Categories
ಸಿನಿ ಸುದ್ದಿ

ಸಿರಿ ಕನ್ನಡಕ್ಕೆ ಎರಡರ ಸಂಭ್ರಮ!

ಅಪ್ಪಟ ಕನ್ನಡಿಗರ ಪ್ರೀತಿಯ ವಾಹಿನಿ ಈಗ ಮೂರನೇ ಹೆಜ್ಜೆ

ಕನ್ನಡಿಗರ ಹೆಮ್ಮೆಯ ವಾಹಿನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ “ಸಿರಿ ಕನ್ನಡ”  ವಾಹಿನಿಯು ಇದೀಗ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ.  ಸಿನಿಮಾ ಮತ್ತು ಮನರಂಜನೆ ವಾಹಿನಿಯಾಗಿ ಇಲ್ಲಿನ ನೆಲದಲ್ಲಿ ಚಿಗುರೊಡೆದು ಹಂತ ಹಂತವಾಗಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೊಸದಾಗಿ ಆರಂಭವಾದರೂ ಎವರ್‌ಗ್ರೀನ್ ಕ್ಲಾಸಿಕ್ ಸಿನಿಮಾಗಳು ಮತ್ತು ಸಿನಿಮಾ ಆಧಾರಿತ ಸ್ಪೆಷಲ್ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಾಗಿ ಪ್ರಸ್ತುತ  ಸಂಪೂರ್ಣ ಮನರಂಜನಾ ವಾಹಿನಿಯಾಗಿ ತಲೆ ಎತ್ತಿ ನಿಂತಿದೆ.

ಕೋವಿಡ್ ಸಂದರ್ಭದಲ್ಲೂ ನೂತನ ಧಾರವಾಹಿಗಳು, ವಿಭಿನ್ನ ರಿಯಾಲಿಟಿ ಶೋಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಹೊಸ ರೂಪದ ಭಕ್ತಿ ಪ್ರಧಾನ ಶೋಗಳನ್ನು ಕೊಡುತ್ತಾ ಮನ ಮನೆಗಳಿಗೆ ತಲುಪಿದೆ. ಈ ಹಂತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುತ್ತಾ ಇದೆ. ವೀಕ್ಷಕರು ಇಷ್ಟಪಟ್ಟಿರುವ ಮೆಗಾ ಧಾರವಾಹಿಗಳೊಂದಿಗೆ ಜನಪ್ರಿಯ ಶೋಗಳು ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲಿವೆ. ಅಪಾರ ಜನಪ್ರಿಯತೆ ಪಡೆದ “ಕ್ಯಾಶ್ ಬಾಕ್ಸ್” ’ಸ್ಟಾರ್ ಆಫ್ ದಿ ವೀಕ್’ ದಲ್ಲಿ ವಿಜೇತರಿಗೆ ಇಪ್ಪತ್ತೈದು ಸಾವಿರ ಬಹುಮಾನ, ’ನಾರಿಗೊಂದು ಸೀರೆ’ ಕಾರ್ಯಕ್ರಮವು 120  ಕ್ಕೂ ಹೆಚ್ಚು ಸಂಚಿಕೆಗನ್ನು ಪೂರೈಸಿ, 500 ಕ್ಕೂ ಹೆಚ್ಚು ಸೀರೆಗಳನ್ನು ಮಹಿಳಾಮಣಿಗಳ ಬಳಿ ತರುತ್ತಿದೆ. ನಟಿ ಸುಜಾತ ನಿರೂಪಣೆಯ “ಸಿನಿ ಪಾಕ”ದಲ್ಲಿ ವೀಕ್ಷಕರಿಗೂ ಭಾಗವಹಿಸುವ ಅವಕಾಶ ಸಿಗಲಿದೆ. ರೀಲ್ ಹಿಂದಿನ ರಿಯಲ್ ಕಥೆ “ಟೂರಿಂಗ್ ಟಾಕೀಸ್” ಮತ್ತಷ್ಟು ವಿಭಿನ್ನವಾಗಿ ಮೂಡಿಬರುತ್ತದೆ ಎಂbuದು ವಾಹಿನಿಯ ಮುಖ್ಯಸ್ಥ ಸಂಜಯ್‌ ಶಿಂಧೆಯವರು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡಿಗರಿಗಾಗಿಯೇ ರೂಪುಗೊಂಡ “ಸಿರಿ ಕನ್ನಡ” ನಾಡು ನುಡಿ ಸಂಸ್ಕೃತಿ ಬಿಂಬಿಸೋ, ಸ್ವಂತಿಕೆಯ ಸಂಭ್ರಮದ ಹೆಜ್ಜೆ ಇಡುತ್ತಿದೆ. ಮುಂದೆಯೂ ಕರುನಾಡಲ್ಲಿ “ನುಡಿ ಕನ್ನಡ, ನಡೆ ಕನ್ನಡ, ನೋಡ್ತಾ ಇರಿ ಸಿರಿ ಕನ್ನಡ” ಎನ್ನುವಂತಾಗಬೇಕು ಎಂಬುದೇ ವಾಹಿನಿಯ ಆಶಯವಾಗಿದೆ.

Categories
ಸಿನಿ ಸುದ್ದಿ

ಪ್ರಶಾಂತ್ ಸಂಬರಗಿ ಅಂದ್ರೆ ಆಯಿಲ್ ಕುಮಾರ್ ಅಂತೆ! ರವಿ ಶ್ರೀವತ್ಸ ನಿರ್ದೇಶನ್ ಎಂಆರ್ ನಲ್ಲಿ ಸಂಬರಗಿಗೆ ಬಣ್ಣ

ಜನವರಿಯಲ್ಲಿ ಶೂಟಿಂಗ್‌ ಶುರು…

ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಕಷ್ಡು ಸುದ್ದಿಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೊನೆಗೂ ನಟನೆಯತ್ತ ಮುಖ ಮಾಡಿದ್ದಾರೆ.ರವಿ ಶ್ರೀವತ್ಸ್ ನಿರ್ದೇಶನದ ‘ಎಂ ಆರ್’ ಚಿತ್ರದಲ್ಲಿ ರೌಡಿ ಆಯಿಲ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಟನಾಗುವುದಕ್ಕಾಗಿಯೇ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದು ಅಂತ ಹೇಳಿದ್ದ ಪ್ರಶಾಂತ್ ಸಂಬರಗಿ, ಈಗ ರೌಡಿ ಆಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮುಹೂರ್ತ ಮುಗಿಸಿರುವ ಚಿತ್ರ ತಂಡ ಅನೇಕ ಕುತೂಹಲಕಾರಿ ಮಾಹಿತಿ ಹೊರ ಹಾಕಿದೆ.

ಎಂ ಆರ್ ಅಂದ್ರೆ ಮುತ್ತಪ್ಪ ರೈ ಚಿತ್ರವೇ ಎನ್ನುವುದನ್ನು ರಹಸ್ಯವಾಗಿಟ್ಟುಕೊಂಡಿರುವ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ,ಈಗ ಪ್ರಶಾಂತ್ ಸಂಬರಗಿ ಈಗ ರೌಡಿ ಆಗಿರುವುದನ್ನು ರಿವೀಲ್ ಮಾಡಿದ್ದಾರೆ.’ ರವಿ ಶ್ರೀ ವತ್ಸ ಅವರೊಂದಿಗೆ ನನ್ನದು ೨೫ ವರ್ಷಗಳ ಒಡನಾಟ. ಅವರೀಗ ಭೂಗತ ಲೋಕದ ಒಂದು ಕತೆ ಇಟ್ಟುಕೊಂಡು ಸಿನಿಮಾ‌ಮಾಡಲು ಹೊರಟಿರುವುದುನನಗೂ ಕುತೂಹಲ ಹುಟ್ಟಿಸಿದೆ. ಈ ಚಿತ್ರದಲ್ಲಿ ಒಂದು ಪಾತ್ರ ಇದೆ ಮಾಡ್ಬೇಕು ಅಂದಾಗ ನಂಗೂ ಅಚ್ಚರಿ. ಯಾವ ಪಾತ್ರ ಅಂತ ನಾನೇನು ಕೇಳಲಿಲ್ಲ. ಕೊನೆಗೆ ಮಿಟ್ ಮಾಡಿ, ಪಾತ್ರದ ಬಗ್ಗೆ ಕೇಳಿದಾಗ ನೀವೇ ಆಯಿಲ್ ಕುಮಾರ್ ಅಂದ್ರು.‌‌ ಏನ್ ಸರ್ , ನಾನೀಗ ರೌಡಿನಾ ಅಂತ ತಮಾಷೆ ಮಾಡಿದೆ. ಕೊನೆಗೆ ಒಪ್ಪಿಕೊಂಡು ಅಭಿನಯಿಸುತ್ತಿದ್ದೇನೆ ಎನ್ನುತ್ತಾರೆ ಪ್ರಶಾಂತ್ ಸಂಬರಗಿ.

Categories
ಸಿನಿ ಸುದ್ದಿ

ಶಕೀಲಾ ಬರ್ತಾರೆ ದಾರಿ ಬಿಡಿ! ಫೇವರೇಟ್ ನಟಿಯ ಜೀವನಗಾಥೆ

ಕ್ರಿಸ್ಮಸ್ ಹಬ್ಬಕ್ಕೆ ಶಕೀಲಾ ಸಂಭ್ರಮ!

ಈಗಂತೂ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆ ಸಾಲಿಗೆ ದಕ್ಷಿಣ ಭಾರತ ಚಿತ್ರರಂಗದ ಮಾದಕ ನಟಿ ಎಂದೇ ಖ್ಯಾತಿ ಪಡೆದಿರುವ ‘ಶಕೀಲಾ’ಅವರ ಜೀವನಗಾಥೆ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೇ ಕ್ರಿಸ್ಮಸ್ ದಿನ ಚಿತ್ರ ಬಿಡುಗಡೆಯಾಗುತ್ತಿದೆ.
ಅಂದಹಾಗೆ, ದಕ್ಷಿಣ ಭಾರತ ಚಿತ್ರರಂಗದ ನಟಿಯೊಬ್ಬರ ಬಯೋಪಿಕ್ ಚಿತ್ರವೊಂದು ಹಿಂದಿ, ಕನ್ನಡ ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂಬುದು ವಿಶೇಷ.


‘ಶಕೀಲಾ’ ಅವರ ಬಯೋಪಿಕ್ ಆಗಿರುವುದರಿಂದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸಿನಿಮಾಗೂ ‘ಶಕೀಲಾ’ ಎಂದೇ ನಾಮಕರಣ ಮಾಡಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುವುದರ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಆರಂಭದಲ್ಲಿ ಬಾಲಿವುಡ್ ಗೆ ಮಾತ್ರ ಸೀಮೀತವಾಗಿರಲಿ ಅಂದುಕೊಂಡು ಶುರುವಾದ ಈ ಚಿತ್ರ, ಈಗ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸಾಗುತ್ತಿರುವುದು ವಿಶೇಷ. ಬಹಳಷ್ಟು ಗ್ಲಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಡು, ಯುವಕರ ಹಾಟ್ ಫೇವರೇಟ್ ಎನಿಸಿಕೊಂಡಿರುವ ಮಲಯಾಳಂನ ಮಾದಕ ನಟಿ ಶಕೀಲಾ ಅವರ ಬಯೋಪಿಕ್ ಇದು.

1990 ಹಾಗೂ 2000ರ ದಶಕದಲ್ಲಿ ಸಕ್ಸಸ್ ಫುಲ್ ಆಗಿದ್ದ ಅವರು, ಒಂದೇ ವರ್ಷದಲ್ಲಿ ಅವರ ನಟನೆಯ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು ಎಂಬುದು ವಿಶೇಷ.
ಆರಂಭದಲ್ಲಿ ಶಕೀಲಾ ಅವರ ಬದುಕು ಅಂದುಕೊಂಡಂತೆ ಸುಲಭವಾಗಿರಲಿಲ್ಲ. ತಮ್ಮ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಆಗಿನ ಗೆಲುವು-ಸೋಲು, ನೋವು-ನಲಿವು ಅವರಿಗಷ್ಟೇ ಗೊತ್ತು. ಈಗ ಶಕೀಲಾ ಅವರ ಸಿನಿಪಯಣದಲ್ಲಾದ ಅಪರೂಪದ ಸಂಗತಿಗಳನ್ನು ಸಿನಿಮಾ‌ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಇಂದ್ರಜಿತ್ ಲಂಕೇಶ್.
ಇನ್ನು, ಶಕೀಲಾ ಅವರ ಪಾತ್ರವನ್ನು ಬಾಲಿವುಡ್ ನಟಿ ರಿಚಾ ಛಡ್ಡಾ ನಿರ್ವಹಿಸಿದ್ದಾರೆ.

ತಮ್ಮ ಬಯೋಪಿಕ್ ಚಿತ್ರದ ಬಗ್ಗೆ ಮಾತಾಡುವ ಶಕೀಲಾ, ‘ನಾನು ಬದುಕಿನಲ್ಲಿ ಎದುರಿಸಿದ ಕಷ್ಟ, ಸುಖದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ಆರಂಭದಲ್ಲಿ ನಿರ್ದೇಶಕರು ನನ್ನ ಬಳಿ ಚರ್ಚಿಸಿ ಒಂದಷ್ಟು ಬದಲಾವಣೆ ಕೂಡ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಎಷ್ಟು ಕಾಲ್ಪನಿಕ, ಎಷ್ಟು ವಾಸ್ತವ ಇದೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.
ಇಂತಹ ಸಂದರ್ಭದಲ್ಲಿ ನನ್ನ ಫ್ಯಾಮಿಲಿಯೇ ನನ್ನ ಜೊತೆಗಿಲ್ಲ. ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದೆಲ್ಲವೂ ಅವರಿಗೆ ಗೊತ್ತಿದೆ. ಆದರೆ ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಾನು ನನ್ನ ಫ್ಯಾಮಿಲಿಗಾಗಿಯೇ ಇಷ್ಟೆಲ್ಲ ಮಾಡಿದೆ. ಆದರೆ ನನ್ನವರೇ ನನಗೆ ದ್ರೋಹ ಮಾಡಿದರು. ನೀಲಿ ಚಿತ್ರಗಳನ್ನು ಮಾಡಿದ ಬಗ್ಗೆ ನನಗೆ ವಿಷಾದವಿಲ್ಲ. ಅದರ ಬಗ್ಗೆ ನನಗೆ ಖುಷಿ ಇದೆ. ನಾನು ದೇವರ ಮಗಳು. ಇಂದು ನನ್ನ ಬಗ್ಗೆ ಸಿನಿಮಾ ಆಗುತ್ತಿದೆ ಎಂದರೆ ಅದಕ್ಕೆ ಆ ಚಿತ್ರಗಳೇ ಕಾರಣ. ನಾನೊಬ್ಬ ಪೋಷಕ ನಟಿ ಮಾತ್ರ ಆಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂಥ ಕುಟುಂಬಕ್ಕಾಗಿ ಮಾಡಿದೆನಲ್ಲ ಎಂಬ ಬೇಸರವಿದೆ ಎಂದು ಶಕೀಲಾ ತನ್ನ ಕುಟುಂಬದ ಬಗ್ಗೆ ಬೇಸರ ಹೊರ ಹಾಕುತ್ತಾರೆ.


ಇಂದ್ರಜಿತ್ ಅವರ ಜೊತೆ ನಾನು ‘ಲವ್‍ ಯೂ ಆಲಿಯಾ’ ಸಿನಿಮಾ ಮಾಡುವಾಗ ನಿರ್ದೇಶಕಿಯೊಬ್ಬರು ನನ್ನನ್ನು ಭೇಟಿಮಾಡಿ ನನ್ನ ಆತ್ಮಚರಿತ್ರೆಯನ್ನು ಸಿನಿಮಾ ಮಾಡಬೇಕೆಂದಿದ್ದೇನೆ ಎಂದರು. ಆ ವಿಷಯ ಇಂದ್ರಜಿತ್‍ರಿಗೂ ತಿಳಿಯಿತು. ಎರಡು ದಿನ ಸಮಯ ತೆಗೆದುಕೊಂಡು ಇಂದ್ರಜಿತ್ ಕೂಡ ನನ್ನ ಆತ್ಮಚರಿತ್ರೆಯನ್ನು ಓದಿದರು. ತಾವೇ ಈ ಚಿತ್ರ ಮಾಡುವುದಾಗಿ ತಿಳಿಸಿದರು. ನನಗೂ ಖುಷಿ ಆಯಿತು. ನನ್ನ ಕಥೆಯನ್ನು ಅವರು ಚೆನ್ನಾಗಿ ತೆರೆಮೇಲೆ ತರುತ್ತಾರೆ ಎಂಬ ನಂಬಿಕೆಯಿತ್ತು. ನಾನು ಈ ಬಯೋಪಿಕ್ ಪುಸ್ತಕ ಬರೆದು 10 ವರ್ಷಗಳಾಗಿವೆ. ಆನಂತರ ಏನೆಲ್ಲ ನಡೆಯಿತು ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಿದ್ದಾರೆ. ನನ್ನ ಹುಟ್ಟಿನಿಂದ ಹಿಡಿದು 42ನೇ ವಯಸ್ಸಿನವರೆಗೆ ಅನೇಕ ವಿಷಯಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ ಎಂಬುದು ಶಕೀಲಾ ಮಾತು.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಈ ಚಿತ್ರ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ‘ಒಂದರ್ಥದಲ್ಲಿ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾವಿದು, ಕನ್ನಡದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ವೀರಸಮರ್ಥ್ ಸೇರಿದಂತೆ ಎಲ್ಲಾ ಭಾಷೆಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಐದೂ ಭಾಷೆ ಸೇರಿ ಎರಡರಿಂದ ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಎಂದು ವಿವರ ಕೊಟ್ಟರು ಇಂದ್ರಜಿತ್.
ಈ ಚಿತ್ರವನ್ನು ಸಾಮಿ ನಾನ್ವಾನಿ ಹಾಗೂ ಶರವಣ ಪ್ರಸಾದ್ ನಿರ್ಮಿಸಿದ್ದಾರೆ.
ನಿರ್ದೇಶಕ ಸಂದೀಪ್ ಮಲಾನಿ ಸಹ ನಿರ್ಮಾಪಕರು. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ. ರೀಚಾ ಛಡ್ಡಾ ಜೊತೆಗೆ ಪಂಕಜ್‍ ತ್ರಿಪಾಠಿ, ರಾಜೀವ್ ಪಿಳ್ಳೈ, ಸಮರ್ಜಿತ್ ಲಂಕೇಶ್, ಸಂದೀಪ್ ಮಲಾನಿ ಹಾಗೂ ಎಸ್ಟರ್ ನರೋನಾ ಕಾಣಿಸಿಕೊಂಡಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಹೊಸ ವರ್ಷಕ್ಕೆ ಚಂದನ್‌ ಶೆಟ್ಟಿ ಹೊಸ ಕಿಕ್‌ – ಪಾರ್ಟಿ ಫ್ರೀಕ್ ಹಾಡಲ್ಲಿ ನಿಶ್ವಿಕಾ ನಾಯ್ಡು ಸ್ಟೆಪ್‌

ಡಿಸೆಂಬರ್‌ 26ರಂದು ಯುನೈಟ್ ಆಡಿಯೋ ಮೂಲಕ ಬಿಡುಗಡೆ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಅಲ್ಬಂ ಸಾಂಗ್‌ ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವಿಡಿಯೊ ಆಲ್ಬಂ ಸಾಂಗ್‌ ಬರಲು ಸಜ್ಜಾಗುತ್ತಿದೆ. ಅಂದಹಾಗೆ, ಅದೊಂದು ಪಾರ್ಟಿ ಫ್ರೀಕ್‌ ಹಾಡು. ಈ ಹಾಡಿನ ಮೂಲಕ ಹೊಸ ವರ್ಷದಲ್ಲಿ ಪಡ್ಡೆ ಹುಡುಗರಿಗೆ ಕಿಕ್‌ ಏರಿಸುವ ಪ್ರಯತ್ನ ನಡೆಯುತ್ತಿದೆ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿರೋದು, ಗಾಯಕ ಕಮ್‌ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ.

ಚಂದನ್‌ ಶೆಟ್ಟಿ

ಈ ಹಿಂದೆ ಚಂದನ್‌ ಶೆಟ್ಟಿ “ಮೂರೇ ಮೂರು ಪೆಗ್ಗಿಗೆ…” ., “ಟಕೀಲಾ…” ಎಂಬ ಪಾರ್ಟಿ ಸಾಂಗ್‌ ಮಾಡುವ ಮೂಲಕ ಸುದ್ದಿಯಾಗಿದ್ದರು. ಆ ಬಳಿಕ ಅವರು ಬೇರೆ ಜಾನರ್‌ ಹಾಡುಗಳನ್ನು ಮಾಡಿ, ಬಿಡುಗಡೆ ಮಾಡಿದ್ದರು. ಆದರೆ, ಚಂದನ್‌ ಶೆಟ್ಟಿ ಅವರು, ಪಾರ್ಟಿ ಸಾಂಗ್‌ ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಅವರು ಹಲವು ವಿಶೇಷಗಳೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ವಿಶೇಷವೆಂದರೆ, ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿ ಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲಲರ್‌ ಫುಲ್‌ ಆಗಿ ಎರಡು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಲು ತಯಾರಿ ನಡೆದಿದೆ. ಶೂಟಿಂಗ್ ನಡೆಯಲಿದೆ. ಸ್ಟಾರ್‌ ಹೋಟೆಲ್ ಮತ್ತು ಪಬ್‌ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

ನಿವೇದಿತಾ ಗೌಡ

ಈ ಹೊಸ ವಿಡಿಯೋ ಆಲ್ಬಂ ಸಾಂಗ್‌ಗೆ “ಪಾರ್ಟಿ ಫ್ರೀಕ್” ಎಂಬ ಹೆಸರಿಟ್ಟಿದ್ದಾರೆ. ಇನ್ನು, ಚೈತನ್ಯ ಲಕಂಸಾನಿ ಅವರು ಈ ವಿಡಿಯೋ ಸಾಂಗ್‌ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಹಾಡಿದ್ದಾರೆ ಕೂಡ. ಅಷ್ಟೇ ಅಲ್ಲ, ಆ ಹಾಡಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಹಾಡಲ್ಲಿ ಸ್ಟೆಪ್‌ ಹಾಕುತ್ತಿರುವುದು ಮತ್ತೊಂದು ವಿಶೇಷ. ಇನ್ನೊಂದು ವಿಶೇಷವೆಂದರೆ, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಅವರು ಕೂಡ ಈ ಹಾಡಲ್ಲಿ ಹೆಜ್ಜೆ ಹಾಕಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದರೆ, ಅಜಿತ್ ಶ್ರೀರವಿ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಾಡನ್ನು ಡಿಸೆಂಬರ್‌ 26 ರಂದು ಯುನೈಟ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ.

ನಿಶ್ವಿಕಾ ನಾಯ್ಡು
Categories
ಸಿನಿ‌ ಆ್ಯಡ್ ಸಿನಿ ಸುದ್ದಿ

ಲಂಕಾಸುರನ ಆರ್ಭಟ ಶುರು -ವಿನೋದ್‌ ಪ್ರಭಾಕರ್‌ ಹೊಸ ಚಿತ್ರಕ್ಕೆ ಭರಪೂರ ಮೆಚ್ಚುಗೆ

ಮಾಸ್‌ ಟೈಟಲ್‌ – ಮಾಸ್‌ ಹೀರೋ!

ವಿನೋದ್‌ ಪ್ರಭಾಕರ್‌ ಸದ್ಯಕ್ಕೆ ಸುದ್ದಿಯಲ್ಲಿರುವ ಹೀರೋ..!
-ಹೌದು, ಈ ಮಾತು ಹೇಳೋಕೆ ಕಾರಣ, ದರ್ಶನ್‌ ಅಭಿನಯದ “ರಾಬರ್ಟ್‌” ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯ ಆಕರ್ಷಣೆ. ಈ ಚಿತ್ರ ಒಂದಷ್ಟು ನಿರೀಕ್ಷೆ ಕೂಡ ಮೂಡಿಸಿದೆ. “ನವಗ್ರಹ” ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಅವರು ದರ್ಶನ್‌ ಜೊತೆ ನಟಿಸಿದ್ದರು. ಅದಾದ ಬಳಿಕ ಈಗ ತರುಣ್‌ ಸುಧೀರ್‌ ನಿರ್ದೇಶನದ, ಉಮಾಪತಿ ನಿರ್ಮಾಣದ “ರಾಬರ್ಟ್”‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನವೇ ವಿನೋದ್‌ ಪ್ರಭಾಕರ್‌ ಅವರು, “ಲಂಕಾಸುರ” ಎಂಬ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬವಿತ್ತು. ಕೊರೊನಾ ಹಿನ್ನೆಲೆಯಲ್ಲಿ ವಿನೋದ್‌ ಪ್ರಭಾಕರ್‌ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ, ತಮ್ಮ ಅಭಿಮಾನಿಗಳಿಗೂ ಕೇಕ್‌, ಹಾರ, ಇತ್ಯಾದಿ ಯಾವುದನ್ನೂ ತರಬಾರದು. ಸರಳವಾಗಿಯೇ ಸಂಭ್ರಮಿಸಬೇಕು ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಓಗೊಟ್ಟ ಅಭಿಮಾನಿಗಳು ಇದ್ದಲ್ಲಿಯೇ ಸರಳವಾಗಿ ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬ ಆಚರಿಸಿ, ಶುಭಕೋರಿದ್ದರು.
ಇನ್ನು, ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬದಂದು ಹೊಸ ಸಿನಿಮಾ ಕೂಡ ಅನೌನ್ಸ್‌ ಮಾಡಿದ್ದು ವಿಶೇಷ.


“ಲಂಕಾಸುರ” ಇದು ವಿನೋದ್‌ ಪ್ರಭಾಕರ್‌ ಅವರ ಹೊಸ ಚಿತ್ರದ ಹೆಸರು. ಬರ್ತ್‌ಡೇಗೆ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದಂದು ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ ಅವರು ಈಗ ವಿನೋದ್‌ ಪ್ರಭಾಕರ್‌ ಅವರಿಗೆ “ಲಂಕಾಸುರ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‌ಇತ್ತೀಚೆಗೆ “ಎ೨” ಚಾನೆಲ್‌ ಮೂಲಕ “ಲಂಕಾಸುರ” ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ವಿಶೇಷವೆಂದರೆ, ಬಿಡುಗಡೆಗೊಂಡ ಕೇವಲ ಮೂರು ದಿನಗಳಲ್ಲಿ ೧೫೦ಕೆ ವೀಕ್ಷಣೆಗೊಂಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಹೆಮ್ಮೆ ಎನಿಸಿದೆ. ವಿಜೇತ್ ಕೃಷ್ಣ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಸುಜ್ಞಾನ್ ಕ್ಯಾಮೆರಾ ಹಿಡಿಯಲಿದ್ದಾರೆ.

Categories
ಸಿನಿ ಸುದ್ದಿ

ಯಶ್‌ ನ್ಯೂ ಲುಕ್‌ ರಿವೀಲ್- ಕ್ಲೈಮ್ಯಾಕ್ಸ್‌ ಹಂತದಲ್ಲಿ ಕೆಜಿಎಫ್‌-2

ಭುವನ್‌ ಗೌಡ ಸೆರೆಹಿಡಿದ ಫೋಟೋ ಇದು…

ಸದ್ಯಕ್ಕೆ‌ಭಾರತೀಯ ಚಿತ್ರರಂಗದ‌ಮಟ್ಟಿಗೆ ಹೇಳುವುದಾದರೆ, ಬಹು‌ನಿರೀಕ್ಷಿತ ಚಿತ್ರಗಳ‌ ಸಾಲಿನಲ್ಲಿ ಹೆಚ್ಚು ಕುತೂಹಲ ‌ಮೂಡಿಸಿದ ಚಿತ್ರ ಕೆಜಿಎಫ್ ಭಾಗ 2 . ಅದಕ್ಕೆ ‌ಕಾರಣ, ಅದರ ಮೊದಲ ಭಾಗದ ಬಹು ದೊಡ್ಡ ಯಶಸ್ಸು. ಸದ್ಯಕ್ಕೆ “ಕೆಜಿಎಫ್ ಭಾಗ-2”

ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಷ್ಟಾಗಿಯೂ ಈ ಚಿತ್ರದ ಒಂದೇ ಅಧಿಕೃತ ಲುಕ್ ಬಿಡುಗಡೆ ಆಗಿರಲಿಲ್ಲ.

 

ಆದರೆ‌ ಇದೇ ಮೊದಲು ಚಿತ್ರದ ನಾಯಕ ನಟ ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರದ ಒಂದು‌ ಹೊಸ ಲುಕ್ ರಿವೀಲ್ ಮಾಡಿದ್ದಾರೆ. ಇದನ್ನು ಖ್ಯಾತ ಛಾಯಾಗ್ರಾಹಕ ಭುವನ್ ಗೌಡ ಸೆರೆ ಹಿಡಿದಿದ್ದು, ಅದನ್ನು ತಮ್ಮ ಟ್ವಿಟ್ಟರ್‌ ನಲ್ಲಿ  ಹಂಚಿಕೊಂಡಿರುವ ನಟ ಯಶ್, ಅದಕ್ಕೊಂದು‌ ವಿವರಣೆ‌ ಕೂಡ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಕಥೆ ಶಿಕಾರಿಯತ್ತ ಶ್ರೀಪ್ರಿಯಾ – ಭರತನಾಟ್ಯ ಪ್ರವೀಣೆಯ ಸಿನಿ ಪಯಣ

ಎಂಜಿನಿಯರ್‌ ಹುಡುಗಿಯ ಕಲಾನಂಟು

ಈ ಸಿನಿಮಾ ಅಂದರೇನೆ ಹಾಗೆ. ಕಪ್ಪು ಬಿಳಿ ಕಣ್ಣಿನಲಿ ಕಲರ್ ಫುಲ್ ಕನಸು ಕಟ್ಟಿಕೊಂಡು ಬರುವವರ ಸಂಖ್ಯೆಗೇನೂ ಇಲ್ಲಿ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಅಂಥದ್ದೊಂದು ಕನಸಿನೊಂದಿಗೆ ಈ ಸಿನಿರಂಗವನ್ನು ಅಪ್ಪಿಕೊಂಡಿದ್ದಾರೆ. ಚಿತ್ರರಂಗ ಕೂಡ ಕೆಲವರನ್ನು ಒಪ್ಪಿಕೊಂಡಿದೆ.

ಅಂತಹ‌ ಬಣ್ಣದ ಕನಸು ನಂಬಿ ಬಂದವರ ಪೈಕಿ ಶ್ರೀಪ್ರಿಯಾ ಸಹ ಒಬ್ಬರು. ಇಷ್ಟಕ್ಕೂ ಯಾರು ಈ ಶ್ರೀಪ್ರಿಯಾ ಅಂದರೆ, ಈಗಷ್ಟೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ನಟಿ. ಹೌದು, ಶ್ರೀಪ್ರಿಯಾ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಈ ಚಿತ್ರದೊಳಗಿನ ಅವರ ಪಾತ್ರ ಕೂಡ ಗಮನ ಸೆಳೆದಿದೆ. ಹಾಗಾಗಿ ಶ್ರೀಪ್ರಿಯಾ ಅವರಿಗೀಗ ಮೊದಲ ಇನ್ನಿಂಗ್ಸ್ ನಲ್ಲೇ ಟ್ವೆಂಟಿ ಟ್ವೆಂಟಿ ಐಪಿಎಲ್ ಸೀರೀಸ್ ಗೆದ್ದಷ್ಟೇ ಖುಷಿ ಇದೆ. ಸದ್ಯ ತಮ್ಮ ಸಿನಿಪಯಣ ಕುರಿತು, ಶ್ರೀಪ್ರಿಯಾ ‘ಸಿನಿಲಹರಿ’ಜೊತೆ ಒಂದಷ್ಟು ಮಾತನಾಡಿದ್ದಾರೆ.

 

ಓವರ್ ಟು ಶ್ರೀಪ್ರಿಯಾ
‘ನಾನು ಮೂಲತಃ ಬೆಂಗಳೂರಿನ ಅಪ್ಪಟ ಕನ್ನಡದ ಹುಡುಗಿ. ಬೇಸಿಕಲಿ ನಾನೊಬ್ಬ ಎಂಜಿನಿಯರ್. ಅಷ್ಟೇ ಅಲ್ಲ, ಭರತನಾಟ್ಯ ಕಲಾವಿದೆ ಕೂಡ. ಚಿಕ್ಕಂದಿನಿಂದಲೂ ಭರತನಾಟ್ಯ ಕಲೆ‌ ಮೇಲೆ ಅಪಾರ ಪ್ರೀತಿ ಇದೆ. ಕಲಾರಂಗದಲ್ಲೇ ಏನಾದರೊಂದು ಸಾಧಿಸಬೇಕೆಂಬ ಆಸೆ ಇತ್ತು. ಹಾಗಾಗಿ ನಾನು ಭರತನಾಟ್ಯದಲ್ಲಿ ಮಾಸ್ಟರ್ ಡಿಗ್ರಿ ಕೂಡ‌ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಿದ್ದೇನೆ. ಹಲವು ಭರತನಾಟ್ಯ ಕಾರ್ಯಕ್ರಮ ಕೂಡ ಕೊಟ್ಟಿದ್ದೇನೆ.

ಈಗಲೂ ಕೊಡುತ್ತಿದ್ದೇನೆ. ಇನ್ನು‌ ಈ ಸಿನಿಮಾರಂಗದ ಮೇಲೆ ಆಸಕ್ತಿ ಹುಟ್ಟೋಕೆ ಕಾರಣ, ನಾನು ರಂಗಶಂಕರದಲ್ಲಿ ಮಾಡಿದ‌ ನಾಟಕ ಕೆಲಸ. ಇದರ ನಡುವೆಯೇ ನಾನು‌ ಮಾಡೆಲಿಂಗ್ ಕೂಡ ಶುರು ಮಾಡಿದೆ. ಅದಾದ ಮೇಲೆ ನಟನೆ‌ ಮೇಲೂ ಆಸಕ್ತಿ ಇತ್ತು. ರಂಗಭೂಮಿಯಲ್ಲಿ ಹಲವು ನಾಟಕ‌ ಪ್ರಯೋಗ ಮಾಡುತ್ತಲೆ ನಟನೆಯ ಮೇಲೆ ಹೆಚ್ಚು ಆಸಕ್ತಿ ತೋರಿದೆ. ಅಲ್ಲಿಂದಲೇ ಸಿನಿಮಾ ‌ಮಾಡುವ ಆಸೆ ಹೆಚ್ಚಾಯ್ತು.

ಹಲವಾರು ಸಿನಿಮಾಗಳಿಗೆ ಆಡಿಷನ್ ಕೊಡ್ತಾ ಇದ್ದೆ. ಹಾಗೆ ಒಂದು ಆಡಿಷನ್ ಮೂಲಕವೇ ‘ಒಂದು ಶಿಕಾರಿಯ ಕಥೆ’ ಸಿನಿಮಾಗೆ ಆಯ್ಕೆಯಾದೆ. ಆ ಚಿತ್ರದ ನಂತರ ‘ಎಂಥಾ ಕಥೆ ಮಾರಾಯ’ ಎಂಬ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ತು. ಈ ಚಿತ್ರದಲ್ಲಿ ಲೀಡ್ ಪಾತ್ರ ನನ್ನದು. ಈಗಾಗಲೇ ಈ ಚಿತ್ರದ ಡಬ್ಬಿಂಗ್ ಮುಗಿದಿದೆ. “ಒಂದು ಶಿಕಾರಿಯ ಕಥೆ”ಯಲ್ಲಿ ಐದು ಪ್ರಮುಖ ಪಾತ್ರಗಳಲ್ಲಿ ನಾನೂ ಒಬ್ಬಳು. ಅಲ್ಲಿ ಕಥೆಯೇ ಎಲ್ಲವೂ ಆಗಿದೆ’ ಎಂದು ವಿವರ ಕೊಡುತ್ತಾರೆ ಶ್ರೀಪ್ರಿಯಾ.

ಇನ್ನು, ನಾನು ಚಿತ್ರರಂಗ ಪ್ರವೇಶಕ್ಕೂ ಮುನ್ನ “ಲಾಟರಿ” ಎಂಬ ಕಿರುಚಿತ್ರವೊಂದರಲ್ಲಿ ನಟಿಸಿದ್ದೆ. ಆ ಚಿತ್ರ ಬೆಂಗಳೂರು ಇಂಟರ್‌ನ್ಯಾಷನಲ್‌ ಶಾರ್ಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿತ್ತು. ಈಗ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಕೊರೊನಾ ಹಾವಳಿಯಿಂದಾಗಿ ಒಂದಷ್ಟು ಸಿನಿಮಾಗಳ ಮಾತುಕತೆ ಕೂಡ ಹಾಗೆಯೇ ನಿಂತಿತ್ತು. ಈಗ ಒಂದಷ್ಟು ಹೊಸ ಕಥೆಗಳು ಹುಡುಕಿ ಬರುತ್ತಿವೆ ಎನ್ನುವ ಶ್ರೀಪ್ರಿಯಾ, ಒಳ್ಳೆಯ ಕಥೆ, ಪಾತ್ರಗಳತ್ತ ಗಮನಹರಿಸುತ್ತಿದ್ದೇನೆ.

ಗ್ಲಾಮರ್‌ ಪಾತ್ರವಿದ್ದರೂ ಮಾಡ್ತೀನಿ. ಹಾಗಂತ ವಿನಾಕಾರಣ, ಗ್ಲಾಮರ್‌ ಬೇಡ ಅಂತಲ್ಲ, ಅದರೊಂದಿಗೆ ನಟನೆಗೂ ಅವಕಾಶ ಇರಬೇಕು. “ಒಂದು ಶಿಕಾರಿಯ ಕಥೆ” ಸಿನಿಮಾ ನೋಡಿದವರು ಗುರುತ್ತಿಸುತ್ತಿದ್ದಾರೆ. ಹಾಗೆ ಮನಸ್ಸಲ್ಲಿ ಉಳಿಯುವ ಪಾತ್ರ ಸಿಗಬೇಕು. ಕಥೆ ಡಿಮ್ಯಾಂಡ್‌ ಮಾಡಿದರೆ, ಮಾತ್ರ ಗ್ಲಾಮರ್‌ ಪಾತ್ರಕ್ಕೆ ಒಪ್ಪುತ್ತೇನೆ ಎಂದು ಹೇಳುವ ಅವರು, ಈ ರಂಗ ಆಯ್ಕೆ ಮಾಡಿಕೊಂಡಿದ್ದು ಈಗ ಖುಷಿ ಎನಿಸಿದೆ.

ಮನೆಯಲ್ಲೂ ಸಹಕಾರವಿದೆ. ಮೊದ ಮೊದಲು ಈ ರಂಗ ಪ್ರವೇಶಿಸಿದಾಗ, ಹೇಗೋ ಏನೋ ಎಂಬ ಭಯವಿತ್ತು. ಆದರೆ, ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ ಭಯ ದೂರವಾಗಿದೆ. ಇಲ್ಲಿ ಪ್ರತಿಭೆಯಷ್ಟೇ ಅಲ್ಲ, ಜೊತೆಯಲ್ಲಿ ಅದೃಷ್ಟವೂ ಇರಬೇಕು. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲೇ ಇರಬೇಕು. ಇಲ್ಲೇ ಗಟ್ಟಿನೆಲೆ ಕಾಣುವ ಆಸೆ ಇದೆ” ಎನ್ನುತ್ತಾರೆ ಶ್ರೀಪ್ರಿಯಾ.

Categories
ಸಿನಿ ಸುದ್ದಿ

ಡಾಲಿಗೆ ಯಶಾ ಜೋಡಿ – ಶಿವಪ್ಪನಿಗೆ ಸಿಕ್ಕ ಮತ್ತೊಬ್ಬ ಬೆಡಗಿ

ಶಿವರಾಜಕುಮಾರ್‌ ಧನಂಜಯ್‌ ಕಾಂಬಿನೇಷನ್‌ ಸಿನಿಮಾ

ಕನ್ನಡದಲ್ಲಿ ಹೊಸಬರ “ಪದವಿಪೂರ್ವ” ಸಿನಿಮಾ ಸೆಟ್ಟೇರಿದ್ದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಯಶಾ ಶಿವಕುಮಾರ್‌ ನಾಯಕಿ ಅನ್ನೋದ್ದನ್ನೂ ಹೇಳಲಾಗಿತ್ತು. ಯಶಾ ಶಿವಕುಮಾರ್‌ ಇದೀಗ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಮೊದಲ ಚಿತ್ರ ಮುಗಿಯುವ ಮುನ್ನವೇ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿರುವುದು ವಿಶೇಷ.

Processed with VSCO with al3 preset

ಹೌದು, ಯಶಾ ಶಿವಕುಮಾರ್‌, ಅಭಿನಯಿಸುತ್ತಿರುವ ಚಿತ್ರ “ಶಿವಪ್ಪ”. ಈ ಸಿನಿಮಾದಲ್ಲಿ ಶಿವರಾಜಕುಮಾರ್‌ ಹೀರೋ. ಅವರೊಂದಿಗೆ “ಡಾಲಿ” ಧನಂಜಯ್‌ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಶಿವರಾಜಕುಮಾರ್‌ ಅವರಿಗೆ ಅಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. “ಡಾಲಿ” ಧನಂಜಯ್‌ ಅವರಿಗೆ ನಾಯಕಿಯಾಗಿ ಈಗ ಯಶಾ ಶಿವಕುಮಾರ್‌ ನಟಿಸುತ್ತಿದ್ದಾರೆ.


ಸದ್ಯಕ್ಕೆ “ಶಿವಪ್ಪʼ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ವಿಜಯ್‌ ಮಿಲ್ಟನ್‌, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 8 ದಿನಗಳ ಶೂಟಿಂಗ್ ನಲ್ಲಿ 23 ಸೀನ್ ಗಳನ್ನು ಚಿತ್ರೀಕರಣ ಮಾಡಿದ್ದೇವೆ.

Processed with VSCO with al3 preset

ಇಡೀ ಚಿತ್ರತಂಡಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್ ಅವರ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಶಿವರಾಜಕುಮಾರ್‌ ಮತ್ತು ಧನಂಜಯ್‌ ಅವರಿಬ್ಬರೂ “ಟಗರು” ಸಿನಿಮಾ ನಂತರ “ಶಿವಪ್ಪ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇನ್ನು, ಶಶಿಕುಮಾರ್, ಉಮಾಶ್ರೀ ಇತರರು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಜನವರಿಗೆ ಬರ್ತಾಳೆ ಪಾರು – ಟೀಸರ್ ರಿಲೀಸ್ ಮಾಡಿದ ಹಂಸಲೇಖ

ಚಿಂದಿ ಆಯುವ ಹುಡುಗಿ ಡಿಸಿ ಆದಾಗ…

ಕನ್ನಡದಲ್ಲೀಗ ಸಿನಿಮಾಗಳ ಕಲರವ. ಹೌದು, ಕೊರೊನಾ ಹಾವಳಿಯ ಬಳಿಕ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಮೆಲ್ಲನೆ, ಒಂದೊಂದೇ ಚಿತ್ರಗಳು ತೆರೆಗೆ ಬರುತ್ತಿವೆ. ಈಗ ಮಕ್ಕಳ ಚಿತ್ರವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪಾರು” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಚಿತ್ರ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

 

ಬಡತನದ ಬೇಗೆಯಲ್ಲೇ ದಿನದೂಡಿ ಬದುಕುವ ಫ್ಯಾಮಿಲಿಯಲ್ಲಿ ನಾಲ್ವರು ಚಿಂದಿ ಆಯುವ ಮಕ್ಕಳಲ್ಲಿ ಒಬ್ಬಳು ಚೆನ್ನಾಗಿ ಓದಿ, ಜಿಲ್ಲಾಧಿಕಾರಿಯಾಗುತ್ತಾಳೆ. ಆದೇ ಚಿತ್ರದ ಕಥಾಹಂದರ. ಹನುಮಂತ್‌ ಪೂಜಾರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಹಾಗು ಛಾಯಾಗ್ರಹಣದ ಜವಾಬ್ದಾರಿಯೂ ಹನುಮಂತ್‌ ಪೂಜಾರ್‌ ಅವರಿಗಿದೆ. ಇನ್ನು, ನೀನಾಸಂ ನಂಟು ಇರುವ ಹನುಮಂತ್‌ ಪೂಜಾರ್‌, “ಬುದ್ದಿವಂತ”, “ಅಯೋಗ್ಯ”, “ದೋಬಿಘಾಟ್” ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ದುರ್ಗ‌ ಸಿನಿ ಕ್ರಿಯೇಷನ್ಸ್ ‌ಬ್ಯಾನರ್‌ನಲ್ಲಿ ಹನುಮಂತ್‌ ಪೂಜಾರ್ ಅವರೇ ಚಿತ್ರ ನಿರ್ಮಿಸಿದ್ದಾರೆ. ಸಿ.ಎನ್.ಗೌರಮ್ಮ ಅವರ ಸಹ ನಿರ್ಮಾಣವಿದೆ.


ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತವಿದೆ. ಶಿವ‌ಕುಮಾರ್ ಸ್ವಾಮಿ‌‌ ಸಂಕಲನ‌ ಮಾಡಿದ್ದಾರೆ. “ಪಾರು” ಚಿತ್ರದಲ್ಲಿ ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ‌ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಮ್‌ ಕುಮಾರ್ ಇತರರು ಇದ್ದಾರೆ. ದಾವಣಗೆರೆ, ಬೆಂಗಳೂರು, ಹಾವೇರಿ ಇನ್ನಿತರೆ ಕಡೆ ಚಿತ್ರೀಕರಣ ನಡೆದಿದೆ.

Categories
ಸಿನಿ ಸುದ್ದಿ

ಎಕ್ಸ್‌ಕ್ಯೂಸ್‌… ಮಿ ಬಂದು 17 ವರ್ಷ! ಸ್ಟಾರ್ ಗಿರಿ ಮೇಲೆ ನಂಬಿಕೆ ಇಲ್ಲ- ಅಜೇಯ್‌ರಾವ್

ಕಷ್ಟ ಮರೆಯಲ್ಲ, ಸಾಧನೆ ಬಿಡಲ್ಲ…

ಡಿಸೆಂಬರ್‌, 5, 2003
– ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಸಿನಿಮಾವೊಂದು ಬಿಡುಗಡೆಯಾದ ದಿನ. ಹೌದು, ಪ್ರೇಮ್‌ ನಿರ್ದೇಶನದ ಅಜೇಯ್‌ ರಾವ್ , ರಮ್ಯಾ ಹಾಗೂ ಸುನೀಲ್‌ ರಾವ್‌ ಅಭಿನಯದ “ಎಕ್ಸ್‌ ಕ್ಯೂಸ್‌.. ಮಿ” ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಹದಿನೇಳು ವರ್ಷಗಳು ಸಂದಿವೆ. ಎನ್‌.ಎಂ.ಸುರೇಶ್‌ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್‌ ಸಂಗೀತ ನೀಡಿದ್ದರು. ಇಂದಿಗೂ ಈ “ಎಕ್ಸ್‌ ಕ್ಯೂಸ್‌ …ಮಿ” ಎವರ್‌ಗ್ರೀನ್.‌ ಒಂದಷ್ಟು ಸಿನಿಮಾಗಳು ಪದೇ ಪದೇ ಕಾಡುವುದಕ್ಕೆ ಕಾರಣ, ಆ ಚಿತ್ರದಲ್ಲಿದ್ದ ಕಥೆ, ಚಿತ್ರಕಥೆ, ಹಾಡುಗಳು ಹಾಗೂ ಕಲಾವಿದರ ಅಭಿನಯ. ಅಷ್ಟಕ್ಕೂ ಈ ಚಿತ್ರದ ಬಗ್ಗೆ ಇಷ್ಟೊಂದು ಹೇಳುವುದಕ್ಕೆ ಕಾರಣವಿಷ್ಟೇ. ಈ ಚಿತ್ರವನ್ನು ಅಜೇಯ್‌ರಾವ್‌ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಯಶಸ್ಸು ತಂದುಕೊಟ್ಟ “ಎಕ್ಸ್‌ ಕ್ಯೂಸ್‌…ಮಿ” ಚಿತ್ರ ಅವರಿಗೊಂದು ಐಡೆಂಟಿಟಿ ತಂದುಕೊಟ್ಟಿದೆ ಅನ್ನುವುದು ಸತ್ಯ. ಹೀರೋ ಆಗಿ ಯಶಸ್ಸು ಕೊಟ್ಟ ಚಿತ್ರವಿದು. ಹಾಗಾಗಿ ಈ ಹದಿನೇಳು ವರ್ಷಗಳ ಸಿನಿಮಾ ಜರ್ನಿಯಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಆ ಕುರಿತು ಅಜೇಯ್‌ರಾವ್‌ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

ನೋವು-ಸಂಕಟ ಮರೆತಿಲ್ಲ
“ಹಲೋ ಎಕ್ಸ್‌ ಕ್ಯೂಸ್‌… ಮಿ” ಈ ಪದವನ್ನೊಮ್ಮೆ ಕೇಳೋಕೆ ಒಂದು ಖುಷಿ ಎನಿಸುತ್ತೆ. ಯಾಕೆಂದರೆ, ನಾನು “ಎಕ್ಸ್‌ ಕ್ಯೂಸ್‌… ಮಿ” ಸಿನಿಮಾ ಮೂಲಕ ಹೀರೋ ಆದವನು. ನನ್ನನ್ನು ಹೀರೋ ಅಂತ ಗುರುತಿಸಿಕೊಟ್ಟ ಸಿನಿಮಾವದು. ದೊಡ್ಡ ಯಶಸ್ಸು ಕೊಟ್ಟ ಚಿತ್ರವದು. ನನ್ನ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟ, ನನ್ನೊಳಗಿನ ಬಯಕೆಯನ್ನು ಈಡೇರಿಸಿದ ಮತ್ತು ಎಂದೆಂದಿಗೂ ಮರೆಯಲಾರದ ಚಿತ್ರವದು. ನಾನು ಯಾರು ಅಂತ ಗೊತ್ತಿಲ್ಲದ ದಿನದಲ್ಲೇ ಆ ಚಿತ್ರ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡಿದ ಚಿತ್ರವದು. ಹಾಗಾಗಿ, ನನಗೆ ಆ ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ.


ಈ ಹದಿನೇಳು ವರ್ಷಗಳು ಸುದೀರ್ಘ ಪಯಣದಲ್ಲಿ ಸಕ್ಸಸ್‌ ನೋಡಿದ್ದೇನೆ. ಫೇಲ್ಯೂರ್‌ ಕೂಡ ಕಂಡಿದ್ದೇನೆ. ಈ ಎರಡನ್ನೂ ನಾನು ಹತ್ತಿರದಿಂದಲೇ ನೋಡಿದವನು. ಒಂದೊಂದೇ ಮೆಟ್ಟಿಲನ್ನು ತುಂಬಾ ಕಷ್ಟಪಟ್ಟು ಹತ್ತಿ ಬಂದಿದ್ದೇನೆ. ಹತ್ತುವಾಗ ಎಡವಿದ್ದೇನೆ, ನೋವು ಅನುಭವಿಸಿದ್ದೇನೆ. ಒಮ್ಮೊಮ್ಮೆ ಆ ಮೆಟ್ಟಿಲ ಮೇಲೆ ನಿಂತು ಖುಷಿಪಟ್ಟಿದ್ದೇನೆ. ಆದರೆ, ನಾನು ಯಾವುದನ್ನೂ ಮರೆತಿಲ್ಲ ಎಂಬುದೊಂದೇ ಸತ್ಯ. ಯಾಕೆಂದರೆ, ಮನುಷ್ಯ ಎಷ್ಟೇ ಮೇಲೆ ಬಂದರೂ, ಎಷ್ಟೇ ಗಳಿಸಿದರೂ, ಹಿಂದಿನ ನೆನಪು, ಆ ಕಷ್ಟ, ನೋವು, ಸಂಕಟ ಮರೆಯಬಾರದು. ನಾನು ಈ ಎಲ್ಲವನ್ನೂ ಅನುಭವಿಸಿದ್ದರಿಂದ ಪದೇ ಪದೇ ಎಲ್ಲವೂ ನೆನಪಾಗುತ್ತಲೇ ಇರುತ್ತದೆ. ಹಾಗಾಗಿಯೇ ನಾನು ಸದಾ ಕೇವಲ ಒಬ್ಬ ನಟನಾಗಿ ಇರಲು ಇಷ್ಟಪಡ್ತೀನಿ.

 

ಸ್ಟಾರ್‌ ಅನ್ನೋದು ಮಿಂಚಿ ಮರೆಯಾಗುತ್ತೆ…
ಕ್ಯಾಮೆರಾ ಮುಂದೆ ನಾನು ಒಬ್ಬ ಆರ್ಟಿಸ್ಟ್‌ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡ್ತೀನಿ. ಯಾಕೆಂದರೆ, ನಟನಾಗಿರುವುದೇ ಶಾಶ್ವತ. ನನಗೆ ಸ್ಟಾರ್‌ ಪಟ್ಟ ಬೇಡವೇ ಬೇಡ. ಅದೊಂದು ರೀತಿ ಸ್ವಿಚ್‌ ಆನ್‌ ಅಂಡ್‌ ಆಫ್‌ ಇದ್ದಂತೆ. ಆಗಾಗ ಸಕ್ಸಸ್‌, ಫೇಲ್ಯೂರ್‌ ಇದ್ದಂಗೆ. ಹಾಗಾಗಿ ನಾನು ಸ್ಟಾರ್‌ಗಿಂತ ಒಬ್ಬ ನಟನಾಗಿ ಗುರುತಿಸಿಕೊಳ್ಳೋಕೆ ಇಷ್ಟಪಡ್ತೀನಿ. ಒಬ್ಬ ನಿರ್ದೇಶಕನ ಕಲ್ಪನೆ ಪಾತ್ರಕ್ಕೆ ನ್ಯಾಯ ಸಲ್ಲಿಸುವಂತಹ ನಟನಾಗಬೇಕು ಎಂಬುದು ನನ್ನ ಉದ್ದೇಶ. ನಾವು ಅಣ್ಣಾವ್ರು ಅವರನ್ನು ನೆನಪಿಸಿಕೊಂಡರೆ, ಅವರು ಮಾಡಿದ ಕೆಲಸಗಳು, ಪಾತ್ರಗಳು, ಚಿತ್ರಗಳು ಕಣ್ಣೆದುರು ಬರುತ್ತವೆ. ಅದಷ್ಟೇ ಶಾಶ್ವತ. ಹಾಗಾಗಿ ನಾವು ತೆರೆಯ ಮೇಲೆ ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯಬೇಕಾದರೆ, ಶ್ರದ್ಧೆ, ಭಕ್ತಿ,ಪ್ರಾಮಾಣಿಕತೆಯಿಂದ ಮಾಡಬೇಕು.

ನಟನಿಗೆ ಸ್ಟಾರ್‌ ಭ್ರಮೆ ಇರಬಾರದು
ನನಗೆ ಈ ಸ್ಟಾರ್‌ಡಮ್‌ ಮೇಲೆ ನಂಬಿಕೆ ಇಲ್ಲ. ಸ್ಟಾರ್‌ ಪಟ್ಟ ಅನ್ನೋದು ಶಾಶ್ವತವೂ ಅಲ್ಲ. ನಟನಾದವನು ಆ ಭ್ರಮೆಯಲ್ಲಿ ಇರಬಾರದು. ಕಲಾವಿದರ ಬದುಕಲ್ಲಿ ಸೋಲು-ಗೆಲುವು ಕಾಮನ್.‌ ನಿರ್ಮಾಪಕ ಇರಲಿ, ನಿರ್ದೇಶಕ ಇರಲಿ, ನಟನೇ ಇರಲಿ ತನ್ನ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಮಾತ್ರ ಎಲ್ಲವೂ ಶಾಶ್ವತವಾಗಿರುತ್ತೆ. ಎಲ್ಲರ ಮನಸ್ಸಲ್ಲಿ ಕೊನೆಗೆ ಉಳಿಯೋದು ಮಾಡಿದ ಕೆಲಸವಷ್ಟೇ. ಅದೆಷ್ಟೋ ಸಿನಿಮಾಗಳು ಫ್ಲಾಪ್‌ ಆಗಿದ್ದರೂ, ಇವತ್ತಿಗೂ ಆ ಸಿನಿಮಾಗಳನ್ನು ನೋಡಿದಾಗ, ಎಂಥಾ ಕ್ಲಾಸಿಕ್‌ ಸಿನಿಮಾ ಮಾಡಿದ್ದಾರೆ ಅನ್ಸುತ್ತೆ. ಇವತ್ತು ಮಾರ್ಕೆಟ್‌ ಅನ್ನೋದು ಕೂಡ ಶಾಶ್ವತವಲ್ಲ. ನಾಳೆ ನಾವೇ ಇರ್ತೀವೋ ಇಲ್ಲವೋ ಅನ್ನೋದು ಶಾಶ್ವತವಲ್ಲ. ಆದರೆ, ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯೋದು ಎಂಬುದು ಅವರ ಮಾತು.

ನಿರ್ದೇಶನದ ಆಸೆಯೂ ಇದೆ
ಅಂದಹಾಗೆ, ಅಜೇಯ್‌ರಾವ್‌ ಈ ಹದಿನೇಳು ವರ್ಷಗಳಲ್ಲಿ ಗೆದ್ದಿದ್ದಾರೆ, ಬಿದ್ದಿದ್ದಾರೆ, ನಿರ್ಮಾಪಕರಾಗಿದ್ದಾರೆ, ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ನಿರ್ದೇಶನದ ಮೇಲೆ ಆಸೆ ಇಲ್ಲವೇ? ಈ ಬಗ್ಗೆ ಮಾತನಾಡುವ ಅಜೇಯ್‌ರಾವ್‌, ನನಗೂ ನಿರ್ದೇಶನದ ಮೇಲೆ ಪ್ರೀತಿ ಇದೆ. ಆದರೆ, ಮೊದಲ ಆದ್ಯತೆ ನಟನೆಗೆ ಕೊಡ್ತೀನಿ. ಅದು ನನ್ನ ಪ್ಯಾಷನ್‌ ಕೂಡ. ಮೊದಲು ನನ್ನೊಂದಿಗೆ ಸಿನಿಮಾ ಮಾಡೋಕೆ ಬರೋರನ್ನು ಗೌರವಿಸುತ್ತೇನೆ. ಅಂಥವರಿಗೆ ಸಿನಿಮಾ ಮೇಲೆ ಪ್ರೀತಿ ಇರಬೇಕು. ಗೆಲ್ಲುವ ಛಲ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ತಾಳ್ಮೆ ಇರಬೇಕು. ಇಂದು ನನಗೆ ಆ ತಾಳ್ಮೆ ಇದ್ದುದರಿಂದಲೇ ಎಲ್ಲವನ್ನೂ ಕಂಡುಕೊಳ್ಳಲು ಸಾಧ್ಯವಾಗಿದೆ ಎಂಬುದು ಅವರ ಮಾತು.

ಸಾಧಿಸುವುದಿನ್ನೂ ಇದೆ…
ಸದ್ಯ ಅಜೇಯ್‌ ರಾವ್‌ ಅವರ “ಕೃಷ್ಣ ಟಾಕೀಸ್‌” ಸೆನ್ಸಾರ್‌ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಉಳಿದಂತೆ “ಶೋಕಿವಾಲ” ಕೂಡ ರೆಡಿ. ಇವುಗಳ ಜೊತೆಗೆ ನಿರ್ದೇಶಕರಾದ ಮಂಜು ಸ್ವರಾಜ್‌ ಮತ್ತು ಗುರುದೇಶಪಾಂಡೆ ಜೊತೆ ಸಿನಿಮಾ ಮಾಡಬೇಕಿದೆ. ಇದರ ನಡುವೆಯೇ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆಯಂತೆ. ಅದೇನೆ ಇರಲಿ, ಅಜೇಯ್‌ ರಾವ್‌ “ಎಕ್ಸ್‌ ಕ್ಯೂಸ್‌… ಮಿ”ಗೆ ಹದಿನೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಅಜೇಯ್‌ರಾವ್‌ ಎಲ್ಲಾ ಪಾಠ ಕಲಿತಿದ್ದಾರೆ. ಒಮ್ಮೆ ತಿರುಗಿ ನೋಡಿದಾಗ ಸಾಧನೆ ಮಾಡುವುದು ಇನ್ನೂ ಇದೆ ಎಂದೆನಿಸದಿರದು.

error: Content is protected !!