ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ
ಚಿತ್ರ: ಪುಕ್ಸಟ್ಟೆ ಲೈಫು-ಪುರುಸೊತ್ತೇ ಇಲ್ಲ
ನಿರ್ಮಾಪಕ: ನಾಗರಾಜ ಸೋಮಯಾಜಿ
ನಿರ್ದೇಶನ: ಅರವಿಂದ್ ಕುಪ್ಳೀಕರ್
ತಾರಾಗಣ : ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಇತರರು.
ಪೊಲೀಸು ಸಾಯಿಸ್ಬೋದು. ಆದರೆ, ಕೊಲೆ ಮಾಡಬಾರದು…
ಆ ತನಿಖಾಧಿಕಾರಿ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆ ನಡೆದಿರುತ್ತೆ. ಅಲ್ಲಿ ಕೊಲೆಯಾದವ ಯಾರು, ಆ ಕೊಲೆ ಮಾಡಿದ್ದು ಯಾರು, ಯಾಕೆ ಅನ್ನೋ ಕುತೂಹಲವಿದ್ದರೆ, ಯಾವುದೇ ಅನುಮಾನವಿಲ್ಲದೆ “ಪುಕ್ಸಟ್ಟೆ ಲೈಫು” ಸಿನಿಮಾ ನೋಡಬಹುದು. ಅಲ್ಲಲ್ಲಿ ಕಚಗುಳಿ ಇಡುತ್ತಲೇ, ಆಗಾಗ ಕಾಡುವ, ದಿಟ್ಟಿಸಿ ನೋಡುವ, ವಾಸ್ತವತೆ ಸಾರುವ, ಒಮ್ಮೊಮ್ಮೆ ಭಾವುಕತೆಗೆ ನೂಕಿ, ಭಾರವೆನಿಸಿ ನೈಜತೆಗೆ ಹತ್ತಿರವಾಗುವ ಸಿನಿಮಾ ಇದು. ಇಲ್ಲಿ ಓದುವುದಕ್ಕಿಂತ ಹಾಗೊಮ್ಮೆ ಪುರುಸೊತ್ತು ಮಾಡಿಕೊಂಡು ಸಿನಿಮಾ ನೋಡಿದರೆ ಅದಕ್ಕೊಂದು ಅರ್ಥ.
ಇಡೀ ಸಿನಿಮಾದ ಆಕರ್ಷಣೆ ಮನಮಿಡಿಯೋ ಕಥೆ. ಅದನ್ನು ಅಷ್ಟೇ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕ ಅರವಿಂದ್ ಕುಪ್ಳೀಕರ್ ಅವರಿಂದ ಆಗಿದೆ. ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕಥೆಗಿದೆ. ಒಂದಷ್ಟು ಕುತೂಹಲ ಕೆರಳಿಸುತ್ತಲೇ ದ್ವಿತಿಯಾರ್ಧ ಸಾಗುತ್ತದೆಯಾದರೂ, ನೋಡುವ ಪ್ರೇಕ್ಷಕನಿಗೆ ಮುಂದೇನಾಗುತ್ತೆ ಅನ್ನುವುದರ ಅರಿವು ಕೂಡ ಗೊತ್ತಾಗುತ್ತೆ. ಅಲ್ಲಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆ ಇರಬೇಕಿತ್ತು. ಕೆಲವು ಕಡೆ ನಿರ್ದೇಶಕರ ಹಿಡಿತ ಕೈ ತಪ್ಪಿದೆಯಾದರೂ, ಕೊನೆ ಕೊನೆಯಲ್ಲಿ ಸೀಟಿನ ಅಂಚಿಗೆ ಕೂರಿಸುವ ತಾಕತ್ತು ಆ ಕಥೆಯಲ್ಲಿದೆ. ಎಲ್ಲೋ ಒಂದು ಕಡೆ ಕಥೆ ಆಶಯ ಬೇರೆಲ್ಲೋ ಸಾಗುತ್ತಿದೆ ಅನ್ನುವ ಹೊತ್ತಿಗೆ ಚಿತ್ರದ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಪಾತ್ರಗಳಲ್ಲಿನ ಲವಲವಿಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಂದು ಸಿನಿಮಾ ನೈಜತೆಗೆ ಹತ್ತಿರವಾಗಿರಬೇಕು ಜೊತೆಗೆ ಸಮಾಜದೊಳಗಿನ ವಾಸ್ತವದ ಅರಿವನ್ನು ತೆರೆದಿಡುವಂತಿರಬೇಕು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ. ಪ್ರಸ್ತುತ ವಿದ್ಯಮಾನಗಳನ್ನೇ ಇಟ್ಟುಕೊಂಡು ನಿರೂಪಿಸಿರುವ ಜಾಣತನ ನಿರ್ದೇಶಕರದ್ದು.
ಇದು ಸಾರಾಂಶ…
ಅಲ್ಲೊಬ್ಬ ಷಹಜಾನ್. ಅವನಿಗೊಬ್ಬ ಮಮ್ತಾಜ್ ಕೂಡ ಇದ್ದಾಳೆ. ಹಾಗಂತ, ಇಲ್ಲಿ ‘ತಾಜ್ ಮಹಲ್’ನಂತಹ ಪ್ರೇಮ್ ಕಹಾನಿ ಇಲ್ಲ. ಷಹಜಾನ್ ಒಬ್ಬ ಕೀ ಮೇಕರ್. ಅಷ್ಟೇನು ಸ್ಥಿತಿವಂತನಲ್ಲದ ಷಹಜಾನ್, ಪೋಲೀಸರ ಆಟದಗೊಂಬೆ ಆಗ್ತಾನೆ. ಅದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಅಂತಿಟ್ಟುಕೊಳ್ಳಿ. ಏನನ್ನೂ ಅರಿಯದ ಷಹಜಾನ್ ತನ್ನದಲ್ಲದ ತಪ್ಪಿಗೆ ಬಂಧಿಯಾಗ್ತಾನೆ. ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ನಲುಗಿ ಹೋಗ್ತಾನೆ. ಘಟನೆಯೊಂದರಲ್ಲಿ ಮನಸ್ಸೊಪ್ಪದಿದ್ದರೂ ಪರಿಸ್ಥಿತಿ ಅವನನ್ನು ಕಳ್ಳನನ್ನಾಗಿಸುತ್ತೆ. ಅವನ ಆ ಪರಿಸ್ಥಿತಿಗೆ ಕಾರಣವೇನು? ಅದೇ ಸಿನಿಮಾದ ಟ್ವಿಸ್ಟು! ಈ ಕಥೆಯಲ್ಲಿ ಷಹಜಾನ್‌ನ ವ್ಯಥೆಯೂ ಇದೆ. ಅದೇನು ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಒಂದು ಬಾರಿ ಷಹಜಾನ್‌ನ ನೊಂದ-ಬೆಂದ ಕಥೆಯ ಚಿತ್ರಣ ನೋಡಬಹುದು.
ಇನ್ನು ಚಿತ್ರದ ಮತ್ತೊಂದು ಹೈಲೈಟ್ ಅಂದರೆ, ಸಂಗೀತ. ಚಿತ್ರದ ವೇಗಕ್ಕೆ ಹಿನ್ನೆಲೆ ಸಂಗೀತ ಹೆಗಲು ಕೊಟ್ಟಿದೆ. ಪ್ರತಿ ದೃಶ್ಯದಲ್ಲೂ ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೈಚಳಕ ಖುಷಿ ಕೊಡುತ್ತದೆ. ಅದಕ್ಕೆ ಪೂರಕವಾಗಿ ಸಂಕಲನವೂ ಇದೆ. ಅಲ್ಲಲ್ಲಿ ಬರುವ ಹಾಡುಗಳಿಗೂ ಇಲ್ಲಿ ಮಹತ್ವವಿದೆ. ಇನ್ನು, ನಟನೆ ವಿಚಾರಕ್ಕೆ ಬಂದರೆ, ಸಂಚಾರಿ ವಿಜಯ್ ಅವರ ಬಗ್ಗೆ ಮಾತಾಡುವಂತಿಲ್ಲ. ಇಡೀ ಪಾತ್ರವನ್ನು ಅವರು ಜೀವಿಸಿದ್ದಾರೆ. ಮುಸ್ಲಿಂ ಯುವಕನ ಪಾತ್ರದ ನೋಡಿದವರಿಗೆ ಖಂಡಿತ ಖುಷಿಯಾಗದೇ ಇರದು. ಆ ಪಾತ್ರ ಮೂಲಕವೂ ಅವರು ಭಾವುಕತೆ ಹೆಚ್ಚಿಸಿದ್ದಾರೆ.
ಸಿನಿಮಾ ನೋಡಿ ಹೊರಬಂದವರಿಗೆ ಸಂಚಾರಿಯ ಭಾವುಕ ಪಯಣ ನೆನಪಾಗದೇ ಇರದು. ಅಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ ಎಂದಿನಂತೆಯೇ ಗಮನ ಸೆಳೆಯುತ್ತಾರೆ. ಪೊಲೀಸ್ ಅಧಿಕಾರಿಯೊಬ್ಬನ ಹಣದಾಸೆ ಹೇಗೆಲ್ಲಾ ಇರುತ್ತೆ, ಅದರೊಂದಿಗೂ ಸಣ್ಣದ್ದೊಂದು ಮಾನವೀಯ ಗುಣವುಳ್ಳ ಪಾತ್ರವದು. ಇನ್ನು, ರಂಗಾಯಣ ರಘು ತನಿಖಾಧಿಕಾರಿಯಾಗಿ ಇಷ್ಟವಾಗುತ್ತಾರೆ. ಈವರೆಗೆ ಮಾಡಿದ ಪಾತ್ರಗಳಿಗಿಂತ ಇಲ್ಲಿನ ಪಾತ್ರ ವಿಭಿನ್ನ ಮತ್ತು ವಿಶಿಷ್ಟ ಎನ್ನಬಹುದು. ಉಳಿದಂತೆ ಅಲ್ಲಲ್ಲಿ ಬರುವ ಪ್ರತಿ ಪಾತ್ರಗಳು ಸಹ ಸಿನಿಮಾದಲ್ಲಿ ಜೀವಿಸಿವೆ.
ಕೊನೇ ಮಾತು: ಈ ಭಾವುಕ ಪಯಣದಲ್ಲಿ ಪುರುಸೊತ್ತು ಮಾಡ್ಕೊಂಡು ‘ಲೈಫ್’ ಎಂಜಾಯ್ ಮಾಡಿ..