ನಿರ್ದೇಶಕ ಸೃಷ್ಟಿಸಿದ ದೇವರ ಕಾಲೋನಿ! ಬರಲಿದೆ ಚಂದ್ರಶೇಖರ್‌ ಬಂಡಿಯಪ್ಪ ಬರೆದ ಹೊಸ ಪುಸ್ತಕ

ನಿರ್ದೇಶಕರ ಹೊಸ ಹೆಜ್ಜೆ

ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರು ಸಾಕಷ್ಟು ಪುಸ್ತಕಗಳನ್ನು ಹೊರತಂದಿರುವುದುಂಟು. ಆ ಸಾಲಿಗೆ ಈಗ ನಿರ್ದೇಶಕ ಚಂದ್ರಶೇಖರ್‌ಬಂಡಿಯಪ್ಪ ಅವರು ಕೂಡ ಹೊಸದೊಂದು ಪುಸ್ತಕ ಹೊರತರುವ ತಯಾರಿಯಲ್ಲಿದ್ದಾರೆ. ಹೌದು, “ಆನೆ ಪಟಾಕಿ”,”ರಥಾವರ” ಮತ್ತು “ತಾರಕಾಸುರ” ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ಬಂಡಿಯಪ್ಪ, ಒಳ್ಳೆಯ ಬರಹಗಾರರೂ ಹೌದು. ಅವರೀಗೆ ಸಿನಿಮಾ ನಿರ್ದೇಶನದ ಜೊತೆಯಲ್ಲೊಂದು ಪುಸ್ತಕವನ್ನೂ ಬರೆದಿದ್ದಾರೆ ಅನ್ನೋದೇ ಖುಷಿಯ ವಿಷಯ. ಅವರು ಒಂದು ಕಥೆಯನ್ನಿಟ್ಟುಕೊಂಡು, ಅದನ್ನು ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಅವರು ಬರೆದಿರುವ ಕಥೆಯ ಪುಸ್ತಕಕ್ಕೆ “ದೇವರ ಕಾಲೋನಿ” ಎಂದು ನಾಮಕರಣ ಮಾಡಿದ್ದಾರೆ. ಈ ಪುಸ್ತಕದ ವಿಶೇಷತೆ ಅಂದರೆ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್‌ ಮುನ್ನುಡಿ ಬರೆದರೆ, ಯೋಗರಾಜ್‌ಭಟ್‌ ಬೆನ್ನುಡಿ ಬರೆದಿದ್ದಾರೆ. ತಮ್ಮ ಚೊಚ್ಚಲ ಪುಸ್ತಕ “ದೇವರ ಕಾಲೋನಿ” ಕುರಿತು ಚಂದ್ರಶೇಖರ್‌ ಬಂಡಿಯಪ್ಪ “ಸಿನಿ ಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.


“ನನ್ನ ಬದುಕಿನಲ್ಲಿ ನಿರ್ದೇಶನ ಮತ್ತು ವ್ಯವಸಾಯ ಈ ಎರಡನ್ನು ತುಂಬಾನೇ ಇಷ್ಟಪಡ್ತೀನಿ. ಅದರೊಂದಿಗೆ ಈಗ ಪುಸ್ತಕ ಬರಹಕ್ಕೂ ಇಳಿದಿದ್ದೇನೆ. “ದೇವರ ಕಾಲೋನಿ” ಎಂಬ ಹೆಸರಿನ ಪುಸ್ತಕಕ್ಕೆ ಕಥೆ ಬರೆಯುತ್ತಿದ್ದೇನೆ. ಈ ಮೂಲಕ ಲೇಖಕ ಎನಿಸಿಕೊಳ್ಳುತ್ತಿದ್ದೇನೆ ಎಂಬ ಖುಷಿ ಇದೆ. ಸಿನಿಮಾ ಅಂತ ಬಂದಾಗ ಅಲ್ಲಿ ಒಂದಷ್ಟು ಚೌಕಟ್ಟು ಇರುತ್ತೆ. ಅದರದ್ದೇ ಆದ ಕಟ್ಟುಪಾಡುಗಳಿರುತ್ತವೆ. ಅಲ್ಲಿ ಕಮರ್ಷಿಯಲ್‌ ಫಾರ್ಮೆಟ್‌ ಇರುತ್ತೆ. ಇನ್ನೇನಾದರೂ ಅಲ್ಲಿ ಮಾಡೋಕೆ ಹೋದರೆ, ಅದು ಜನರಿಗೆ ರೀಚ್‌ ಆಗೋದಿಲ್ಲ. ಆದರೆ, ಈ ಪುಸ್ತಕ ವಿಚಾರಕ್ಕೆ ಬಂದರೆ, ಅಲ್ಲಿ ಬರಹಗಾರರನಿಗೆ ಸಂಪೂರ್ಣ ಸಹಕಾರ ಇರುತ್ತೆ. ಅವನಿಗೆ ಏನು ತೋಚುತ್ತೋ, ಅದನ್ನು ಗೀಚಬಹುದು. ಎಷ್ಟೇ ನೇರವಾಗಿ, ಖಾರವಾಗಿಯಾದರೂ ಪ್ರತಿಕ್ರಿಯಿಸಬಹುದು. ಒಂದು ರೀತಿಯಲ್ಲಿ ಲೇಖಕ ಸ್ವತಂತ್ರ. ಇನ್ನು ಸಿನಿಮಾದಲ್ಲಿ ಕೆಲ ಕಥಾವಸ್ತು ಇಟ್ಟುಕೊಂಡು ಸಿನಿಮಾ ಮಾಡೋಕೂ ಧೈರ್ಯ ಬೇಕು. ನನಗೆ ಪುಸ್ತಕ ಬರೆಯುವ ಯೋಚನೆ ಹಲವು ವರ್ಷಗಳಿಂದ ಇತ್ತು. ಸಾಕಷ್ಟು ಸಂಶೋಧನೆ ಮಾಡಿಯೇ ನಾನು ಕಥೆ ಬರೆಯೋಕೆ ಮುಂದಾಗಿದ್ದೇನೆ. ಸದ್ಯ ಈ “ದೇವರ ಕಾಲೋನಿ” ಪುಸ್ತಕಕ್ಕೆ ತಯಾರಿ ನಡೆಯುತ್ತಿದೆ. ಬರವಣಿಗೆ ಕೆಲಸ ಆದಾಗಲೇ ಮುಗಿದಿದ್ದು, ಡಿಟಿಪಿ ಕೆಲಸ ನಡೆಯುತ್ತಿದೆ. ದೊಡ್ಡ ಪಬ್ಲಿಕೇಷನ್‌ ಮೂಲಕ ಈ ಪುಸ್ತಕ ಇಷ್ಟರಲ್ಲೇ ಹೊರಬರಲಿದೆʼ ಎಂಬುದು ಚಂದ್ರಶೇಖರ್‌ ಬಂಡಿಯಪ್ಪ ಅವರ ಮಾತು.


ಅದೇನೆ ಇರಲಿ, ಚಂದ್ರಶೇಖರ್‌ ಬಂಡಿಯಪ್ಪ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದಷ್ಟು ವಿಲಕ್ಷಣ ಕಥೆಗಳು, ಪಾತ್ರಗಳು ಕಾಣಿಸಿಕೊಂಡಿವೆ. ವಿಚಿತ್ರ ಕಥೆಗಳನ್ನು ತಂದು ಜನರ ಮುಂದಿಟ್ಟಾಗ, ಜನರು ಕೂಡ ಒಪ್ಪಿ ಅಪ್ಪಿಕೊಂಡಿದ್ದುಂಟು. ಆ ಮೂಲಕ ಅವರು ಹೊಸ ಪ್ರತಿಭೆಗಳನ್ನು ಹೊರತಂದಿದ್ದಾರೆ. ಅಂದಹಾಗೆ, ಚಂದ್ರಶೇಖರ್‌ ಬಂಡಿಯಪ್ಪ ಅವರ “ದೇವರ ಕಾಲೋನಿ” ಟೋಟಲ್‌ ಕನ್ನಡ ಮೂಲಕ ರಿಲೀಸ್‌ ಆಗುತ್ತಿದೆ. ಇದು ನಿರ್ದೇಶಕರ ಮತ್ತೊಂದು ಹೊಸ ಹೆಜ್ಜೆ. ಅವರ ಹೊಸ ಪ್ರಯತ್ನಕ್ಕೆ ಗೆಲುವು ಸಿಗಲಿ ಎಂಬುದು “ಸಿನಿಲಹರಿ” ಹಾರೈಕೆ.

Related Posts

error: Content is protected !!