ತೊಡಗಿಸಿಕೊಳ್ಳುವುದಿದೆಯಲ್ಲ ಅದೊಂದು ವಿಶೇಷ. ಈ ಕುರಿತಂತೆ ಹಿಂದೆಯೇ, ಗಂಧದ ಗುಡಿ ಕುರಿತು ನನ್ನ ಬಳಿ ಅಪ್ಪು ಹೇಳಿದ್ದರು. ನಾನೂ ಕೂಡ ಅದನ್ನ ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ.

ಅಲ್ಲಿ ಕಾಡಿನ ರಕ್ಷಣೆ ಬಗ್ಗೆ ಹೇಳಲಾಗಿದೆ. ಒಂದೊಳ್ಳೆಯ ಜಾಗೃತಿ ಮೂಡಿಸುವ ಸಿನಿಮಾ ಅದು. ಕರ್ನಾಟಕ ಅರಣ್ಯ ಕುರಿತಂತೆ ಅಪ್ಪು ಮಾಡಿರುವುದು ಹೆಮ್ಮೆ ಎನಿಸುತ್ತದೆ. ಈ ಹಿಂದೆ ಕೂಡ ಎಂ.ಪಿ.ಶಂಕರ್‌, ಕೂಡ ಕಾಡಿನ ಕುರಿತಂತೆ ಸಿನಿಮಾ ಮಾಡಿದ್ದರು. ಪ್ರಭಾಕರ್‌ ಅವರು ಸಹ ಕಾಡಿನರಾಜ ಸಿನಿಮಾ ಮಾಡಿದ್ದರು. ನಾನು ಸಿನಿಮಾ ನೋಡೋಕೆ ಕಾಯುತ್ತಿದ್ದೇನೆʼ ಎಂದಿದ್ದಾರೆ. ಪಿಆರ್‌ಕೆ ಮೂಲಕ ೨೦೨೨ರಲ್ಲಿ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Categories
ಸಿನಿ ಸುದ್ದಿ

ಮತ್ತೆ ಸುದ್ದಿಯಲ್ಲಿ ಲಹರಿ ಸಂಸ್ಥೆ! ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ…

ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೌದು, ಈಗಾಗಲೇ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಈ ಸಂಸ್ಥೆ, ಇದೀಗ ಮತ್ತೊಂದು ಸಂತೋಷದ ವಿಷಯಕ್ಕೆ ಕಾರಣವಾಗಿದೆ.

ಇದೇ ಮೊದಲ ಬಾರಿಗೆ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಬಿಡುಗಡೆಯಾದ ಆಲ್ಬಂವೊಂದು ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಸಹಜವಾಗಿಯೇ ಲಹರಿ ಮ್ಯೂಸಿಕ್‌ ಸಂಸ್ಥೆಯ ಲಹರಿ ವೇಲು ಅವರಿಗೆ ಇದು ಖುಷಿಯಾಗಿದೆ. ಅಂದಹಾಗೆ, ಭಾರತೀಯ ಚಿತ್ರತಂಗದಲ್ಲೇ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ಮುಖ್ಯ ಕಾರಣ, ಅದು ಸಂಗೀತ ನಿರ್ದೇಶಕ, ಗಾಯಕ ರಿಕಿ ಕೇಜ್.‌


ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್‌” ಹೆಸರಿನ ಆಲ್ಬಂ ಇದೀಗ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಹಾಗೆ ನೋಡಿದರೆ, ರಿಕ್ಕಿ ಕೇಜ್‌ ಅವರಿಗೆ ಇದೇನು ಹೊಸದಲ್ಲ. ಕಳೆದ ಐದು ವರ್ಷಗಳ ಹಿಂದೆಯೇ ರಿಕಿ ಕೇಜ್‌ ಅವರು ಗ್ರ್ಯಾಮಿ ಅವಾರ್ಡ್‌ ಪಡೆದುಕೊಂಡಿದ್ದರು. ಈಗ ಎರಡನೇ ಬಾರಿಗೆ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶೇಷವೆಂದರೆ, ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್”‌ ಆಲ್ಬಂ ಪ್ರಪಂಚದ ಅದ್ಭುತ ಆಲ್ಬಂಗಳ ಸಾಲಿಗೆ ಸೇರಿದ್ದು, ಪ್ರಪಂಚಾದ್ಯಂತ ಬಂದ ಆಲ್ಬಂಗಳನ್ನು ಹಿಂದಕ್ಕೆ ತಳ್ಳಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಸಹಜವಾಗಿಯೇ ಇದು ಕನ್ನಡಕ್ಕೆ ಹೆಮ್ಮೆಯ ವಿಷಯವೇ ಸರಿ. ಯಾಕೆಂದರೆ, ರಿಕಿ ಕೇಜ್‌ ಕೂಡ ಮೂಲತಃ ಕರ್ನಾಟಕದವರು. ಅದರಲ್ಲೂ ದಕ್ಷಿಣ ಭಾರತದಲ್ಲೇ ಪ್ರಖ್ಯಾತಿ ಪಡೆದಿರುವ ಲಹರಿ ಮ್ಯೂಸಿಕ್‌ ಸಂಸ್ಥೆಯಡಿ ಈಗಾಗಲೆ 1.26 ಲಕ್ಷ ಆಲ್ಬಂ ಹಾಡುಗಳಿವೆ. ಸೂಪರ್‌ ಹಿಟ್‌ ಹಾಡುಗಳನ್ನು ಕೊಟ್ಟಿರುವ ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈಗ ಇದೇ ಮೊದಲ ಸಲ “ಡಿವೈನ್‌ ಟೈಡ್ಸ್‌” ಆಲ್ಬಂ ಲಹರಿ ಸಂಸ್ಥೆಯಡಿ ಬಂದಿದ್ದು, ಆ ಆಲ್ಬಂ ಗ್ರ್ಯಾಮಿ ಅವಾರ್ಡ್‌ಗೆ ಹೋಗಿರೋದು ಸಂತಸದ ವಿಷಯ. ಭಾರತದಲ್ಲೇ ಮೊದಲ ಬಾರಿಗೆ ಲಹರಿ ಸಂಸ್ಥೆ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ಸ್ವತಃ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಅವರೇ ಸಂತೋಷಗೊಂಡಿದ್ದಾರೆ.

ಅಂದಹಾಗೆ, 64 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್‌ಗೆ “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ನಾಮನಿರ್ದೇಶನಗೊಂಡಿದೆ. ಸ್ಟೀವರ್ಟ್ ಕೋಪ್ಲ್ಯಾಂಡ್ (ಪೊಲೀಸ್) ಮತ್ತು ರಿಕಿ ಕೇಜ್ ‘ಡಿವೈನ್ ಟೈಡ್ಸ್’ ಗಾಗಿ ಗ್ರ್ಯಾಮಿ ನಾಮನಿರ್ದೇಶನವನ್ನು ಪಡೆದುಕೊಂಡಿದ್ದಾರೆ. ಈ ನಾಮನಿರ್ದೇಶನದ ಕುರಿತಂತೆ ರೆಕಾರ್ಡಿಂಗ್ ಅಕಾಡೆಮಿಯ ಸಿಇಒ ಹಾರ್ವೆ ಮೇಸನ್ ಜೂನಿಯರ್ ಅವರು ಘೋಷಣೆ ಮಾಡಿದ್ದಾರೆ. ಕಳೆದ 2015ರಲ್ಲಿ ರಿಕಿ ಕೇಜ್ ಅವರ “ವಿಂಡ್ಸ್ ಆಫ್ ಸಂಸಾರ” ಎಂಬ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿ, ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂ ಬಂದು ಅದು ಯಶಸ್ವಿಯಾಗಿತ್ತು. ಇದರೊಂದಿಗೆ ಯುಎಸ್‌ನ ಬಿಲ್‌ಬೋರ್ಡ್ ನ್ಯೂ ಏಜ್ ಆಲ್ಬಮ್‌ಗಳ ಚಾರ್ಟ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಇದು ಭಾರತೀಯ ಮೂಲದ ವ್ಯಕ್ತಿಗೆ ಮೊದಲನೆ ಪ್ರಶಸ್ತಿ ಎಂಬುದು ವಿಶೇಷವಾಗಿತ್ತು. ರಿಕಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಮತ್ತು 4 ನೇ ಭಾರತೀಯ. 5-ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರು ಪೌರಾಣಿಕ ಬ್ರಿಟಿಷ್ ರಾಕ್ ಗ್ರೂಪ್‌ನ ‘ದಿ ಪೋಲಿಸ್’ ಸ್ಥಾಪಕ ಮತ್ತು ಡ್ರಮ್ಮರ್ ಆಗಿದ್ದಾರೆ.

ಪ್ರಪಂಚದಾದ್ಯಂತದ ಕಲಾವಿದರನ್ನು ಒಳಗೊಂಡಿರುವ ಪ್ರಸ್ತುತ ಗ್ರ್ಯಾಮಿ ನಾಮನಿರ್ದೇಶಿತ ಸಂಗೀತ ಆಲ್ಬಂ ‘ಡಿವೈನ್ ಟೈಡ್ಸ್’ ನಮ್ಮ ನೈಸರ್ಗಿಕ ಪ್ರಪಂಚದ ವೈಭವ ಮತ್ತು ಜಾತಿಗಳ ಸ್ಥಿತಿ ಸ್ಥಾಪಕತ್ವಕ್ಕೆ ಗೌರವವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಆಲ್ಬಂ 9 ಹಾಡುಗಳು ಮತ್ತು 8 ಸಂಗೀತ ವೀಡಿಯೊಗಳನ್ನು ಒಳಗೊಂಡಿದೆ, ಇದನ್ನು ಭಾರತೀಯ ಹಿಮಾಲಯದ ಸೊಗಸಾದ ಸೌಂದರ್ಯದಿಂದ ಸ್ಪೇನ್‌ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ. ‘ಡಿವೈನ್ ಟೈಡ್ಸ್’ ಈಗಾಗಲೇ ಪ್ರಪಂಚದಾದ್ಯಂತದ ವಿವಿಧ ಉತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ದಕ್ಷಿಣ ಭಾರತದ ಪ್ರಮುಖ ರೆಕಾರ್ಡ್ ಲೇಬಲ್ ಆದ ಲಹರಿ ಮ್ಯೂಸಿಕ್‌ನಿಂದ ಸಂಗೀತ ವೀಡಿಯೊಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. 64 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನವರಿ 31, 2022 ರಂದು ನಡೆಯಲಿದೆ. ಈ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುವುದು.

Categories
ಸಿನಿ ಸುದ್ದಿ

ಅಪ್ಪು ಕಂಡ ಕನಸಿದು… ಗಂಧದ ಗುಡಿ!

ಪುನೀತ್‌ ರಾಜಕುಮಾರ್‌ ಅವರ ಕನಸಿನ ಪಯಣವಿದು. ಇದುವರೆಗೂ ಕಂಡಿರದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅನುಭವ ಅದು. ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನವೇ ಗಂಧದ ಗುಡಿ…

ಹೌದು, ಅಪ್ಪು ಅವರು “ಗಂಧದ ಗುಡಿ” ಎಂಬ ಅಪರೂಪ ಎನಿಸುವ ಹೊಸ ಜಗತ್ತಿನ ಒಡಲಾಳವನ್ನು ಬೆರಗುಗಣ್ಣಿನಿಂದ ವೀಕ್ಷಿಸಿ, ಅದನ್ನು ತಮ್ಮದೇ ಆದಂತಹ ಶೈಲಿಯಲ್ಲಿ ವಿಶ್ಲೇಷಿಸಿದ ಚಿತ್ರಣವಿದು. ಈಗ “ಗಂಧದ ಗುಡಿ”ಯ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ.

ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಇದನ್ನು ನಿರ್ಮಿಸಿದ್ದಾರೆ. ಅಮೋಘ ವರ್ಷ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರಣವಿದು. ಈಗಾಗಲೇ ಗಂಧದ ಗುಡಿ ಟೈಟಲ್ ಟೀಸರ್‌ ‌ಪಿಆರ್‌ಕೆ ಚಾನೆಲ್‌ನಲ್ಲಿ ರಿಲೀಸ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Categories
ಸಿನಿ ಸುದ್ದಿ

ಮರಿ ಟೈಗರ್ ಹೊಸ ಹೆಜ್ಜೆ! ಟೈಗರ್ ಟಾಕೀಸ್ ನಿರ್ಮಾಣ ಸಂಸ್ಥೆ ಶುರು ಮಾಡಿದ ವಿನೋದ್ ಪ್ರಭಾಕರ್…

ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಹೆಸರು ಅಮರ. ದೈಹಿಕವಾಗಿ ಅವರಿಲ್ಲ. ಆದರೆ, ಇಂದಿಗೂ ಅವರು ತಮ್ಮ ಪ್ರೀತಿಯ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಟೈಗರ್ ಪ್ರಭಾಕರ್ ಅವರ ಬಗ್ಗೆ ಬರೀ ಒನ್ ಲೈನ್ ಸ್ಟೋರಿ ಹೇಳಲಾಗದು. ಅದೊಂದು ಮಹಾಗ್ರಂಥವೇ ಸರಿ. ಒಬ್ಬ ಫೈಟರ್ ಆಗಿ, ಖಳನಟರಾಗಿ, ನಾಯಕ ನಟರಾಗಿ, ನಿರ್ದೇಶಕರಾಗಿಯೂ ತೆರೆ ಮೇಲೆ ರಾರಾಜಿಸಿದವರು. ಅವರ ಅನೇಕ ಸಿನಿಮಾಗಳು ಇಂದಿಗೂ ಮಾದರಿ.
ಈಗ ಹೊಸ ಸುದ್ದಿ ಅಂದರೆ, ಟೈಗರ್ ಪ್ರಭಾಕರ್ ಅವರ ಪುತ್ರ ಸಕ್ಸಸ್ ಫುಲ್ ಹೀರೋ ವಿನೋದ್ ಪ್ರಭಾಕರ್ ಅವರು ಹೊಸ ಪ್ರೊಡಕ್ಷನ್ ಹೌಸ್ ಶುರುಮಾಡಿದ್ದಾರೆ
.


ಹೌದು, ಅವರ ಹುಟ್ಟುಹಬ್ಬದ ಮರುದಿನ ಅವರು ಇದನ್ನು ಘೋಷಿಸಿಕೊಂಡಿದ್ದಾರೆ.
ಅಂದಹಾಗೆ, ಅವರ ಹೊಸ ನಿರ್ಮಾಣ ಸಂಸ್ಥೆಗೆ ‘ಟೈಗರ್ ಟಾಕೀಸ್’ ಎಂದು ಹೆಸರಿಟ್ಟಿದ್ದಾರೆ. ಈ ಕುರಿತು ಸ್ವತಃ ವಿನೋದ್ ಪ್ರಭಾಕರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಅವರು ಹೇಳಿಕೊಂಡ ಮಾತುಗಳಿವು…


‘ಜೈ ಕರ್ನಾಟಕ ಸಮಸ್ತ ಕರುನಾಡ ಜನತೆಗೆ ನಿಮ್ಮ ವಿನೋದ್ ಪ್ರಭಾಕರ್ ಮಾಡುವ ನಮಸ್ಕಾರಗಳು.
ಇಷ್ಟು ವರ್ಷಗಳಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಕನ್ನಡ ಚಿತ್ರರಂಗದಲ್ಲಿ ನಾನು ನಾಯಕ ನಟನಾಗಿ ನಿಮ್ಮನ್ನೆಲ್ಲ ಮನರಂಜಿಸಿದ್ದೇನೆ. ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ತಂದೆ ಟೈಗರ್ ಪ್ರಭಾಕರ್ ಅವರ ಹೆಸರಲ್ಲಿ ‘ ಟೈಗರ್ ಟಾಕೀಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ನಿಮ್ಮ ಮುಂದೆ ಅರ್ಪಿಸುತ್ತಿದ್ದೇನೆ.

ನಮ್ಮ ಸಂಸ್ಥೆಯಡಿಲ್ಲಿ ಬರುವ ಎಲ್ಲಾ ಯೋಜನೆಗಳಿಗೂ ಇನ್ನು ಮುಂದೆಯೂ ಸಹ ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ, ಆಶೀರ್ವಾದ ಹೀಗೆ ಇರಲಿ ಎಂದು ತಮ್ಮಲ್ಲಿ ನನ್ನ ಸವಿನಯ ಪ್ರಾರ್ಥನೆ’ ಎಂದು ವಿನೋದ್ ಪ್ರಭಾಕರ್ ಬರೆದುಕೊಂಡಿದ್ದಾರೆ.


ಅದೇನೆ ಇರಲಿ, ವಿನೋದ್ ಪ್ರಭಾಕರ್ ಹಂತ ಹಂತವಾಗಿ ಬೆಳೆದು ತಂದೆಗೆ ತಕ್ಕ ಮಗನಾಗಿ, ಅವರಂತೆ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಡಿರುವ ಅವರು ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರ ಹೊಸ ಕನಸು ಬಣದಣದ ಲೋಕದಲ್ಲಿ ರಂಗು ತುಂಬಿಕೊಂಡಿರಲಿ. ಅವರ ನಿರ್ಮಾಣ ಸಂಸ್ಥೆಯಡಿ ಸದಭಿರುಚಿಯ ಚಿತ್ರಗಳು ಬರಲಿ ಎಂದು ‘ಸಿನಿಲಹರಿ‘ ಆಶಿಸುತ್ತದೆ.

Categories
ಸಿನಿ ಸುದ್ದಿ

ದೃಶ್ಯ-2 ಟ್ರೇಲರ್‌ಗೆ ಕಿಚ್ಚ ಸುದೀಪ್ ಚಾಲನೆ ; ಡಿಸೆಂಬರ್‌ 10ಕ್ಕೆ ಚಿತ್ರ ಬಿಡುಗಡೆ…

2014 ರಲ್ಲಿ ತೆರೆಕಂಡಿದ್ದ “ದೃಶ್ಯ” ಚಿತ್ರದ ಮುಂದುವರಿದ ಭಾಗ “ದೃಶ್ಯ 2”. ಬರುತ್ತಿರುವುದು ಗೊತ್ತೇ ಇದೆ. ದೃಶ್ಯ2 ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ. ಕಿಚ್ಚ ಸುದೀಪ್‌ ಟ್ರೇಲರ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ…

“ಈ ಸಮಾರಂಭಕ್ಕೆ ಬಂದಿದ್ದು, ನನಗೆ ಖುಷಿಯಾಗಿದೆ. ರವಿ ಅಣ್ಣ ನನ್ನನ್ನು, ನಮ್ಮ ಕುಟುಂಬದವನು ಎಂದದ್ದು ಇನ್ನೂ ಸಂತೋಷ ತಂದಿದೆ. ಈ ಚಿತ್ರ ಮಲೆಯಾಳಂ, ತೆಲುಗು ಭಾಷೆಯಲ್ಲಿ ಬಂದಿದೆ ಅಂದರು. ಆದರೆ ನಾನು‌ ಯಾವ ಭಾಷೆಯಲ್ಲೂ ಈ ಸಿನಿಮಾ ನೋಡಿಲ್ಲ‌. ಹಾಗಾಗಿ ನನಗೆ ಕಥೆ ಗೊತ್ತಿಲ್ಲ. ನನ್ನ ಹೆಂಡತಿ ಮಲೆಯಾಳಿ. ಅವರು ಮಲೆಯಾಳಂ ಚಿತ್ರ ನೋಡುವಾಗ ನನಗೂ ತೋರಿಸುತ್ತಾರೆ. ನಾನು ಸಬ್ ಟೈಟಲ್ ನೋಡುತ್ತಿರುತ್ತೇನೆ. ಒಳ್ಳೆಯ ಕಲಾವಿದರು ಹಾಗೂ ಒಳ್ಳೆಯ ತಂತ್ರಜ್ಞರು ಸೇರಿ ಮಾಡಿದಾಗ ಅದು ಒಳ್ಳೆಯ ಸಿನಿಮಾನೇ ಆಗಿರುತ್ತದೆ. ದೃಶ್ಯ ಚಿತ್ರವನ್ನು ಕನ್ನಡದಲ್ಲೇ ನೋಡಿದ್ದೀನಿ. ಎರಡನೇ ಭಾಗವನ್ನು ಕನ್ನಡದಲ್ಲೇ ನೋಡುತ್ತೇನೆ. ನೀವು ಮೂರನೇ ಭಾಗ ಮಾಡುವುದಿದ್ದರೆ ಮೊದಲು ಕನ್ನಡದಲ್ಲೇ ಮಾಡಿ ಎಂದು ಸುದೀಪ್ ಸಲಹೆ ನೀಡಿದರು.
ದೃಶ್ಯ ಮೊದಲ ಭಾಗದ ಸಿನಿಮಾ ಮಾತುಕತೆ ಆರಂಭವಾಗಿದ್ದು, ನಮ್ಮ ಮಾಣಿಕ್ಯ ಚಿತ್ರದ ಚಿತ್ರೀಕರಣ ಸಮಯದಲ್ಲಿ. ನಾನು ರವಿ ಸರ್ ಗೆ ಒಂದು ಚೆನ್ನಾಗಿರುವ ಮಲೆಯಾಳಂ ಕಥೆ ಬಂದಿದೆ ಕೇಳಿ ಅಂತ ಹೇಳಿದೆ. ಅವರು ಮೊದಲು ಕೇಳಲಿಲ್ಲ. ನಂತರ ಕೆಲವು ದಿನಗಳ ನಂತರ ಕಥೆ ಕೇಳಿದರು. ದೃಶ್ಯ ಆರಂಭವಾಯಿತು ಎಂದು ಸುದೀಪ್ ಆ ದಿನಗಳನ್ನು ನೆನಪಿಸಿಕೊಂಡರು.

“ಸುದೀಪ್ ನನ್ನ ಮಗ. ಆತನನ್ನು ಬರಮಾಡಿಕೊಳ್ಳಲು ನಾನೇ ಮುಖ್ಯದ್ವಾರದ ಬಳಿ ಹೋಗಿದ್ದೆ. ನನ್ನ ಸಮಾರಂಭಕ್ಕೆ ಬರಲು ಸುದೀಪ್ ಗೆ ಕರೆಯಬೇಕೆಂದು ಏನು ಇಲ್ಲ. ಆರ್ಡರ್ ಮಾಡಬಹುದು. ಏಕೆಂದರೆ ಆತ ನನ್ನ ಮಗ. ಸುದೀಪ್ ಸಮಾರಂಭಗಳಿಗೆ ನಾನು ಹಾಗೆ ಹೋಗುತ್ತೇನೆ. ನಮ್ಮಿಬ್ಬರಲ್ಲಿ ಆ ಬಾಂಧವ್ಯವಿದೆ.
ಇನ್ನು ಪಿ.ವಾಸು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ, ಮೊದಲ ಭಾಗದ ತರಹ ನೂರಕ್ಕೆ ನೂರು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೈಚಳಕ ತುಂಬಾ ಚೆನ್ನಾಗಿದೆ.
ದೃಶ್ಯ ಚಿತ್ರದ ಚಿತ್ರತಂಡ ಬಹುತೇಕ ಈ ಚಿತ್ರದಲ್ಲೂ ಇದೆ. ಹಿರಿಯ ನಟ ಅನಂತನಾಗ್ ದೃಶ್ಯ 2 ನಲ್ಲಿ ಅಭಿನಯಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ತಂದೆ ಸಂಕಷ್ಟದಿಂದ ತನ್ನ ಕುಟುಂಬವನ್ನು ಹೇಗೆ ಪಾರು ಮಾಡುತ್ತಾನೆ ಎಂಬ ವಿಷಯ ಚಿತ್ರದ ಹೈಲೆಟ್ ಅಂದರು ರವಿಚಂದ್ರನ್.‌

ನನಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಹಾಗೂ ನಿರ್ದೇಶಕ ಪಿ.ವಾಸು ಅವರಿಗೆ ಧನ್ಯವಾದ. ನಾನು ಮಲೆಯಾಳಂ ನಲ್ಲಿ ಬಹಳ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ಆದರೆ ನನ್ನ ಒನ್ ಆಫ್ ದಿ ಬೆಸ್ಟ್ ಡೈರೆಕ್ಟರ್ ಪಿ.ವಾಸು ಅವರು. ರವಿಚಂದ್ರ ಸರ್ ಅಂತಹ ಉತ್ತಮ ನಟರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ನಮ್ಮ ಟ್ರೇಲರ್ ಬಿಡುಗಡೆಗೆ ಬಂದಿರುವ ಸುದೀಪ್ ಅವರಿಗೆ ಧನ್ಯವಾದ ಎಂದರು ನಾಯಕಿ ನವ್ಯ ನಾಯರ್.

ದೃಶ್ಯ 2 ಬಿಡುಗಡೆಗೆ ಸಿದ್ದವಾಗಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನನಗೆ ಈ ಸಿನಿಮಾದಲ್ಲಿ ಇಷ್ಟವಾಗಿದ್ದು‌, ರವಿಚಂದ್ರ ಹಾಗೂ ನವ್ಯ ನಾಯರ್ ಅವರ ರಿಲೇಶನ್ ಶಿಪ್. ಅವರಿಬ್ಬರ ನೈಜ ಅಭಿನಯ ತುಂಬಾ ಚೆನ್ನಾಗಿದೆ. ಯಾವಾಗಲೂ ಒಬ್ಬ ನಿರ್ದೇಶಕ, ಯಾವ ನಾಯಕನ ಸಿನಿಮಾ‌ ಮಾಡುವನೊ, ಮೊದಲು ಅವನ ಫ್ಯಾನ್ ಆಗಬೇಕು. ಆಗ ಸಿನಿಮಾ ಉತ್ತಮವಾಗಿ ಮೂಡಿಬರುತ್ತದೆ. ರವಿಚಂದ್ರ ಅವರಂತೂ ಕಂಪ್ಲೀಟ್ ಸ್ಟಾರ್ ಎಂದು ಬಣ್ಣಿಸಿದ ನಿರ್ದೇಶಕ ಪಿ.ವಾಸು, ಚಿತ್ರ ಮುಂದಿನ ತಿಂಗಳ ಹತ್ತರಂದು ತೆರೆಗೆ ಬರಲಿದೆ. ನೋಡಿ ಪ್ರೋತ್ಸಾಹಿಸಿ ಎಂದರು.‌

ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಸಂಗೀತದ ಬಗ್ಗೆ, ಪ್ರಮೋದ್ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. E4 entertainment ಲಾಂಛನದಲ್ಲಿ ನಿರ್ಮಾಣವಾಗಿದ್ದು, ನಿರ್ಮಾಪಕರಲೊಬ್ಬರಾದ ಮುಖೇಶ್ ಮೆಹ್ತಾ ಮಾತನಾಡಿ ಕನ್ನಡದಲ್ಲಿ ಇದು ನಮ್ಮ ಎರಡನೇ ಚಿತ್ರ. ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆಗೆ ಬಂದಿರುವ ಸುದೀಪ್ ಅವರಿಗೆ ಧನ್ಯವಾದ ಎಂದರು.

ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ಬಿಡುಗಡೆ ಮಾಡುತ್ತಿರುವ ಜೀ ಸಿನಿಮಾಸ್ ನ ನೀರಜ್ ಸಹ ಕೆಲವು ವಿಷಯಗಳನ್ನು ಹಂಚಿಕೊಂಡರು.

Categories
ಸಿನಿ ಸುದ್ದಿ

ಬಾಹುಬಲಿ‌ ನಿರ್ದೇಶಕನ ರೇಂಜೇ ಬೇರೆ… ಸ್ಪೆಷಲ್ ಪ್ಲೈಟ್ ನಲ್ಲಿಯೇ ಬೆಂಗಳೂರಿಗೆ ಬಂದು ಹೋದರು ರಾಜ‌ಮೌಳಿ !

ಸ್ಟಾರ್ ನಿರ್ದೇಶಕ ಅಂದ್ರೆ ಇದು. ‘ ಬಾಹು ಬಲಿ’ ಖ್ಯಾತಿಯ ರಾಜಮೌಳಿ‌ ಅವರ ರೇಂಜ್ ಹೆಂಗೈತಿ ಅಂತ ಕೇಳಿದ್ರೆ ನೀವು ದಂಗಾಗಿ ಹೋಗ್ತಿರಾ. ಯಾಕಂದ್ರೆ ನಾವೆಲ್ಲ ಸ್ಟಾರ್ ನಟರ ಹೈ ಪೈ ನೋಡಿದವರಷ್ಟೇ. ಬದಲಿಗೆ ಸ್ಟಾರ್ ನಿರ್ದೇಶಕರ ಹೈ ಪೈ ರೇಂಜ್ ನೋಡಿಲ್ಲ. ಅಷ್ಟೇ ಯಾಕೆ, ಕನ್ನಡದಲ್ಲಿ ‌ನೂರಿನ್ನೂರು ಕೋಟಿ ಸಿನಿಮಾ ಮಾಡಿದ ನಿರ್ದೇಶಕರು ಕೂಡ ಯಾರು ಇಲ್ಲ. ಆದರೆ ನಿರ್ದೇಶಕ ರಾಜ ಮೌಳಿ ಹಾಗಲ್ಲ, ಇವತ್ತು ಅವರ ಸಿನಿಮಾಗಳ ಬಡ್ಜೆಟ್ ಏನೇ ಆದ್ರು 200 ಕೋಟಿ ಮೇಲೆಯೇ.

ಸದ್ಯಕ್ಕೆ ಭಾರೀ‌ ನಿರೀಕ್ಷೆಯೊಂದಿಗೆ ಸಖತ್ ಸೌಂಡ್ ಮಾಡುತ್ತಿರುವ ಆರ್ ಆರ್ ಆರ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ‌ಬ್ಯುಸಿಯಾಗಿರುವ ರಾಜಮೌಳಿ , ಶುಕ್ರವಾರ ಬೆಂಗಳೂರಿಗೆ ಸ್ಪೆಷಲ್ ವಿಮಾನದಲ್ಲಿ ಬಂದಿದ್ದರು ಅಂದ್ರೆ ಅವರ ರೇಂಜ್ ಏನು ಅಂತ ನೀವೇ ಊಹಿಸಿಕೊಳ್ಳಿ. ನಟರು ಬಿಡಿ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಮೀರ್ ಖಾನ್, ರಜನೀಕಾಂತ್, ಮುಮ್ಮುಟ್ಟಿ, ಮೊಹನ್ ಲಾಲ್, ಚಿರಂಜೀವಿ ಕುಟುಂಬವೂ ಸೇರಿದಂತೆ ಅನೇಕರು ತಮಗಿರುವ ಸ್ಟಾರ್ ವಾಲ್ಯೂ ಆಧರಿಸಿ ವಿಶೇಷ ವಿಮಾನಗಳಲ್ಲಿ ಯೇ ಓಡಾಡುವುದೇನು ವಿಶೇಷ ಅಲ್ಲ, ಆದರೆ ಒಬ್ಬ ನಿರ್ದೇಶಕ ನಾಗಿ ರಾಜಮೌಳಿ ಸ್ಪೆಷಲ್ ಪ್ಲೈಟ್ ನಲ್ಲಿ ಓಡಾಡುವ ಮೂಲಕ‌ ನಿರ್ದೇಶಕನ ಹುದ್ದೆಗೂ‌ ಒಂದು ಸ್ಟಾರ್ ವ್ಯಾಲೂ‌‌ ತಂದು ಕೊಟ್ಟಿದ್ದಾರೆಂದರೆ ನಿರ್ದೇಶಕ ರ ಬಳಗ ಹೆಮ್ಮೆ ಪಡಬೇಕು.


ಅಂತಹದೊಂದು ಘಟನೆಗೆ ಶುಕ್ರವಾರ ಬೆಂಗಳೂರಿನಲ್ಲಿ ಜರುಗಿದ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಲಾಂಚ್ ಕಾರ್ಯಕ್ರಮ ಸಾಕ್ಷಿಯಾಯಿತು.

ಬಾಹುಬಲಿ ಸರಣಿಯ ನಂತರ ರಾಜ ಮೌಳಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಆರ್ ಅರ್ ಆರ್. ತೆಲುಗು , ಹಿಂದಿ, ಕನ್ನಡ , ತಮಿಳು ಸೇರಿದಂತೆ ಭಾರತದ ಅಷ್ಟು ಭಾಷೆ ಹಾಗೆಯೇ‌ ಜಗತ್ತಿನ ಇತರ ಭಾಷೆಗಳಿಗೂ ಡಬ್ ಆಗಿ ಬರುತ್ತಿದೆ ಈ ಚಿತ್ರ. ಸದ್ಯಕ್ಕೆ‌ ಕನ್ನಡದ‌ ಅದರ ಅವತರಣಿಕೆಯ ಹಕ್ಕುಗಳನ್ನು ಕೆವಿಎನ್ ಸಂಸ್ಥೆ ಪಡೆದುಕೊಂಡಿದೆ.

ಶುಕ್ರವಾರ ಅದೇ ಸಂಸ್ಥೆ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಜನನಿ ವಿಡಿಯೋ ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಅಂದು ಚೆನ್ನೈ ನಲ್ಲೂ ಇದೇ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜಮೌಳಿ, ಅಲ್ಲಿಂದ ಪತ್ನಿ ಸಮೇತ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಬೆಂಜ್ ಕಾರಿನಲ್ಲಿ ಒರಾಯನ್ ಮಾಲ್ ಗೆ ಬಂದಿದ್ದರು. ಇದು ಬಾಹುಬಲಿ ಚಿತ್ರದ ನಂತರ ಬದಲಾದ ರಾಜಮೌಳಿ‌ ಅವರ ಕಾಸ್ಟ್ಲಿ ಬದುಕಿನ ಒಂದು ಕಥೆ.

Categories
ಸಿನಿ ಸುದ್ದಿ

ಪ್ರೀತಿ ಸುತ್ತ ಅಮೃತ! ಅಪಾರ್ಟ್ಮೆಂಟ್ಸ್ ಒಳಗೊಂದು ಥ್ರಿಲ್ಲಿಂಗ್ ಸ್ಟೋರಿ!!

ಚಿತ್ರ ವಿಮರ್ಶೆ: ಅಮೃತ ಅಪಾರ್ಟ್ಮೆಂಟ್ಸ್

ನಿರ್ದೇಶನ , ನಿರ್ಮಾಣ: ಗುರುರಾಜ ಕುಲಕರ್ಣಿ
ತಾರಾಗಣ: ತಾರಕ್, ಊರ್ವಶಿ,ಸೀತಾಕೋಟಿ,ಬಾಲಾಜಿ ಮನೋಹರ್,ಮಾನಸ ಜೋಷಿ ಇತರರು.

ವಿಜಯ್ ಭರಮಸಾಗರ

ಅವಳು ಕೊಲ್ಕತ್ತಾ ಹುಡುಗಿ. ಅವನು ಮೈಸೂರು ಹುಡುಗ. ಇಬ್ಬರಲ್ಲೂ ಅಪಾರವಾದ ಆಸೆ-ಆಕಾಂಕ್ಷೆ. ತಮ್ಮ ಕನಸು ನನಸು ಮಾಡಿಕೊಳ್ಳಲು ಹೊರಟ ಮುದ್ದಾದ ಜೋಡಿಗೆ ನೂರಾರು ವಿಘ್ನ! ಆ ಎಲ್ಲಾ ವಿಘ್ನಗಳನ್ನು ದಾಟಿ ಹೊರಬರುತ್ತಾರೋ, ಇಲ್ಲವೋ ಅನ್ನೋದು ಒನ್ ಲೈನ್ ಸ್ಟೋರಿ.

ಮೊದಲೇ ಸ್ಪಷ್ಟಪಡಿಸುತ್ತೇವೆ. ಎಲ್ಲರಂತೆ ನಾವೂ ಚೆಂದದ ಬದುಕು ಕಟ್ಟಿಕೊಳ್ಳಬೇಕೆಂದು ಹಪಹಪಿಸುವ ಯುವ ಮನಸ್ಸುಗಳ ತಲ್ಲಣ, ತಳಮಳ, ಆತಂಕ, ಬದುಕಿನ ಧಾವಂತಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ಗುರುರಾಜ ಕುಲಕರ್ಣಿ ಯಶಸ್ವಿಯಾಗಿದ್ದಾರೆ.

ಇದು ನಿರ್ದೇಶಕರ ಚೊಚ್ಚಲ ಪ್ರಯತ್ನ. ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿರುವ ಅವರ ನಿರೂಪಣೆ ಶೈಲಿ ಚೆನ್ನಾಗಿದೆ. ಒಂದು ಕಥೆಯನ್ನು ಹೇಗೆ ಹೇಳಬೇಕು, ಹೇಗೆಲ್ಲಾ ತೋರಿಸಬೇಕು ಎಂಬುದನ್ನು ಅರಿತಿದ್ದಾರೆ. ಹಾಗಾಗಿ ಅಮೃತ ಅಪಾರ್ಟ್ಸ್ಮೆಂಟ್ಸ್ ರುಚಿಸುತ್ತದೆ.

ಸಿನಿಮಾದಲ್ಲಿ ನಿರ್ದೇಶಕರು ಬದುಕಿನ ಏರಿಳಿತಗಳು,
ಭಾವನೆಗಳು ಮತ್ತು ಭಾವನಾತ್ಮಕ ಸಂಬಂಧಗಳು,
ಆಸೆ ಮತ್ತು ದುರಾಸೆ, ಏಳು ಬೀಳು, ನೋವು-ನಲಿವುಗಳನ್ನು ಹೇಳುವ ಮೂಲಕ ‘ಅಮೃತ’ದ ನಿಜ ಚಿತ್ರಣವನ್ನು ಉಣಬಡಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಅಪಾರ್ಟ್ಮೆಂಟ್ಸ್ ಲ್ಲಿ, ದ್ವಿತಿಯಾರ್ಧ ಗಂಭೀರತೆಗೆ ಸಾಕ್ಷಿಯಾಗುತ್ತೆ. ಒಂದು ಸರಳ ಕಥೆಗೆ, ಇನ್ನಷ್ಟು ಬಿಗಿಯಾದ ಚಿತ್ರಕಥೆಯ ಅಗತ್ಯವಿತ್ತು. ಎಲ್ಲೋ ಒಂದು ಕಡೆ, ‘ಅಮೃತ’ದ ಕೆಲ ಅನಗತ್ಯ ದೃಶ್ಯಗಳ ಬಗ್ಗೆ ಮಾತಾಡಬೇಕೆನಿಸುತ್ತಿದ್ದಂತೆ, ಹಾಡುಗಳು ಕಾಣಿಸಿಕೊಂಡು ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ಸಿನಿಮಾ ಸಲೀಸಾಗಿ ಸಾಗಲು ಸಂಕಲನದ ಪಾತ್ರವಿಲ್ಲಿ ಪ್ರಮುಖವಾಗಿದೆ.

ಇದು ಕಥೆ

ಸೂಕ್ಷ್ಮ ಸಂವೇದನೆಯ ಅಂಶಗಳ ಜೊತೆ ಸಾಗುವ ಸಿನಿಮಾದಲ್ಲಿ, ಅನೇಕ ಟ್ವಿಸ್ಟ್ ಗಳಿವೆ. ಪ್ರೀತಿಸಿ ಮದುವೆಯಾಗುವ ಜೋಡಿಯೊಂದು, ಕನಸಿನ ಅಮೃತ್ ಅಪಾರ್ಟಮೆಂಟ್ಸ್’ನಲ್ಲಿ ಬದುಕು ರೂಪಿಸಿಕೊಳ್ಳಲು ರೆಡಿಯಾಗುತ್ತಾರೆ. ಪ್ರೀತಿಸಿ ಜೊತೆಯಾದ ಆ ಜೋಡಿ ಮಧ್ಯೆ ಸಣ್ಣದ್ದೊಂದು ಬಿರುಕು ಮೂಡುತ್ತೆ. ಆ ಅಪಾರ್ಟ್ಮೆಂಟ್ ಒಳಗೆ ನೂರೆಂಟು ಕಥೆಗಳು ಬಿಚ್ಚಿಕೊಳ್ಳುತ್ತವೆ. ಆ ಘಟನೆಗಳನ್ನು ಹೇಳುವುದಕ್ಕಿಂತ ನೀವೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಅಮೃತ್ ಅಪಾರ್ಟಮೆಂಟ್ಸ್ ನೋಡುಗರನ್ನು ಹಾಗೊಮ್ಮೆ ಮುದಗೊಳಿಸುತ್ತೆ. ಒಮ್ಮೊಮ್ಮೆ ಗಂಭೀರತೆಗೂ ದೂಡುತ್ತೆ.

ಮುಖ್ಯವಾಗಿ ಈ ಚಿತ್ರದಲ್ಲಿ ಗಮನಿಸಬೇಕಾದ ಅಂಶವೆಂದರೆ, ಬೆಂಗಳೂರೆಂ ಕಾಂಕ್ರೀಟ್ ನಾಡಲ್ಲಿ ಎತ್ತ ನೋಡಿದರತ್ತ ಮುಗಿಲೆತ್ತರಕ್ಕೆ ತಲೆ ಎತ್ತಿ ನಿಂತ ಬೃಹತ್ ಅಪಾರ್ಟಮೆಂಟ್ಸ್ ಗಳು, ಅಲ್ಲೆಲ್ಲೋ ನಮ್ಮದೂ ಒಂದಿರಲಿ ಅಂತ ಸೂರು ಕಾಣಬೇಕು ಅನ್ನೋ ಮನಸ್ಸುಗಳು, ಅತಿಯಾದ ಆಸೆ, ಆಕಾಂಕ್ಷೆ, ಇವುಗಳ ಜೊತೆ ನೂರಾರು ಸವಾಲುಗಳು, ಅದಕ್ಕೆೆ ಎದುರಾಗುವ ಸವಾಲುಗಳು, ಆಸೆಗಾಗಿಯೇ ಮೌಲ್ಯ ಕಳೆದುಕೊಳ್ಳುವ ಸಂಬಂಧಗಳು ನಾಟುತ್ತವೆ. ಒಟ್ಟಾರೆ ವಸ್ತುಸ್ಥಿತಿಯನ್ನು ಅಚ್ಚುಕಟ್ಟಾಗಿ ಹೇಳು ಪ್ರಯತ್ನ ಇಲ್ಲಾಗಿದೆ.

ನಗರವಾಸಿಗಳ ಒತ್ತಡ, ಅವರೊಳಗಿರುವ ನೋವು, ತಲ್ಲಣಗಳನ್ನು ನಿರ್ದೇಶಕರು ತೋರಿಸುವ ಮೂಲಕ ಈಗಿನ ವಾಸ್ತವ ಚಿತ್ರಣ ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ. ನಿರ್ದೇಶಕರು, ನವಿರಾದ ಪ್ರೀತಿಯ ಹೂರಣದ ಜೊತೆ, ಭಾವುಕ ಅಂಶಗಳನ್ನಿಟ್ಟಿದ್ದಾರೆ. ಅಲ್ಲೊಂದು ಕ್ರೈಮ್ ಮತ್ತು ಥ್ರಿಲ್ ಎನಿಸೋ ಘಟನೆಗಳನ್ನೂ ಇಟ್ಟಿದ್ದಾರೆ. ಈ ಬಗ್ಗೆ ನೋಡುವ ಕುತೂಹಲವಿದ್ದರೆ, ಬಿಡುವು ಮಾಡಿಕೊಂಡು ಸಿನಿಮಾ ನೋಡಿ.

ಇನ್ನು ತೆರೆ ಮೇಲೆ ರಾರಾಜಿಸಿರುವ ತಾರಕ್ ಅಭಿನಯದಲ್ಲಿ ಹಿಂದೆ ಉಳಿದಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಊರ್ವಶಿ ನಿರ್ದೇಶಕರು ಹೇಳಿದ್ದನ್ನು ಚಾಚು ತಪ್ಪದೆ ಮಾಡಿದ್ದಾರೆ. ಬಾಲಾಜಿ ಮನೋರ್ರ್, ಮಾನಸಿ ಜೋಷಿ, ಸಂಪತ್ ಕುಮಾರ, ಮಹಂತೇಶ್, ಸೀತಾಕೋಟಿ ಇತರರು ಗಮನಸೆಳೆಯುತ್ತಾರೆ.
ಎಸ್.ಡಿ.ಅರವಿಂದ ಅವರ ಸಂಗೀತ ಕಥೆಗೆ ಪೂರಕ.
‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಹಾಡು ಗುನುಗುವಂತಿದೆ. ಅಜಿತ್ ಆರ್ಯನ್ ಕ್ಯಾಮರಾ ಕೈಚಳಕ ಸಿನಿಮಾ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಈತ ಪೈಸಾ ವಸೂಲ್ ಗೋವಿಂದ…!

ಚಿತ್ರ ವಿಮರ್ಶೆ- ಗೋವಿಂದ ಗೋವಿಂದ
ನಿರ್ದೇಶಕ – ತಿಲಕ್
ತಾರಾಗಣ – ಸುಮನ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ,ಮಜಾ‌ಟಾಕೀಶ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್
ಇತರರು

  • ದೇಶಾದ್ರಿ ಹೊಸ್ಮನೆ

ಸಿನಿಮಾ ನಿರ್ದೇಶಕನಾಗಲೇಬೇಕೆಂದು ಹೊರಟ ಕನಸು ಕಂಗಳ ಹುಡುಗ, ತಾಯಿಯಲ್ಲದೆ ತನ್ನನ್ನೇ ಅವಲಂಭಿಸಿರುವ ಮಗಳು ತನ್ನಿ ಚ್ಚೆಯಂತೆಯೇ ಇರಬೇಕೆಂದು‌ ಬಯಸುವ ಅಪ್ಪ, ಭರತ ನಾಟ್ಯ ದ ಮೇಲೆ ಬೆಟ್ಟದಷ್ಟು ಕನಸು‌ ಕಟ್ಟಿಕೊಂಡ ನಾಯಕಿ, ಆಕೆಯ‌ ಕನಸುಗಳ ಸಾಕಾರಕ್ಕೆ ನೆರವಾಗಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಮೂವರು ಗೆಳೆಯರು ಅವರ ಜತೆಗೆ ಮೂಡನಂಬಿಕೆಯ‌ ಮೇಲೆ ನಾಯಕಿಯನ್ನೇ ಕಿಡ್ನಾಪ್ ಮಾಡುವ ಕಿರಾತಕರ ಸುತ್ತಣದ ಸಂಕಟ, ಸಾಹಸ, ದುಸ್ಸಾಹದ ಸಮಿಶ್ರಣಗಳ ಹೂರಣದೊಂದಿಗೆ ನೋಡುಗರನ್ನು ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ತಕ್ಕಮಟ್ಟಿಗೆ ರಂಜಿಸಬಹುದಾದ ಸಿನಿಮಾ ಗೋವಿಂದ ಗೋವಿಂದ.

ನವ ಪ್ರತಿಭೆ ತಿಲಕ್ ನಿರ್ದೇಶನದ ಈ ಸಿನಿಮಾವು ಕಾಮಿಡಿ, ಥ್ರಿಲ್ಲರ್, ಎಮೋಷನಲ್ ಜಾನರ್ ಗೆ ಸೇರಿದ್ದು‌. ಇಷ್ಟಾಗಿಯೂ ಚಿತ್ರ ರಸಿಕರು ಬಯಸುವ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡ ಒಂದು ಸಿದ್ದ ಸೂತ್ರದ ಸಿನಿಮಾವೂ ಹೌದು. ಸಿನಿಮಾ ನಿರ್ದೇಶಕನಾಗಬೇಕೆಂದು ಹೊರಟ ಒಬ್ಬ ಯುವಕನ ಕಲ್ಪನೆಯೊಳಗೆ ಇನ್ನೊಂದು ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿಡುವ ನಿರ್ದೇಶಕರು ಅಲ್ಲಿ ನ ಕಥೆ ಹಲವು ಕುತೂಹಲದ ಉಪ ಕಥೆಗಳನ್ನು ಬಿಡಿ ಬಿಡಿಯಾಗಿ ಬಿಚ್ಚಿಡುವ ಮೂಲಕ ಪ್ರೇಕ್ಷಕರ ನ್ನು ಕುರ್ಚಿಯ ತುದಿ ಮೇಲೆ ಕೂರಿಸುವ ಪ್ರಯತ್ನ ಮಾಡಿದ್ದೇ ಇಲ್ಲಿ ಜಾಣತನ ಅಂತಲೇ ಹೇಳಬಹುದು. ಅದರಾಚೆ ಹೊಸತನವಿಲ್ಲದ, ಒಂದು ಸಿದ್ದ ಸೂತ್ರದ ಸರಳ ಕಥೆ ಎನ್ನುವುದಷ್ಟೇ ಇದರ ವೀಕ್ನೇಸ್.

ಮೊದ ಮೊದಲು ಕಾಮಿಡಿ ಈ ಸಿನಿಮಾದ ಪ್ರಧಾನ ಅಂಶದಂತೆ ಕಂಡರೂ, ನೋಡುಗನ ಮನಸ್ಸಿಗೆ ತಟ್ಟುವಂತಹ ಎಮೋಷನಲ್ ಎಳೆಗಳ ಮೂಲಕ ಗಾಢವಾಗಿ ತಟ್ಟುತ್ತದೆ. ಆರಂಭದ ಅರ್ಧ ಗಂಟೆ ಸಿನಿಮಾ ಮನಸು ಚಂಚಲಗೊಳ್ಳುವಂತೆ ಮಾಡಿದರು, ಕಥೆ ವಿಜಯಪುರದಿಂದ ಬೆಂಗಳೂರು ಕಡೆ ಮುಖ‌ ಮಾಡುವ ಮೂಲಕ ರೋಚಕತೆ ಹುಟ್ಟಿಸುತ್ತದೆ. ಒಂದು ರಿಮೇಕ್ ಸಿನಿಮಾದ ಬಗ್ಗೆ ಪ್ರೇಕ್ಷಕನಲ್ಲಿ ಹುಟ್ಟುವ ಕಲ್ಪನೆಯೇ ಬೇರೆ. ಮೂಲ‌ ಸಿನಿಮಾಕ್ಕಿಂತ ಅದು ಇನ್ನಷ್ಟು ವಿಶೇಷ ಎನಿಸಿದಾಗಲೇ ಪ್ರೇಕ್ಷಕನಿಗೂ ಇಷ್ಟ. ಹಾಗಿಲ್ಲದೆ ಅದು ಯಥಾವತ್ತಾಗಿ ಕಾಣಿಸಿಕೊಂಡರೆ, ಪ್ರೇಕ್ಷಕ ಯಾಕೆ ದುಡ್ಡು ಕೊಟ್ಟು ಆ ಸಿನಿಮಾ ನೋಡ್ಬೇಕು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತೆ. ಗೋವಿಂದ ಗೋವಿಂದ ಕೂಡ ಒಂದು ರಿಮೇಕ್ ಸಿನಿಮಾ ಅಂದು ಕೊಂಡವರು ಕೂಡ ಒಂದ್ಸಲ ಈ ಸಿನಿಮಾ ನೋಡಿದರೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಆ ಮಟ್ಟಿಗೆ ಇದೊಂದು ಪೈಸಾ ವಸೂಲ್ ಸಿನಿಮಾ.

ಸುಮಂತ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್, ಕವಿತಾ ಗೌಡ, ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ಕೆ.ಮಂಜು, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಗಣವೇ ಈ ತೆರೆ ಮೇಲಿದೆ. ಹಾಗಂತ ಯಾವ ಪಾತ್ರವೂ ಅಷ್ಟಕಷ್ಟೆ ಎಂದೇನು ಜರಿಯುವಂತಿಲ್ಲ. ಅಷ್ಟು ಪಾತ್ರಗಳಿಗೂ ಅದರದ್ದೇ ಮಹತ್ವ ಸಿಕ್ಕಿದೆ. ಇದಕ್ಕೆ ಪ್ಲಸ್ ಆಗಿದ್ದು ಕಥೆ ನಿರೂಪಣೆ. ಒಂದು ಮರ, ಅದಕ್ಕೆ ಹಲವು ರೆಂಬೆ ಕೊಂಬೆ ‌ಎನ್ನುವಂತೆ, ಇಲ್ಲಿ ಒಂದು ಕಥೆ, ಅದರೊಳಗೊಂದು ಉಪಕಥೆ, ಆ ಉಪಕಥೆಗೆ ಇನ್ನಷ್ಟು ಕಿರು ಕಥೆಗಳ ರೆಂಬೆ ಕೊಂಬೆಗಳಿದ್ದರೂ, ಕ್ಲೈಮ್ಯಾಕ್ಸ್ ನಲ್ಲಿ ಅವೆಲ್ಲವೂ ಒಂದು ಕೋನದಲ್ಲಿ ಬಂದು ಸೇರುವ ರೀತಿಯೇ ವಿಶೇಷ.

ತೆರೆ ಮೇಲೆ ಇದುವರೆಗೂ ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ‌ಯುವನಟ ಸುಮನ್ ಶೈಲೆಂದ್ರ ಇದೇ ಮೊದಲು ಒಂದು ಕಾಮಿಡಿ ಹೀರೋ ಆಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ, ಕಾಲೇಜು ವಿದ್ಯಾರ್ಥಿ ಯಾಗಿ ಪ್ರೇಕ್ಷಕರನ್ನು ರಂಜಿಸುವುದು ಕೂಡ ವಿಶೇಷ. ಅವರಿಗೆ ಇಲ್ಲಿ ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರ್ ಸಖತ್ ಸಾಥ್ ನೀಡಿದ್ದಾರೆ. ಅವರಿಬ್ಬರ ಉತ್ತರ ಕರ್ನಾಟಕದ ಜವಾರಿ ಭಾಷೆಯ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖ್ಯಾತಿಯ ಚಿನ್ನು ಅಲಿಯಾಸ್ ಕವಿತಾ ಗೌಡ ಇಲ್ಲಿ ಸಿನಿಮಾ ಒಳಗೆಯೇ ಬರುವ ಸಿನಿಮಾ ಕಥೆಯ ನಾಯಕಿ. ಸಿಕ್ಕ ಅವಕಾಶವನ್ನು ಸಮರ್ಥ ವಾಗಿ ಯೇ ಬಳಸಿಕೊಂಡಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಹಾಗೆ ನೋಡಿದರೆ ಸಿನಿಮಾ ಮುಖ್ಯ ಆಕರ್ಷಣೆ ನಟಿ‌ ಭಾವನಾ ಮನೆನ್ ಹಾಗೂ ಯುವ ನಟ ರೂಪೇಶ್ ಶೆಟ್ಟಿ. ಯಾಕಂದ್ರೆ ಕಥೆ ರಿವೀಲ್ ಆಗೋದೆ ಇವರಿಬ್ಬರ ಮುಖಾ ಮುಖಿಯೊಂದಿಗೆ.‌ ಮೇಕಿಂಗ್ ಅಂತ ಬಂದಾಗ ಕಥೆಯ ಅಗತ್ಯತೆಯನ್ನು ಪ್ರಾಮಾಣಿಕವಾಗಿ ಪೂರೈಸಿದ್ದಾರೆ ನಿರ್ಮಾಪಕರು. ಅದು ಅವರ ಅನುಭವದ ಜಾಣತನ. ಹಾಗೆಯೇ ಛಾಯಾಗ್ರಹಣ, ಸಂಗೀತ ಸೇರಿದಂತೆ ಸಿನಿಮಾ ಉಳಿದ ಕೆಲಸಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಮನರಂಜನೆ ನಗಬೇಕು, ಒಂದಷ್ಟು ಹಗುರಾಗಬೇಕು ಅಂತೆಲ್ಲ ಬಯಸುವರಿಗೆ ಇದು ಹೇಳಿ‌ಮಾಡಿಸಿದ ಸಿನಿಮಾ‌ .

error: Content is protected !!