ದರ್ಶನ್ ಅಭಿನಯದ “ರಾಬರ್ಟ್” ಸಿನಿಮಾ ಬಿಡುಗಡೆ ಯಾವಾಗ ಎನ್ನುವವರಿಗೆ ಚಿತ್ರತಂಡ ಹೀಗೊಂದು ಸಿಹಿ ಸುದ್ದಿ ನೀಡಿದೆ.
ಹೌದು “ರಾಬರ್ಟ್” ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಇದೇ ಮಾರ್ಚ್11 ರಂದು “ರಾಬರ್ಟ್” ಬಿಡುಗಡೆಯಾಗುತ್ತಿದೆ.
ಈ ವಿಷಯವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.
ಕಳೆದ ಜನವರಿಯಲ್ಲಿ ಮಹೂರ್ತ ಕಂಡಿದ್ದ “ಧೀರ ಸಾಮ್ರಾಟ್” ಈಗ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದೆ.
ಹೌದು, ಬಹುತೇಕ ಹೊಸಬರೇ ಸೇರಿ ಮಾಡಿದ ಈ ಚಿತ್ರ ಇತ್ತೀಚೆಗೆ ಕುಂಬಳಕಾಯಿ ಒಡೆದಿದೆ.
ಅಂದಹಾಗೆ, ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಸಾಕಷ್ಟು ಅನುಭವ ಹೊಂದಿರುವ ಪವನ್ ಕುಮಾರ್ (ಪಚ್ಚಿ ) ಈ ಸಿನಿಮಾಗೆ ನಿರ್ದೇಶಕರು.
ಸುಮಾರು 45 ದಿನಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿದೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ನಗರದ ಹೊರ ಭಾಗದಲ್ಲಿ ನಡೆದ ಕೊನೆ ದಿನದ ಚಿತ್ರೀಕರಣದಲ್ಲಿ ಸಿನೆಮಾದ ನಾಯಕನ ತಂಡ ಮತ್ತು ಖಳನಾಯಕನ ಮಧ್ಯೆ ಜಿದ್ದಾಜಿದ್ದಿನ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಚಿತ್ರೀಕರಣ ಮುಗಿಸಿದೆ. ತನ್ವಿ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಉತ್ತರ ಕರ್ನಾಟಕದ ಗುರು ಬಂಡಿ ಚಿತ್ರದ ನಿರ್ಮಾಪಕರು.
ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಹೊಸಬರ ತಂಡದ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಹಾಡುಗಳಿಗೆ ಮುರಳಿ ಮಾಸ್ಟರ್ ಮತ್ತು ಕಿಶೋರ್ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದ ಚಿತ್ರೀಕರಣದಲ್ಲಿ ವೀರೇಶ್ ಎನ್ ಟಿ ಎ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದರೆ, ಎರಡನೇ ಭಾಗದ ಚಿತ್ರೀಕರಣಕ್ಕೆ ಅರುಣ್ ಸುರೇಶ್ ಕ್ಯಾಮೆರಾ ಹಿಡಿದಿದ್ದಾರೆ. ಎ. ಆರ್. ಸಾಯಿರಾಂ ಸಂಭಾಷಣೆ ಬರೆದಿರೋ ಈ ಸಿನಿಮಾದಲ್ಲಿ ನಿರ್ದೇಶಕ ಪವನ್ ಕುಮಾರ್ ಕೂಡ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಆರಂಭದಲ್ಲಿ ಆಕ್ಷನ್ ಪ್ರಿನ್ಸ್ ಧೃವ ಸರ್ಜಾಅವರು ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ವಿ.ನಾಗೇಂದ್ರ ಪ್ರಸಾದ್ ಮತ್ತು “ಭರ್ಜರಿ” ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
ರಾಕೇಶ್ ಬಿರಾದರ್ ಮತ್ತು ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.
ಉಳಿದಂತೆ ಬಲರಾಜ್ ವಾಡಿ, ನಾಗೇಂದ್ರ ಅರಸ್, ಶೋಭರಾಜ್, ಶಂಕರ್ ಭಟ್, ರವೀಂದ್ರನಾಥ್, ರಮೇಶ್ ಭಟ್, ಮಂಡ್ಯ ಚಂದ್ರು, ಮನಮೋಹನ್ ರೈ, ಯತಿರಾಜ್ , ಸಂಕಲ್ಪ್, ರವಿ, ಗಿರಿಧರ್, ಹರೀಶ್ ಅರಸು, ಇಂಚರ, ಜ್ಯೋತಿ ಮುರೂರ್ ಅಭಿನಯಿಸಿದ್ದಾರೆ. ರಾಘವ್ ಸುಭಾಷ್ ಸಂಗೀತ ನೀಡಿದ್ದು, ಸತೀಶ್ ಚಂದ್ರಯ್ಯ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.
ಕನ್ನಡ ಚಿತ್ರರಂಗ ಈಗಾಗಲೇ ಸಾಕಷ್ಟು ದಾಖಲೆ ಬರೆದಿದೆ. ಅದು ಯಶಸ್ವಿ ಸಿನಿಮಾಗಳಿರಬಹುದು, ಒಳ್ಳೆಯ ಕಥೆಗಳಿರಬಹುದು, ತಾಂತ್ರಿಕ ವರ್ಗವೇ ಇರಬಹುದು. ಕಲಾವಿದರ ಸಂಭಾವನೆಯಲ್ಲೂ ಕೂಡ ಕನ್ನಡ ಚಿತ್ರರಂಗ ಹಿಂದೆ ಬಿದ್ದಿಲ್ಲ.
ಈಗ ಇಲ್ಲಿ ಹೇಳ ಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ನಟಿಯೊಬ್ಬರು ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ.
ಹೌದು, ಅಷ್ಟೊಂದು ದುಬಾರಿ ನಟಿ ಬೇರಾರೂ ಅಲ್ಲ, ರಾಧಿಕಾ ಕುಮಾರಸ್ವಾಮಿ. ಸದ್ಯದ ಮಟ್ಟಿಗೆ ರಾಧಿಕಾ ಕುಮಾರಸ್ವಾಮಿ ಅವರು ಸುದ್ದಿಯಲ್ಲಿದ್ದಾರೆ. ಅದರ ಜೊತೆಗೆ ಅವರು ಚಿತ್ರವೊಂದರಲ್ಲಿ ನಟಿಸಲು ಬರೋಬ್ಬರಿ 90 ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದೇ ಈ ಹೊತ್ತಿನ ಬಿಗ್ ನ್ಯೂಸ್.
ಅಂದಹಾಗೆ, ರಾಧಿಕಾ ಕುಮಾರಸ್ವಾಮಿ ಅವರು ಅತೀ ಹೆಚ್ಚು ಸಂಭಾವನೆ ಪಡೆದಿರುವ ಸಿನಿಮಾ, “ನಾಟ್ಯರಾಣಿ ಶಾಕುಂತಲಾ’ ಸಿನಿಮಾ.
ಈ ಚಿತ್ರದಲ್ಲಿ ಅವರು ನಟಿಸಲು 90 ಲಕ್ಷ ರೂಪಾಯಿ ಕೇಳಿದ್ದು, ಈಗಾಗಲೇ 60 ಲಕ್ಷ ರುಪಾಯಿ ಸಂದಾಯ ಕೂಡ ಆಗಿದೆ ಎಂಬುದು ಸುದ್ದಿ.
ಅದೇನೆ ಇರಲಿ, ಸೌತ್ ಇಂಡಿಯಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಮಣಿಯರಲ್ಲಿ ಕನ್ನಡದ ರಾಧಿಕಾ ಕುಮಾರಸ್ವಾಮಿ ಕೂಡ ಸೇರಿದ್ದಾರೆ ಅನ್ನುವುದೇ ವಿಶೇಷ.
ಸದ್ಯ ಆ ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ. ಇನ್ನುಳಿದ ಮಾಹಿತಿಗಳು ಕೂಡ ಒಂದೊಂದೇ ಹೊರಬೀಳುವ ಸಾಧ್ಯತೆ ಇದೆ.
ನಮ್ ಕನ್ನಡ ನಟಿಯರು ಬಾಲಿವುಡ್ ರೇಂಜ್ ನಲ್ಲಿದ್ದಾರೆ ಅನ್ನುವುದಕ್ಕೆ ಈ ಸಂಭಾವನೆ ಸುದ್ದಿಯೇ ಸಾಕು.
ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರು ಸಾಕಷ್ಟು ಪುಸ್ತಕಗಳನ್ನು ಹೊರತಂದಿರುವುದುಂಟು. ಆ ಸಾಲಿಗೆ ಈಗ ನಿರ್ದೇಶಕ ಚಂದ್ರಶೇಖರ್‌ಬಂಡಿಯಪ್ಪ ಅವರು ಕೂಡ ಹೊಸದೊಂದು ಪುಸ್ತಕ ಹೊರತರುವ ತಯಾರಿಯಲ್ಲಿದ್ದಾರೆ. ಹೌದು, “ಆನೆ ಪಟಾಕಿ”,”ರಥಾವರ” ಮತ್ತು “ತಾರಕಾಸುರ” ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ಬಂಡಿಯಪ್ಪ, ಒಳ್ಳೆಯ ಬರಹಗಾರರೂ ಹೌದು. ಅವರೀಗೆ ಸಿನಿಮಾ ನಿರ್ದೇಶನದ ಜೊತೆಯಲ್ಲೊಂದು ಪುಸ್ತಕವನ್ನೂ ಬರೆದಿದ್ದಾರೆ ಅನ್ನೋದೇ ಖುಷಿಯ ವಿಷಯ. ಅವರು ಒಂದು ಕಥೆಯನ್ನಿಟ್ಟುಕೊಂಡು, ಅದನ್ನು ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಅವರು ಬರೆದಿರುವ ಕಥೆಯ ಪುಸ್ತಕಕ್ಕೆ “ದೇವರ ಕಾಲೋನಿ” ಎಂದು ನಾಮಕರಣ ಮಾಡಿದ್ದಾರೆ. ಈ ಪುಸ್ತಕದ ವಿಶೇಷತೆ ಅಂದರೆ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಮುನ್ನುಡಿ ಬರೆದರೆ, ಯೋಗರಾಜ್‌ಭಟ್ ಬೆನ್ನುಡಿ ಬರೆದಿದ್ದಾರೆ. ತಮ್ಮ ಚೊಚ್ಚಲ ಪುಸ್ತಕ “ದೇವರ ಕಾಲೋನಿ” ಕುರಿತು ಚಂದ್ರಶೇಖರ್ ಬಂಡಿಯಪ್ಪ “ಸಿನಿ ಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.
“ನನ್ನ ಬದುಕಿನಲ್ಲಿ ನಿರ್ದೇಶನ ಮತ್ತು ವ್ಯವಸಾಯ ಈ ಎರಡನ್ನು ತುಂಬಾನೇ ಇಷ್ಟಪಡ್ತೀನಿ. ಅದರೊಂದಿಗೆ ಈಗ ಪುಸ್ತಕ ಬರಹಕ್ಕೂ ಇಳಿದಿದ್ದೇನೆ. “ದೇವರ ಕಾಲೋನಿ” ಎಂಬ ಹೆಸರಿನ ಪುಸ್ತಕಕ್ಕೆ ಕಥೆ ಬರೆಯುತ್ತಿದ್ದೇನೆ. ಈ ಮೂಲಕ ಲೇಖಕ ಎನಿಸಿಕೊಳ್ಳುತ್ತಿದ್ದೇನೆ ಎಂಬ ಖುಷಿ ಇದೆ. ಸಿನಿಮಾ ಅಂತ ಬಂದಾಗ ಅಲ್ಲಿ ಒಂದಷ್ಟು ಚೌಕಟ್ಟು ಇರುತ್ತೆ. ಅದರದ್ದೇ ಆದ ಕಟ್ಟುಪಾಡುಗಳಿರುತ್ತವೆ. ಅಲ್ಲಿ ಕಮರ್ಷಿಯಲ್ ಫಾರ್ಮೆಟ್ ಇರುತ್ತೆ. ಇನ್ನೇನಾದರೂ ಅಲ್ಲಿ ಮಾಡೋಕೆ ಹೋದರೆ, ಅದು ಜನರಿಗೆ ರೀಚ್ ಆಗೋದಿಲ್ಲ. ಆದರೆ, ಈ ಪುಸ್ತಕ ವಿಚಾರಕ್ಕೆ ಬಂದರೆ, ಅಲ್ಲಿ ಬರಹಗಾರರನಿಗೆ ಸಂಪೂರ್ಣ ಸಹಕಾರ ಇರುತ್ತೆ. ಅವನಿಗೆ ಏನು ತೋಚುತ್ತೋ, ಅದನ್ನು ಗೀಚಬಹುದು. ಎಷ್ಟೇ ನೇರವಾಗಿ, ಖಾರವಾಗಿಯಾದರೂ ಪ್ರತಿಕ್ರಿಯಿಸಬಹುದು. ಒಂದು ರೀತಿಯಲ್ಲಿ ಲೇಖಕ ಸ್ವತಂತ್ರ. ಇನ್ನು ಸಿನಿಮಾದಲ್ಲಿ ಕೆಲ ಕಥಾವಸ್ತು ಇಟ್ಟುಕೊಂಡು ಸಿನಿಮಾ ಮಾಡೋಕೂ ಧೈರ್ಯ ಬೇಕು. ನನಗೆ ಪುಸ್ತಕ ಬರೆಯುವ ಯೋಚನೆ ಹಲವು ವರ್ಷಗಳಿಂದ ಇತ್ತು. ಸಾಕಷ್ಟು ಸಂಶೋಧನೆ ಮಾಡಿಯೇ ನಾನು ಕಥೆ ಬರೆಯೋಕೆ ಮುಂದಾಗಿದ್ದೇನೆ. ಸದ್ಯ ಈ “ದೇವರ ಕಾಲೋನಿ” ಪುಸ್ತಕಕ್ಕೆ ತಯಾರಿ ನಡೆಯುತ್ತಿದೆ. ಬರವಣಿಗೆ ಕೆಲಸ ಆದಾಗಲೇ ಮುಗಿದಿದ್ದು, ಡಿಟಿಪಿ ಕೆಲಸ ನಡೆಯುತ್ತಿದೆ. ದೊಡ್ಡ ಪಬ್ಲಿಕೇಷನ್ ಮೂಲಕ ಈ ಪುಸ್ತಕ ಇಷ್ಟರಲ್ಲೇ ಹೊರಬರಲಿದೆʼ ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅವರ ಮಾತು.
ಅದೇನೆ ಇರಲಿ, ಚಂದ್ರಶೇಖರ್ ಬಂಡಿಯಪ್ಪ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದಷ್ಟು ವಿಲಕ್ಷಣ ಕಥೆಗಳು, ಪಾತ್ರಗಳು ಕಾಣಿಸಿಕೊಂಡಿವೆ. ವಿಚಿತ್ರ ಕಥೆಗಳನ್ನು ತಂದು ಜನರ ಮುಂದಿಟ್ಟಾಗ, ಜನರು ಕೂಡ ಒಪ್ಪಿ ಅಪ್ಪಿಕೊಂಡಿದ್ದುಂಟು. ಆ ಮೂಲಕ ಅವರು ಹೊಸ ಪ್ರತಿಭೆಗಳನ್ನು ಹೊರತಂದಿದ್ದಾರೆ. ಅಂದಹಾಗೆ, ಚಂದ್ರಶೇಖರ್ ಬಂಡಿಯಪ್ಪ ಅವರ “ದೇವರ ಕಾಲೋನಿ” ಟೋಟಲ್ ಕನ್ನಡ ಮೂಲಕ ರಿಲೀಸ್ ಆಗುತ್ತಿದೆ. ಇದು ನಿರ್ದೇಶಕರ ಮತ್ತೊಂದು ಹೊಸ ಹೆಜ್ಜೆ. ಅವರ ಹೊಸ ಪ್ರಯತ್ನಕ್ಕೆ ಗೆಲುವು ಸಿಗಲಿ ಎಂಬುದು “ಸಿನಿಲಹರಿ” ಹಾರೈಕೆ.
ಕನ್ನಡದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದವರು. ಸದ್ಯಕ್ಕೆ ಅವರ ಕೈಯಲ್ಲಿ ಒಂದಷ್ಟು ಸಿನಿಮಾಗಳಿವೆ. “ರಾಬರ್ಟ್” ಈಗ ರಿಲೀಸ್‌ಗೆ ರೆಡಿಯಾಗಿದೆ. ಅದರ ಬೆನ್ನಲ್ಲೇ “ರಾಜವೀರ ಮದಕರಿನಾಯಕ” ಚಿತ್ರ ಕೂಡ ಸೆಟ್ಟೇರಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದೆ. ಇನ್ನು, “ರಾಬರ್ಟ್” ತಂಡದ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಈಗಾಗಲೇ ದರ್ಶನ್ ಅನೌನ್ಸ್ ಮಾಡಿದ್ದಾಗಿದೆ. ಇವುಗಳ ಜೊತೆಯಲ್ಲಿ ದರ್ಶನ್‌ಗೆ ಮತ್ತೊಂದು ಸಿನಿಮಾ ಕೂಡ ಆಗುತ್ತಿದೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ದರ್ಶನ್ ಅವರಿಗೆ ಹೊಸ ಸಿನಿಮಾ ಕಥೆ ರೆಡಿಯಾಗುತ್ತಿದೆ. ಮತ್ತೊಂದು ಅದ್ಧೂರಿ ಬಜೆಟ್‌ನ ಚಿತ್ರ ಆಗಲಿದೆ ಎಂಬುದು ವಿಶೇಷತೆಗಳಲ್ಲೊಂದು.
ಹೌದು, ಈ ಹಿಂದೆ ದರ್ಶನ್ ಅವರಿಗೆ “ಯಜಮಾನ” ಚಿತ್ರ ನಿರ್ಮಿಸಿದ್ದ ಶೈಲಜಾ ನಾಗರಾಜ್ ಅವರೇ ದರ್ಶನ್ ಅವರಿಗೆ ಮತ್ತೊಂದು ದೊಡ್ಡ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಹಾಗೆ ನೋಡಿದರೆ, “ಯಜಮಾನ” ಸಿನಿಮಾ ಆಗುವ ಸಂದರ್ಭದಲ್ಲೇ ನಿರ್ಮಾಪಕರು ದರ್ಶನ್ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದರು ಎನ್ನಲಾಗಿದ್ದು, ಆ ಚಿತ್ರದ ಕಥೆಯ ಕೆತ್ತನೆಯ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇನ್ನು, ದರ್ಶನ್ ಅವರ ಮುಂದಿನ ಸಿನಿಮಾಗೆ ನಿರ್ದೇಶಕರು ಯಾರು? ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. “ಯಜಮಾನ” ಚಿತ್ರವನ್ನು ನಿರ್ದೇಶನ ಮಾಡಿದ್ದ ಹರಿಕೃಷ್ಣ ಅವರೇ ದರ್ಶನ್ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಈಗಾಗಲೇ ಹರಿಕೃಷ್ಣ ಅವರು ತಮ್ಮದ್ದೊಂದು ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಯುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯಕ್ಕೆ ದರ್ಶನ್ ಅವರು “ರಾಬರ್ಟ್” ರಿಲೀಸ್ ಎದುರು ನೋಡುತ್ತಿದ್ದಾರೆ.
ಇದರ ಜೊತೆ ಜೊತೆಯಲ್ಲೇ ಅವರು “ರಾಜವೀರ ಮದಕರಿನಾಯಕ” ಸಿನಿಮಾ ಚಿತ್ರೀಕರಣದಲ್ಲೂ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ಅವರು, ತರುಣ್ ಸುಧೀರ್ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಮುಂದಾಗುತ್ತಾರೋ ಅಥವಾ ಹರಿಕೃಷ್ಣ ಅವರ ಹೊಸ ಚಿತ್ರದಲ್ಲಿ ಎಂಟ್ರಿಯಾಗುತ್ತಾರೋ ಎಂಬುದು ಗೌಪ್ಯ. ಆದರೆ, ಹರಿಕೃಷ್ಣ ಅವರೊಂದಿಗೆ ಮತ್ತೊಂದು ಸಿನಿಮಾ ಆಗುತ್ತಿರುವುದಂತೂ ನಿಜ. “ಯಜಮಾನ” ಬಳಿಕ ಹೊಸ ಸಿನಿಮಾ ಇನ್ನೂ ಹೊಸತನದಲ್ಲಿರಲ್ಲಿದ್ದು, ಪಕ್ಕಾ ಮಾಸ್ ಅಂಶಗಳೊಂದಿಗೆ ಪಡ್ಡೆಗಳೂ ಸೇರಿದಂತೆ ದರ್ಶನ್ ಅಭಿಮಾನಿಗಳಿಗೊಂದು ರಗಡ್ ಸಿನಿಮಾ ಮಾಡಬೇಕೆಂಬ ಹಠದಲ್ಲೇ ಹರಿಕೃಷ್ಣ ಸದ್ಯಕ್ಕೆ ಸ್ಕ್ರಿಪ್ಟ್‌ನಲ್ಲಿ ಮಗ್ನರಾಗಿದ್ದಾರೆ.
ಹರಿಕೃಷ್ಣ ಅಂದಾಕ್ಷಣ, ನೆನಪಾಗೋದೇ ಅದ್ಭುತ ಹಾಡುಗಳ ಮೋಡಿಗಾರ ಅನ್ನೋದು. ಅವರು ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲೇ ನಿರ್ದೇಶನಕ್ಕೂ ಬಂದಿದ್ದು ಮತ್ತೊಂದು ಪ್ಲಸ್ ಪಾಯಿಂಟ್. ಬಹಳಷ್ಟು ಮಂದಿ ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಪಳಗಿದವರು, ನಿರ್ದೇಶನವನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೋ ಏನೋ ಎಂಬ ಪ್ರಶ್ನೆಗಳನ್ನು ಹಾಕುತ್ತಿದ್ದರು. ಯಾವಾಗ,”ಯಜಮಾನ” ಹೊರಬಂತೋ, ಅದರೊಳಗಿರುವ ಗತ್ತುಗೈರತ್ತು ನೋಡಿದ ಮಂದಿ, ಒಂದು ಮಾತನ್ನೂ ಆಡೋಕೆ ಮುಂದಾಗಲಿಲ್ಲ.
ಅಷ್ಟರಮಟ್ಟಿಗೆ “ಯಜಮಾನ” ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದುಂಟು. ಈಗ ಅದೇ ಹುಮ್ಮಸ್ಸಿನಲ್ಲೇ ದರ್ಶನ್ ಅವರಿಗೆ ಮತ್ತೊಂದು ಸಿನಿಮಾ ಮಾಡೋಕೆ ಅಣಿಯಾಗುತ್ತಿದ್ದಾರೆ ಹರಿಕೃಷ್ಣ. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನೂ ಹರಿಕೃಷ್ಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇನ್ನು ಶೈಲಜಾ ನಾಗ್ ಅವರು ಕೂಡ ದರ್ಶನ್ ಜೊತೆ ಭರ್ಜರಿಯಾಗಿಯೇ ಹೊಸ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಇಷ್ಟರಲ್ಲೇ ಆ ಚಿತ್ರದ ಒಂದಷ್ಟು ಹೊಸ ಸುದ್ದಿಗಳು ಹೊರಬಿದ್ದರೆ ಅಚ್ಚರಿ ಇಲ್ಲ.
ನಟ ಶ್ರೀಮುರಳಿ ಅವರ “ಮದಗಜ” ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿತ್ತು. ಅದಷ್ಟೇ ಅಲ್ಲ, ತೆಲುಗಿನಲ್ಲೂ “ರೋರಿಂಗ್ ಮದಗಜ” ಸಿನಿಮಾದ ಟೀಸರ್ ಕೂಡ ಹೊರಬಂದು ಸಖತ್ ಸೌಂಡು ಮಾಡುತ್ತಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ, ಸದ್ಯ ಚಿತ್ರೀಕರಣದಲ್ಲಿದೆ. ಇದರ ನಡುವೆಯೇ ಅವರ ಅನಾರೋಗ್ಯ ಹದಗೆಟ್ಟ ಸುದ್ದಿ ಇದೆ. ಹೌದು, ಶ್ರೀಮುರಳಿ ಅವರಿಗೆ ಹುಷಾರಿಲ್ಲವಂತೆ. ಈ ಮಾತನ್ನು ಸ್ವತಃ ಅವರ ತಂದೆ ಚಿನ್ನೇಗೌಡ ಅವರೇ ಹೇಳಿದ್ದಾರೆ. ಹಾಗಂತ ಶ್ರೀಮುರಳಿ ಅವರ ಅಭಿಮಾನಿಗಳು ಭಯಪಡುವಂಥದ್ದೇನೂ ಇಲ್ಲ. ಇಷ್ಟಕ್ಕೂ ಚಿನ್ನೇಗೌಡ ಅವರು ಹೇಳಿದ್ದು, ಒಂದು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.
ಜನವರಿ 4 ರಂದು ರೇಣುಕಾಂಬ ಸ್ಟುಡಿಯೋದಲ್ಲಿ ಹೊಸಬರೇ ಸೇರಿ ಮಾಡಿರುವ “ಬ್ರೇಕ್ ಫೇಲ್ಯೂರ್” ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಆ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದು ಚಿನ್ನೇಗೌಡರು. ಪೋಸ್ಟರ್ ಲಾಂಚ್‌ಗೂ ಮೊದಲು ಮಾತನಾಡಿದ ಚಿನ್ನೇಗೌಡರು, “ಈ ಚಿತ್ರದ ಪೋಸ್ಟರ್ ಲಾಂಚ್ ಅನ್ನು ಶ್ರೀಮುರಳಿ ಅವರು ಮಾಡಬೇಕಿತ್ತು. ಆದರೆ, ಅವರಿಗೆ ಹುಷಾರಿಲ್ಲ. ಹಾಗಾಗಿ, ಅವರ ಬದಲು ನಾನು ಬರಬೇಕಾಗಿ ಬಂದಿದೆ. ಈ ಚಿತ್ರತಂಡಕ್ಕೆ ಒಳಿತಾಗಲಿ, ಎಲ್ಲರಿಗೂ ಚಿತ್ರ ಗೆಲುವು ತಂಡು ಕೊಡಲಿ” ಎಂದಷ್ಟೇ ಹೇಳಿ ಸುಮ್ಮನಾದರು.
ಅಲ್ಲಿ ಕುಳಿತಿದ್ದ ಕೆಲವರಿಗೆ ಶ್ರೀಮುರಳಿ ಅವರಿಗೇನಾಯಿತು ಎಂಬ ಪ್ರಶ್ನೆ ಕಾಡಿದ್ದು ನಿಜ. ಅದೇನೆ ಇರಲಿ, ಶ್ರೀಮುರಳಿ ತುಂಬಾ ಉತ್ಸಾಹಿ ನಟ. ಸದಾ ಎನರ್ಜಿಯಲ್ಲೇ ಕೆಲಸ ಮಾಡುತ್ತಾರೆ. ಕಳೆದ ಎರಡು ದಿನಗಳಿಂದಲೂ ಹವಾಮಾನ ಏರುಪೇರಾಗಿದೆ. ಹೀಗಾಗಿ ಸಣ್ಣಪುಟ್ಟ ಶೀತ, ನೆಗಡಿ ಸಹಜ. ಈ ಕಾರಣಕ್ಕೆ ಶ್ರೀಮುರಳಿ ಅವರು ಹೊರಗಡೆ ಬರದೇ ಇರಬಹುದು. ಹೊಸಬರ “ಬ್ರೇಕ್ ಫೇಲ್ಯೂರ್” ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಿರಬಹುದು. ಹಾಗಂತ, ಅವರ ಫ್ಯಾನ್ಸ್ ಯಾವುದೇ ಆತಂಕ ಪಡಬೇಕಾಗಿಲ್ಲ.
ಕನ್ನಡದಲ್ಲಿ ಈಗಾಗಲೇ “ಚಡ್ಡಿದೋಸ್ತ್” ಸಿನಿಮಾ ಬಂದು ಹೋಗಿದ್ದು ಎಲ್ಲರಿಗೂ ಗೊತ್ತಿದೆ. ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದ ಸರದಿ. ಹೌದು, ಈಗಾಗಲೇ ಈ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ.
ಅಂದಹಾಗೆ, ಈ “ಚಡ್ಡಿದೋಸ್ತ್”ಗಳು ಬೇರಾರೂ ಅಲ್ಲ, “ಆಸ್ಕರ್” ಕೃಷ್ಣ ಮತ್ತು ಲೋಕೇಂದ್ರ ಸೂರ್ಯ. ಈ ಪೈಕಿ “ಆಸ್ಕರ್” ಕೃಷ್ಣ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಆಸ್ಕರ್”, “ಮನಸಿನ ಮರೆಯಲಿ”, “ಮಿಸ್ ಮಲ್ಲಿಗೆ”,”ಮೋನಿಕಾ ಈಸ್ ಮಿಸ್ಸಿಂಗ್” ಸಿನಿಮಾಗಳನ್ನು ನಿರ್ದೇಶಿಸಿದ್ದ “ಆಸ್ಕರ್” ಕೃಷ್ಣ ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ಮಾಡಿದ್ದಾರೆ. ಇದೊಂದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ಇನ್ನು ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ಅವರು ನಿರ್ಮಿಸಿದ್ದಾರೆ. ನಿರ್ದೇಶಕ “ಆಸ್ಕರ್” ಕೃಷ್ಣ ಅವರು ಇಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಲೋಕೇಂದ್ರ ಸೂರ್ಯ ಕೂಡ ಸಾಥ್ ನೀಡಿದ್ದಾರೆ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಈಗಾಗಲೇ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವನ್ನೂ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಸೆನ್ಸಾರ್ ಕೂಡ ಆಗಿದೆ.
ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ರಿಲೀಸ್ ಮಾಡುವ ಯೋಚನೆ ನಿರ್ದೇಶಕರದ್ದು. ಅಂದಹಾಗೆ, ಇದು ಕೌಂಡಿನ್ಯ ಅವರ “ಮೈ ಡಿಯರ್ ಫ್ರೆಂಡ್” ಎನ್ನುವ ಕಾದಂಬರಿಯನ್ನು ಆಧರಿಸಿದೆ. ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ ಅವರು ಇದಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಈ ಸಿನಿಮಾಗೆ ಮಲಯಾಳಿ ಬೆಡಗಿ ಗೌರಿನಾಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಗಗನ್‍ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಅವರ ಸಂಕಲನ, ಅಕುಲ್ ಅವರ ನೃತ್ಯ ನಿರ್ದೇಶನ ಹಾಗೂ ವೈಲೆಂಟು ವೇಲು ಅವರ ಸಾಹಸ ನಿರ್ದೇಶನವಿದೆ.
ಸದ್ಯಕ್ಕೆ ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಶುರುವಾಗಿಲ್ಲ. ಕೆಲವು ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಬಹುತೇಕ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಇಡದೆ.
ಚಿತ್ರದಲ್ಲಿ ರೆಡ್ ಅಂಡ್ ವೈಟ್ ಸೆವೆನ್‍ರಾಜ್, ಸಿ.ವಿ.ಜಿ. ಅವರು ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ, ಇಲ್ಲಿ ಯಾವ ದೋಸ್ತ್ ಏನೆಲ್ಲಾ ಮಾಡ್ತಾನೆ ಎಂಬ ವಿಷಯ ತಿಳಿದುಕೊಳ್ಳಬೇಕಾದರೆ, ಚಿತ್ರ ಬರುವವರೆಗೆ ಕಾಯಲೇಬೇಕು.
ಹೊಂಬಾಳೆ ಯುಟ್ಯೂಬ್ ಚಾನೆಲ್‌ನಲ್ಲಿ ಜನವರಿ 8ರಂದು ಯಶ್ ಬರ್ತ್‌ಡೇಗೆ ಟೀಸರ್ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್” ಬಹುದೊಡ್ಡ ಬಜೆಟ್ ಸಿನಿಮಾ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸುದ್ದಿಯಾದ ಚಿತ್ರವೂ ಹೌದು. ಈಗ “ಕೆಜಿಎಫ್ -೨” ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಯಂತೂ ಇದೆ. ಅದಕ್ಕೆ ಕಾರಣ, ಮೊದಲ ಭಾಗ ಮಾಡಿದ ಮೋಡಿ. ಈಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.
ಯಶ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಜನವರಿ 8 ರಂದು ಯಶ್ ಅವರ ಹುಟ್ಟುಹಬ್ಬ ಇರುವದರಿಂದ, ಅಂದೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಜೋರು ತಯಾರಿ ನಡೆಸುತ್ತಿದೆ. ಈ ಟೀಸರ್ ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್‌ನಲ್ಲೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ “ಕೆಜಿಎಫ್-೨” ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.
ಆ ಕುತೂಹಲಕ್ಕೆ ಕಾರಣವೆಂದರೆ, ನಿರ್ದೇಶಕ ಪ್ರಶಾಂತ್ ನೀಲ್ ಅವರು, “ಕೆಜಿಎಫ್-೨” ಚಿತ್ರದ ಹೊಸದೊಂದು ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಫೋಟೋದೊಂದಿಗೆ “ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ” ಎಂಬ ಕ್ಯಾಪ್ಷನ್ ಕೂಡ ಹಾಕಿದ್ದಾರೆ. “ಕೆಜಿಎಫ್ -2” ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಒಂದಷ್ಟು ಬಾಕಿ ದೃಶ್ಯಗಳು, ಕೆಲ ಕೆಲಸಗಳನ್ನು ಮಾತ್ರ ಚಿತ್ರತಂಡ ಉಳಿಸಿಕೊಂಡಿದ್ದು, ಅದರ ಕಡೆ ಗಮನಹರಿಸಿದೆ.
ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್‌ದತ್ ಅಭಿನಯಿಸಿರುವುದರಿಂದ ಇನ್ನಷ್ಟು ನಿರೀಕ್ಷೆಯನ್ನೂ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಯಶ್ ಹುಟ್ಟುಹಬ್ಬದ ಬಳಿಕ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಯೋಚನೆ ತಂಡದ್ದು. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿರುವುದು ವಿಶೇಷತೆಗಳಲ್ಲೊಂದು.
ಇನ್ನು, ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ವಿಜಯ್ ಕಿರಗಂದೂರು ಈ ಅದ್ಧೂರಿ ಚಿತ್ರಕ್ಕೆ ನಿರ್ಮಾಪಕರು. ಭುವನ್ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತವಿದೆ.
ಕನ್ನಡ ಚಿತ್ರರಂಗದಲ್ಲಿ ದಿನಕಳೆದಂತೆ ಹೊಸಬರ ಕಲರವ ಹೆಚ್ಚುತ್ತಲೇ ಇದೆ. ಈಗ ಹೊಸಬರು ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಸಿನಿಮಾರಂಗವನ್ನು ಸ್ಪರ್ಶಿಸುತ್ತಿದ್ದಾರೆ. ಆ ಸಾಲಿಗೆ “ವಾರ್ಡ್ ನಂ-11” ಚಿತ್ರತಂಡವೂ ಸೇರಿದೆ. ಹೌದು, ಸಿನಿಮಾರಂಗದಲ್ಲೇ ಹಲವು ವರ್ಷಗಳ ಕಾಲ ಕೆಲಸ ಮಾಡಿ, ಅನುಭವ ಪಡೆದು ಆ ಅನುಭವದ ಆಧಾರದ ಮೇಲೆ ಈಗ “ವಾರ್ಡ್ ನಂ-೧೧” ಚಿತ್ರಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಶ್ರೀಕಾಂತ್. ಯಶ್ ಅಭಿನಯದ “ಮೊದಸ ಸಲ” ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಕಾಂತ್, ಆ ನಂತರದ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಜೊತೆ ಜೊತೆಯಲ್ಲಿ ಒಂದಷ್ಟು ಕಿರುಚಿತ್ರಗಳನ್ನೂ ಕೂಡ ನಿರ್ದೇಶಿಸಿದ ಅನುಭವ ಪಡೆದುಕೊಂಡಿದ್ದಾರೆ. ಅದಾದ ಬಳಿಕ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈಗ “ವಾರ್ಡ್ ನಂ-೧೧” ಚಿತ್ರಕ್ಕೆ ಕೈ ಹಾಕಿದ್ದಾರೆ.
ತಮ್ಮ ಚೊಚ್ಚಲ ಚಿತ್ರದ ಕುರಿತು “ಸಿನಿಲಹರಿ” ಜೊತೆ ಮಾತಿಗಿಳಿದ ನಿರ್ದೇಶಕ ಶ್ರೀಕಾಂತ್ ಹೇಳಿದ್ದಿಷ್ಟು.
ಶ್ರೀಕಾಂತ್, ನಿರ್ದೇಶಕ
“ಇದು ನನ್ನ ಮೊದಲ ಪ್ರಯತ್ನ. ಇಲ್ಲಿ ಪ್ರಯೋಗವೂ ಇದೆ. ಕಮರ್ಷಿಯಲ್ ಅಂಶಗಳೂ ಇವೆ. ಇಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಹೈಲೆಟ್. ಅವರೊಂದಿಗೆ ಸುಮನ್‌ನಗರ್‌ಕರ್ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ. ಸಿನಿಮಾ ಕುರಿತು ಹೇಳುವುದಾದರೆ, ಇದೊಂದು ಏರಿಯಾದಲ್ಲಿ ನಡೆಯುವ ಕಥೆ. ಈ ಕಥೆಯಲ್ಲಿ ಪ್ರೀತಿ ತುಂಬಿದೆ, ದ್ವೇಷವೂ ಇದೆ. ರಾಜಕಾರಣಿಗಳ ಎಂಟ್ರಿಯೂ ಇದೆ.
ಸಂದೀಪ್, ನಿರ್ಮಾಪಕರು
ಗೆಳೆತನ ತುಂಬಿದೆ. ಒಟ್ಟಾರೆ, ಇದೊಂದು ಕಮರ್ಷಿಯಲ್ ಸಿನಿಮಾ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣಗೊಂಡಿದೆ. ಶೇ.೭೦ರಷ್ಟು ಚಿತ್ರೀಕರಣಗೊಂಡಿರುವ ಸಿನಿಮಾ ಇನ್ನಷ್ಟು ಭಾಗ ಚಿತ್ರೀಕರಣಗೊಂಡರೆ ಮುಗಿಯಲಿದೆ” ಎಂದು ವಿವರ ಕೊಡುತ್ತಾರೆ.
ರಾಘವೇಂದ್ರ ರಾಜಕುಮಾರ್ ಅವರ ನಟನೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ತುಂಬಾನೇ ಕಂಫರ್ಟಬಲ್ ವ್ಯಕ್ತಿ. ಅಂಥವರ ಜೊತೆ ನಾನು ಕೆಲಸ ಮಾಡಿದ್ದೇನೆ ಎನ್ನುವುದೇ ಖುಷಿಯ ವಿಷಯ. ಅವರಿಗಿರುವ ಸಿನಿಮಾ ಪ್ರೀತಿ, ಎನರ್ಜಿ ನೋಡಿ, ನಾವಿನ್ನೂ ಕಲಿಯಬೇಕಾಗಿದ್ದು ಸಾಕಷ್ಟು ಇದೆ ಎನಿಸುತ್ತದೆ. ದೊಡ್ಡ ದೊಡ್ಡ ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದು ಮರೆಯದ ಅನುಭವ ಅನ್ನುತ್ತಾರೆ ಶ್ರೀಕಾಂತ್.
ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಜೊತೆಯಲ್ಲಿ ಸುಮನ್ ನಗರ್‌ಕರ್ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. “ದಶರಥ” ಹಾಗೂ “ಕೃಷ್ಣ ತುಳಸಿ” ಸಿನಿಮಾದ ನಾಯಕಿ ಮೇಘಶ್ರೀ ಅವರು ಈ ಚಿತ್ರದ ನಾಯಕಿಯಾಗಿದ್ದಾರೆ. ಉಳಿದಂತೆ ಕಬೀರ್ ಸಿಂಗ್, ಅಚ್ಯುತ್‌ಕುಮಾರ್, ಸುಧಾಬೆಳವಾಡಿ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಉಗ್ರಂ ಮಂಜು, “ಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಗೋವಿಂದೇ ಗೌಡ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರಾಕೇಶ್ ಸಿ.ತಿಲಕ್ ಛಾಯಾಗ್ರಹಣವಿದೆ.
“ಕಿನಾರೆ” ಸಿನಿಮಾ ಸಂಗೀತ ನಿರ್ದೇಶಕ ಸುರೇಂದ್ರನಾಥ್ ಅವರು ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳಿದ್ದು, ಅರ್ಮಾನ್ ಮಲ್ಲಿಕ್, “ವಿಕ್ರಂ ವೇದ” ಗಾಯಕ ಶಿವಂ, ಅನುರಾಧ ಭಟ್, ಮೆಹಬೂಬ್ ಸಾಬ್ ಹಾಡಿದ್ದಾರೆ. ಇನ್ನು, ಚಿತ್ರದಲ್ಲಿ ನಾಲ್ಕು ಭರ್ಜರಿ ಫೈಟ್ಸ್‌ಗಳಿವೆ. ವಿಕ್ರಮ್ ಮೋರ್, “ಮದಗಜ”, “ಸೂಪರ್ ಸ್ಟಾರ್” ಹಾಗೂ “ಬಂಪರ್” ಸಿನಿಮಾಗಳಿಗೆ ಸಾಹಸ ಸಂಯೋಜಿಸಿರುವ ಅರ್ಜುನ್ ಕೂಡ ಸಾಹಸ ನಿರ್ದೇಶನ ಮಾಡಿದ್ದಾರೆ.
ರಾಕೇಶ್ , ಸಿ.ತಿಲಕ್ ಛಾಯಾಗ್ರಾಹಕ
ಒಂದು ಕಮರ್ಷಿಯಲ್ ಚಿತ್ರಕ್ಕೆ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ ಎನ್ನುತ್ತಾರೆ ನಿರ್ದೇಶಕ ಶ್ರೀಕಾಂತ್. ಚಿತ್ರವನ್ನು ಸಂದೀಪ್ ಶಿವಮೊಗ್ಗ ನಿರ್ಮಾಣ ಮಾಡಿದ್ದಾರೆ. ಇವರ ಜೊತೆಗೆ ಗುರುರಾಜ ಎ ಮತ್ತು ಹೇಮಂತ್ ಕುಮಾರ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಏನೆಲ್ಲಾ ಬೇಕೋ ಎಲ್ಲವನ್ನೂ ಕಲ್ಪಿಸಿಕೊಡುವ ಮೂಲಕ ಒಂದೊಳ್ಳೆಯ ಸಿನಿಮಾ ತಯಾರಾಗಲು ಪ್ರೋತ್ಸಾಹಿಸುತ್ತಿದ್ದಾರೆ. ನನ್ನ ಜೊತೆಗಿರುವ ತಂಡ ಕೂಡ ಒಳ್ಳೆಯ ಸಹಕಾರ ನೀಡಿದೆ. ಹಾಗಾಗಿ ಸಿನಿಮಾ ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬರುತ್ತಿದೆ ಎಂಬುದು ಶ್ರೀಕಾಂತ್ ಮಾತು.