Categories
ಸಿನಿ ಸುದ್ದಿ

ಕಿಚ್ಚನ ಮೇಲಿನ ಪ್ರೀತಿಗೆ ಕೋಣ ಬಲಿ! ಬರ್ತ್‌ ಡೇ ನೆಪದಲ್ಲಿ ಮೂಕ ಪ್ರಾಣಿ ಬಲಿ ಕೊಟ್ಟ ಸುದೀಪ್‌ ಫ್ಯಾನ್ಸ್‌ !! ಎಲ್ಲೆಡೆ ವಿರೋಧ

ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು.

ಸಿನಿಮಾ ಅಂದರೆ, ಅದೊಂಥರಾ ಊರ ಹಬ್ಬ. ಅದರಲ್ಲೂ ಅಭಿಮಾನಿಗಳಿಂತೂ ಎಲ್ಲಿಲ್ಲದ ಸಡಗರ. ತಮ್ಮ ಪ್ರೀತಿಯ ನಾಯಕರನ್ನಂತೂ ಆರಾಧಿಸುವ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ತಮ್ಮ ನೆಚ್ಚಿನ ಹೀರೋ ಸಿನಿಮಾ ರಿಲೀಸ್‌ ಆಗುತ್ತೆ ಅಂದರೆ ಸಾಕು, ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ದೊಡ್ಡ ದೊಡ್ಡ ಹೂವಿನ ಹಾರಗಳ ಅಲಂಕಾರ ಮಾಡಿ ಸಂಭ್ರಮಿಸುವ ಅಭಿಮಾನಿಗಳಿಗೇನೂ ಕೊರತೆ ಇಲ್ಲ. ಇನ್ನು, ಸ್ಟಾರ್‌ ನಟರ ಹುಟ್ಟುಹಬ್ಬ ಬಂದರಂತೂ ಅಭಿಮಾನಿಗಳ ಖುಷಿಗೆ ಪಾರವೇ ಇರೋದಿಲ್ಲ. ಅದೆಷ್ಟೋ ಅಭಿಮಾನಿಗಳು ತಾವು ಇದ್ದಲ್ಲೇ ತಮ್ಮ ಸ್ಟಾರ್‌ ನಟರುಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆ. ಇದು ತಲತಲಾಂತರದಿಂದಲೂ ಬಂದಂತಹ ಪದ್ಧತಿ. ಈಗ ಹೊಸ ಸುದ್ದಿ ಅಂದರೆ, ಕಿಚ್ಚ ಸುದೀಪ್‌ ಅವರ ಬಳ್ಳಾರಿಯ ಸಂಡೂರು ಸಮೀಪದ ಬಂಡ್ರಿ ಗ್ರಾಮದ ಅಭಿಮಾನಿಗಳು ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಕೋಣ ಬಲಿ ನೀಡಿ ಅತಿರೇಕ ಮೆರೆದಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಅವರ ಪೋಸ್ಟರ್‌ ಮುಂದೆಯೇ ಕೋಣನ ಬಲಿ ನೀಡಿರುವ ವಿಡಿಯೊ ಕೂಡ ಮಾಡಲಾಗಿದೆ. ಆದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಅಲ್ಲಿ ಸೇರಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕಿಚ್ಚ ಸುದೀಪ್‌ ಅವರು ಕೋವಿಡ್ ಇರುವ ಕಾರಣ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ. ಯಾರೂ ಕೂಡ ಗುಂಪು ಸೇರಿ ಆಚರಿಸಬೇಡಿ. ತಾವು ಇದ್ದಲ್ಲೇ ಶುಭಾಶಯ ತಿಳಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆದರೆ, ಅವರ ಕೆಲವು ಅಭಿಮಾನಿಗಳು ಅಭಿಮಾನವನ್ನು ಅತಿರೇಕಗೊಳಿಸಿದ್ದಾರೆ.
ಸುದೀಪ್ ಅಭಿಮಾನಿಗಳು ಕೋಣ ಬಲಿ ನೀಡಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವಿರೋಧ ಕೇಳಿ ಬರುತ್ತಿದೆ. ಕೋಣ ಬಲಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಈ ಕೃತ್ಯ ಎಸಗಿದವರ ಮೇಲೆ ದೂರು ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆಯೂ ಸಹ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ “ದಿ ವಿಲನ್” ಚಿತ್ರದ ಸಕ್ಸಸ್‌ಗೆ ಹಾರೈಸಿ ಕೋಣ ಬಲಿ ಕೊಡಲಾಗಿತ್ತು.

ಆಗ ಕೂಡ ಎಲ್ಲೆಡೆಯಿಂದಲೂ ವಿರೋಧ ವ್ಯಕ್ತವಾಗಿತ್ತು. ಅದೇನೆ ಇರಲಿ, ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು. ಸದ್ಯ, ಆ ಘಟನೆಗೆ ಖಂಡನೆ ಆಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಸ್ಟಾರ್‌ಗಳು ತಮ್ಮ ಅಭಿಮಾನಿಗಳಿಗೆ ಈ ರೀತಿಯ ಆಚರಣೆ ಬೇಡ ಎಂಬ ಮನವಿ ಮಾಡಿದ್ದರೂ ಕೂಡ ಪದೇ ಪದೇ ಇಂತಹ ತಪ್ಪುಗಳು ಆಗುತ್ತಲೇ ಇವೆ. ಇಂತಹ ತಪ್ಪು ತಿದ್ದಿಕೊಳ್ಳುವುದು ಯಾವಾಗ ಅನ್ನುವುದೇ ಯಕ್ಷ ಪ್ರಶ್ನೆ.

Categories
ಸಿನಿ ಸುದ್ದಿ

ಜೂನಿಯರ್ ಚಿರು ನೇಮಿಂಗ್ ಸೆರಮನಿ; ಮರಿ ಯುವಸಾಮ್ರಾಟನ ನಾಮಕರಣಕ್ಕೆ ಸಕಲ ಸಿದ್ದತೆ !

ಸರ್ಜಾ ಕುಟುಂಬದ ಕುಡಿ, ಯುವಸಾಮ್ರಾಟ ದಿವಗಂತ ಚಿರಂಜೀವಿ ಸರ್ಜಾರ ಪುತ್ರ, ಮೇಘನಾರ ಮುದ್ದಿನ ಮಗನ ನಾಮಕರಣಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಸರ್ಜಾ ಕುಟುಂಬದಲ್ಲಿ ಹಾಗೂ ಮೇಘನಾ ಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ. ವರ್ಷಗಳು ಕಳೆದ ಮೇಲೆ ಶುಭಕಾರ್ಯ ನಡೆಯುತ್ತಿದ್ದು, ಸೂತಕದ ಛಾಯೆ ಸರಿದು ಸಂತೋಷದ ದಿವ್ಯಕ್ಷಣಗಳು ಮರುಕಳಿಸುತ್ತಿವೆ. ನಾಳೆ ದಿವ್ಯಮುಹೂರ್ತದಲ್ಲಿ ಜೂನಿಯರ್ ಚಿರು ನೇಮಿಂಗ್ ಸೆರಮನಿ ಅದ್ಧೂರಿಯಾಗಿಯೇ ನಡೆಯಲಿದೆ.

ಇಲ್ಲಿವರೆಗೂ ಜೂನಿಯರ್ ಚಿರು, ಜೂನಿಯರ್ ಸಿಂಬ, ಚಿಂಟು, ಬರ್ಫಿ, ಮರಿ ಸಿಂಗ. ಪಾಪಕುಟ್ಟಿ, ಹೀಗೆ ವೆರೈಟಿ ಪೆಟ್ ನೇಮ್‌ಗಳಿಂದ ಕರೆಯುತ್ತಿದ್ದರು. ನಾಳೆಯಿಂದ ಈ ಪೆಟ್ ನೇಮ್ ಜೊತೆ ರಿಯಲ್ ನೇಮ್ ಸೇರಿಕೊಳ್ತಿದೆ.
ಚಿರು-ಮೇಘನಾರ ಮುದ್ದಿನ ಮಗನಿಗೆ ಏನೆಂದು ಹೆಸರಿಡಬಹುದು ಎನ್ನುವ ಕಾತುರಕ್ಕೆ ಬಿಗ್ ಬ್ರೇಕ್ ಬೀಳಲಿದೆ.

ಮರಿ ಯುವಸಾಮ್ರಾಟ್ ಚಿರುಗೆ ಹತ್ತು ತಿಂಗಳು ತುಂಬಿದೆ. ಮೇಘನಾ ಮಡಲಲ್ಲಿ ಆಡುತ್ತಾ, ಮಲಗುತ್ತಾ, ನಗುತ್ತಾ, ಅಳುತ್ತಾ, ಕುಣಿಯುತ್ತಾ
ಅಮ್ಮನಿಗೆ ಸಂತೋಷ ನೀಡುತ್ತಿರುವ ಮರಿ ಸಿಂಬ, ಅಮ್ಮನ‌ ಅಜ್ಜ ಅಜ್ಜಿಯ ಮನೆಯಲ್ಲಿ ಬೆಳೆದು ದೊಡ್ಡವನಾಗ್ತಿದ್ದಾನೆ. ಸರ್ಜಾ ಕುಟುಂಬದಲ್ಲಿ ಬೆಳಕು ಮೂಡಿಸಿದ್ದಾನೆ.

ಇಂತಹ ಮುದ್ದುಮಗನ ನಾಮಕರಣಕ್ಕೆ ಎರಡು ಕುಟುಂಬ ಸಕಲ ತಯ್ಯಾರಿ ಮಾಡಿಕೊಂಡಿದೆ. ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ನೇಮಿಂಗ್ ಸೆರಮನಿ ನಡೆಯಲಿದೆ. ಈ‌ ವಿಚಾರವನ್ನ ಮೇಘನಾ, ಧ್ರುವ, ಅರ್ಜುನ್ ಸರ್ಜಾ ಸೇರಿದಂತೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ. ಹೇಗಿರಲಿದೆ? ಏನಿರಲಿದೆ ಸರ್ಜಾ ಕುಟುಂಬ ಕುಡಿಯ ಹೆಸರು ವೇಯ್ಟ್ ಅಂಡ್ ಸೀ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಫಸ್ಟ್ ಗ್ಲಿಂಪ್ಸ್: ದಿ ಡೆಡ್ ಮಾನ್ಸ್ ಆಂಥಮ್’ನಲ್ಲಿ ‌ಕಿಚ್ಚನ ಸಖತ್‌ ಖದರ್!

ಕಿಚ್ಚ ಸುದೀಪ್ ನಟಿಸಿರುವ “ವಿಕ್ರಾಂತ್ ರೋಣ”‌ ಚಿತ್ರ ಕೋವಿಡ್ ಹಾವಳಿ ಕಡಿಮೆಯಾದ ನಂತರ ಶುರುವಾದ ಮೊದಲ ಮೆಗಾ-ಬಜೆಟ್‌ ಸಿನಿಮಾ. ಆರಂಭದಿಂದಲೂ ಜೋರು ಸುದ್ದಿ ಮಾಡಿಕೊಂಡು ಬರುತ್ತಿದ್ದ “ವಿಕ್ರಾಂತ್‌ ರೋಣ” ಈಗ ಮತ್ತೊಂದು ದೊಡ್ಡ ಕುತೂಹಲ ಮೂಡಿಸಿದೆ. ಹೌದು, ಸುದೀಪ್‌ ಅವರ ಹುಟ್ಟು ಹಬ್ಬಕ್ಕೆ ಚಿತ್ರ ತಂಡವು ಅತ್ಯಾಕರ್ಷಕ ಎನಿಸುವ ಫಸ್ಟ್‌ಲುಕ್‌ ಬಿಡುಗಡೆ ಮಾಡಿದೆ. ಫಸ್ಟ್‌ ಲುಕ್‌ ನೋಡಿದವರಿಗೆ ಸುದೀಪ್‌ ಅವರ ಮಾಸ್‌ ಫೀಲ್‌ ಇಷ್ಟವಾಗದೇ ಇರದು. ರೈನ್‌ ಕೋಟು, ಹ್ಯಾಟು, ಕೈಯಲ್ಲೊಂದು ಲೋಡೆಡ್‌ ಗನ್ನು ಹಿಡಿದಿರುವ ಫೋಟೋ ಸಖತ್‌ ಮೆಚ್ಚುಗೆ ಪಡೆಯುತ್ತಿದೆ.


‘ದಿ ಡೆಡ್ ಮಾನ್ಸ್ ಆಂಥಮ್’, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದ ಒಡೆಯ ಸುದೀಪ್ ಅವರು, ಶತ್ರುಗಳಿಗೆ ಭಯ ಹುಟ್ಟಿಸುವ ಸನ್ನಿವೇಷದೊಂದಿಗೆ ಶುರುವಾಗುತ್ತದೆ. ಗಮನ ಸೆಳೆಯುವ ದೃಶ್ಯಗಳು, ವಿಸ್ಮಯಗೊಳಿಸುವ ಹಿನ್ನಲೆ ಸಂಗೀತ, ಸುದೀಪ್ ರವರ ಖದರ್‌ಗೆ ಪೂರಕವಾಗಿವೆ. ಈ ಎಲ್ಲಾ ಅಂಶಗಳಿಂದಾಗಿ, ಸೂಕ್ತ ಶೀರ್ಷಿಕೆಯೊಂದಿಗೆ ಅವರ ಹುಟ್ಟು ಹಬ್ಬದಂದು ರಿಲೀಸ್ ಆಗಿರುವ “ದಿ ಡೆಡ್ ಮಾನ್ಸ್ ಆಂಥಮ್” ವೀಕ್ಷಕರಿಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

“ದಿ ಡೆಡ್ ಮಾನ್ಸ್ ಆಂಥಮ್” ಸುದೀಪ್ ಅವರ ಹುಟ್ಟು ಹಬ್ಬದ ದಿನ ರಿಲೀಸ್ ಆಗುತ್ತಿರುವುದು ನನಗೆ ಬಹಳ ಖುಷಿಯಾಗಿದೆ. “ವಿಕ್ರಾಂತ್ ರೋಣ” ಪಾತ್ರದ ನಿಗೂಢತೆಯನ್ನು ಫಸ್ಟ್ ಗ್ಲಿಂಪ್ಸ್ ಅದ್ಭುತವಾಗಿ ಸೆರೆ ಹಿಡಿದಿದೆ. ಚಿತ್ರೀಕರಣದ ಸಮಯದಲ್ಲೇ ನನಗೆ ಇದರ ಮೇಲೆ ಅಪಾರ ನಿರೀಕ್ಷೆ ಇತ್ತು. ಆದರೆ, ಸುದೀಪ್ ಅವರು ಈ ಪಾತ್ರವನ್ನು ಸಾಕಾರಗೊಳಿಸುತ್ತಿರುವುದು, ನನ್ನ ನಿರೀಕ್ಷಣೆಯನ್ನು ಇನ್ನೂ ಹೆಚ್ಚಾಗಿಸಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುʼ ಎಂದು ನಿರ್ದೇಶಕ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

ಇನ್ನು, ನಿರ್ಮಾಪಕರಾದ ಜಾಕ್ ಮಂಜುನಾಥ್ ರವರು, “ಸುದೀಪ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು, “ವಿಕ್ರಾಂತ್ ರೋಣ” ಚಿತ್ರದ ಫಸ್ಟ್ ಗ್ಲಿಂಪ್ಸ್ ನೊಂದಿಗೆ ವ್ಯಕ್ತ ಪಡಿಸುತ್ತಿದ್ದೇವೆ. ಎಲ್ಲರ ಕೈ ಕಟ್ಟುವಂತಹ ಸಂದರ್ಭದಲ್ಲಿ ನಾವು ಇಷ್ಟು ಸಕಾರಾತ್ಮಕವಾಗಿ ಮುನ್ನಡೆಯುತ್ತಿರುವುದೇ ಸಂತೋಷದ ವಿಷಯ. ಅವರ ಹುರುಪು, ಉತ್ಸಾಹ ಮತ್ತು ಸಿನಿಮಾ ಮಾಡುವ ಛಲಕ್ಕೆ ಯಾವುದೇ ಸಮಯದ ಪರೀಕ್ಷೆಯನ್ನು ತಡೆಯುವ ಶಕ್ತಿಯಿದೆ. ಇದೇ “ವಿಕ್ರಾಂತ್ ರೋಣ” ಚಿತ್ರವನ್ನು ವಿಶೇಷವಾಗಿಸುತ್ತದೆ,” ಎಂದಿದ್ದಾರೆ ಜಾಕ್‌ ಮಂಜು.

ವಿಕ್ರಾಂತ್ ರೋಣ, ಒಂದು ಬಹುಭಾಷಾ ಆಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3-D ಯಲ್ಲಿ ಬಿಡುಗಡೆಯಾಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರಕ್ಕೆ ಜಾಕ್ ಮಂಜುನಾಥ್ ಹಾಗು ಶಾಲಿನಿ ಮಂಜುನಾಥ್ ನಿರ್ಮಾಪಕರು. ಅಲಂಕಾರ್ ಪಾಂಡಿಯನ್ ಸಹ ನಿರ್ಮಾಪಕರು. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್‌ ಅವರ ಕಲಾ ನಿರ್ದೇಶನ ವಿಲಿಯಮ್ ಡೇವಿಡ್ ಕ್ಯಾಮೆರಾ ಕೆಲಸ ಚಿತ್ರದಲ್ಲಿದೆ. ಸುದೀಪ್‌ ಅವರ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜ್ಯಾಕಲೀನ್ ಫರ್ನಾಂಡೀಸ್ ಸೇರಿದಂತೆ ಹಲವರು ಇದ್ದಾರೆ.

Categories
ಸಿನಿ ಸುದ್ದಿ

ಇದು ಕಣ್ರೀ ಬರ್ತ್ ಡೇ ಗಿಫ್ಟ್ ಅಂದ್ರೆ; ಅಭಿನಯ ಚಕ್ರವರ್ತಿಗೆ ಚಕ್ರವರ್ತಿ ಚಂದ್ರಚೂಡ್ ಮರೆಯಲಾಗದ ಉಡುಗೊರೆ !

ಬಿಗ್ ಬಾಸ್ ಮನೆಯಲ್ಲಿದ್ದಾಗ ಕಿಚ್ಚನಿಂದ ಸ್ಪೆಷಲ್ ಕ್ಲಾಸ್ ಪಡೆಯುತ್ತಿದ್ದ ಡಿ.ಜೆ. ಚಕ್ರವರ್ತಿ ಚಂದ್ರಚೂಡ್ ಇವತ್ತು ಬಾದ್ ಷಾ ಬರ್ತ್ ಡೇಗೆ ಸ್ಪೆಷಲ್ ಸಾಂಗ್ ನ ಕಾಣಿಕೆಯಾಗಿ ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿಗೆ ಚಕ್ರವರ್ತಿಯ ಉಡುಗೊರೆ ಬಗ್ಗೆ ಮಾತನಾಡಲೆಬೇಕು. ಅದಕ್ಕೂ ಮುನ್ನ ಬರ್ತ್ ಡೇ ಸಂಭ್ರಮ ನೋಡೋಣ

1971 ಸೆಪ್ಟೆಂಬರ್ 2 ರಂದು ಕಿಚ್ಚ ಭೂಮಿಗೆ ಬಂದಾಗ ಬರೀ ಕುಟುಂಬದವರು ಮಾತ್ರ ಸಂಭ್ರಮಿಸಿದ್ದರು.ಆದರೆ ಇವತ್ತು ಕೋಟ್ಯಾಂತರ ಮಂದಿ ಮಾಣಿಕ್ಯನ ಬರ್ತ್ ಡೇನಾ ಹಬ್ಬ… ಹಬ್ಬ …ಮಾಡಿ ಸಂತೋಷ ಪಡುತ್ತಾರೆ. ಅದಕ್ಕೆ ಕಾರಣ ಕಿಚ್ಚನ ಸಾಧನೆ ಮಾತ್ರವಲ್ಲ ಹೃದಯಶ್ರೀಮಂತಿಕೆಯಲ್ಲಿ ಕಿಚ್ಚ ಕೋಟಿಗೊಬ್ಬನಾಗಿದ್ದೇ ಇವತ್ತಿನ ಅದ್ದೂರಿ ಹುಟ್ಟುಹಬ್ಬಕ್ಕೆ ಸಾಕ್ಷಿ.

ಹೌದು, ಕೋಟಿಗೊಬ್ಬ ಕಿಚ್ಚ ಸುದೀಪ್ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 50ನೇ ವಸಂತಕ್ಕೆ ಕಾಲಿಟ್ಟಿರೋ ಮಾಣಿಕ್ಯನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸುದೀಪಿಯನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದಾರೆ. ಬಾದ್ ಷಾ ಬರ್ತ್ ಡೇಗೆ ವಿಶೇಷವಾಗಿ ವಿಕ್ರಾಂತ್ ರೋಣ ಚಿತ್ರತಂಡ ‘ಡೆಡ್ ಮ್ಯಾನ್ಸ್ ಆಂಥಮ್’ ಸಾಂಗ್ ರಿಲೀಸ್ ಮಾಡಿದೆ. ಕೈಗೆ ಕಬ್ಬಿಣದ ಸರಪಳಿ ಸುತ್ತಿಕೊಂಡು, ಮಚ್ಚೆಳೆಯೋ ಸೀನ್ ಜೊತೆಗೆ ಧಗಧಗಿಸೋ ಮನೆಗೆ ಎಂಟ್ರಿಕೊಟ್ಟು ವಿಕ್ರಾಂತ್ ರೋಣ ಬ್ಯಾಂಗ್ ಮಾಡೋದನ್ನ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ಸುದೀಪ್ ಹುಟ್ಟುಹಬ್ಬದಂದು ಸುದೀಪಿಯನ್ಸ್ ಹೃದಯ ಗೆಲ್ಲುವಲ್ಲಿ ಚಕ್ರವರ್ತಿ ಚಂದ್ರಚೂಡ್ ಯಶಸ್ವಿಯಾಗಿದ್ದಾರೆ. ಸುದೀಪಿಯನ್ಸ್ ಹೆಸರಲ್ಲೇ ಆಲ್ಬಂ ಸಾಂಗ್ ನ ರಿಲೀಸ್ ಮಾಡುವ ಮೂಲಕ ಮಾಣಿಕ್ಯನ ಗೋಲ್ಡನ್ ಜ್ಯೂಬಿಲಿ ಸಂಭ್ರಮಕ್ಕೆ ಕಳೆತಂದಿದ್ದಾರೆ. ಕಿಚ್ಚನ ಹೆತ್ತವರು ಮಾತ್ರವಲ್ಲ ಕೋಟ್ಯಾಂತರ ಭಕ್ತರು ಉಘೇ ಉಘೇ ಎನ್ನುವಂತಹ ಹಾಡೊಂದನ್ನ ಕಟ್ಟಿಕೊಟ್ಟಿದ್ದಾರೆ.

ನಿಮ್ಮ ಬರಣಿಗೆಗೆ ನಾನು ಅಭಿಮಾನಿ ಅಂತ ಬಿಗ್ಬಾಸ್ ವೇದಿಕೆಯಲ್ಲೇ ಕಿಚ್ಚ ಅನೌನ್ಸ್ ಮಾಡಿದ್ದರು. ಆ ಅಭಿಮಾನಕ್ಕೆ ಏನಾದರೂ ಕೊಡುಗೆ ಕೊಡಬೇಕು ಅಂತ ನಿರ್ಧರಿಸಿದ್ದ ಚಕ್ರವರ್ತಿ ಚಂದ್ರಚೂಡ್, ಶಾಂತಿನಿವಾಸದ ನಂದಾದೀಪ ಇಡೀ ಕರುನಾಡಿಗೆ ಬೆಳಕಾಗಿದ್ದರ ಬಗ್ಗೆ, ಕಲಿಯುಗದ ಕರ್ಣನಾಗಿ ಮಿನುಗುತ್ತಿರುವ
ಬಗ್ಗೆ ಪದಗಳನ್ನ ಪೋಣಿಸಿ ಅಕ್ಷರಗಳ ಹೂಮಾಲೆಯನ್ನ ಅರ್ಪಿಸಿದ್ದಾರೆ.

ಎಂಥಾ ಮಗನ ಹೆತ್ತೀರಿ ಸಂಜೀವಪ್ಪ. ಕರುನಾಡಿಗೆ ಸಂಜೀವಿನಿ ಈ ಜೀವ ನೋಡ್ರಪ್ಪ .. ಭೂಮಿ ತೂಕವನ್ನೇ ಹೋಲುವ ಚಕ್ರವರ್ತಿಯವರ ಸಾಹಿತ್ಯಕ್ಕೆ, ವೀರ್ ಸಮರ್ಥ್ ರಾಗ ಸಂಯೋಜನೆ ಮಾಡಿದ್ದಾರೆ. ಅಶ್ವಿನ್ ಶರ್ಮಾ ಕಂಠದಾನ ಮಾಡಿದ್ದಾರೆ. ಅಶ್ವಿನಿ ರೆಕಾರ್ಡಿಂಗ್ ಕಂಪೆನಿ ಕಡೆಯಿಂದ ‘ ಸುದೀಪಿಯನ್ಸ್’ ಆಲ್ಬಂ ಸಾಂಗ್ ಹೊರಬಂದಿದೆ. ಕಿಚ್ಚನ ಭಕ್ತರ ಕಾಲರ್ ಪಟ್ಟಿ ಎಗರಿಸುವಂತೆ ಮಾಡಿದೆ. ಯೂಟ್ಯೂಬ್ ಕೂಡ ಖುಷಿಪಟ್ಟಿದೆ. ಲೈಕ್ಸ್, ಕಾಮೆಂಟ್ ಗಳ ಮೂಲಕ ಶೇಕ್ ಆಗೋದಷ್ಟೇ ಬಾಕಿಯಿದೆ. ಆಗುತ್ತೆ ನೋ ಡೌಟ್ ಅಬೌಟ್ ಇಟ್ .

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿಚ್ಚನ ಬರ್ತ್ಡೇಗೆ ನೀರಜ್ ಚೋಪ್ರಾ ಸಪ್ರೈಸ್; ಚಿನ್ನದ ಸಹೋದರನ ಬಗ್ಗೆ ಸುದೀಪ್ ಹೀಗಂದ್ರು!

ಸ್ಯಾಂಡಲ್‌ವುಡ್ ಬಾದ್‌ಷಾ, ಅಭಿಮಾನಿಗಳ ಪಾಲಿನ ಮಾಣಿಕ್ಯ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಅದ್ಧೂರಿ ಹುಟ್ಟು ಹಬ್ಬಕ್ಕೆ ಬ್ರೇಕ್ ಬಿದ್ದಿರುವುದರಿಂದ ಅಭಿಮಾನಿ ದೇವರುಗಳು ತಾವಿದ್ದಲ್ಲಿಂದಲೇ ಶುಭಾಷಯ ಕೋರುವುದಕ್ಕೆ ಕಾತುರರಾಗಿದ್ದಾರೆ. ಕೋಟಿಗೊಬ್ಬನ ಗೋಲ್ಡನ್ ಜ್ಯೂಬಿಲಿಯನ್ನ ಗ್ರ್ಯಾಂಡ್ ಆಗಿಯೇ ಆಚರಣೆ ಮಾಡೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಹಾಕಿಕೊಂಡು ಭರ್ಜರಿಯಾಗಿ ಸೆಲಬ್ರೇಟ್ ಮಾಡುತ್ತಿರುವ ಫ್ಯಾನ್ಸ್, ಕಿಚ್ಚನಿಗೆ ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ ತಿಳಿಸುತ್ತಿದ್ದಾರೆ.

ಇಂಟ್ರೆಸ್ಟಿಂಗ್ ಅಂದರೆ ಚಿನ್ನದ ಹುಡುಗ ನೀರಜ್ ಚೋಪ್ರಾ ಅಭಿನಯ ಚಕ್ರವರ್ತಿಗೆ ಶುಭಾಷಯ ಕೋರಿರುವುದು. ಹೌದು, ತವರು ನಾಡು ಹರಿಯಾಣದಲ್ಲಿರುವ ನೀರಜ್, `ವಿಶ್ ಯೂ ಹ್ಯಾಪಿ ಬರ್ತ್ ಡೇ ಸುದೀಪ್‌ ಜೀ’. ಆಲ್‌ಓವರ್ ಇಂಡ್ಯಾ ಸೆನ್ಸೇಷನ್ ಸೃಷ್ಟಿಸಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಆಲ್ ದಿ ಬೆಸ್ಟ್. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ. ಚಿನ್ನದ ಹುಡುಗನ ಶುಭ ಹಾರೈಕೆಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಧನ್ಯವಾದಗಳು ಸಹೋದರ… ಗುರಿಯ ಬೆನ್ನತ್ತಿರುವ ನಿಮಗೆ ನನ್ನ ಶುಭಾಷಯಗಳು ಎಂದಿದ್ದಾರೆ. ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡವರು. ಭಾರತದ ಕೀರ್ತಿ ಪತಾಕೆಯನ್ನ ಎತ್ತಿ ಹಿಡಿಯೋದಲ್ಲದೇ ಹಿಂದ್ಯಾರು ಕೆತ್ತದ ಇತಿಹಾಸ ಕೆತ್ತಿ ಮುನ್ನುಗುತ್ತಿದ್ದಾರೆ. ಇಡೀ ದೇಶಕ್ಕೆ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ ಯಶೋಗಾಥೆ ಹೀಗೆಯೇ ಮುಂದುವರೆಯಲಿ. ಆಲ್‌ ಇಂಡಿಯಾ ಕಟೌಟ್ ಕಿಚ್ಚನ ಕೀರ್ತಿ ಪತಾಕೆ ದೇಶದ ತುಂಬೆಲ್ಲಾ ಹಬ್ಬಲಿ.

Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿಯಲ್ಲಿ ಬಾಬಾ ಸೆಹಗಲ್ ಹ್ಯಾಂಗೋವರ್ !

ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ , ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ.

ಸೆಪ್ಟೆಂಬರ್ 10 ಗಣೇಶ ಚತುರ್ಥಿಯ ಸಂಭ್ರಮ. ಆ ಶುಭದಿನದಂದು “ಶುಗರ್ ಫ್ಯಾಕ್ಟರಿ” ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್ ಟೀಸರ್‌ ಬರಲಿದೆ.

ಬಹದ್ದೂರ್ ಚೇತನ್ ಅವರು ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ ಬಾಬಾ ಸೆಹಗಲ್ ಧ್ವನಿಯಾಗಿದ್ದಾರೆ. ಕಫಿರ್ ರಫಿ ಸಂಗೀತ ನೀಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರೊಡನೆ ಈ‌ ಹಾಡಿಗೆ ಸೋನಾಲ್ ಮಾಂಟೆರೊ ಹೆಜ್ಜೆ ಹಾಕಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಗೋವಾದಲ್ಲಿ ಈ ಹಾಡನ್ನು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಸೆರೆ ಹಿಡಿದಿದ್ದಾರೆ.

ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಿರೀಶ್ ಆರ್. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌

ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಅಂತೂ ಫಸ್ಟ್ ಶೆಡ್ಯೂಲ್ ಮುಗಿಸಿದ ಭಗವಾನ್ ಶ್ರೀ ಕೃಷ್ಣ ಪರಮಾತ್ಮ!

ಇತ್ತೀಚೆಗೆ ಶ್ರೀ ಕೃಷ್ಣ ಜೋರು ಸದ್ದು ಮಾಡಿದ್ದು ಗೊತ್ತೇ ಇದೆ. ಈಗ ಆ ಕೃಷ್ಣ ಪರಮಾತ್ಮಮತ್ತೆ ಸುದ್ದಿಯಲ್ಲಿದ್ದಾನೆ.
ಹೌದು, ಕೃಷ್ಣ ಜನ್ಮಾಷ್ಟಮಿ ಬೆನ್ನಲ್ಲೇ “ಭಗವಾನ್ ಶ್ರೀ ಕೃಷ್ಣ ಪರಮಾತ್ಮ” ಕೂಡ ಸದ್ದು ಮಾಡುತ್ತಿದ್ದಾನೆ. ಈ ಸಿನಿಮಾ ಈಗ ಮೊದಲ ಹಂತದ
ಚಿತ್ರೀಕರಣ ಸದ್ದಿಲ್ಲದೆ ಮುಗಿಸಿದೆ ಅನ್ನೋದೇ ಈ ಹೊತ್ತಿನ ಸುದ್ದಿ.

ಬಹುತೇಕ ಈ ಚಿತ್ರ ಬೆಂಗಳೂರಿನಲ್ಲೇ ಚಿತ್ರೀಕರಣವಾಗಿದೆ.
ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಪೌರಾಣಿಕ ಸಿನಿಮಾ ಅಂದುಕೊಳ್ಳುವುದು‌ ಸಹಜ. ಆದರೆ, ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನುತ್ತಾರೆ ನಿರ್ದೇಶಕ ಅನೂಪ್ ಆಂಟೋನಿ.

ಈ ಶೀರ್ಷಿಕೆ ಯಾಕೆ ಇಡಲಾಗಿದೆ ಎಂಬುದಕ್ಕೆ ಸಿನಿಮಾ ನೋಡಿದ ಬಳಿಕ ಉತ್ತರ ಸಿಗಲಿದೆ ಎಂಬುದು ನಿರ್ದೇಶಕರ ಮಾತು.
ಭರತ್ ಸಿನಿ ಕ್ರಿಯೇಷನ್ಸ್ ಬ್ತಾನರ್ ನಲ್ಲಿ ಭರತ್ ವಿಷ್ಣುಕಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ನಿರ್ಸೆಡಶಕ ಅನೂಪ್ ಆಂಟೋನಿ ಈ ಹಿಂದೆ ‘ಕಥಾ ವಿಚಿತ್ರ’ ಹಾಗೂ ‘ಮೆಹಬೂಬ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರಿಗೆ ಇದು ಮೂರನೇ ಚಿತ್ರ. ಕಥೆ, ಚಿತ್ರಕಥೆ ಕೂಡ ನಿರ್ದೇಶಕರದೆ.
ಬಹದ್ದೂರ್ ಚೇತನ್ ಮಾತುಗಳನ್ನು ಪೋಣಿಸಿದ್ದಾರೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಮನುಗೌಡ ಅವರ ಸಂಕಲನ ಚಿತ್ರಕ್ಕಿದೆ.

ಧ್ರುವನ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ಯಶ್ ಶೆಟ್ಟಿ, ಯಶಸ್ ಸೂರ್ಯ, ಕಾಮಿಡಿ ಕಿಲಾಡಿಗಳು ಸೂರಜ್, ಶೋಭ್ ರಾಜ್, ಬಲರಾಜವಾಡಿ, ಸ್ವಾತಿ ಇತರರು ಇದ್ದಾರೆ.

Categories
ಸಿನಿ ಸುದ್ದಿ

ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್!!

ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಸುದೀಪ್ ಅವರ ಬಯೋಗ್ರಫಿ ಆಡಿಯೋ ಮತ್ತು ಇ ಬುಕ್ ಆಗಿ ಅವರ ಹುಟ್ಟು ಹಬ್ಬದಂದು ಬಿಡುಗಡೆ ಆಗುತ್ತಿದೆ.
ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ “ಕನ್ನಡ ಮಾಣಿಕ್ಯ ಕಿಚ್ಚ” ಹೆಸರಿನ ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿ ದಾಖಲೆ ರೀತಿಯಲ್ಲಿ ಮಾರಾಟ ಆಗಿತ್ತು. ಈ ಪುಸ್ತಕವೇ ಇಂದು ಮೈ ಲ್ಯಾಂಗ್ ಆಪ್ ಮೂಲಕ ಆಡಿಯೋ ಬಯೋಗ್ರಫಿ ಮತ್ತು ಇ ಬುಕ್ ರೂಪದಲ್ಲಿ ಹೊರ ಬರುತ್ತಿದೆ.


ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಈ ಪುಸ್ತಕಕ್ಕೆ ಧ್ವನಿ ನೀಡಿದ್ದು, ಸುದೀಪ್ ಅವರ ಬದುಕಿನ ಅನೇಕ ಘಟನೆಗಳನ್ನು ಮನಸೆಳೆಯುವಂತೆ ಓದಿದ್ದಾರೆ. ಈ ಬಾರಿಯ ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಈ ಎರಡು ಉಡುಗೊರೆಯನ್ನು ನೀಡುತ್ತಿದೆ ಮೈ ಲ್ಯಾಂಗ್ ಆಪ್.


ಬೆಂಗಳೂರಿನ ಕಾಯಕ ಪ್ರಕಾಶನ ಹೊರತಂದ ಈ ಕೃತಿಯು ಬಿಡುಗಡೆಯಾದ ಎರಡನೇ ದಿನಕ್ಕೆ ಮರು ಮುದ್ರಣಗೊಂಡಿತ್ತು.


ಆಡಿಯೋ ಮತ್ತು ಇ ಪುಸ್ತಕಕ್ಕಾಗಿ www.mylang.in ಇಲ್ಲಿಗೆ ಭೇಟಿ ಕೊಡಿ.

Categories
ಸಿನಿ ಸುದ್ದಿ

ಗಾಂಧಿನಗರದಲ್ಲಿ ಟೈಟಲ್‌ ಮರುಬಳಕೆಗೆ ಬೀಳುತ್ತಾ ಬ್ರೇಕ್?‌ ಅಣ್ಣಾವ್ರ ಹಳೇ ಸಿನಿಮಾ ಟೈಟಲ್‌ ಬಳಸದಂತೆ ರಾಜ್‌ ಅಭಿಮಾನಿಗಳ ಆಗ್ರಹ

ಕನ್ನಡ ಚಿತ್ರರಂಗ ಮಾತ್ರವಲ್ಲ, ಪರಭಾಷೆಗಳಲ್ಲೂ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿವೆ. ಈಗಾಗಲೇ ಕನ್ನಡದಲ್ಲಿ ಅದೆಷ್ಟೋ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿರುವುದುಂಟು. ಈಗ ಹಳೆಯ ಸಿನಿಮಾಗಳ ಮರುಬಳಕೆಗೆ ಬ್ರೇಕ್‌ ಹಾಕಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೌದು, ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಹಳೇ ಸಿನಿಮಾಗಳ ಟೈಟಲ್‌ಗಳನ್ನು ಮರುಬಳಕೆ ಮಾಡಬಾರದು ಅನ್ನೋ ಹೋರಾಟ ಶುರುವಾಗಿದೆ. ಈ ಹೋರಾಟಕ್ಕೆ ಮುನ್ನುಡಿ ಬರೆದಿರೋದು ಡಾ.ರಾಜ್‌ಕುಮಾರ್‌ ಅಭಿಮಾನಿಗಳು. ವಿಶ್ವ ಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ, ಡಾ.ರಾಜ್‌ಕುಮಾರ್‌ ಅವರ ಹಳೆಯ ಚಿತ್ರಗಳ ಶೀರ್ಷಿಕೆಗಳನ್ನು ಮರುಬಳಕೆ ಮಾಡಬಾರದು. ಅಂತಹ ಶೀರ್ಷಿಕೆಗಳಿಗೆ ಅನುಮತಿ ಕೊಡಬಾರದು ಮತ್ತು ಅಂತಹ ಶೀರ್ಷಿಕೆ ಇರುವ ಚಿತ್ರಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಡಾ.ರಾಜ್‌ಕುಮಾರ್‌ ಅವರ ಹಳೆಯ ಸಿನಿಮಾಗಳ ಟೈಟಲ್‌ಗಳ ಮರುಬಳಕೆಗೆ ಅವಕಾಶ ಕೊಡಲೇಬಾರದು ಅಂತ ಪಟ್ಟು ಹಿಡಿದು ಹೋರಾಟಕ್ಕಿಳಿದಿರುವ ರಾಜ್ ಕುಮಾರ್ ಅಭಿಮಾನಿ ಸಂಘಗಳು ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಜೋರಾದ ಹೋರಾಟಕ್ಕೆ ಸಿದ್ಧತೆ ನಡೆಸಿವೆ. ಹಾಗೊಂದು ವೇಳೆ ಸದ್ದಿಲ್ಲದೆಯೇ, ಡಾ.ರಾಜಕುಮಾರ್‌ ಅವರ ಕೆಲವು ಹಳೆಯ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಂಡು ಕೆಲಸ ಮಾಡುವ ಚಿತ್ರತಂಡಗಳು ಎಚ್ಚೆತ್ತುಕೊಂಡು, ಕೂಡಲೇ ಆ ಶೀರ್ಷಿಕೆ ತೆಗೆದು ಹಾಕಿ ಬೇರೊಂದು ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಿಸಬೇಕು. ಒಂದು ವೇಳೆ ಡಾ.ರಾಜಕುಮಾರ್‌ ಅವರ ಹೇಳೇ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಇಷ್ಟಕ್ಕೂ ಈ ಹೋರಾಟ ಯಾಕಪ್ಪ ಅಂದರೆ, ಈಗಾಗಲೇ ಡಾ.ರಾಜಕುಮಾರ್‌ ಅವರ ನಟಿಸಿರುವ ಬಹುತೇಕ ಸಿನಿಮಾಗಳು ದಾಖಲೆ ಬರೆದಿವೆ. ಅದರಲ್ಲೂ ಒಳ್ಳೆಯ ಸಂದೇಶ ಹೊತ್ತು ಬಂದ ಸಿನಿಮಾಗಳು. ಅಂಥದ್ದೇ ಶೀರ್ಷಿಕೆಯಡಿ ಸಿನಿಮಾ ಮಾಡ್ತೀನಿ ಅಂದರೆ, ಅಭಿಮಾನಿಗಳು ಒಪ್ಪುವುದಿಲ್ಲ. ಈಗೀಗ ಬರುವ ಕಥೆಗಳಲ್ಲಿ ಮೌಲ್ಯವೇ ಇರುವುದಿಲ್ಲ. ಅಂತಹ ಸಿನಿಮಾಗಳಿಗೆ ಅಣ್ಣಾವ್ರ ಹಳೆಯ ಶೀರ್ಷಿಕೆ ಇಟ್ಟರೆ ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳದ್ದು.

ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹೊಸ ಸಿನಿಮಾಗಳ ಶೀರ್ಷಿಕೆ ಇರುವ ಪೋಸ್ಟರ್‌ಗಳು ಕಾಣಸಿಗುತ್ತಿವೆ. ಇಂತಹ ಸಿನಿಮಾಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.

ರಾಜ್‌ಕುಮಾರ್‌ ಅಭಿಮಾನಿಗಳ ಮನವಿಯನ್ನು ಸ್ವೀಕರಿಸಿರುವ ವಾಣಿಜ್ಯ ಮಂಡಳಿ, ಅಂತಹ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನೇನೋ ಕೊಟ್ಟಿದೆ. ಆದರೆ, ಕೆಲವರು ಶೀರ್ಷಿಕೆ ಮೂಲಕವೇ ಸಿನಿಮಾ ಮಾಡ್ತೀವಿ ಅಂತ ಹೊರಟರೆ? ಅದಕ್ಕೀಗ ಉತ್ತರವಿಲ್ಲ. ಮುಂದೆ ಸಿನಿಮಾಗಳಿಗೆ ತೊಂದರೆ ಆದರೂ ಆಗಬಹುದೇನೋ?

ರಾಜ್‌ ಅಭಿಮಾನಿಗಳಂತೂ ಮುನ್ನೆಚ್ಚರಿಕೆಯ ಕ್ರಮವಾಗಿಯೇ ಶೀರ್ಷಿಕೆ ಮರುಬಳಕೆ ಮಾಡಬೇಡಿ ಎಂಬ ಮನವಿ ಮಾಡಿದೆ. ಅದರಲ್ಲೂ ರಾಜ್‌ ಫ್ಯಾಮಿಲಿ ಕೂಡ ಒಳ್ಳೆಯ ಸಿನಿಮಾಗಳ ಶೀರ್ಷಿಕೆ ಬಳಸದಂತೆ ಈ ಹಿಂದೆಯೇ ಮನವಿ ಮಾಡಿತ್ತು. ಅದರಲ್ಲೂ “ಆಕಸ್ಮಿಕ” “ದಾರಿ ತಪ್ಪಿದ ಮಗ” ಸಿನಿಮಾ ಶೀರ್ಷಿಕೆ ಮರು ಬಳಕೆ ಬೇಡ ಎಂದಿತ್ತು. ಅಷ್ಟೇ ಯಾಕೆ ಈ ಹಿಂದೆ ಸಾನ್ವಿ ಶ್ರೀವಾತ್ಸವ್‌ ಅಭಿನಯದ “ಕಸ್ತೂರಿ ಮಹಲ್”‌ ಸಿನಿಮಾಗೆ “ಕಸ್ತೂರಿ ನಿವಾಸ” ಎಂಬ ಶೀರ್ಷಿಕೆ ಇಡಲಾಗಿತ್ತು.

ಕೊನೆ ಕ್ಷಣದಲ್ಲಿ ನಿರ್ದೇಶಕ ದಿನೇಶ್‌ ಬಾಬು ಅವರು, “ಕಸ್ತೂರಿ ನಿವಾಸ” ಶೀರ್ಷಿಕೆಯನ್ನು “ಕಸ್ತೂರಿ ಮಹಲ್‌” ಎಂದು ಬದಲಿಸಿದ್ದರು. ಅದೇನೆ ಇರಲಿ, ಈಗ ರಾಜ್‌ ಫ್ಯಾನ್ಸ್‌ ಒಕ್ಕೊರಲ ಮನವಿ ಮಾಡಿದ್ದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಹಳೆಯ ಸಿನಿಮಾಗಳ ಟೈಟಲ್ ಮರುಬಳಕೆಗೆ ಬ್ರೇಕ್ ಬೀಳುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಉಪಾದ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷ ಸಾರಾ ಗೋವಿಂದ್ , ಕಾರ್ಯದರ್ಶಿ ಎನ್ ಎಮ್ ಸುರೇಶ್ ಹಾಜರಿದ್ದರು.

ವಿಶ್ವಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಬ.ನಾ.ಮು.ರಾಜು, ವೆಂಕಟೇಶ್‌ರೆಡ್ಡಿ, ಟಿ.ಎಚ್ಮ್.ಎಂ.ಗೌಡ, ಕೃಷ್ಣಮೂರ್ತಿ, ಕೆಂಪಣ್ಣ, ಗುರುರಾಜ್‌, ದೇವರಾಜ್‌ ಹಾಗು ಪತ್ರಕರ್ತ ಪರಮ್‌ ಗುಬ್ಬಿ ಸೇರಿದಂತೆ ಇತರೆ ರಾಜ್‌ ಅಭಿಮಾನಿಗಳ ಸಂಘಟನೆಯ ಪದಾಧಿಕಾರಿಗಳು ಈ ವೇಳೆ ಇದ್ದರು.

Categories
ಸಿನಿ ಸುದ್ದಿ

ಡಿಯರ್‌ ಆರ್ಯನ್‌ ಕಮಿಂಗ್‌ ಸೂನ್!‌ ಸೆಪ್ಟೆಂಬರ್‌ಗೆ ಡಿಯರ್ ಸತ್ಯ ಬರ್ತಾನೆ ಗುರು!!

ಆರ್ಯನ್‌ ಸಂತೋಷ್‌ ಕನ್ನಡ ಸಿನಿರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಸಿನಿಮಾ ಮೂಲಕ ರಂಗಿನ ದುನಿಯಾಗೆ ಎಂಟ್ರಿಯಾದ ಆರ್ಯನ್‌ ಸಂತೋಷ್‌, ಅ ನಂತರದ ದಿನಗಳಲ್ಲಿ “ನೂರು ಜನ್ಮಕು” ಸಿನಿಮಾ ಮೂಲಕ ಹೀರೋ ಆಗಿ ಕಾಣಿಸಿಕೊಂಡರು. ಅದಾದ ಬಳಿಕ ಒಂದಷ್ಟು ಕಥೆ ಹುಡುಕಾಟದಲ್ಲಿದ್ದ ಅವರು, ಕೊನೆಗೂ ಒಂದೊಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾದರು. ಅದೇ “ಡಿಯರ್‌ ಸತ್ಯ”. ಈ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲು ಹೀರೋ ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ…

ಹೀರೋ ಆರ್ಯನ್‌ ಸಂತೋಷ್‌ ಮೊಗದಲ್ಲಿ ಮಂದಹಾಸ ಬೀರಿದೆ. ಅದಕ್ಕೆ ಕಾರಣ, ಅವರ ಬಹುನಿರೀಕ್ಷೆಯ “ಡಿಯರ್‌ ಸತ್ಯ” ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬದಂದು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಈ ಟ್ರೇಲರ್‌ ಬಿಡುಗಡೆಯ ವಿಶೇಷವೆಂದರೆ, ಡೆಲಿವರಿ ಬಾಯ್ಸ್ ಟ್ರೇಲರ್‌ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಹೌದು, ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ “ಡಿಯರ್ ಸತ್ಯ” ಚಿತ್ರ ಸೆಪ್ಟೆಂಬರ್‌ಗೆ ಬಿಡುಗಡೆಯಾಗಲಿದೆ. ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಚಿತ್ರದ ಟ್ರೇಲರ್‌ ರಿಲೀಸ್‌ ಬಳಿಕ ಮಾತಿಗಿಳಿದ ಹೀರೋ ಆರ್ಯನ್‌ ಸಂತೋಷ್‌, “ನಾನು ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾನು, “ನೂರು ಜನ್ಮಕು” ಚಿತ್ರದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರು ಮುಂದೆ ಬರಲಿಲ್ಲ. ದೇವರ ಹಾಗೆ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಬಂದು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ ಎಂದರು ಆರ್ಯನ್ ಸಂತೋಷ್.

ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ “ಭಿನ್ನ” ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಓಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ “ಡಿಯರ್ ಸತ್ಯ” ನಿರ್ಮಾಣ ಮಾಡಿದ್ದೇವೆ. ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋ ಮೂಲಕ ಚಿತ್ರ ತಯಾರಾಗಿದೆ.‌

ಆರ್ಯನ್ ಸಂತೋಷ್ ನನ್ನ ಸ್ನೇಹಿತ. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ಪ್ಲಾನ್‌ ಇದೆ ಎಂಬುದು ನಿರ್ಮಾಪಕ ಗಣೇಶ್ ಪಾಪಣ್ಣ ಅವರ ಮಾತು. ಮತ್ತೊಬ್ಬ ನಿರ್ಮಾಪಕ ಶ್ರೀನಿವಾಸ ಶ್ರೀಭಕ್ತ ಕೂಡ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದರು.

“ಜಿಗರ್ ಥಂಡ”, “ತ್ರಾಟಕ”, “ಆ ದೃಶ್ಯ” ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದಿದ್ದೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು.‌ ನಂತರ ಈ ಚಿತ್ರ ಆರಂಭವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯ ಇಲ್ಲಿ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ. ಎಲ್ಲಾ‌ ತಂತ್ರಜ್ಞರು ಹಾಗೂ ಕಲಾವಿದರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಶಿವಗಣೇಶ್. ಆಡಿಷನ್ ಮೂಲಕ ಆಯ್ಕೆಯಾದ ನಾಯಕಿ ಅರ್ಚನಾ ಕೊಟ್ಟಿಗೆ, ಕಲಾವಿದರಾದ ಬಾಲು, ಕಾರ್ತಿಕ್ ಸುಬ್ರಹ್ಮಣ್ಯ, ಫ್ಯಾಷನ್ ಡೈರೆಕ್ಟರ್ ಭಾರ್ಗವಿ ವಿಖ್ಯಾತಿ ಹಾಗೂ ಸಾಹಸ ನಿರ್ದೇಶಕ ಕುಂಫು ಚಂದ್ರು ಮಾತನಾಡಿದರು.


ಇನ್ನು, “ಡಿಯರ್‌ ಸತ್ಯ” ಚಿತ್ರದಲ್ಲಿ ನಾಯಕ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನ ಡೆಲಿವರಿ ಬಾಯ್ಸ್ ಕೈಯಿಂದಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಆರ್ಯನ್ ಸಂತೋಷ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಿರ್ಮಾಪಕರಾದ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್ ಹಾಗೂ ಕರಿಸುಬ್ಬು ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

error: Content is protected !!