ಸಲಗನಿಗೆ ಸಂತೋಷದಲ್ಲಿ ಸಂಭ್ರಮ; ಕೋಟಿಗೊಬ್ಬನಿಗೆ ನರ್ತಕಿಯ ಸ್ವಾಗತ!

ಹೆಂಗೆ ನಾವು, ಹೆಂಗೆ ಹೆಂಗೆ ನಾವು ಅಂತ ಸ್ಟಾರ್‌ಗಳಿಬ್ಬರು ಹೇಳ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ಯಾಂಡಲ್‌ವುಡ್‌ನ ಈ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ತಲೆಮೇಲೆ ಹೊತ್ತು ಮೆರೆಸೋಕೆ ಸಜ್ಜಾಗುತ್ತಿರುವ ಹಾಗೂ ಒಂದೇ ಅಖಾಡದಲ್ಲಿರುವ ಸಂತೋಷ್ ಮತ್ತು ನರ್ತಕಿ ಚಿತ್ರಮಂದಿರಗಳು ಮಾತ್ರ `ಹೆಂಗೆ ನಾವು ಹೆಂಗೆ ಹೆಂಗೆ ನಾವು’ ಅಂತ ಡೈಲಾಗ್ ಹೊಡೆದುಕೊಂಡು ಖುಷಿಪಡುತ್ತಿವೆ. ಅದಕ್ಕೆ ಕಾರಣ ಭರ್ತಿ ಒಂದೂವರೆ ವರ್ಷಗಳ ನಂತರ ಒಟ್ಟೊಟ್ಟಿಗೆ ಇಬ್ಬರು ಸ್ಟಾರ್‌ನಟರುಗಳನ್ನು ಚಿತ್ರಮಂದಿರಕ್ಕೆ ವೆಲ್‌ಕಮ್ ಮಾಡಿಕೊಳ್ಳುವಂತಹ ಅವಕಾಶ ಸಿಕ್ಕಿದೆ. ಅಟ್ ದಿ ಸೇಮ್ ಟೈಮ್ ಥಿಯೇಟರ್ ಮುಂದೆ ಹಬ್ಬದ ಸಂಭ್ರಮ ಹಾಗೂ ಹೌಸ್‌ಫುಲ್ ಆಗುವಂತಹ ಗಳಿಗೆಯನ್ನು ನೋಡಲಿಕ್ಕೆ ಎರಡು ಥಿಯೇಟರ್‌ಗಳು ಕಾತುರದಿಂದ ಕಾಯ್ತಿವೆ.

ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ, ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಅಂದ್ರೆ, ಅದನ್ನು ಬಣ್ಣದ ಲೋಕದ ಭಾಷೆಯಲ್ಲಿ ಸ್ಟಾರ್‌ವಾರ್ ಅಂತಾನೇ ಹೇಳ್ತಾರೆ. ಸದ್ಯ ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿಕೊಡಲಿಕ್ಕೆ ಭರ್ಜರಿ ತಯ್ಯಾರಿ ನಡೆದಿದೆ. ಆ ಸಿನಿಮಾಗಳ ಬಗ್ಗೆ ನಿಮಗೀಗಾಗಲೇ ತಿಳಿದಿದೆ. ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಕೋಟಿಗೊಬ್ಬ-೩ ಹಾಗೂ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಹೈವೋಲ್ಟೇಜ್ `ಸಲಗ’ ಚಿತ್ರಗಳ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಆಯುಧ ಪೂಜೆಯ ದಿನದಂದೇ ಗಂಧದಗುಡಿಯ ನಾಯಕರಿಬ್ಬರು ಅಖಾಡಕ್ಕೆ ಧುಮ್ಕುತ್ತಿರುವುದರಿಂದ ಸ್ಟಾರ್‌ವಾರ್ ಜೋರಾಗಲಿದೆ, ಬಾಕ್ಸ್ಆಫೀಸ್ ಅಂಗಳದಲ್ಲಿ ಕಾದಾಟ ನಡೆಯಲಿದೆ ಎನ್ನುವುದು ಗಾಂಧಿನಗರದ ಪಿಎಚ್‌ಡಿ ಪಂಡಿತರ ಮಾತು.

ಒಂದು ವಾರ ಅಂತರದಲ್ಲಿ ಸ್ಟಾರ್‌ನಟರಿಬ್ಬರ ಚಿತ್ರಗಳು ಬಿಡುಗಡೆಯಾದ್ರೇನೇ ಬಿಗ್‌ ಸ್ಕ್ರೀನ್ ನಲ್ಲಿ ಪೈಪೋಟಿ ಶುರುವಾಗುತ್ತೆ, ಬಾಕ್ಸ್ಆಫೀಸ್ ಡಬ್ಬದಲ್ಲಿ ತಿಕ್ಕಾಟ ಆರಂಭವಾಗುತ್ತೆ. ಅಂತ್ರದಲ್ಲಿ ಒಂದೇ ದಿನ ಮಾಸ್‌ಗೂ ಕ್ಲಾಸ್‌ಗೂ ಬಾಸ್‌ಗಳಾಗಿರುವ ಮಾಣಿಕ್ಯ ಹಾಗೂ ಜಯ್ಯಮ್ಮನ ಮಗ ಅಖಾಡಕ್ಕೆ ಇಳಿಯುತ್ತಾರೆ ಅಂದ್ರೆ ಸಹಜವಾಗಿ ನೆಕ್ ಟು ನೆಕ್ ಫೈಟ್‌. ಸ್ಟಾರ್ಟ್ ಆಗುತ್ತೆ. ಚಿತ್ರಮಂದಿರಗಳು ಹಂಚಿಕೆಯಾಗುತ್ತವೆ, ಬಾಕ್ಸ್ಆಫೀಸ್ ಮಂಕಾಗುತ್ತದೆ. ಇದರೊಟ್ಟಿಗೆ ಫ್ಯಾನ್ಸ್ ಫ್ಯಾನ್ಸ್ ನಡುವೆ ಸಣ್ಣಗೆ ಕಿಡಿ ಹೊತ್ತಿಕೊಳ್ಳುತ್ತದೆ. ನಮ್ಮ ಬಾಸ್ ಫಸ್ಟ್, ನಿಮ್ಮ ಬಾಸ್ ನೆಕ್ಸ್ಟ್, ನಮ್ಮ ಬಾಸ್ ಸಿನಿಮಾ ಇಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ, ನಿಮ್ಮ ಬಾಸ್ ಸಿನಿಮಾ ಅಷ್ಟೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಹೀಗೆ ಏನೇನೋ ಮಾತನಾಡಿಕೊಳ್ಳುತ್ತಾ ಸುಖಾಸುಮ್ಮನೇ ಕಾದಾಟಕ್ಕೆ ರೆಡಿಯಾಗ್ತಾರೆ. ಸ್ಟಾರ್‌ಗಳ ಮಧ್ಯೆ ವಾರ್ ಶುರುವಾಗದೇ ಹೋದ್ರೂ ಕೂಡ ಫ್ಯಾನ್ಸ್ ವಾರ್ ಜೋರಾಗುತ್ತೆ.

ಇದ್ಯಾವುದು ಆಗ್ಬಾರ್ದು, ನಮ್ಮನಮ್ಮವರ ಮಧ್ಯೆ ಯಾವ ಯುದ್ದವೂ ನಡಿಯಬಾರ್ದು ಎನ್ನುವುದೇ ಎಲ್ಲರ ಆಶಯ. ಈ ಹಿನ್ನಲೆಯಲ್ಲಿ ಸಿನಿಲಹರಿ ತಂಡ `ಸಲಗ’ ಚಿತ್ರದ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಅವರನ್ನು ಸಂಪರ್ಕ ಮಾಡಿದಾಗ ಅವರು ಹೇಳಿದ್ದಿಷ್ಟು. ನಿಜಕ್ಕೂ ಇದು ಸ್ಟಾರ್‌ವಾರ್ ಅಂತ ಪರಿಗಣಿಸಬೇಡಿ. ನಮ್ಮ ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ, ಒಂದೇ ದಿನ ರಿಲೀಸ್ ಮಾಡ್ಲೆಬೇಕು ಎನ್ನುವ ಹಠಕ್ಕೂ ನಾವು ಬಿದ್ದಿಲ್ಲ. ಅಷ್ಟಕ್ಕೂ ಗಂಧದಗುಡಿಯಲ್ಲಿ ಹೆಲ್ದಿ ಕಾಂಪಿಟೇಷನ್ ಇದೆ ಬಿಟ್ರೆ ಈ ವಾರ್ ಗೀರ್ ಎಂತಹದ್ದು ಇಲ್ಲ ಎಂದರು. ಜೊತೆಗೆ ಹಬ್ಬದ ಸೀಸನ್‌ಗಳು ಬಂದಾಗ ಸ್ಟಾರ್‌ಗಳು ಅಖಾಡಕ್ಕೆ ಇಳಿಯೋದು ಸಹಜ. ನಮ್ಮ ಸ್ಟಾರ್‌ಗಳ ನಡುವೆ ಪರಭಾಷಾ ಸ್ಟಾರ್‌ಗಳು ಕೂಡ ಫೀಲ್ಡಿಗಿಳಿಯುತ್ತಾರೆ. ಆದರೆ, ಈ ಭಾರಿ ದಸರಾ ಹಬ್ಬಕ್ಕೆ ಪರಭಾಷಾ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಪ್ರತಿವರ್ಷ ಬೇರೆ ಭಾಷೆಯ ಚಿತ್ರಗಳೊಟ್ಟಿಗೆ ನಮ್ಮ ಭಾಷೆಯ ಚಿತ್ರಗಳು ಬಾಕ್ಸ್ಆಫೀಸ್ ಅಂಗಳದಲ್ಲಿ ಸೆಣಸಾಡಬೇಕಿತ್ತು. ಆದರೆ, ಈ ಭಾರಿ ಅಂತದ್ದೇನಿಲ್ಲ ನಮ್ಮ ಭಾಷೆಯ ಸಿನಿಮಾಗಳದ್ದೇ ಬೆಳ್ಳಿತೆರೆ ಹಾಗೂ ಬಾಕ್ಸ್ಆಫೀಸ್ ಅಖಾಡದಲ್ಲಿ ಅಬ್ಬರ ಅಂದರು.‌

`ಸಲಗ’ ನಿರ್ಮಾಪಕರ ಮಾತು ಹಂಡ್ರೆAಡ್ ಪರ್ಸೆಂಟ್ ನಿಜ. ಪರಭಾಷೆಯ ಸಿನಿಮಾಗಳು ಈ ಭಾರಿಯ ದಸರಾ ಹಬ್ಬಕ್ಕೆ ರಿಲೀಸ್ ಆಗದೇ ಇರೋದ್ರಿಂದ ಕನ್ನಡ ಸಿನಿಮಾಗಳಿಗೆ ಪ್ಲಸ್ ಆಗುತ್ತೆ. ಬಯಸಿದಷ್ಟು ಚಿತ್ರಮಂದಿರಗಳು ಸಿಗುತ್ತವೆ. ರಾಜ್ಯಾದ್ಯಂತ ಅವರಿಷ್ಟದ ಥಿಯೇಟರ್‌ಗಳಲ್ಲೇ ಸಿನಿಮಾನ ರಿಲೀಸ್ ಮಾಡ್ಬೋದು. ಹೀಗಾಗಿಯೇ ಸಲಗ ಚಿತ್ರತಂಡ ಆಯುಧ ಪೂಜೆಗೆ ಬಿಡುಗಡೆ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಆರ್ಭಟ ಶುರುವಾಗಲಿದೆ. ಅದೇ ದಿನ ನರ್ತಕಿಯಲ್ಲಿ ಕೋಟಿಗೊಬ್ಬ-೩ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗ್ತಿದೆ. ಒಂದೇ ಅಖಾಡದಲ್ಲಿ ಎರಡು ಚಿತ್ರಮಂದಿರಗಳು ಇರೋದ್ರಿಂದ ಪೈಪೋಟಿ ಏಳಬಹುದು. ಆದರೆ, ಇಬ್ಬರು ಸ್ಟಾರ್‌ನಟರುಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಥಿಯೇಟರ್ ಅಂತೂ ಹೌಸ್‌ಫುಲ್ ಆಗುತ್ತೆ ಅದರಲ್ಲಿ ನೋಡೌಟ್.

ಒಂದ್ವೇಳೆ ಯಾರಾದ್ರೂ ಒಬ್ಬರು ಹಿಂದೆಸರಿದಿದ್ದರೆ, ಒಂದು ಚಿತ್ರತಂಡ ದೊಡ್ಡ ಮನಸ್ಸು ಮಾಡಿ ಮುಂದಿನ ವಾರ ಬರೋಣ ಬಿಡು ಎಂದು ತೀರ್ಮಾನಿಸಿದ್ದರೆ, ಥಿಯೇಟರ್ ಹೌಸ್‌ಫುಲ್ ಆಗೋದ್ರ ಜೊತೆಗೆ ಮತ್ತೊಂದು ಶೋಗೆ ಆಗುವಷ್ಟು ಜನ ಹೊರಗಡೆ ನಿಂತಿರುತ್ತಿದ್ದರು. ಕನ್ನಡ ಸಿನಿಮಾ ಪ್ರೇಕ್ಷಕರೆಲ್ಲರೂ ಕೂಡ ಚಿತ್ರಮಂದಿರದತ್ತ ದೌಡಾಯಿಸಿ ಬಾಕ್ಸ್ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿಕೊಡುತ್ತಿದ್ದರು. ಆದರೆ, ಸಲಗ ಹಾಗೂ ಕೋಟಿಗೊಬ್ಬ-3 ಎರಡು ಕೂಡ ಬಹುನಿರೀಕ್ಷೆಯ ಸಿನಿಮಾಗಳಾಗಿರೋದ್ರಿಂದ, ಎರಡು ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋನೇ ನೋಡಬೇಕಾಗಿರೋದ್ರಿಂದ ಕನ್ನಡ ಪ್ರೇಕ್ಷಕರು ಡಿವೈಡ್ ಆಗ್ತಾರೆ. ಇದ್ರಿಂದ ಒಂದು ಚಿತ್ರತಂಡಕ್ಕೆ ಅಲ್ಲ ಬದಲಾಗಿ ಎರಡು ಚಿತ್ರತಂಡಕ್ಕೂ ಕೊಂಚ ನಷ್ಟವೇ. ಅದನ್ನು ಯಾರು ತುಂಬಿಕೊಡುವುದಕ್ಕೆ ಆಗಲ್ಲ ಯಾಕಂದ್ರೆ ಅದು ಅವರಿಬ್ಬರೇ ತೆಗೆದುಕೊಂಡಿರುವ ಡಿಸೈಡ್ ಅಲ್ಲವೇ.

ವಿಶಾಲಾಕ್ಷಿ ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!