ವಿಶೇಷ ಲೇಖನ: ದೇಶಾದ್ರಿ ಹೊಸ್ಮನೆ
ಕೊರೋನಾವೂ ಸೇರಿದಂತೆ ಅನೇಕ ಕಾರಣಗಳಿಗೆ ರಾಜ್ಯದಲ್ಲೀಗ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಹಾಕುತ್ತಿವೆ. ಆಗೊಂದು ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚಿದ್ದ ಚಿತ್ರಮಂದಿರಗಳ ಸಂಖ್ಯೆ ಈಗ ೫೦೦ಕ್ಕೆ ಬಂದಿದೆ ಎನ್ನುತ್ತವೆ ಮೂಲಗಳು. ಭವಿಷ್ಯದ ದಿನಗಳಲ್ಲಿ ಈ ಸಂಖ್ಯೆ ನೂರಿನ್ನೂರಕ್ಕೆ ಇಳಿದರೂ ಅಚ್ಚರಿ ಇಲ್ಲ. ಇದಕ್ಕೆ ಪರ್ಯಾಯವಾಗಿ ಸಿನಿಮಾದ ಹೊಸ ಮಾರುಕಟ್ಟೆ ಓಟಿಟಿ. ಅಮೆಜಾನ್, ನೆಟ್ ಫ್ಲಿಕ್ಸ್ ಸೇರಿದಂತೆ ಇದಕ್ಕೂ ಈಗ ಹತ್ತಾರು ಪ್ಲಾಟ್ ಫಾರ್ಮ್ ಇವೆ. ಆದರೂ ಕನ್ನಡಕ್ಕೆ ಯೋಗ್ಯವಾದ್ದದೊಂದು ಓಟಿಟಿ ಫ್ಲಾಟ್ ಫಾರ್ಮ್ ಈಗಲೂ ಇಲ್ಲ. ಅದೇ ಕಾರಣಕ್ಕೆ ಹೊಂಬಾಳೆ ಫಿಲಂಸ್ ನಂತಹ ಒಂದು ದೊಡ್ಡ ಸಂಸ್ಥೆ ಕನ್ನಡ ಸಿನಿಮಾಗಳಿಗೇ ಮೀಸಲಾಗಿ ಒಂದು ಒಟಿಟಿ ಪ್ಲಾಟ್ ಫಾರ್ಮ್ ಶುರು ಮಾಡಿದರೆ ಕನ್ನಡ ಸಿನಿಮಾ ಉಳಿಯುತ್ತೆ, ಹಾಗೆಯೇ ಕನ್ನಡ ಸಿನಿಮಾ ನಂಬಿ ಬಂದ ನಿರ್ಮಾಪಕರೂ ಉಳಿಯಬಲ್ಲರು ಅಲ್ಲವೇ?
ಹೊಂಬಾಳೆ ಫಿಲಂಸ್… ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸೌಂಡ್ ಮಾಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ. ಇದು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಅನ್ನೋದು ಮತ್ತೊಂದು ಹೆಮ್ಮೆ. ಅದಕ್ಕೆ ಕಾರಣ ʼಕೆಜಿಎಫ್ʼ ಚಿತ್ರ. ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ʼಕೆಜಿಎಫ್ʼ ಸಂಚಲನ ಸೃಷ್ಟಿ ಮಾಡಿದ ರೀತಿ ಈಗಲೂ ಸೋಜಿಗ. ಸಮುದ್ರದೊಳಗೆ ಇದಕ್ಕಿದ್ದಂತೆ ದೊಡ್ಡ ಅಲೆಯೇ ಎದ್ದು ಬಂದಂತೆ ಭಾರತೀಯ ಚಿತ್ರರಂಗಕ್ಕೆ ಸುನಾಮಿಯಂತೆ ಅಪ್ಪಳಿಸಿದ್ದು ಕೆಜಿಎಫ್ ಚಿತ್ರ. ಈ ಸಿನಿಮಾ ಸೃಷ್ಟಿಸಿದ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ ಅರೆಕ್ಷಣ ಕನ್ನಡದತ್ತ ತಿರುಗಿ ನೋಡಿದ್ದೀಗ ಇತಿಹಾಸ. ಕನ್ನಡದ ಚಿತ್ರವೊಂದು ಆ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ್ದು ಅದೇ ಮೊದಲು. ಅದರ ಕೀರ್ತಿ ಹೊಂಬಾಳೆ ಫಿಲಂಸ್‌ನ ರೂವಾರಿ ವಿಜಯ್ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರದ್ದು.
ಕೆಜಿಎಫ್ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಸಿದ ಆ ಮ್ಯಾಜಿಕ್ ಬಗ್ಗೆ ಎಷ್ಟು ವರ್ಣಿಸಿದರು ಕಮ್ಮಿಯೇ. ಅದರ ದೊಡ್ಡ ಪ್ರಭಾವವೇ ಕನ್ನಡ ಸಿನಿಮಾರಂಗದಲ್ಲೂ ಎದ್ದು ನಿಂತ ಪ್ಯಾನ್ ಇಂಡಿಯಾ ಟ್ರೆಂಡ್. ಅದೇ ಕಾರಣಕ್ಕೆ ಇವತ್ತು ಇಡಿಯಾ ಲೆವೆಲ್ ನಲ್ಲಿ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್ ಎನ್ನುವಷ್ಟರ ಮಟ್ಟಿಗೆ ಕೆಜಿಎಫ್ ದೊಡ್ಡ ಹವಾ ಸೃಷ್ಟಿಸಿದೆ. ಹಾಗಂತ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್ ಅಂತ ನಾವು ಹೇಳುತ್ತಿಲ್ಲ. ಅಷ್ಟೇ ಯಾಕೆ, ಈ ಮಾತನ್ನು ಹೊಂಬಾಳೆ ಫಿಲಂಸ್ ನ ರೂವಾರಿ ವಿಜಯ್ ಕಿರಗಂದೂರು ಕೂಡ ಒಪ್ಪುವುದಿಲ್ಲ. ಯಾಕಂದ್ರೆ ಕನ್ನಡ ಸಿನಿಮಾದ ಇತಿಹಾಸ ದೊಡ್ಡದಿದೆ. ಆದರೆ ಬದಲಾದ ಕಾಲದ ಸಿನಿಮಾ ಮಾರ್ಕೆಟ್ ದೃಷ್ಟಿಯಲ್ಲಿ ಕನ್ನಡ ಸಿನಿಮಾ ಅಂದ್ರೆ ಬಾಲಿವುಡ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಒಂದು ಕ್ಷಣ ಅಚ್ಚರಿಯಾಗುವಂತೆ ಮಾಡಿದ್ದು ಕೆಜಿಎಫ್ ಚಿತ್ರ ಎನ್ನುವುದಕ್ಕೆ ಬಹುಶ: ಯಾರದೇ ತಕರಾರು ಇರದು.
ಅಷ್ಟು ಮಾತ್ರವಲ್ಲ, ʼಕೆಜಿಎಫ್ʼ ಬಂದು ಹೋದ ನಂತರ ಉಂಟಾದ ಪ್ರಭಾವ ಸಾಕಷ್ಟಿದೆ. ಆನಂತರ ಕನ್ನಡದಲ್ಲಿ ಶುರುವಾದ ಪ್ಯಾನ್ ಇಂಡಿಯಾಗಳ ದೊಡ್ಡ ಪಟ್ಟಿಯೇ ಅದಕ್ಕೆ ಸಾಕು. ಇರಲಿ, ಅದು ಕೆಜಿಎಫ್ ನ ತಾಕತ್ತು. ಅಲ್ಲಿಂದೀಗ ಕನ್ನಡದ ಸಿನಿಮಾ ಪ್ರೇಕ್ಷಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರೋದ್ಯಮವೇ ʼಕೆಜಿಎಫ್ ೨ʼ ಚಿತ್ರದ ರಿಲೀಸ್ ದಿನಕ್ಕೆ ಕಾಯುತ್ತಿದೆ. ಹಾಗೆಯೇ ದೊಡ್ಡ ಕುತೂಹಲ ಹೊಂಬಾಳೆ ಫಿಲಂಸ್ ಬ್ಯಾನರ್‌ನ ಇತರೆ ಸಿನಿಮಾಗಳ ಮೇಲೂ ಇದೆ. ಪ್ರಭಾಸ್ ಅಭಿನಯದ ʼಸಲಾರ್ʼ ಮೊದಲ್ಗೊಂದು ಬುಧವಾರವಷ್ಟೇ ಅನೌನ್ಸ್ ಆದ ಹೊಂಬಾಳೆ ಫಿಲಂಸ್ ನ 12 ನೇ ಚಿತ್ರ ʼರಾಘವೇಂದ್ರ ಸ್ಟೋರ್ಸ್ʼ ಮೇಲೂ ಅಷ್ಟೇ ನಿರೀಕ್ಷೆ ಇದೆ. ಹೊಂಬಾಳೆ ಫಿಲಂಸ್ ಅಂದ್ರೆ ಸಿನಿಮಾ ಪ್ರೇಕ್ಷಕ ಪಾಲಿಗೆ ಅಂತಹ ಕುತೂಹಲ ಹಾಗೂ ನಿರೀಕ್ಷೆಗೆ ಕಾರಣವಾಗಿದ್ದು ʼಕೆಜಿಎಫ್ʼ ಚಿತ್ರ.
ವಿಜಯ್ ಕಿರಗಂದೂರು, ನಿರ್ಮಾಪಕ
ಆ ಕತೆ ಇರಲಿ, ಕನ್ನಡದ ಸಿನಿಮಾ ಚೈತನ್ಯ ಕೊರೋನಾ ಕಾಲದಲ್ಲೂ ಕಿಂಚಿತ್ತು ಉಡುಗದಂತೆ ಮಾಡಿದ್ದು ಹೊಂಬಾಳೆ ಫಿಲಂಸ್ ಇನ್ನೊಂದು ಮಹತ್ಕಾರ್ಯ. ಯಾಕಂದ್ರೆ, ಕೊರೋನಾ ಅಂತ ಇಡೀ ಉದ್ಯಮ ಈಗಲೂ ಕೈ ಕಟ್ಟಿ ಕುಳಿತಿದೆ. ಅವಕಾಶ ಇದ್ದಾಗ್ಯೂ ಈಗ ಸಿನಿಮಾ ರಿಲೀಸ್ ಮಾಡೋದಿಕ್ಕೆ ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇದೆ. ಇನ್ನು ದೊಡ್ಡ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಗಳೇ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಮನಸ್ಸು ಮಾಡದೆ, ತಲೆ ಮೇಲೆ ಕೈ ಹೊತ್ತು ಕುಳಿತಿವೆ. ಕೊರೋನಾದ ಈ ಕಾಲದಲ್ಲಿ ದುಡ್ಡು ಹಾಕಿ ಸಿನಿಮಾ ಮಾಡಿದರೆ, ಮುಂದೆ ಹೇಗೋ ಎನೋ ಎನ್ನುವ ಆತಂಕ ಅವರಿಗೆ ಮನೆ ಮಾಡಿದೆ. ಆದರೆ ಹೊಂಬಾಳೆ ಫಿಲಂಸ್ ಮಾತ್ರ, ಕೊರೋನಾ ಕಾಲದಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಅನೌನ್ಸ್ ಮಾಡುತ್ತಾ, ಕನ್ನಡ ಚಿತ್ರೋದ್ಯಮಕ್ಕೆ ಹೊಸ ಚೈತನ್ಯ ತುಂಬಿದ್ದು ಮಾತ್ರವಲ್ಲ, ನೆರೆ ಚಿತ್ರೋದ್ಯಮದ ಮಂದಿ ಅಚ್ಚರಿಯಾಗುವಂತೆ ಮಾಡಿದೆ.
ಇದು ಸ್ವಂತಕ್ಕೋ, ಸ್ವಾರ್ಥಕ್ಕೋ ಅದು ಏನೇ ಆಗಿದ್ದರೂ, ಒಂದು ಸಿನಿಮಾ ನಿರ್ಮಾಣವಾಗುತ್ತಿದೆ ಅಂದರೆ ಅದರಿಂದ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಹಾಗೆಯೇ ಉದ್ಯಮ ಕೂಡ ಜೀವಂತವಾಗುಳಿದಿರುತ್ತದೆ ಎನ್ನುವುದು ಅಷ್ಟೇ ಸತ್ಯ. ಒಂದಲ್ಲ ಎರಡಲ್ಲ ಇವತ್ತು ಆರು ಸಿನಿಮಾಗಳು ಹೊಂಬಾಳೆ ಫಿಲಂಸ್ ಮೂಲಕ ಪ್ರೊಡಕ್ಷನ್ ಹಂತದಲ್ಲಿವೆ. ಅಲ್ಲಿಗೆ ನೂರು, ಇನ್ನೂರು ಮಾತ್ರವಲ್ಲ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ಹಾಗೆಯೇ ಕೊರೋನಾ ಎಂಬ ಸಂಕಷ್ಟದಿಂದ ಚಿತ್ರೋದ್ಯಮ ಹೊರ ಬರುವುದಕ್ಕೆ ಇದು ದೊಡ್ಡ ಸಹಕಾರಿ ಆಗಿದೆ. ಆ ಮಟ್ಟಿಗೆ ಹೊಂಬಾಳೆ ಫಿಲಂಸ್ ನ ಸಿನಿಮಾ ಮೇಲಿನ ಕಾಳಜಿಗೆ ಒಂದು ಸೆಲ್ಯೂಟ್.
ಯಾಕಂದ್ರೆ, ಇದು ಸಿನಿಮಾ ಮೇಲಿನ ಪ್ರೀತಿಗಾಗಿ ಮಾಡುತ್ತಿರುವ ಕೆಲಸ. ಅದೊಂದೇ ಕಾರಣಕ್ಕೆ ದುಡ್ಡಿಗಿಂತ ಹೆಚ್ಚಾಗಿ ಕಲೆಗೆ ಬೆಲೆ ಕೊಟ್ಟು ಹೊಂಬಾಳೆ ಫಿಲಸ್ ಕನ್ನಡದ ಸ್ಟಾರ್ ಗಳಿಗೆ, ಪ್ರತಿಭಾವಂತ ನಿರ್ದೇಶಕರನ್ನೆಲ್ಲ ತನ್ನ ಕುಟುಂಬಕ್ಕೆ ಸೇರಿಸಿಕೊಂಡು ಸಿನಿಮಾ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅದೇ ಹಾದಿಯಲ್ಲಿ ಅದೀಗ ಇನ್ನೊಂದು ಸಾಹಸ ಮಾಡಿದರೆ ಉದ್ಯಮವೂ ಉಳಿಯುತ್ತದೆ. ಆ ಕೆಲಸವೇ ಒಟಿಟಿ ಪ್ಲಾಟ್ ಫಾರ್ಮ್. ಹಾಗಂತ ಕನ್ನಡ ಸಿನಿಮಾಗಳ ಮಾರುಕಟ್ಟೆಗೆ ಬೇರಾವುದೇ ಒಟಿಟಿ ಪ್ಲಾಟ್ ಫಾರ್ಮ್ ಇಲ್ಲಿಲ್ಲ ಅಂತಲ್ಲ. ಅಮೆಜಾನ್, ನೆಟ್ ಪ್ಲಿಕ್ಸ್ ಸೇರಿದಂತೆ ಸಾಕಷ್ಟು ಒಟಿಟಿ ಪ್ಲಾಟ್ ಫಾರ್ಮ್ ಇಲ್ಲಿವೆ. ಆದರೆ ಕನ್ನಡಕ್ಕೆ ಯೋಗ್ಯವಾದ ಒಂದು ಒಟಿಟಿ ಪ್ಲಾಟ್ ಫಾರ್ಮ್ ಇಲ್ಲ. ಇದ್ದವರು ಕೂಡ ಕನ್ನಡದ ನಿರ್ಮಾಪಕರಿಗೆ ಪೂರಕವಾಗಿಲ್ಲ. ಅದೊಂದು ಬೇಸರ ಈಗ ಇಡೀ ಚಿತ್ರೋದ್ಯಮವನ್ನು ಆವರಿಸಿಕೊಂಡಿದೆ.
ಅದು ದೂರವಾಗಬೇಕಾದರೆ ಕನ್ನಡದ ನಿರ್ಮಾಪಕರನ್ನು ಉಳಿಸುವಂತಹ, ಕಂಟೆಂಟ್ ಆಧರಿತ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಂತಹ ಒಂದು ಚೆಂದದ ಉದ್ಯಮ ಸ್ನೇಹಿ ಪ್ಲಾಟ್ ಫಾರ್ಮ್ ಕನ್ನಡಕ್ಕೆ ಬೇಕಿದೆ. ಆ ಕೆಲಸವನ್ನು ಹೊಂಬಾಳೆ ಫಿಲಂಸ್‌ಗೆ ಮಾಡುವ ಸಾಮಾರ್ಥ್ಯವಿದೆ.ತೆಲುಗಿನಲ್ಲೀಗ ನಟ ಅಲ್ಲು ಅರ್ಜುನ್ ಆಹಾ ಹೆಸರಲ್ಲೊಂದು ಒಟಿಟಿ ಪ್ಲಾಟ್ ಫಾರ್ಮ್ ಶುರು ಮಾಡಿದ್ದಾರೆ. ಅದು ತೆಲುಗು ಸಿನಿಮಾ, ವೆಬ್ ಸೀರಿಸ್ ಗೆ ಮಾತ್ರ ಸೀಮಿತವಾಗಿದೆ. ಅಂತಹದೇ ಒಂದು ಪ್ಲಾಟ್ ಫಾರ್ಮ್ ಅನ್ನು ಹೊಂಬಾಳೆ ಫಿಲಂಸ್ ಶುರು ಮಾಡಿದರೆ, ಕನ್ನಡದ ಅದೆಷ್ಟೋ ಸ್ಟಾರ್ ಗಳು, ನಿರ್ದೇಶಕರು, ತಂತ್ರಜ್ಜರಿಗೆ ಕೆಲಸ ಕೊಟ್ಟ ಹಾಗೆಯೇ, ಕನ್ನಡದ ಅದೆಷ್ಟೋ ನಿರ್ಮಾಪಕರನ್ನು ಉಳಿಸುವ ಕೆಲಸ ಆಗುತ್ತದೆ. ಹೊಂಬಾಳೆ ಫಿಲಂಸ್ ನಂತಹ ದೈತ್ಯ ಸಂಸ್ಥೆಗೆ ಇದೇನು ಕಷ್ಟದ ಕೆಲಸವೇನು ಅಲ್ಲ. ಮನಸ್ಸು ಮಾಡಬೇಕು ಅಷ್ಟೇ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ