ಒಳ್ಳೇ ಹುಡುಗ ಆದರೆ… ತಾಳ್ಮೆ ಕಳೆದುಕೊಂಡರೆ ಮಹಿಷಾಸುರ!

ಹೊಸಬರ ಮಹಿಷಾಸುರನ ಟ್ರೇಲರ್‌ ಹೊರಬಂತು‌

“ಮಹಿಷಾಸುರ…” ಇದು ಸಿನಿಮಾದ ಹೆಸರು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೂ ಸಜ್ಜಾಗಿದೆ. ಸಾಮಾನ್ಯವಾಗಿ ಯಾರೂನು ಹುಟ್ಟುವಾಗಲೇ ವಿಲನ್‌  ಆಗೋದಿಲ್ಲ. ಆದರೆ, ಕೆಲವರು ಮಹಿಷಾಸುರನಂತೆ ಮಾಡಿಬಿಡುತ್ತಾರೆ. ಪ್ರಸ್ತುತ ರಾಜಕಾರಣಿಗಳು ತಮ್ಮ ವೋಟ್‍ಬ್ಯಾಂಕ್‍ಗೋಸ್ಕರ ಯುವ ಜನರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದರ ಸುತ್ತ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಮಹಿಷಾಸುರ” ಸಿನಿಮಾ  ಸೇರಿದೆ. ನಿರ್ದೇಶಕ ಉದಯ ಪ್ರಸನ್ನ ಅವರು ತಮ್ಮ ಈ ಚಿತ್ರದ ಮೂಲಕ ಒಂದಷ್ಟು ವಾಸ್ತವ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

ಸಂಜಯ್ ಕುಲಕರ್ಣಿ, ವಿಜಯಕುಮಾರ್ ಸೇರಿದಂತೆ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಉದಯ ಪ್ರಸನ್ನ ಅವರಿಗೆ ಇದು ಮೊದಲ ಪ್ರಯತ್ನ. ಇದೊಂದು ತ್ರಿಕೋನ ಪ್ರೇಮಾಕಥಾ ಹಂದರ ಇರುವ ಚಿತ್ರ. ಈಗಾಗಲೇ ಚಿತ್ರದ ಟ್ರೇಲರ್ ಡಿ-ಬೀಟ್ಸ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಈ ಚಿತ್ರದ ಆಡಿಯೋಗೆ ಸಾಹಿತಿ ನಿರ್ದೇಶಕ ಕವಿರಾಜ್ ಬಿಡುಗಡೆ ಮಾಡಿದ್ದರು. ಜನವರಿಯಲ್ಲಿ ಪ್ರೇಕ್ಷಕರ ಎದುರು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಮೂಲಕ  ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್‍ಕುಮಾರ್ ಹಾಗೂ ಪ್ರೇಮಾ ಚಂದ್ರಯ್ಯ ಅವರು ಈ ಚಿತ್ರದ ನಿರ್ಮಾಣಕರು.

ಚಿತ್ರಕ್ಕೆ ರಾಜ್ ಮಂಜು, ಸುದರ್ಶನ್  ನಾಯಕರಾಗಿ ಕಾಣಿಸಿಕೊಂಡಿದ್ದಾರೆ.  ಬಿಂದುಶ್ರೀ ನಾಯಕಿಯಾಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಉದಯ ಪ್ರಸನ್ನ, “ಸಿನಿಮಾ ನಿರ್ದೇಶನ ಮಾಡಬೇಕೆಂಬ ನನ್ನ ಬಹುದಿನಗಳ ಕನಸು ಈ ಚಿತ್ರದ ಮೂಲಕ ನನಸಾಗಿದೆ, “ಮಹಿಷಾಸುರ ” ನನ್ನ ಮೊದಲ ಹೆಜ್ಜೆ. ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೇಳುವ ಪ್ರಯತ್ನವಾಗಿ ಈ ಚಿತ್ರ ಮಾಡಿದ್ದೇನೆ. ಮನುಷ್ಯ ಒಳ್ಳೆಯವನೇ ಆಗಿದ್ದರೂ, ಆತ ತನ್ನ ತಾಳ್ಮೆ, ಸಹನೆ ಕಳೆದುಕೊಂಡಾಗ ಅಂತರಂಗದಲ್ಲಿರುವ ಅಸುರ ಮಹಿಷಾಸುರನ ರೂಪತಾಳುತ್ತಾನೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ಯುವಕರಿಬ್ಬರು ಒಂದು ಹೆಣ್ಣಿಗೋಸ್ಕರ ಯಾವ ರೀತಿ ಅಸುರ ರೂಪ ತಾಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ.

ನನ್ನ ತಾಯಿಯ ಊರಿನ ಹತ್ತಿರ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡ ಈ ಚಿತ್ರದ ಕಥಾಹಂದರ ಹೆಣೆದಿದ್ದೇನೆ. ದೊಡ್ಡ ಬಳ್ಳಾಪುರದ ಬಳಿಯ ಮೇಲುಕೋಟೆ, ಮಂಡ್ಯ, ಮೈಸೂರು ರಾಮನಗರ ಸೇರಿದಂತೆ ಒಟ್ಟು 60 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ ಎಂಬುದು ಅವರ ಮಾತು.


ನಾಯಕಿ ಬಿಂದುಶ್ರೀ ಈ ಚಿತ್ರದಲ್ಲಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ನಟಿಸಿದ್ದು, ಮುಗ್ದೆ, ಇಬ್ಬರು ಯವಕರ ಪ್ರೀತಿಯ ಸುಳಿಯಲ್ಲಿ ಸಿಕ್ಕು, ಸ್ನೇಹಿತರಾಗಿದ್ದ ಅವರು ವಿರೋಧಿಗಳಾಗಲು ಕಾರಣಳಾಗುತ್ತಾಳೆ. ಕೊನೆಗೆ ನಾಯಕಿ ಯಾರಿಗೆ ದಕ್ಕುತ್ತಾಳೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಸುನಿಲ್ ಕೌಶಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವೇಣು ಅವರ ಸಾಹಿತ್ಯವಿದ್ದು, ಕೃಷ್ಣ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ.

Related Posts

error: Content is protected !!