ಕಡ್ಡಿ ಅಲ್ಲಾಡಿಸಲು ರೆಡಿಯಾದ ಚಡ್ಡಿದೋಸ್ತ್!‌ ಇದು ಕೌಂಡಿನ್ಯರ ಮೈ ಡಿಯರ್‌ ಫ್ರೆಂಡ್‌ ಕಾದಂಬರಿ ಆಧರಿತ

ಆಸ್ಕರ್‌ ಕೃಷ್ಣ ಜೊತೆ ಲೋಕೇಂದ್ರ ಸೂರ್ಯ ಸಾಥ್‌

ಕನ್ನಡದಲ್ಲಿ ಈಗಾಗಲೇ “ಚಡ್ಡಿದೋಸ್ತ್”‌ ಸಿನಿಮಾ ಬಂದು ಹೋಗಿದ್ದು ಎಲ್ಲರಿಗೂ ಗೊತ್ತಿದೆ. ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದ ಸರದಿ. ಹೌದು, ಈಗಾಗಲೇ ಈ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ.


ಅಂದಹಾಗೆ, ಈ “ಚಡ್ಡಿದೋಸ್ತ್”ಗಳು ಬೇರಾರೂ ಅಲ್ಲ, “ಆಸ್ಕರ್‌” ಕೃಷ್ಣ ಮತ್ತು ಲೋಕೇಂದ್ರ ಸೂರ್ಯ. ಈ ಪೈಕಿ “ಆಸ್ಕರ್”‌ ಕೃಷ್ಣ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಆಸ್ಕರ್‌”, “ಮನಸಿನ ಮರೆಯಲಿ”, “ಮಿಸ್‌ ಮಲ್ಲಿಗೆ”,”ಮೋನಿಕಾ ಈಸ್‌ ಮಿಸ್ಸಿಂಗ್‌” ಸಿನಿಮಾಗಳನ್ನು ನಿರ್ದೇಶಿಸಿದ್ದ “ಆಸ್ಕರ್‌” ಕೃಷ್ಣ ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ಮಾಡಿದ್ದಾರೆ. ಇದೊಂದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ಇನ್ನು ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ಅವರು ನಿರ್ಮಿಸಿದ್ದಾರೆ. ನಿರ್ದೇಶಕ “ಆಸ್ಕರ್” ಕೃಷ್ಣ ಅವರು ಇಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಲೋಕೇಂದ್ರ ಸೂರ್ಯ ಕೂಡ ಸಾಥ್‌ ನೀಡಿದ್ದಾರೆ. “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಈಗಾಗಲೇ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವನ್ನೂ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಸೆನ್ಸಾರ್ ಕೂಡ ಆಗಿದೆ.

ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ರಿಲೀಸ್‌ ಮಾಡುವ ಯೋಚನೆ ನಿರ್ದೇಶಕರದ್ದು. ಅಂದಹಾಗೆ, ಇದು ಕೌಂಡಿನ್ಯ ಅವರ “ಮೈ ಡಿಯರ್ ಫ್ರೆಂಡ್” ಎನ್ನುವ ಕಾದಂಬರಿಯನ್ನು ಆಧರಿಸಿದೆ. ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ ಅವರು ಇದಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಈ ಸಿನಿಮಾಗೆ ಮಲಯಾಳಿ ಬೆಡಗಿ ಗೌರಿನಾಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಗಗನ್‍ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಅವರ ಸಂಕಲನ, ಅಕುಲ್ ಅವರ ನೃತ್ಯ ನಿರ್ದೇಶನ ಹಾಗೂ ವೈಲೆಂಟು ವೇಲು ಅವರ ಸಾಹಸ ನಿರ್ದೇಶನವಿದೆ.

ಸದ್ಯಕ್ಕೆ ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಶುರುವಾಗಿಲ್ಲ. ಕೆಲವು ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಬಹುತೇಕ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಇಡದೆ.

ಚಿತ್ರದಲ್ಲಿ ರೆಡ್ ಅಂಡ್ ವೈಟ್ ಸೆವೆನ್‍ರಾಜ್, ಸಿ.ವಿ.ಜಿ. ಅವರು ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ, ಇಲ್ಲಿ ಯಾವ ದೋಸ್ತ್‌ ಏನೆಲ್ಲಾ ಮಾಡ್ತಾನೆ ಎಂಬ ವಿಷಯ ತಿಳಿದುಕೊಳ್ಳಬೇಕಾದರೆ, ಚಿತ್ರ ಬರುವವರೆಗೆ ಕಾಯಲೇಬೇಕು.

Related Posts

error: Content is protected !!