ಶ್ರೀಮುರಳಿಗೆ ಹುಷಾರಿಲ್ಲವಂತೆ – ಮದಗಜ ಶೂಟಿಂಗ್ ನಲ್ಲಿ ಬಿಝಿಯಾಗಿದ್ದ ರೋರಿಂಗ್‌ ಸ್ಟಾರ್‌ಗೆ ಆಗಿದ್ದೇನು

ನಟ ಶ್ರೀಮುರಳಿ ಅವರ “ಮದಗಜ” ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಕೂಡ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿತ್ತು. ಅದಷ್ಟೇ ಅಲ್ಲ, ತೆಲುಗಿನಲ್ಲೂ “ರೋರಿಂಗ್‌ ಮದಗಜ” ಸಿನಿಮಾದ ಟೀಸರ್‌ ಕೂಡ ಹೊರಬಂದು ಸಖತ್‌ ಸೌಂಡು ಮಾಡುತ್ತಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ, ಸದ್ಯ ಚಿತ್ರೀಕರಣದಲ್ಲಿದೆ. ಇದರ ನಡುವೆಯೇ ಅವರ ಅನಾರೋಗ್ಯ ಹದಗೆಟ್ಟ ಸುದ್ದಿ ಇದೆ. ಹೌದು, ಶ್ರೀಮುರಳಿ ಅವರಿಗೆ ಹುಷಾರಿಲ್ಲವಂತೆ. ಈ ಮಾತನ್ನು ಸ್ವತಃ ಅವರ ತಂದೆ ಚಿನ್ನೇಗೌಡ ಅವರೇ ಹೇಳಿದ್ದಾರೆ. ಹಾಗಂತ ಶ್ರೀಮುರಳಿ ಅವರ ಅಭಿಮಾನಿಗಳು ಭಯಪಡುವಂಥದ್ದೇನೂ ಇಲ್ಲ. ಇಷ್ಟಕ್ಕೂ ಚಿನ್ನೇಗೌಡ ಅವರು ಹೇಳಿದ್ದು, ಒಂದು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.
ಜನವರಿ 4 ರಂದು ರೇಣುಕಾಂಬ ಸ್ಟುಡಿಯೋದಲ್ಲಿ ಹೊಸಬರೇ ಸೇರಿ ಮಾಡಿರುವ “ಬ್ರೇಕ್‌ ಫೇಲ್ಯೂರ್‌” ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಆ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಪೋಸ್ಟರ್‌ ಲಾಂಚ್‌ ಮಾಡಿದ್ದು ಚಿನ್ನೇಗೌಡರು. ಪೋಸ್ಟರ್‌ ಲಾಂಚ್‌ಗೂ ಮೊದಲು ಮಾತನಾಡಿದ ಚಿನ್ನೇಗೌಡರು, “ಈ ಚಿತ್ರದ ಪೋಸ್ಟರ್‌ ಲಾಂಚ್‌ ಅನ್ನು ಶ್ರೀಮುರಳಿ ಅವರು ಮಾಡಬೇಕಿತ್ತು. ಆದರೆ, ಅವರಿಗೆ ಹುಷಾರಿಲ್ಲ. ಹಾಗಾಗಿ, ಅವರ ಬದಲು ನಾನು ಬರಬೇಕಾಗಿ ಬಂದಿದೆ. ಈ ಚಿತ್ರತಂಡಕ್ಕೆ ಒಳಿತಾಗಲಿ, ಎಲ್ಲರಿಗೂ ಚಿತ್ರ ಗೆಲುವು ತಂಡು ಕೊಡಲಿ” ಎಂದಷ್ಟೇ ಹೇಳಿ ಸುಮ್ಮನಾದರು.
ಅಲ್ಲಿ ಕುಳಿತಿದ್ದ ಕೆಲವರಿಗೆ ಶ್ರೀಮುರಳಿ ಅವರಿಗೇನಾಯಿತು ಎಂಬ ಪ್ರಶ್ನೆ ಕಾಡಿದ್ದು ನಿಜ. ಅದೇನೆ ಇರಲಿ, ಶ್ರೀಮುರಳಿ ತುಂಬಾ ಉತ್ಸಾಹಿ ನಟ. ಸದಾ ಎನರ್ಜಿಯಲ್ಲೇ ಕೆಲಸ ಮಾಡುತ್ತಾರೆ. ಕಳೆದ ಎರಡು ದಿನಗಳಿಂದಲೂ ಹವಾಮಾನ ಏರುಪೇರಾಗಿದೆ. ಹೀಗಾಗಿ ಸಣ್ಣಪುಟ್ಟ ಶೀತ, ನೆಗಡಿ ಸಹಜ. ಈ ಕಾರಣಕ್ಕೆ ಶ್ರೀಮುರಳಿ ಅವರು ಹೊರಗಡೆ ಬರದೇ ಇರಬಹುದು. ಹೊಸಬರ “ಬ್ರೇಕ್‌ ಫೇಲ್ಯೂರ್‌” ಚಿತ್ರದ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮಕ್ಕೂ ಬ್ರೇಕ್‌ ಹಾಕಿರಬಹುದು. ಹಾಗಂತ, ಅವರ ಫ್ಯಾನ್ಸ್‌ ಯಾವುದೇ ಆತಂಕ ಪಡಬೇಕಾಗಿಲ್ಲ.

Related Posts

error: Content is protected !!