ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಶುರು…! ಕೆಜಿಎಫ್-‌2 ಫೋಟೋ ಹಾಕಿ ಕ್ಯಾಪ್ಷನ್‌ ಕೊಟ್ಟ ಪ್ರಶಾಂತ್‌ ನೀಲ್‌

ಹೊಂಬಾಳೆ ಯುಟ್ಯೂಬ್‌ ಚಾನೆಲ್‌ನಲ್ಲಿ ಜನವರಿ 8ರಂದು ಯಶ್‌ ಬರ್ತ್‌ಡೇಗೆ ಟೀಸರ್‌ ಬಿಡುಗಡೆ

 

ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್‌” ಬಹುದೊಡ್ಡ ಬಜೆಟ್‌ ಸಿನಿಮಾ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸುದ್ದಿಯಾದ ಚಿತ್ರವೂ ಹೌದು. ಈಗ “ಕೆಜಿಎಫ್‌ -೨” ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಯಂತೂ ಇದೆ. ಅದಕ್ಕೆ ಕಾರಣ, ಮೊದಲ ಭಾಗ ಮಾಡಿದ ಮೋಡಿ. ಈಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

ಯಶ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಜನವರಿ 8 ರಂದು ಯಶ್‌ ಅವರ ಹುಟ್ಟುಹಬ್ಬ ಇರುವದರಿಂದ, ಅಂದೇ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ಜೋರು ತಯಾರಿ ನಡೆಸುತ್ತಿದೆ. ಈ ಟೀಸರ್‌ ಹೊಂಬಾಳೆ ಫಿಲಂಸ್‌ ಯುಟ್ಯೂಬ್‌ ಚಾನೆಲ್‌ನಲ್ಲೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ “ಕೆಜಿಎಫ್-‌೨” ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.

ಆ ಕುತೂಹಲಕ್ಕೆ ಕಾರಣವೆಂದರೆ, ನಿರ್ದೇಶಕ ಪ್ರಶಾಂತ್ ನೀಲ್ ಅವರು, “ಕೆಜಿಎಫ್-೨” ಚಿತ್ರದ ಹೊಸದೊಂದು ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಫೋಟೋದೊಂದಿಗೆ “ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ” ಎಂಬ ಕ್ಯಾಪ್ಷನ್‌ ಕೂಡ ಹಾಕಿದ್ದಾರೆ. “ಕೆಜಿಎಫ್ -2” ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಒಂದಷ್ಟು ಬಾಕಿ ದೃಶ್ಯಗಳು, ಕೆಲ ಕೆಲಸಗಳನ್ನು ಮಾತ್ರ ಚಿತ್ರತಂಡ ಉಳಿಸಿಕೊಂಡಿದ್ದು, ಅದರ ಕಡೆ ಗಮನಹರಿಸಿದೆ.

 

ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ದತ್‌ ಅಭಿನಯಿಸಿರುವುದರಿಂದ ಇನ್ನಷ್ಟು ನಿರೀಕ್ಷೆಯನ್ನೂ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಯಶ್‌ ಹುಟ್ಟುಹಬ್ಬದ ಬಳಿಕ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಯೋಚನೆ ತಂಡದ್ದು. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿರುವುದು ವಿಶೇಷತೆಗಳಲ್ಲೊಂದು.

ಇನ್ನು, ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ಈ ಅದ್ಧೂರಿ ಚಿತ್ರಕ್ಕೆ ನಿರ್ಮಾಪಕರು. ಭುವನ್‌ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತವಿದೆ.

 

Related Posts

error: Content is protected !!