ಶಶಿಕುಮಾರ್‌ ಈಗ ಆರ್ಮಿ ಅಧಿಕಾರಿ – ಆರ್ಟಿಕಲ್‌ 370 ಚಿತ್ರದಲ್ಲಿ ಸುಪ್ರೀಂ ಹೀರೋನ ಖದರ್

ಆರ್ಮಿ-ಟೆರರಿಸ್ಟ್‌ ನಡುವಿನ ಚಿತ್ರಣ

“ಆಕ್ಟ್‌ 1978″… ಇದು ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ. ಈಗ “ವಿಧಿ ಆರ್ಟಿಕಲ್‌ 370” ಚಿತ್ರದ ಸರದಿ. ಹೌದು, ಕನ್ನಡ ಚಿತ್ರರಂಗದಲ್ಲೀಗ ಅತೀ ಸೂಕ್ಷ್ಮ ಸಂವೇದನೆಯ ಸಿನಿಮಾಗಳ ಪರ್ವ. ಇತ್ತೀಚೆಗೆ “ಆಕ್ಟ್‌ 1978” ಚಿತ್ರ ಜೋರು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದರ ಬೆನ್ನಲ್ಲೇ ಈಗ “ಆರ್ಟಿಕಲ್‌ 370” ಸಿನಿಮಾ ಒಂದಷ್ಟು ಸುದ್ದಿ ಮಾಡುವ ಸೂಚನೆ ನೀಡಿದೆ. ಇದು ಶಶಿಕುಮಾರ್‌ ಹಾಗೂ ಶೃತಿ ಅಭಿನಯದ ಚಿತ್ರ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೂ ಕೂಡ ಒಂದು ಕಾಯ್ದೆಯಡಿ ಒಂದಷ್ಟು ಅಂಶಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕಾಶ್ಮೀರ ಭಾಗದ ಚಿತ್ರೀಕರಣ ಮುಗಿಸಿದರೆ, ಚಿತ್ರ ಕಂಪ್ಲೀಟ್‌ ಆಗಲಿದೆ.

ಶೃತಿ, ಶಶಿಕುಮಾರ್

ಈ ಚಿತ್ರಕ್ಕೆ ಕೆ.ಶಂಕರ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಇದು ಅವರ ಮೂರನೇ ನಿರ್ದೇಶನದ ಚಿತ್ರ. ಇನ್ನು, ಲೈರಾ ಎಂಟರ್‌ಪ್ರೈಸಸ್‌ ಅಂಡ್‌ ಮೀಡಿಯಾ ಬ್ಯಾನರ್‌ನಲ್ಲಿ ಭರತ್‌ ಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮ್ಮ ಸಿನಿಮಾ ಕುರಿತು ನಿರ್ದೇಶಕ ಕೆ.ಶಂಕರ್‌, “ಸಿನಿಲಹರಿ” ಜೊತೆ ಹೇಳಿಕೊಂಡಿದ್ದಿಷ್ಟು.

ಬಹಳ ದಿನಗಳ ನಂತರ ಶೃತಿ-ಶಶಿಕುಮಾರ್‌ ಜೋಡಿ

“ಚಿತ್ರಕ್ಕೆ “ಆರ್ಟಿಕಲ್‌ 370” ಎಂಬ ಹೆಸರಿಡಲಾಗಿದೆ. ಕನ್ನಡ ಸಿನಿಮಾ ಆಗಿದ್ದರಿಂದ ಚಿತ್ರದ ಶೀರ್ಷಿಕೆ ಮುಂದೆ “ವಿಧಿ” ಎಂದು ಸೇರಿಸಲಾಗಿದೆ. ಹಾಗಾಗಿ ಚಿತ್ರವನ್ನು “ವಿಧಿ ಆರ್ಟಿಕಲ್‌ 370” ಎಂದು ಕರೆಯಲಾಗುತ್ತಿದೆ. ಇದೊಂದು ಭಾರತೀಯ ಸೇನೆ ಹಾಗೂ ಉಗ್ರವಾದ ನಡುವಿನ ಸಮರದ ಕಥೆ. ಈ ವಿಷಯದ ಮೇಲೆ ಮಾಡಿರುವ ಸಿನಿಮಾ. ಯುದ್ಧ ಮತ್ತು ಉಗ್ರವಾದ ಕಥೆಯ ಜೊತೆ ಜೊತೆಯಲ್ಲಿ ದೇಶಾಭಿಮಾನದ ಅಂಶಗಳೂ ಇಲ್ಲಿ ಹೇರಳವಾಗಿವೆ. ಶಶಿಕುಮಾರ್‌ ಅವರು ಇಲ್ಲಿ ಮೇಜರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈವರೆಗೆ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಶೃತಿ ಅವರು ನಟಿಸಿದ್ದಾರೆ. ಈ ಹಿಂದೆ ಇವರಿಬ್ಬರ ಜೋಡಿಯ ಸಿನಿಮಾಗಳು ಯಶಸ್ವಿಯಾಗಿವೆ. ಬಹಳ ವರ್ಷಗಳ ಬಳಿಕ ಅವರು “ವಿಧಿ ಆರ್ಟಿಕಲ್‌ 370” ಚಿತ್ರದಲ್ಲಿ ನಟಿಸಿದ್ದಾರೆ.

ವಿರೋಧಿ ದೇಶದ ಹೀನಕೃತ್ಯದ ವಿಷಯ ಹೈಲೈಟ್

“ಆರ್ಟಿಕಲ್‌ 370″  ಬಗ್ಗೆ ವಿವರವಾಗಿ ಹೇಳುವುದಾದರೆ, ಜಮ್ಮು-ಕಾಶ್ಮೀರದಲ್ಲಿ 1949, ಅಕ್ಟೋಬರ್‌ 17ರಂದು ವಿಶೇಷ ವಿಧಿ 370 ಜಾರಿ ಮಾಡಲಾಯಿತು.  ಆ ನಂತರದ ದಿನಗಳಲ್ಲಿ ವಿರೋಧಿ ದೇಶ ನಮ್ಮ ದೇಶದ ಅಮಾಯಕರನ್ನು ಬಳಸಿಕೊಂಡು ನಮ್ಮ ಮೇಲೆಯೇ ಯುದ್ಧ ಮಾಡುವ ಹೀನ ಕೃತ್ಯಕ್ಕೆ ಮುಂದಾದರು. ಆಗ ನಡೆದಂತಹ ಅನೇಕ ಸೂಕ್ಷ್ಮ ವಿಚಾರಗಳೊಂದಿಗೆ ಕಥೆ ಹೆಣೆಯಲಾಗಿದೆ. ಇಲ್ಲಿ ದೇಶಭಕ್ತಿಯ ಜೊತೆ ಭಾವೈಕ್ಯತೆ ಸಾರುವ ಅಂಶಗಳೂ ಇಲ್ಲಿವೆ. ಎಲ್ಲೂ ಓದದ, ಕೇಳದ ಅನೇಕ ವಿಷಯಗಳು ಚಿತ್ರರೂಪದಲ್ಲಿ ಬರಲಿವೆ” ಎಂದು ವಿವರಿಸುತ್ತಾರೆ ನಿರ್ದೇಶಕ ಕೆ.ಶಂಕರ್.‌

ಶಿವರಾಮ್, ದೊಡ್ಡರಂಗೇಗೌಡರ ಜೊತೆ ನಿರ್ದೇಶಕ ಶಂಕರ್

ಜಮ್ಮು-ಕಾಶ್ಮೀರದಲ್ಲಿ ಶೂಟಿಂಗ್‌

ಚಿತ್ರದಲ್ಲಿ ಶಶಿಕುಮಾರ್‌ ಅವರ ತಂದೆ ಪಾತ್ರದಲ್ಲಿ ಹಿರಿಯ ನಟರಾದ ಶಿವರಾಮಣ್ಣ ಕಾಣಿಸಿಕೊಂಡಿದ್ದಾರೆ. ಸಾಹಿತಿ ದೊಡ್ಡ ರಂಗೇಗೌಡರು ಇಲ್ಲಿ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಯತಿರಾಜ್‌ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ರಾಮನಗರ, ಶ್ರವಣಬೆಳಗೊಳ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಜಮ್ಮು-ಕಾಶ್ಮಿರದಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣ ನಡೆಸಿದರೆ, ಚಿತ್ರೀಕರಣ ಮುಗಿಯಲಿದೆ. ಜನವರಿ ಮೊದಲ ವಾರ ಜಮ್ಮು-ಕಾಶ್ಮೀರ ಸುತ್ತಮುತ್ತ ಚಿತ್ರೀಕರಿಸುವ ಯೋಜನೆ ಇದೆ ಎಂದು ಹೇಳುವ ಶಂಕರ್‌, ತಮ್ಮ ನಿರ್ಮಾಪಕರ ಔದಾರ್ಯವನ್ನುಕೊಂಡಾಡುತ್ತಾರೆ.‌

ಗೆಳೆತನದ ಸಿನಿಮಾವಿದು

ಹಾಗೆ ನೋಡಿದರೆ, ನಿರ್ಮಾಪಕರು ನನಗೆ ಎರಡು ದಶಕದ ಗೆಳೆಯರು. ನಾನು ಒಮ್ಮೆಯೂ ಅವರ ಬಳಿ ಸಿನಿಮಾ ಕಥೆ ಕೇಳಿ, ಒಂದು ಸಿನಿಮಾ ಮಾಡೋಣ ಎಂದು ಹೇಳಿದವನಲ್ಲ. ಗೆಳೆತನ ಮಾತ್ರ ನಮ್ಮಿಬ್ಬರ ನಡುವೆ ಇತ್ತು. ಒಮ್ಮೆ ನಾನು ಸಿನಿಮಾ ಮಾಡುತ್ತಿರುವುದನ್ನು ಗಮನಿಸಿದ ಅವರು, ನಾವೂ ಜೊತೆ ಸೇರಿ ಒಂದು ಚಿತ್ರ ಮಾಡೋಣ ಅಂದರು.

ಅದಕ್ಕೆ ನಾನೂ ಕೂಡ ಒಂದೊಳ್ಳೆಯ ವಿಷಯ ಇಟ್ಟುಕೊಂಡು ಬರುತ್ತೇನೆ ಆಗ ಮಾಡೋಣ ಅಂದಿದ್ದೆ. ಆಗ ಶುರುವಾಗಿದ್ದೆ “ಆರ್ಟಿಕಲ್‌ 370” ಚಿತ್ರ. ಒನ್‌ಲೈನ್‌ ಸ್ಟೋರಿ ಹೇಳಿದೆಯಷ್ಟೆ, ಆಮೇಲೆ ಮುಂದೇನೂ ಹೇಳದೆ, ಸಿನಿಮಾ ಮಾಡಿ ಅಂದರು. ಕಥೆ ಕೂಡ ಪೂರ್ಣ ಪ್ರಮಾಣದಲ್ಲಿ ಕೇಳದೆ ನಂಬಿಕೆ ಇಟ್ಟು ನಿರ್ಮಾಣ ಮಾಡಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಂಡಿದ್ದೇನೆ ಎಂಬ ವಿಶ್ವಾಸವೂ ಇದೆ”ಎನ್ನುತ್ತಾರೆ ಶಂಕರ್.‌

ಕಲಾವಿದರ ದಂಡೇ ತುಂಬಿದೆ

ಅಂದಹಾಗೆ, ಈ “ಆರ್ಟಿಕಲ್‌ 370” ಕೊರೊನೊ ಹರಡುವ ಮುನ್ನ ಶುರುವಾದ ಚಿತ್ರ. ಆ ನಂತರ ಲಾಕ್‌ಡೌನ್‌ ಆಯ್ತು. ಸಡಿಲಗೊಂಡ ಬಳಿಕ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಜಮ್ಮು-ಕಾಶ್ಮೀರ ಭಾಗದ ಚಿತ್ರೀಕರಣ ಮಾಡಿದರೆ, ಚಿತ್ರ ಕಂಪ್ಲೀಟ್‌ ಆಗಲಿದೆ. ಇದುವರಗೆ 45 ದಿನಗಳ ಕಾಲ ಶೂಟಿಂಗ್‌ ಮಾಡಲಾಗಿದೆ. ಚಿತ್ರಕ್ಕೆ ರವಿ ಕ್ಯಾಮೆರಾ ಹಿಡಿದರೆ, ಸಂಜೀವ ರೆಡ್ಡಿ ಸಂಕಲನವಿದೆ.

ಅವಿನಾಶ್‌ಜಿ.ಗುರುಸ್ವಾಮಿ, ಪುರುಷೋತ್ತಮ್‌, ವೆಂಕಟೇಶ್‌ ಅವರ ಕಾರ್ಯಕಾರಿ ನಿರ್ವಹಣೆ ಚಿತ್ರಕ್ಕಿದೆ. ಚಿತ್ರದಲ್ಲಿ ಗಣೇಶ್‌, ಲಕ್ಷ್ಮಣ್‌ ರಾವ್‌, ಕಿಲ್ಲರ್‌ ವೆಂಕಟೇಶ್‌, ರಮಾನಂದ್‌ ಸೇರಿದಂತೆ ಇತರರು ನಟಿಸಿದ್ದಾರೆ. ಸ್ಟಂಟ್‌ ವೇಲು ಸಾಹಸ ಮಾಡಿದರೆ, ಬಾಬುಖಾನ್‌ ಕಲಾ ನಿರ್ದೇಶನವಿದೆ.

Related Posts

error: Content is protected !!