Categories
ಸಿನಿ ಸುದ್ದಿ

20 ದಿನ 100 ಕೋಟಿ ಇದು ರಾಬರ್ಟ್‌ ದಾಖಲೆ! ನೂರು ಕೋಟಿ ಕ್ಲಬ್‌ ಸೇರಿತು ದರ್ಶನ್‌ ಸಿನಿಮಾ

ಕನ್ನಡ ಚಿತ್ರರಂಗದ ಮಟ್ಟಿಗೆ ಈ ಸಮಯದಲ್ಲಿ ಇದು ದೊಡ್ಡ ಸುದ್ದಿಯೇ. ಹೌದು, “ರಾಬರ್ಟ್‌” ನಿರೀಕ್ಷೆಯಂತೆಯೇ, ದೊಡ್ಡ ಸಕ್ಸಸ್‌ ಕಂಡಿದೆ. ಎಲ್ಲರಲ್ಲೂ ಇದ್ದದ್ದು ಒಂದೇ ಒಂದು ಪ್ರಶ್ನೆ, ಈ ಸಿನಿಮಾ 100 ಕೋಟಿ ಕ್ಲಬ್‌ ಸೇರುತ್ತಾ ಅನ್ನೋದು. ಅದಕ್ಕೀಗ ಉತ್ತರವೂ ಸಿಕ್ಕಿದೆ. ಹೌದು, “ರಾಬರ್ಟ್‌” ಚಿತ್ರ ಈಗ ನೂರು ಕೋಟಿ ಕ್ಲಬ್‌ ಸೇರಿದ್ದಾಗಿದೆ. ಕೇವಲ 20 ದಿನದಲ್ಲಿ ಈ ನೂರು ಕೋಟಿ ಗಳಿಕೆ ಕಂಡಿರೋದು ಸಹಜವಾಗಿಯೇ ಸಿನಿಮಾತಂಡಕ್ಕೆ ಖುಷಿ ಹೆಚ್ಚಿಸಿದೆ.

ಕೊರೊನಾ ನಂತರದ ದಿನಗಳಲ್ಲಿ ಚಿತ್ರರಂಗದ ಕಥೆ ಏನಪ್ಪಾ ಅಂದುಕೊಂಡೋರಿಗೆ ಈಗ “ರಾಬರ್ಟ್‌” ಧೈರ್ಯ ಕೊಟ್ಟಿರೋದು ಸುಳ್ಳಲ್ಲ. ಒಂದೊಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಟ್ಟಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದರ್ಶನ್‌ ಸಿನಿಮಾ ಅಂದರೆ, ಒಂದಷ್ಟು ಜನರಿಗೆ ಕ್ರೇಜ್‌ ಇದ್ದೇ ಇರುತ್ತೆ. “ರಾಬರ್ಟ್‌” ಟೈಟಲ್‌ ಅನೌನ್ಸ್‌ ಮಾಡಿದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ ಮಾರ್ಚ್‌ 11 ರಂದು ಬಿಡುಗಡೆಯಾಗಿದ್ದೇ ತಡ, ಎಲ್ಲರಲ್ಲೂ ಮತ್ತಷ್ಟು ಉತ್ಸಾಹ ಹೆಚ್ಚಿಸಿತ್ತು.

ಅವರ ಫ್ಯಾನ್ಸ್‌ಗಂತೂ “ರಾಬರ್ಟ್‌” ಭರ್ಜರಿ ಹಬ್ಬದೂಟದಂತಾಗಿತ್ತು. “ರಾಬರ್ಟ್‌”ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಮೆರೆದರು. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್‌ ಪ್ರರ್ದಶನ್‌ ಕಂಡಿತು. ಇನ್ನು, ತೆಲುಗಿನಲ್ಲೂ ಕೂಡ “ರಾಬರ್ಟ್‌” ದೊಡ್ಡ ಹವಾ ಎಬ್ಬಿಸಿದ್ದು ನಿಜ. ಅಲ್ಲೂ ಕೂಡ ದರ್ಶನ್‌ ಫ್ಯಾನ್ಸ್‌ ಸಿನಿಮಾವನ್ನು ಗೆಲ್ಲಿಸಿದರು.

ಕನ್ನಡದ ಮಟ್ಟಿಗೆ “ರಾಬರ್ಟ್‌” ಕೊರೊನಾ ಬಳಿಕ ದೊಡ್ಡ ಓಪನಿಂಗ್‌ ಕೊಟ್ಟಿದೆ. ಒಂದಷ್ಟು ಸಿನಿಮಾ ನಿರ್ಮಾಪಕರಿಗೂ ಅದು ಧೈರ್ಯ ಕೊಟ್ಟಿದೆ. ದರ್ಶನ್‌ ಗಲ್ಲಾ ಪೆಟ್ಟಿಗೆ ಸುಲ್ತಾನ್‌ ಅನ್ನುವುದನ್ನು ಪುನಃ ಸಾಬೀತುಪಡಿಸಿದ್ದಾರೆ. ಇದೇ ಖುಷಿಯಲ್ಲೇ “ರಾಬರ್ಟ್‌” ಚಿತ್ರತಂಡ ಇತ್ತೀಚೆಗೆ ಸಂಭ್ರಮ ಆಚರಿಸಿಕೊಂಡಿದೆ. ‌ನಿರ್ದೇಶಕ ತರುಣ್‌ ಸುಧೀರ್,ನಿರ್ಮಾಪಕ ಉಮಾಪತಿ, ವಿನೋದ್‌ ಪ್ರಭಾಕರ್‌ ಸೇರಿದಂತೆ ಚಿತ್ರತಂಡದ ಹಲವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

Categories
ಸಿನಿ ಸುದ್ದಿ

ಅವಲಕ್ಕಿ ಪವಲಕ್ಕಿ ಸಿನಿಮಾಗೆ ಮತ್ತೊಂದು ಗರಿ- ರಾಜಸ್ತಾನ ಚಿತ್ರೋತ್ಸವದಲ್ಲಿ ಸಿಕ್ತು ಪ್ರಶಸ್ತಿ: ಹೊಸಬರ ಕಥೆಗೆ ಸಿಕ್ಕ ಮನ್ನಣೆ ಇದು

ಕನ್ನಡದ ಬಹುತೇಕ ಸಿನಿಮಾಗಳು ಈಗಾಗಲೇ ಸಾಗರದಾಚೆಯೂ ಸದ್ದು ಮಾಡಿವೆ. ಮಾಡುತ್ತಲೇ ಇವೆ. ಈಗಲೂ ಅದೇ ಹಾದಿಯಲ್ಲೂ ಇವೆ. ಈಗಾಗಲೇ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಕನ್ನಡದ ಅನೇಕ ಸಿನಿಮಾಗಳ ಸಾಲಿಗೆ “ಅವಲಕ್ಕಿ ಪವಲಕ್ಕಿ” ಸಿನಿಮಾ ಕೂಡ ಸೇರಿದೆ. ಹೌದು, ರಾಜಸ್ತಾನ ಇಂಟರ್ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಕಥೆ ಪ್ರಶಸ್ತಿ ಲಭಿಸಿದೆ.

ಮಾರ್ಚ್‌ 20 ರಿಂದ 24ರವರೆಗೆ ಜೈಪುರ್‌ ಮತ್ತು ಜೋದ್‌ಪುರದಲ್ಲಿ ನಡೆದ ಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ಸಂದಿದೆ. ಈ ಚಿತ್ರೋತ್ಸವದಲ್ಲಿ ದೇಶ, ವಿದೇಶಗಳಿಂದಲೂ ಸಾಕಷ್ಟು ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಒಂದಷ್ಟು ಸಿನಿಮಾಗಳ ನಡುವೆಯೂ ಕನ್ನಡದ “ಅವಲಕ್ಕಿ ಪವಲಕ್ಕಿ” ಸಿನಿಮಾ ಕಥೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಅವಲಕ್ಕಿ ಪವಲಕ್ಕಿ” ಅಡ್ವೆಂಜರ್‌ ಡ್ರಾಮಾ ಕಥಾಹಂದರದ ಸಿನಿಮಾ. ದುರ್ಗ ಪ್ರಸಾದ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯುವ ರಾಜು ಅವರ ಕಥೆ ಚಿತ್ರಕ್ಕಿದೆ. ಶ್ರೀಪ್ರಣವ ಬ್ಯಾನರ್‌ನಲ್ಲಿ ರಂಜಿತ ಸುಬ್ರಹ್ಮಣ್ಯ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ದೀಪಕ್‌ ಪಟೇಲ್‌, ಸಿಂಚನ ಚಂದ್ರ ಮೋಹನ್‌, ಸಮರ್ಥ್‌ ರಂಪುರ್‌ ಭಾರಧ್ವಜ್‌, ಶ್ರೇಯಾ, ಹನಮಂತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜುಬಿನ್‌ ಪೌಲ್‌ ಸಂಗೀತವಿರುವ ಚಿತ್ರಕ್ಕೆ ನಿರೀಕ್ಷಿತ್‌ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ಬರುವ ಏಪ್ರಿಲ್‌ ಅಥವಾ ಮೇನಲ್ಲಿ ತೆರೆಗೆ ಬರಲಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈಗಾಗಲೇ ಈ ಚಿತ್ರ ದೇಶ, ವಿದೇಶಗಳ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದೆ ಎಂಬ ಹೆಮ್ಮೆ ಚಿತ್ರತಂಡಕ್ಕಿದೆ. ಇಷ್ಟರಲ್ಲೇ ಟ್ರೇಲರ್‌ ಮತ್ತು ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಈ ಚಿತ್ರದ ವಿಶೇಷತೆ ಬಗ್ಗೆ ಹೇಳಲೇಬೇಕು.

ಈಗಾಗಲೇ ಈ ಚಿತ್ರ, ಸುಮಾರು ೩೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಲವು ಅಂತಾರಾಷ್ಟ್ರ ಮಟ್ಟದ ಚಿತ್ರೋತ್ಸವಗಳಲ್ಲಿ ಚಿತ್ರದ ಹಲವು ವಿಭಾಗಕ್ಕೆ ಪ್ರಶಸ್ತಿ ಸಂದಿದೆ. ಅತ್ಯುತ್ತಮ ನಿರ್ದೇಶ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಮೇಕಪ್‌, ಕಾಸ್ಟ್ಯೂಮ್‌, ಛಾಯಾಗ್ರಾಹಕ, ಪೋಸ್ಟರ್‌, ಮ್ಯೂಸಿಕ್‌ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಅಮೆರಿಕಾ, ನ್ಯೂಯಾರ್ಕ್‌, ಸ್ವೀಡನ್‌, ಪೋರ್ಟ್‌ ಬ್ಲೈರ್‌, ಸ್ಲೊವಕಿಯಾ, ಟೊರೆಂಟೊ, ಪ್ಯಾರಿಸ್‌, ಈರೋಪ್‌, ಇಂಡೊ ಫ್ರೆಂಚ್, ಸಿಂಗಾಪುರ್‌ ಸೇರಿದಂತೆ ಇನ್ನೂ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈಗಾಗಲೇ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದೆ.

Categories
ಸಿನಿ ಸುದ್ದಿ

ಟೈಗರ್ ಪ್ರಭಾಕರ್ ವೃತ್ತಿ ಬದುಕಿನ ಹಲವು ವಿಶೇಷತೆಗಳು: ಆ ಐವರು ಸೂಪರ್‌ಸ್ಟಾರ್ಸ್‌ ಜೊತೆ ನಟಿಸಿದ ಏಕೈಕ ಸ್ಟಾರ್ ನಟ ಈ ಟೈಗರ್!

  • ಲೇಖನ ಟಿ.ಜಿ. ನಂದೀಶ್, ತೀರ್ಥಹಳ್ಳಿ

ಟೈಗರ್‌ ಪ್ರಭಾಕರ್‌ ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಬಹುಮುಖ ಪ್ರತಿಭೆ. ಒಂಥರಾ ಸೆಲ್ಫ್ ಮೇಡ್ ಸ್ಟಾರ್. ವಿಲನ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು, ವಿಚಿತ್ರ ಮ್ಯಾನರಿಸಂ, ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನಸ ಸೆಳೆದು, ವಿಲನ್ ಆಗಿ ಪ್ರಮೋಟ್ ಆಗಿ ಬಹು ಬೇಡಿಕೆಯ ವಿಲನ್ ಆಗಿ ಹೆಸರು ಗಳಿಸಿ, ನಿಧಾನವಾಗಿ ತಮ್ಮ ಇಮೇಜ್ ಬದಲಿಸಿಕೊಂಡು ಮಾಸ್ ಹೀರೋ ಆಗಿ ಜನಮಾನಸದಲ್ಲಿ ಉಳಿದ ಅಪರೂಪದ ನಟ ಇವರು. ಮಾರ್ಚ್ 30, 1950 ಪ್ರಭಾಕರ್ ‌ಅವರ ಜನ್ಮದಿನ. ಇಂದು ಅವರು ಇದ್ದಿದ್ದರೆ ಅವರಿಗೆ 70 ವರ್ಷ ತುಂಬಿರುತ್ತಿತ್ತು.

ಇವತ್ತು ಎಲ್ಲೆಡೆ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸುದ್ದಿ. ಇಲ್ಲಿನ ನಟರು ಬೇರೆ ಭಾಷೆಯಲ್ಲಿ ನಟಿಸಿದಾಗ ಕೊಂಡಾಡ್ತೀವಿ, ಸಂಭ್ರಮಿಸ್ತೀವಿ. ಒಬ್ಬ ಕಲಾವಿದನ‌ ಪ್ರತಿ ನಡೆಯನ್ನು, ಮಾತನ್ನು, ಸಾಧನೆಯನ್ನು ಗಮನಿಸುತ್ತದೆ. ನಮ್ಮ ಚಿತ್ರದ ನಾಯಕ, ನಾಯಕಿ, ಪೋಷಕ ನಟ ಪರಭಾಷೆಯ ಚಿತ್ರಗಳಲ್ಲಿ ನಟಿಸಿದಾಗ ಅವರು ನಮ್ಮ ಭಾಷೆಯ ಕೀರ್ತಿ ಪತಾಕೆಯನ್ನು ಹೊರರಾಜ್ಯದಲ್ಲಿ ಹಾರಿಸಿದರು ಎನ್ನುತ್ತೇವೆ. ಅದು ತಪ್ಪಲ್ಲ. ಆ ಸಾಧನೆ ನಿಜವಾಗಿಯೂ ಹೊಗಳಿಕೆಗೆ ಅರ್ಹ. ಇಲ್ಲೀಗ ಹೇಳಹೊರಟಿರುವುದು ಕನ್ನಡಿಗರು ಮಾತ್ರವಲ್ಲ ಪರಭಾಷಿಗರೂ ಮೆಚ್ಚಿಕೊಂಡ ಅಪರೂಪದ ನಟ ಟೈಗರ್ ಪ್ರಭಾಕರ್ ಕುರಿತು. ಮಾರ್ಚ್‌ 30 ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ಒಂದಷ್ಟು ಮಾಹಿತಿ ನೀಡುವ ಪ್ರಯತ್ನವಿದು.

ಟೈಗರ್‌ ಪ್ರಭಾಕರ್‌ ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಬಹುಮುಖ ಪ್ರತಿಭೆ. ಒಂಥರಾ ಸೆಲ್ಫ್ ಮೇಡ್ ಸ್ಟಾರ್. ವಿಲನ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು, ವಿಚಿತ್ರ ಮ್ಯಾನರಿಸಂ, ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನಸ ಸೆಳೆದು, ವಿಲನ್ ಆಗಿ ಪ್ರಮೋಟ್ ಆಗಿ ಬಹು ಬೇಡಿಕೆಯ ವಿಲನ್ ಆಗಿ ಹೆಸರು ಗಳಿಸಿ, ನಿಧಾನವಾಗಿ ತಮ್ಮ ಇಮೇಜ್ ಬದಲಿಸಿಕೊಂಡು ಮಾಸ್ ಹೀರೋ ಆಗಿ ಜನಮಾನಸದಲ್ಲಿ ಉಳಿದ ಅಪರೂಪದ ನಟ ಇವರು. ಮಾರ್ಚ್ 30, 1950 ಪ್ರಭಾಕರ್ ‌ಅವರ ಜನ್ಮದಿನ. ಇಂದು ಅವರು ಇದ್ದಿದ್ದರೆ ಅವರಿಗೆ 70 ವರ್ಷ ತುಂಬಿರುತ್ತಿತ್ತು. ಆದರೆ, ಪ್ರಭಾಕರ್ ಮಾಡಿರುವ ಅದ್ವಿತೀಯ ಸಾಧನೆ ಬಹುತೇಕ ನೋಟಿಫೈ ಆಗಿಲ್ಲ. ಆ ಪೈಕಿ ಒಂದಷ್ಟು ದಾಖಲಿಸುವ ಪ್ರಯತ್ನ ಇಲ್ಲಾಗಿದೆ.

ಪ್ರಭಾಕರ್ ತಮ್ಮ ನಟನಾ ಬದುಕಿನ ಸಮಯದಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದರು. ಮೋಸ್ಟ್ ಪಾಪ್ಯುಲರ್ ಪ್ಯಾನ್ ಇಂಡಿಯ ಆಕ್ಟರ್ ಆಗಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದ ಪ್ರಭಾಕರ್ ಪಂಚಭಾಷಾ ನಟ. ಮತ್ತು ಎಲ್ಲಾ ಕಡೆಯಲ್ಲಿಯು ಅವರಿಗೆ ಮಾಸ್ ಇಮೇಜ್ ಇತ್ತು.
ಕನ್ನಡದಲ್ಲಿ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಅವರಂತಹ ಹಿರಿಯ ಸ್ಟಾರ್ ನಟರುಗಳ ಎದುರು ವಿಲನ್ ಆಗಿ ಮಿಂಚಿದ ಪ್ರಭಾಕರ್ ಈ ಎಲ್ಲಾ ನಟರು ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ಖಳನಾಯಕನ ಇಮೇಜ್ ದಾಟಿ ನಾಯಕನ ಸ್ಥಾನಕ್ಕೆ ಬಡ್ತಿ ಪಡೆದರು. ಬರೀ ನಟನೆಗೆ ಸೀಮಿತವಾಗದೆ ನಿರ್ದೇಶನ, ನಿರ್ಮಾಣಕ್ಕು ಇಳಿದು ಅಲ್ಲಿಯೂ ತಕ್ಕಮಟ್ಟಿಗೆ ಯಶಸ್ಸು ಕಂಡರು.

ಆಗಿನ ಕಾಲದಲ್ಲಿ ಒಬ್ಬ ಹೊಸ ಹೀರೋ ಇರಲಿ, ಹೊಸ ವಿಲನ್ ಉದಯಿಸುವುದು ಕಷ್ಟವಾಗಿತ್ತು. ಯಾಕಂದ್ರೆ ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಸುಂದರ್ ಕೃಷ್ಣ ಅರಸ್, ಸುಧೀರ್ ಅವರಂಥ ಅತಿರಥರು ಖಳನಾಯಕರಾಗಿ ಬಹುದೊಡ್ಡ ಖ್ಯಾತಿ ಗಳಿಸಿದ್ದರು. ಅಂಥ ಸಂದರ್ಭದಲ್ಲಿಯು ಪ್ರಭಾಕರ್ ವಿಶಿಷ್ಟ ನಟನಾಶೈಲಿ ಎಲ್ಲರ ಗಮನ ಸೆಳೆಯಿತು, ಅವರನ್ನು ಬೆಳೆಸಿತು. ಖಳನಾಗಿ ಮಿಂಚಿದ ಪ್ರಭಾಕರ್ ನಾಯಕನ‌ ಪಟ್ಟಕ್ಕೆ ಏರಿದ ಬಳಿಕ ಪೋಲಿಸ್ ಮತ್ತು ಸಿಬಿಐ ಅಧಿಕಾರಿಯ ಪಾತ್ರಗಳಲ್ಲಿ ಹೆಚ್ಚು ಜನಪ್ರಿಯರಾದರು‌. ಅತಿ ಕಡಿಮೆ ಅವಧಿಯಲ್ಲಿ ಸರಿಸುಮಾರು 450 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಇದರಲ್ಲಿ ನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ ಚಿತ್ರಗಳಿವೆ. ಪ್ರಭಾಕರ್ ಕನ್ನಡದ ನಂತರ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿದ್ದರು ಎಂಬುದು ವಿಶೇಷ. ಅಲ್ಲಿ ಚಿರಂಜೀವಿ ಚಿತ್ರಗಳೆಂದರೆ ಅಲ್ಲಿ ಖಳನಾಗಿ ಪ್ರಭಾಕರ್ ಇರಲೇಬೇಕು ಎನ್ನುವ ಮಟ್ಟಕ್ಕೆ ಹವಾ ಸೃಷ್ಟಿಸಿದ್ದರು ಪ್ರಭಾಕರ್.‌ ಇವರಿಬ್ಬರ ಟಕ್ಕರ್ ಮಾಸ್ ಅಭಿಮಾನಿಗಳ ಮನಸೂರೆ ಮಾಡಿತ್ತು. ತೆಲುಗು ಚಿತ್ರರಂಗದಲ್ಲಿ ಪ್ರಭಾಕರ್ ಎಂಬುದು ಕಾಮನ್ ನೇಮ್ ಆಗಿತ್ತು.

ಪ್ರಭಾಕರ್, ಪ್ರಭಾಕರ್ ರೆಡ್ಡಿ ಎಂಬ ಹೆಸರುಗಳನ್ನು ಹೊಂದಿದ್ದ ಅಸಂಖ್ಯಾತರು ಅಲ್ಲಿದ್ದರು. ಈ ಕಾರಣಕ್ಕೆ ನಮ್ಮ ಪ್ರಭಾಕರ್ ಅಲ್ಲಿ ಕನ್ನಡ ಪ್ರಭಾಕರ್ ಎಂದೇ‌ ಮನೆಮಾತಾಗಿದ್ದರು. ಇಲ್ಲಿ ಟೈಗರ್ ಎಂಬ ವಿಶೇಷಣ ಹೆಸರಿಗೆ ಅಂಟಿಕೊಂಡಿರುವ ಹಾಗೆ ಅಲ್ಲಿ ಕನ್ನಡ ಅವರ ಹೆಸರಿನೊಂದಿಗೆ ಬೆರೆತಿತ್ತು.
ಚಿರಂಜೀವಿ ಅವರಿಗಂತು ಪ್ರಭಾಕರ್ ಒಂಥರಾ ಲಕ್ಕಿ ಚಾರ್ಮ್ ಆಗಿದ್ದರು. ಚಿರಂಜೀವಿ ಎದುರು ಪ್ರಭಾಕರ್ ಖಳನಾಗಿ ಅಭಿನಯಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಚಟ್ಟಾನಿಕಿ ಕಲ್ಲು ಲೇವು, ರೋಷಗಾಡು, ಬಿಲ್ಲಾ ಬಾಷಾ, ಜ್ವಾಲಾ, ಜಗದೇಕವೀರುಡು ಅತಿಲೋಕ ಸುಂದರಿ, ರಾಕ್ಷಸುಡು, ಕೊಡಮ ಸಿಂಹ, ಜೇಬು ದೊಂಗ ಸೇರಿದಂತೆ ಹತ್ತಾರು ಚಿತ್ರಗಳಲ್ಲಿ ಎದುರಾಳಿಗಳಾಗಿ ಮಿಂಚಿದ್ದಾರೆ‌.
ರಜನೀಕಾಂತ್ ಮತ್ತು ಪ್ರಭಾಕರ್ ಬದುಕಿನಲ್ಲಿ ಅನೇಕ ಸಾಮ್ಯತೆಗಳಿವೆ. ಇಬ್ಬರು ಯಾವುದೇ ಬಿಗ್ ಬ್ಯಾಕ್ ಗ್ರೌಂಡ್‌ ಇಲ್ಲದೆ ಪ್ರತಿಭೆ ಮತ್ತು ಪರಿಶ್ರಮದಿಂದ ಬೆಳೆದವರು. ಖಳನಾಗಿ ಮನೆಮಾತಾಗಿ ನಾಯಕನಾಗಿ ಹೊಸ ಬೆಲೆ ನೆಲೆ ಕಂಡುಕೊಂಡವರು. ರಜನೀಕಾಂತ್ ನಾಯಕನಾಗಿ ಬೆಳೆದ ಬಳಿಕ ಅವರ ಬಹುನಿರೀಕ್ಷೆಯ ಚಿತ್ರಗಳಿಗೆ ಪ್ರಭಾಕರ್ ವಿಲನ್ ಆಗಿದ್ದರು. ಇವರಿಬ್ಬರ ನಡುವಿನ ತೆರೆ ಮೇಲಿನ‌ ಕಾದಾಟ ನೋಡುಗರ ಮೆಚ್ಚುಗೆ ಗಳಿಸಿತ್ತು.

ಕನ್ನಡದಲ್ಲಿ ಪ್ರಭಾಕರ್ ನಟಿಸಿ, ನಿರ್ದೇಶಿಸಿದ ‘ಬಾಂಬೆ ದಾದಾ’ ಚಿತ್ರವು ‘ಪಾಂಡ್ಯನ್’ ಹೆಸರಿನಲ್ಲಿ ತಮಿಳಿಗೆ ರಿಮೇಕ್ ಆಯ್ತು. ಅಲ್ಲಿ ನಾಯಕನಾಗಿ ಮಿಂಚಿದ್ದು ರಜನೀಕಾಂತ್. ಕನ್ನಡ ಚಿತ್ರರಂಗದ ನಾಯಕ ಬರೆದ ಕಥೆಗೆ ರಜನೀಕಾಂತ್ ಹೀರೋ ಆಗಿದ್ದು ಒಂದು ವಿಶಿಷ್ಟ ದಾಖಲೆಯಾಗಿದೆ. ರಜನೀಕಾಂತ್ ನಟನೆಯ ‘ಅಣ್ಣಾಮಲೈ’ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಅಬ್ಬರಿಸಿದ್ದು, ರಜನಿಗೆ ಸರಿಸಮನಾಗಿ ಮಿಂಚಿದ್ದು ಇದೇ ಪ್ರಭಾಕರ್. ರಜನೀಕಾಂತ್ ನಟನೆಯ ಸೂಪರ್ ಹಿಟ್ ‘ಮುತ್ತು’ ಚಿತ್ರದಲ್ಲಿಯು ಪ್ರಭಾಕರ್ ಎಸ್ ಪಿ ಪ್ರತಾಪ್ ರಾಯುಡು ಪಾತ್ರ ಮಾಡಿದ್ದರು. ‘ಚಕ್ರವ್ಯೂಹ’ ಚಿತ್ರ ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಬಳಿಕ ಈಶ್ವರಿ ಪ್ರೊಡಕ್ಷನ್ಸ್ ನ ಮಾಲೀಕರಾದ ಎನ್ ವೀರಾಸ್ವಾಮಿ ಮತ್ತು ವಿ ರವಿಚಂದ್ರನ್ ಇದೇ ಚಿತ್ರವನ್ನು ಹಿಂದಿಯಲ್ಲಿ ‘ಇನ್ಕ್ವಿಲಾಬ್’ ಹೆಸರಲ್ಲಿ, ಅಮಿತಾಭ್ ಬಚ್ಚನ್ ನಾಯಕತ್ವದಲ್ಲಿ ನಿರ್ಮಿಸಿದರು. ಆಗ ಚಕ್ರವ್ಯೂಹ ಚಿತ್ರದಲ್ಲಿ ಮಾಡಿದ್ದ ಅನಿಲ್ ರಾಜ್ ಹೆಸರಿನ ಖಳನ‌ ಪಾತ್ರವನ್ನು ಹಿಂದಿಯಲ್ಲಿಯು ಪ್ರಭಾಕರ್ ಅವರೇ ನಿರ್ವಹಿಸಿದರು. ಆ ಮೂಲಕ ಬಾಲಿವುಡ್ ನ ಬಿಗ್ ಬಿ ಎದುರು ನಟಿಸಿ ಸೈ ಎನಿಸಿಕೊಂಡರು ಪ್ರಭಾಕರ್.

ಮಲಯಾಳಂ ಚಿತ್ರಗಳಲ್ಲಿಯು ಬ್ಯಾಡ್ ಮ್ಯಾನ್ ರೋಲ್ ಗಳ ಮೂಲಕ ಪ್ರಭಾಕರ್ ಜನಪ್ರಿಯತರ ಗಳಿಸಿದರು. ಸೂಪರ್ ಸ್ಟಾರ್ ಮುಮ್ಮುಟಿ ಚಿತ್ರಗಳಲ್ಲಿ ನಟಿಸಿ ಕೇರಳದಲ್ಲಿಯು ಅಭಿಮಾನಿಗಳನ್ನು ಪಡೆದರು. ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಸ್ಟಾರ್ ಗಳಾದ, ಆಯಾ ಚಿತ್ರರಂಗದ ಮುಕುಟವಾದ ಡಾ. ರಾಜ್ ಕುಮಾರ್, ಅಮಿತಾಭ್ ಬಚ್ಚನ್, ರಜನೀಕಾಂತ್, ಚಿರಂಜೀವಿ, ಮುಮ್ಮುಟಿಯವರೊಡನೆ ನಟಿಸಿದ ಏಕೈಕ ಸ್ಟಾರ್ ನಟ ಟೈಗರ್ ಪ್ರಭಾಕರ್. ಈ ಮಹಾನ್ ಸಾಧನೆ ಮತ್ಯಾರು‌ ಮಾಡಲು ಸಾಧ್ಯವಾಗಿಲ್ಲ ಅನ್ನುವುದನ್ನು ಇಲ್ಲಿ ಗಮನಿಸಬೇಕು. ಇದಲ್ಲದೆ ಮಹೇಶ್ ಬಾಬು ತಂದೆ ಕೃಷ್ಣ, ತಮಿಳನ ಸ್ಟಾರ್ ನಟ ವಿಜಯಕಾಂತ್, ಕೃಷ್ಣಂ ರಾಜು, ನಂದಮೂರಿ ಬಾಲಕೃಷ್ಣ ಅವರೊಡನೆಯು ಪ್ರಭಾಕರ್ ಸ್ಕ್ರೀನ್ ಶೇರ್ ಮಾಡಿದ್ದಾರೆ.ಕನ್ನಡದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತನಾಗ್, ಶಂಕರ್ ನಾಗ್, ರಾಜೇಶ್, ಲೋಕೇಶ್, ರವಿಚಂದ್ರನ್, ಶಿವರಾಜ್ ಕುಮಾರ್, ದೇವರಾಜ್, ರಮೇಶ್ ಸೇರಿದಂತೆ ಬಹುತೇಕರೊಡನೆ ಪ್ರಭಾಕರ್ ನಟಿಸಿದ್ದಾರೆ.

ಒಬ್ಬ ಮಾಸ್ ನಾಯಕನಿಗೆ ಇರಬೇಕಾದ ಕಲರ್, ಖದರ್, ಹೈಟು, ವೇಯ್ಟು, ಟ್ಯಾಲೆಂಟ್‌, ಮ್ಯಾನರಿಸಂ ಎಲ್ಲವು ಸರಿಯಾಗಿ, ಸಮನಾಗಿ ಇದ್ದ ಕಲಾವಿದ ಪ್ರಭಾಕರ್. “ಟೈಗರ್” ಎಂಬ ಚಿತ್ರ ಮಾಡಿ ಆ ಬಳಿಕ ಟೈಗರ್ ಪ್ರಭಾಕರ್ ಎಂದೇ ಜನಪ್ರಿಯರಾದರು. ಹಾಗೆ ನೋಡಿದರೆ, ಕನ್ನಡದ ಮೊದಲ ಆರಡಿ ಕಟೌಟ್ ಅಂದರೆ, ಆರಡಿ ಎತ್ತರದ ಮಾಸ್ ನಟ ಟೈಗರ್ ಪ್ರಭಾಕರ್ ಎನ್ನಲ್ಲಡ್ಡಿಯಿಲ್ಲ. ಮಾಸ್ ಪಾತ್ರಗಳ ಜೊತೆಗೆ ಎಮೋಷನಲ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ಪ್ರಭಾಕರ್ ಕನ್ನಡ ಚಿತ್ರರಂಗದ ಹೆಮ್ಮೆಯಂತೂ ಹೌದು.
ಪ್ರಭಾಕರ್ ನಟನೆಯ ‘ಕಲಿಯುಗ ಭೀಮ’ ಚಿತ್ರದ ‘ಕೈ ತುತ್ತು ಕೊಟ್ಟವ್ಳೆ ಐ ಲವ್ ಯು ಮೈ‌ ಮದರ್ ಇಂಡಿಯಾ’ ಆಲ್ ಟೈಮ್ ಫೇವರಿಟ್ ಹಾಡುಗಳಲ್ಲೊಂದು. ಕಥೆ, ಚಿತ್ರಕಥೆ ರಚನೆಯ ಜೊತೆಗೆ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ಇದರ ಜೊತೆಗೆ ಒಂದು ಸಿನಿಮಾದಲ್ಲಿ ಸಿನಿಮಾಟೋಗ್ರಫಿ‌ ಮಾಡಿದ ಹೆಗ್ಗಳಿಕೆಯು ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಅವರೊಬ್ಬ ಒಳ್ಳೆಯ ನಟನಷ್ಟೇ ಅಲ್ಲ, ಅತ್ಯದ್ಭುತ ಟೆಕ್ನಿಷಿಯನ್ ಸಹ ಆಗಿದ್ದರು. ಕಂಗ್ಲೀಷ್ ಶೈಲಿಯ ಸಂಭಾಷಣೆ ಮತ್ತು ಡೈಲಾಗ್ ಡೆಲಿವರಿಯಲ್ಲಿನ ವಿಭಿನ್ನತೆ ಮೂಲಕ ಇವತ್ತಿಗೂ ಪದೇ ಪದೇ ನೆನಪಾಗುತ್ತಾರೆ. ಎಫ್‌ಎಂನಲ್ಲೂ ಕೂಡ ಪ್ರಭಾಕರ್‌ ಧ್ವನಿಯ ಅನುಕರಣೆ ನಿರಂತರ. ಯಾವುದೇ ಆರ್ಕೇಸ್ಟ್ರಾಗಳಿರಲಿ ಅಲ್ಲಿ ಪ್ರಭಾಕರ್‌ ಡೈಲಾಗ್‌ಗಳು ಸುರಿಮಳೆ ಆಗೋದು ಸಹಜ. ಅಷ್ಟರಮಟ್ಟಿಗೆ ಅವರ ವಾಯ್ಸ್‌ ಕೂಡ ಫೇಮಸ್‌ ಅನ್ನೋದು ವಿಶೇಷ.

Categories
ಸಿನಿ ಸುದ್ದಿ

ದಾರಿ ಯಾವುದಯ್ಯಾ ವೈಕುಂಠಕೆ ಸಿನಿಮಾ ಕಥೆಗೆ ಸಿಕ್ತು ರಾಜಸ್ತಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ ಪ್ರಶಸ್ತಿ

ರಾಜಸ್ತಾನದ ಜೋಧ್‌ಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರಕ್ಕೆ ಉತ್ತಮ ಕಥೆ ಪ್ರಶಸ್ತಿ ಲಭಿಸಿದೆ. ಚಿತ್ರ ವೀಕ್ಷಿಸಿದ ಜನರಿಂದಲೂ ಒಳ್ಳೆಯ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಈಗಾಗಲೇ ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನ ಕಂಡು ಸುಮಾರು 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆ [ಪೈಕಿ ನಾಲ್ಕು “ಬೆಸ್ಟ್ ಡೈರೆಕ್ಟರ್” ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲಾ ಕಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂಭ್ರಮದಲ್ಲಿದೆ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ಚಿತ್ರದಲ್ಲಿ ವರ್ಧನ್ ನಾಯಕರಾಗಿ ನಟಿಸಿದ್ದಾರೆ.

ಅವರೊಂದಿಗೆ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್‌ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ ಇತರರು ನಟಿಸಿದ್ದಾರೆ. ಲೋಕಿ ಸಂಗೀತವಿದೆ. ನಿತಿನ್ ಛಾಯಾಗ್ರಹಣ ಮಾಡಿದರೆ, ಮುತ್ತುರಾಜ್ ಸಂಕಲನವಿದೆ.

Categories
ಸಿನಿ ಸುದ್ದಿ

ತನ್ನ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಿಸಲು ಸಜ್ಜಾದ ಹೊಂಬಾಳೆ ಫಿಲಂಸ್

‌ಕೊರೊನಾ ಎರಡನೇ ಅಲೆ ಈಗ ಆತಂಕ ಮೂಡಿಸಿದೆ. ಈಗಾಗಲೇ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಲಸಿಕೆಯೂ ಬಂದಿದೆ. ಒಂದಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರೂ, ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಒಂದಷ್ಟು ಮಂದಿ ಸ್ವತಃ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಕೆಲ ಸಂಸ್ಥೆಗಳು ಕೂಡ ತಮ್ಮ ತಮ್ಮ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸುವ ಕೆಲಸಕ್ಕೆ ಮುಂದಾಗಿವೆ. ಅದೇ ನಿಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿರುವ ಹೊಂಬಾಳೆ ಫಿಲಂಸ್‌ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದಾಗಿ ಕುಟುಂಬದವರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸಲು ಸಜ್ಜಾಗಿದ್ದಾರೆ.
ತಮ್ಮ ಕಂಪೆನಿಯಲ್ಲಿ ದುಡಿಮೆ ಮಾಡುತ್ತಿರುವ ಉದ್ಯೋಗಿಗಳ ಆರೋಗ್ಯ ಮುಖ್ಯ ಎಂದು ಹೇಳಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ಉಚಿತ ಕೊರೊನಾ ಲಸಿಕೆ ಹಾಕಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರೀಗ ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ಹಾಕಿಸಲು ತಯಾರಿ ನಡೆಸಿದ್ದಾರೆ.

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ವಿಜಯ್‌ ಕಿರಗಂದೂರು, “ಕೊರೊನಾ ಮುಕ್ತ ಆಗಲು ಲಸಿಕೆ ಬಹಳ ಮುಖ್ಯ. ನೀವೆಲ್ಲರೂ ಸಹ ಲಸಿಕೆ ಹಾಕಿಸಿಕೊಳ್ಳಿ ಮತ್ತು ಆರೋಗ್ಯವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್‌ ಮೂಲಕ ಈ ಕಾರ್ಯಕ್ಕೆ ಮುಂದಾಗಿರುವ ವಿಜಯ್‌ ಕಿರಗಂದೂರು ಅವರ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಗುತ್ತಿದೆ. ಸದ್ಯ ಈ ಹೊಂಬಾಳೆ ಫಿಲಂಸ್‌ ಸಂಸ್ಥೆ ಎರಡು ಬಿಗ್‌ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಬಿಡುಗಡೆಗೆ ಎದುರು ನೋಡುತ್ತಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಹಾಗೂ “ಕೆಜಿಎಫ್-2” ಚಿತ್ರ ಬಿಡುಗಡೆ ದಿನ ಘೋಷಿಸಿವೆ. ತೆಲುಗಿನ ನಟ ಪ್ರಭಾಸ್ ಅವರ “ಸಲಾರ್” ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ.

Categories
ಸಿನಿ ಸುದ್ದಿ

ಶಿವಣ್ಣ ಸಾಮಾಜಿಕ ಸಂದೇಶ- ಎಲ್ಲರೂ ಮಾಸ್ಕ್‌ ಧರಿಸುವಂತೆ ಮನವಿ

ಕೊರೊನಾ ಹಾವಳಿ ಕಡಿಮೆ ಆಯ್ತು ಅನ್ನುವ ಹೊತ್ತಲ್ಲೆ ಪುನಃ ಎರಡನೇ ಅಲೆ ಶುರುವಾಗಿದೆ. ಎಲ್ಲೆಡೆ ಮತ್ತೆ ಆತಂಕ ಮನೆ ಮಾಡಿದೆ. ಈಗಷ್ಟೇ ಎಲ್ಲಾ ಕ್ಷೇತ್ರಗಳು ತನ್ನ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುತ್ತಿವೆ. ಕನ್ನಡ ಚಿತ್ರರಂಗ ಕೂಡ ಮೆಲ್ಲನೆ ಮೇಲೇಳುತ್ತಿದೆ. ಇದರ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಶುರುವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಇದೆ. ಇತ್ತೀಚೆಗಷ್ಟೇ, ಚಿತ್ರಮಂದಿರಗಳತ್ತ ಪ್ರೇಕ್ಷಕರು ಮುಖ ಮಾಡುತ್ತಿದ್ದಾರೆ.

ಸ್ಟಾರ್‌ ಚಿತ್ರಗಳೂ ಸಹ ಬಿಡುಗಡೆ ಕಂಡು, ಹೊಸ ದಿಕ್ಕಿನತ್ತ ಸಾಗುತ್ತಿವೆ. ಕೊರೊನಾ ಎರಡನೇ ಅಲೆ ಸುದ್ದಿ ಜೋರಾಗುತ್ತಿದ್ದಂತೆಯೇ, ಅತ್ತ, ಚಿತ್ರಮಂದಿರಗಳಲ್ಲಿ ಅರ್ಧ ಭರ್ತಿ ಬಗ್ಗೆಯೂ ಪ್ರಸ್ತಾಪವಾಗಿತ್ತು. ಚಿತ್ರರಂಗ ಒಗ್ಗಟ್ಟಾಗಿ ಪೂರ್ಣ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಗೆ ಸರ್ಕಾರ ಕೂಡ ಸ್ಪಂದಿಸಿದೆ. ಆದರೆ, ಜನರು ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಂಡು, ಅಂತರ ಕಾಪಾಡಿಕೊಂಡರೆ, ಯಾವದೇ ಭಯ ಇರೋದಿಲ್ಲ. ಈ ಕುರಿತು ಸರ್ಕಾರ ಮನವರಿಕೆ ಮಾಡುತ್ತಿದೆ. ಸ್ಟಾರ್‌ ನಟರುಗಳು ಕೂಡ ತಮ್ಮ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ, ಸ್ಯಾಂಡಲ್‌ವುಡ್‌ ಸ್ಟಾರ್‌ ಶಿವರಾಜಕುಮಾರ್‌ ಕೂಡ ವಿಡಿಯೊ ಮೂಲಕ ಸಾಮಾಜಿಕ ಸಂದೇಶ ರವಾನಿಸಿದ್ದಾರೆ.

ಎಲ್ಲರೂ ಮಾಸ್ಕ್‌ ಧರಿಸುವಂತೆ ಮನವಿ ಮಾಡಿದ್ದಾರೆ.
ವಿಡಿಯೊವೊಂದರಲ್ಲಿ ಅವರು ಹೇಳಿಕೊಂಡಿರುವುದಿಷ್ಟು., “ಎಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕೊರೊನಾ ಎರಡನೇ ಅಲೆ ಸ್ಟಾರ್ಟ್‌ ಆಗ್ತಾ ಇರೋದು. ದಯವಿಟ್ಟು ಕೈ ಮುಗಿದು ಕೇಳಿಕೊಳ್ತಾ ಇದ್ದೇನೆ. ಪ್ರತಿಯೊಬ್ಬರೂ ಮಾಸ್ಕ್‌ ಹಾಕಿ, ಈ ಕೊರೊನಾ ಓಡಿಸಿ, ಮತ್ತೆ ಲಾಕ್‌ಡೌನ್‌ಗೆ ಒಳಗಾಗೋದು ಬೇಡ. ನಾನೇಕೆ ಮಾಸ್ಕ್‌ ಹಾಕೊಂಡ್ ಮಾತಾಡ್ತಿಲ್ಲ ಅಂದರೆ, ನಾನು ಹೇಳಿದ್ದು ನಿಮಗೆಲ್ಲರಿಗೂ ಕೇಳಬೇಕು. ನೀವೆಲ್ಲರೂ ಅದನ್ನು ಫಾಲೋ ಮಾಡ್ತೀರಿ ಅಂತ ನಂಬಿದ್ದೇನೆ. ದಯವಿಟ್ಟು, ಮರಿಬೇಡಿ ಮಾಸ್ಕ್‌ ಹಾಕ್ಕೊಳ್ಳಿ, ಸ್ಯಾನಿಟೈಸ್‌ ಮಾಡ್ಕೊಳ್ಳಿ, ಸೋಶಿಯಲ್‌ ಡಿಸ್ಟೆನ್ಸಗ್‌ ಇಟ್ಕೊಳ್ಳಿ ನಮಸ್ಕಾರ ಥ್ಯಾಂಕ್ಯು…” ಎಂದಿದ್ದಾರೆ. ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ಅತ್ತ, ಸಿನಿಮಾ ಮಂದಿ ಕೂಡ ಖುಷಿಯಲ್ಲಿದ್ದಾರೆ. ಈ ನಡುವೆ ಪ್ರೇಕ್ಷಕರು ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಂಡು ಅಂತರ ಕಾಪಾಡಿಕೊಂಡರೆ ಕೊರೊನಾ ಹಾವಳಿ ತಡೆಯಬಹುದು. ಈ ನಿಟ್ಟಿನಲ್ಲಿ ಫ್ಯಾನ್ಸ್‌ ತಮ್ಮ ಸ್ಟಾರ್‌ ನಟರ ಮನವಿಗೆ ಸ್ಪಂದಿಸಬೇಕಿದೆ.

Categories
ಸಿನಿ ಸುದ್ದಿ

ಶ್ರೀನಗರ ಕಿಟ್ಟಿ ಮತ್ತೆ ಬಂದ್ರು – ರಕ್ತ ಸಿಕ್ತ ಕಥೆ ಹೇಳಲಿದೆ ಗೌಳಿ ! ಫಸ್ಟ್‌ ಲುಕ್‌ಗೆ ಭರ್ಜರಿ ರೆಸ್ಪಾನ್ಸ್

ಕನ್ನಡದಲ್ಲಿ ಒಂದಷ್ಟು ನಾಯಕ ನಟರು, ತೆರೆ ಮೇಲೆ ಭರ್ಜರಿಯಾಗಿ ಮಿಂಚಿ ಕಾಲ ಕ್ರಮೇಣ ಸದ್ದಿಲ್ಲದೆ ಇದ್ದವರು ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸಾಲಿಗೆ ಶ್ರೀನಗರ ಕಿಟ್ಟಿ ಕೂಡ ಸೇರಿದ್ದಾರೆ. ಹಾಗಂತ, ಶ್ರೀನಗರ ಕಿಟ್ಟಿ ಅವರಿಗೆ ಅವಕಾಶಗಳೇ ಇಲ್ಲವೆಂದಲ್ಲ, ಸಿಕ್ಕ ಅಲ್ಲೊಂದು, ಇಲ್ಲೊಂದು ಸಿನಿಮಾಗಳನ್ನು ಮಾಡುತ್ತಲೇ, ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಶತದಿನದ ಚಿತ್ರಗಳನ್ನು ಕೊಡುವ ಮೂಲಕ ಇಂದಿಗೂ ಸುದ್ದಿಯಲ್ಲಿರುವ ಶ್ರೀನಗರ ಕಿಟ್ಟಿ, ಒಳ್ಳೆಯ ಕಥೆ, ಪಾತ್ರವನ್ನು ಎದುರು ನೋಡುತ್ತಿದ್ದರು. ಆದರೂ, ಅತಿಥಿ ಪಾತ್ರಗಳ ಮೂಲಕ ಸಿನಿಮಾಗಳಲ್ಲಿ ನಟಿಸಿರುವುದೂ ಉಂಟು. ಈಗ ಮತ್ತೊಂದು ಭರ್ಜರಿ ಸಿನಿಮಾ ಮೂಲಕ ಎಂಟ್ರಿಯಾಗುವುದರ ಜೊತೆಗೆ ತಮ್ಮ ಎರಡನೇ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ.

ಹೌದು, ಶ್ರೀನಗರ ಕಿಟ್ಟಿ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಗೌಳಿ” ಎಂದು ನಾಮಕರಣ ಮಾಡಲಾಗಿದೆ. ಇಂದು ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ. ಶ್ರೀನಗರ ಕಿಟ್ಟಿ ಅವರನ್ನು ಈ ಹಿಂದೆ ನೋಡಿದವರೆಲ್ಲರೂ, ಹೊಸ ಗೆಟಪ್‌ನಲ್ಲಿ ಕಾಣುತ್ತಿದ್ದಾರೆ ಅಂದುಕೊಳ್ಳುತ್ತಿದ್ದರು. ಆ ಹೊಸ ಗೆಟಪ್‌ಗೆ ಕಾರಣ ಏನೆಂಬುದು ಈಗ ರಿವೀಲ್‌ ಆಗಿದೆ. ಅವರೂ ಉದ್ದನೆಯ ದಾಡಿ ಬಿಟ್ಟು, ಕೂದಲು ಬಿಟ್ಟಿದ್ದು, ಹೊಸ ಕಥೆಯ ಚಿತ್ರಕ್ಕಾಗಿ ಅನ್ನುವುದನ್ನು ಈಗ ಸ್ಪಷ್ಟಪಡಿಸಿದ್ದಾರೆ. “ಗೌಳಿ” ಸಿನಿಮಾದ ಅವರ ಲುಕ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಸಿನಿಮಾ ಅನಿಸದೇ ಇರದು. ಅದರಲ್ಲೂ ಶ್ರೀನಗರ ಕಿಟ್ಟಿ ಅವರನ್ನು ಆ ಲುಕ್‌ನಲ್ಲಿ ನೋಡಿದವರಿಗೆ ಫುಲ್‌ ರಾ… ಕ್ಯಾರೆಕ್ಟರ್‌ ಎನಿಸುತ್ತೆ. ರಕ್ತಸಿಕ್ತವಾದ ಮೊಗದಲ್ಲಿ,‌ ಖರಾಬ್‌ ಲುಕ್ ಕೊಟ್ಟು, ಹೆಗಲ ಮೇಲೊಂದು ಕೊಡಲಿ ಇಟ್ಟುಕೊಂಡಿರುವ ಶ್ರೀನಗರ ಕಿಟ್ಟಿ, ರಕ್ತಮಯ ದೇಹದೊಂದಿಗೆ ಲುಕ್‌ ಕೊಟ್ಟಿದ್ದಾರೆ. ಅಲ್ಲಿಗೆ ಇದೊಂದು ಹೊಸ ಕಥೆ ಹೇಳಲಿರುವ ಚಿತ್ರ ಎಂಬುದು ಗೊತ್ತಾಗುತ್ತದೆ.

ಇನ್ನು, ಅವರ ಈ ಗೆಟಪ್‌ ನೋಡಿದವರಿಗೆ ಹಿಂದೆ ಎಸ್.ನಾರಾಯಣ್‌ ಅವರ “ಅಪ್ಪಯ್ಯ” ಸಿನಿಮಾ ನೆನಪಾಗದೇ ಇರದು. ಅದೂ ಕೂಡ ಒಂದೊಳ್ಳೆಯ ಬಯಲು ಸೀಮೆಯ ಸಿನಿಮಾ ಆಗಿತ್ತು. ಪಕ್ಕಾ “ರಾ” ಫೀಲ್‌ ಕೊಡುವ ಸಿನಿಮಾ ಆಗಿ ಒಂದಷ್ಟು ಜನರಲ್ಲಿ ಭಾವುಕತೆ ಹೆಚ್ಚಿಸಿತ್ತು. ಬಹಳ ದಿನಗಳ ನಂತರ ಶ್ರೀನಗರ ಕಿಟ್ಟಿ ಅವರೀಗ “ಗೌಳಿ” ಮೂಲಕ ಎಂಟ್ರಿಕೊಡುತ್ತಿರುವುದು ವಿಶೇಷತೆಗಳಲ್ಲೊಂದು. ಇಷ್ಟು ದಿನಗಳ ಕಾಲ ಕಾದು, ವಿಭಿನ್ನ ಕಥಾಹಂದರ ಇರುವ ಸಿನಿಮಾ ಮಾಡುತ್ತಿರುವ ಖುಷಿ ಅವರಿಗೂ ಇದೆ.ಇನ್ನು, ಈ “ಗೌಳಿ” ಚಿತ್ರಕ್ಕೆ ಸೂರ ನಿರ್ದೇಶಕರು. ಇವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಮೂಲತಃ ಫೋಟ್ರೋಗ್ರಫಿ ಮಾಡಿಕೊಂಡಿದ್ದ ಇವರು, ನಿರ್ದೇಶನ ವಿಭಾಗಕ್ಕೆ ಜಿಗಿದು, ಅಲ್ಲೊಂದಷ್ಟು ಕೆಲಸ ಕಲಿತು ಆ ಅನುಭವ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡೇ ಫೀಲ್ಡ್‌ಗಿಳಿದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಬಗ್ಗೆ ಹೇಳುವ ನಿರ್ದೇಶಕ ಸೂರಿ, “ಇದೊಂದು ಪಕ್ಕಾ ಮಾಸ್‌ ಸಿನಿಮಾ. ಒಂದು ನೈಜ ಘಟನೆಯ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಕಥೆ, ಚಿತ್ರಕಥೆ ನನ್ನದೇ. “ಗೌಳಿ” ಸಿನಿಮಾಗೆ ಶ್ರೀನಗರ ಕಿಟ್ಟಿ ಅವರೇ ಸೂಕ್ತ ಎನಿಸಿ, ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವರಿಗೆ ಈ ಚಿತ್ರ ಹೊಸ ಅನುಭವ ಕಟ್ಟಿಕೊಡುವುದು ಗ್ಯಾರಂಟಿ.

ಈ ಚಿತ್ರಕ್ಕೆ ರಘು ಸಿಂಗಂ ಅವರು ನಿರ್ಮಾಪಕರು. ಅವರಿಗೂ ಇದು ಮೊದಲ ನಿರ್ಮಾಣದ ಚಿತ್ರವಿದು. ಇನ್ನು, ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಅವರ ಸಂಗೀತವಿದೆ. ಛಾಯಾಗ್ರಹಣದ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಸದ್ಯ ಭುವನ್‌ ಗೌಡ ಅವರ ಅಸಿಸ್ಟೆಂಟ್‌ ಪ್ರಜ್ವಲ್‌ಗೌಡ ಅವರ ಬಳಿ ಮಾತುಕತೆ ನಡೆಯುತ್ತಿದೆ. ಉಳಿದಂತೆ ನಾಯಕಿ, ಕಲಾವಿದರ ಆಯ್ಕೆ ಆಗಬೇಕಿದೆ. ಸಿನಿಮಾದಲ್ಲಿ ಶರತ್‌ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವೇ ಇರಲಿದೆ. ಸದ್ಯ ಸ್ಕ್ರಿಪ್ಟ್‌ ಅಂತಿಮಗೊಂಡಿದ್ದು, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಹೊರಡಲಿದ್ದೇವೆ. ಬಹುತೇಕ ಯಾಣ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು ೪೦ ದಿನಗಳ ಕಾಲ ಚಿತ್ರೀಕರಣ ಸಾಗಲಿದೆ” ಎಂದು ವಿವರಿಸುವ ನಿರ್ದೇಶಕ ಸೂರ, ಇದು ಇಂಥದ್ದೇ ಜಾನರ್‌ಗೆ ಸೇರುವ ಸಿನಿಮಾ ಅಲ್ಲ, ಇಲ್ಲಿ ಎಲ್ಲವೂ ಇದೆ. ಪ್ರೀತಿ, ದ್ವೇಷ, ಅಸೂಯೆ, ಭಾವನೆ, ಭಾವುಕತೆ ಹೀಗೆ ಎಲ್ಲಾ ರೀತಿಯ ಅಂಶಗಳು ಒಳಗೊಂಡಿವೆ ಎಂಬುದು ನಿರ್ದೇಶಕರ ಮಾತು.
ಅದೇನೆ ಇರಲಿ, ಶ್ರೀನಗರ ಕಿಟ್ಟಿ, ಎಲ್ಲೋ ಮರೆಯಾಗಿಬಿಟ್ಟರು ಎನ್ನುವ ಹೊತ್ತಿಗೆ “ಗೌಳಿ” ಮೂಲಕ ಕಾಣಿಸಿಕೊಂಡು ಅಚ್ಚರಿ ನೀಡುತ್ತಿದ್ದಾರೆ. ಅವರ ಫಸ್ಟ್‌ ಲುಕ್‌ ನೋಡಿದವರಿಗೆ ಸಿನಿಮಾ ನೋಡಲೇಬೇಕೆನಿಸುವುದಂತೂ ನಿಜ. ಈ ಮೂಲಕವಾದರೂ ಶ್ರೀನಗರ ಕಿಟ್ಟಿ, ಕನ್ನಡದಲ್ಲಿ ಪುನಃ ಗಟ್ಟಿ ನೆಲೆ ಕಾಣುವಂತಾಗಲಿ ಎಂಬದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಕ್ರಾಂತಿವೀರ ಚಿತ್ರಕ್ಕೆ ರಾಜಸ್ತಾನ ಚಿತ್ರೋತ್ಸವ ಪ್ರಶಸ್ತಿ: ಕನ್ನಡದಲ್ಲಿ ಬರಲು ಸಜ್ಜಾಗಿದೆ ಭಗತ್‌ ಸಿಂಗ್‌ ಚರಿತ್ರೆಯ ಸಿನಿಮಾ

ಕನ್ನಡದ ನಿರ್ದೇಶಕ ಆದತ್‌ ಎಂ.ಪಿ. (ದತ್ತ) ನಿರ್ದೇಶನದ “ಕ್ರಾಂತಿವೀರ” ಚಿತ್ರ ಏಳನೇ ರಾಜಸ್ತಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಚಿತ್ರಕ್ಕೆ ಕೊಡ ಮಾಡುವ ಅತ್ಯುತ್ತಮ ಕಥೆ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.

ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ ನೂರಾರು ಚಿತ್ರಗಳು ಪಾಲ್ಗೊಂಡಿದ್ದವು. ಆದರ ನಡುವೆ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾದ “ಕ್ರಾಂತಿವೀರ” ಅತ್ಯುತ್ತಮ ಕಥೆಗಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

“ಕ್ರಾಂತಿವೀರ” ಚಿತ್ರಕ್ಕೆ ಚಂದ್ರಕಲಾ. ಟಿ.ರಾಠೋಡ್‌, ಮಂಜುನಾಥ್‌ ಹೆಚ್ಚ. ನಾಯಕ್‌ ಮತ್ತು ಆರ್ಜೂರಾಜ್‌ ನಿರ್ಮಾಪಕರು. ಇವರೊಂದಿಗೆ ತ್ರಿವಿಕ್ರಮ, ಪ್ರಶಾಂತ್‌ ಕಲ್ಲೂರು, ಲೇಟ್‌ ಗೌರಿರಮನಾಥ್‌ ಅವರು ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

“ಭಗತ್ ಸಿಂಗ್” ಜೀವನ ಚರಿತ್ರೆ ಕುರಿತಂತೆ ತಯಾರಾಗಿರುವ ಚಿತ್ರವಿದು. “ಕ್ರಾಂತಿವೀರ” ಸ್ವತಂತ್ರಕ್ಕಾಗಿ ಹೋರಾಡಿ ಮಹಾನ್‌ ನಾಯಕ ಭಗತ್‌ ಸಿಂಗ್‌ ಕುರಿತ ಕಥೆ ಹೊಂದಿದೆ. ಈ ಚಿತ್ರದಲ್ಲಿ ಭಗತ್‌ ಸಿಂಗ್‌ ಪಾತ್ರವನ್ನು ಅಜಿತ್‌ ಜಯರಾಜ್‌ ನಿರ್ವಹಿಸಿದ್ದಾರೆ.

ಇನ್ನು, ಬಾಲ್ಯದ ದಿನಗಳಲ್ಲಿನ ಭಗತ್ ಸಿಂಗ್ ಕಥೆಯೂ ಇರುವುದರಿಂದ ಜ್ಯೂನಿಯರ್ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್ ಟಿ ರಾಠೋಡ್ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ರಾಜಸ್ತಾನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಬಾಗಲಕೋಟೆ, ಶಿವಮೊಗ್ಗ, ಹುಬ್ಬಳ್ಳಿ, ಕೆಜಿಎಫ್ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಇತರೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಪ್ರತಾಪ್.ಎಸ್ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಆರ್.‌ಕೆ. ನೃತ್ಯ ನಿರ್ದೇಶನ‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಲಕ್ಕಿ ಸ್ಟಾರ್‌ ಬ್ರದರ್ಸ್‌ – ಇಂಡಸ್ಟ್ರಿಗೆ ಚೈತನ್ಯ ತುಂಬಿ ಗೆದ್ದು ಬೀಗಿದ ಸಹೋದರರು!

2021 ಕೂಡ ಹೇಗಿರುತ್ತೋ ಗೊತ್ತಿಲ್ಲ. ಮತ್ತೆ ಹೆಚ್ಚುತ್ತಿರುವ ಕೊರೋನಾ ಅಬ್ಬರ ನೋಡಿದರೆ ರಾಜ್ಯದಲ್ಲಿ ಯಾವಾಗ ಲಾಕ್‌ ಡೌನ್‌ ಘೋಷಣೆ ಆಗುತ್ತೋ ಎನ್ನುವ ಆತಂಕ ಮನೆ ಮಾಡಿದೆ. ಬರುವ ದಿನಗಳಲ್ಲಿ ಸಿನಿಮಾ ಚಟುವಟಿಕೆಗಳು ಹೀಗೆಯೇ ಇರುತ್ತವೆ ಅಂತ ಅಂದುಕೊಳ್ಳುವುದಕ್ಕೂ ಕಷ್ಟಕರವಾಗಿದೆ. ಸದ್ಯದ ಮಟ್ಟಿಗೆ ಸಿಕ್ಕ ಸಣ್ಣದೊಂದು ಗ್ಯಾಪ್‌ ನಲ್ಲಿ ದೊಡ್ಡ ದೊಂದು ಗೆಲುವಿನ ಮೂಲಕ ಭರ್ಜರಿ ನಗು ಬೀರಿದ ನಿರ್ದೇಶಕರಂದ್ರೆ ನಂದ್‌ ಕಿಶೋರ್‌ ಹಾಗೂ ತರುಣ್‌ ಸುದೀರ್‌ ಬದ್ರರ್ಸ್.‌ ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಅವರೇ “ಸ್ಟಾರ್‌” ಬ್ರದರ್ಸ್.

‌ಲಾಕ್‌ ಡೌನ್‌ ತೆರೆವಾದ ನಂತರ ಕನ್ನಡದಲ್ಲಿ ಬಂದ ಮೊದಲ ಸ್ಟಾರ್‌ ಸಿನಿಮಾ ಅಂದ್ರೆ ” ಪೊಗರುʼ. ಕೊರೋನಾ ಆತಂಕದ ನಡುವೆಯೂ ಈ ಚಿತ್ರ ತೆರೆಗೆ ಬಂತು. ಅಷ್ಟೋತ್ತಿಗಾಗಲೇ “ಆಕ್ಟ್‌ 1978 ” ಸೇರಿದಂತೆ ಸಾಕಷ್ಟು ಸಿನಿಮಾಗಳು ಬಂದು ಹೋಗಿದ್ದವು. ಆ ಪೈಕಿ “ಆಕ್ಟ್‌ 1978” ಒಂದಷ್ಟು ಸದ್ದು ಮಾಡಿತ್ತಾದರೂ, ಜನ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರದತ್ತ ಮುಖ ಮಾಡಿರಲಿಲ್ಲ. ಅಷ್ಟೋ ಇಷ್ಟೋ ಜನ ಮಾತ್ರ ಚಿತ್ರ ಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ “ಆಕ್ಟ್‌ 1978” ಒಂದಷ್ಟು ಜನಾಕರ್ಷಣೆ ಪಡೆದು ಗೆಲುವಿನ ನಗೆ ಬೀರಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಲಾಕ್‌ ಡೌನ್‌ ನಂತರ ಸ್ಟಾರ್‌ ಸಿನಿಮಾ ಅಂತ ಮೊದಲು ರಿಲೀಸ್‌ ಆಗಿದ್ದು ಪೊಗರು. ʼಪೊಗರುʼ ನಂದ್‌ ಕಿಶೋರ್ ನಿರ್ದೇಶನದ ಚಿತ್ರ. ಧ್ರುವ ಸರ್ಜಾ ಈ ಚಿತ್ರದ ಹೀರೋ. ಹಾಗೆಯೇ ರಶ್ಮಿಕಾ ಮಂದಣ್ಣ ನಾಯಕಿ.

ಚಂದನವನದಲ್ಲಿ ಈ ಮೂವರು ಸಾಕಷ್ಟು ಸುದ್ದಿಯಲ್ಲಿದ್ದವರೇ. “ಪೊಗರುʼ ಮಾಡುವ ಮುನ್ನ ನಿರ್ದೇಶಕ ನಂದ್‌ ಕಿಶೋರ್‌ “ಅಧ್ಯಕ್ಷ”, “ವಿಕ್ಟರಿ”, “ರನ್ನ” ಸೇರಿದಂತೆ ನಾಲ್ಕೈದು ಹಿಟ್‌ ಸಿನಿಮಾ ಕೊಟ್ಟಿದ್ದರು. ಅದರ ದೊಡ್ಡ ಸಕ್ಸಸ್‌ ಅವರ ಬೆನ್ನಿಗಿತ್ತು. ಆ ಮೂಲಕವೇ ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಕಾಂಬಿನೇಷನ್‌ ಮೂಲಕ ಬಿಗ್‌ ಬಜೆಟ್‌ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಈ ಸಲ ಅದ್ದೂರಿ ಸಿನಿಮಾ ನಿರ್ದೇಶನ ಮಾಡಬೇಕೆಂದು ಹೊರಟಿದ್ದ ನಿರ್ದೇಶಕ ನಂದ್‌ ಕಿಶೋರ್‌ ಅವರಿಗೆ ನಿರ್ಮಾಪಕ ಗಂಗಾಧರ್‌ ಕೂಡ ಪ್ರೀತಿಯಿಂದಲೇ ಸಾಥ್‌ ಕೊಟ್ಟರು. ಹೆಚ್ಚು ಕಡಿಮೆ ಮೂರು ವರ್ಷದಲ್ಲಿ ಎಲ್ಲಾ ರೀತಿಯಲ್ಲೂ ಅದ್ದೂರಿತನ ತುಂಬಿಕೊಂಡಿದ್ದ “ಪೊಗರು” 2021ರ ಮೊದಲ ಸ್ಟಾರ್‌ ಸಿನಿಮಾವಾಗಿ ತೆರೆಗೆ ಬಂತು.

ಅನೇಕ ಕಾರಣಕ್ಕೆ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ತೆರೆಗೆ ಬಂದಾಗ ಆ ನಿರೀಕ್ಷೆಯೂ ಹುಸಿಯಾಗಲಿಲ್ಲ. ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡಿತು. ಎಲ್ಲ ಕಡೆ ಭರ್ಜರಿ ಒಪನಿಂಗ್‌ ಪಡೆಯಿತು. ನಿರ್ಮಾಪಕ ಗಂಗಾಧರ್‌ ಗೆಲುವಿನ ನಗೆ ಬೀರಿದರು. ಹಾಗೆಯೇ ನಿರ್ದೇಶಕ ನಂದ್‌ ಕಿಶೋರ್‌, ಮತ್ತೊಂದು ಸಕ್ಸಸ್‌ ಸಿನಿಮಾ ಕೊಟ್ಟ ಖುಷಿಯಲ್ಲಿ ಹೊಸ ಅವಕಾಶಗಳತ್ತ ಮುಖ ಮಾಡಿದರು. ಒಂದಷ್ಟು ವಿವಾದದಲ್ಲಿ ಮುಜುಗರ ಅನುಭವಿಸಿದರು ಎನ್ನುವುದನ್ನು ಬಿಟ್ಟರೆ, “ಪೊಗರು” ಚಿತ್ರ ನಿರ್ದೇಶಕ ನಂದ್‌ ಕಿಶೋರ್‌ಗೆ ಸ್ಟಾರ್‌ ಪಟ್ಟ ಕೊಟಿದ್ದೇನು ಸುಳ್ಳಲ್ಲ.

“ಪೊಗರು” ಮೂಲಕ ನಂದ ಕಿಶೋರ್‌ ಸಕ್ಸಸ್‌ ಕಂಡ ಹಾಗೆಯೇ ಅವರ ಸಹೋದರ ತರುಣ್‌ ಸುಧೀರ್‌ ಅವರೂ ಕೂಡ ಸಕ್ಸಸ್‌ ಸಿನಿಮಾ ಮೂಲಕವೇ ಎಂಟ್ರಿಯಾದವರು. ಅವರ ಚೊಚ್ಚಲ ನಿರ್ದೇಶನದ “ಚೌಕ” ಭರ್ಜರಿ ಯಶಸ್ಸು ಕೊಟ್ಟಿತು. ಅದಾದ ಬಳಿಕ ಅವರು ಆಯ್ಕೆ ಮಾಡಿಕೊಂಡಿದ್ದು, ದರ್ಶನ್‌ ಅವರನ್ನು. ಅವರಿಗಾಗಿ ಅವರು “ರಾಬರ್ಟ್‌” ರೆಡಿಮಾಡಿದರು. 2021ರ ಆರಂಭಿಕ ದಿನಗಳಲ್ಲಿ ಸಂಕಷ್ಟದ ಕಾಲದಲ್ಲೂ ಭರ್ಜರಿ ಸಕ್ಸಸ್‌ ಕಂಡ ನಿರ್ದೇಶಕ ಎನಿಸಿಕೊಂಡಿದ್ದು ಸುಳ್ಳಲ್ಲ.. ಅದಕ್ಕೆ ಕಾರಣವಾಗಿದ್ದು “ರಾಬರ್ಟ್‌” ಚಿತ್ರ. ಹಾಗೆ ನೋಡಿದರೆ “ಪೊಗರು” ಬಂದಾಗ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರಿಗೆ ಒಂದಷ್ಟು ಕೊರೋನಾ ಭಯ ಇದ್ದೇ ಇತ್ತು. ಆದರೆ, ಯಾವಾಗ “ರಾಬರ್ಟ್‌” ಅಬ್ಬರ ಜೋರಾಯಿತೋ, ಅದನ್ನು ಭೀಕರವಾಗಿ ಹೊರದಬ್ಬಿತು. ಬದಲಿಗೆ ರಾಜ್ಯದ ಚಿತ್ರ ಮಂದಿರಗಳಲ್ಲಿ ರಾಬರ್ಟ್‌ ಜಾತ್ರೆ ಶುರುವಾಯಿತು.

ಕೊರೋನಾ ಕೊರೋನಾ ಅಂತಿದ್ದೆವರೆಲ್ಲ, ಆ ಜಾತ್ರೆ ನೋಡಿ ಎಲ್ಲಿದೆ ಕೊರೋನಾ ಅಂತ ನಕ್ಕರು. ಆ ಮಟ್ಟಿಗೆ “ರಾಬರ್ಟ್‌” ಗೆಲುವು ಕಂಡಿದೆ. ದರ್ಶನ್‌ ಬಾಕ್ಸಾಫೀಸ್‌ ಸುಲ್ತಾನ್‌ ಅನ್ನೋದು ಮತ್ತೊಮ್ಮೆ ಸಾಬೀತು ಆಯಿತು. ಗಾಂಧಿ ನಗರದ ಗಲ್ಲಾ ಪೆಟ್ಟಿಗೆ ಚಿಂದಿ ಉಡಾಯಿಸಿತು. ಅದೀಗ ನೂರು ಕೋಟಿ ಕ್ಲಬ್‌ಗೆ ಸೇರುವ ಹಂತದಲ್ಲಿದೆ. ಅಲ್ಲಿಗೆ ತರುಣ್‌ ಸುಧೀರ್‌ ಸ್ಯಾಂಡಲ್‌ವುಡ್‌ನ ಸಕ್ಸಸ್‌ ಫುಲ್‌ ನಿರ್ದೇಶಕ ಮಾತ್ರವಲ್ಲ, 2021ರ ಸ್ಟಾರ್‌ ಡೈರೆಕ್ಟರ್‌ ಕೂಡ ಹೌದು. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲೀಗ ಲಕ್ಕಿ ಡೈರೆಕ್ಟರ್‌ ಅಂದ್ರೆ ನಂದ ಕಿಶೋರ್‌ ಹಾಗೂ ತರುಣ್‌ ಸುಧೀರ್‌ ಸಹೋದರರು. ಅವರ ಸಕ್ಸಸ್‌ ಯಾತ್ರೆ ಹೀಗೆ ಸಾಗಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಮಡಿ ಮಡಿಲಿಗೆ ಎರಡು ಪ್ರಶಸ್ತಿಯ ಗರಿ: ರಿಫ್ಟ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಹೆಮ್ಮೆ

ಕನ್ನಡದ ನಿರ್ದೇಶಕ ಸುಧೀರ್‌ ಅತ್ತಾವರ್‌ ನಿರ್ದೇಶನದ “ಮಡಿ” ಸಿನಿಮಾಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜೊತೆಯಲ್ಲಿ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿದೆ.

ರಿಫ್ಟ್‌ ಚಿತ್ರೋತ್ಸವದಲ್ಲಿ ಅಮೆರಿಕನ್‌ ಸಿನಿಮಾ ಫಲಾಫೆಲ್‌ ಮತ್ತು ಫ್ರೆಂಚ್‌ ಚಿತ್ರ ಸೋಲೇಮಿಯೋ ಚಿತ್ರಗಳು “ಮಡಿ” ಚಿತ್ರಕ್ಕೆ ತೀವ್ರ ಸ್ರ್ಧೆ ನೀಡಿದ್ದರೂ, ಅಂತಿಮವಾಗಿ, ಆ ಎರಡೂ ಚಿತ್ರಗಳನ್ನು ಹಿಂದಿಟ್ಟ ಕನ್ನಡದ “ಮಡಿ” ಚಿತ್ರ ತೀರ್ಪುಗಾರ ಪ್ರಶಂಸೆಗೆ ಪಾತ್ರವಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಕ್ಸಸ್‌ ಫಿಲಂಸ್‌ ಬ್ಯಾನರ್‌ನಡಿ ವಿದ್ಯಾಧರ್‌ ಶೆಟ್ಟಿ ಹಾಗೂ ಸೂರಜ್‌ ಜಾಲ್ಸ್‌ ನಿರ್ಮಾಣ ಮಾಡಿರುವ ಈ ಚಿತ್ರ, ಕರಾವಳಿಯ ಭಾಗದ ಜನಪದ ಕಲೆ “ಆಟಿ ಕಳಂಜ”ದ ಹಿನ್ನೆಲೆಯ ಕಥಾಹಂದರ ಹೊಂದಿದೆ. ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ 40ಕ್ಕೂ ಹೆಚ್ಚು ಕಿರುಚಿತ್ರಗಳು ಪಾಲ್ಗೊಂಡಿದ್ದವು.

“ಮಡಿ” ಬಗ್ಗೆ ಹೇಳುವುದಾದರೆ, “ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್.‌ ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿದೆ. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿರುವ ಸುಧೀರ್‌ ಅತ್ತಾವರ್‌ ಅವರ “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ. ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದಾರೆ, ಹೊಗಳಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ. ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ.

ಕಥಾಹಂದರದಲ್ಲಿರುವ ಗಟ್ಟಿತನ. ಅಲ್ಲಿನ ಕೀಳರಿಮೆ, ಕಿತ್ತು ತಿನ್ನೋ ಬಡತನ, ಏನೂ ಅರಿಯದ ಹುಡುಗನೊಬ್ಬನ ಹಸಿವು, ಪ್ರಮುಖವಾಗಿ ಗಮನ ಸೆಳೆಯುವ ನಾಯಕಿ. ಆಕೆಯಲ್ಲಿರುವ ಭಯ, ಪುಷ್ಕರಣಿಯಲ್ಲಿ ಜೀವವೊಂದು ಬದುಕಲು ಹೆಣಗಾಡುತ್ತಿದ್ದರೆ, ಅತ್ತ, ಪುರೋಹಿತ ಶಾಹಿಗಳಿಗೆ ಮಡಿಯೇ ಮುಖ್ಯ ಎಂಬ ಧ್ಯೇಯ… ಇವೆಲ್ಲವೂ ವಾಸ್ತವತೆಯನ್ನು ಬಿಂಬಿಸುವಂತಿವೆ. ಒಟ್ಟಾರೆ ಈ ಸಮಾಜದ ವ್ಯವಸ್ಥೆಯ ಅವ್ಯವಸ್ಥೆಯನ್ನು ಮನತಟ್ಟುವಂತೆ ಸೆರೆ ಹಿಡಿದಿದ್ದರಿಂದಲೇ ಈ ಚಿತ್ರಕ್ಕೆ ರೀಫ್ಟ್‌ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿಗಳು ಸಿಕ್ಕಿವೆ.ನಿರ್ದೇಶಕ ಸುಧೀರ್ ಅತ್ತಾವರ್ ಅವರು, “ಮಡಿ” ಮೂಲಕ ಸಮಾಜದಲ್ಲಿರುವ ಹುಳುಕನ್ನ ಎತ್ತಿ ಹಿಡಿಯುವ ಪ್ರಯತ್ನ ಮಾಡಿರುವುದರಿಂದ, ಅವರ ಪರಿಶ್ರಮಕ್ಕೊಂದು ಫಲ ಸಿಕ್ಕಂತಾಗಿದೆ.

ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

error: Content is protected !!