ಹೌದು, ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದ್ದ ಸಿನಿಮಾರಂಗ ಈಗ ಚೇತರಿಸಿಕೊಳ್ಳುತ್ತಿದೆ. ಈವರೆಗೆ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಅಕ್ಟೋಬರ್ 1ರಿಂದ ಶೇ.100ಷ್ಟು ಭರ್ತಿಗೆ ಅವಕಾಶ ಕೊಟ್ಟಿದೆ. ಇದೇ ಖುಷಿಯಲ್ಲಿರುವ ಸಿನಿಮಾ ಮಂದಿ ಹಬ್ಬದ ಸಂಭ್ರಮದಲ್ಲಿರುವುದಂತೂ ನಿಜ. ಸರ್ಕಾರ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದ್ದೇ ತಡ, ಸ್ಟಾರ್ ಸಿನಿಮಾಗಳು ರಿಲೀಸ್ ದಿನಾಂಕವನ್ನು ಘೋಷಿಸಿಕೊಂಡಿವೆ. ಸುದೀಪ್ ಅಭಿನಯದ “ಕೋಟಿಗೊಬ್ಬ 3” ಮತ್ತು “ದುನಿಯಾ” ವಿಜಯ್ ಅಭಿನಯದ “ಸಲಗʼ ಸಿನಿಮಾಗಳು ದಸರಾಗೆ ಅಂದರೆ ಅಕ್ಟೋಬರ್ 14ರಂದು ದರ್ಶನ ನೀಡಲಿವೆ.
ಶಿವರಾಜ್ ಕುಮಾರ್ ಅಭಿನಯದ “ಭಜರಂಗಿ 2” ಚಿತ್ರದೊಂದಿಗೆ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ಚಿತ್ರವೂ ಥಿಯೇಟರ್‌ಗೆ ಎಂಟ್ರಿಕೊಡುತ್ತಿದೆ. ಹೌದು, ಪ್ರೇಮ್ ಅವರ “ಪ್ರೇಮಂ ಪೂಜ್ಯ” ಸಿನಿಮಾ ಕೂಡ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಅಕ್ಟೋಬರ್ 29ಕ್ಕೆ ಪ್ರೇಕ್ಷಕರ ಮುಂದೆ ಬರುವುದನ್ನು ಹೇಳಿಕೊಂಡಿದೆ. ಇನ್ನು ಈ ಚಿತ್ರವನ್ನು ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ನಿರ್ಮಾಣ ಮಾಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಪ್ರೇಮ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ.
ಅದೇನೆ ಇರಲಿ, ಕಳೆದ ಎರಡು ವರ್ಷಗಳಿಂದಲೂ ದಂಗುಬಡಿದಿದ್ದ ಚಿತ್ರರಂಗಕ್ಕೆ ಈಗ ಮಂದಹಾಸ ಮೂಡಿದೆ. ಸದ್ಯ ಸ್ಟಾರ್‌ಗಳ ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿವೆ. ಆ ಮೂಲಕ ಪ್ರೇಕ್ಷಕರನ್ನು, ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಕೂಡ ನಡೆಯುತ್ತಿದೆ ಎಂಬುದೇ ವಿಶೇಷ. ಅಭಿಮಾನಿಗಳು ಈಗ ಥಿಯೇಟರ್ ಮುಂದೆ ಹಬ್ಬ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಆ ವೈಭವ ಮರುಕಳಿಸಲು ಬಹಳ ದಿನಗಳೇನು ಬೇಕಿಲ್ಲ. ಆದರೂ, ಮುಂಜಾಗ್ರತೆ ಕ್ರಮ ಕೈಗೊಂಡು ಫ್ಯಾನ್ಸ್ ಸಿನಿಮಾ ನೋಡಿ, ಚಿತ್ರರಂಗವನ್ನು ಬೆಳೆಸಬೇಕಿದೆ. ಹಾಗೆಯೇ, ಥಿಯೇಟರ್‌ಗಳಿಗೆ ಮತ್ತೆ ಆ ಸಂಭ್ರಮ ತಂದುಕೊಡಬೇಕಿದೆ.